ಈ ದಿನ ಸಂಪಾದಕೀಯ | ಸಾರ್ವಜನಿಕ ಸಭ್ಯತೆ ಹಿನ್ನೆಲೆಗೆ; ಚಾಕು-ಚೂರಿ ಸಂಸ್ಕೃತಿ ಮುನ್ನೆಲೆಗೆ!

Date:

ಸಮಾಜಕ್ಕೆ ಇಂದು ಬೇಕಿರುವುದು ಚಾಕು-ಚೂರಿ ಹಿಡಿಯುವ ಕೈಗಳಲ್ಲ, ಕೈಕುಲುಕಿ ಸಮಸ್ಯೆ ಬಗೆಹರಿಸುವ ಮನಸ್ಸುಗಳು. ಈ ಬದಲಾವಣೆ ಪ್ರತಿಯೊಂದು ಮನೆ, ಶಾಲೆ, ರಾಜಕೀಯ ವೇದಿಕೆ ಮತ್ತು ಸಾರ್ವಜನಿಕ ಸ್ಥಳದಿಂದ ಆರಂಭವಾಗಬೇಕು. ಇಲ್ಲದಿದ್ದರೆ ಸಭ್ಯತೆ ಹಿನ್ನೆಲೆಗೆ ಸರಿಯುತ್ತಲೇ ಇರುತ್ತದೆ; ಚಾಕು-ಚೂರಿ ಸಂಸ್ಕೃತಿ ಸಾರ್ವಜನಿಕ ಬದುಕಿನ ಮುನ್ನೆಲೆಯನ್ನು ಆಕ್ರಮಿಸಿಕೊಳ್ಳುತ್ತದೆ.

ಸಾರ್ವಜನಿಕ ಸಭೆಯೊಂದರಲ್ಲಿ ಬಿಜೆಪಿ ಮುಖಂಡ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಯವರು, ‘ಕಾಂಗ್ರೆಸ್ ಅನ್ನು ತುಂಡು ತುಂಡು ಮಾಡಿ ಸಮುದ್ರಕ್ಕೆ ಎಸೆಯುತ್ತೇವೆ’ ಎಂದು ಹೇಳಿದರು.

- Advertisement -

ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡ ಯುವ ಕಾಂಗ್ರೆಸ್ ಕಾರ್ಯಕರ್ತರು ಅವರ ಮನೆ ವಿಳಾಸಕ್ಕೆ ಚಾಕು-ಚೂರಿ ಪಾರ್ಸೆಲ್ ಕಳುಹಿಸಿ, ನಮ್ಮದು ಚಾಕು-ಚೂರಿ ಸಂಸ್ಕೃತಿ ಎನ್ನುವುದನ್ನು ಸಾಬೀತುಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎಸ್‌ಐಆರ್‌ | ಪ್ರಜಾಪ್ರಭುತ್ವದ ಕಾವಲುಗಾರನಿಗೆ ʼಕನ್ನಡಕʼ ಬೇಕಿದೆ…

ತನ್ನ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದ ಚುನಾವಣೆ ಅಯೋಗ ಇಂದು ತನ್ನ ನಿಷ್ಪಕ್ಷಪಾತತೆಯನ್ನೇ ಜನ ಪರೀಕ್ಷೆಗೆ ಒಡ್ಡಿಕೊಂಡಿದೆ. ಆಯೋಗದ ನಿರ್ಣಯಗಳನ್ನು ಅನುಮಾನಿಸಿ ಬೀದಿ ಹೋರಾಟಗಳು, ಹರತಾಳಗಳು ಭುಗಿಲೆದ್ದಿವೆ. ಇಷ್ಟಕ್ಕೆ, ನಿಲ್ಲದೆ ಮುಖ್ಯ...

ಟ್ರಂಪ್‌ಗೆ ಮುಖಭಂಗ, ಯುರೋಪಿನಲ್ಲಿ ಆತಂಕ; ಜಗತ್ತಿನಲ್ಲಿ ಬದಲಾಗುತ್ತಿರುವ ಬಲಪಂಥೀಯ...

