ಎನ್‌ವಿಡಿಯಾ ಗೂಢಚರ್ಯೆ ಭೀತಿ: ಚೀನಾದ ಮೇಲಿನ ಚಿಪ್ ದಿಗ್ಬಂಧನ ವಿಫಲ, ಒಳಜಗಳಕ್ಕೆ ಇಳಿದ ಅಮೆರಿಕದ ಆಡಳಿತ ವರ್ಗ

Date:

ನವೆಂಬರ್ 18-19ರಂದು ಚೀನಾದ ಶೆನ್‌ಜೆನ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಅದಕ್ಕೆ ಕೆಲವೇ ದಿನಗಳ ಮೊದಲು ಈ ಹನಿ ಟ್ರ್ಯಾಪ್ ಹಗರಣ ಸ್ಫೋಟಗೊಂಡಿದೆ.‌ ಎರಡೂ ದೇಶಗಳಲ್ಲಿ ತಲ್ಲಣ ಉಂಟುಮಾಡಿದೆ. ಅದರ ಹಿಂದೆ ವ್ಯಾಪಾರ, ಲಾಭ, ಹಿಡಿತ ಮುಖ್ಯವಾಗಿದೆ.

ಎನ್‌ವಿಡಿಯಾ ಗೂಢಚರ್ಯೆ ಹಗರಣವು ಚೀನಾದ ವಿರುದ್ಧ ಆರ್ಥಿಕ ಯುದ್ಧವನ್ನು ಹೇಗೆ ನಡೆಸಬೇಕು ಎಂಬ ವಿಷಯದಲ್ಲಿ ಅಮೆರಿಕದ ಆಡಳಿತ ವರ್ಗದೊಳಗೇ ನಡೆಯುತ್ತಿರುವ ಒಂದು ಆಂತರಿಕ ಕಿತ್ತಾಟ. ಒಂದು ಬಣವು ಚೀನಾಕ್ಕೆ ಸ್ವಲ್ಪ ಕಡಿಮೆ ಸಾಮರ್ಥ್ಯದ ಚಿಪ್‌ಗಳನ್ನು ಮಾರಿ, ಚೀನಾವನ್ನು ತನ್ನ ಮೇಲೆಯೇ ಅವಲಂಬಿತವಾಗಿರುವಂತೆ ಮಾಡಲು ಬಯಸುತ್ತದೆ. ಇನ್ನೊಂದು ಬಣವು ಚೀನಾಕ್ಕೆ ಚಿಪ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಪಟ್ಟು ಹಿಡಿದಿದೆ. ಈಗ ಅಮೆರಿಕದ ಭದ್ರತಾ ಸಂಸ್ಥೆಗಳು ತಮ್ಮ ವಾದದ ಸಮರ್ಥನೆಗೆ ಪ್ರಕರಣವನ್ನು ಬಳಸಿಕೊಳ್ಳುತ್ತಿವೆ. ಮತ್ತು ಚೀನೀಯರ ವಿರುದ್ಧ ಹೊಸ ಗೂಢಚರ್ಯೆಯ ಭಯ ಹುಟ್ಟಿಸಲು ‘ಸೆಕ್ಸ್ ಮತ್ತು ಬೇಹುಗಾರಿಕೆ’ ಕಥೆಯ ಲಾಭಪಡೆದುಕೊಳ್ಳುತ್ತಿವೆ. ಈ ಎಲ್ಲಾ ಜಗಳದ ಹಿಂದಿರುವ ನಿಜವಾದ ಕಾರಣವೆಂದರೆ, ಚೀನಾದ ಮೇಲೆ ಅಮೆರಿಕೆ ಹೇರುತ್ತಿರುವ ಚಿಪ್ ದಿಗ್ಬಂಧನ ವಿಫಲವಾಗುತ್ತಿರುವುದು!

- Advertisement -

ನವೆಂಬರ್ 8 ರಂದು, ಎನ್‌ವಿಡಿಯಾ ಕಂಪನಿಯ ಸಿಇಒ ಜೆನ್ಸನ್ ಹುವಾಂಗ್ ತಮಗೊಂದು ಅಫೇರ್ ಇತ್ತು ಎಂದು ತಮ್ಮ ಉದ್ಯೋಗಿಗಳಿಗೆ ಇಮೇಲ್ ಮೂಲಕ ತಿಳಿಸಿದರು. ಆದರೆ ಆ ಮಹಿಳೆಯ ಹೆಸರನ್ನು ಅವರು ಹೇಳಲಿಲ್ಲ. ಆದರೆ ‘ನ್ಯೂಯಾರ್ಕ್ ಟೈಮ್ಸ್’ ಮತ್ತು ‘ಫೈನಾನ್ಷಿಯಲ್ ಟೈಮ್ಸ್’ ಪತ್ರಿಕೆಗಳು ಆಕೆಯನ್ನು ಚೀನಾ ಪ್ರಜೆ ಆಲಿಸ್ ಹುವಾಂಗ್ ಎಂದು ಗುರುತಿಸಿದವು. ಆಕೆ ಎನ್‌ವಿಡಿಯಾ ಚಿಪ್‌ಗಳನ್ನು ಖರೀದಿಸುವ ಸಿಂಗಾಪುರದ ಡೇಟಾ ಸೆಂಟರ್ ಕಂಪನಿ ‘ಮೆಗಾಸ್ಪೀಡ್’ನ ಮಾಜಿ ಅಧಿಕಾರಿ. ಚೀನಾದ ಗುಪ್ತಚರ ಇಲಾಖೆ ಆಕೆಯನ್ನು ನೇಮಿಸಿಕೊಂಡಿತ್ತು ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಆರೋಪಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಶ್ರೀನಿವಾಸರಾಜು ದೊಡ್ಡೇರಿ ಅವರ ‘ಬಾಬಾ...

ಕನ್ನಡದ ಅಪರೂಪದ ಬರಹಗಾರ, ಅನುವಾದಕರಾದ ಶ್ರೀನಿವಾಸರಾಜು ದೊಡ್ಡೇರಿ ಅವರು ಅನುವಾದಿಸಿರುವ 'ಬಾಬಾ ಸಾಹೇಬ್' ಕೃತಿಯು ಇಂದು ಭಾನುವಾರ ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಕೃತಿಯ ಒಂದು ಆಯ್ದ ಭಾಗ... ಈದಿನ ಓದುಗರಿಗಾಗಿ... 'ಭಾರತದಲ್ಲಿ...

ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ...

ಒಬಿಸಿ ಮೀಸಲಾತಿ ಸೌಲಭ್ಯ ಪಡೆಯಲು 'ಕೆನೆಪದರ' ನಿರ್ಧರಿಸುವಾಗ ಕೇವಲ ಪೋಷಕರ ವಾರ್ಷಿಕ ವೇತನವನ್ನೇ ಏಕೈಕ ಮಾನದಂಡವಾಗಿ ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಮಾರ್ಚ್ ತೀರ್ಪನ್ನು ಪುನರುಚ್ಚರಿಸಿದೆ. 1993ರ ಮೂಲ ನಿಯಮಗಳೇನು? ಕೆಳಹಂತದ...

ಮೈಕ್ರೋಸಾಫ್ಟ್‌ ಸರ್ವರ್ ಕ್ರಾಶ್; ತಲ್ಲಣಗೊಂಡ ಆನ್‌ ಲೈನ್‌ ಜಗತ್ತು!

ಆಧುನಿಕ ಕಚೇರಿ ವ್ಯವಹಾರ ಮತ್ತು ಡಿಜಿಟಲ್ ಸಂವಹನದ ಬೆನ್ನೆಲುಬಂತಿರುವ ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್‌ನ ಸರ್ವರ್‌ಗಳಲ್ಲಿ ಕಾಣಿಸಿಕೊಂಡ ಅನಿರೀಕ್ಷಿತ ತಾಂತ್ರಿಕ ದೋಷವು ಜಾಗತಿಕ ಮಟ್ಟದಲ್ಲಿ ಭಾರಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಗುರುವಾರ (ನವೆಂಬರ್ 12) ಸಂಜೆಯಿಂದ...

ಆದರೆ ಎನ್‌ವಿಡಿಯಾ ಕಂಪನಿ ಈ ಪ್ರಕರಣದಿಂದ ರಾಷ್ಟ್ರೀಯ ಭದ್ರತೆಗಾಗಲಿ ಅಥವಾ ಎನ್‌ವಿಡಿಯಾದ ರಹಸ್ಯಗಳಿಗಾಗಲಿ ಯಾವುದೇ ಧಕ್ಕೆಯಾಗಿಲ್ಲ ಎಂದು ಹೇಳುತ್ತಿದೆ. ಹಾಗೆ ಹೇಳುತ್ತಲೇ ಕಂಪನಿಯ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ. ಹುವಾಂಗ್ ಸಿಇಒ ಆಗಿಯೇ ಮುಂದುವರಿದಿದ್ದಾರೆ. ಆದರೆ ನವೆಂಬರ್ 9ರಂದು ಕಂಪನಿಯ ಷೇರುಗಳು ವಿಪರೀತ ಕುಸಿದಿದೆ. ಒಂದೇ ದಿನದಲ್ಲಿ ಸುಮಾರು 190 ಬಿಲಿಯನ್ ಡಾಲರ್ ಮೌಲ್ಯವನ್ನು ಕಳೆದುಕೊಂಡಿದೆ.

ಕೃತಕ ಬುದ್ಧಿಮತ್ತೆ ನಡೆಸುವ ಅತ್ಯಾಧುನಿಕ ಚಿಪ್‌ಗಳ ಮಾರುಕಟ್ಟೆಯಲ್ಲಿ ಎನ್‌ವಿಡಿಯಾದ್ದೇ ಏಕಸ್ವಾಮ್ಯ. ತನ್ನ ಅತ್ಯುತ್ತಮ ಚಿಪ್‌ಗಳನ್ನು ಚೀನಾಕ್ಕೆ ಮಾರಾಟ ಮಾಡದಂತೆ ಅಮೆರಿಕ ಸರ್ಕಾರ ಎನ್‌ವಿಡಿಯಾಕ್ಕೆ ನಿರ್ಬಂಧ ಹೇರಿದೆ.

jensan1
ಜೆನ್ಸನ್ ಹುವಾಂಗ್, ಆಲಿಸ್

ಎರಡು ಬಣಗಳು, ಒಂದೇ ಗುರಿ

ಚೀನಾದೊಂದಿಗೆ ವ್ಯಾಪಾರ ಮುಂದುವರಿಸಬೇಕು ಎನ್ನುವ ಬಣದ ನೇತೃತ್ವವನ್ನು ಹುವಾಂಗ್ ವಹಿಸಿದ್ದಾರೆ. ಅವರ ಉದ್ದೇಶ ಸ್ಪಷ್ಟ-ಲಾಭ. ಚೀನಾ ವಿಶ್ವದ ಎರಡನೇ ಅತಿದೊಡ್ಡ ಕಂಪ್ಯೂಟಿಂಗ್ ಮಾರುಕಟ್ಟೆ. ಒಂದು ಕಾಲದಲ್ಲಿ ಚೀನಾದ ಅತ್ಯಾಧುನಿಕ ಚಿಪ್ ಮಾರುಕಟ್ಟೆಯ ಬಹುಪಾಲು ಎನ್‌ವಿಡಿಯಾ ಕೈಯಲ್ಲಿತ್ತು, ಆದರೆ ಈಗ ಹೆಚ್ಚಿನ ಪಾಲನ್ನು ಕಳೆದುಕೊಂಡಿದ್ದೇವೆ ಎನ್ನುತ್ತಾರೆ ಹುವಾಂಗ್. ಅಮೆರಿಕ ಹೇರುವ ಪ್ರತಿಯೊಂದು ನಿಷೇಧವೂ, ಚೀನಾದ ಮಾರುಕಟ್ಟೆಯನ್ನು ಅಲ್ಲಿನ ಸ್ಥಳೀಯ ಚಿಪ್ ಕಂಪನಿಗಳಿಗೇ ಬಿಟ್ಟುಕೊಟ್ಟಂತಾಗುತ್ತಿದೆ. ಹುವಾಂಗ್ ಅವರ ಲಾಬಿಯ ನಂತರ, ಡಿಸೆಂಬರ್ 8, 2025ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎನ್‌ವಿಡಿಯಾ ತನ್ನ ಎರಡನೇ ಅತ್ಯಂತ ಶಕ್ತಿಶಾಲಿ ಚಿಪ್ ಅನ್ನು ಚೀನಾಕ್ಕೆ ಮಾರಬಹುದು ಮತ್ತು ಅದರ ಮಾರಾಟದ ಕಾಲು ಭಾಗದಷ್ಟು ಹಣ ಅಮೆರಿಕ ಸರ್ಕಾರಕ್ಕೆ ಸಲ್ಲಬೇಕು ಎಂದು ಘೋಷಿಸಿದರು. ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಈ ಚಿಪ್ ನಿಯಂತ್ರಣಗಳನ್ನು ಚೀನಾದೊಂದಿಗಿನ ವ್ಯಾಪಾರ ಮಾತುಕತೆಯಲ್ಲಿ “ಚೌಕಾಸಿಯ ದಾಳ” ಎಂದು ಕರೆದರು. ಅಷ್ಟೇ ಅಲ್ಲ, ಟ್ರಂಪ್ ಅವರ ವೈಟ್ ಹೌಸ್ ಬಾಲ್‌ರೂಮ್ ನಿಧಿಗೆ ಎನ್‌ವಿಡಿಯಾ 25 ಮಿಲಿಯನ್ ಡಾಲರ್ ನೀಡುವುದಾಗಿ ಒಪ್ಪಿಕೊಂಡಿತು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಇದನ್ನು ಓದಿದ್ದೀರಾ?: ​’ಅಪ್ರಾಪ್ತೆಯ ಜೊತೆ ವಿವಾಹವಾದರೆ ಪೋಕ್ಸೊದಿಂದ ಪಾರಾಗುವುದಿಲ್ಲ’: ದೆಹಲಿ ಹೈಕೋರ್ಟ್

