ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ ಪರೀಕ್ಷೆ 2027ರ ಮೊದಲ ಸೆಷನ್‌ಗೆ (Session-1) ಅರ್ಜಿ ಸಲ್ಲಿಸುತ್ತಿರುವ ಅನಿವಾಸಿ ಭಾರತೀಯ (ಎನ್‌ಆರ್‌ಐ) ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಹತ್ವದ ರಿಲೀಫ್ ನೀಡಿದೆ. ಆಧಾರ್ ಕಾರ್ಡ್ ಹೊಂದಿಲ್ಲದ ಎನ್‌ಆರ್‌ಐ ವಿದ್ಯಾರ್ಥಿಗಳು ತಮ್ಮ ಬಳಿ ಇರುವ ಮಾನ್ಯವಾದ (ವ್ಯಾಲಿಡ್) ಭಾರತೀಯ ಪಾಸ್‌ಪೋರ್ಟ್ ಬಳಸಿಯೇ ಅರ್ಜಿ ಸಲ್ಲಿಸಲು ಎನ್‌ಟಿಎ ಪ್ರತ್ಯೇಕ ಅವಕಾಶವನ್ನು ಕಲ್ಪಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಎನ್‌ಟಿಎ, ಅರ್ಹ ಎನ್‌ಆರ್‌ಐ ಅಭ್ಯರ್ಥಿಗಳು ಜೆಇಇ ಮೇನ್ ನೋಂದಣಿ ಪೋರ್ಟಲ್‌ನಲ್ಲಿ ಹೊಸದಾಗಿ ಸೇರಿಸಲಾಗಿರುವ ‘Apply through the NRI (Having No Aadhaar)’ (ಆಧಾರ್ ಇಲ್ಲದ ಎನ್‌ಆರ್‌ಐ ಮೂಲಕ ಅರ್ಜಿ ಸಲ್ಲಿಕೆ) ಆಯ್ಕೆಯನ್ನು ಆರಿಸಿಕೊಳ್ಳುವ ಮೂಲಕ ತಮ್ಮ ಅರ್ಜಿ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು ಎಂದು ತಿಳಿಸಿದೆ. ಈ ಸೌಲಭ್ಯವು ಎನ್‌ಟಿಎ ಅಧಿಕೃತ ವೆಬ್‌ಸೈಟ್ jeemain.nta.nic.in ನಲ್ಲಿ ಲಭ್ಯವಿದೆ.
ಭಾರತದ ಪ್ರಮುಖ ಗುರುತಿನ ಚೀಟಿಗಳಿಲ್ಲದೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಎನ್‌ಆರ್‌ಐ ವಿದ್ಯಾರ್ಥಿಗಳು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದರು. ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎನ್‌ಟಿಎ ಈ ಹೊಸ ಮಾರ್ಗವನ್ನು ಒದಗಿಸಿದೆ. ಈ ಹಿಂದೆ, ನವೆಂಬರ್ 3ರಂದು ವಿದ್ಯಾರ್ಥಿಯೊಬ್ಬರು ‘ಎಕ್ಸ್’ (ಖಾತೆಯಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಎನ್‌ಟಿಎ, ಪಾಸ್‌ಪೋರ್ಟ್ ಬಳಸಿ ಅರ್ಜಿ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿತ್ತು. ಇದೀಗ ಅದಕ್ಕಾಗಿ ಪ್ರತ್ಯೇಕ ಲಿಂಕ್ ಅನ್ನು ಸಕ್ರಿಯಗೊಳಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದೆ.
ಆಧಾರ್ ಕಾರ್ಡ್ ಇಲ್ಲದ ಎನ್‌ಆರ್‌ಐ ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಿ ನೋಂದಣಿ ಮಾಡಿಕೊಳ್ಳಬಹುದು:
- ಅಧಿಕೃತ ವೆಬ್‌ಸೈಟ್ jeemain.nta.nic.in ಗೆ ಭೇಟಿ ನೀಡಿ.
- ಮುಖಪುಟದಲ್ಲಿರುವ ‘JEE Main 2027 Session 1 registration’ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನೋಂದಣಿ ಪುಟ ತೆರೆದುಕೊಂಡ ಬಳಿಕ ಅಲ್ಲಿ ‘Apply through the NRI (Having No Aadhaar)’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
- ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ ಮತ್ತು ನಿಮ್ಮ ಮಾನ್ಯವಾದ ಭಾರತೀಯ ಪಾಸ್‌ಪೋರ್ಟ್ ಬಳಸಿ ಮಾಹಿತಿಯನ್ನು ಒದಗಿಸಿ.