2026ರ ಅಮೆರಿಕ ಮತ್ತು ಬ್ರೆಜಿಲ್‌ನ ಚುನಾವಣಾ ಫಲಿತಾಂಶಗಳು ಜಾಗತಿಕ ಮಟ್ಟದಲ್ಲಿ ರಾಜಕೀಯ ಒಲವಿನ ಬದಲಾವಣೆಯನ್ನು ದೃಢಪಡಿಸಿವೆ. ಡೆಮಾಕ್ರಟರು ಸಾಧಿಸಿದ 255 ಹೌಸ್ ಮತ್ತು 54 ಸೆನೆಟ್ ಸ್ಥಾನಗಳ ಜಯ, ಹಾಗೂ ಬ್ರೆಜಿಲ್‌ನಲ್ಲಿನ ಅಧಿಕಾರ...

ಹೆಣ್ಣು-ಹಣ-ಚಾರಣ ಹಗರಣ: ಜಾಗತಿಕ ಚಿಪ್ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ...

ಚಿಪ್ ಸಾಮ್ರಾಜ್ಯದ ಸಿಇಒ ಸುತ್ತ ಹೆಣೆದುಕೊಂಡಿರುವ ವಿವಾಹೇತರ ಸಂಬಂಧ, ಚೀನಿ ಚಾರಣ ಜಾಲ ಮತ್ತು ಭದ್ರತಾ ಆರೋಪಗಳು ಜಾಗತಿಕ ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೋಲಗೊಳಿಸಿವೆ. ತಂತ್ರಜ್ಞಾನ ದೈತ್ಯರ ಒಳಸುಳಿಗಳೇನು? ಭಾರತದ ಡಿಜಿಟಲ್ ಹಾಗೂ ಸೆಮಿಕಂಡಕ್ಟರ್...

ಈ ಪ್ರಕರಣದ ಕೆಲವೇ ದಿನಗಳ ಹಿಂದೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡುತ್ತ, ‘ಈ ನನ್ ಮಕ್ಕಳು ಕಾಂಗ್ರೆಸ್ನೋರು ಇದ್ದಾರಲ್ಲ’ ಎಂದರು.

ಆ ತಕ್ಷಣವೇ ಕಾಂಗ್ರೆಸ್ ಕಾರ್ಯಕರ್ತರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಮನೆ ಗೋಡೆಗೆ ‘ವಿಜಯೇಂದ್ರನ ಮಕ್ಕಳು ಕಳ್ ನನ್ ಮಕ್ಕಳು’ ಎಂದು ಪೋಸ್ಟರ್ ಅಂಟಿಸಿ, ಕರುಳಿನ ಕೊಳಕನ್ನು ಕಾರಿಕೊಂಡರು.

ಇದಕ್ಕೂ ಸ್ವಲ್ಪ ಹಿಂದಕ್ಕೆ ಶುರುವಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಡುವಿನ ರಾಜಕೀಯ ವಾಕ್ಸಮರ ಇಂದಿಗೂ ನಿಂತಿಲ್ಲ. ಅಷ್ಟೇ ಅಲ್ಲ, ಇಬ್ಬರು ನಾಯಕರ ನಡುವಿನ ವಾಗ್ವಾದವು ವೈಯಕ್ತಿಕ ಟೀಕೆಗಿಳಿದು, ಕೊಳಕು ಭಾಷೆ, ಆಧಾರರಹಿತ ಆರೋಪ ಮತ್ತು ರಾಜಕೀಯ ದ್ವೇಷದ ಪ್ರದರ್ಶನವಾಗಿ ಬದಲಾಗಿದೆ.

