ಕಾಂಗ್ರೆಸ್ ಗ್ಯಾರಂಟಿಗಳು ‘ಉಚಿತ’ ಅಲ್ಲ: ಡಾ. ಚಂದ್ರಪೂಜಾರಿ

Date:

ಜನ ಸಾಮಾನ್ಯರು ಸರಕಾರಕ್ಕೆ ನೀಡುವ ವಿವಿಧ ರೂಪದ ತೆರಿಗೆಗಳ ಬಹುಪಾಲು (ಶೇ.90ರಷ್ಟು) ಸರಕಾರಗಳ ಸಾಲ ಸಂದಾಯಕ್ಕೆ, ಉದ್ದಿಮೆಗಳ ಕೆಟ್ಟ ಸಾಲಗಳನ್ನು ಭರಿಸಲು, ಕೆಟ್ಟ ಸಾಲದಿಂದ ಬಸವಳಿದ ಬ್ಯಾಂಕ್‍ಗಳನ್ನು ಸುಧಾರಿಸಲು, ದೇಶದ ಆರ್ಥಿಕ ಮೂಲಸೌಕರ್ಯಗಳನ್ನು (ರೈಲು, ಬಂದರು, ವಿಮಾನ ನಿಲ್ದಾಣ, ರಸ್ತೆ ಇತ್ಯಾದಿಗಳನ್ನು) ನಿರ್ಮಿಸಲು ಬಳಕೆ ಆಗುತ್ತಿದೆ

ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಗೃಹಿಣಿಯರಿಗೆ ಮಾಸಿಕ ರೂ. 2000 ಸಹಾಯಧನ, ಪದವೀಧರ ನಿರುದ್ಯೋಗಿಗಳಿಗೆ ರೂ. 3000 ಮತ್ತು ಡಿಪ್ಲೊಮಾ ಓದಿದವರಿಗೆ ರೂ.1,500 ಸಹಾಯಧನ ನೀಡುವ ಗ್ಯಾರಂಟಿ ಯೋಜನೆಗಳ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತಿದೆ.

ಇದರ ನಡುವೆ ಯಾವುದೇ ಕಂಡೀಷನ್‌ ಇಲ್ಲದೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಬೇಕು, ಇಲ್ಲದಿದ್ದರೆ ಜೂನ್‌ 1ರಿಂದ ಪ್ರತಿಭಟನೆ ನಡೆಸುವುದಾಗಿ ವಿರೋಧ ಪಕ್ಷದವರು ಬೆದರಿಕೆಯೊಡ್ಡುತ್ತಿದ್ದಾರೆ. ಬಡವರಿಗೆ ಕೊಡುವ ಉಚಿತ ಕೊಡುಗೆಗಳ ಬಗ್ಗೆ ಉಳ್ಳವರ ತಿರಸ್ಕಾರ ಇದ್ದೇ ಇದೆ. ಅಷ್ಟೇ ಅಲ್ಲ ನಮ್ಮ ತೆರಿಗೆ ಹಣ ಬಿಟ್ಟಿ ಭಾಗ್ಯಗಳಿಗೆ ವ್ಯರ್ಥವಾಗಬಾರದು ಎಂದು ಹೇಳಲು ಉದ್ಯಮಿ ಮೋಹನ್‌ದಾಸ್‌ ಪೈ ತರಹದ ಹಣವಂತರು ಶುರು ಮಾಡಿದ್ದಾರೆ. ಆದರೆ, ಸರ್ಕಾರ ನೀಡುವ ಯಾವುದೇ ಉಚಿತ ಕೊಡುಗೆಗಳು ನಿಜಾರ್ಥದಲ್ಲಿ ಉಚಿತ ಅಲ್ಲ. ಜನರ ತೆರಿಗೆಯ ಹಣದ ಒಂದು ಪಾಲನ್ನು ಜನರಿಗೇ ನೀಡುವ ಯೋಜನೆಯಷ್ಟೇ ಎಂಬ ವಾದವೂ ಇದೆ. ಅದು ವಾಸ್ತವ ಕೂಡಾ.

