“ನೇಹಾ ಹಿರೇಮಠ ಅವರ ಕೊಲೆ ಮತ್ತು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣ- ಈ ಎರಡೂ ಪ್ರಕರಣಗಳಲ್ಲಿ ಕಾಣುತ್ತಿರುವುದು ವಿಷಕಾರಿ ಪುರುಷತ್ವ” ಎಂದು ಹೋರಾಟಗಾರ, ನಟ ಚೇತನ್ ಹೇಳಿದರು.
ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
“ನಾನು ಏನು ಮಾಡಿದರೂ ತಪ್ಪಿಸಿಕೊಳ್ಳುತ್ತೇನೆ ಎಂಬ ಪುರುಷಾಧಿಕಾರ ಇಲ್ಲಿ ಕಾಣುತ್ತಿದೆ. ನೇಹಾ ಹಿರೇಮಠ ಅವರ ಕೊಲೆಯಲ್ಲಿ ಆಗಲೀ, ಪ್ರಜ್ವಲ್ ರೇವಣ್ಣನ ಪ್ರಕರಣದಲ್ಲಿ ಆಗಲಿ ವಿಷಕಾರಿ ಪುರುಷತ್ವ ಕಾಣುತ್ತಿದೆ. ನೀನು ನಿರಾಕರಿಸಿದರೆ ಕೊಲೆ ಮಾಡುತ್ತೇನೆ, ವಿಡಿಯೊ ಮಾಡಿಕೊಂಡು ಬೆದರಿಸುತ್ತೇನೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತಿದೆ” ಎಂದು ತಿಳಿಸಿದರು.
“ಸಂತ್ರಸ್ತರನ್ನು ಅವಮಾನಿಸುವುದಾಗಲೀ, ನಿಂದಿಸುವುದಾಗಲೀ ಆಗಬಾರದು. ಮಹಿಳೆಯರು ಒಪ್ಪಿಗೆ ಇದ್ದು ಲೈಂಗಿಕ ಕೃತ್ಯದಲ್ಲಿ ತೊಡಗಿರಬಹುದು, ಇಲ್ಲದೆಯೂ ತೊಡಗಿರಬಹುದು- ಆದರೆ ಇವರೆಲ್ಲರೂ ಸಂತ್ರಸ್ತರು. ಇದನ್ನು ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಬೇಕು” ಎಂದು ಆಶಿಸಿದರು.
“ಆರೋಪ ಸಾಬೀತು ಆಗುವವರೆಗೂ ಅಪರಾಧಿಯಲ್ಲ ಎಂದು ಹೇಳುತ್ತಾರೆ. ಆದರೆ ವಿಡಿಯೊಗಳಲ್ಲಿನ ದನಿ ಇರಬಹುದು, ಫೋಟೋಗಳಿರಬಹುದು, ತಪ್ಪಿಸಿಕೊಂಡು ಜರ್ಮನಿಗೆ ಹೋಗಿ ಹಿಂತಿರುಗದೆ ಇರುವುದು ಮತ್ತು ಹೊಳೆನರಸೀಪುರ, ಹಾಸನದ ಜನ ಆಡುತ್ತಿರುವ ಮಾತುಗಳಿರಬಹುದು- ಇವೆಲ್ಲವೂ ಘಟನೆಯನ್ನು ಸಾಬೀತು ಮಾಡುತ್ತಿವೆ. ಹೀಗಾಗಿ ಪ್ರಕರಣ ಗಂಭೀರವೂ ಆಗಿದೆ” ಎಂದು ಅಭಿಪ್ರಾಯಪಟ್ಟರು.
“ಮಹಿಳಾ ಕಾಂಗ್ರೆಸ್ ಮುಖಂಡರು ಪ್ರಜ್ವಲ್ ರೇವಣ್ಣನವರ ವಿರುದ್ಧ ಹೋರಾಟ ಮಾಡಿದ್ದಾರೆ. ಖಂಡಿತವಾಗಿಯೂ ಹೋರಾಟ ಮಾಡಬೇಕು. ಆದರೆ ಎಲ್ಲಾ ಎಲ್ಲ ಕ್ರೈಮ್‌ಗಳು ಒಂದೇ ಅಲ್ಲ. ಉಮೇಶ್ ರೆಡ್ಡಿಗೆ ಪ್ರಜ್ವಲ್ ರೇವಣ್ಣನವರನ್ನು ಹೋಲಿಕೆ ಮಾಡಲು ಆಗುವುದಿಲ್ಲ. ಉಮೇಶ್ ರೆಡ್ಡಿ 21 ಜನರನ್ನು ಕೊಂದಿದ್ದ. 18 ಜನರ ಮೇಲೆ ರೇಪ್ ಮಾಡಿದ್ದ. 9 ಪ್ರಕರಣಗಳು ಸಾಬೀತಾಗಿವೆ. ಇದರಲ್ಲಿ ಅಂತಹದ್ದು ಸದ್ಯಕ್ಕೆ ಕಂಡು ಬರುತ್ತಿಲ್ಲ” ಎಂದು ತಿಳಿಸಿದರು.
