ಮಂಗಳೂರು: ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೂತನ ವಿಶೇಷ ತನಿಖಾ ತಂಡದಿಂದ ತನಿಖೆ ಚುರುಕುಗೊಂಡಿದೆ. ತನಿಖೆಯ ಭಾಗವಾಗಿ ಇಂದು ಎಸ್‌ಐಟಿ ಮುಂದೆ ವಿಚಾರಣೆಗಾಗಿ ಫೊರೆನ್ಸಿಕ್ ತಜ್ಞ ಡಾ. ಮಹಾಬಲ ಶೆಟ್ಟಿ ಹಾಜರಾದರು.
ದಿನದಿಂದ ದಿನಕ್ಕೆ ತನಿಖೆ ಚುರುಕುಗೊಳಿಸಿರುವ ನೂತನ ವಿಶೇಷ ತನಿಖಾ ತಂಡ, ಸೌಜನ್ಯ ಕೊಲೆ ಪ್ರಕರಣದ ತನಿಖೆಯಲ್ಲಿ ಒಳಗೊಂಡಿರುವ ಅಧಿಕಾರಿಗಳನ್ನು ಹಾಗೂ ವೈದ್ಯರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕುತ್ತಿದೆ.
ಫೊರೆನ್ಸಿಕ್ ತಜ್ಞರಾಗಿರುವ ಡಾ. ಮಹಾಬಲ ಶೆಟ್ಟಿ ಅವರು ಸೌಜನ್ಯ ಪ್ರಕರಣದಲ್ಲಿ ಸಾಕಷ್ಟು ಸುದ್ದಿಯಾಗಿದ್ದರು. ಸೌಜನ್ಯ ಪ್ರಕರಣದಲ್ಲಿ ಎಫ್‌ಎಸ್‌ಎಲ್ ವರದಿ ನೀಡಿರುವ ಇವರು ಧರ್ಮಸ್ಥಳ ಪರಿಸರದಲ್ಲಿ ಸಿಕ್ಕಿದ್ದ ಗುರುತಿಸಲಾಗದ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಿರುತ್ತಾರೆ.
ಪ್ರಸ್ತುತ ಪ್ರಕರಣದ ತನಿಖೆಯ ಭಾಗವಾಗಿ ಮಹಾಬಲ ಶೆಟ್ಟಿ ಅವರಿಗೂ ಎಸ್ಐಟಿ ಮುಂದೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ಈ ನಿಟ್ಟಿನಲ್ಲಿ ಇಂದು ಮಂಗಳೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರುವ ಎಸ್ಐಟಿ ತನಿಖಾ ಕಚೇರಿಗೆ ಆಗಮಿಸಿ ಎಸ್ಐಟಿ ತನಿಖೆಯ ವಿಚಾರಣೆಗೆ ಹಾಜರಾಗಿದ್ದಾರೆ.