ಇದನ್ನು ಓದಿದ್ದೀರಾ?: ಬೆಳಕಿನ ಹಬ್ಬ ತರದಿರಲಿ ಹಲವರ ಬದುಕಿಗೆ ಕತ್ತಲೆ

ಜನಪ್ರತಿನಿಧಿಯಾದಾಗ, ಜನ ಗೌರವಿಸುವಾಗ, ವೇದಿಕೆಯಲ್ಲಿ ನಿಂತು ಮಾತನಾಡುವಾಗ ಸಾರ್ವಜನಿಕ ಸಭ್ಯತೆ, ಸಂಯಮ, ಶಿಷ್ಟಾಚಾರವನ್ನು ಪಾಲಿಸಬೇಕಾಗುತ್ತದೆ. ಅದರಲ್ಲೂ ಅವರು ಜನರೊಂದಿಗೆ ಬೆರೆತು ಕೆಲಸ ಮಾಡುವಾಗ, ಅವರ ನಡೆ ಮತ್ತು ನುಡಿಯನ್ನು ಸಾವಿರಾರು ಕಣ್ಣು-ಕಿವಿಗಳು ಗಮನಿಸುತ್ತವೆ ಎಂಬ ಎಚ್ಚರ ಇರಬೇಕಾಗುತ್ತದೆ. ಸೋಷಿಯಲ್ ಮೀಡಿಯಾದ ಈ ಹೊಸಗಾಲದಲ್ಲಿ, ಪ್ರತಿಯೊಬ್ಬರ ಕೈಯಲ್ಲೂ ಆಂಡ್ರಾಯ್ಡ್ ಫೋನ್‌ಗಳಿರುವಾಗ, ಪ್ರತಿ ಕ್ಷಣವೂ ರೆಕಾರ್ಡ್ ಆಗುವಾಗ- ಮೈಯೆಲ್ಲ ಕಣ್ಣಾಗಿರಬೇಕಾಗುತ್ತದೆ. ಜನಪ್ರತಿನಿಧಿಗಳಿಗೆ ಈ ಎಚ್ಚರ ಇಲ್ಲದೇ ಹೋದರೆ, ಅವರಾಡಿದ ಮಾತೇ ಅವರನ್ನು ನೇಣುಗಂಬಕ್ಕೇರಿಸುತ್ತದೆ. ಅದನ್ನು ನಾವು ಈಗ ಕರ್ನಾಟಕದಲ್ಲಿ ಕಾಣುತ್ತಿದ್ದೇವೆ.

ಇತ್ತೀಚಿನ ದಿನಗಳಲ್ಲಿ, ಸಾರ್ವಜನಿಕ ಬದುಕಿನಲ್ಲಿ ಕಾಣಿಸಿಕೊಳ್ಳುತ್ತಿರುವ ಕೆಲವು ಬೆಳವಣಿಗೆಗಳು ಆತಂಕ ಹುಟ್ಟಿಸುವಂತಿವೆ. ತಾಳ್ಮೆಯ ತಾವಿನಲ್ಲಿ ತಲ್ಲಣ, ಸಂವಾದದ ಸ್ಥಳದಲ್ಲಿ ಸಂಘರ್ಷ, ಪ್ರಜಾಸತ್ತಾತ್ಮಕ ಪ್ರತಿರೋಧದ ಪರಿಧಿಯಲ್ಲಿ ಬೆದರಿಕೆ ಮತ್ತು ಹಿಂಸಾ ಪ್ರವೃತ್ತಿ ಮುನ್ನೆಲೆಗೆ ಬರುತ್ತಿದೆ. ಮಾತಿನ ಚಕಮಕಿ ಚಾಕು ಇರಿತದಲ್ಲಿ ಅಂತ್ಯಗೊಳ್ಳುವುದು, ವೈಯಕ್ತಿಕ ವೈಷಮ್ಯ ಕೊಲೆಯಲ್ಲಿ ಕೊನೆಯಾಗುವುದು, ಸಣ್ಣ ವಿವಾದ ಗುಂಪುಗಳ ನಡುವಿನ ಸಂಘರ್ಷಕ್ಕೆ ತಿರುಗುವುದು- ಇವೆಲ್ಲವೂ ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಲ್ಲ, ಇವು ನಮ್ಮ ಸಾಮಾಜಿಕ ಬದುಕಿನಲ್ಲಿರುವ ಆಳವಾದ ಅಸ್ವಸ್ಥತೆಯ ಲಕ್ಷಣಗಳು.

