ಲೋಕಸಭೆ ಕದನ | ಸಂಘರ್ಷ ಪೀಡಿತ ಮಣಿಪುರದಲ್ಲಿ ಬಿಜೆಪಿ ಸ್ಥಿತಿ ಏನಾಗಿದೆ?

Date:

ಮಣಿಪುರದಲ್ಲಿ ಬಿಜೆಪಿ ಕಳೆದೆರಡು ಚುನಾವಣೆಯಲ್ಲೂ ಮತಪ್ರಮಾಣದಲ್ಲಿ ಏರಿಕೆ ಕಂಡಿದ್ದರೂ ಈ ಬಾರಿ ಮೈತ್ರಿಗೆ ಒಂದು ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದು ಏತಕ್ಕೆ ಎಂಬುದು ಚರ್ಚಿಸಬೇಕಾದ ವಿಚಾರ

ಇಡೀ ದೇಶದಲ್ಲಿ ಚುನಾವಣೆ ಕಾವು ಬಿರು ಬೇಸಿಗೆಯಲ್ಲಿ ರಂಗೇರಿದೆ. ಇತ್ತ ಸಂಘರ್ಷ ಪೀಡಿತ ಮಣಿಪುರದಲ್ಲಿ ಚುನಾವಣೆ ಹೇಗಿದೆ ಎಂಬ ಕುತೂಹಲ ಜನರಲ್ಲಿ ಇದ್ದೇ ಇದೆ. ಮೇ 3ರಂದು ಆರಂಭವಾದ ಜನಾಂಗೀಯ ಕಲಹದ ನಂತರ ಮಣಿಪುರ, ಅನಧಿಕೃತವಾಗಿ ಎರಡು ವಿಭಾಗವಾಗಿದ್ದು, ಚುನಾವಣಾ ತಂತ್ರಗಾರಿಕೆಗಳೂ ಈ ಸಲ ಬದಲಾದಂತೆ ಕಾಣುತ್ತಿವೆ.

ಮಣಿಪುರದಲ್ಲಿ ಕೆಲವು ಸ್ವಾರಸ್ಯಕರ ಬೆಳವಣಿಗೆಗಳಾಗಿವೆ. 56 ಇಂಚಿನ ಎದೆಯ ಮೋದಿಯವರು ಚುನಾವಣೆ ಸಂದರ್ಭದಲ್ಲಾದರೂ ಮಣಿಪುರಕ್ಕೆ ಹೋಗುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಮಣಿಪುರದಲ್ಲಿ ಇರುವ ಎರಡು ಲೋಕಸಭಾ ಕ್ಷೇತ್ರಗಳ ಪೈಕಿ ಒಂದರಲ್ಲಿ ಬಿಜೆಪಿ ಈ ಬಾರಿ ಸ್ಪರ್ಧಿಸುತ್ತಿಲ್ಲ. ಅಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಗುರುತಿಸಿಕೊಂಡಿರುವ ನಾಗಾ ಪೀಪಲ್ಸ್ ಫ್ರಂಟ್‌ (ಎನ್‌ಪಿಎಫ್‌) ಅಭ್ಯರ್ಥಿಗೆ ತಮ್ಮ ಬೆಂಬಲ ನೀಡುವುದಾಗಿ ಮಣಿಪುರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಹೇಳಿದ್ದಾರೆ. ಇದು ಮೈತ್ರಿಗೆ ನೀಡಿದ ಸ್ಥಾನವೆಂದು ಸರಳವಾಗಿ ಗ್ರಹಿಸಿಬಿಡಬೇಕಾದ ಸಂಗತಿಯಲ್ಲ. ಅದರಾಚೆಗೂ ನಾವು ಗಮನಿಸಬೇಕಾದ ಕೆಲವು ಸತ್ಯಗಳಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಣಿಪುರದಲ್ಲಿ ಎರಡು ಲೋಕಸಭಾ ಕ್ಷೇತ್ರಗಳಿವೆ. ಒಂದು: ಮೈತೇಯಿ ಸಮುದಾಯದ ಪ್ರಾಬಲ್ಯವಿರುವ, ಇಂಫಾಲ ಕಣಿವೆ ಜಿಲ್ಲೆಗಳನ್ನು ’ಒಳ ಮಣಿಪುರ ಲೋಕಸಭಾ ಕ್ಷೇತ್ರ’. ಎರಡು: ಬುಡಕಟ್ಟು ಸಮುದಾಯಗಳಾದ ನಾಗಾ, ಕುಕಿ ಪ್ರಾಬಲ್ಯವಿರುವ ಗುಡ್ಡಗಾಡುಗಳನ್ನು ಒಳಗೊಂಡ ‘ಹೊರ ಮಣಿಪುರ ಲೋಕಸಭಾ ಕ್ಷೇತ್ರ’ (ಪರಿಶಿಷ್ಟ ಪಂಗಡ ಮೀಸಲು).

