ಲೋಕಸಭಾ ಚುನಾವಣೆ | ಬಾಗಲಕೋಟೆ: 5ನೇ ಬಾರಿಯ ಗೆಲುವು ದಾಖಲಿಸುತ್ತಾರಾ ಪಿ.ಸಿ ಗದ್ದಿಗೌಡರ್?  

Date:

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣೆ ಅಖಾಡಕ್ಕೆ ಎಲ್ಲ ಪಕ್ಷಗಳೂ ಸಜ್ಜಾಗುತ್ತಿವೆ. ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಹಂತಹಂತವಾಗಿ ಘೋಷಿಸುತ್ತಿವೆ. ಕೆಲವು ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್‌ ನೀಡಬೇಕೆಂದು ಮೀನಾಮೇಷ ಎಣಿಸುತ್ತಿವೆ. ಈ ಮದ್ಯೆ, ಕಳೆದ 20 ವರ್ಷಗಳಿಂದ ಒಬ್ಬರನ್ನೇ ಸಂಸದರಾಗಿ ಆಯ್ಕೆ ಮಾಡಿರುವ ಬಾಗಲಕೋಟೆ ಕ್ಷೇತ್ರವು ಗಮನ ಸೆಳೆಯುತ್ತಿದೆ.

ಬಾಗಲಕೋಟೆ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆ. ಮೂವರು ಸಿಎಂಗಳಿಗೆ ರಾಜಕೀಯ ನೆಲೆಯನ್ನೂ ಈ ಜಿಲ್ಲೆ ಕೊಟ್ಟಿದೆ. ಈ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಗೆದ್ದು, ಅಧಿಕಾರದ ಚುಕ್ಕಾಣಿ ಹಿಡಿದು ಬೀಗುತ್ತಿರುವ ಬಿಜೆಪಿ ಸಂಸದ ಪಿ.ಸಿ ಗದ್ದಿಗೌಡರ ಈ ಬಾರಿಯೂ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಮತ್ತೆ ಗೆಲ್ಲುತ್ತೇನೆಂಬ ವಿಶ್ವಾಸದಲ್ಲಿದ್ದಾರೆ. ಇತ್ತ, ಅವರಿಗೆ ಪೈಪೋಟಿ ನೀಡಲು ಕಾಂಗ್ರೆಸ್‌ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಕಾಂಗ್ರೆಸ್‌ ಪಾಳಯದಲ್ಲಿ ವೀಣಾ ಕಾಶಪ್ಪನವರ, ಮಾಜಿ ಸಂಸದ ವಿಜಯಕುಮಾರ್ ಸರನಾಯಕ, ಆನಂದ ನ್ಯಾಮಗೌಡ, ರಕ್ಷಿತಾ ