- ವರುಣಾದಿಂದ ಸಿದ್ದರಾಮಯ್ಯ, ಕನಕಪುರ ಕ್ಷೇತ್ರದಿಂದ ಶಿವಕುಮಾರ್
- ಕೋಲಾರ ಮತ್ತು ಬದಾಮಿ ಕ್ಷೇತ್ರದ ಅಭ್ಯರ್ಥಿಗಳ ಘೋಷಣೆ ಇಲ್ಲ
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್, ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಯುಗಾದಿ ಹಬ್ಬದಂದು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ, ಕಾರಣಾಂತರಗಳಿಂದ ಬಿಡುಗಡೆ ಮುಂದೂಡಿತ್ತು. ಇದೀಗ 124 ಮಂದಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಅಖಾಡಕ್ಕಿಳಿಯುತ್ತಿದ್ದಾರೆ. ಕನಕಪುರ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ಪರ್ಧಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಕಾರಣಕ್ಕೆ ಭಾರೀ ಸದ್ದು ಮಾಡಿದ್ದ ಕೋಲಾರ ಮತ್ತು ಬದಾಮಿ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿಲ್ಲ.
ಯು ಟಿ ಖಾದರ್ ಅವರಿಗೆ ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದರೆ, ಧ್ರುವನಾರಾಯಣ ಅವರ ಪುತ್ರ ದರ್ಶನ್ ಧ್ರುವನಾರಾಯಣ ಅವರು ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ನಂಜನಗೂಡು ಕ್ಷೇತ್ರ ಆಕಾಂಕ್ಷಿಯಾಗಿದ್ದ ಎಚ್ ಸಿ ಮಹಾದೇವಪ್ಪ ಅವರು ದರ್ಶನ್ ಅವರಿಗೆ ಟಿಕೆಟ್ ನೀಡುವಂತೆ ಹಿಂದೆ ಸರಿದಿದ್ದರು. ಇದೀಗ ಅವರಿಗೆ ಟಿ ನರಸಿಪುರದಿಂದ ಟಿಕೆಟ್ ನೀಡಲಾಗಿದೆ. ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಪುಟ್ಟಣ್ಣ ಅವರಿಗೆ ರಾಜಾಜಿನಗರದಿಂದ ಟಿಕೆಟ್ ನೀಡಲಾಗಿದೆ. ಭವ್ಯ ನರಸಿಂಹಮೂರ್ತಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರ ಯಮಕನಮರಡಿಯಿಂದ ಸತೀಶ್ ಜಾರಕಿಹೊಳಿ ಕಣಕ್ಕಿಳಿದರೆ, ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳ್ಕರ್, ಖಾನಾಪುರದಿಂದ ಅಂಜಲಿ ನಿಂಬಾಳ್ಕರ್, ಹುನಗುಂದದಿಂದ ವಿಜಯಾನಂದ್ ಎಸ್.ಕಾಶಪ್ಪನವರ್, ಸುರಪುರದಿಂದ ರಾಜ ವೆಂಕಟಪ್ಪ ನಾಯಕ, ಶಹಾಪುರದಿಂದ ಶರಣಬಸಪ್ಪ ಗೌಡ, ಚಿತ್ತಾಪುರದಿಂದ ಪ್ರಿಯಾಂಕ್ ಖರ್ಗೆ ಅವರಿಗೆ ಟಿಕೆಟ್ ನೀಡಲಾಗಿದೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಯು.ಬಿ ಬಣಕಾರ್ ಹಿರೇಕೆರೂರಿನಿಂದ ಸ್ಪರ್ಧಿಸಿದ್ದಾರೆ. ಬೀದರ್ ದಕ್ಷಿಣ ಕ್ಷೇತ್ರದಿಂದ ಅಶೋಕ್ ಖೇಣಿ ಅವರಿಗೆ ಟಿಕೆಟ್ ನೀಡಲಾಗಿದೆ.