ಪಂಜಾಬ್ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಪ್ರಮುಖ ಬೆಳವಣಿಗೆಯೊಂದರಲ್ಲಿ, ಅಮೃತಸರ ಉತ್ತರ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಶಾಸಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕನ್ವರ್ ವಿಜಯ್ ಪ್ರತಾಪ್ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಸೆಂಬ್ಲಿ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅವರಿಗೆ ಸೋಮವಾರ ಬೆಳಿಗ್ಗೆ ರಾಜೀನಾಮೆ ಪತ್ರ ರವಾನಿಸಿರುವ ಅವರು, ನವೆಂಬರ್ 1, ರಿಂದಲೇ ಜಾರಿಗೆ ಬರುವಂತೆ ಶಾಸಕ ಸ್ಥಾನವನ್ನು ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ ಮಾಹಿತಿ ಹಂಚಿಕೊಂಡಿರುವ ಅವರು, ತಮ್ಮ ರಾಜೀನಾಮೆ ಪತ್ರವನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ.
ಸಮಾನಾ ಕ್ಷೇತ್ರದ ಶಾಸಕ ಚೇತನ್ ಸಿಂಗ್ ಜೌರಮಾಜ್ರಾ ಹಾಗೂ ಸನೌರ್ ಕ್ಷೇತ್ರದ ಶಾಸಕ ಹರ್ಮೀತ್ ಸಿಂಗ್ ಪಠಾನ್‌ಮಾಜ್ರಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ 24 ಗಂಟೆಗಳ ಒಳಗಾಗಿ ಕನ್ವರ್ ವಿಜಯ್ ಪ್ರತಾಪ್ ಸಿಂಗ್ ಕೂಡ ಶಾಸಕ ಸ್ಥಾನ ತೊರೆದಿದ್ದು, ಆಪ್‌ಗೆ ಸರಣಿ ಆಘಾತ ಎದುರಾಗಿದೆ. ಈ ಮೂವರೂ ನಾಯಕರು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯಿದೆ.
ರಾಜೀನಾಮೆಗೆ ಮುಖ್ಯ ಕಾರಣಗಳು ಹಾಗೂ ಹಿನ್ನೆಲೆ:-
2022ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಎಎಪಿ ಪ್ರಮುಖ ನಾಯಕರಾಗಿ ಹೊರಹೊಮ್ಮಿದ್ದ ಕನ್ವರ್ ವಿಜಯ್ ಪ್ರತಾಪ್ ಸಿಂಗ್, ಕಾಲಕ್ರಮೇಣ ಸರ್ಕಾರ ಮತ್ತು ಪಕ್ಷದ ನಿರ್ಧಾರಗಳ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತತೊಡಗಿದ್ದರು. ಮುಖ್ಯವಾಗಿ 2015ರ ಬರ್ಗಾರಿ ಧರ್ಮಗ್ರಂಥಗಳ ಅವಮಾನ ಹಾಗೂ ಪೋಲಿಸ್ ಗುಂಡಿನ ಚಕಮಕಿ ಪ್ರಕರಣಗಳ ತನಿಖೆಯಲ್ಲಿ ಸರ್ಕಾರದ ಮಂದಗತಿಯ ನಡೆ ಹಾಗೂ ಕಳೆದ ವರ್ಷ ಅಮೃತಸರದಲ್ಲಿ 20ಕ್ಕೂ ಹೆಚ್ಚು ಜನರ ಬಲಿತೆಗೆದುಕೊಂಡ ಕಳ್ಳಬಟ್ಟಿ ದುರಂತದ ವಿಚಾರದಲ್ಲಿ ಭಗವಂತ್ ಮಾನ್ ಸರ್ಕಾರದ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದ್ದರು.
ಜೂನ್ 2025 ರಲ್ಲಿ, ಶಿರೋಮಣಿ ಅಕಾಲಿ ದಳದ ಹಿರಿಯ ನಾಯಕ ಬಿಲ್ವಿಂದರ್ ಸಿಂಗ್ ಮಜಿಥಿಯಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪಂಜಾಬ್ ವಿಜಿಲೆನ್ಸ್ ಬ್ಯೂರೋ ನಡೆಸಿದ ದಾಳಿಯನ್ನು ಇವರು ಪ್ರಶ್ನಿಸಿದ್ದರು. ದಾಳಿಯ ವಿಡಿಯೋ ಹಂಚಿಕೊಂಡು ಕುಟುಂಬದ ಗೌರವದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾರಣಕ್ಕಾಗಿ ಆಪ್ ಇವರನ್ನು 5 ವರ್ಷಗಳ ಅವಧಿಗೆ ಪಕ್ಷದಿಂದ ಅಮಾನತುಗೊಳಿಸಿತ್ತು.
