ನಂದಿನಿ v/s ಅಮುಲ್‌: ರೈತನ ಬದುಕಿನ ಮೇಲೆ ಡಬಲ್‌ ಎಂಜಿನ್‌ ಸರ್ಕಾರದ ರೋಡ್ ರೋಲರ್!

Date:

ಪ್ರವಾಹ ಬಂದು ರೈತರ ಹಾಹಾಕಾರ ಎದ್ದಾಗಲೂ ಬಾರದ ಡಬಲ್ ಎಂಜಿನ್ ಸರ್ಕಾರ, ಪ್ರಸ್ತುತ ರೈತನ ಬದುಕಿನ ಮೇಲೆ ರೋಡ್ ರೋಲರ್ ಹತ್ತಿಸಲು ಪ್ರಯತ್ನಿಸುತ್ತಿದೆ. ನಮ್ಮ ನಂದಿನಿ ಜಾಗತಿಕ ಬ್ರಾಂಡ್ ಆಗಲಿ, ಬಿಡಲಿ. ಅದು ನಮ್ಮ ನಂದಿನಿ ಆಗಿದ್ದರೆ ಸಾಕು. ಅಮುಲ್ ಇಲ್ಲಿ ಮಾತ್ರ ಬೇಡ.

ಅಮುಲ್ ಒಂದು ಹಾಲು ಉತ್ಪಾದಕರ ರೈತ ಸಂಘಟನೆಯ ಡೈರಿ. ಅದನ್ನು ಕಟ್ಟಿದ್ದು ಉತ್ತರ ಭಾರತದ ದಂಡನಾಯಕರುಗಳಲ್ಲ. ದಕ್ಷಿಣ ಭಾರತದ ವರ್ಗೀಸ್ ಕುರಿಯನ್. ಅದನ್ನು ‘ಆಪರೇಷನ್ ಫ್ಲಡ್’ ಹೆಸರಲ್ಲಿ ಕ್ರಾಂತಿಕಾರಿ ರೀತಿಯಲ್ಲಿ ಮಾಡಲು ಯೋಜನೆ ರೂಪಿಸಿದ್ದು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ. ಅಲ್ಲಿಗೆ ಬೊಮ್ಮಾಯಿಯವರು ಕನವರಿಸುವಂತೆ ಅದು ಬಿಜೆಪಿಯೂ ಅಲ್ಲ. ಅದು ಎಪ್ಪತ್ತರ ದಶಕದ ಬಿಜೆಪಿ. ಇನ್ನೂ ಆಗ ಜನ್ಮತಾಳುವ ವಿಚಾರ ಕೂಡ ಮಾಡಿರಲಿಲ್ಲ.

ಅದೇ ಕಾಲದಲ್ಲಿ ಅದೇ ಕಾಂಗ್ರೆಸಿನ ಅಂದಿನ ಕರ್ನಾಟಕದ ಮುಖ್ಯಮಂತ್ರಿ ದೇವರಾಜ ಅರಸು ಅಮುಲ್ ಮಾದರಿಯಲ್ಲಿ ಕರ್ನಾಟಕದ ರೈತರ ಸಹಕಾರ ಸಂಘಗಳನ್ನು ಉತ್ತೇಜಿಸಿ ವಿಶ್ವಬ್ಯಾಂಕ್ ನೆರವಿನೊಂದಿಗೆ ಕರ್ನಾಟಕ ಡೈರಿ ಅಭಿವೃದ್ಧಿ ನಿಗಮ ಶುರು ಮಾಡುತ್ತಾರೆ. ಅದೇ ಮುಂದೆ ಕೆಎಂಎಫ್ -ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ ಎಂದು ಮರು ನಾಮಕರಣಗೊಳ್ಳುತ್ತದೆ.

ಅಲ್ಲಿಗೆ ಅಮುಲ್ ಮತ್ತು ನಂದಿನಿ ಎರಡೂ ಕಾಂಗ್ರೆಸ್ಸು ಅಂತಾಯಿತು.

