ಗೆಲ್ಲಬಹುದಾಗಿದ್ದ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಲ್ಟಿ ಹೊಡೆದದ್ದು ಹೇಗೆ?

Date:

ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆದ ನಾಲ್ಕು ಎಮ್ಮೆಲ್ಸಿ ಸ್ಥಾನಗಳ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಒಂದೇ ಒಂದು ಸೀಟನ್ನೂ ಪಡೆಯಲಾಗದೆ ಮುಗ್ಗರಿಸಿರುವುದು ರಾಜಕೀಯ ಪಡಸಾಲೆಯಲ್ಲಿ ನಾನಾ ನಮೂನೆಯ ವ್ಯಾಖ್ಯಾನ-ವಿಶ್ಲೇಷಣೆ ಹುಟ್ಟುಹಾಕಿದೆ. ಸರಕಾರ(ಡಿಕೆಶಿ) ಮತ್ತು ಕೆಪಿಸಿಸಿ(ಹರಿಪ್ರಸಾದ್) ನಡುವಿನ ಸಮನ್ವಯತೆ ಕೊರತೆಯೇ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣ ಎನ್ನುವವರೂ ಇದ್ದಾರೆ.

ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆದ ನಾಲ್ಕು ಎಮ್ಮೆಲ್ಸಿ ಸ್ಥಾನಗಳ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಒಂದೇ ಒಂದು ಸೀಟನ್ನೂ ಪಡೆಯಲಾಗದೆ ಮುಗ್ಗರಿಸಿರುವುದು ರಾಜಕೀಯ ಪಡಸಾಲೆಯಲ್ಲಿ ನಾನಾ ನಮೂನೆಯ ವ್ಯಾಖ್ಯಾನ-ವಿಶ್ಲೇಷಣೆ ಹುಟ್ಟುಹಾಕಿದೆ. ಒಳಸುಳಿಗೆ ಸಿಲುಕಿ ತತ್ತರಿಸುತ್ತಿರುವ ಬಿಜೆಪಿ ಈ ಗೆಲುವನ್ನೇ ಮಹಾನ್ ದಿಗ್ವಿಜಯವೆಂಬ ಭ್ರಮೆಯಲ್ಲಿ ಮಾತಾಡುತ್ತಿದ್ದರೆ, ಕಾಂಗ್ರೆಸ್ಸಿನಲ್ಲಿ ಒಂಥರಾ ಸೂತಕದ ಸನ್ನಿವೇಶ ಮೂಡಿಸಿದೆ. ಸಿದ್ದರಾಮಯ್ಯರನ್ನು ಕಡೆಗಣಿಸಿದ್ದಕ್ಕೆ ಕಾಂಗ್ರೆಸ್ ಕಷ್ಟಕ್ಕೆ ಸಿಲುಕಿದೆ ಎಂಬ ಮಾತುಗಳು ಒಂದೆಡೆಯಾದರೆ, ಮತ್ತೊಂದೆಡೆ ಡಿಕೆಶಿಗೆ ಸ್ವಜಾತಿ ಒಕ್ಕಲಿಗರದೇ ಬೆಂಬಲವಿಲ್ಲ. ಸರಕಾರ(ಡಿಕೆಶಿ) ಮತ್ತು ಕೆಪಿಸಿಸಿ(ಹರಿಪ್ರಸಾದ್) ನಡುವಿನ ಸಮನ್ವಯತೆ ಕೊರತೆಯೇ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣ ಎನ್ನುವವರೂ ಇದ್ದಾರೆ. ವರ್ಚಸ್ಸಿಲ್ಲದ ಡಿಕೆಶಿಯಿಂದ 2028ರಲ್ಲಿ ಕಾಂಗ್ರೆಸ್ಸನ್ನು ದಡ ತಲುಪಿಸಲು ಸಾಧ್ಯವೇ ಎಂಬ ಜಿಜ್ಞಾಸೆ ಮೂಡಿದೆ.

- Advertisement -

ಈ ರಾಜಕೀಯ ರಾಸಾಯನಿಕ ಶಾಸ್ತ್ರ ಏನೇ ಇರಲಿ, ಸ್ಥಳೀಯ ಗಣೀತ ಶಾಸ್ತ್ರ ಸೂಕ್ಷ್ಮವಾಗಿ ಅವಲೋಕಿಸಿದರೆ ಒಂದೆರಡು ಕ್ಷೇತ್ರದಲ್ಲಾದರೂ ಕಾಂಗ್ರೆಸ್ ಗೆಲ್ಲುವ ಅವಕಾಶ ಇತ್ತೆಂಬುದು ಸ್ಪಷ್ಟವಾಗುತ್ತದೆ. ಸಾಂಪ್ರದಾಯಿಕ ಎಲೀಟ್ ವರ್ಗದ ಮತದಾರರ ಈ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳಲ್ಲಿ ಬಿಜೆಪಿಯ ಗಿಮಿಕ್‌ಗಳು ಕ್ಲಿಕ್ ಆಗುವ ಛಾನ್ಸ್ ಜಾಸ್ತಿ ಎನ್ನುವ ವಾತಾವರಣ ಇರುವುದೇನೋ ನಿಜ. ಆದರೆ ಬೆಂಗಳೂರು ಶಿಕ್ಷಕರ ಮತ್ತು ಪಶ್ಚಿಮ ಪದವೀಧರರ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನ ಶಾಸಕರು, ಮಂತ್ರಿಗಳು ಮತ್ತು ಆಯಕಟ್ಟಿನ ಪದಾಧಿಕಾರಿಗಳು ಪಕ್ಷ ನಿಷ್ಠೆ, ಪ್ರಾಮಾಣಿಕತೆಯಿಂದ ಯುದ್ಧ ಸನ್ನದ್ಧರಾಗಿದ್ದರೆ ಗೆಲ್ಲುವುದು ಸಾಧ್ಯವಿತ್ತು. ಸೋಲುವ ಭಯದ ಈ ಎರಡೂ ಕ್ಷೇತ್ರದಲ್ಲಿ ಬಿಜೆಪಿಯ ಹಿರಿ-ಮರಿ ನಾಯಕರು ಪ್ರದರ್ಶಿಸಿದ ಛಲ-ಜಿದ್ದು ಕಾಂಗ್ರೆಸಿಗರಲ್ಲಿ ಇರಲಿಲ್ಲ ಎಂದು ಅಖಾಡದಲ್ಲಾದ ‘ಆಟ’  ಕಂಡವರೆಲ್ಲರ ಅಭಿಪ್ರಾಯವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ

ಹಳ್ಳಿಗಳ ಮಣ್ಣಿನ ಸೊಗಡು, ಮಹಿಳೆಯರ ಬದುಕಿನ ಅನುಭವ, ಕುಟುಂಬದ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಸೋಬಾನೆ ಪದಗಳ ಗಾಯನಕ್ಕೆ ದಶಕಗಳಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಚಾಮರಾಜನಗರದ ಹಿರಿಯ ಜಾನಪದ...