ಮಣಿಪುರದಲ್ಲಿ ಬಿಜೆಪಿ ಕಳೆದೆರಡು ಚುನಾವಣೆಯಲ್ಲೂ ಮತಪ್ರಮಾಣದಲ್ಲಿ ಏರಿಕೆ ಕಂಡಿದ್ದರೂ ಈ ಬಾರಿ ಮೈತ್ರಿಗೆ ಒಂದು ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದು ಏತಕ್ಕೆ ಎಂಬುದು ಚರ್ಚಿಸಬೇಕಾದ ವಿಚಾರ. ಹೊರ ಮಣಿಪುರ ಕ್ಷೇತ್ರದಲ್ಲಿ 2019ರಲ್ಲಿ ಬಿಜೆಪಿ 2,89,745 ಮತಗಳನ್ನು ಪಡೆದಿತ್ತು. ಬಿಜೆಪಿ ಅಭ್ಯರ್ಥಿ ಶೋಖೋಪಾವೋ ಅವರು ಎರಡನೇ ಅತಿಹೆಚ್ಚು ಮತ ಪಡೆದವರಾಗಿದ್ದರು. 2014ರಲ್ಲಿ 75,828 ಮತಗಳನ್ನು ಪಡೆದ ಬಿಜೆಪಿ ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನದಲ್ಲಿದ್ದರು. ಅಂದರೆ ಐದು ವರ್ಷಗಳ ಅಂತರಲ್ಲಿ ಬಿಜೆಪಿ ಮತ ಪ್ರಮಾಣ ಶೇ. 23.94ರಷ್ಟು ಹೆಚ್ಚಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ತಂಗ್ಸೋ 2014ರಲ್ಲಿ ಗೆದ್ದಿದ್ದರೂ ಹಿಂದಿನ ಚುನಾವಣೆಗೆ ಹೋಲಿಸಿದರೆ  ಶೇ. 7.01 ಮತಗಳು ಇಳಿಕೆಯಾಗಿದ್ದವು. 2019ರ ವೇಳೆಗೆ ಕಾಂಗ್ರೆಸ್ ಮತಪ್ರಮಾಣ ಶೇ. 20.68ರಷ್ಟು ಕುಸಿದಿತ್ತು. ಈ ಎಲ್ಲ ಮತಗಳು ಬಿಜೆಪಿಗೆ ಶಿಫ್ಟ್ ಆದಂತೆ ಕಾಣುತ್ತಿತ್ತು. ಹಿಂದಿನ ಚುನಾವಣೆಗಳಲ್ಲಿ ಭಾರೀ ಮತಗಳನ್ನು ಗಳಿಸಿದ್ದರೂ ಮಣಿಪುರ ಹೊರ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸದಂತಹ ಇಕ್ಕಟ್ಟಿಗೆ ಸಿಲುಕಿದೆ.