ಹಾಗೆಯೇ ಯಾರನ್ನಾದರೂ ಅವಮಾನಿಸುವುದು, ಬೆದರಿಸುವುದು, ವ್ಯಕ್ತಿತ್ವಹರಣ ಮಾಡುವುದು, ಧಾರ್ಮಿಕ ಮತ್ತು ಜಾತಿ ದ್ವೇಷವನ್ನು ಹರಡುವುದು ಕೆಲವರ ಪಾಲಿಗೆ ಸಾಮಾನ್ಯವಾಗುತ್ತಿದೆ. ದುರದೃಷ್ಟಕರ ಸಂಗತಿ ಎಂದರೆ, ರಾಜಕಾರಣದಲ್ಲಿ ಇದು ಮಿತಿಯಿಂದ ಅತಿಗೆ ಜಿಗಿದಿದೆ. ಅದರ ಪರಿಣಾಮ ಸಮಾಜದ ಎಲ್ಲ ಸ್ತರಗಳ ಮೇಲೂ ಬೀರುತ್ತಿದೆ.

ಮಾತು ಮತ್ತು ನಡವಳಿಕೆಯ ಮೂಲಕ ಸಮಾಜಕ್ಕೆ ಮಾದರಿಯಾಗಬೇಕಾದ ರಾಜಕೀಯ ನಾಯಕರಿಗೆ ಈಗ, ಸಾರ್ವಜನಿಕ ಬದುಕಿನಲ್ಲಿ ಸಂಯಮಕ್ಕಿಂತ ಆಕ್ರಮಣಶೀಲ ರಾಜಕೀಯ ಅರ್ಹತೆಯಂತೆ ಕಾಣತೊಡಗಿದೆ. ಅಧಿಕಾರದಲ್ಲಿರುವವರು ವಿರೋಧಿಗಳನ್ನು ಶತ್ರುಗಳಂತೆ ಕಾಣುವುದು, ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರನ್ನು ಅವಮಾನಿಸುವುದು, ಬೆದರಿಕೆಯ ಭಾಷೆ ಬಳಸುವುದು, ರಾಜಕೀಯ ಎದುರಾಳಿಗಳ ವಿರುದ್ಧ ದ್ವೇಷ ಹರಡುವುದು- ಇವೆಲ್ಲವೂ ಕೆಳಮಟ್ಟದ ಸಾಮಾಜಿಕ ನಡವಳಿಕೆಗೆ ಪರೋಕ್ಷ ಪ್ರೋತ್ಸಾಹ ನೀಡುತ್ತಿವೆ.

ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಸಹಜ. ಪ್ರತಿಭಟನೆ, ಪ್ರತಿರೋಧ ಮತ್ತು ಪ್ರಶ್ನಿಸುವುದು ಕೂಡ ಸಾಮಾನ್ಯ. ಆದರೆ ಭಿನ್ನಾಭಿಪ್ರಾಯವನ್ನು ಹಿಂಸೆಯ ಮೂಲಕ ಹತ್ತಿಕ್ಕುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ಪ್ರಜಾಪ್ರಭುತ್ವದ ಆಶಯಗಳಿಗೇ ವಿರುದ್ಧವಾದುದು. ಎದುರಾಳಿಯನ್ನು ಸೋಲಿಸಲು ಸಂವಾದ ಬೇಕೇ ಹೊರತು ಚಾಕು ಅಲ್ಲ. ಅನ್ಯಾಯದ ವಿರುದ್ಧ ಹೋರಾಡಲು ಸಂಘಟಿತ ಧ್ವನಿ ಬೇಕೇ ಹೊರತು ಮಾರಕಾಸ್ತ್ರವಲ್ಲ.