ನವೆಂಬರ್ 1 | ಕರ್ನಾಟಕ ರಾಜ್ಯೋತ್ಸವ ಮಾತ್ರವಲ್ಲ; ಭಾರತದ...

ನವೆಂಬರ್ 1 ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ. ಇದೇ ದಿನ ದೇಶದ ಎಂಟು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಚನೆ, ಮರುರಚನೆ ಹಾಗೂ ವಿಮೋಚನೆಯ ಇತಿಹಾಸವೂ ಇದೆ. ಭಾಷಾವಾರು ರಾಜ್ಯಗಳಿಗಾಗಿ ನಡೆದ...

ರಾಜ್ಯೋತ್ಸವ ವಿಶೇಷ | ಕನ್ನಡಕ್ಕೊಂದು ವಿಜ್ಞಾನದ ಓದು

ವಿಜ್ಞಾನ ಓದು ಎಂದರೇನು? ಕನ್ನಡಕ್ಕಾಗಿ ಅಂತಹದೊಂದು ಬೇಕಾ? ಇಂತಹದ್ದೊಂದರ ಚರ್ಚೆ ಇಂದಿನ ಅಗತ್ಯಗಳಲ್ಲೊಂದು. ಏಕೆಂದರೆ ನಮ್ಮಲ್ಲಿ ಓದು ಎನ್ನುವುದು ಬಹುಪಾಲು ಸಾಹಿತ್ಯಕವಾದ ಓದೇ ಆಗಿದೆ. ಸಾಹಿತ್ಯದಲ್ಲಿ ಸಹಜವಾಗಿ ಕಾಣಬರುವ ಒಂದು ಬಗೆಯ ಎಲ್ಲವೂ...

ಪಶ್ಚಿಮ ಪದವೀಧರ ಕ್ಷೇತ್ರವನ್ನು ಕಾಂಗ್ರೆಸ್ಸಿನ ವಜನಿನ ಅಗ್ರ ಮುಖಂಡರಲ್ಲೋರ್ವರೂ, ಹಲವು ಸಾರಿ ಮಂತ್ರಿ-ವಿರೋಧ ಪಕ್ಷದ ನಾಯಕರೂ ಆಗಿದ್ದ ಎಚ್.ಕೆ.ಪಾಟೀಲ್ ಹತ್ತಿರತ್ತಿರ ಎರಡೂವರೆ ದಶಕಗಳ ಕಾಲ ವಿಧಾನ ಪರಿಷತ್‌ನಲ್ಲಿ ಪ್ರತಿನಿಧಿಸಿದ್ದರು. ದೇವರಾಜ ಅರಸರಿಗೆ ಸೆಡ್ಡು ಹೊಡೆಯುತ್ತಿದ್ದ ಕೆ.ಎಚ್.ಪಾಟೀಲರ ಕುಲ ತಿಲಕ ಕೆ.ಎಚ್.ಪಾಟೀಲ್ ಸತತ ನಾಲ್ಕು ಬಾರಿ ಗೆದ್ದಿದ್ದರಿಂದ ಈ ಕ್ಷೇತ್ರಕ್ಕೆ ‘ವಿಶೇಷ’ ಪ್ರತಿಷ್ಠೆಯೂ ಮೂಡಿತ್ತು. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಜನತಾ ಪರಿವಾರದ ಬಸವರಾಜ ಹೊರಟ್ಟಿ ಮತ್ತು ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಎಚ್‌ಕೆಪಿ ಒಳ ಒಪ್ಪಂದ ಮಾಡಿಕೊಂಡು ನಿರಾತಂಕ-ನಿರಾಯಾಸವಾಗಿ ಚುನಾಯಿತರಾಗುತ್ತಿದ್ದರು ಎಂಬ ಬಹಿರಂಗ ಗುಟ್ಟೊಂದು ಇವತ್ತಿಗೂ ಉತ್ತರ ಕರ್ನಾಟಕದ ಜನರ ಬಾಯಲ್ಲಿದೆ.

ಸಂಘ ಪರಿವಾರ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಬಳಸಿಕೊಂಡು ಮತೀಯ ಧ್ರುವೀಕರಣ ರಾಜಕೀಯ ಹೆಣೆಯುತ್ತಿದ್ದ ಹೊತ್ತಿಗೇ ಯಡಿಯೂರಪ್ಪ ಉತ್ತರ ಕರ್ನಾಟಕದ ಲಿಂಗಾಯತರ ಪ್ರಶ್ನಾತೀತ ಮುಂದಾಳಾಗಿ ಅವತರಿಸಿದ್ದರು. ಸಂಘೀಗಳ ಹಿಂದುತ್ವ ಮತ್ತು ಯಡಿಯೂರಪ್ಪರ ಲಿಂಗಾಯತತ್ವದ ಜಂಟೀ ದಾಳಿ ಮುಂದೆ ಎಚ್‌ಕೆಪಿ-ಹೊರಟ್ಟಿ  ಜೋಡಿಯ ‘ಪಕ್ಷಾತೀತ’ ರಾಜಕಾರಣ ನಡೆಯಲಿಲ್ಲ. 2008ರ ಚುನಾವಣೆಯಲ್ಲಿ ಯಡಿಯೂರಪ್ಪರ ಬಂಟನೆಂದು ಗುರುತಿಸಿಕೊಂಡಿದ್ದ ಮೋಹನ ಲಿಂಬಿಕಾಯಿ ಎಚ್‌ಕೆಪಿಯ ಏಕಸ್ವಾಮ್ಯ ಮುರಿದು ಜಯ ಸಾಧಿಸಿದರು. ಆನಂತರ ಎಚ್‌ಕೆಪಿ ತಮ್ಮ ಸಹೋದರ ಸಂಬಂಧಿ ಡಿ.ಆರ್.ಪಾಟೀಲ್ ಪ್ರತಿನಿದಿಸುತ್ತಿದ್ದ ಗದಗದಿಂದ ಅಸೆಂಬ್ಲಿಗೆ ಸ್ಫರ್ಧಿಸಿದರು. ಮೊದಲ ಪ್ರಯತ್ನದಲ್ಲಿ ಬಿಜೆಪಿಯ ಶ್ರೀಶೈಲ ಬಿದರೂರು ಎದುರು ಮಂಡಿಯೂರಿದರೂ ಆನಂತರ ಡಿ.ಆರ್.ಪಾಟೀಲರ ಪ್ರಭಾವದಿಂದ ಗೆಲುವು ಕಂಡರು. ಕಾಂಗ್ರೆಸ್ ಗೆದ್ದಾಗೆಲ್ಲ ಆಯಕಟ್ಟಿನ ಮಂತ್ರಿಯೂ ಆಗಿ ದರ್ಬಾರು ನಡೆಸಿದರು.