ಮೇ 3ರಂದು ಆರಂಭವಾದ ಜನಾಂಗೀಯ ಕಲಹದಲ್ಲಿ ಗುಡ್ಡಗಾಡು ಮತ್ತು ಕಣಿವೆಯಾಗಿ ಮಣಿಪುರ ಬೇರ್ಪಟ್ಟಿದೆ. ಬಹುಸಂಖ್ಯಾತ ಮೈತೇಯಿ ಪರ ಧೋರಣೆಯನ್ನು ಹೊಂದಿರುವ ಬಿಜೆಪಿ ಈಗ ಗುಡ್ಡಗಾಡಿನ ಜನರ ಎದುರು ಮಾತನಾಡದ ಸ್ಥಿತಿ ತಲುಪಿದಂತೆ ಕಾಣುತ್ತಿದೆ. ಆದರೆ ಮಣಿಪುರ ಕಲಹಕ್ಕೆ ಬಿಜೆಪಿಯ ಪಾಲು ದೊಡ್ಡದಿದೆ. “ಮೋದಿ ಸುಮ್ಮನಿರುವುದರಿಂದಲೇ ಇಷ್ಟು ಕಾಲ ಕಲಹ ನಡೆಯಿತು” ಎಂಬ ಬೇಸರ ಮೈತೇಯಿ ಸಮುದಾಯದ ಸಾಮಾನ್ಯ ಜನರಲ್ಲಿಯೂ ಬೇರೂರಿದೆ.

ಚುನಾವಣೆಗೆ ಪೂರಕವಾಗಿ ಕಾಂಗ್ರೆಸ್‌ನ ಕೆಲವು ಬೆಳವಣಿಗೆಗಳನ್ನೂ ಗಮನಿಸಬೇಕಾಗುತ್ತದೆ. ಮಣಿಪುರ ದಳ್ಳುರಿಗೆ ತುತ್ತಾದ ಬಳಿಕ ಎರಡು ಬಾರಿ ರಾಹುಲ್ ಗಾಂಧಿಯವರು ಸಂಘರ್ಷ ಪೀಡಿತ ರಾಜ್ಯಕ್ಕೆ ಭೇಟಿ ನೀಡಿದ್ದರು. ಜೊತೆಗೆ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಮಣಿಪುರದ ತೌಬಲ್ ಜಿಲ್ಲೆಯಿಂದ ಆರಂಭಿಸಿದ್ದರು.

ಮೈತೇಯಿ- ಕುಕಿ ಸಮುದಾಯಗಳ ಜನಾಂಗೀಯ ಕಲಹಕ್ಕೆ ತುತ್ತಾದ ಬಹುಮುಖ್ಯವಾದ ಜಿಲ್ಲೆಗಳಲ್ಲಿ ತೌಬಲ್ ಕೂಡ ಒಂದು. ಇದು ಮೈತೇಯಿ ಸಮುದಾಯ ಪ್ರಾಬಲ್ಯವಿರುವ ಪ್ರದೇಶ. ತೌಬಲ್‌ನಿಂದ ಕ್ರಮಿಸಿ ಕಾಂಗ್ಪೊಪ್ಕಿ, ಸೇನಾಪತಿ ಜಿಲ್ಲೆಗಳನ್ನು ದಾಟಿ ನಾಗಾಲ್ಯಾಂಡ್‌ ರಾಜ್ಯಕ್ಕೆ ರಾಹುಲ್ ಪ್ರವೇಶಿಸಿದ್ದರು.

