ಪ್ರಧಾನಿ ಅವರ ಏಳು ಆರ್ಥಿಕ ದೇಶಪ್ರೇಮದ ಕರೆ ದೇಶದಲ್ಲಿನ ಉಳ್ಳವರನ್ನು ಗುರಿಯಾಗಿಸಿಕೊಳ್ಳುವುದಕ್ಕೆ ಬದಲಾಗಿ ಇಲ್ಲದವರನ್ನು ಗುರಿಯಾಗಿಸಿಕೊಂಡಿದೆ. ದೇವಾಲಯಗಳಿಗೆ ಲಕ್ಷಾಂತರ ಕೋಟಿ ಬೆಲೆಯ ವಜ್ರದ ಕಿರೀಟ, ಚಿನ್ನದ ರಥ, ಬೆಳ್ಳಿಯ ಬಾಗಿಲು ದಾನ ನೀಡುವವರ ಮೇಲೆ ತೆರಿಗೆಯಿಲ್ಲ. ಈ ದಾನದ ಮೌಲ್ಯದ ಮೇಲೆ ಶೇ 50 ರಷ್ಟು ತೆರಿಗೆ ವಿಧಿಸಿದರೆ ಸರ್ಕಾರಕ್ಕೆ ಈ ಸಪ್ತ ಮಿತವ್ಯಯದ ಅಗತ್ಯವೇ ಬೀಳುವುದಿಲ್ಲ. ದೇಶದಲ್ಲಿ ಒಟ್ಟು ಚಿನ್ನದಲ್ಲಿ ಅರ್ಧದಷ್ಟು ದೇವಾಲಯಗಳಲ್ಲಿ ಶೇಖರಣೆಗೊಂಡಿದೆ.
ಸಾಂಸ್ಕೃತಿಕ ದೇಶಪ್ರೇಮವಾಯ್ತು, ಧಾರ್ಮಿಕ ದೇಶಪ್ರೇಮವಾಯ್ತು, ಡಬಲ್ ಇಂಜಿನ್ ಸರ್ಕಾರವಾಯ್ತು, ಗೆಟ್ ಅಪ್ ಇಂಡಿಯಾ, ಸ್ಟ್ರಾಟ್ ಅಫ್ ಇಂಡಿಯಾ, ಶಟ್‍ಅಫ್ ಇಂಡಿಯಾ… ಎಲ್ಲಾ ಮುಗಿಯಿತು. ಈಗ ಆರ್ಥಿಕ ದೇಶಪ್ರೇಮಕ್ಕೆ ಮೋದಿ ಮೊರೆ ಹೋಗಿದ್ದಾರೆ. ದೇಶಪ್ರೇಮ, ರಾಷ್ಟ್ರಭಕ್ತಿ, ದೇಶಕ್ಕಾಗಿ ತ್ಯಾಗ ಮುಂತಾದವುಗಳ ವೈಫಲ್ಯದ ನಂತರ ಇದೀಗ ಪ್ರಧಾನಿ ಅವರು ಮೇ 10 ರಂದು ಹೈದರಾಬಾದಿನಲ್ಲಿ ದೇಶದ ಪ್ರಜೆಗಳು ‘ತ್ಯಾಗ’ ಎಂಬ ಸೊಂಟದ ಪಟ್ಟಿಯನ್ನು ಬಿಗಿ ಮಾಡಬೇಕಾದ ಸಪ್ತಸೂತ್ರಗಳನ್ನು ನೀಡಿದ್ದಾರೆ.
