ಚೀನಾ ಭೂಪಟ ಸೇರಿದ ಅರುಣಾಚಲ ಪ್ರದೇಶ: ಏನಂತಾರೆ ಪ್ರಧಾನಿ ಮೋದಿ?

Date:

ದೇಶದ ಭೂಪ್ರದೇಶ ಪ್ರವೇಶಿಸಲು ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಹೇಳಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಆದರೆ, ಚೀನಾದ ನಿರಂತರ ಆಕ್ರಮಣದ ಬಗ್ಗೆ ಅವರು ಮೌನ ವಹಿಸಿದ್ದಾರೆ. ಅದರ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮೋದಿಯವರನ್ನು ಪದೇ ಪದೇ ಪ್ರಶ್ನಿಸುತ್ತಲೇ ಇದ್ದಾರೆ. ಲಡಾಖ್‌ನಲ್ಲಿ ಚೀನಾ ಕಾಲಿರಿಸಿ ಆಗಿದೆ ಎನ್ನುವುದು ರಾಹುಲ್ ಗಾಂಧಿ ವಾದ.

ಅರುಣಾಚಲ ಪ್ರದೇಶ ತನ್ನ ಭೂಪ್ರದೇಶ ಎಂದು ತೋರುವ ಸ್ಟ್ಯಾಂಡರ್ಡ್ ಮ್ಯಾಪ್ ಅನ್ನು ಚೀನಾ ಬಿಡುಗಡೆ ಮಾಡಿರುವುದು ಭಾರತದಲ್ಲಿ ತಳಮಳ ಉಂಟು ಮಾಡಿದೆ. ಅರುಣಾಚಲ ಪ್ರದೇಶ, ಅಕ್ಷಾಯ್ ಚಿನ್, ತೈವಾನ್ ಹಾಗೂ ವಿವಾದಿತ ದಕ್ಷಿಣ ಚೀನಾ ಸಮುದ್ರದ ಬೃಹತ್ ಭಾಗ ತನಗೆ ಸೇರಿದ ಪ್ರದೇಶಗಳು ಎಂದು ಭೂಪಟದ ಮೂಲಕ ಹಕ್ಕು ಸಾಧಿಸುವ ಪ್ರಯತ್ನವನ್ನು ಚೀನಾ ಮಾಡಿದೆ.

ಭಾರತವು ಈ ಭೂಪಟವನ್ನು ತಿರಸ್ಕರಿಸಿದ್ದು, ‘ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಯಾವಾಗಲೂ ಹಾಗೆಯೇ ಇರಲಿದೆ’ ಎಂದು ಇದೊಂದು ಸಹಜ ಸಾಧಾರಣ ವಿಚಾರ ಎನ್ನುವಂತೆ ಪ್ರತಿಕ್ರಿಯಿಸಿದೆ.

ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿರುವವರೆಗೆ ಚೀನಾದ ಇಂಥ ಪ್ರವೃತ್ತಿ ಬಗ್ಗೆ ಬಿಜೆಪಿ ವಿಪರೀತದ ಪ್ರತಿಕ್ರಿಯೆ ನೀಡುತ್ತಿತ್ತು. ಕಾಂಗ್ರೆಸ್‌ನಿಂದ ದೇಶವನ್ನು ಕಾಪಾಡಲು ಸಾಧ್ಯವಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸುತ್ತಿತ್ತು. ಆದರೆ, ಬಿಜೆಪಿಯೇ ಈಗ ಅಧಿಕಾರದಲ್ಲಿದೆ. ಹಾಗಿದ್ದರೆ ಬಿಜೆಪಿ ‘ಸರ್ವಶಕ್ತ’ ಎಂಬಂತೆ ಬಿಂಬಿಸುವ ಪ್ರಧಾನಿ ಮೋದಿ ಏನು ಮಾಡುತ್ತಿದ್ದಾರೆ?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಚೀನಾ ಅನೇಕ ಬಾರಿ ಇಂಥ ಪ್ರಯತ್ನಗಳನ್ನು ಮಾಡಿದೆ. ಎಲ್ಲಕ್ಕಿಂತ ಭೀಕರವಾದದ್ದು ಗಾಲ್ವನ್ ಕಣಿವೆಯ ಕಾಳಗ. 1962ರ ಚೀನಾದೊಂದಿಗಿನ ಯುದ್ಧವನ್ನು ನೆಹರೂರವರ ಹಿಮಾಲಯಸದೃಶ ತಪ್ಪು ಎಂದು ಕೆಲವರು ಕರೆದರು. ಆ ಯುದ್ಧದಲ್ಲಿ ಅಕ್ಷಾಯ್ ಚಿನ್ ಪ್ರದೇಶ ಚೀನಾದ ಪಾಲಾಗಿತ್ತು. 1962ರ ಯುದ್ಧದ ಬಳಿಕ ಮತ್ತೆ ಚೀನಾದ ಸೇನೆಯೊಂದಿಗೆ ಭಾರತದ ಸೇನೆ ಸಂಘರ್ಷಕ್ಕಿಳಿದಿದ್ದು 2020ರ ಜೂನ್‌ನಲ್ಲಿ; ಗಾಲ್ವನ್ ಕಣಿವೆಯ ಸಂಘರ್ಷದಲ್ಲಿ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿದಂತೆ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. 76 ಮಂದಿ ಗಾಯಗೊಂಡಿದ್ದರು. ಚೀನಾ ಕಡೆಯಲ್ಲೂ ಸುಮಾರು 45 ಮಂದಿ ಸಾವುನೋವಿಗೆ ಗುರಿಯಾಗಿದ್ದರು.

ಅದು ನಡೆದದ್ದು ಬಿಜೆಪಿ ಆಡಳಿತಾವಧಿಯಲ್ಲಿ ಮತ್ತು ಮೋದಿ ಅವರ ಪ್ರಧಾನಿ ಅವಧಿಯಲ್ಲಿ. ವಿಚಿತ್ರ ಅಂದರೆ, ಪ್ರಧಾನಿ ಮೋದಿ, ಗಾಲ್ವನ್ ಕಣಿವೆಯ ಸಂಘರ್ಷದ ಬಗ್ಗೆ ಹೇಳಿಕೆ ನೀಡಿ, ‘ನಮ್ಮ ನೆಲವನ್ನು ಯಾರೂ ಅತಿಕ್ರಮಿಸಿಕೊಂಡಿಲ್ಲ. ನಮ್ಮ ಯಾವುದೇ ಗಡಿಠಾಣೆಯನ್ನು ಅವರು ವಶಕ್ಕೆ ಪಡೆದಿಲ್ಲ’ ಎಂದಿದ್ದರು. ಪ್ರಧಾನಿ ಹೇಳಿಕೆಗೆ ಆಗ ವ್ಯಾಪಕ ಟೀಕೆ ಎದುರಾಗಿತ್ತು. ಹಾಗಿದ್ದರೆ ಸಂಘರ್ಷ ನಡೆದಿದ್ದು ಯಾಕೆ, ನಮ್ಮ ಯೋಧರು ಸತ್ತಿದ್ದು ಏಕೆ ಎಂದು ಪ್ರತಿಪಕ್ಷಗಳು ಮೋದಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದವು. ವಿಶೇಷವೆಂದರೆ, ಭಾರತೀಯರ ವ್ಯಾಪಕ ಟೀಕೆಗೆ ಕಾರಣವಾದ ಮೋದಿಯವರ ಆ ಹೇಳಿಕೆಯನ್ನು ಚೀನಾ ಸ್ವಾಗತಿಸಿತ್ತು.

ಮೋದಿ ಅವರ ಅವಧಿಯಲ್ಲಿ ಹಲವು ಬಾರಿ ಚೀನಾ ತಂಟೆ ತಕರಾರು ಮಾಡಿದೆ. ಏಪ್ರಿಲ್‌ನಲ್ಲಿ ಅರುಣಾಚಲ ಪ್ರದೇಶದ 11 ಪ್ರದೇಶಗಳಿಗೆ ಚೀನಾ ಚೀನೀ ಹೆಸರುಗಳನ್ನು ಘೋಷಿಸಿತ್ತು. ಮತ್ತೆ ಅದನ್ನು ತಿರಸ್ಕರಿಸಿದ್ದ ಭಾರತವು ಅರುಣಾಚಲ ಪ್ರದೇಶವು ದೇಶದ ಅವಿಭಾಜ್ಯ ಅಂಗವೆಂದು ಹೇಳಿತ್ತು. ಕೇವಲ ಹೆಸರುಗಳನ್ನು ಘೋಷಿಸುವುದರಿಂದ ಈಶಾನ್ಯ ರಾಜ್ಯವು ಭಾರತದ ಆಳ್ವಿಕೆಯಲ್ಲಿದೆ ಎನ್ನುವ ಸತ್ಯವನ್ನು ಬದಲಾಯಿಸದು ಎಂದಿತ್ತು.

