ಪ್ರೀತಿಸಿದ ಯುವಕನನ್ನು ವಿವಾಹವಾದ ಮಗಳನ್ನು ಮನೆಗೆ ಮರಳಿ ಕರೆತರುವ ಆಕೆಯ ಪೋಷಕರು ಪ್ರಯತ್ನಿಸಿದ್ದು, ಆಕೆಯ ಕಾಲು ಹಿಡಿದು ಭಾವನಾತ್ಮಕವಾಗಿ ಕೇಳಿಕೊಂಡ ಘಟನೆ ತಮಿಳುನಾಡಿನ ತಿರುಪ್ಪತ್ತೂರು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಿರುಪ್ಪತ್ತೂರು ಜಿಲ್ಲೆಯ ಜೋಲಾರ್ಪೇಟೆ ಸಮೀಪದ ಕಟ್ಟೇರಿ ಲಾರಿ ಶೆಡ್ ಪ್ರದೇಶದ ನಿವಾಸಿಗಳಾದ ಕಾಳಿ ಮತ್ತು ಪ್ರವೀಣಾ ದಂಪತಿಯ ಪುತ್ರಿ ದಿವ್ಯದರ್ಶಿನಿ (19), ಕೃಷ್ಣಗಿರಿಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಜೋಲಾರ್ಪೇಟೆ ಸಮೀಪದ ಅಮ್ಮಯ್ಯಪ್ಪನ್ ನಗರದ ನಿವಾಸಿ, ಧ್ವನಿವರ್ಧಕ ಕೇಂದ್ರದ ಮಾಲೀಕ ಪೆರುಮಾಳ್ (23) ಅವರನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ವರದಿಯಾಗಿದೆ.
ದಿವ್ಯದರ್ಶಿನಿ ಮತ್ತು ಪೆರುಮಾಳ್ ಅವರ ಪ್ರೀತಿಗೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಪೋಷಕರ ವಿರೋಧದಿಂದಾಗಿ ದಿವ್ಯದರ್ಶಿನಿ ಅವರು ತಮ್ಮ ಮನೆ ತೊರೆದು ಜುಲೈ 4ರಂದು ಏಳಗಿರಿ ಬೆಟ್ಟದಲ್ಲಿರುವ ಮುರುಗನ್ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಮದುವೆಯ ಬಳಿಕ ರಕ್ಷಣೆ ಕೋರಿ ತಿರುಪ್ಪತ್ತೂರು ಮಹಿಳಾ ಪೊಲೀಸ್ ಠಾಣೆಗೆ ತೆರಳಿದ್ದಾರೆ.
ರಕ್ಷಣೆ ಕೋರಿ ಠಾಣೆಗೆ ಬಂದ ದಂಪತಿಗಳ ಆತಂಕ ತಿಳಿಸಿದ ಪೊಲೀಸರು, ಎರಡೂ ಕುಟುಂಬಗಳ ನಡುವೆ ರಾಜಿ ಮಾತುಕತೆಗಾಗಿ ವಿದ್ಯದರ್ಶಿನಿ ಅವರ ಪೋಷಕರನ್ನು ಠಾಣೆಗೆ ಕರೆಸಿದ್ದಾರೆ.
ಈ ವೇಳೆ, ವಿದ್ಯದರ್ಶಿನಿ ಅವರೊಂದಿಗೆ ಭಾವುಕವಾಗಿ ಮಾತನಾಡಿದ ಪೋಷಕರು, “ನಿನ್ನನ್ನು ಓದಿಸಿ, ಬೆಳೆಸಿ, ಪ್ರೀತಿಯಿಂದ ಸಾಕಿದ ನಮಗೆ ಹೀಗೆ ದ್ರೋಹ ಮಾಡಬೇಡ. ನಮ್ಮೊಂದಿಗೆ ಮನೆಗೆ ಬಾ” ಎಂದು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ, ದಿವ್ಯದರ್ಶಿನಿ ಪೋಷಕರೊಂದಿಗೆ ತೆರಳಲು ನಿರಾಕರಿಸಿದ್ದಾರೆ. ಈ ವೇಳೆ, ಪೋಷಕರು ಆಕೆಯ ಕಾಲು ಹಿಡಿದು, ತಮ್ಮೊಂದಿಗೆ ಮನೆಗೆ ಬರುವಂತೆ ಬೇಡಿಕೊಂಡಿದ್ದಾರೆ.
ದಿವ್ಯದರ್ಶಿನಿ ಅವರು ತನ್ನ ಪತಿ ಪೆರುಮಾಳ್ ಅವರೊಂದಿಗೆ ತೆರಳಲು ಇಚ್ಛೆ ವ್ಯಕ್ತಪಡಿಸಿದ್ದರಿಂದ, ಪೊಲೀಸರು ಆಕೆಯ ನಿರ್ಧಾರವನ್ನು ಗೌರವಿಸಿ ದಂಪತಿಯನ್ನು ಪತಿಯ ಮನೆಗೆ ಕಳುಹಿಸಿದ್ದಾರೆ.