ರಾಹುಲ್ ಗಾಂಧಿಯವರು ಹಾದು ಹೋಗಿರುವ ಭಾಗಗಳು ಬಹಳ ಗಮನಾರ್ಹ. ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಕಾಂಗ್ಪೊಪ್ಕಿ ಹೆಸರು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇದು ಕುಕಿ ಸಮುದಾಯದ ಪ್ರಾಬಲ್ಯವಿರುವ ಜಿಲ್ಲೆಯಾದರೂ ಮೇ 3 ಮತ್ತು 4ರಂದು ನಡೆದ ಕಲಹದಲ್ಲಿ ಮೈತೇಯಿ ಪುರುಷರು ಕುಕಿ ಮಹಿಳೆಯರನ್ನು ಬೆತ್ತಲು ಮಾಡಿ ಮೆರವಣಿಗೆ ಮಾಡಿದ್ದು ಇದೇ ಪ್ರದೇಶದಲ್ಲಿ. ಸೇನಾಪತಿ ಜಿಲ್ಲೆಯು ನಾಗಾ ಬುಡಕಟ್ಟು ಜನಾಂಗ ಹೆಚ್ಚಿರುವ ಪ್ರದೇಶ. ಒಟ್ಟಾರೆಯಾಗಿ ಮೈತೇಯಿ, ಕುಕಿ, ನಾಗ- ಈ ಮೂರು ಸಮುದಾಯಗಳಿರುವ ಪ್ರದೇಶಗಳನ್ನು ಭಾರತ ಜೋಡೋ ನ್ಯಾಯ ಯಾತ್ರೆ ಕ್ರಮಿಸಿತ್ತು. ಈ ಜನಾಂಗಗಳು ರಾಹುಲ್ ಪ್ರವೇಶದಿಂದ ಖುಷಿಯಾಗಿದ್ದವು, ಅದ್ದೂರಿ ಸ್ವಾಗತವನ್ನೂ ಕೋರಿದ್ದವು. ಆದರೆ ಬಿಜೆಪಿ ನಾಯಕರು ಹೀಗೆ ಮೂರು ಸಮುದಾಯಗಳನ್ನು ಸಂಪರ್ಕಿಸುವ ಎದೆಗಾರಿಕೆಯನ್ನಾಗಲೀ, ಆತ್ಮಸಾಕ್ಷಿಯನ್ನಾಗಲೀ ಹೊಂದಿರುವುದು ಅನುಮಾನ. ಮಣಿಪುರ ದುರಂತದ ಪಾತ್ರಧಾರಿಯಾಗಿ, ಅಪರಾಧಿಯಾಗಿ ಬಿಜೆಪಿ ನಿಂತಿದೆ. ಬುಡಕಟ್ಟು ಜನರ ಪ್ರದೇಶಕ್ಕೆ ಹೋಗಿ ಮತಯಾಚನೆ ಮಾಡಲಾರದಷ್ಟು ಸ್ಥಿತಿಯಲ್ಲಿ ಬಿಜೆಪಿ ಕೂತಿದೆ. ಹೀಗಾಗಿ ಎನ್‌ಪಿಎಫ್‌ಗೆ ಬೆಂಬಲ ನೀಡುವುದೇ ಬಿಜೆಪಿಗಿರುವ ಕಟ್ಟಕಡೆಯ ಆಯ್ಕೆಯಾದಂತೆ ಕಾಣುತ್ತದೆ.

ಕಾಂಗ್ರೆಸ್ ಪಕ್ಷ ಗುಡ್ಡಗಾಡು ಮತ್ತು ಕಣಿವೆ ಎರಡು ಭಾಗದಲ್ಲೂ ಸ್ವತಂತ್ರವಾಗಿ ಸ್ಪರ್ಧಿಸುತ್ತಿದೆ. ಹೊರ ಮಣಿಪುರ ಕ್ಷೇತ್ರದಲ್ಲಿ ನಾಗಾ ಸಮುದಾಯಕ್ಕೆ ಸೇರಿದ ಮಾಜಿ ಶಾಸಕ ಆಲ್ಫ್ರೆಡ್ ಕಂಗಮ್ ಆರ್ಥರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ನಾಗಾ ಪೀಪಲ್ಸ್‌ ಫ್ರಂಟ್‌ನಿಂದ ಕಚುಯಿ ತಿಮೋತಿ ಝಿಮಿಕ್ ಅವರನ್ನು ಕಣಕ್ಕಿಳಿಸಲಾಗುತ್ತಿದೆ.

ನಾಗಾ ಪ್ರಾಬಲ್ಯದ ಉಖ್ರುಲ್ ಜಿಲ್ಲೆಯಲ್ಲಿ ಚುನಾವಣಾ ತಯಾರಿಯ ಭಾಗವಾಗಿ ಇತ್ತೀಚೆಗೆ ಆಯೋಜಿಸಲಾಗಿದ್ದ ಮೂರು ಪ್ರತ್ಯೇಕ ಸಾರ್ವಜನಿಕ ಸಭೆಗಳಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ  ನಡೆಸಿದ್ದರು. ಈ ವೇಳೆ ಪ್ರಾಣಾಪಾಯದಿಂದ ಪಾರಾಗಿರುವ ವ್ಯಕ್ತಿ ಆರ್ಥರ್‌. ಅಂಥವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಗಮನ ಸೆಳೆದಿದೆ. ಇತ್ತ ಎನ್‌ಪಿಎಫ್‌ ತನ್ನ ಹಾಲಿ ಸಂಸದರ ಬದಲಿಗೆ ನಿವೃತ್ತ ಭಾರತೀಯ ಕಂದಾಯ ಸೇವೆ ಅಧಿಕಾರಿ ಝಿಮಿಕ್ ಅವರಿಗೆ ಟಿಕೆಟ್ ನೀಡಿದೆ.  ಎನ್‌ಪಿಎಫ್‌ಗೆ ಬೆಂಬಲ ಘೋಷಿಸಿ ಸುಮ್ಮನಿರುವುದಷ್ಟೇ ಬಿಜೆಪಿಯ ಸ್ಥಿತಿಯಾಗಿದೆ.

