ಭಾರತದಾದ್ಯಂತ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಅದರಲ್ಲೂ ಮಹಾರಾಷ್ಟ್ರ, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ, ದೆಹಲಿಯಲ್ಲಿ ಭಾರಿ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ. ಹಲವರು ಸಾವನ್ನಪ್ಪಿದ್ದಾರೆ, ನಾಪತ್ತೆಯಾಗಿದ್ದಾರೆ, ಸಾರ್ವಜನಿಕ ಆಸ್ತಿಪಾಸ್ತಿ ನಾಶವಾಗಿದೆ. ಸಾವಿರಾರು ಮಂದಿ ಸೂರು ಕಳೆದುಕೊಂಡಿದ್ದಾರೆ.
ವಿಮಾನ, ರೈಲು ಮತ್ತು ರಸ್ತೆ ಸಾರಿಗೆ ಸಂಚಾರ ಸಂಪೂರ್ಣವಾಗಿ ವ್ಯತ್ಯಯಗೊಂಡಿದೆ. ಹವಾಮಾನ ಇಲಾಖೆ (IMD) ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿರುವುದರಿಂದ, ರಾಜ್ಯಗಳು ತುರ್ತು ಕ್ರಮ ಕೈಗೊಂಡಿವೆ.
ಮಹಾರಾಷ್ಟ್ರವು ಮಳೆಯಿಂದ ಅತಿ ಹೆಚ್ಚು ಬಾಧಿತವಾದ ರಾಜ್ಯಗಳಲ್ಲಿ ಒಂದಾಗಿದೆ. ಪುಣೆಯಲ್ಲಿ ಸೋಮವಾರ ಮಳೆ ಸಂಬಂಧಿತ ಘಟನೆಗಳಲ್ಲಿ ಮೂವರು ಮೃತಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 16ಕ್ಕೆ ಏರಿದೆ. ಮುಂಬೈ, ಥಾಣೆ ಮತ್ತು ರಾಯಗಡ ಜಿಲ್ಲೆಗಳಿಗೆ ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಘೋಷಿಸಿದೆ. ಭಾರಿ ಮಳೆಯಿಂದ ಮುಂಬೈ ನಗರ ಸ್ತಬ್ಧಗೊಂಡಿದ್ದು, ರಸ್ತೆಗಳು ಜಲಾವೃತವಾಗಿವೆ, ಮರಗಳು ರಸ್ತೆಗುರುಳಿವೆ ಮತ್ತು ಅಲ್ಲಲ್ಲಿ ಗೋಡೆ ಹಾಗೂ ಬಿಲ್‌ಬೋರ್ಡ್‌ಗಳು ಕುಸಿದು ಬಿದ್ದಿವೆ.

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯ ನೂತನ ‘ಮಿಸ್ಸಿಂಗ್ ಲಿಂಕ್’ ಭಾಗದಲ್ಲಿ ಕಾಂಕ್ರೀಟ್ ಕಂಬವೊಂದು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಭೂಕುಸಿತ ಮತ್ತು ಪ್ರವಾಹದಿಂದಾಗಿ ಎಕ್ಸ್‌ಪ್ರೆಸ್‌ವೇ ಮತ್ತು ಹಳೆಯ ಹೆದ್ದಾರಿ ಎರಡನ್ನೂ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಪಶ್ಚಿಮ ರೈಲ್ವೆಯ 40ಕ್ಕೂ ಹೆಚ್ಚು ರೈಲು ಸೇವೆಗಳು ರದ್ದಾಗಿವೆ ಅಥವಾ ದಾರಿ ಬದಲಿಸಲಾಗಿದೆ. ಮುಂಬೈಗೆ ಆಗಮಿಸಬೇಕಿದ್ದ 5 ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ಪರಿಸ್ಥಿತಿಯನ್ನು “ಅನಿವಾರ್ಯ ಪರಿಸ್ಥಿತಿ” ಎಂದು ಕರೆದಿದ್ದು, ವಿಪತ್ತು ನಿರ್ವಹಣಾ ತಂಡಗಳನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಉತ್ತರ ಭಾರತದ ರಾಜ್ಯಗಳಲ್ಲೂ ಮಳೆಯ ಆರ್ಭಟ ಮುಂದುವರಿದಿದೆ. ಹಿಮಾಚಲ ಪ್ರದೇಶದಲ್ಲಿ ರಾತ್ರೋರಾತ್ರಿ ಸುರಿದ ಭಾರಿ ಮಳೆಯಿಂದಾಗಿ ದಿಢೀರ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು, 14 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಚಂಬಾ ಜಿಲ್ಲೆಯಲ್ಲಿ ರಸ್ತೆಗಳು ಬಂದ್ ಆಗಿವೆ, ಕುಲ್ಲು ಭಾಗದಲ್ಲಿ ಸಂಚಾರ ವ್ಯತ್ಯಯಗೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ದಿಢೀರ್ ಪ್ರವಾಹದಿಂದಾಗಿ ದೋಡಾ-ಕಿಶ್ತ್ವಾರ್ ಹೆದ್ದಾರಿ ಹಾನಿಗೀಡಾಗಿದೆ. ಇಲ್ಲಿನ ನಿರ್ಮಾಣ ಹಂತದಲ್ಲಿರುವ 540 ಮೆಗಾವ್ಯಾಟ್ ಕುವಾರ್ ಜಲವಿದ್ಯುತ್ ಯೋಜನೆಯ ಬಳಿ ಭೂಕುಸಿತ ಉಂಟಾಗಿ ಹಲವು ವಾಹನಗಳು ಮಣ್ಣಿನಡಿಯಲ್ಲಿ ಹೂತುಹೋಗಿವೆ. ಉತ್ತರಾಖಂಡದ ಗಂಗೋತ್ರಿ ಹೆದ್ದಾರಿಯಲ್ಲಿಯೂ ಭೂಕುಸಿತ ವರದಿಯಾಗಿದ್ದು, ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ.
ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮುಂದಿನ 24 ಗಂಟೆಗಳಲ್ಲಿ ಅತ್ಯಂತ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಎಚ್ಚರಿಸಿದೆ. ಶಿವನಾಥ ಮತ್ತು ಖರುನ್ ನದಿಗಳು ಉಕ್ಕಿ ಹರಿಯುತ್ತಿದ್ದು, ರಾಜ್ಯ ವಿಪತ್ತು ಸ್ಪಂದನಾ ಪಡೆಯನ್ನು (SDRF) ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ಒಡಿಶಾದಲ್ಲಿ ಸತತ ಮೂರನೇ ದಿನವೂ ಮಳೆ ಮುಂದುವರಿದಿದ್ದು, ರಾಜ್ಯಾದ್ಯಂತ ಎಚ್ಚರಿಕೆ ವಹಿಸಲಾಗಿದೆ.
ರಾಜಸ್ಥಾನದ ಉದಯಪುರ, ಕೋಟಾ ಮತ್ತು ಭರತ್‌ಪುರ ವಿಭಾಗಗಳಲ್ಲಿ ಮಾನ್ಸೂನ್ ಚಟುವಟಿಕೆ ಜೋರಾಗಿದೆ. ಬಂಗಾಳ ಕೊಲ್ಲಿಯಿಂದ ದಕ್ಷಿಣ ಜಾರ್ಖಂಡ್ ಮತ್ತು ಉತ್ತರ ಒಡಿಶಾದ ಕಡೆಗೆ ಚಲಿಸುತ್ತಿರುವ ವಾಯುಭಾರ ಕುಸಿತದಿಂದಾಗಿ ಮುಂದಿನ ಐದರಿಂದ ಆರು ದಿನಗಳವರೆಗೆ ದೇಶದಾದ್ಯಂತ ಮಳೆ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಉತ್ತರ ಪ್ರದೇಶದಲ್ಲೂ ಮುಂಗಾರು ತೀವ್ರಗೊಂಡಿದ್ದು, ರಾಜ್ಯದಾದ್ಯಂತ ಭಾರಿ ಮಳೆಯಾಗುತ್ತಿದೆ. ಮಂಗಳವಾರ (ಜು.7) ಬೆಳಗ್ಗಿನಿಂದ ಲಕ್ನೋ, ಪ್ರಯಾಗ್‌ರಾಜ್, ವಾರಣಾಸಿ, ಚಂದೌಲಿ ಮತ್ತು ಮೊರಾದಾಬಾದ್ ಸೇರಿದಂತೆ ಸುಮಾರು 50 ನಗರಗಳಲ್ಲಿ ಹೆಚ್ಚು ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯು (IMD) ರಾಜ್ಯದ ಎಲ್ಲಾ 75 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿದೆ. ಈ ಪೈಕಿ 8 ಜಿಲ್ಲೆಗಳಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ.
ಶಾಮ್ಲಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳು ವೇಗವಾಗಿ ಹರಿಯುವ ತೊರೆಗಳಾಗಿ ಬದಲಾಗಿವೆ. ಕಾರು ಮತ್ತು ಬೈಕುಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ. ಮಥುರಾದ ವೃಂದಾವನದಲ್ಲಿ ರಸ್ತೆಗಳು ನದಿಗಳಂತಾಗಿವೆ. ಅಮ್ರೋಹಾದಲ್ಲಿ ಕೇವಲ ಒಂದು ಗಂಟೆಯ ಮಳೆಗೆ ದೆಹಲಿ-ಲಕ್ನೋ ಹೆದ್ದಾರಿ ಜಲಾವೃತವಾಗಿದೆ. ಹಪುರ್‌ನಲ್ಲಿ ಮಾರುಕಟ್ಟೆಗಳಿಗೆ ನೀರು ನುಗ್ಗಿದ್ದು, ವ್ಯಾಪಾರಿಗಳು ಪೀಠೋಪಕರಣಗಳ ಮೇಲೆ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.
ಕಳೆದ 24 ಗಂಟೆಗಳಲ್ಲಿ ಔರಯ್ಯದಲ್ಲಿ ರಾಜ್ಯದಲ್ಲೇ ಗರಿಷ್ಠ 35.9 ಮಿ.ಮೀ ಮಳೆಯಾಗಿದ್ದು, ಇದು ಸಾಮಾನ್ಯ ಮಳೆಗಿಂತ 379% ಹೆಚ್ಚಾಗಿದೆ. ಲಕ್ನೋದ ಹವಾಮಾನ ತಜ್ಞ ಅತುಲ್ ಕುಮಾರ್ ಸಿಂಗ್ ಅವರ ಪ್ರಕಾರ, ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತವು ಉತ್ತರ ಒಡಿಶಾ ಕರಾವಳಿಯನ್ನು ದಾಟಿ, ಈಗ ದಕ್ಷಿಣ ಜಾರ್ಖಂಡ್ ಮತ್ತು ಉತ್ತರ ಛತ್ತೀಸ್‌ಗಢದ ಮೇಲೆ ಕೇಂದ್ರೀಕೃತವಾಗಿದೆ.
ಕರ್ನಾಟಕದಲ್ಲೂ ಮುಂಗಾರು ಬಿರುಸುಗೊಂಡಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ ಎಂದು IMD ಎಚ್ಚರಿಕೆ ನೀಡಿದೆ. ವಿಶೇಷವಾಗಿ ಕರಾವಳಿ, ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮಳೆಯ ತೀವ್ರತೆ ವಿಪರೀತವಾಗಿರಲಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬೀಸಲಿರುವ ಬಲವಾದ ಗಾಳಿಯೊಂದಿಗೆ ಭಾರೀ ಮಳೆ ಸುರಿಯಲಿದೆ. ಸಮುದ್ರ ತೀರ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಈಗಾಗಲೇ ಎಚ್ಚರಿಕೆ ರವಾನಿಸಲಾಗಿದೆ. ಮತ್ತೊಂದೆಡೆ ಮಲೆನಾಡು ಮತ್ತು ಘಟ್ಟ ಪ್ರದೇಶಗಳಾದ ಬೆಳಗಾವಿ ಘಟ್ಟ ಪ್ರದೇಶ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಯುಪಿಯಲ್ಲಿ ಮಳೆ ಅವಾಂತರ: ಪ್ರವಾಹದಲ್ಲಿ ಕೊಚ್ಚಿಹೋದ ವಾಹನಗಳು; 75 ಜಿಲ್ಲೆಗಳಲ್ಲಿ ಹೈ ಅಲರ್ಟ್!
ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಸಾಧಾರಣದಿಂದ ಮಧ್ಯಮ ಗಾತ್ರದ ಮಳೆಯಾಗಲಿದೆ. ಆದರೆ, ಈ ಭಾಗಗಳಲ್ಲೂ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಹಳೆಯ ಕಟ್ಟಡಗಳು ಹಾಗೂ ಮರಗಳ ಕೆಳಗೆ ವಾಹನ ನಿಲ್ಲಿಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಭೀಕರ ಅವಘಡ ಸಂಭವಿಸಿದ್ದು, ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ ಬಳಿಯ ಕಲ್ಲಾಡಿಯಲ್ಲಿ ಭೂಕುಸಿತ ಉಂಟಾಗಿ ಮಣ್ಣಿನಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಮೂವರು ಸಾವನ್ನಿಪ್ಪಿದ್ದಾರೆ.
ಜುಲೈ 2024 ರಲ್ಲಿ ವಯನಾಡಿನಲ್ಲಿ ವಿನಾಶಕಾರಿ ಭೂಕುಸಿತ ಸಂಭವಿಸಿತ್ತು. ಆ ಸಂದರ್ಭದಲ್ಲಿ ಧಾರಾಕಾರ ಮಳೆಯಿಂದಾಗಿ ಮೆಪ್ಪಾಡಿ ಪ್ರದೇಶದಲ್ಲಿ ಅನೇಕ ಇಳಿಜಾರು ಭೂಕುಸಿತ ಉಂಟಾಗಿ, 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಹಲವಾರು ಜನ ಕಾಣೆಯಾಗಿದ್ದರು