ಪ್ರಮುಖ ಮೂರು ಪಕ್ಷಗಳು ಒಳ ಒಪ್ಪಂದ ಇಟ್ಟುಕೊಂಡು ಪ್ರಕರಣವನ್ನು ಮುಚ್ಚಿ ಹಾಕುವ ಸಾಧ್ಯತೆ ಇದೆ. ಜೆಡಿಎಸ್‌ನವರೇ ಇದನ್ನು ಬೆಳಕಿಗೆ ತಂದಿರಲು ಸಾಧ್ಯವಿಲ್ಲ. ಅಲೆಯನ್ಸ್‌ನವರು ವಿಡಿಯೊ ಲೀಕ್ ಮಾಡಿದ್ದಾರೆ ಎನ್ನಲಾಗದು. ಚುನಾವಣೆ ಮೂರು ದಿನ ಇರುವಾಗ ಕಾಂಗ್ರೆಸ್‌ನವರು ಏನಾದರೂ ಬಯಲು ಮಾಡಿದ್ದರೆ ಅವರನ್ನೂ ಎಸ್‌ಐಟಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ವಿಡಿಯೊಗಳು ವೈರಲ್ ಆಗದಂತೆ ತಡೆಯಬೇಕು. ಸಂತ್ರಸ್ತ ಮಹಿಳೆಯರಿಗೆ ತೊಂದರೆಯಾದರೆ ಎಲ್ಲರೂ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.
ರೇವಣ್ಣ, ಪ್ರಜ್ವಲ್ ಮೇಲೆ ರೌಡಿ ಶೀಟರ್ ತೆರೆಯಿರಿ: ಹರಿರಾಮ್
“ಮುನ್ನೂರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಗಿದೆ. ಒಬ್ಬ ಹೋರಾಟಗಾರನ ಮೇಲೆ ಒಂದು ಪ್ರಕರಣವಾದರೆ ಸಾಕು, ರೌಡಿ ಶೀಟರ್ ತೆಗೆಯುತ್ತಾರೆ. ಈ ಕೂಡಲೇ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ.ರೇವಣ್ಣನವರ ವಿರುದ್ಧ ರೌಡಿ ಶೀಟರ್ ತೆರೆದು, ಗಡಿಪಾರು ಮಾಡಬೇಕು” ಎಂದು ಹೋರಾಟಗಾರ ಎ.ಹರಿರಾಮ್ ಆಗ್ರಹಿಸಿದರು.
“ಮಹಿಳಾ ಇನ್‌ಸ್ಪೆಕ್ಟರ್ ಮೇಲೆ ನಾಲಾಯಕ್ ಸಂಸದ ರೇಪ್ ಮಾಡಿದ್ದಾನೆ. ಪೊಲೀಸ್ ಇಲಾಖೆಯ ಮೇಲೆಯೇ ಅತ್ಯಾಚಾರವಾಗಿದೆ ಎಂಬುದು ಇದರಿಂದ ಅರ್ಥವಾಗುತ್ತಿದೆ. ಪೊಲೀಸ್ ಇಲಾಖೆಗೆ ನಾಚಿಕೆ ಆಗಬೇಕು. ಈತನನ್ನು ಕೂಡಲೇ ಬಂಧಿಸಬೇಕು” ಎಂದು ಒತ್ತಾಯಿಸಿದರು.
“ಇಷ್ಟು ಹೊತ್ತಿಗಾಗಲೇ ಅಪ್ಪ- ಮಗನನ್ನು ಅರೆಸ್ಟ್ ಮಾಡಬೇಕಿತ್ತು. ಬಾಲಕಿಯರಿದ್ದರೆ ಪೋಕ್ಸೋ ಕೇಸ್ ಹಾಕಬೇಕು, ದಲಿತ ಹೆಣ್ಣುಮಕ್ಕಳಿದ್ದರೆ ಅಟ್ರಾಸಿಟಿ ಕೇಸ್ ಕೂಡ ದಾಖಲಿಸಬೇಕು” ಎಂದರು.