ಚಿನ್ನದ ಖರೀದಿಯನ್ನು ನಿಲ್ಲಿಸಿ
ಮನೆಯಿಂದಲೇ ಕೆಲಸ ಮಾಡಿ
ಇಂಧನ-ತೈಲ ಬಳಕೆ ಕಡಿಮೆ ಮಾಡಿ
ಅಡುಗೆ ಅನಿಲ ಉಳಿತಾಯ ಮಾಡಿ
ರಸಗೊಬ್ಬರ ಬಳಕೆ ಕಡಿಮೆ ಮಾಡಿ-ಸಾವಯವ ಕೃಷಿ ಅಳವಡಿಸಿಕೊಳ್ಳಿ
ವಿದೇಶಗಳಿಗೆ ಹೋಗುವುದನ್ನು ನಿಲ್ಲಿಸಿ
ಸ್ವದೇಶಿ ವಸ್ತುಗಳನ್ನು ಬಳಸಿ
‘ಹೇಳುವುದು ಸುಲಭ, ಮಾಡುವುದು ಕಷ್ಟ’ ಎಂಬ ಮಾತಿದೆ. ‘ಹೇಳುವುದು ಒಂದು ಮಾಡುವುದು ಇನ್ನೊಂದು’ ಎಂಬ ಕನ್ನಡ ಹಾಡೊಂದಿದೆ. ಭಾರತದ ಆರ್ಥಿಕತೆಯನ್ನು ನಿರ್ವಹಿಸುವುದರಲ್ಲಿ ನರೇಂದ್ರ ಮೋದಿ ವಿಫಲರಾಗಿದ್ದಾರೆ. ಇದರ ಪ್ರತ್ಯಕ್ಷ ಸಾಕ್ಷಿ ಅವರ ಏಳು ಆರ್ಥಿಕ ದೇಶಪ್ರೇಮದ ಕರೆ. ಅವರು ಹೇಳುವುದು ಜಾಸ್ತಿ. ಅವರೊಬ್ಬ ಪ್ರಸಿದ್ಧ ಪ್ರವಚನಕಾರ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಪ್ರಜೆಗಳಿಗೆ ‘ಮನೆಯಿಂದಲೇ ಕೆಲಸ ಮಾಡಿ’ ಎಂದು ಕರೆ ಕೊಟ್ಟಿದ್ದಾರೆ. ಆದರೆ ಉದ್ಯೋಗವಿಲ್ಲದವರು, ದಿನಗೂಲಿಗಳು, ಅಸಂಘಟಿತ ವಲಯದ ಕಾರ್ಮಿಕರು, ಬೀದಿಬದಿ-ತಳ್ಳುಗಾಡಿ ಮಾರಾಟಗಾರರು ಏನು ಮಾಡಬೇಕು? ಅವರು ಮನೆಯಿಂದ ಕೆಲಸ ಮಾಡುವುದು ಸಾಧ್ಯವೇ? ನಮ್ಮ ದೇಶದಲ್ಲಿನ ಒಟ್ಟು ಕಾರ್ಮಿಕರಲ್ಲಿ ಶೇ. 95ರಷ್ಟು ಅಸಂಘಟಿತ ವಲಯದಲ್ಲಿದ್ದಾರೆ. ಮೋದಿ ಅವರು ಕರೆಯು ಉಳಿದ ಶೇ. 5ರಷ್ಟು ಜನರಿಗೆ ಮಾತ್ರ ಅನ್ವಯವಾಗುತ್ತದೆ. ಇದರಿಂದ ಆರ್ಥಿಕ ಮಿತವ್ಯಯ ಸಾಧ್ಯವೇ? ಒಟ್ಟು ಕಾರ್ಮಿಕರಲ್ಲಿ ಶೇ. 95ರಷ್ಟು ಮನೆಯಲ್ಲಿಯೇ ಕುಳಿತರೆ ಹಿಟ್ಟೆಗೇನು, ಬಟ್ಟೆಗೇನು? ಖೊಟ್ಟಿ ಸಲಹೆಗೆ ಕೊರತೆಯಿಲ್ಲ. ಉದಾ: ಮುಖಾಮುಖಿಯಾಗದೇ ಆನ್‌ಲೈನಿನಲ್ಲಿ ಚರ್ಚೆ – ಸಂವಾದ ಮಾಡಿಕೊಳ್ಳಿ, ಮನೆಯಿಂದಲೇ ಕೆಲಸ ಮಾಡಿ ಎನ್ನುವುದು ಸರಿ. ಆದರೆ ಇಂಟರ್‌ನೆಟ್ ಸಂಪರ್ಕವಿಲ್ಲದವರು ಏನು ಮಾಡಬೇಕು?
ದೇಶದ ಬಿಲಿಯನೇರುಗಳಿಗೆ ಮೋದಿಯ ಕರೆಯೇನು?
