ಬ್ರಿಟಿಷರಿಂದ ಅತಿ ಹೆಚ್ಚು ಶಿಕ್ಷೆಗೆ ಒಳಗಾದ ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್ ಎಂದು ಶಾಲಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಶ್ನೆ ರೂಪಿಸಿದ್ದಕ್ಕಾಗಿ ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಿರುವ ಕೇರಳ ಸರ್ಕಾರದ ಕ್ರಮವನ್ನು ಕೇರಳ ಹೈಕೋರ್ಟ್ ಗುರುವಾರ ಪ್ರಶ್ನಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದ ನಿರ್ದಿಷ್ಟ ಪ್ರತಿಕ್ರಿಯೆ ಕೋರಿರುವ ಪೀಠವು, ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿದೆ.
ಅಮಾನತು ಆದೇಶವನ್ನು ಪ್ರಶ್ನಿಸಿ ಶಿಕ್ಷಕ ಗುರುಪ್ರಸಾದ್ ರೈ ಕೆ. ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಜು ಅಬ್ರಹಾಂ ಅವರಿದ್ದ ಏಕಸದಸ್ಯ ಪೀಠವು, “ಇಂತಹ ವಿಷಯಕ್ಕೆ ಶಿಕ್ಷಕನನ್ನು ಅಮಾನತುಗೊಳಿಸುವ ಅಗತ್ಯವಿತ್ತೇ? ಇಲಾಖಾ ವಿಚಾರಣೆ ನಡೆಸಿ, ಆದರೆ ಇಂತಹ ಪ್ರಕರಣಗಳಲ್ಲಿ ಅಮಾನತು ಮಾಡುವುದೇ ಒಂದು ಶಿಕ್ಷೆಯೇ?” ಎಂದು ಮೌಖಿಕವಾಗಿ ಪ್ರಶ್ನಿಸಿತು. ಅಲ್ಲದೆ, ಅಮಾನತಿಗೆ ನಿರ್ದಿಷ್ಟ ಕಾರಣಗಳನ್ನು ತಿಳಿಸುವಂತೆ ಸರ್ಕಾರಿ ವಕೀಲರಿಗೆ ನಿರ್ದೇಶಿಸಿತು.
ಕಾಸರಗೋಡಿನ ಶಾಲೆಯೊಂದರಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ “ಬ್ರಿಟಿಷರಿಂದ ಅತಿ ಹೆಚ್ಚು ಶಿಕ್ಷೆಗೆ ಒಳಗಾದ ಸ್ವಾತಂತ್ರ್ಯ ಹೋರಾಟಗಾರ ಯಾರು?” ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಸಾವರ್ಕರ್ ಸರಿಯಾದ ಉತ್ತರ ಎಂದು ನೀಡಲಾಗಿತ್ತು. ಇದನ್ನು ಇತಿಹಾಸದ ವಿರೂಪಗೊಳಿಸುವಿಕೆ ಎಂದು ಬಣ್ಣಿಸಿದ್ದ ಕೇರಳದ ಶಿಕ್ಷಣ ಸಚಿವರು, ಪ್ರಶ್ನೆ ಸಿದ್ಧಪಡಿಸಿದ ಶಿಕ್ಷಕ ಗುರುಪ್ರಸಾದ್ ಅವರನ್ನು ಆಗಸ್ಟ್ 9ರಂದು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.
ಅಮಾನತು ಆದೇಶ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿರುವ ಶಿಕ್ಷಕ, ಸಚಿವರ ಮೌಖಿಕ ಸೂಚನೆಯಂತೆ ನಿಯಮಗಳನ್ನು ಮೀರಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ‘ಪ್ರಶ್ನೆ ಮತ್ತು ಉತ್ತರದಲ್ಲಿ ಯಾವುದೇ ತಪ್ಪು ಮಾಹಿತಿ ಇಲ್ಲ. ಸಾವರ್ಕರ್ 1910 ರಿಂದ 1937 ರವರೆಗೆ ಸುದೀರ್ಘ ಜೈಲು ಶಿಕ್ಷೆ ಅನುಭವಿಸಿದ್ದರು. 1970 ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಸರ್ಕಾರವೂ ಸಾವರ್ಕರ್ ಗೌರವಾತ್ಮಕ ಅಂಚೆ ಚೀಟಿ ಬಿಡುಗಡೆ ಮಾಡಿತ್ತು’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಸಮಾಜದ ಒಂದು ವರ್ಗದ ಭಾವನೆಗಳಿಗೆ ಸ್ಪಂದಿಸಿ ರಾಜಕೀಯ ದುರುದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಾದಿಸಿರುವ ಶಿಕ್ಷಕ, ಅಮಾನತು ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದಾರೆ. ಅರ್ಜಿದಾರರ ಪರವಾಗಿ ‘ಲಾಯರ್ & ಲಾಯರ್’ ಸಂಸ್ಥೆಯ ವಕೀಲರಾದ ಕೆ.ಎಸ್. ಭರತನ್, ಆದಿತ್ಯನ್ ಎಸ್. ಮನ್ನಾಲಿ ಸೇರಿದಂತೆ ಇತರ ವಕೀಲರು ವಾದ ಮಂಡಿಸಿದ್ದಾರೆ.