ಈ ಪ್ರಕರಣ ತೀವ್ರತೆಯನ್ನು ಪಡೆದಿದೆ. ಹೀಗಿರುವ ಮಾನಗೆಟ್ಟ ಕೇಂದ್ರ ಸರ್ಕಾರ ಆರೋಪಿಗೆ ಡಿಪ್ಲೊಮೇಟಿಕ್ ಪಾಸ್ ಕೊಟ್ಟಿದೆ. ಆ ಮೂಲಕ ದೇಶ ಬಿಟ್ಟು ಹೋಗಲು ಅವಕಾಶ ನೀಡಿದೆ ಎಂದು ಆರೋಪಿಸಿದರು.
ರೇವಣ್ಣನವರನ್ನು ಸಿದ್ದರಾಮಯ್ಯನವರು ರಕ್ಷಣೆ ಮಾಡಬಹುದು ಎಂಬ ಚರ್ಚೆಗಳಾಗುತ್ತಿವೆ. ಜಾಮೀನು ಕೊಡಬೇಡಿ ಎಂದು ವಾದ ಮಾಡಬೇಕಿದ್ದ ಸರ್ಕಾರದ ವಕೀಲರು, ರೇವಣ್ಣನ ಮೇಲೆ ಯಾವುದೇ ಸಾಕ್ಷಿ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ ಇಬ್ಬರೂ ತಪ್ಪು ಮಾಡುತ್ತಿದ್ದಾರೆ. ಮಾಧ್ಯಮಗಳ ಮುಂದೆ ಬೇರೆಯ ವಿಚಾರ ಮಾತನಾಡುತ್ತಾ, ತೆರೆಯ ಹಿಂದೆ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ದೂರಿದರು.
ಮೂರು ಬದುಕುಗಳು ಹಾಳಾಗಿವೆ: ಭಾಸ್ಕರ ಪ್ರಸಾದ್
ಹೋರಾಟಗಾರ ಬಿ.ಆರ್.ಭಾಸ್ಕರ ಪ್ರಸಾದ್ ಅವರು ಮಾತನಾಡಿ, “ಇಡೀ ದೇಶವೇ ನೋಡುತ್ತಿದೆ. ಪ್ರಜ್ವಲ್ ದೇಶ ಬಿಟ್ಟು ಓಡಿ ಹೋಗಲು ಕೇಂದ್ರ ಸರ್ಕಾರ ಸಹಾಯ ಮಾಡಿದೆ. ವೀಸಾ ಕೊಟ್ಟಿದೆ. ನೇಹಾ ಪ್ರಕರಣದಲ್ಲಿ ಒಂದು ಜೀವ ಹೋಗಿದೆ. ಇಲ್ಲಿ ಮುನ್ನೂರು ಬದುಕುಗಳು ಹಾಳಾಗಿವೆ. ಬದುಕುಗಳು ಹೋಗುವುದೆಂದರೆ ಜೀವ ಹೋದದ್ದಕ್ಕೆ ಸಮಾನ. ಅವರ ಕುಟುಂಬದವರು ಬದುಕಿರುವಷ್ಟು ದಿನ ನೋವು ತಿನ್ನಬೇಕಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.
“ನೇಹಾ ಪ್ರಕರಣದಲ್ಲಿ ಮಾತನಾಡಿದ ಬಿಜೆಪಿ ಸಂಘಪರಿವಾರದವರು ಹಾಸನ ಪ್ರಕರಣದಲ್ಲಿ ಮೌನವಾಗಿರುತ್ತಾರೆ. ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ, ಪ್ರಲ್ಹಾದ ಜೋಶಿ, ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಎಲ್ಲ ನಾಯಕರೂ ನೇಹಾ ಪ್ರಕರಣದಲ್ಲಿ ಮಾತನಾಡಿದರು. ಹಾಸನದ ಪ್ರಕರಣದ ಬಗ್ಗೆ ಮಾತನಾಡಲು ಏನು ಕಾಯಿಲೆ? ಇಲ್ಲಿ 2797 ಕ್ಲಿಪ್‌ಗಳಲ್ಲಿ ಇರುವ ಮುನ್ನೂರು ಹೆಣ್ಣುಮಕ್ಕಳು ಹಿಂದೂಗಳಲ್ಲವಾ? ಮುಸಲ್ಮಾನ ಕೊಲೆ ಮಾಡಿದರೆ ಮಾತ್ರ ಇವರ ಪಾಲಿಗೆ ಹಿಂದೂ ಜಾಗೃತಿ ಆಗುತ್ತದೆ. ಪ್ರಜ್ವಲ್ ರೇವಣ್ಣ ಹಿಂದೂ ಮಹಿಳೆಯರ ಮೇಲೆ ಮಾಡಿದ್ದು ದಬ್ಬಾಳಿಕೆ ಅಲ್ಲವಾ?” ಎಂದು ಪ್ರಶ್ನಿಸಿದರು.