ಜಗತ್ತಿನಲ್ಲಿ ಅತಿಹೆಚ್ಚು ಬಿಲಿಯನೇರುಗಳನ್ನು ಹೊಂದಿರುವ ಮೂರನೆಯ ಅತಿದೊಡ್ಡ ದೇಶ ಭಾರತ. ಹಾಗೇ ಅತಿ ಹೆಚ್ಚು ಬಡವರನ್ನು ಹೊಂದಿರುವ ದೇಶ ಕೂಡ ಭಾರತ. ಪ್ರಧಾನಿ ಅವರ ಕರೆಯು ಬಿಲಿಯನೇರುಗಳಿಗೆ ಅನ್ವಯವಾಗುವುದಿಲ್ಲ. ಏಕೆಂದರೆ ಪ್ರಧಾನಿಗಳ ಪ್ರಕಾರ ಅವರು “ಸಂಪತ್ತನ್ನು ಉತ್ಪಾದಿಸುವವರು’ (ವೆಲ್ಥ್ ಕ್ರಿಯೇಟರ್ಸ್). ಅವರ ಪ್ರಕಾರ ಇವರಿಲ್ಲದೇ ದೇಶದ ಆರ್ಥಿಕ ಬೆಳವಣಿಗೆ ಸಾಧ್ಯವಿಲ್ಲ. ಪ್ರಧಾನಿ ಅವರ ಕರೆಯು ತಾರತಮ್ಯದಿಂದ ಕೂಡಿದೆ. ಏಕೆಂದರೆ ಬಿಲಿಯನೇರುಗಳಿಗೆ ಕೇಂದ್ರ ಸರ್ಕಾರ ಹೆಚ್ಚು ತೆರಿಗೆ ವಿಧಿಸುವುದಕ್ಕೆ ಬದಲಾಗಿ ತೆರಿಗೆ ದರಗಳನ್ನು ತಗ್ಗಿಸುತ್ತಿದೆ. ತೆರಿಗೆ ವಿನಾಯಿತ ನೀಡುತ್ತಿದೆ. ಆದರೆ ಜನರು ನೀಡುವ ಪ್ರತಿಗಾಮಿ ತೆರಿಗೆ ಎಂದು ಪ್ರಸದ್ಧವಾಗಿರುವ ಅಪ್ರತ್ಯಕ್ಷ ತೆರಿಗೆ ಜಿಎಸ್‍ಟಿಯನ್ನು ಏರಿಸುತ್ತಲೇ ಇದ್ದಾರೆ. ನಮ್ಮ ದೇಶದಲ್ಲಿ ಕಾರ್ಪೊರೇಟುಗಳು ತೆರುವ ಕಾರ್ಪೊರೇಟ್ ಆದಾಯ ತೆರಿಗೆಗಿಂತ ಜನರ ನೀಡುವ ಆದಾಯ ತೆರಿಗೆ ಅಧಿಕವಾಗಿದೆ. ಇದನ್ನು ಸರಿಪಡಿಸುವುದರ ಬಗ್ಗೆ ಪ್ರಧಾನ ಕರೆನೀಡುವುದಿಲ್ಲ.
ಸರಿಸುಮಾರು ರೂ.112 ಲಕ್ಷ ಕೋಟಿ ವಸೂಲಾಗದ ಬ್ಯಾಂಕ್ ಸಾಲವನ್ನು 2014-2024ರ ಅವಧಿಯಲ್ಲಿ ಮನ್ನಾ ಮಾಡಲಾಗಿದೆ. ಇದನ್ನು ವಸೂಲು ಮಾಡುವುದಕ್ಕೆ ಪ್ರಧಾನಿ ಕರೆ ನೀಡುವುದಿಲ್ಲ. ಕಾರ್ಪೊರೇಟುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದರೆ ಮತ್ತು ಉದ್ದೇಶಪೂರ್ವಕವಾಗಿ ಬ್ಯಾಂಕಿನ ಸಾಲ ಹಿಂತಿರುಗಿಸದ ಉದ್ದಮೆದಾರರ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಂಡರೆ ಮೇಲಿನ ಏಳು ಆರ್ಥಿಕ ದೇಶಪ್ರೇಮದ ಕರೆಯ ಅಗತ್ಯ ಬೀಳುವುದಿಲ್ಲ.