2699 16 3 2023 21 29 7 1 17HUBLIMOHANLIMBIKAI
ಮೋಹನ ಲಿಂಬಿಕಾಯಿ… ಕಾಂಗ್ರೆಸ್ ಪಕ್ಷ ಸೇರಿದಾಗ…

ಇತ್ತ ಮೋಹನ ಲಿಂಬಿಕಾಯಿಗೆ ಬಿಜೆಪಿಯ ಋಣ ಹಚ್ಚು ದಿನ ಉಳಿಯಲಿಲ್ಲ. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಎಮ್ಮೆಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರನಡೆದರು. ಯಡಿಯೂರಪ್ಪ ಸಿಎಂ ಆಗಿದ್ದಾಗ ಈ ನಿಷ್ಠಾವಂತ ಶಿಷ್ಯನಿಗೆ ಕಾನೂನು ಸಲಹೆಗಾರನಾಗಿ ನೇಮಿಸಿಕೊಂಡು ಮಂತ್ರಿಗಿರಿ ಸೌಲಭ್ಯ-ಸೌಲತ್ತು ಕೊಡಿಸಿದ್ದರಾದರೂ ಆನಂತರ ಕಾಪಾಡಲು ಆಗಲಿಲ್ಲ. ಶೆಟ್ಟರ್, ಅನಂತಕುಮಾರ್ ಶಾಸ್ತ್ರಿ ವಗೈರೆ ಯಡಿಯೂರಪ್ಪರ ವಿರೋಧಿಗಳು ಲಿಂಬಿಕಾಯಿಗೆ ಪರಿಷತ್ ಕೇಸರಿ ಟಿಕೆಟ್ ಸಿಗದಂತೆ ನೋಡಿಕೊಂಡರು. ಅಂದು ದಿಲ್ಲಿ-ನಾಗಪುರ ಕೇಸರಿ ಪರಿವಾರದಲ್ಲಿ ಪ್ರಬಲ ನಾಯಕರಾಗಿದ್ದ ಹುಬ್ಬಳ್ಳಿ ಮೂಲದ ಅನಂತಕುಮಾರ್ ಹಿಂದೆ-ಮುಂದೆ ಓಡಾಡಿಕೊಂಡಿದ್ದ ಎಸ್.ವಿ.ಸಂಕನೂರ್ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಎಮ್ಮೆಲ್ಸಿಯಾದರು. ಪಶ್ಚಿಮ ಶಿಕ್ಷಕರ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಲಿಂಬಿಕಾಯಿಗೆ ರಮಿಸಲಾಯಿತು. ಆದೂ ದಕ್ಕಲಿಲ್ಲ. ಜೆಡಿಎಸ್‌ನಿಂದ ವಲಸೆ ಬಂದಿದ್ದ ಹೊರಟ್ಟಿಗೆ ಆ ಸೀಟು ಕೊಡಲಾಯಿತು. ‘ಗುರು ಬಲ’ ಇಲ್ಲದೆ ಲಿಂಬಿಕಾಯಿ ಬಿಜೆಪಿಯಲ್ಲಿ ಹಣ್ಣುಗಾಯಿ ನೀರುಗಾಯಿಯಾದರು.

ಇದನ್ನು ಓದಿದ್ದೀರಾ?: ನ.3ರಂದು ಆಂಧ್ರ ಕರಾವಳಿಗೆ ಅಪ್ಪಳಿಸಲಿರುವ ‘ಮುರಸು’ ಚಂಡಮಾರುತ: ಏನಿದರ ಅರ್ಥ, ನಾಮಕರಣ ಹೇಗೆ?

ಸತತ ಏಳು ಬಾರಿ ಪರಿಷತ್‌ಗೆ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಜನತಾ ಪರಿವಾರದ ಬಾವುಟ ಹಿಡಿದುಕೊಂಡು ಚುನಾಯಿತರಾಗಿದ್ದ ‘ಡ್ರಿಲ್ ಮಾಸ್ತರ್’ ಹೊರಟ್ಟಿಗೆ 2022ರ ಚುನಾವಣೆ ವೇಳೆಗೆ ಜೆಡಿಎಸ್‌ನಿಂದ ಮತ್ತೆ ಎಮ್ಮೆಲ್ಸಿಯಾಗುವ ಧೈರ್ಯವಿರಲಿಲ್ಲ. ಬಿಜೆಪಿಗೂ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಸಮರ್ಥ ಹುರಿಯಾಳಿನ ಕೊರತೆಯಿತ್ತು. ಬಿಜೆಪಿಯ ಈ ಅನಿವಾರ್ಯತೆ ಗೊತ್ತಿದ್ದ ಹೊರಟ್ಟಿ ತನಗೆ ವಿಧಾನ ಪರಿಷತ್ ಸಭಾಪತಿ ಸ್ಥಾನ ಕೊಡುವ ಷರತ್ತು ವಿಧಿಸಿ ಆ ಪಕ್ಷಕ್ಕೆ ನುಸುಳಿಕೊಂಡರು. ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತಾಸಕ್ತಿಗೆ ಧಕ್ಕೆಯಾಗದಂತೆ ನಿಗಾ ವಹಿಸಿಕೊಂಡು ಬಂದಿದ್ದ ಹೊರಟ್ಟಿ ವೈಯಕ್ತಿಕ ವರ್ಚಸ್ಸಿನ ಜತೆಗೆ ಕೇಸರಿ ಮತಗಳು ಸೇರಿ ಬಿಜೆಪಿ ಕೈ ಮೇಲಾಯಿತು. ತಿಂಗಳಾನುಗಟ್ಟಲೆ ಸತಾಯಿಸಿದ ನಂತರ ಹೊರಟ್ಟಿಗೆ ಸಭಾಪತಿ ಸ್ಥಾನ ಬಿಜೆಪಿ ದಯಪಾಲಿಸಿತು. ಒಂದರ್ಥದಲ್ಲಿ ಹೊರಟ್ಟಿ ಅತ್ತೂ ಕರೆದೂ ಪರಿಷತ್ ಪೀಠ ಪಡೆಯಬೇಕಾಯಿತು.