ಆದರೆ, ಲಡಾಕ್‌ ಸೇರಿದಂತೆ ಚೀನಾದ ಗಡಿಗೆ ಹೊಂದಿಕೊಂಡಿರುವ ಭೂಪ್ರದೇಶಗಳಲ್ಲಿ ಪರಿಸ್ಥಿತಿ ಅಷ್ಟು ಆಶಾದಾಯಕವಾಗಿಲ್ಲ. ಲಡಾಕ್‌ನ ಡೆಪ್ಪಾಂಗ್ ಪ್ರದೇಶದಲ್ಲಿನ 65 ಗಸ್ತು ಕೇಂದ್ರಗಳ ಪೈಕಿ 26 ಕೇಂದ್ರಗಳಲ್ಲಿ ಭಾರತೀಯ ಪಡೆಗಳು ಗಸ್ತು ತಿರುಗಲು ಸಾಧ್ಯವಾಗಿಲ್ಲ. ಜೊತೆಗೆ ಚೀನಾ ಪಡೆಗಳು ಭಾರತಕ್ಕೆ ಸೇರಿರುವ ವೈ ಜಂಕ್ಷನ್ ಭೂ ಪ್ರದೇಶವನ್ನು ವಶಪಡಿಸಿಕೊಂಡಿವೆ. ಸುಮಾರು ಒಂದು ಸಾವಿರ ಚದರ ಕಿಮೀನಷ್ಟು ಪ್ರದೇಶ ಅತಿಕ್ರಮಣವಾಗಿದೆ ಎನ್ನುವ ವರದಿಗಳಿವೆ. ಆದರೆ, ಮೋದಿ ಸರ್ಕಾರವು ಇದ್ಯಾವುದರ ಬಗ್ಗೆಯೂ ಗಂಭೀರ ಕ್ರಮ ತೆಗೆದುಕೊಂಡ ದಾಖಲೆ ಇಲ್ಲ.  

ದೇಶದ ಭೂಪ್ರದೇಶ ಪ್ರವೇಶಿಸಲು ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ ಎಂದು ಮೋದಿ ಹಲವು ಬಾರಿ ಹೇಳಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಆದರೆ, ಚೀನಾದ ನಿರಂತರ ಆಕ್ರಮಣದ ಬಗ್ಗೆ ಅವರು ಮೌನ ವಹಿಸಿದ್ದಾರೆ.

ಭಾರತವು ಚೀನಾ ಜೊತೆಗೆ ಮಾತುಕತೆ ನಡೆಸುತ್ತಿದೆ ಎನ್ನುವುದೇನೋ ನಿಜ. ಆದರೆ, ಅವೆಲ್ಲವೂ ಕೇವಲ ಔಪಚಾರಿಕ ಎಂಬಂತೆ ನಡೆಯುತ್ತಿವೆ. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ 15ನೇ ಬ್ರಿಕ್ಸ್ ಶೃಂಗ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮಾತುಕತೆ ನಡೆಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಭಾರತದ ಕೋರಿಕೆ ಮೇರೆಗೆ ದ್ವಿಪಕ್ಷೀಯ ಮಾತುಕತೆ ನಡೆದಿತ್ತು ಎಂದು ಚೀನಾ ಹೇಳಿತ್ತು. ಯಥಾಪ್ರಕಾರ, ಭಾರತ ಅದನ್ನು ನಿರಾಕರಿಸಿತ್ತು.

ಗಡಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಭಾರತ ಚೀನಾ ನಡುವೆ ಒಂದಿಷ್ಟು ಮಾತುಕತೆಯೇನೋ ನಡೆದಿದೆ. ಇತ್ತೀಚೆಗೆ 19ನೇ ಸುತ್ತಿನ ಮಾತುಕತೆ ನಡೆದಿತ್ತು. ಆದರೆ, ಉಭಯ ದೇಶಗಳು ಶಾಂತಿ ಒಪ್ಪಂದಕ್ಕೆ ಬರಲು ವಿಫಲವಾಗಿವೆ. ಪಶ್ಚಿಮ ಲಡಾಕ್‌ನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ತಲೆದೋರಿರುವ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವ ಸಂಬಂಧ ಎರಡೂ ದೇಶಗಳ ನಡುವೆ ಕಮಾಂಡರ್ ಮಟ್ಟದ ಮಾತುಕತೆಯೂ ನಡೆದಿತ್ತು. ಗಡಿಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವ ಬಗ್ಗೆ ಎರಡೂ ದೇಶಗಳು ಕ್ರಮ ವಹಿಸುವುದಾಗಿ ವಾಗ್ದಾನ ಮಾಡಿದ್ದವು. ಆದರೆ, ಅದಾದ ನಂತರವೂ ಚೀನಾದ ತಂಟೆ ಮುಂದುವರೆದಿದೆ. ಅದೇ ರೀತಿ ಪ್ರಧಾನಿ ಮೋದಿಯವರ ಮೌನವೂ ಮುಂದುವರೆದಿದೆ ಎನ್ನುವ ವ್ಯಾಪಕ ಟೀಕೆಗಳು ಬಂದಿವೆ.

ಇದರ ನಡುವೆ ಭಾರತ ಚೀನಾಗೆ ವಿರುದ್ಧವಾಗಿ ಅಮೆರಿಕಕ್ಕೆ ಹತ್ತಿರವಾಗುತ್ತಿದೆ ಎನ್ನುವ ವಾದವೂ ಇದೆ. ಭಾರತ ಅಮೆರಿಕದ ಕಡೆ ವಾಲುತ್ತಿದ್ದರೆ, ರಷ್ಯಾ ಚೀನಾ ಇನ್ನಷ್ಟು ಹತ್ತಿರವಾಗುತ್ತಿವೆ. ಭಾರತವನ್ನು ಚೀನಾದ ವಿರುದ್ಧ ಅಸ್ತ್ರವನ್ನಾಗಿ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಅದನ್ನು ಅಮೆರಿಕ ನಿರಾಕರಿಸಿ, ಭಾರತ ಒಂದು ಸಾರ್ವಭೌಮ ರಾಷ್ಟ್ರ ಎಂದು ಭಾರತವನ್ನು ಸಮರ್ಥಿಸಿದೆ. ಇನ್ನೊಂದೆಡೆ, ಭಾರತದ ನೆರೆಯ ಶ್ರೀಲಂಕಾ, ಪಾಕಿಸ್ತಾನ ಮುಂತಾದ ದೇಶಗಳ ಮೇಲೆ ಚೀನಾ ಹಣಕಾಸಿನ ನೆರವು ಮತ್ತಿತರ ಆಮಿಷಗಳ ಮೂಲಕ ಈಗಾಗಲೇ ತನ್ನ ಹಿಡಿತ ಸಾಧಿಸಿದೆ. ಇದು ಕೂಡ ಭಾರತದ ಮಟ್ಟಿಗೆ ನಕಾರಾತ್ಮಕವಾದ ಬೆಳವಣಿಗೆಯೇ.      