2027ರ ಪಂಜಾಬ್ ಚುನಾವಣೆಗೆ ಎಎಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನವೆಂಬರ್ 1 ರಂದು ಬಿಡುಗಡೆ ಮಾಡಿತ್ತು. ಅಲ್ಲದೆ ಜೌರಮಾಜ್ರಾ ಮತ್ತು ಪಠಾನ್‌ಮಾಜ್ರಾ ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಿಗೆ ಹೊಸ ಉಸ್ತುವಾರಿಗಳನ್ನು ನೇಮಿಸಿ ಟಿಕೆಟ್ ಕೈಬಿಡುವ ಮುನ್ಸೂಚನೆ ನೀಡಿತ್ತು. ಇತ್ತ ಆಪ್ ಈ ಇಬ್ಬರೂ ನಾಯಕರನ್ನು ಪಕ್ಷವಿರೋಧಿ ಚಟುವಟಿಕೆಗಳಿಗಾಗಿ ಅಮಾನತುಗೊಳಿಸಿ, ಶಾಸಕತ್ವ ರದ್ದುಗೊಳಿಸುವಂತೆ ಸ್ಪೀಕರ್ ಬಾಗಿಲು ತಟ್ಟಿತ್ತು. ಇದರ ಬೆನ್ನಲ್ಲೇ ಕನ್ವರ್ ವಿಜಯ್ ಪ್ರತಾಪ್ ಸಿಂಗ್ ಶಾಸಕ ಸ್ಥಾನಕ್ಕೆ ಗುಡ್‌ಬೈ ಹೇಳಿದ್ದಾರೆ.
‘ನನ್ನ ಏಕೈಕ ಗುರಿ ಪಂಜಾಬ್ ಫಸ್ಟ್’
ತಮ್ಮ ರಾಜೀನಾಮೆ ಕುರಿತು ಮಾತನಾಡಿದ ಕನ್ವರ್ ವಿಜಯ್, “ಶಾಸಕನಾಗಿ ನಾನು ನಿಗದಿಪಡಿಸಿಕೊಂಡಿದ್ದ ಶೇ. 90 ರಷ್ಟು ಕೆಲಸಗಳನ್ನು ಪೂರ್ಣಗೊಳಿಸಿದ್ದೇನೆ. ರಾಜಕೀಯದಲ್ಲಿದ್ದ ‘ಮೈ-ಬಾಪ್ ಸಂಸ್ಕೃತಿ’ಗೆ ಮುಕ್ತಿ ನೀಡಿ, ಜನಪ್ರತಿನಿಧಿಗಳಿಗಿಂತ ಸಾರ್ವಜನಿಕರೇ ನಿಜವಾದ ಸ್ಪೂರ್ತಿ ಎಂಬುದನ್ನು ಸಾಬೀತುಪಡಿಸಿದ್ದೇ ನನ್ನ ದೊಡ್ಡ ಸಾಧನೆ. ಅಸೆಂಬ್ಲಿಯಲ್ಲಿ ಅಮೃತಸರದ ಕುಡಿಯುವ ನೀರು, ಚರಂಡಿ, ಕಂಪನಿ ಬಾಗ್, ಗುರು ನಾನಕ್ ದೇವ್ ವಿಶ್ವವಿದ್ಯಾಲಯ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜು ಸೇರಿದಂತೆ ಪ್ರತಿಯೊಂದು ಗಲ್ಲಿ-ಬೀದಿಗಳ ಹೆಸರೆತ್ತಿ ಸಮಸ್ಯೆಗಳನ್ನು ಧ್ವನಿಸಿದ ಮೊದಲ ಶಾಸಕ ನಾನಾಗಿದ್ದೇನೆ” ಎಂದಿದ್ದಾರೆ.