- ಉಳಿದ ಅರ್ಜಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಅರ್ಜಿಯನ್ನು ಅಂತಿಮವಾಗಿ ಸಲ್ಲಿಸುವ ಮುನ್ನ (ಸಬ್‌ಮಿಟ್) ಭರ್ತಿ ಮಾಡಿದ ಎಲ್ಲಾ ವಿವರಗಳು ಸರಿಯಾಗಿವೆಯೇ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಿ.
- ಅರ್ಜಿ ಸಲ್ಲಿಕೆಯಾದ ಬಳಿಕ, ಭವಿಷ್ಯದ ಉಲ್ಲೇಖಕ್ಕಾಗಿ ‘ಕನ್ಫರ್ಮೇಶನ್’ (ದೃಢೀಕರಣ) ಪುಟವನ್ನು ಡೌನ್‌ಲೋಡ್ ಮಾಡಿ ಸೇವ್ ಮಾಡಿಕೊಳ್ಳಿ.
ಮೊದಲ ಸೆಷನ್‌ಗೆ 5.72 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ನೋಂದಣಿ:
ನವೆಂಬರ್ 10ರವರೆಗೆ ಎನ್‌ಟಿಎ ಹಂಚಿಕೊಂಡಿರುವ ಅಂಕಿ-ಅಂಶಗಳ ಪ್ರಕಾರ, ಜೆಇಇ ಮೇನ್ 2027ರ ಮೊದಲ ಸೆಷನ್‌ಗೆ ಈವರೆಗೆ ಒಟ್ಟು 5,72,416 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 4,30,382 ವಿದ್ಯಾರ್ಥಿಗಳು ಅರ್ಜಿ ನಮೂನೆಗಳನ್ನು ಸಲ್ಲಿಸಿದ್ದರೆ, 4,07,664 ವಿದ್ಯಾರ್ಥಿಗಳು ನಿಗದಿತ ಪರೀಕ್ಷಾ ಶುಲ್ಕವನ್ನು ಪಾವತಿಸಿದ್ದಾರೆ. ಕೇವಲ ನೋಂದಣಿ ಮಾಡಿಕೊಂಡು, ಇನ್ನುಳಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದ ವಿದ್ಯಾರ್ಥಿಗಳು ಕೊನೆಯ ದಿನಾಂಕಕ್ಕೂ ಮುನ್ನವೇ ಅರ್ಜಿ ನಮೂನೆಗಳನ್ನು ಸಲ್ಲಿಸಿ, ಶುಲ್ಕ ಪಾವತಿಸುವಂತೆ ಎನ್‌ಟಿಎ ಸೂಚಿಸಿದೆ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ನವೆಂಬರ್ 22, 2026 (ರಾತ್ರಿ 11:50 ರವರೆಗೆ ದಂಡ ರಹಿತವಾಗಿ ಅರ್ಜಿ ಸಲ್ಲಿಸಲು ಅವಕಾಶ).
- ವಿಳಂಬ ಶುಲ್ಕದೊಂದಿಗೆ ಅರ್ಜಿ ಸಲ್ಲಿಕೆ: ನವೆಂಬರ್ 23 ರಿಂದ ನವೆಂಬರ್ 26ರವರೆಗೆ.
- ಅರ್ಜಿ ತಿದ್ದುಪಡಿಗೆ ಅವಕಾಶ (ಕರೆಕ್ಷನ್ ವಿಂಡೋ): ನವೆಂಬರ್ 27 ರಿಂದ ನವೆಂಬರ್ 29, 2026ರವರೆಗೆ.
- ಪರೀಕ್ಷಾ ದಿನಾಂಕಗಳು: ಜೆಇಇ ಮುಖ್ಯ ಪರೀಕ್ಷೆ 2027ರ ಮೊದಲ ಸೆಷನ್ ಪರೀಕ್ಷೆಗಳು 2027ರ ಜನವರಿ 20, 21, 22, 23, 24 ಮತ್ತು 28 ರಂದು ನಡೆಯಲಿವೆ.