ಒಳಮಣಿಪುರ ಲೋಕಸಭೆ ವಿಚಾರಕ್ಕೆ ಬರುವುದಾದರೆ, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್‌ ಆಗಿದ್ದಂತಹ ಕೊಯಿಜಮ್ ಬಿಮಲ್ ಅಂಗೋಂಚ ಅವರನ್ನು ಕಾಂಗ್ರೆಸ್ ಈ ಸಲ ಕಣಕ್ಕಿಳಿಸುತ್ತಿದೆ. ಬಿಜೆಪಿ ಅಭ್ಯರ್ಥಿಯ ಆಯ್ಕೆ ಮಾರ್ಚ್ 26ರವರೆಗೂ ಅಂತಿಮವಾಗಿರಲಿಲ್ಲ. ಮಣಿಪುರ ಮುಖ್ಯಮಂತ್ರಿ ಬಿರೇನ್ ಅವರನ್ನೇ ಇಲ್ಲಿ ಕಣಕ್ಕಿಳಿಸಲು ಬಿಜೆಪಿಯ ರಾಷ್ಟ್ರೀಯ ನಾಯಕರು ಬಯಸಿದ್ದರು ಎನ್ನಲಾಗುತ್ತೆ. ಆದರೆ ಅದಕ್ಕೆ ಬಿರೇನ್ ಒಪ್ಪಿಕೊಂಡಿಲ್ಲ. ಅಂತಿಮವಾಗಿ ಮಣಿಪುರದ ಶಿಕ್ಷಣ ಸಚಿವ ತೌನೊಜಂ ಬಸಂತ ಕುಮಾರ್ ಸಿಂಗ್ ಅವರನ್ನು ಒಳ ಮಣಿಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡರ ಅಭ್ಯರ್ಥಿಗಳು ಮೈತೇಯಿ ಸಮುದಾಯಕ್ಕೆ ಸೇರಿದ್ದಾರೆ.

ಇಂಫಾಲ ಕಣಿವೆಗೆ ಹೊಂದಿಕೊಂಡಂತೆ ಆರು ಜಿಲ್ಲೆಗಳು, ಗುಡ್ಡಗಾಡಿಗೆ ಹೊಂದಿಕೊಂಡಂತೆ 10 ಜಿಲ್ಲೆಗಳಿವೆ. ಇಂಫಾಲ ಕಣಿವೆಯಲ್ಲಿ 10 ಪರ್ಸೆಂಟ್ ಭೂಪ್ರದೇಶವಿದ್ದರೂ ಅದು ಫಲವತ್ತಾದ ಭೂಭಾಗ. ಶೇ. 90ರಷ್ಟು ಭೂಭಾಗ ಗುಡ್ಡಗಾಡು ಜಿಲ್ಲೆಗಳಲ್ಲಿದೆ. ಮೊದಲೇ ಹೇಳಿದಂತೆ ಮುಖ್ಯವಾಗಿ ಮೂರು ಜನಾಂಗಗಳನ್ನು ಮಣಿಪುರ ಹೊಂದಿದೆ- ಮೈತೇಯಿ, ಕುಕಿ ಮತ್ತು ನಾಗಾ.

ಮೈತೇಯಿಗಳು ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 53 ರಷ್ಟಿದ್ದು, ಇವರು ಪ್ರಧಾನವಾಗಿ ಪೂರ್ವ ಇಂಫಾಲ, ಪಶ್ಚಿಮ ಇಂಫಾಲ್, ತೌಬಲ್, ಕಕ್ಚಿಂಗ್‌, ಬಿಷ್ಣುಪುರ್ ಮತ್ತು ಜಿರಿಬಾಮ್ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಇವೆಲ್ಲವೂ ಕಣಿವೆಗೆ ಹೊಂದಿಕೊಂಡಿರುವ ಜಿಲ್ಲೆಗಳು.