“ಚೀನೀಯರು ನಮ್ಮ ಶತ್ರುಗಳಲ್ಲ” ಎಂದು ಹುವಾಂಗ್ ಹೇಳುತ್ತಾರೆ. ಇದು ಒಬ್ಬ ವ್ಯಾಪಾರಿಯ ಮಾತು. ಆದರೆ ಸರ್ಕಾರದ ಮಟ್ಟದಲ್ಲಿ ಅವರ ಬಣ ಇನ್ನೂ ನೇರವಾದ ಲೆಕ್ಕಾಚಾರ ಮುಂದಿಡುತ್ತದೆ: ಚೀನಾಕ್ಕೆ ಚಿಪ್ ಮಾರುವುದರಿಂದ ಬರುವ ದುಡ್ಡು ಅಮೆರಿಕದ ಸಂಶೋಧನೆಗೆ ಸಿಗುತ್ತದೆ ಮತ್ತು ಚೀನಾ ನಮ್ಮ ತಂತ್ರಜ್ಞಾನವನ್ನೇ ನೆಚ್ಚಿಕೊಳ್ಳುವಂತಾಗುತ್ತದೆ. ಹೀಗೆ ಒಮ್ಮೆ ವಿದೇಶಿ ಚಿಪ್‌ಗಳಿಗೆ ಒಗ್ಗಿಕೊಂಡರೆ, ಚೀನಾ ತಾನಾಗಿ ಸ್ವಂತ ಉದ್ಯಮ ಪ್ರಾರಂಭಿಸುವುದಿಲ್ಲ. ಬದಲಿಗೆ ನಮಗೇ ದುಡ್ಡು ಕೊಡುತ್ತಿರುತ್ತದೆ. ನಮಗೆ ಬೇಕಾದಾಗ ಸರಬರಾಜು ನಿಲ್ಲಿಸಿ ಅವರನ್ನು ನಿಯಂತ್ರಿಸಬಹುದು ಎಂಬುದು ಹುವಾಂಗ್ ಬಣದ ನೇರ ಲೆಕ್ಕಾಚಾರ.

ಇನ್ನೊಂದು ಬಣವು ಚೀನಾಕ್ಕೆ ಚಿಪ್ ಮಾರಾಟವನ್ನು ಸಂಪೂರ್ಣವಾಗಿ ತಡೆಯಲು ಬಯಸುತ್ತದೆ. ಇದರಲ್ಲಿ ಅಮೆರಿಕದ ಭದ್ರತಾ ಸಂಸ್ಥೆಗಳು, ಗುಪ್ತಚರ ಇಲಾಖೆ, ವಾಣಿಜ್ಯ ಇಲಾಖೆಯ ರಫ್ತು ಅಧಿಕಾರಿಗಳು ಮತ್ತು ಹೌಸ್‌ನ ಮೂರು ಸಮಿತಿಗಳ ರಿಪಬ್ಲಿಕನ್ ಅಧ್ಯಕ್ಷರು ಸೇರಿದ್ದಾರೆ. ನವೆಂಬರ್ 4ರಂದು, ಈ ಮೂವರು ಅಧ್ಯಕ್ಷರು ನವೆಂಬರ್ 18ರಂದು ನಡೆಯಲಿರುವ ರಹಸ್ಯ ಸಭೆಗೆ ಹಾಜರಾಗುವಂತೆ ಹುವಾಂಗ್ ಅವರಿಗೆ ಸೂಚಿಸಿದ್ದಾರೆ. ಡೆಮೋಕ್ರಾಟ್‌ಗಳು ಕೂಡ ಇವರೊಂದಿಗೆ ಕೈಜೋಡಿಸಿದ್ದಾರೆ. ನವೆಂಬರ್ 3ರ ಚುನಾವಣೆಯಲ್ಲಿ ಅಮೆರಿಕದ ಸಂಸತ್ತಿನಲ್ಲಿ ಬಹುಮತ ಪಡೆದ ಬೆನ್ನಲ್ಲೇ, ಡೆಮೋಕ್ರಾಟಿಕ್ ಪಕ್ಷದ ನಾಯಕ ಹಕೀಮ್ ಜೆಫ್ರಿಸ್ ಕೂಡ ಈ ವಿಷಯ ಕುರಿತು ವಿವರಣೆಗಾಗಿ ಒತ್ತಾಯಿಸಿದ್ದಾರೆ. ಅಂದರೆ, ಚೀನಾ ವಿರುದ್ಧದ ಈ ಅಭಿಯಾನಕ್ಕೆ ಎರಡೂ ಪಕ್ಷಗಳ ಬೆಂಬಲವಿದೆ.

