ಡ್ಯಾನ್ಸ್ ಬಾರ್, ಸ್ಪಾ, ಮಸಾಜ್ ಪಾರ್ಲರ್ ಮತ್ತು ಇತರ ಮನರಂಜನಾ ಹಾಗೂ ಆತಿಥ್ಯ ವಲಯಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇದೊಂದು ಅತ್ಯಂತ ‘ಗಂಭೀರ ಸಮಸ್ಯೆ’ ಎಂದು ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಈ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
‘ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲಯನ್ಸ್’ ಎಂಬ ಎನ್‌ಜಿಒ ಸಂಸ್ಥೆಯು ನ್ಯಾಯವಾದಿ ಸೋನಾಲಿ ಜೈನ್ ಅವರ ಮೂಲಕ ಈ ಅರ್ಜಿಯನ್ನು ಸಲ್ಲಿಸಿತ್ತು. ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಹೆಚ್.ಎಸ್. ಫೂಲ್ಕಾ ಅವರು ವಾದ ಮಂಡಿಸಿದರು. ಬಾಲ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ಸೆಕ್ಷನ್ 4ರ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕಿರುವ ಅಧಿಕಾರವನ್ನು ಬಳಸಿ, 18 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಆರ್ಕೆಸ್ಟ್ರಾ, ಡ್ಯಾನ್ಸ್ ಬಾರ್, ನೌಟಂಕಿ(ಉತ್ತರ ಭಾರತದ ಮುಖ್ಯವಾಗಿ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಹರಿಯಾಣ ಕಡೆ ಆಡುವ ಬೀದಿ ನಾಟಕ) ಮಸಾಜ್ ಪಾರ್ಲರ್ ಮತ್ತು ಸಲೂನ್‌ಗಳಲ್ಲಿ ದುಡಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಅರ್ಜಿಯಲ್ಲಿ ಪ್ರಮುಖವಾಗಿ ಒತ್ತಾಯಿಸಲಾಗಿದೆ.
ಇದನ್ನು ಓದಿದ್ದೀರಾ? IPL 2026 ಕಪ್ ಯಾರಿಗೆ; ಹೇಗಿದೆ ಪ್ಲೇ-ಆಫ್ ತಲುಪಿದ ನಾಲ್ಕು ದಿಗ್ಗಜ ತಂಡಗಳ ಬಲಾಬಲ?
ಕಾನೂನಿನ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಪ್ರಸ್ತುತ ಕಾಯ್ದೆಯ ಶೆಡ್ಯೂಲ್‌ನಲ್ಲಿ ‘ಪಾರ್ಟ್ ಬಿ’ (Part B) ನಲ್ಲಿರುವ 52ನೇ ನಮೂದನ್ನು (ಮಸಾಜ್ ಪಾರ್ಲರ್, ಜಿಮ್, ಮನರಂಜನಾ ಕೇಂದ್ರಗಳು ಇತ್ಯಾದಿ) ‘ಪಾರ್ಟ್ ಎ’ (Part A) ಗೆ ವರ್ಗಾಯಿಸಬೇಕು ಎಂದು ಅರ್ಜಿದಾರರು ವಿವರಿಸಿದ್ದಾರೆ. ಹೀಗೆ ಮಾಡುವುದರಿಂದ ಈ ವಲಯಗಳಲ್ಲಿ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಾಗುತ್ತದೆ. ಮನರಂಜನೆಯ ಹೆಸರಿನಲ್ಲಿ ಮಕ್ಕಳನ್ನು ನೇಮಿಸಿ, ಅವರನ್ನು ಅನೈತಿಕ ಚಟುವಟಿಕೆಗಳಿಗೆ, ಮಾನವ ಸಾಗಾಣಿಕೆಗೆ ಮತ್ತು ಲೈಂಗಿಕ ಶೋಷಣೆಗೆ ಗುರಿ ಮಾಡಲು ಅವಕಾಶ ನೀಡುವ ಹಾಲಿ ಕಾನೂನಿನ ಲೋಪದೋಷಗಳನ್ನು ತುರ್ತಾಗಿ ಸರಿಪಡಿಸಬೇಕು ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.
ಇದೇ ವೇಳೆ, ಈ ವಲಯಗಳಲ್ಲಿ ಶೋಷಣೆಗೆ ಒಳಗಾದ ಮಕ್ಕಳನ್ನು ರಕ್ಷಿಸಿ, ಅವರಿಗೆ ಸೂಕ್ತ ಪುನರ್ವಸತಿ ಕಲ್ಪಿಸಲು ‘ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ (NCPCR) ವತಿಯಿಂದ ಒಂದು ನಿರ್ದಿಷ್ಟ ಮತ್ತು ಕಟ್ಟುನಿಟ್ಟಿನ ಕಾರ್ಯಾಚರಣೆ ವಿಧಾನವನ್ನು (Standard Operating Procedure – SOP) ರೂಪಿಸುವಂತೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ಮಕ್ಕಳ ರಕ್ಷಣೆಗೆ ಹಾಗೂ ಪುನರ್ವಸತಿಗೆ ಪ್ರಸ್ತುತ ಇರುವ ಕಾಯ್ದೆಗಳಿಗಿಂತಲೂ ಇನ್ನಷ್ಟು ಕಠಿಣವಾದ ಮತ್ತು ಪರಿಣಾಮಕಾರಿಯಾದ ಕ್ರಮಗಳ ತುರ್ತು ಅವಶ್ಯಕತೆ ಇದೆ ಎಂಬುದನ್ನು ಅರ್ಜಿಯಲ್ಲಿ ಒತ್ತಿ ಹೇಳಲಾಗಿದೆ.