ಉಳಿದೆಲ್ಲ ಇತಿಹಾಸ ಅಂಕಿ ಅಂಶ ಆಮೇಲೆ. ಆದರೆ ಗಮನಿಸಿ ಈ ಎರಡೂ ಸಂಸ್ಥೆಗಳು ಆಯಾ ಪ್ರದೇಶದ ರೈತರೇ ಹುಟ್ಟು ಹಾಕಿಕೊಂಡ ಸಂಘಟನೆಗಳು. ಇವು ಬೇರೆ ಬೇರೆ ಹಾಲಿನ ಬ್ರಾಂಡುಗಳಂತೆ ಖಾಸಗಿ ಲಾಭೋದ್ಯಮಗಳಲ್ಲ.

ಕನ್ನಡದ ರೈತ, ದೆಹಲಿಯ ರೈತ, ತಮಿಳಿನ ರೈತ, ಗುಜರಾತಿ ರೈತ ಇತ್ಯಾದಿ ಎಲ್ಲರ ಜೊತೆಗೂ ಇದ್ದಾನೆ. ಆದರೆ ಯಾವ ರೈತನೂ ಇನ್ನೊಬ್ಬ ರೈತನ ಕಾಯಕಕ್ಕೆ ಕಲ್ಲು ಹಾಕಲಾರ. ಇಲ್ಲಿ ಅಮುಲ್ ಯಾಕೆ ಬೇಡ ಅಂದರೆ ಇಲ್ಲಿ ನಂದಿನಿ ಇದೆ. ಅಮುಲ್ ಮತ್ತು ನಂದಿನಿ ಮಧ್ಯೆ ಈ ತರದ ಅನಾರೋಗ್ಯಕರ ಪೈಪೋಟಿ ಕೇವಲ ಗುಜರಾತಿ ರಾಜಕಾರಣಿಗಳ ಚಿಲ್ಲರೆತನ ಅಷ್ಟೇ!

ಬೇರೆ ಬ್ರಾಂಡಿನ ಹಾಲನ್ನು ಯಾಕೆ ವಿರೋಧಿಸುವುದಿಲ್ಲ ಅಥವಾ ವಿರೋಧಿಸಬಾರದು ಅಂದರೆ ಅವೆಲ್ಲ ಖಾಸಗಿ ಉದ್ಯಮಗಳು. ಈ ದೇಶದ ಪ್ರತಿಯೊಬ್ಬ ಉದ್ಯಮಿ ಎಲ್ಲಿಯೂ ಯಾವುದೇ ಕಾನೂನುಬದ್ಧ ಉದ್ಯಮ ನಡೆಸುವ ಮೂಲಭೂತ ಹಕ್ಕನ್ನು ಹೊಂದಿದ್ದಾನೆ. ಆದರೆ ಬಹುತೇಕ ಖಾಸಗಿ ಡೈರಿಗಳು ರೈತನಿಗೆ ಕೆಎಂಎಫ್ ದರಕ್ಕಿಂತಲೂ ಹೆಚ್ಚು ಹಣ ಕೊಟ್ಟೇ ಹಾಲು ಖರೀದಿಸಬೇಕಾಗುತ್ತದೆ. ಯಾಕೆಂದರೆ ಕೆಎಂಎಫ್ ದರದೊಂದಿಗೆ ಸರ್ಕಾರ ಕೂಡ ರೈತನಿಗೆ ಸಬ್ಸಿಡಿ ಇತ್ಯಾದಿ ಸೌಲಭ್ಯಗಳನ್ನು ಕೊಡುತ್ತಿದೆ. ಇದನ್ನು ಸರಿದೂಗಿಸಲು ಯಾವುದೇ ಖಾಸಗಿ ಡೈರಿಗೆ ಸಾಧ್ಯವಾಗುವುದೇ ಇಲ್ಲ. ಆದ್ದರಿಂದಲೇ ಖಾಸಗಿ ಡೈರಿಗಳ ಹಾಲು ದುಬಾರಿ ಮತ್ತು ನಂದಿನಿಗಿಂತ ಸ್ವಲ್ಪ ಕಳಪೆ ಗುಣಮಟ್ಟದ್ದಾಗಿರುತ್ತದೆ. ಆದ್ದರಿಂದಲೇ ನಂದಿನಿ ಖಾಲಿ ಆದಾಗ ಅಥವಾ ಲಭ್ಯವಿಲ್ಲದಾಗ ಮಾತ್ರ ಬೇರೆ ಬ್ರಾಂಡಿನ ಹಾಲನ್ನು ಜನ ಖರೀದಿಸುವುದು.