ಎರಡೂ ಬಣಗಳ ಗುರಿ ಒಂದೇ: ಸಮಾಜವಾದಿ ಕ್ರಾಂತಿ ನಡೆಸಿದ 140 ಕೋಟಿ ಜನಸಂಖ್ಯೆಯ ದೇಶದ (ಚೀನಾದ) ಅಭಿವೃದ್ಧಿಯನ್ನು ತಡೆಯುವುದು. ಆದರೆ ಅದನ್ನು ಹೇಗೆ ಮಾಡಬೇಕು ಎಂಬ ತಂತ್ರದ ಬಗ್ಗೆ ಮಾತ್ರ ಇವರ ನಡುವೆ ಜಗಳವಿದೆ.

ಮಾಹಿತಿ ಸೋರಿಕೆಯೇ ಅಸಲಿ ಆಟ

ನ್ಯೂಯಾರ್ಕ್ ಟೈಮ್ಸ್ ವರದಿಯ ಟೈಮ್‌ಲೈನ್ ಗಮನಿಸಿ. ಆಲಿಸ್ ಹುವಾಂಗ್ ಮೇಲಿನ ಕಣ್ಗಾವಲು ಬೈಡನ್ ಆಡಳಿತದಲ್ಲೇ ಶುರುವಾಗಿತ್ತು. ಸುಮಾರು ಒಂದು ವರ್ಷದ ಹಿಂದೆ ಟ್ರಂಪ್ ಅವರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿತ್ತು, ಆದರೆ ಅವರು ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಅಮೆರಿಕದ ಆರ್ಥಿಕತೆ ಮತ್ತು ಷೇರು ಮಾರುಕಟ್ಟೆಯನ್ನು ನಡೆಸುತ್ತಿರುವ ಎನ್‌ವಿಡಿಯಾದ ಚಿಪ್ ಮಾರಾಟಕ್ಕೆ ತೊಂದರೆ ಕೊಡಲು ಟ್ರಂಪ್ ಹಿಂದೇಟು ಹಾಕಿದ್ದರು. ವಿದೇಶಿ ಸರ್ಕಾರವೊಂದು ಯಾರನ್ನಾದರೂ ಗುರಿಯಾಗಿಸಿಕೊಂಡಿದೆ ಎಂದು ಗುಪ್ತಚರ ಸಂಸ್ಥೆಗಳಿಗೆ ಅನಿಸಿದರೆ, ಸಾಮಾನ್ಯವಾಗಿ ಆ ವ್ಯಕ್ತಿಗೆ ಎಚ್ಚರಿಕೆ ನೀಡುತ್ತವೆ. ಆದರೆ ಜೆನ್ಸನ್ ಹುವಾಂಗ್ ಅವರಿಗೆ ಅಂತಹ ಯಾವುದೇ ಎಚ್ಚರಿಕೆ ನೀಡಿರಲಿಲ್ಲ. ಈ ವರ್ಷದ ಆರಂಭದಲ್ಲಿ ಅಧಿಕಾರಿಗಳ ನಡುವೆ ಗುಪ್ತಚರ ಮೆಮೊ ಹರಿದಾಡಿತ್ತು. ಅಕ್ಟೋಬರ್ 29ರಂದು, ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಈ ಸುದ್ದಿ ಪ್ರಕಟವಾಯಿತು.

ಗುಪ್ತಚರ ಸಂಸ್ಥೆಗಳಿಗೆ ಎಚ್ಚರಿಕೆ ನೀಡುವುದು ಹೇಗೆಂದು ಚೆನ್ನಾಗಿ ಗೊತ್ತಿದೆ. 2017ರ ಆರಂಭದಲ್ಲಿ, ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಅವರಿಗೆ ಗುಪ್ತಚರ ಸಂಸ್ಥೆಗಳು ಒಂದು ಎಚ್ಚರಿಕೆ ನೀಡಿದ್ದವು; ಅವರ ಆಪ್ತ ಗೆಳತಿ, ಚೀನೀ-ಅಮೆರಿಕನ್ ಉದ್ಯಮಿ ವೆಂಡಿ ಡೆಂಗ್ ಮುರ್ಡೋಕ್ ಅವರು ಚೀನಾ ಸರ್ಕಾರದ ಲಾಭಕ್ಕಾಗಿ ಈ ಸ್ನೇಹವನ್ನು ಬಳಸಿಕೊಳ್ಳುತ್ತಿರಬಹುದು ಎಂದು ಅವರಿಗೆ ತಿಳಿಸಲಾಗಿತ್ತು. ಆದರೆ ಹುವಾಂಗ್ ಅವರಿಗೆ ಅಂತಹ ಯಾವುದೇ ಎಚ್ಚರಿಕೆ ನೀಡಿರಲಿಲ್ಲ.

ವಿಶ್ವದ ಅತಿದೊಡ್ಡ ಕಂಪನಿಯೊಂದರ ಮುಖ್ಯಸ್ಥನಿಗೆ ತಾವು ಕಣ್ಗಾವಲಿನಲ್ಲಿಟ್ಟಿದ್ದ ಮಹಿಳೆ ಹತ್ತಿರವಾಗಿದ್ದಾಳೆ ಎಂದು ಗುಪ್ತಚರ ಸಂಸ್ಥೆಗಳಿಗೆ ಕನಿಷ್ಠ ಒಂದು ವರ್ಷದ ಹಿಂದೆಯೇ ತಿಳಿದಿತ್ತು. ಅವರು ಆ ಫೈಲ್ ಅನ್ನು ಹಾಗೆ ಮುಚ್ಚಿಟ್ಟಿದ್ದರು. ಹುವಾಂಗ್‌ಗೆ ಏನನ್ನೂ ಹೇಳಲಿಲ್ಲ. ನಂತರ ಆ ಫೈಲ್ ಮಾಧ್ಯಮಗಳಿಗೆ ಸೋರಿಕೆಯಾಯಿತು.