ಒಟ್ಟು ಜನಸಂಖ್ಯೆಯ ಶೇಕಡಾ 41ರಷ್ಟು ಬುಡಕಟ್ಟು ಸಮುದಾಯಗಳಿವೆ. ಅದರಲ್ಲಿ ನಾಗಾ ಶೇ. 17 ಮತ್ತು ಕುಕಿಗಳು ಶೇ. 26ರಷ್ಟು ಇದ್ದಾರೆ. ಮಣಿಪುರ ರಾಜ್ಯದ ಉತ್ತರದ ಜಿಲ್ಲೆಗಳಲ್ಲಿ- ಅಂದರೆ ಸೇನಾಪತಿ, ಉಖ್ರುಲ್, ತಮೆಂಗ್ಲಾಂಗ್ ಮತ್ತು ದಕ್ಷಿಣ ಭಾಗದ ಚಂದೇಲ್ ಜಿಲ್ಲೆಗಳಲ್ಲಿ ನಾಗಾಗಳು ಹೆಚ್ಚು ಕಾಣಸಿಗುತ್ತಾರೆ.

ಕುಕಿ ಸಮುದಾಯವು ಪ್ರಧಾನವಾಗಿ ದಕ್ಷಿಣದ ಚೂರಾಚಾಂದ್ಪುರ, ಕಾಂಗ್‌ಪೋಕ್ಪಿ, ಚಾಂದೇಲ್‌ ಮತ್ತು ತೆಂಗ್‌ನೌಪಾಲ್ ಜಿಲ್ಲೆಗಳಲ್ಲಿ ಹೆಚ್ಚಿದ್ದಾರೆ. ನಾಗಾ ಮತ್ತು ಕುಕಿಗಳಲ್ಲಿ ಶೇ. 95ರಷ್ಟು ಜನರು ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳಾಗಿದ್ದಾರೆ.

ಮಣಿಪುರದಲ್ಲಿ ಸಂಘರ್ಷ ನಡೆಯುತ್ತಿರುವುದು ಮೈತೇಯಿ ಮತ್ತು ಕುಕಿಗಳ ನಡುವೆ. ಕುಕಿಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ನೀಡಬೇಕೆಂಬುದು ಕುಕಿಗಳ ಆಗ್ರಹ. ಆದರೆ ಮತ್ತೊಂದು ಬುಡಕಟ್ಟು ಸಮುದಾಯವಾಗಿರುವ ಮತ್ತು ಕುಕಿಗಳು ಇರುವಲ್ಲಿ ಗಣನೀಯವಾಗಿಯೂ ಇರುವ ನಾಗಾಗಳು ಪ್ರತ್ಯೇಕ ಆಡಳಿತ ವ್ಯವಸ್ಥೆಗೆ ವಿರುದ್ಧವಿದ್ದಾರೆ. ಹೀಗಾಗಿ ಕುಕಿಗಳಿಗೆ ಹಿನ್ನಡೆಯಾಗಿದ್ದು ಸತ್ಯ. ಒಂದು ವೇಳೆ ಕುಕಿಗಳ ಆಗ್ರಹ ದೊಡ್ಡದಾದರೆ ಗ್ರೇಟರ್‌ ನಾಗಲ್ಯಾಂಡ್‌ (ಅಂದರೆ ಉತ್ತರ ಮಣಿಪುರದಲ್ಲಿ ನಾಗಾಗಳು ಹೆಚ್ಚಿರುವ ಜಿಲ್ಲೆಗಳನ್ನು ನಾಗಾಲ್ಯಾಂಡ್‌ಗೆ ಸೇರಿಸಬೇಕೆಂಬ ಆಗ್ರಹ) ಹೋರಾಟ ಮರುಜೀವ ಪಡೆಯುವ ಆತಂಕವಂತೂ ಇದೆ.