ಇತ್ತೀಚಿಗೆ ಕೆಲ ರೈತರು ಮತ್ತು ಉದ್ಯಮಿಗಳು ತರುತ್ತಿರುವ ಆರ್ಗ್ಯಾನಿಕ್‌ ಹಾಲು ಗುಣಮಟ್ಟದ್ದು ಮತ್ತು ಬಹಳ ದುಬಾರಿ. ಅವರವರ ಮಾರ್ಕೆಟ್ಟು ಅವರವರಿಗೆ ಬಿಡಿ. ನ್ಯಾನೋ ಕಾರಿನ ಮಾರ್ಕೆಟ್ಟು, ಮರ್ಸಿಡೀಸ್ ಕಾರಿನ ಮಾರ್ಕೆಟ್ಟು ಬೇರೆ ಬೇರೆ ತಾನೇ? ಹಾಗೆಯೇ ಇದು.

ಬೇರೆಯ ಬ್ರಾಂಡಿನ ತರ ಅಮುಲ್ ಯಾಕೆ ಬೇಡ ಅಂತೀರಾ. ಕಳೆದ ಅನೇಕ ವರ್ಷಗಳಿಂದ ಅಮುಲ್ ಮೊಸರು, ಬೆಣ್ಣೆ, ಚೀಸ್, ಐಸ್ ಕ್ರೀಮ್ ಅಷ್ಟೇ ಅಲ್ಲ ಟೆಟ್ರಾ ಪ್ಯಾಕ್ ಹಾಲು ಕೂಡ ಕರ್ನಾಟಕದಲ್ಲಿ ಲಭ್ಯವಿದೆ. ಈಗ ಅಮುಲ್ ಬೆಳಗ್ಗೆ ಪೌಚ್‌ನಲ್ಲಿ ಬರುವ ತಾಜಾ ಹಾಲಿನ ಮಾರ್ಕೆಟ್ಟಿಗೆ ಬರುವ ಯೋಚನೆಯಲ್ಲಿದೆ.

ಇಂದು ಬೆಳಗ್ಗೆ ಸಂಗ್ರಹಿಸಿದ ಹಾಲನ್ನು ಇಡೀ ದಿನ ಸಂಸ್ಕರಣೆ ಮಾಡಿ ಬೇರೆ ಬೇರೆ ಕೊಬ್ಬಿನಾಂಶದ ಹಾಲನ್ನು ವರ್ಗೀಕರಿಸಿ, ಪಾಶ್ಚೀಕರಿಸಿ, ಶೀತಲೀಕರಿಸಿ, ಪ್ಯಾಕ್ ಮಾಡುವಷ್ಟರಲ್ಲಿ ರಾತ್ರಿ 12 ಗಂಟೆ ದಾಟಿರುತ್ತದೆ. ಅಲ್ಲಿಂದ ಹಾಲಿನ ಪ್ಯಾಕುಗಳನ್ನು ಶೀತಲೀಕರಿಸಿದ ವಾಹನಗಳ ಮೂಲಕ ಡೀಲರ್ ಮತ್ತು ಏಜೆಂಟ್ ಮತ್ತು ರಿಟೇಲರ್ ಅಂಗಡಿಗಳಿಗೆ ತಲುಪುವಷ್ಟರಲ್ಲಿ ಬೆಳಗಿನ ನಾಲ್ಕು ಗಂಟೆ ಆಗುತ್ತದೆ. ಬೆಳಗಿನ ಹತ್ತು ಗಂಟೆಯ ಹೊತ್ತಿಗೆ ಬಹುತೇಕ ಸ್ಟಾಕ್ ಖಾಲಿ ಆಗುತ್ತದೆ. ಅಷ್ಟಿಷ್ಟು ಉಳಿಕೆ ಹಾಲನ್ನು ಅಂಗಡಿಗಳು ಫ್ರಿಜ್ ಅಲ್ಲಿ ಇಟ್ಟು ಸಂಜೆವರೆಗೆ ಮಾರುತ್ತವೆ -ಒಂದು ರೂಪಾಯಿ ಎರಡು ರೂಪಾಯಿ ಹೆಚ್ಚು ಬೆಲೆಗೆ.