ಇದನ್ನು ಓದಿದ್ದೀರಾ?: ಬಿಜೆಪಿ ಆಡಳಿತದಲ್ಲಿ ಭಾರತ ಈಗ ಪ್ರಜಾಪ್ರಭುತ್ವ ದೇಶವಾಗಿ ಉಳಿದಿಲ್ಲ: ರಾಹುಲ್ ಗಾಂಧಿ ವಾಗ್ದಾಳಿ

ಇದನ್ನು ಸೋರಿಕೆ ಮಾಡಿದವರಿಗೆ ಒಂದು ಸ್ಪಷ್ಟ ಉದ್ದೇಶವಿತ್ತು. ಜೆನ್ಸನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸುವವರೇ ಇದನ್ನು ಮಾಡಿದ್ದಾರೆ ಎಂದು ಎನ್‌ವಿಡಿಯಾದ ಉನ್ನತ ವಕೀಲರೇ ಕಂಪನಿಯೊಳಗೆ ಹೇಳಿದ್ದಾರೆ. ಚಿಪ್ ನಿಯಂತ್ರಣಗಳನ್ನು ಬಿಗಿಗೊಳಿಸುವ ತಮ್ಮ ಪ್ರಯತ್ನಗಳಿಗೆ ಟ್ರಂಪ್ ಜೊತೆಗಿನ ಹುವಾಂಗ್ ಅವರ ಆಪ್ತತೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ದೂರಿದ್ದರು.

ಸರ್ಕಾರದ ಒಳಗೂ ಎನ್‌ವಿಡಿಯಾದ ಜನರಿದ್ದಾರೆ. ಮೆಗಾಸ್ಪೀಡ್ ಪ್ರಕರಣದ ತನಿಖೆ ನಡೆಸುತ್ತಿದ್ದ ವಾಣಿಜ್ಯ ಇಲಾಖೆಯ ತನಿಖಾಧಿಕಾರಿಗಳಿಗೆ ಎನ್‌ವಿಡಿಯಾದ ಉನ್ನತ ವಕೀಲರು ಇಮೇಲ್ ಕಳುಹಿಸಿ ತನಿಖೆಯ ಬಗ್ಗೆ ವಿಚಾರಿಸಿದ್ದರು. ಟ್ರಂಪ್ ನೇಮಿಸಿದ ಅಧಿಕಾರಿಯ ಅನುಮತಿಯ ಮೇರೆಗೆ ತಾವು ಕೇಳುತ್ತಿರುವುದಾಗಿ ಅವರು ಹೇಳಿದ್ದರು. ನಂತರ ವಾಣಿಜ್ಯ ಇಲಾಖೆಯ ತನಿಖೆಯನ್ನು ನಿಲ್ಲಿಸಲಾಯಿತು. ಪ್ರಕರಣವನ್ನು ನ್ಯಾಯಾಂಗ ಇಲಾಖೆಗೆ ಹಸ್ತಾಂತರಿಸಲಾಯಿತು.

jensan
ಜೆನ್ಸನ್

ಬಂಡವಾಳಶಾಹಿ ಸರ್ಕಾರವು ಇಡೀ ಬಂಡವಾಳಶಾಹಿ ವರ್ಗದ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ. ಒಂದು ದೊಡ್ಡ ಕಂಪನಿಯ ಲಾಭದ ಆಸೆಯು, ಇಡೀ ಆಡಳಿತ ವರ್ಗದ ಕಾರ್ಯತಂತ್ರಕ್ಕೆ ಅಡ್ಡಬಂದಾಗ, ಸರ್ಕಾರದ ಗುಪ್ತಚರ ಸಂಸ್ಥೆಗಳು ಆ ಕಂಪನಿಯನ್ನು ತಮ್ಮ ದಾರಿಗೆ ತರಲು ಮುಂದಾಗುತ್ತವೆ. ಈಗ ಹುವಾಂಗ್ ಅವರಿಗೂ ಅದೇ ಆಗುತ್ತಿದೆ. ಗುಪ್ತಚರ ಸಂಸ್ಥೆಗಳ ದೃಷ್ಟಿಯಲ್ಲಿ, ದಿಗ್ಬಂಧನಕ್ಕಿಂತ ಚೀನಾದ ಮಾರಾಟಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇ ಹುವಾಂಗ್ ಮಾಡಿದ ಅಪರಾಧ. ಈಗ ಅವರು ಕಂಪನಿಯ ತನಿಖೆ, ಷೇರುದಾರರ ಮೊಕದ್ದಮೆ, ಮೂರು ಹೌಸ್ ಸಮಿತಿಗಳ ವಿಚಾರಣೆ ಮತ್ತು ಎಫ್‌ಬಿಐ ತನಿಖೆಯನ್ನು ಎದುರಿಸಬೇಕಾಗಿದೆ. ಹುವಾಂಗ್ ಮೂಲಕ ಟ್ರಂಪ್ ಅವರ ಒಪ್ಪಂದಗಳ ಮೇಲೆ ಒತ್ತಡ ಹೇರಲಾಗುತ್ತಿದೆ.

ಆದರೆ ಟ್ರಂಪ್ ಇನ್ನೂ ಮಣಿದಿಲ್ಲ. ನವೆಂಬರ್ 9ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ಆ ಮಹಿಳೆ ಗೂಢಚಾರಿ ಎಂದು ನಿಮಗೆ ತಿಳಿದಿತ್ತೇ ಎಂದು ನಾನು ಹುವಾಂಗ್ ಅವರನ್ನು ಕೇಳಿದೆ. ಅದಕ್ಕೆ ಅವರು ‘ಆಕೆ ಗೂಢಚಾರಿ ಎಂಬ ಬಗ್ಗೆ ನನಗೆ ಯಾವುದೇ ಸುಳಿವಿರಲಿಲ್ಲ’ ಎಂದರು, ಮತ್ತು ನಾನು ಅವರ ಮಾತನ್ನು ನಿಜವಾಗಿಯೂ ನಂಬುತ್ತೇನೆ” ಎಂದು ಹೇಳಿದ್ದಾರೆ. ಎರಡೂ ಬಣಗಳ ನಡುವಿನ ಈ ಜಗಳ ಇನ್ನೂ ಮುಂದುವರಿದಿದೆ.

ಈ ಹಗರಣ ಬಯಲಾದ ಸಮಯವೇ ಇಲ್ಲಿನ ಅಸಲಿ ಜಗಳ ಏನೆಂದು ತೋರಿಸುತ್ತದೆ. ನವೆಂಬರ್ 18-19ರಂದು ಚೀನಾದ ಶೆನ್‌ಜೆನ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಅದಕ್ಕೆ ಕೆಲವೇ ದಿನಗಳ ಮೊದಲು ಈ ಹಗರಣ ಸ್ಫೋಟಗೊಂಡಿದೆ. ಚಿಪ್ ನಿರ್ಬಂಧಗಳನ್ನು ಕಾನೂನಾಗಿ ಮಾಡಲು ಕಾಂಗ್ರೆಸ್ ಈ ಪ್ರಕರಣವನ್ನು ಬಳಸಿಕೊಳ್ಳಬಹುದು ಎಂದು ಚೀನಾದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗಾದಲ್ಲಿ, ಟ್ರಂಪ್ ಚೌಕಾಸಿಗೆ ಕೂರುವ ಹೊತ್ತಿಗೆ ಚಿಪ್ ಪರವಾನಗಿ ನೀಡುವ ಅಧಿಕಾರ ಅವರ ಕೈತಪ್ಪಿ ಹೋಗುತ್ತದೆ.