ವಿಶೇಷವೆಂದರೆ ಮೈತೇಯಿಗಳಿಗೆ ಎಸ್‌ಟಿ ಸ್ಥಾನಮಾನ ನೀಡಬೇಕು ಎಂಬ ತೀರ್ಪನ್ನು ಮಣಿಪುರ ಹೈಕೋರ್ಟ್ ನೀಡಿದಾಗ ಅದನ್ನು ವಿರೋಧಿಸಿ ಕುಕಿಗಳೊಂದಿಗೆ ನಾಗಾಗಳೂ ಹೋರಾಡಿದ್ದರು. ತದನಂತರ ಕುಕಿಗಳನ್ನಷ್ಟೇ ಮೈತೇಯಿಗಳು ಶತ್ರುಗಳನ್ನಾಗಿ ಪರಿಗಣಿಸಿದರು ಎಂದು ವಿಶ್ಲೇಷಣೆಗಳು ಹೇಳುತ್ತವೆ. ಆದರೆ ಸಪರೇಟ್ ಆಡ್ಮಿನಿಸ್ಟ್ರೇಷನ್ಗೆ ನಾಗಾಗಳ ವಿರೋಧವಿದೆ.

ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಅಂದರೆ ಹೊರ ಮಣಿಪುರದಲ್ಲಿ ಕಾಂಗ್ರೆಸ್‌- ಎನ್‌ಪಿಎಫ್‌ನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಬ್ಬರೂ ನಾಗಾ ಸಮುದಾಯಕ್ಕೆ ಸೇರಿದವರು. ಇಂತಹ ಹೊತ್ತಿನಲ್ಲಿ ನಾಗಾಗಳಿಗಿಂತ ಹೆಚ್ಚಿರುವ ಕುಕಿಗಳು ತಮ್ಮ ಅಭ್ಯರ್ಥಿಯನ್ನು ಹಾಕುತ್ತಾರಾ ಎಂಬ ಕುತೂಹಲವಂತೂ ಇತ್ತು. ಕುಕಿಗಳ ರಾಜಧಾನಿ ಎಂದೇ ಹೇಳಬಹುದಾದ ಚೂರಾಚಾಂದ್ಪುರದಲ್ಲಿ ಕುಕಿ ಸಂಘಟನೆಗಳು ನೆಲೆಸಿವೆ.  Indigenous Tribal Leaders’ Forum (ITLF) ಮುಖ್ಯವಾದ ಕುಕಿ ಸಂಘಟನೆ. ಕಳೆದ ಕೆಲವು ತಿಂಗಳ ಹಿಂದೆ ನಾವು ಮಣಿಪುರಕ್ಕೆ ವರದಿಗೆ ಹೋಗಿದ್ದ ಸಂದರ್ಭದಲ್ಲಿ ಚೂರಚಾಂದ್ಪುರದ (ಕುಕಿಗಳು ಈ ನಗರವನ್ನು ಲಮ್ಕಾ ಎಂದು ಕರೆಯುತ್ತಾರೆ) ಐಟಿಎಲ್‌ಎಫ್‌ ಕಚೇರಿಗೂ ಹೋಗಿದ್ದವು. ಈಗಾಗಲೇ ಪ್ರತ್ಯೇಕವಾದ ಆಡಳಿತ ವ್ಯವಸ್ಥೆಯನ್ನು ಇಲ್ಲಿನ ಸಂಘಟನೆಗಳು ರೂಪಿಸಿಕೊಳ್ಳುತ್ತಿರುವುದು ಢಾಳಾಗಿ ಕಂಡಿತ್ತು. ಸದ್ಯದ ಸ್ಥಿತಿಯಲ್ಲಿ ನಾಗಾಗಳ ವಿರೋಧ ಹಾಕಿಕೊಳ್ಳುವುದು ಕುಕಿಗಳಿಗೂ ಕಷ್ಟ. ಹೀಗಾಗಿ ಒಂದು ನಿರ್ಧಾರಕ್ಕೆ ಬಂದಿರುವ ಐಟಿಎಲ್‌ಎಫ್‌, “ನಾವು ಎದುರಿಸುತ್ತಿರುವ ದುಸ್ಥಿತಿಯನ್ನು ಪರಿಗಣಿಸಿ ಮುಂಬರುವ ಲೋಕಸಭೆ ಚುನಾವಣೆಗೆ ಕುಕಿ-ಜೋ ಸಮುದಾಯದ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸಬಾರದು” ಎಂಬ ನಿರ್ಧಾರಕ್ಕೆ ಬಂದಿದೆ.