ಈ ಇಡೀ ಪ್ರಕ್ರಿಯೆ ಸಮರ್ಥವಾಗಿ ನಡೆಯಲು ಹಾಲು ಸಂಸ್ಕರಣೆಯೂ ಗ್ರಾಹಕ ನಗರಗಳ ಆಸುಪಾಸಲ್ಲೆ ಇರಬೇಕು. ಆದ್ದರಿಂದಲೇ ನಂದಿನಿ ಡೈರಿಗಳು ಪ್ರತಿ ಜಿಲ್ಲಾ ಕೇಂದ್ರದಲ್ಲಿಯೂ ಇರುವುದು. ಅಮುಲ್ ಒಂದು ಹೆಜ್ಜೆ ಮುಂದೆ ಹೋಗಿ ದೇಶಾದ್ಯಂತ ಸಂಸ್ಕರಣಾ ಕೇಂದ್ರ ಅಥವಾ ಪ್ಯಾಕಿಂಗ್ ಸ್ಟೇಷನ್ ಹೊಂದಿದೆ. ದೂರದ ಅಸ್ಸಾಂ ಅಷ್ಟೇ ಅಲ್ಲ ಬೆಂಗಳೂರಿನ ಪಕ್ಕವೂ ಇದೆ.

ಅರೆ ಇಡೀ ದೇಶಕ್ಕೆ ಕುಡಿಸುವಷ್ಟು ಹಾಲು ಉತ್ಪಾದಿಸುತ್ತಾರಾ ಗುಜರಾತಿಗಳು ಅಂತೀರಾ?

ಇಲ್ಲ. ಅದೇ ಗುಜರಾತಿ ಬುದ್ಧಿ ಅನ್ನೋದು. ಅಮುಲ್ ಬೇರೆ ಬೇರೆ ರಾಜ್ಯಗಳಲ್ಲಿಯೂ ಹಾಲು ಖರೀದಿ ಮಾಡುತ್ತದೆ. ಅಷ್ಟೇ ಅಲ್ಲ ನಮ್ಮ ನಂದಿನಿ ಪ್ರತಿದಿನ ಸುಮಾರು ತೊಂಬತ್ತು ಲಕ್ಷ ಲೀಟರ್ ಹಾಲು ಸಂಗ್ರಹ ಮಾಡುತ್ತದೆ. ಹಾಲಿನ ಉತ್ಪಾದನೆ ಆಗಲಿ ಬೇಡಿಕೆ ಆಗಲಿ ವರ್ಷವಿಡೀ ಒಂದೇ ತರ ಇರುವುದಿಲ್ಲ. ದೇಶದ ಅನೇಕ ಹಾಲು ಕೊರತೆ ಇರುವ ರಾಜ್ಯಗಳಿಗೆ ನಂದಿನಿ ಹಾಲು ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತದೆ. ಅವುಗಳಲ್ಲಿ ಅಮುಲ್ ಕೂಡ ಒಂದು.

ಅಮುಲ್ ನಮ್ಮ ಹಾಲನ್ನು ಗುಜರಾತಿಗೆ ಕೊಂಡೊಯ್ದು ಪ್ಯಾಕ್ ಮಾಡಿ ಸಾವಿರಾರು ಕಿ.ಮೀ ಶೀತಲ ಸಾಗಣೆ ಮಾಡಿ ಪೈಪೋಟಿ ದರದಲ್ಲಿ ಇಲ್ಲಿ ಮಾರಲು ಆಗುವುದೇ ಇಲ್ಲ. ಬೆಂಗಳೂರಿನ ಆಸುಪಾಸಲ್ಲಿ ಡೈರಿ ತೆರೆದು ಇಲ್ಲಿನ ರೈತರಿಗೆ ಹೆಚ್ಚಿನ ಹಣ ಕೊಟ್ಟು ಕಚ್ಚಾ ಹಾಲು ಖರೀದಿಸಬೇಕಾಗುತ್ತದೆ. ಆಗ ಡಬಲ್ ಎಂಜಿನ್ ಸರ್ಕಾರ ತನ್ನ ಇಂದಿನ ಗುಜರಾತಿ ಬುದ್ಧಿ ಉಪಯೋಗಿಸಿ ಕರ್ನಾಟಕ ಸರಕಾರ ರೈತರಿಗೆ ಕೊಡುವ ಸಬ್ಸಿಡಿ ಕಟಾಯಿಸಿ (ಅಡುಗೆ ಗ್ಯಾಸ್ ಸಬ್ಸಿಡಿ ನೆನಪಿದೆಯಾ) ಬೆಂಬಲ ಬೆಲೆ ಕಟಾಯಿಸಿಬಿಟ್ಟರೆ ಅಮುಲ್ ಕೊಟ್ಟ ದರಕ್ಕೆ ನಮ್ಮ ರೈತ ಹಾಲು ಮಾರುವ ಸ್ಥಿತಿ ಬರುವ ಅಪಾಯ ಇದೆ.