ಹಳೆಯ ಜನಾಂಗೀಯ ಕಥೆ

ಈ ಪ್ರಕರಣವನ್ನು ಒಂದು ಥ್ರಿಲ್ಲರ್ ಸಿನಿಮಾದಂತೆ ಮಾರಾಟ ಮಾಡಲಾಗುತ್ತಿದೆ: ಬೀಜಿಂಗ್‌ನ ಆದೇಶದ ಮೇರೆಗೆ ಚೀನೀ ಮಹಿಳೆಯೊಬ್ಬಳು ಪ್ರಭಾವಿ ವ್ಯಕ್ತಿಯನ್ನು ಮರುಳು ಮಾಡಿದ್ದಾಳೆ ಎಂಬಂತೆ ಬಿಂಬಿಸಲಾಗುತ್ತಿದೆ. ಏಷ್ಯನ್ ಮಹಿಳೆಯರನ್ನು ‘ಅಪಾಯಕಾರಿ ಮಾಯಾಂಗನೆಯರು’ (ಡ್ರ್ಯಾಗನ್ ಲೇಡಿ) ಎಂದು ಬಿಂಬಿಸುವ ಹಳೆಯ ಜನಾಂಗೀಯ ಮತ್ತು ಲಿಂಗಭೇದದ ಕೆಟ್ಟ ಕಥೆ ಇದು; ದೊಡ್ಡ ಮಾಧ್ಯಮಗಳು ಈಗ ಇದನ್ನೇ ರಂಜನೀಯವಾಗಿ ಹಬ್ಬಿಸುತ್ತಿವೆ.

ಈ ಭಯದ ನೆರಳು ಜೆನ್ಸನ್ ಹುವಾಂಗ್ ಮೇಲೂ ಬಿದ್ದಿದೆ. ಏಕೆಂದರೆ ಅವರು ಚೀನೀ ಮೂಲದವರು. ಬಿಳಿಯ ಬಿಲಿಯನೇರ್‌ಗಳಿಗೆ ಸಿಗುವ ಟ್ರೀಟ್‌ಮೆಂಟ್ ಬೇರೆಯೇ ಇರುತ್ತದೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರಿಗೆ ಅಫೇರ್ ಇದ್ದಾಗ, ಅದು ಕೇವಲ ಗಾಸಿಪ್ ಕಾಲಂ ಸುದ್ದಿಯಾಗಿತ್ತು, ಅವರು ಯಾವ ದೇಶಕ್ಕೆ ನಿಷ್ಠರಾಗಿದ್ದಾರೆ ಎಂದು ಯಾರೂ ಕೇಳಲಿಲ್ಲ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್ ಜೊತೆ ವರ್ಷಗಳ ಕಾಲ ಸಂಪರ್ಕ ಹೊಂದಿದ್ದರು. ಎಪ್‌ಸ್ಟೈನ್ ಇಸ್ರೇಲಿ ಗುಪ್ತಚರ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದ ಎಂಬ ಎಫ್‌ಬಿಐ ವರದಿ ಇದ್ದರೂ, ಗೇಟ್ಸ್ ಮತ್ತು ಎಪ್‌ಸ್ಟೈನ್ ಸಂಬಂಧವನ್ನು ಎಂದಿಗೂ ರಾಷ್ಟ್ರೀಯ ಭದ್ರತೆಯ ವಿಷಯವಾಗಿ ಪರಿಗಣಿಸಲಿಲ್ಲ. ಆದರೆ ಪೀಕಿಂಗ್ ವಿಶ್ವವಿದ್ಯಾಲಯದ ವಿಜ್ಞಾನಿ ರಾವ್ ಯಿ ಹೇಳಿದಂತೆ, ಒಬ್ಬ ವ್ಯಕ್ತಿ ಚೀನೀ ಮೂಲದವನಾಗಿದ್ದರೆ, ಗುಪ್ತಚರ ಸಂಸ್ಥೆಗಳು ಆತನ ಖಾಸಗಿ ಜೀವನದ ಮೇಲೆ ಕಣ್ಣಿಡುತ್ತವೆ, ಸರ್ಕಾರಿ ಮೂಲಗಳು ಅದನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುತ್ತವೆ ಮತ್ತು ತನಿಖೆಗಳು ಶುರುವಾಗುತ್ತವೆ.

ಇಲ್ಲಿಯವರೆಗೆ ಯಾವುದೇ ಸಾಕ್ಷ್ಯವನ್ನು ಸಾರ್ವಜನಿಕಗೊಳಿಸಲಾಗಿಲ್ಲ. ಆಲಿಸ್ ಹುವಾಂಗ್ ಚೀನೀ ಗುಪ್ತಚರ ಇಲಾಖೆಗಾಗಿ ಕೆಲಸ ಮಾಡುತ್ತಿದ್ದರು ಎಂಬ ಪ್ರತಿಯೊಂದು ಆರೋಪವೂ ಅನಾಮಧೇಯ ಅಮೆರಿಕನ್ ಅಧಿಕಾರಿಗಳ ಮಾತಿನ ಮೇಲೆ ನಿಂತಿದೆ. ಆಕೆಯ ಮೇಲಾಗಲಿ ಅಥವಾ ಮೆಗಾಸ್ಪೀಡ್ ಮೇಲಾಗಲಿ ಯಾವುದೇ ಅಪರಾಧದ ಆರೋಪ ಹೊರಿಸಲಾಗಿಲ್ಲ. ಮೆಗಾಸ್ಪೀಡ್ ಚೀನಾಕ್ಕೆ ಚಿಪ್‌ಗಳನ್ನು ಕಳ್ಳಸಾಗಣೆ ಮಾಡಿದೆ ಎಂಬ ಹಳೆಯ ಆರೋಪಗಳನ್ನು ಕಳೆದ ವರ್ಷವೇ ತನಿಖೆ ನಡೆಸಿ ಸುಳ್ಳೆಂದು ಸಾಬೀತುಪಡಿಸಲಾಗಿದೆ ಎಂದು ಎನ್‌ವಿಡಿಯಾ ಹೇಳಿದೆ. ಅಕ್ಟೋಬರ್ 30ರಂದು, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಈ ವರದಿಯನ್ನು ಚೀನಾಕ್ಕೆ ಮಸಿ ಬಳಿಯಲು ಮಾಡಿದ “ಆಧಾರರಹಿತ ಊಹಾಪೋಹ” ಎಂದು ಕರೆದಿದ್ದಾರೆ.