ಸಾಮಾನ್ಯರಿಗೆ ಆರ್ಥಿಕ ದೇಶಪ್ರೇಮ, ಉಳ್ಳವರಿಗೆ ಆರ್ಥಿಕ ಪ್ರೋತ್ಸಾಹ
ಪ್ರಧಾನಿ ಅವರ ಏಳು ಆರ್ಥಿಕ ದೇಶಪ್ರೇಮದ ಕರೆ ದೇಶದಲ್ಲಿನ ಉಳ್ಳವರನ್ನು ಗುರಿಯಾಗಿಸಿಕೊಳ್ಳುವುದಕ್ಕೆ ಬದಲಾಗಿ ಇಲ್ಲದವರನ್ನು ಗುರಿಯಾಗಿಸಿಕೊಂಡಿದೆ. ದೇವಾಲಯಗಳಿಗೆ ಲಕ್ಷಾಂತರ ಕೋಟಿ ಬೆಲೆಯ ವಜ್ರದ ಕಿರೀಟ, ಚಿನ್ನದ ರಥ, ಬೆಳ್ಳಿಯ ಬಾಗಿಲು ದಾನ ನೀಡುವವರ ಮೇಲೆ ತೆರಿಗೆಯಿಲ್ಲ. ಈ ದಾನದ ಮೌಲ್ಯದ ಮೇಲೆ ಶೇ 50 ರಷ್ಟು ತೆರಿಗೆ ವಿಧಿಸಿದರೆ ಸರ್ಕಾರಕ್ಕೆ ಈ ಸಪ್ತ ಮಿತವ್ಯಯದ ಅಗತ್ಯವೇ ಬೀಳುವುದಿಲ್ಲ. ದೇಶದಲ್ಲಿ ಒಟ್ಟು ಚಿನ್ನದಲ್ಲಿ ಅರ್ಧದಷ್ಟು ದೇವಾಲಯಗಳಲ್ಲಿ ಶೇಖರಣೆಗೊಂಡಿದೆ.
ಚಿನ್ನವನ್ನು ಖರೀದಿಸಬಾರದು ಎಂಬ ಕರೆಯು ಆಭರಣಗಳ ಉದ್ದಿಮೆಯಲ್ಲಿನ 40 ಲಕ್ಷ ಕುಶಲಕರ್ಮಿಗಳ ಬದುಕು ಬೀದಿಗೆ ಬೀಳುತ್ತದೆ. ದೇವಾಲಯಗಳಿಗೆ ನೀಡುವ ಚಿನ್ನದ ದಾನದ ಮೇಲೆ ಶೇ. 50ರಷ್ಟು ತೆರಿಗೆ ವಿಧಿಸಿದರೆ ಅದರಿಂದ ನಿರುದ್ಯೋಗ ಉಂಟಾಗುವುದಿಲ್ಲ.
ಖಾಸಗೀಕರಣದ ಆರಾಧನೆ!!
ಮೋದಿ ಅವರ ಸರ್ಕಾರವು ಖಾಸಗೀಕರಣವನ್ನು ಪ್ರೋತ್ಸಾಹಿಸುತ್ತಿದೆ. ಖಾಸಗಿ ವಲಯವನ್ನು ವೈಭವೀಕರಿಸುತ್ತಿದೆ. ಆದರೀಗ ಜ್ಞಾನೋದಯವಾಗಿರುವ ಮೋದಿ ಅವರು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡಬೇಕು, ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡಬೇಕು ಎಂದು ಕರೆ ನೀಡಿದ್ದಾರೆ. ಸಾರ್ವಜನಿಕ ವಾಯು ಸಾರಿಗೆ ಭಾರತದಲ್ಲಿದೆಯೇ? ಹಾಗಾದರೆ ಯಾವ ವಿಮಾನದಲ್ಲಿ ಹಾರಾಡಬೇಕು ಎಂದು ಭಾರತದ ಆರ್ಥಿಕತೆಯು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ (ಇರಾನ್-ಅಮೆರಿಕ-ಇಸೇಲ್ ಯದ್ಧವನ್ನು ಬಿಟ್ಟು) ಅದಕ್ಕೆ ಮುಖ್ಯ ಕಾರಣ ಅತಿಯಾದ ಖಾಸಗೀಕರಣ. ಶಿಕ್ಷಣ ಆರೋಗ್ಯ, ಕುಟಿಯುವ ನೀರು, ವಿದ್ಯತ್, ಸಾರಿಗೆ, ಕಮ್ಯೂನಿಕೇಶನ್… ಹೀಗೆ ಎಲ್ಲವು ಖಾಸಗಿವಲಯಕ್ಕೆ ಪ್ರಧಾನ ನೀಡುತ್ತಿದ್ದಾರೆ.
ನಾವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಇದು ಸ್ವಲ್ಪಮಟ್ಟಿಗೆ ಸ್ವಯಂಕೃತಾಪರಾಧ. ಇರಾನ್ ಮತ್ತು ರಷ್ಯಗಳ ಜೊತೆಗಿನ ನಿಡುಗಾಲದ ಸಂಬಂಧವನ್ನು ಮುರಿದು “ಅಂತಾರಾಷ್ಟ್ರೀಯ ಕ್ರಿಮಿನಲ್” ಎಂಬ ಖ್ಯಾತಿಗೆ ಒಳಗಾದ ಇಸ್ರೇಲ್ ಜೊತೆಯಲ್ಲಿ ಸಂಬಂಧ ಮಾಡಿಕೊಳ್ಳುವ ಅಗತ್ಯವೇನಿತ್ತು? ಯುದ್ಧ ಆರಂಭವಾಗಿ ಒಂದು ದಿನ ಮುಂಚೆ ಇಸ್ರೇಲಿಗೆ ನೀಡಿದ ಪ್ರಧಾನಿ ಭೇಟಿಯು ಜಾಗತಿಕವಾಗಿ ಏನು ಸಂದೇಶ ನೀಡಿದೆ? ಇದರ ಫಲವಾಗಿ ತೀವ್ರ ಇಂಧನ-ತೈಲ ಬಿಕ್ಕಟ್ಟನನ್ನು ಭಾರತ ಎದುರಿಸಬೇಕಾಗಿದೆ. ಹೊಟ್ಟೆಬಟ್ಟೆ ಕಟ್ಟಿಕೊಳ್ಳಿ ಎಂದು ನೀಡಿರುವ ಪ್ರಧಾನಿಗಳ ಕರೆಯು ತಾರತಮ್ಯದಿಂದ, ಅಸಮಾನತೆಯಿಂದ ಕೂಡಿದೆ. ಭಾರತ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟಿನ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವು ಹೊರಬೇಕಾಗಿದೆ.
ಅಮೆರಿಕೆಯ ರಫ್ತುಗಳ ಮೇಲೆ ಶೂನ್ಯ ತೆರಿಗೆ, ಭಾರತದ ರಫ್ತುವಿನ ಮೇಲೆ ಶೇ 18 ತೆರಿಗೆ: ಈ ವ್ಯಾಪಾರ ಒಪ್ಪಂದವನ್ನು ಏಕೆ ಮಾಡಿಕೊಳ್ಳಬೇಕಾಗಿತ್ತು? ಇದರ ಪರಿಣಾಮವನ್ನು ಈಗ ಭಾರತ ಉಣ್ಣಬೇಕಾಗಿದೆ. ನಮ್ಮ ರಪ್ತುವಿನ ಗಳಿಕೆ ಕಡಿಮೆ; ಆದರೆ ಆಮದುವಿನ ಪಾವತಿ ಹೆಚ್ಚು. ಇದನ್ನೇ ಚಾಲ್ತಿ ಖಾತೆಯಲ್ಲಿನ ಕೊರತೆ ಎನ್ನಲಾಗಿದೆ. ನಮ್ಮ ರೂಪಾಯಿಯ ಡಾಲರ್ ಎದುರಿಗಿನ ವಿನಿಮಯ ದರದಲ್ಲಿನ ಕೇಳರಿಯದಂತಹ ಕುಸಿತಕ್ಕೆ ಇದು ಒಂದು ಮುಖ್ಯ ಕಾರಣ, ನರೇಂದ್ರ ಮೋದಿ ಅವರು ಆರ್ಥಿಕತೆಯನ್ನು ನಿರ್ವಹಿಸುವುದರಲ್ಲಿ ವಿಫಲರಾಗಿದ್ದಾರೆ. ಅಂತಾರಾಷ್ಟ್ರೀಯ ರಾಜತಾಂತ್ರಿಕ ಸಂಬಂಧ ಹಾಗೂ ವಿದೇಶಿ ನೀತಿಯನ್ನು ಸಮರ್ಪಕವಾಗಿ ನಾವು ನಿರ್ವಹಿಸುತ್ತಿಲ್ಲ. ಈ ವೈಫಲ್ಯವನ್ನು ಸರಿಪಡಿಸಿಕೊಳ್ಳದಿದ್ದರೆ ಪ್ರಧಾನಿಗಳ ಏಳು ಆರ್ಥಿಕ ರಾಷ್ಟ್ರಪ್ರೇಮದ ಕರೆಯೂ ವಿಫಲವಾಗುತ್ತದೆ.

ಟಿ ಆರ್ ಚಂದ್ರಶೇಖರ
ವಿಶ್ರಾಂತ ಪ್ರಾಧ್ಯಾಪಕ, ಲೇಖಕರು



