ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಆಲಮಟ್ಟಿ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಂಗಳವಾರ ಬೆಳಿಗ್ಗೆ 21,625 ಕ್ಯುಸೆಕ್ ಇದ್ದ ಒಳಹರಿವು ಸಂಜೆ 6 ಗಂಟೆಗೆ ಏಕಾಏಕಿ 85,445 ಕ್ಯುಸೆಕ್‌ಗೆ ಏರಿಕೆಯಾಗಿದೆ.
ಒಂದೇ ದಿನದಲ್ಲಿ ಸುಮಾರು 1.9 ಟಿಎಂಸಿ ಅಡಿ ನೀರು ಜಲಾಶಯ ಸೇರಿದ್ದು, ಬೆಳಿಗ್ಗೆ 508.28 ಮೀಟರ್ ಇದ್ದ ನೀರಿನ ಮಟ್ಟ ಸಂಜೆ ವೇಳೆಗೆ 509.04 ಮೀಟರ್‌ಗೆ ತಲುಪಿದೆ. ಜಲಾಶಯದಲ್ಲಿ ಒಟ್ಟು 25.536 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮಹಾಬಳೇಶ್ವರದಲ್ಲಿ 40 ಸೆಂ.ಮೀ, ಕೊಯ್ನಾ 31.9 ಸೆಂ.ಮೀ, ನವಜಾ 27.6 ಸೆಂ.ಮೀ, ರಾಧಾನಗರಿ 17.6 ಸೆಂ.ಮೀ, ದೂಧಗಂಗಾ 17.7 ಸೆಂ.ಮೀ ಹಾಗೂ ತರಳಿ 11.7 ಸೆಂ.ಮೀ ಮಳೆಯಾಗಿದೆ. ಈ ಮಳೆಯ ಪರಿಣಾಮ ಕೃಷ್ಣಾ ಹಾಗೂ ಉಪನದಿಗಳಲ್ಲಿ ಹರಿವು ಗಣನೀಯವಾಗಿ ಏರಿಕೆಯಾಗಿದೆ.
ಕರ್ನಾಟಕ ಗಡಿಯ ಸಮೀಪದ ರಾಜಾಪುರ ಬ್ಯಾರೇಜ್ ಬಳಿ ಕೃಷ್ಣಾ ನದಿಯಲ್ಲಿ 84,500 ಕ್ಯುಸೆಕ್ ಹರಿವು ದಾಖಲಾಗಿದ್ದು, ದೂಧಗಂಗಾ ನದಿಯಿಂದ 22,528 ಕ್ಯುಸೆಕ್ ನೀರು ಸೇರುವುದರಿಂದ ಕಲ್ಲೋಳ ಬ್ಯಾರೇಜ್ ಬಳಿ ಒಟ್ಟು ಹರಿವು ಸಂಜೆ ವೇಳೆಗೆ 1,07,028 ಕ್ಯುಸೆಕ್‌ಗೆ ತಲುಪಿದೆ. ಇದೇ ವೇಳೆ ಆಲಮಟ್ಟಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿರುವ ಘಟಪ್ರಭಾ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದ್ದು, ಲೋಳಸರ ಬ್ಯಾರೇಜ್ ಬಳಿ 11,242 ಕ್ಯುಸೆಕ್ ಹರಿವು ದಾಖಲಾಗಿದೆ.
ಈ ನೀರು ಮುಂದಿನ ಕೆಲ ದಿನಗಳಲ್ಲಿ ಕೃಷ್ಣಾ ನದಿಗೆ ಸೇರಲಿರುವುದರಿಂದ ಆಲಮಟ್ಟಿ ಜಲಾಶಯದ ಒಳಹರಿವು ಮೂರು–ನಾಲ್ಕು ದಿನಗಳಲ್ಲಿ 1 ಲಕ್ಷ ಕ್ಯುಸೆಕ್ ಗಡಿ ದಾಟುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದರ ಮಧ್ಯೆ, ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ (ಐಸಿಸಿ) ಸದಸ್ಯ ಕಾರ್ಯದರ್ಶಿ ಹಾಗೂ ಭೀಮರಾಯನಗುಡಿಯ ಮುಖ್ಯ ಎಂಜಿನಿಯರ್ ಅಭಿಮನ್ಯ ಅವರು ಪ್ರಕಟಣೆ ಹೊರಡಿಸಿ, ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ನೀರಿನ ಸಂಗ್ರಹ ಇನ್ನೂ ಸಮರ್ಪಕವಾಗಿಲ್ಲ. ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸುವುದೇ ಮೊದಲ ಆದ್ಯತೆಯಾಗಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಕಾಲುವೆ ನೀರನ್ನು ಅವಲಂಬಿಸಿ ಮುಂಗಾರು ಬೆಳೆ ಬೆಳೆಯಬಾರದು ಎಂದು ಮನವಿ ಮಾಡಿದ್ದಾರೆ.