ಗೂಢಚರ್ಯೆಯ ಭಯ ಹುಟ್ಟಿಸುವುದು ವಿದೇಶದಲ್ಲಿ ಯುದ್ಧಕ್ಕೆ ಮತ್ತು ದೇಶದೊಳಗೆ ದಮನಕಾರಿ ನೀತಿಗಳಿಗೆ ಬೆಂಬಲ ಗಳಿಸುವ ತಂತ್ರವಾಗಿದೆ. 2018ರಲ್ಲಿ ಪ್ರಾರಂಭವಾದ ನ್ಯಾಯಾಂಗ ಇಲಾಖೆಯ “ಚೀನಾ ಇನಿಶಿಯೇಟಿವ್” ಅಭಿಯಾನವು ಬೇಹುಗಾರಿಕೆಯ ಶಂಕೆಯ ಮೇಲೆ ಚೀನೀ ಮತ್ತು ಚೀನೀ-ಅಮೆರಿಕನ್ ವಿಜ್ಞಾನಿಗಳನ್ನು ನ್ಯಾಯಾಲಯಕ್ಕೆ ಎಳೆದೊಯ್ದಿತ್ತು. ಆದರೆ ಒಂದರ ಹಿಂದೆ ಒಂದರಂತೆ ಪ್ರಕರಣಗಳು ಬಿದ್ದುಹೋದವು. 2021ರಲ್ಲಿ ಎಂಐಟಿ ಪ್ರಾಧ್ಯಾಪಕ ಗ್ಯಾಂಗ್ ಚೆನ್ ಅವರನ್ನು ಬಂಧಿಸಿದಾಗ, 100ಕ್ಕೂ ಹೆಚ್ಚು ಸಹೋದ್ಯೋಗಿಗಳು “ನಾವೆಲ್ಲರೂ ಗ್ಯಾಂಗ್ ಚೆನ್” ಎಂದು ಪತ್ರ ಬರೆದು ಪ್ರತಿಭಟಿಸಿದರು. ಒಂದು ವರ್ಷದ ನಂತರ ಪ್ರಾಸಿಕ್ಯೂಟರ್‌ಗಳು ಎಲ್ಲಾ ಆರೋಪಗಳನ್ನು ಕೈಬಿಟ್ಟರು. ಏಷ್ಯನ್ ಅಮೆರಿಕನ್ ಸಂಘಟನೆಗಳ ಹೋರಾಟದಿಂದಾಗಿ ಫೆಬ್ರವರಿ 2022ರಲ್ಲಿ “ಚೀನಾ ಇನಿಶಿಯೇಟಿವ್” ಅನ್ನು ಮುಚ್ಚಬೇಕಾಯಿತು. ಈಗ ಎನ್‌ವಿಡಿಯಾ ಪ್ರಕರಣವು ಮತ್ತೆ ಆ ಹಳೆಯ ಬಾಗಿಲನ್ನು ತೆರೆಯುತ್ತಿದೆ.

jensan2
ಟ್ರಂಪ್‌ ಮತ್ತು ಜಿನ್‌ಪಿಂಗ್

ದಿಗ್ಬಂಧನ ವಿಫಲವಾಗುತ್ತಿದೆ

ಎನ್‌ವಿಡಿಯಾ ಚಿಪ್‌ಗಳಿಗಾಗಿ ಚೀನಾ ಎಷ್ಟು ಹತಾಶವಾಗಿದೆ ಎಂದರೆ, ಅವುಗಳನ್ನು ಪಡೆಯಲು ಒಬ್ಬ ಸಿಇಒ ಅನ್ನು ಮರುಳು ಮಾಡುವ ಮಟ್ಟಕ್ಕೆ ಇಳಿದಿದೆ ಎಂದು ಓದುಗರು ನಂಬಬೇಕೆಂದು ಈ ಗೂಢಚರ್ಯೆ ಕಥೆ ಬಯಸುತ್ತದೆ. ಚೀನೀ ಕಂಪನಿಗಳು ಸಾಧ್ಯವಾದಲ್ಲೆಲ್ಲಾ ಎನ್‌ವಿಡಿಯಾ ಚಿಪ್‌ಗಳನ್ನು ಬಾಡಿಗೆಗೆ ಪಡೆಯುತ್ತಿವೆ ಮತ್ತು ಖರೀದಿಸುತ್ತಿವೆ ನಿಜ. ಮೆಗಾಸ್ಪೀಡ್‌ನ ಮುಖ್ಯ ಗ್ರಾಹಕ ಚೀನಾದ ಟೆಕ್ ಕಂಪನಿ ಅಲಿಬಾಬಾ. ಆದರೆ ಚೀನಾದ ಹಾದಿ ಬೇರೆ ದಿಕ್ಕಿನಲ್ಲಿ ಸಾಗುತ್ತಿದೆ. ಡಿಸೆಂಬರ್ 2025ರಲ್ಲಿ ಟ್ರಂಪ್ ಚಿಪ್ ಮಾರಾಟಕ್ಕೆ ಬಾಗಿಲು ತೆರೆದಾಗ, ಚೀನಾದ ನಿಯಂತ್ರಕರು ತಮ್ಮ ಕಂಪನಿಗಳಿಗೆ ಚಿಪ್ ಖರೀದಿಯನ್ನು ತಡೆಹಿಡಿಯಲು ಹೇಳಿದರು ಮತ್ತು ಚೀನಾದಲ್ಲೇ ತಯಾರಾದ ಚಿಪ್‌ಗಳು ಏಕೆ ಸಾಕಾಗುವುದಿಲ್ಲ ಎಂದು ವಿವರಿಸಲು ಸೂಚಿಸಿದರು.