ಈ ಬಗ್ಗೆ ಅರ್ಥಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಡಾ. ಚಂದ್ರ ಪೂಜಾರಿ ಅವರ ಅಭಿಪ್ರಾಯ ಇಲ್ಲಿದೆ.

1.ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಗ್ರಹ ಮಾಡುವ ಪ್ರತಿ 100 ರುಪಾಯಿ ತೆರಿಗೆಯಲ್ಲಿ 35 ರುಪಾಯಿ ನೇರ ತೆರಿಗೆಯಿಂದ ಅಥವಾ ಅನುಕೂಲಸ್ಥರಿಂದ ಬಂದರೆ, 65 ರುಪಾಯಿ ಪರೋಕ್ಷ ತೆರಿಗೆಯಿಂದ ಅಥವಾ ಅನುಕೂಲಸ್ಥರಲ್ಲದವರಿಂದ ಬರುತ್ತಿದೆ.

2.ಎಲ್ಲರೂ (ಬಡವರು ಮತ್ತು ಶ್ರೀಮಂತರು) 1 ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸುವಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಕನಿಷ್ಠ 45 ರಿಂದ 50 ರುಪಾಯಿ ತೆರಿಗೆ ಸಂದಾಯ ಮಾಡುತ್ತಾರೆ.

3.ರಾಜ್ಯ ಮತ್ತು ಕೇಂದ್ರ ಸರಕಾರಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಮೇಲೆ ಅತ್ಯಲ್ಪ ವಿನಿಯೋಜನೆ ಮಾಡುವುದರಿಂದ ದಿನಕ್ಕೆ ಕೆಲವು ನೂರು ಗಳಿಸುವವರು ಕೂಡ ತಮ್ಮ ಆದಾಯದ ಶೇ.40-45ರಷ್ಟನ್ನು ಶಿಕ್ಷಣ ಆರೋಗ್ಯಗಳ ಮೇಲೆ ವಿನಿಯೋಗಿಸುತ್ತಾರೆ.

4.ಸರಕಾರಗಳು ಅನುಕೂಲಸ್ಥರಿಂದ ಕಡಿಮೆ ತೆರಿಗೆ ಸಂಗ್ರಹ ಮಾಡುವುದರಿಂದ ಬಜೆಟ್ (ಆದಾಯ) ಕೊರತೆ ಉಂಟಾಗುತ್ತದೆ. ಬಜೆಟ್ ಕೊರತೆಯನ್ನು ಭರಿಸಲು ಸರಕಾರಗಳು ಟ್ರೆಸರಿ ಬಾಂಡ್ ಮೇಲೆ ಸಾಲ ಮಾಡುತ್ತವೆ. ಈ ಬಾಂಡ್‍ಗಳ ಮೇಲೆ ಸರಕಾರ ಬಡ್ಡಿ ನೀಡುತ್ತದೆ. ಈ ಸಾಲ ಮತ್ತು ಬಡ್ಡಿಗಳನ್ನು ಜನರು ಕಟ್ಟಿದ ನೇರ ಮತ್ತು ಪರೋಕ್ಷ ತೆರಿಗೆಯಿಂದಲೇ ಪಾವತಿಸುವುದು. ಈ ಟ್ರೆಸರಿ ಬಾಂಡ್‍ಗಳನ್ನು ಖರೀದಿಸುವ ಅನುಕೂಲಸ್ಥರಿಗೆ ಎರಡು ಲಾಭ.

ಒಂದು ಕಡಿಮೆ ತೆರಿಗೆ ಸಂದಾಯ ಮಾಡುವುದು, ಮತ್ತೊಂದು ತೆರಿಗೆ ಕಟ್ಟದೆ ಉಳಿತಾಯ ಮಾಡಿದ ಮೊತ್ತದ ಮೇಲೆ ಸರಕಾರದಿಂದ ಬಡ್ಡಿ ಪಡೆಯುವುದು.