ಪ್ರವಾಹ ಬಂದು ರೈತರ ಹಾಹಾಕಾರ ಎದ್ದಾಗಲೂ ಬಾರದ ಡಬಲ್ ಎಂಜಿನ್ ಸರ್ಕಾರ, ಪ್ರಸ್ತುತ ರೈತನ ಬದುಕಿನ ಮೇಲೆ ರೋಡ್ ರೋಲರ್ ಹತ್ತಿಸಲು ಪ್ರಯತ್ನಿಸುತ್ತಿದೆ. ನಮ್ಮ ನಂದಿನಿ ಜಾಗತಿಕ ಬ್ರಾಂಡ್ ಆಗಲಿ, ಬಿಡಲಿ. ಅದು ನಮ್ಮ ನಂದಿನಿ ಆಗಿದ್ದರೆ ಸಾಕು. ಅಮುಲ್ ಇಲ್ಲಿ ಮಾತ್ರ ಬೇಡ.

ಡಾ. ಬಸವರಾಜ್‌ ಇಟ್ನಾಳ್‌
+ posts

ಪತ್ರಕರ್ತ, ಚಿತ್ರನಿರ್ದೇಶಕ

ಪೋಸ್ಟ್ ಹಂಚಿಕೊಳ್ಳಿ:

ಡಾ. ಬಸವರಾಜ್‌ ಇಟ್ನಾಳ್‌
ಡಾ. ಬಸವರಾಜ್‌ ಇಟ್ನಾಳ್‌
ಪತ್ರಕರ್ತ, ಚಿತ್ರನಿರ್ದೇಶಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಹಿತ್ಯ ಜಗತ್ತಿನ ಅಂತರ್ಜಲ ಎಸ್‌ ದಿವಾಕರ್

ಎಸ್‌ ದಿವಾಕರ್ ಅವರು ಎಂಬತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ‘ಎಸ್‌ ದಿವಾಕರ್...

ಹೊಸ ಓದು | ಜಡಗೊಂಡ ಓದುಗನನ್ನು ಬೆಚ್ಚಿ ಬೀಳಿಸುವ ‘ನಿಷೇಧ’: ಹ ಮಾ ರಾಮಚಂದ್ರ ಬರೆಹ

ಸಾಹಿತ್ಯ ಎನ್ನುವುದು ಕಠಿಣ ಶಬ್ದಗಳಲ್ಲಿ ಕಳೆದುಹೋಗದೆ, ಜನರ ಹೃದಯಕ್ಕೆ ತಲುಪುವಂತಾಗಬೇಕು, ಬತ್ತಿದೆದೆಗಳಲ್ಲಿ...

ಜಾತಿ ಆಧಾರಿತ ಸಮೀಕ್ಷಾ ವರದಿಗೆ ವಿರೋಧ ಯಾಕೆ?

ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ತನ್ನ ಸಮೀಕ್ಶಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ....

ಜಾತಿ ಗಣತಿಗೆ ವಿರೋಧ; ನಿರ್ದಯಿ ಸಾಮಾಜಿಕ ದ್ರೋಹ

ಹಿಂದುತ್ವ ಪ್ರೇರಿತ ರಾಜಕಾರಣವನ್ನು ಜೀವಂತವಾಗಿಟ್ಟುಕೊಳ್ಳಲು ದಲಿತ ಹಿಂದುಳಿದ ವರ್ಗಗಳ ಹಿತರಕ್ಷಣೆಯ ಮಾತಾಡುತ್ತಿರುವ...