ಮುಂದುವರಿದು, “ಪಂಜಾಬ್ ರಾಜ್ಯವು ರಿಬ್ಬನ್ ಕತ್ತರಿಸುವ ರಾಜಕೀಯದಿಂದ ಹೊರಬಂದು ಮಾದಕ ದ್ರವ್ಯ, ಸುಲಿಗೆ, ಗ್ಯಾಂಗ್‌ಸ್ಟರ್ ಸಂಸ್ಕೃತಿ ಹಾಗೂ ಭ್ರಷ್ಟಾಚಾರದ ವಿರುದ್ಧ ಒಗ್ಗೂಡಬೇಕಿದೆ. ಯಾವುದೇ ವೈಯಕ್ತಿಕ ಸ್ವಾರ್ಥವಿಲ್ಲದೆ, ಸ್ವಚ್ಛ ರಾಜಕೀಯ ಮತ್ತು ಪಾರದರ್ಶಕ ಆಡಳಿತಕ್ಕಾಗಿ ‘ಪಂಜಾಬ್ ಫಸ್ಟ್’ ತತ್ವದಡಿ ಜನರೊಂದಿಗೆ ಕೆಲಸ ಮಾಡುವುದೇ ನನ್ನ ಮುಂದಿನ ಗುರಿ” ಎಂದು ತಿಳಿಸಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದ ಕನ್ವರ್ ವಿಜಯ್ ಪ್ರತಾಪ್ ಸಿಂಗ್, 2015ರ ಕೋಟ್‌ಕಪುರಾ ಮತ್ತು ಬೆಹ್ಬಲ್ ಕಲಾನ್ ಪೊಲೀಸ್ ಗುಂಡಿನ ಚಕಮಕಿ ತನಿಖೆಯ ವಿಶೇಷ ತನಿಖಾ ತಂಡದ (SIT) ಭಾಗವಾಗಿದ್ದರು. ತರುವಾಯ ಪೋಲಿಸ್ ಸೇವೆಗೆ ಸ್ವಯಂಪ್ರೇರಿತ ನಿವೃತ್ತಿ (VRS) ನೀಡಿ ಎಎಪಿ ಸೇರಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದರು.
ಈ ಸರಣಿ ಬೆಳವಣಿಗೆಗಳು ಪಂಜಾಬ್ ರಾಜಕಾರಣದಲ್ಲಿ ಮತ್ತೊಮ್ಮೆ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಆಮ್ ಆದ್ಮಿ ಪಾರ್ಟಿ ನಾಯಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ರಾಜಕೀಯ ನಡೆಗಳ ಹಿಂದಿನ ಹಸ್ತ ಯಾವುದು ಎಂಬ ಪ್ರಶ್ನೆ ಮೂಡಿಸಿದೆ. ಹಿಂದೆ ರಾಘವ್ ಚಡ್ಡಾ ದಿಢೀರ್ ರಾಜೀನಾಮೆ ನೀಡಿ, ತದನಂತರ ಬಿಜೆಪಿ ಸೇರ್ಪಡೆಯಾದ ರೀತಿಯೇ, ಈಗ ಎಎಪಿ ಶಾಸಕರು ಸಾಲಾಗಿ ಹೊರಬರುತ್ತಿರುವುದು ಬಿಜೆಪಿ ಹೆಣೆದಿರುವ ಯೋಜನಾಬದ್ಧ ತಂತ್ರಗಾರಿಕೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ, ಪ್ರಮುಖ ನಾಯಕರನ್ನು ಪಕ್ಷದಿಂದ ದೂರಮಾಡುವ ಮೂಲಕ ಎಎಪಿ ಕೋಟೆಗೆ ಕನ್ನಹಾಕಲು ಮತ್ತು ರಾಜ್ಯದಲ್ಲಿ ತನ್ನ ನೆಲೆಯನ್ನು ಬಲಪಡಿಸಿಕೊಳ್ಳಲು ಬಿಜೆಪಿ ಹೆಣೆದಿರುವ ಕುತಂತ್ರ ರಾಜಕೀಯವೇ ಈ ಎಲ್ಲಾ ವಿದ್ಯಮಾನಗಳಿಗೆ ಮುಖ್ಯ ಕಾರಣ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ.