5.ಉದ್ದಿಮೆಗಳು ತಮ್ಮ ಲಾಭ ಹೆಚ್ಚಿಸಿಕೊಳ್ಳಲು ಸರಕುಸೇವೆಗಳ ಬೆಲೆಗಳನ್ನು ಏರಿಸುತ್ತವೆ. ಸರಕಾರ ಉದ್ದಿಮೆಗಳನ್ನು ಹದ್ದುಬಸ್ತಲ್ಲಿಡುವ ಬದಲು ಬೆಲೆ ಏರಿಕೆಯನ್ನು ಹದ್ದುಬಸ್ತಲ್ಲಿಡಲು ಬ್ಯಾಂಕ್ ಬಡ್ಡಿದರ ಏರಿಸುತ್ತದೆ. ಸರಕಾರದ ಈ ಕ್ರಮದಿಂದ ಬಡ ಜನರಿಗೆ ಎರಡು ನಷ್ಟಗಳು- 1. ಬೆಲೆ ಏರಿಕೆಯಿಂದ ತಮ್ಮ ಜೀವನದ ಅವಶ್ಯಕತೆಗಳನ್ನು ಭರಿಸಲು ಸಾಲ ಮಾಡುವ ಸ್ಥಿತಿ ನಿರ್ಮಾಣ ಆಗುತ್ತದೆ. 2. ಬಡ್ಡಿದರ ಏರಿಕೆಯಿಂದ ಕುಟುಂಬಗಳು ಪಾವತಿಸಬೇಕಾದ ಬಡ್ಡಿ ಮೊತ್ತ ಹೆಚ್ಚುತ್ತದೆ.

ಸರಕಾರಗಳು ಕಾರ್ಮಿಕ ಕಾಯಿದೆಗಳನ್ನು ತಿದ್ದುಪಡಿ ಮಾಡಿ ಇವತ್ತು ಅತ್ಯಂತ ಕನಿಷ್ಠ ಸಂಬಳಕ್ಕೆ ಯಾವುದೇ ಭದ್ರತೆಗಳಿಲ್ಲದೆ ದುಡಿಯುವ ಸ್ಥಿತಿ ನಿರ್ಮಾಣವಾಗಿದೆ. ಇದು ಉದ್ದಿಮೆಗಳ ಲಾಭವನ್ನು ಗಣನೀಯವಾಗಿ ಹೆಚ್ಚಿಸಿದೆ.

ಇದನ್ನು ಓದಿ: ನಾಲ್ಕೈದು ತಿಂಗಳಲ್ಲಿ ರಾಜ್ಯದ ರಾಜಕೀಯ ಚಿತ್ರಣ ಬದಲಾವಣೆ : ಬೊಮ್ಮಾಯಿ

ಈ ಎಲ್ಲದರ ಹಿನ್ನೆಲೆಯಲ್ಲಿ ಈ ಕೆಳಗಿನ ತೀರ್ಮಾನಕ್ಕೆ ಬರಬಹುದು

ಕಾಂಗ್ರೆಸ್ ನೀಡಿದ ಗ್ಯಾರಂಟಿಗಳು ಉಚಿತ ಅಲ್ಲ. ಜನ ಸಾಮಾನ್ಯರು 100 ರುಪಾಯಿಗಳಷ್ಟು ವಿವಿಧ ರೂಪದ ತೆರಿಗೆ ಸಂದಾಯ ಮಾಡಿ 10 ರುಪಾಯಿಯ ಸವಲತ್ತುಗಳನ್ನು ಪಡೆಯುತ್ತಿದ್ದಾರೆ.

ಜನ ಸಾಮಾನ್ಯರು ಸರಕಾರಕ್ಕೆ ನೀಡುವ ವಿವಿಧ ರೂಪದ ತೆರಿಗೆಗಳ ಬಹುಪಾಲು (ಶೇ.90ರಷ್ಟು) ಸರಕಾರಗಳ ಸಾಲ ಸಂದಾಯಕ್ಕೆ, ಉದ್ದಿಮೆಗಳ ಕೆಟ್ಟ ಸಾಲಗಳನ್ನು ಭರಿಸಲು, ಕೆಟ್ಟ ಸಾಲದಿಂದ ಬಸವಳಿದ ಬ್ಯಾಂಕ್‍ಗಳನ್ನು ಸುಧಾರಿಸಲು, ದೇಶದ ಆರ್ಥಿಕ ಮೂಲಸೌಕರ್ಯಗಳನ್ನು (ರೈಲು, ಬಂದರು, ವಿಮಾನ ನಿಲ್ದಾಣ, ರಸ್ತೆ ಇತ್ಯಾದಿಗಳನ್ನು) ನಿರ್ಮಿಸಲು ಬಳಕೆ ಆಗುತ್ತಿದೆ.