ಅಲ್ಲಿಗೆ ಕೇಸರಿ ಪಾರ್ಟಿಯಲ್ಲಿ ಉಳಿದರೆ ಪ್ರಯೋಜನವಿಲ್ಲ ಎಂಬುದು ಲಿಂಬಿಕಾಯಿಗೆ ಖಾತ್ರಿಯಾಯಿತು. ಕಳೆದ ಅಸೆಂಬ್ಲಿ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಸೇರಿಕೊಂಡರು. ಕೈ ಬಿಡಾರ ಸೇರುತ್ತಿದ್ದಂತೆಯೇ ಹುಬ್ಭಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಟಿಕೆಟ್ ಬೇಕೆಂದು ವರಾತ ಶುರುಹಚ್ಚಿಕೊಂಡರು. ಮೂಲ ನಿವಾಸಿ ಕಾಂಗ್ರೆಸ್  ಅಭ್ಯರ್ಥಿ ಆಕಾಂಕ್ಷಿಗಳು ಒಟ್ಟಾಗಿ ‘ವಲಸೆ ಬಂದ ಲಿಂಬಿಕಾಯಿ, ಬದನೆಕಾಯಿಗೆಲ್ಲ ಟಿಕೆಟ್ ಕೊಡಕೂಡದು’ ಎಂದು ಮುರಕೊಂಡು ಬಿದ್ದರು. ಕಾಂಗ್ರೆಸ್ಸಿನ ದೊಡ್ಡವರು ಪಶ್ಚಿಮ ಪದವೀಧರ ಕ್ಷೇತ್ರದ ಕೈ ಕಲಿ ಮಾಡುವ ಭರವಸೆ ಕೊಟ್ಟು ಲಿಂಬಿಕಾಯಿಯನ್ನು ಸಮಾಧಾನಪಡಿಸಿದರು. ಹೆಚ್ಚುಕಮ್ಮಿ ಅಂದಿನಿಂದಲೇ ಲಿಂಬಿಕಾಯಿ ಪ್ರಚಾರ ಪ್ರಾರಂಭಿಸಿಕೊಂಡಿದ್ದರು. ಚುನಾವಣೆಗಳ ಕೊನೇ ಕ್ಷಣದಲ್ಲಿ ಅಭ್ಯರ್ಥಿಗಳನ್ನು ಘೋಷಿಸುವ ‘ಸಂಪ್ರದಾಯ’ದ ಕಾಂಗ್ರೆಸ್ ಸುಮಾರು ಒಂದು ವರ್ಷ ಮೊದಲೆ ಲಿಂಬಿಕಾಯಿ ಹುರಿಯಾಳುತನ ಪ್ರಕಟಿಸಿತ್ತು.

ಚುನಾವಣೆ ಹತ್ತಿರತ್ತಿರ ಬರುತ್ತಿದ್ದಂತೆಯೆ ಲಿಂಬಿಕಾಯಿಗೆ ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಕೈ ಅಭ್ಯರ್ಥಿ ಆರ್.ಎಂ.ಕುಬೇರಪ್ಪ ಕಾಟ ಕೊಡಲಾರಂಭಿಸಿದ್ದರು. ತನಗೆ ಕಾಂಗ್ರೆಸ್ ಟಿಕೆಟ್ ಕೊಡದಿದ್ದರೆ ಬಂಡಾಯ ಗ್ಯಾರಂಟಿ ಎಂದು ಬೆದರಿಸುತ್ತಿದರು. ಆದರೆ ಕೆಪಿಸಿಸಿ ಲಿಂಬಿಕಾಯಿ ಬೆನ್ನಿಗಿತ್ತು. ಕುಬೇರಪ್ಪ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಕುಬೇರಪ್ಪರಿಗೆ ಇದು ಬೇಡದ ಚುನಾವಣೆಯಾಗಿತ್ತಾದರೂ ಪಕ್ಷದ ಹೈಕಮಾಂಡ್ ಜತೆ ಚೌಕಾಸಿಗಿಳಿದು ಯಾವುದಾದರೂ ನಿಗಮ-ಮಂಡಳಿಯಂತಹ ಲಾಭದಾಯಕ ಹುದ್ದೆ ಗಿಟ್ಟಿಸುವ ತುಡಿತವಿತ್ತು. ಕುಬೇರಪ್ಪರ ‘ಪ್ರಯತ್ನ’ ಫಲ ನೀಡಿತು. ಖುದ್ದು ಸಿಎಂ ಡಿಕೆಶಿಯೇ ಕರೆದು ‘ಪುನರ್ವಸತಿ’ ವ್ಯವಸ್ಥೆ ಮಾಡುವ ಭರವಸೆ ಕೊಟ್ಟು ನಾಮಪತ್ರ ಹಿಂಪಡೆಯುವಂತೆ ನೋಡಿಕೊಂಡರು. ಕುಬೇರಪ್ಪ ಸರಣಿ ಪತ್ರಿಕಾ ಹೇಳಿಕೆ ಒಗಾಯಿಸಿ ಕಾಂಗ್ರೆಸ್ಸಿನ ಅಧಿಕೃತ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದಂತೆ ತೋರಿಸಿಕೊಂಡರು.

ಚುನಾವಣೆಗೆ ತುಂಬ ಮೊದಲೆ ಅಭ್ಯರ್ಥಿ ಹೆಸರು ಪ್ರಕಟಿಸುವ ‘ಹೆಗ್ಗಳಿಕೆ’ಯ ಬಿಜೆಪಿಯ ಟಿಕೆಟ್ ತೀರ್ಮಾನ ಕೈಗೊಳ್ಳಬೇಕಾಗಿದ್ದ ಕೇಂದ್ರ ಸಚಿವ ಜೋಶಿ, ಮಾಜಿ ಸಿಎಂ ಶೆಟ್ಟರ್ ಮುಂತಾದವರು ನಾಮಪತ್ರ ಸಲ್ಲಿಸುವ ಗಡುವು ಮುಗಿವ ಹಂತದ ತನಕವೂ ತಮ್ಮ ಪಾರ್ಟಿಯ ಕಪ್ಪು ಕುದುರೆ ಯಾರೆಂದು ಹೇಳಲಾಗದೆ ಹೊಯ್ದಾಡುತ್ತಲೇ ಇದ್ದರು. ಎರಡು ಬಾರಿ ಗೆದ್ದಿದ್ದ ಎಸ್.ವಿ.ಸಂಕನೂರ್ ಆಂಟಿಇನ್ಕಂಬೆನ್ಸ್ ಸುಳಿಗೆ ಸಿಲುಕಿದ್ದು ಕೇಸರಿ ಟಿಕೆಟ್ ಕಮಿಟಿಯ ಮಹಾಮಹಿಮರನ್ನು ಕಂಗಾಲಾಗಿಸಿತ್ತು. ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ಟಿನ ಪ್ರಬಲ ದಾವೆದಾರನಾಗಿದ್ದ ಲಿಂಗರಾಜ್ ಪಾಟೀಲರನ್ನು ವಿಧಾನ ಸಭೆಯಿಂದ ಪರಿಷತ್ತಿಗೆ ಕಳಿಸಿದ್ದರು ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳ ದೊಡ್ಡ ದಂಡೇ ನೆರೆದಿದ್ದು ಮತ್ತೊಂದು ತಲೆಬಿಸಿಗೆ ಕಾರಣವಾಗಿತ್ತು. ಅಳೆದು ತೂಗಿ ಅಂತೂ ಇಂತೂ ಅಂತಿಮ ಹಂತದಲ್ಲಿ ಬಿಜೆಪಿ ಹಳೆ ಮುಖ ಸಂಕನೂರಗೆ ಅಖಾಡಕ್ಕೆ ಇಳಿಸಿತ್ತು.

ಸಂಕನೂರ1
ಒಗ್ಗಟ್ಟಿನ ಮಂತ್ರ ಜಪಿಸಿದ ಬಿಜೆಪಿ

ಪ್ರಬಲ ಎದುರಾಳಿ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪ್ರಜ್ಞಾವಂತರು, ಶಿಕ್ಷಿತರು ಎನ್ನಲಾಗುವ ಪದವೀಧರರ ಈ ಕ್ಷೇತ್ರದಲ್ಲೂ(ಎಲ್ಲ ಚುನಾವಣೆಗಳಂತೆ) ಜಾತಿ ಲೆಕ್ಕಾಚಾರ ಹಾಕಿಯೆ ಅಭ್ಯರ್ಥಿ ಆಯ್ಕೆ ಮಾಡಿತ್ತು. ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಲಿಂಗಾಯತರದೇ ಪಾರಮ್ಯ. ಹಾಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಹುರಿಯಾಳುಗಳು ಲಿಂಗಾಯತ ಸಮುದಾಯದವರೆ ಆಗಿದ್ದರು. ಜಿದ್ದಾಜಿದ್ದಿಯೂ ಹೆಚ್ಚು ಮತದಾರರಿರುವ ಅವಿಭಜಿತ ಧಾರವಾಡ ಜಿಲ್ಲೆಯಲ್ಲೇ ಕೇಂದ್ರಿಕೃತವಾಗಿತ್ತು. ಇಡೀ ಬಿಜೆಪಿ ಟೀಮಿಗೆ ಗೆಲ್ಲಲೇಬೇಕೆಂಬ ಹಠವಿದ್ದರೆ, ಆಡಳಿತಾರೂಢ ಕಾಂಗ್ರೆಸಲ್ಲಿ ಕ್ಯಾಂಡಿಡೇಟ್ ಒಬ್ಬರನ್ನು ಬಿಟ್ಟು ಉಳಿದೆಲ್ಲರೂ ಉದಾಸೀನದಲ್ಲಿದ್ದರು.

ಈ ಪರಿಷತ್ ಕ್ಷೇತ್ರ ವ್ಯಾಪ್ತಿಯ 24 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 17 ಕಡೆ ಶಾಸಕರನ್ನು ಹೊಂದಿತ್ತು. ಬಿಜೆಪಿ ಉಚ್ಚಾಟಿತ ಶಾಸಕ ಯಲ್ಲಾಪುರದ ಶಿವರಾಮ್ ಹೆಬ್ಬಾರ್ ಸಹಕಾರವೂ ಕಾಂಗ್ರೆಸಿಗಿತ್ತು. ಈ ಕೈ ಎಮ್ಮೆಲ್ಲೆಗಳು ಬದ್ಧತೆ, ನಿಯತ್ತಿನಿಂದ ಪ್ರಚಾರ ನಡೆಸಿದ್ದರೆ ಮೋಹನ ಲಿಂಬಿಕಾಯಿ ಗೆಲ್ಲುವುದು ಕಷ್ಟವೇನಾಗಿರಲಿಲ್ಲ. ಸತತ ಎರಡು ಸಲ ಬಿಜೆಪಿಯ ಸಂಕನೂರರನ್ನು ಗೆಲ್ಲಿಸಿದರೂ ಪೈಸೆ ಪ್ರಯೋಜನವಾಗಿಲ್ಲ, ಸಂಕನೂರ್ ಪರಿಷತ್ತಿನಲ್ಲೂ ನಿರುದ್ಯೋಗಿ ಪದವೀಧರರ ಸಮಸ್ಯೆ ಎತ್ತಿದ್ದು, ಪರಿಹಾರ ಹುಡುಕಿದ್ದು ಅಷ್ಟಕ್ಕಷ್ಟೇ ಎಂಬ ಅಸಮಾಧಾನ ಕ್ಷೇತ್ರದಲ್ಲಿತ್ತು. ಬಿಜೆಪಿಯಲ್ಲೇ ‘ಗುಡ್ ಫಾರ್ ನಥಿಂಗ್’ ಸಂಕನೂರಗೆ ಪುನಃ ಚುನಾವಣೆಗೆ ಇಳಿಯುವುದಕ್ಕೆ ವಿರೋಧವಿತ್ತು. ಎದುರಾಳಿಯ ಈ ದೌರ್ಬಲ್ಯವನ್ನೆಲ್ಲ ಬಳಸಿ ಕಾಂಗ್ರೆಸ್ಸಿನ ಮಂತ್ರಿ, ಶಾಸಕರು, ನಾಯಕರು ನಿಷ್ಠೆಯಿಂದ ಗೆಲುವಿನ ಸ್ಟ್ರಾಟಜಿ ಹೆಣೆದಿದ್ದರೆ ಬಿಜೆಪಿ ಗೆಲ್ಲಲು ಸಾಧ್ಯವೇ ಇರಲಿಲ್ಲ ಎನ್ನಲಾಗುತ್ತಿದೆ.

ಕಳೆಗುಂದಿದ್ದ ಬಿಜೆಪಿ ಹುರಿಯಾಳು ಸಂಕನೂರ್ ಪರಿಸ್ಥಿತಿ ಮತ್ತು ಹಿಂದೊಮ್ಮೆ ಎಮ್ಮೆಲ್ಸಿಯಾಗಿದ್ದ ಕಾಂಗ್ರೆಸ್ ಉಮೇದುವಾರ ಲಿಂಬಿಕಾಯಿಗೆ ಕ್ಷೇತ್ರದಲ್ಲಿದ್ದ ಸಂಪರ್ಕಗಳು, 18 ಶಾಸಕರ ಶಕ್ತಿ ಹಾಗೂ ಕಾಂಗ್ರೆಸ್ ಅಧಿಕಾರದಲ್ಲಿರುವುದೆಲ್ಲ ತುಲನೆ ಮಾಡಿದ ರಾಜಕೀಯ ವಿಶ್ಲೇಷಕರು ಹೋರಾಟ ಬಿಗಿಯಾಗುವ ಅಂದಾಜು ಹಾಕಿದ್ದರು. ಆದರೆ ಆಗಿದ್ದು ನೀರಸ ಹೋರಾಟ. ಗೆಲ್ಲುವ ಅವಕಾಶಗಳನ್ನೆಲ್ಲ ಕಾಂಗ್ರೆಸಿಗರು ಕೈಚೆಲ್ಲಿ ಕೂತಿದ್ದರು. ಎಐಸಿಸಿ, ಕೆಪಿಸಿಸಿ ಚನಾವಣಾ ಉಸ್ತುವಾರಿಗಳು ಬಂದಾಗಷ್ಟೇ ವೇದಿಕೆಯಲ್ಲಿ ಠಳಾಯಿಸಿದ ಸಚಿವ, ಶಾಸಕ, ಸೋಕಾಲ್ಡ್ ನಾಯಕರೆಲ್ಲ ರಣರಂಗದಲ್ಲಿ ಕಾಣಿಸಲೇ ಇಲ್ಲ.

ಇದನ್ನು ಓದಿದ್ದೀರಾ?: SIR ನಂತರವೂ ಬೆಂಗಳೂರು ಮತದಾರರ ಪಟ್ಟಿಯಲ್ಲಿ ಭಾರೀ ಯಡವಟ್ಟು: ‘XXX’, ‘????’, ಇಮೇಲ್ ಐಡಿಗಳೇ ಮತದಾರರ ಹೆಸರು!

ಶಿಗ್ಗಾವಿ ಬೈಇಲೆಕ್ಷನ್ನಲ್ಲಿ ಯೋಜನಾಬದ್ಧವಾಗಿ ತಂತ್ರಗಳನ್ನು ಹೆಣೆದು ಕಾಂಗ್ರೆಸ್ ಗೆಲ್ಲಿಸಿದ್ದ ಸಚಿವ ಸತೀಶ್ ಜಾರಕಿಹೊಳಿ ಮತದಾನಕ್ಕೆ ಎರಡ್ಮೂರು ದಿನವಿರುವಾಗ ಬಂದು ಹಾಗೇ ಟಾಟಾ ಮಾಡಿ ಹೋದರು. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕಾಟಾಚಾರಕ್ಕೆ ಅಡ್ಡಾಡಿದರು. ಸೈದ್ಧಾಂತಿಕವಾಗಿ ಬಿಜೆಪಿ ಮೇಲೆ ಯಾವಾಗಲೂ ‘ಉಗ್ರ’ ದಾಳಿಮಾಡುವ ಧಾರವಾಡ ಜಿಲ್ಲಾ ಮಂತ್ರಿ ಸಂತೋಷ್ ಲಾಡ್‌ರಲ್ಲೂ ಅದೇಕೋ ಜೋಶ್ ಇರಲಿಲ್ಲ. ಕೆಪಿಸಿಸಿಯ ಸಂಘಟನ್ ಸೃಜನ್ ಅಭಿಯಾನ ಬರಿ ಬೊಗಳೆಯಂತಾಗಿತ್ತು. ಪಕ್ಷದಿಂದ ಬಂದಿದ್ದ ಇಲೆಕ್ಷನ್ ಫಂಡೂ ಸರಿಯಾಗಿ ಹಂಚಿಕೆ ಆಗಲಿಲ್ಲ. ಬಿಜೆಪಿಗರು ಮಾತ್ರ ಒಂದು ಓಟಿಗೆ ಐದು ಸಾವಿರದಂತೆ ಲೆಕ್ಕಹಾಕಿ ವ್ಯವಸ್ಥಿತವಾಗಿ ಬಟವಾಡೆ ಮಾಡಿದ್ದಾರೆ ಎಂಬ ಮಾತು ಕಾಂಗ್ರೆಸ್ ವಲಯದಲಲ್ಲಿ ಕೇಳಿಬರುತ್ತಿದೆ.

ಕಾಂಗ್ರೆಸ್ ಶಾಸಕ-ಸಚಿವರಿಗೆ ಬೇಡದ ಉಸಾಬರಿಯಂತಾಗಿದ್ದ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯನ್ನು ಬಿಜೆಪಿ ವರವಾಗಿಸಿಕೊಂಡಿತ್ತು. ಕಾಂಗ್ರೆಸ್ ಹಾಲಿ ಶಾಸಕರು ಗೊರಕೆ ಹೊಡೆದರೆ, ಬಿಜೆಪಿಯ ಮಾಜಿ ಶಾಸಕರು ನಿದ್ದೆಗೆಟ್ಟು ಕೆಲಸ ಮಾಡಿದರು. ಬಿಜೆಪಿಯ ಆರು ಶಾಸಕರು, ಸಂದರು, ಕೇಂದ್ರ ಮಂತ್ರಿ ಜೋಶಿ ಕಾಂಗ್ರೆಸ್ ಮಣಿಸಲು ಏನು ಬೇಕೋ ಅದೆಲ್ಲ ಮಾಡಿದರು. ಆರಂಭದಲ್ಲಿ ಸೋಲುವ ಭೀತಿಯಲ್ಲಿದ್ದ ಸಂಘಪರಿವಾರದ ಚುನಾವಣಾ ‘ಮಂತ್ರವಾದಿ’ಗಳು ಕಾಂಗ್ರೆಸ್ ‘ಸೇನಾಧಿಪತಿ’ಗಳು ಶಸ್ತ್ರಾಸ್ತ್ರ ಚೆಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದದ್ದು ಕಂಡು ಹುರುಪುಗೊಂಡರು. ಮನೆ-ಮನೆಗೆ ಸಂಘ ಪರಿವಾರದ ಕಾರ್ಯಕರ್ತರು ಹೋಗಿ ಪ್ರಚಾರ ನಡೆಸಿದರು.

ಹಿಂದುತ್ವದ ಪ್ರಯೋಗ ಶಾಲೆಯಾದ ಹುಬ್ಬಳ್ಳಿ-ಧಾರವಾಡ ನಗರದಲ್ಲಂತೂ ಬಿಜೆಪಿಗೆ ದಂಡಿಯಾಗಿ ಮತ ಬಂತು. ಇಲ್ಲಿ ಕಾಂಗ್ರೆಸಿಗರ ನಿಷ್ಕ್ರಿಯತೆಯಿಂದ ಬಿಜೆಪಿಗೆ ಎದುರಾಳಿಯೆ ಇಲ್ಲದಂತ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಪರಿವಾರ ಮಾಡಿದ ಕಾರ್ಯಾಚರಣೆಯ ಅರ್ಥದಷ್ಟಾದರು ಪ್ರಯತ್ನ ಕಾಂಗ್ರೆಸ್ ಶಾಸಕ-ಮಂತ್ರಿಗಳು ಮಾಡಿದ್ದರೂ ಸಾಕಿತ್ತು, ನಮ್ಮ ಪಕ್ಷಕ್ಕೆ ಜಯವಾಗುತಿತ್ತೆಂದು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಅಲವತ್ತುಕೊಳ್ಳತಾರೆ. ಒಟ್ಟಿನಲ್ಲಿ ಬಿಜೆಪಿಯ ಸಂಕನೂರಗೆ ಸಂಘ ಪರಿವಾರದ ಸಂಘಟನಾತ್ಮಕ ಸಾಮರ್ಥ್ಯ ಸಿಕ್ಕರೆ, ಕಾಂಗ್ರೆಸ್ ಕ್ಯಾಂಡಿಡೇಟ್ ಲಿಂಬಿಕಾಯಿಯದು ಶುರುವಿನಿಂದ ಕೊನೆವರೆಗೂ ಏಕಾಂಗಿ ಸೆಣಸಾಟವಾಗಿತ್ತೆಂಬುದು ಚುನಾವಣೋತ್ತರ ಸಮೀಕ್ಷೆಯಲ್ಲಿ ಢಾಳಾಗಿ ಗೋಚರಿಸುತ್ತದೆ.

sankanura limbikayi1
ವಿದ್ಯಾವಂತ, ಬುದ್ಧಿವಂತರ ಮತಗಳೇ ಅಸಿಂಧು…

ಪಶ್ಚಿಮ ಪದವೀಧರ ಕ್ಷೇತ್ರದ ಒಟ್ಟೂ 97,400 ಮತದಲ್ಲಿ 73,658 ಓಟು ಚಲಾವಣೆಯಾಗಿತ್ತು. ಇದರಲ್ಲಿ ಚುನಾಯಿತ ಬಿಜೆಪಿ ಅಭ್ಯರ್ಥಿ ಸಂಕನೂರ್ 33,711 ಮತ ಮತ್ತು ಕಾಂಗ್ರೆಸ್ಸಿನ ಲಿಂಬಿಕಾಯಿ 24,388 ಮತ ಗಳಿಸಿದ್ದಾರೆ. ಗೆಲುವಿನ ಅಂತರ 9,323 ಮತ. ಇದಕ್ಕಿಂತಲೂ ಜಾಸ್ತಿ  ಮತ(10,245) ಅಸಿಂಧುವಾಗಿದೆ! ವಿದ್ಯಾವಂತರು, ಬುದ್ಧಿವಂತರು ಎನ್ನಲಾಗುವ ಪದವೀಧರರ ತಿಳಿವಳಿಕೆ ಮಟ್ಟ ಇದೆಂದು ವ್ಯಾಖ್ಯಾನಿಸಲಾಗುತ್ತಿದೆ. ಈ ಅಸಿಂಧು ಮತಗಳಲ್ಲಿ ಹೆಚ್ಚಿನದು ಕಾಂಗ್ರೆಸ್ಸಿನವು ಎಂಬ ಜಿಜ್ಞಾಸೆ ಈಗ ನಡೆದಿದೆ. ಸಂಘ ಪರಿವಾರ ಕಣ್ಣಿಟ್ಟಿದ್ದ(ಟಾರ್ಗೆಟ್ ಮಾಡಿದ್ದ) ಮತದಾರರಿಗೆ ಪ್ರಾಶಸ್ತ್ಯದ ಮತ ಹೇಗೆ ಚಲಾವಣೆ ಮಾಡಬೇಕೆಂಬ ಕಲೆ ಕಲಿಸಿತ್ತು. ಚುನಾವಣೆ ಬಗ್ಗೆಯೇ ಆಸಕ್ತಿಯಿಲ್ಲದ ಕಾಂಗ್ರೆಸ್ ಮುಖಂಡ ಮಣಿಗಳಿಗೆ ಈ ಜಾಗ್ರತೆ ಎಲ್ಲಿಂದ ಬರಬೇಕು? ಈ ಅಸಿಂಧು ಮತಗಳು ಸರಿಯಿದ್ದಿದ್ದರೆ ಫಲಿತಾಂಶವೇ ಬದಲಾಗುವ ಸಾಧ್ಯತೆಯಿತ್ತೆಂದು ಚುನಾವಣಾ ಪಂಡಿತರು ತರ್ಕಿಸುತ್ತಾರೆ.

ಒಟ್ಟಿನಲ್ಲಿ ಗೆದ್ದುಕೊಳ್ಳಬಹುದಾದ ಪಶ್ಚಿಮ ಪದವೀಧರ ಎಮ್ಮೆಲ್ಸಿ ಸ್ಥಾನ ಕಾಂಗ್ರೆಸ್ಸಿನ ಮಹಾನ್ ನಾಯಕರೇ ಬೆಳ್ಳಿ ತಟ್ಟೆಯಲ್ಲಿಟ್ಟು ಬಿಜೆಪಿಗೆ ಅರ್ಪಿಸಿ ಶರಣಾಗಿದ್ದಾರೆ! ಹಾಗಂತ ಈ ಫಲಿತಾಂಶ ಬಿಜೆಪಿಗರು ಬೊಬ್ಬಿರಿಯುವಂತೆ ಮುಂಬರುವ ಅಸೆಂಬ್ಲಿ ಚುನಾವಣೆಯ ದಿಕ್ಸೂಚಿ ಎನ್ನುವುದು ಅಸಮಂಜಸ. ಪದವೀಧರ ಕ್ಷೇತ್ರದ ಮತದಾರರು ಜನಸಾಮಾನ್ಯರ ನಾಡಿಮಿಡಿತದ ಅರಿವಿಲ್ಲದ ‘ಶ್ರೇಷ್ಠ’ರು. ಹಾಗಾಗಿ ಸದ್ರಿ ಎಮ್ಮೆಲ್ಸಿ ಚುನಾವಣಾ ಫಲಿತಾಂಶ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸುವ ಬಹುಜನರ ಮನದಿಂಗಿತ ಪ್ರತಿಬಿಂಬಿಸಲು ಸಾಧ್ಯವಿಲ್ಲ. ಆದರೆ, ಒಂದಂತೂ ಖಾತ್ರಿ, ಈ ಚುನಾವಣೆ ಕಾಂಗ್ರೆಸ್ಸಿನ ಪೀಸ್ ಟೈಮ್ ಕ್ಯಾಪ್ಟನ್‌ಗಳ ವಾರ್ ಎದುರಿಸಲಾದ ದಿವಾಳಿಕೋರತನ ಜಗಜ್ಜಾಹೀರುಗೊಳಿಸಿದೆ. ಕಾಂಗ್ರೆಸ್ಸಿನ ಸಂಘಟನಾತ್ಮಕ ನ್ಯೂನತೆಗೆ ಕನ್ನಡಿ ಹಿಡಿದಿದೆ. ಸೈದ್ಧಾಂತಿಕ ಬದ್ಧತೆ ಬಯಲುಗೊಳಿಸಿದೆ! ಕಾಂಗ್ರೆಸ್ ಚುಕ್ಕಾಣಿ ಹಿಡಿದಿರುವ ಡಿಕೆಶಿ-ಬಿಕೆಎಚ್‌ಗಿದು ಎಚ್ಚರಿಕೆಯ ಘಂಟೆಯಾಗಿದೆ.

-ವಲಲ

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚೈನ್ ಸಾ ದಾಳಿ ಪ್ರಕರಣ: ಆರೋಪಿ ಹೇಮಂತ್‌ಗೆ ಪೊಲೀಸರ ಗುಂಡೇಟು; ಸಂತ್ರಸ್ತ ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕ

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ‌ ರಾಪ್ತಾಡು ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿ ಮೇಲೆ‌...

ದೆಹಲಿ | ʼವಿಂಟರ್ ಆಕ್ಷನ್ ಪ್ಲಾನ್ʼ ಮೊದಲ ದಿನವೇ 68.4 ಲಕ್ಷ ರೂ. ದಂಡ ವಸೂಲು!

ದೆಹಲಿಯಲ್ಲಿ ವಾಯು ಮಾಲಿನ್ಯ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಜಾರಿಗೆ ತಂದಿರುವ 'ವಿಂಟರ್ ಆಕ್ಷನ್...

ನ.3ರಂದು ಆಂಧ್ರ ಕರಾವಳಿಗೆ ಅಪ್ಪಳಿಸಲಿರುವ ‘ಮುರಸು’ ಚಂಡಮಾರುತ: ಏನಿದರ ಅರ್ಥ, ನಾಮಕರಣ ಹೇಗೆ?

ನೈರುತ್ಯ ಮತ್ತು ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತವು 'ಮುರಸು'...

SIR ನಂತರವೂ ಬೆಂಗಳೂರು ಮತದಾರರ ಪಟ್ಟಿಯಲ್ಲಿ ಭಾರೀ ಯಡವಟ್ಟು: ‘XXX’, ‘????’, ಇಮೇಲ್ ಐಡಿಗಳೇ ಮತದಾರರ ಹೆಸರು!

'ಎಸ್‌ಐಆರ್' (SIR) ಪ್ರಕ್ರಿಯೆಯ ನಂತರವೂ ರಾಜಧಾನಿ ಬೆಂಗಳೂರಿನ ಅಂತಿಮ ಮತದಾರರ ಪಟ್ಟಿಯಲ್ಲಿ...