ಇದನ್ನು ಓದಿದ್ದೀರಾ?: ಮ್ಯಾಡ್ ಸಂಧು ಹತ್ಯೆ ಪ್ರಕರಣದ ಶೂಟರ್ ಬಂಧನ: ಅಮಿತಾಭ್ ಬಚ್ಚನ್ ಹತ್ಯೆ ಸಂಚು ಬಯಲು

ಚೀನಾ ತನ್ನದೇ ಆದ ಚಿಪ್ ಉದ್ಯಮವನ್ನು ಯೋಜನಾಬದ್ಧವಾಗಿ ಕಟ್ಟುತ್ತಿದೆ. ಚೀನಾ ಸರ್ಕಾರವು ತನ್ನ ಪಂಚವಾರ್ಷಿಕ ಯೋಜನೆಯಲ್ಲಿ ಚಿಪ್ ಸ್ವಾವಲಂಬನೆಗೆ ಆದ್ಯತೆ ನೀಡಿದ್ದು, ಚಿಪ್ ಸ್ಥಾವರಗಳು, ಯಂತ್ರೋಪಕರಣಗಳು ಮತ್ತು ವಿನ್ಯಾಸಕ್ಕಾಗಿ ಹತ್ತಾರು ಬಿಲಿಯನ್ ಡಾಲರ್ ಸರ್ಕಾರಿ ಹಣವನ್ನು ಹೂಡಿದೆ. ಹುವಾವೇ ಮತ್ತು ಇತರ ಚೀನೀ ಕಂಪನಿಗಳ ಎಂಜಿನಿಯರ್‌ಗಳು ಹಾಗೂ ಕಾರ್ಮಿಕರು ಈಗ ಅಮೆರಿಕದ ರಫ್ತು ನಿಷೇಧವನ್ನು ಮೀರಿಸುವಂತಹ ಚಿಪ್‌ಗಳನ್ನು ತಯಾರಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಎನ್‌ವಿಡಿಯಾ ಏಕಸ್ವಾಮ್ಯ ಹೊಂದಿದ್ದ ಚೀನಾದ AI ಚಿಪ್ ಮಾರುಕಟ್ಟೆಯ ಸುಮಾರು ಅರ್ಧದಷ್ಟು ಭಾಗವನ್ನು ಈಗ ಚೀನೀ ನಿರ್ಮಿತ ಚಿಪ್‌ಗಳೇ ಆಕ್ರಮಿಸಿಕೊಂಡಿವೆ.

ವಿಶ್ವದ ಅತ್ಯಾಧುನಿಕ ತಂತ್ರಜ್ಞಾನದ ಬೆಳವಣಿಗೆಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಅಮೆರಿಕದ ಆಡಳಿತ ವರ್ಗವು ದಿಗ್ಬಂಧನವನ್ನೂ ಪ್ರಯತ್ನಿಸಿದೆ ಮತ್ತು ಅವಲಂಬನೆಯ ತಂತ್ರವನ್ನೂ ಪ್ರಯತ್ನಿಸಿದೆ. ಆದರೆ ಎರಡೂ ವಿಫಲವಾಗುತ್ತಿವೆ, ಮತ್ತು ಆ ವೈಫಲ್ಯವೇ ಈಗ ಎರಡು ಬಣಗಳು ಪರಸ್ಪರ ಕಿತ್ತಾಡುವಂತೆ ಮಾಡಿದೆ. ಹುವಾಂಗ್ ವಿರುದ್ಧದ ಈ ಜಗಳದಲ್ಲಿ ಯಾರೇ ಗೆದ್ದರೂ, ಒಂದು ದೊಡ್ಡ ಸತ್ಯ ಮಾತ್ರ ಸ್ಪಷ್ಟವಾಗಿದೆ: ಚೀನಾದ ಸ್ವತಂತ್ರ ಅಭಿವೃದ್ಧಿಯು ಸಾಮ್ರಾಜ್ಯಶಾಹಿ ನಿಯಂತ್ರಣದ ಎರಡೂ ವಿಧಾನಗಳನ್ನು ಸೋಲಿಸುತ್ತಿದೆ.

ಕೃಪೆ: ಸ್ಟ್ರಗಲ್-ಲಾ ಲುಚಾ, ಲೇಖಕರು: ಗ್ಯಾರಿ ವಿಲ್ಸನ್, ಕನ್ನಡಕ್ಕೆ: ಟಿ.ಎಸ್.‌ ವೇಣುಗೋಪಾಲ್

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂತ್ ಮಟ್ಟದಲ್ಲಿ ‘ವೋಟ್ ಬಚಾವೋ’ ಅಭಿಯಾನ ಚುರುಕುಗೊಳಿಸಿದ ಕಾಂಗ್ರೆಸ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಮತ್ತು ಮುಖ್ಯ...

ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ ಹಿನ್ನೆಲೆಯೇನು? ಪ್ರಸ್ತುತ ಮಹತ್ವವೇನು?

ಒಬಿಸಿ ಮೀಸಲಾತಿ ಸೌಲಭ್ಯ ಪಡೆಯಲು 'ಕೆನೆಪದರ' ನಿರ್ಧರಿಸುವಾಗ ಕೇವಲ ಪೋಷಕರ ವಾರ್ಷಿಕ...

ನಾಲ್ವರು ನಾಗರಿಕರ ಹತ್ಯೆ: ಕೇಂದ್ರ, ಮಣಿಪುರ ಸರ್ಕಾರಕ್ಕೆ 3 ದಿನಗಳ ಗಡುವು ನೀಡಿದ ನಾಗಾ ಸಂಘಟನೆ

ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಶುಕ್ರವಾರ (ನವೆಂಬರ್ 13) ಶಂಕಿತ ಉಗ್ರರ ಗುಂಡಿನ...

ಮೈಕ್ರೋಸಾಫ್ಟ್‌ ಸರ್ವರ್ ಕ್ರಾಶ್; ತಲ್ಲಣಗೊಂಡ ಆನ್‌ ಲೈನ್‌ ಜಗತ್ತು!

ಆಧುನಿಕ ಕಚೇರಿ ವ್ಯವಹಾರ ಮತ್ತು ಡಿಜಿಟಲ್ ಸಂವಹನದ ಬೆನ್ನೆಲುಬಂತಿರುವ ತಂತ್ರಜ್ಞಾನ ದೈತ್ಯ...