ದಿನದ 24 ಗಂಟೆ ತಮ್ಮ ಮೂಲಸೌಕರ್ಯಕ್ಕಾಗಿ ದುಡಿಯುವ ಜನ ಸಾಮಾನ್ಯರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಕೊಡುಗೆ ತಾವು ಸರಕಾರಕ್ಕೆ ನೀಡುವುದರ ಅರಿವಿಲ್ಲ. ಅರಿವಿರುತ್ತಿದ್ದರೆ ಜನ ಸಾಮಾನ್ಯರ ಶ್ರಮದ ಹೆಚ್ಚಿನ ಲಾಭ ಪಡೆಯುತ್ತಿರುವ ಪರಾವಲಂಬಿಗಳು ಸ್ವಾವಲಂಬಿಗಳಂತೆ ಬಿಂಬಿಸಿಕೊಳ್ಳುವುದನ್ನು ವಿರೋಧಿಸುತ್ತಿದ್ದರು.

ಆದುದರಿಂದ ಈ ಸವಲತ್ತುಗಳನ್ನು ನೀಡುತ್ತಿದ್ದೇವೆ ಎಂದು ಕಾಂಗ್ರೆಸ್ ಭಕ್ತರು ಬೀಗುವ ಮತ್ತು ಬಿಜೆಪಿ ಭಕ್ತರು ಶೋಕಿಸುವ ಅಗತ್ಯವಿಲ್ಲ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಮರಣೆ | ಎಲ್ಲಾ ಕಾಲಕ್ಕೂ ಸಲ್ಲುವ ಅರಸು ಚಿಂತನೆ

ಇಂದು ದೇವರಾಜ ಅರಸು ಅವರು ಇಲ್ಲವಾದ ದಿನ. ಅರಸು ಹೇಗಿದ್ದರು, ಎಂತಹವರು,...

ಕುಸ್ತಿಪಟುಗಳ ಪ್ರತಿಭಟನೆ | ಸಾಕ್ಷಿ ಮಲಿಕ್, ವಿನೇಶಾ ಪೋಗಟ್ ಅವರದು ಮಾದರಿ ನಾಯಕತ್ವ

ಸಾಕ್ಷಿ ಮಲಿಕ್ ಮತ್ತು ವಿನೇಶಾ ಪೋಗಟ್ ನಿಜವಾದ ನಾಯಕತ್ವ ಹೇಗಿರಬೇಕು ಎನ್ನುವುದನ್ನು...

ಎವರೆಸ್ಟ್ ಎತ್ತರ ಅಳೆದ ರೋಚಕತೆ ಮತ್ತು ಏರುವ ಧಾವಂತದಲ್ಲಿ ಪ್ರಾಣ ಕಳೆದುಕೊಳ್ಳುವ ಪರ್ವತಾರೋಹಿಗಳು

ಎವರೆಸ್ಟ್ ಏರಲು ಮುಖ್ಯವಾಗಿ ಎರಡು ದಾರಿಗಳಿವೆ. ನೇಪಾಳದ ಕಡೆಯಿಂದ ಆಗ್ನೇಯ ಪರ್ವತದ...

ನಮ್ಮ ಡಿಸಿಎಂ | ಬಿಕ್ಕಟ್ಟುಗಳನ್ನೇ ಮೆಟ್ಟಿಲುಗಳನ್ನಾಗಿ ಬಳಸಿ ಬೆಳೆದ ಶಿವಕುಮಾರ್‌

ರಾಜಕಾರಣವೆಂದರೆ ಏರಿಳಿತದ ಜತೆಗೆ ಮುಳ್ಳಿನ ಮೇಲಿನ ನಡಿಗೆ ಕೂಡ ಎನ್ನುವುದನ್ನು ಅನುಭವದಿಂದ...