ಈ ಸುದ್ದಿ ಓದಿದ್ದೀರಾ: ನೂರರ ನೆನಪು | ಸ್ಮರಿಸಲೇಬೇಕಾದ ಶೈಲೇಂದ್ರ ಎಂಬ ಜೀವಪರ ದನಿ

ಇದೆಲ್ಲದರ ನಡುವೆ ‘ದೋಕಲಾ ಬಿಕ್ಕಟ್ಟಿನ ಬಗ್ಗೆ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುವ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಬಗ್ಗೆ ನೀವು ಮಾತನಾಡಬೇಕೆಂದು ಭಾರತ ಬಯಸುತ್ತಿದೆ’ ಎಂದು ರಾಹುಲ್ ನಾಲ್ಕೈದು ವರ್ಷಗಳ ಹಿಂದಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಪ್ರಧಾನಿ ಮೋದಿಯವರು ತಮ್ಮ ಮೌನ ಮುರಿದಿಲ್ಲ. ಈಗಲೂ ಕೂಡ ರಾಹುಲ್ ಮೋದಿಯವರನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ‘ಲಡಾಖ್‌ನಲ್ಲಿ ಒಂದು ಇಂಚೂ ಭೂಮಿ ನಷ್ಟವಾಗಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದು ಸುಳ್ಳು ಎಂದು ನಾನು ವರ್ಷಗಳಿಂದ ಹೇಳುತ್ತಿದ್ದೇನೆ. ಚೀನಾ ಆಕ್ರಮಿಸಿರುವುದು ಇಡೀ ಲಡಾಖ್‌ಗೆ ತಿಳಿದಿದೆ’ ಎಂದು ಹೇಳಿರುವ ರಾಹುಲ್, ‘ಇದರ ಬಗ್ಗೆ ಪ್ರಧಾನಿಯವರ ಪ್ರತಿಕ್ರಿಯೆ ಏನು’ ಎಂದು ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಮುಂದಿನ ವಾರ ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಈ ಬಗ್ಗೆ ಮಾತುಕತೆ ನಡೆಯಬಹುದೆಂಬ ನಿರೀಕ್ಷೆ ಇತ್ತು. ಆದರೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆ ಸಭೆಯಲ್ಲಿ ಭಾಗಹಿಸುತ್ತಿಲ್ಲ ಎನ್ನಲಾಗಿದೆ. ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಭಾಗವಹಿಸುತ್ತಿಲ್ಲ. ಇವೆಲ್ಲವೂ ಅಂತಾರಾಷ್ಟ್ರೀಯ ಸಂಬಂಧಗಳನ್ನು ಮೋದಿ ಸರ್ಕಾರವು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿದೆಯೇ ಎನ್ನುವ ಅನುಮಾನ ಹುಟ್ಟಿಸುತ್ತಿವೆ. ಮೋದಿ ಸರ್ಕಾರದ ದೋಷಪೂರಿತ ವಿದೇಶಾಂಗ ನೀತಿಗಳತ್ತ ಬೆಳಕು ಚೆಲ್ಲುತ್ತಿವೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಮೋದಿಯವರ ಬಿಜೆಪಿ 220 ಸ್ಥಾನಗಳನ್ನು ಗೆಲ್ಲುವುದಿಲ್ಲ’

ಲೋಕಸಭಾ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ಪರ ಹಾಗೂ ವಿರುದ್ಧದ ಚುನಾವಣೆಯಾಗಿದೆ....

2019ರಲ್ಲಿ ಮೋದಿ ಕೊಟ್ಟ ಆಶ್ವಾಸನೆಗಳ ಕತೆ ಏನಾಯಿತು?

2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರಮೋದಿಯವರ ಮುಖ ಹೊತ್ತ ಬಿಜೆಪಿ ಪ್ರಣಾಳಿಕೆ ಸಾಲು...

ಪಂಜಾಬ್‌| ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ರೈತರ ಪ್ರತಿಭಟನೆಯ ಬಿಸಿ

ಪಂಜಾಬ್‌ನಲ್ಲಿ ರೈತರ ಪ್ರತಿಭಟನೆ ನಿರಂತರವಾಗಿ ಮುಂದುವರೆದಿದ್ದು, ಲೋಕಸಭೆ ಚುನಾವಣೆಯ ಪ್ರಚಾರ ನಡೆಸುತ್ತಿರುವ...

ಸ್ನೇಹಿತೆ ಮೇಲೆ ಹಲ್ಲೆ, ಅತ್ಯಾಚಾರ; ಆರೋಪಿ ಬಂಧನ – ಮನೆಯ ಅಕ್ರಮ ಭಾಗ ನೆಲಸಮ

ತನ್ನ ಸ್ನೇಹಿತೆ ಮೇಲೆಯೇ ಹಲ್ಲೆಗೈದು ಅತ್ಯಾಚಾರ ಎದಗಿದ್ದ ಆರೋಪದ ಮೇಲೆ 20...