ನಾಗರಿಕತೆ ಎಂದರೆ ಇನ್ನೊಬ್ಬರನ್ನು ಹೆದರಿಸುವುದಲ್ಲ, ಇನ್ನೊಬ್ಬರ ಸ್ವಾತಂತ್ರ್ಯವನ್ನು ಗೌರವಿಸುವುದು. ಬಲಿಷ್ಠ ಸಮಾಜವೆಂದರೆ ಆಯುಧಗಳನ್ನು ಹೆಚ್ಚು ಹೊಂದಿರುವುದಲ್ಲ, ತನ್ನ ನಾಗರಿಕರು ಆಯುಧಗಳ ಮೊರೆ ಹೋಗದಂತೆ ಸಂಘರ್ಷವನ್ನು ಶಮನಗೊಳಿಸುವುದು. ಸಾರ್ವಜನಿಕ ಸಭ್ಯತೆಯನ್ನು ದುರ್ಬಲವೆಂದು ಭಾವಿಸಿ, ಆಕ್ರಮಣಶೀಲತೆಯನ್ನು ಶೌರ್ಯವೆಂದು ಬಿಂಬಿಸುವ ಪ್ರವೃತ್ತಿಗೆ ಕಡಿವಾಣ ಹಾಕದಿದ್ದರೆ, ಮುಂದಿನ ತಲೆಮಾರಿಗೆ ನಾವು ಬಿಟ್ಟುಹೋಗುವುದು ನಾಗರಿಕ ಸಮಾಜವನ್ನಲ್ಲ, ಭಯದ ವಾತಾವರಣವನ್ನು.

ಸಮಾಜಕ್ಕೆ ಇಂದು ಬೇಕಿರುವುದು ಚಾಕು-ಚೂರಿ ಹಿಡಿಯುವ ಕೈಗಳಲ್ಲ, ಕೈಕುಲುಕಿ ಸಮಸ್ಯೆ ಬಗೆಹರಿಸುವ ಮನಸ್ಸುಗಳು. ಈ ಬದಲಾವಣೆ ಪ್ರತಿಯೊಂದು ಮನೆ, ಶಾಲೆ, ರಾಜಕೀಯ ವೇದಿಕೆ ಮತ್ತು ಸಾರ್ವಜನಿಕ ಸ್ಥಳದಿಂದ ಆರಂಭವಾಗಬೇಕು. ಇಲ್ಲದಿದ್ದರೆ ಸಭ್ಯತೆ ಹಿನ್ನೆಲೆಗೆ ಸರಿಯುತ್ತಲೇ ಇರುತ್ತದೆ; ಚಾಕು-ಚೂರಿ ಸಂಸ್ಕೃತಿ ಸಾರ್ವಜನಿಕ ಬದುಕಿನ ಮುನ್ನೆಲೆಯನ್ನು ಆಕ್ರಮಿಸಿಕೊಳ್ಳುತ್ತದೆ.

ಇದನ್ನು ಓದಿದ್ದೀರಾ?: ಪೆಟ್ರೋಲ್‌ಗೆ ಮಿತಿಮೀರಿದ ಎಥೆನಾಲ್‌ ಮಿಶ್ರಣ; ಬಿಜೆಪಿ ನಾಯಕರ ಸುಳ್ಳಿನ ಕಥನ

ಅದರಲ್ಲೂ ರಾಜಕಾರಣವೆಂದರೆ, ಜನ ಮೂಗು ಮುರಿಯುವ, ನಮಗ್ಯಾಕೆ ಎಂದು ದೂರ ಸರಿಯುವ, ಕುಲಗೆಟ್ಟು ಹೋಗಿದೆ ಎಂದು ತುಚ್ಛೀಕರಿಸುವ ಈ ದುರಿತ ಕಾಲದಲ್ಲಿ ರಾಜಕಾರಣಿಗಳು ಬಯಲಿಗೆ ಬಂದು ಬೆತ್ತಲಾದರೆ, ಯುವಸಮೂಹ ರಾಜಕಾರಣದತ್ತ ಒಲವು ತೋರುವುದು ಸಾಧ್ಯವೇ? ಅಥವಾ ಇದು ಅವರನ್ನು ರಾಜಕಾರಣದತ್ತ ತಲೆ ಹಾಕದಂತೆ ಈ ‘ಸಭ್ಯರು’ ಹೆಣೆಯುತ್ತಿರುವ ತಂತ್ರವೇ?