ಹೀಗಾಗಿ ಮಣಿಪುರ ಎರಡು ಲೋಕಸಭಾ ಕ್ಷೇತ್ರಗಳ ಪೈಕಿ ಒಂದರಲ್ಲಿ ನಾಗಾ ಅಭ್ಯರ್ಥಿಗಳ ನಡುವೆ, ಮತ್ತೊಂದರಲ್ಲಿ ಮೈತೇಯಿ ಅಭ್ಯರ್ಥಿಗಳ ನಡುವೆ ಫೈಟ್ ಆಗಲಿದೆ. ಬಿರೇನ್ ಸಿಂಗ್ ಅವರು ಬೆಂಬಲ ನೀಡಿರುವ ಎನ್‌ಪಿಎಫ್‌ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರವನ್ನಂತೂ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ. ಆದರೆ ಈ ಆಂತರಿಕ ಕಲಹಕ್ಕೆ ಕಾರಣವಾಗಿರುವ ಮೈತೇಯಿ ದುರಭಿಮಾನದ ಸಂಘಟನೆಗಳಾದ ಆರಂಬೈ ತೆಂಗೋಲ್, ಮೈತೇಯಿ ಲೀಪೂನ್‌ಗಳನ್ನು ಪೋಷಿಸುತ್ತಿರುವ ಬಿರೇನ್‌ ಸಿಂಗ್‌ ಅವರು ಎನ್‌ಪಿಎಫ್‌ಗೆ ಬೆಂಬಲ ಘೋಷಿಸಿರುವುದನ್ನು ಕುಕಿ ಸಮುದಾಯ ಹೇಗೆ ನೋಡುತ್ತದೆ? ಇಬ್ಬರು ನಾಗಾಗಳಲ್ಲಿ ಯಾರಿಗೆ ಕುಕಿಗಳು ಮತ ಹಾಕುತ್ತಾರೆ? ಎಂಬುದು ಹೊರ ಮಣಿಪುರ ಲೋಕಸಭೆಯ ಫಲಿತಾಂಶವನ್ನು ನಿರ್ಧರಿಸುತ್ತದೆ.

ಯತಿರಾಜ್‌ ಬ್ಯಾಲಹಳ್ಳಿ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

26/11 ದಾಳಿಯ ಉಗ್ರ ಕಸಬ್‌ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಮುಂಬೈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಮುಂಬೈನ 26/11ರ ಭಯೋತ್ಪಾದನಾ ದಾಳಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ವಕೀಲ ಉಜ್ವಲ್...

ಕುಮಾರಣ್ಣನ ಜೇಬಲ್ಲಿದ್ದ ‘ಪೆನ್‌ಡ್ರೈವ್‌’ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯ್ತು: ಡಿ ಕೆ ಶಿವಕುಮಾರ್

ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಜೆಡಿಎಸ್ ಸಂಸದ ಹಾಗೂ ಹಾಸನ...

‘ಬರ ಪರಿಹಾರ ಸಾಕು’ ಎಂದಿರುವ ಕುಮಾರಸ್ವಾಮಿ ನಾಡದ್ರೋಹಿ: ಡಿಸಿಎಂ ಡಿಕೆಶಿ ವಾಗ್ದಾಳಿ

"ಕೇಂದ್ರ ಸರ್ಕಾರ ಕರ್ನಾಟಕದ ಬರಕ್ಕೆ ಅಲ್ಪ ಪರಿಹಾರ ಮೊತ್ತ ಘೋಷಿಸಿದ್ದು, ನಾವು...

ಹಿಂದುಳಿದ ಸಮುದಾಯಗಳೇ ಎಚ್ಚರ, ಮೋದಿ ನಿಮ್ಮ ಹಾದಿ ತಪ್ಪಿಸುತ್ತಿದ್ದಾರೆ: ಘರ್ಜಿಸಿದ ಸಿದ್ದರಾಮಯ್ಯ

ರಾಜ್ಯದ ಹಿಂದುಳಿದ ಸಮುದಾಯಗಳೇ ಎಚ್ಚರ. ಮೋದಿ ನಿಮ್ಮ ಹಾದಿ ತಪ್ಪಿಸಿ ಮುಸ್ಲಿಮರ...