ಸದ್ಯ ರಾಜ್ಯವನ್ನು ಭೀಕರ ಬರ, ಬೆಲೆ ಏರಿಕೆ, ನಿರುದ್ಯೋಗ, ವಲಸೆಯಂತಹ ಜ್ವಲಂತ ಸಮಸ್ಯೆಗಳು ಸುಡುತ್ತಿವೆ. ಬಡವರ ಬದುಕು ಉರಿದುರಿದು ಬೂದಿಯಾಗುತ್ತಿದೆ. ಜನರ ಬದುಕಿನ ಬಗ್ಗೆ ಚಿಂತಿಸಬೇಕಾದ ಮುಖ್ಯಮಂತ್ರಿ ಶಿವಕುಮಾರ್, ಆಳುವ ಸರ್ಕಾರದ ಲೋಪದೋಷಗಳನ್ನು ದಾಖಲೆಗಳ ಸಮೇತ ಎತ್ತಿಟ್ಟು ಪ್ರಶ್ನಿಸಬೇಕಾದ ಕೇಂದ್ರ ಸಚಿವ ‍ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಮತ್ತು ವಿಜಯೇಂದ್ರರು ಸಿಕ್ಕ ಅವಕಾಶವನ್ನು, ಅಸಹ್ಯ ಹೊರಹಾಕಲು ಬಳಸಿಕೊಂಡರೆ, ಅದೇ ರಾಜಕಾರಣವಾದರೆ- ಕರ್ನಾಟಕ ಕೂಡ ಉತ್ತರ ಭಾರತದ ಬಿಹಾರ-ಉತ್ತರ ಪ್ರದೇಶಗಳಂತಾಗುವುದರಲ್ಲಿ ದೂರವಿಲ್ಲ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏರ್‌ ಇಂಡಿಯಾ ವಿಮಾನಕ್ಕೆ ಹುಸಿ ಹೈಜಾಕ್ ಬೆದರಿಕೆ: ಪ್ರಯಾಣಿಕನ ಬಂಧನ

ಕೋಲ್ಕತ್ತಾದಿಂದ ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ (AI 2772) ಹುಸಿ...

5ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ, ಹೋರಾಟದ ಸ್ಥಳದಲ್ಲೇ ವಾಸ್ತವ್ಯ

ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ 5ನೇ ದಿನಕ್ಕೆ...

ಹಿರಿಯೂರು ಉಪಚುನಾವಣೆ- ಕಾಂಗ್ರೆಸ್ ವಿರುದ್ಧ NDA ಅಭ್ಯರ್ಥಿ ಹೂಡಲು ಕುಮಾರಸ್ವಾಮಿ ಒಲವು

ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಕೆರಳಿಸಿರುವ ಚಿತ್ರದುರ್ಗದ ಹಿರಿಯೂರು ವಿಧಾನಸಭಾ ಕ್ಷೇತ್ರದ...

ಜಮ್ಮು-ಕಾಶ್ಮೀರ | ನಾಪತ್ತೆಯಾಗಿದ್ದ ಇಬ್ಬರು ಪೊಲೀಸರು ಶವವಾಗಿ ಪತ್ತೆ!

ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ದಚ್ಚನ್‌ನ ಎತ್ತರದ ಅರಣ್ಯ ಪ್ರದೇಶದಲ್ಲಿ ಬುಧವಾರ ನಾಪತ್ತೆಯಾಗಿದ್ದ...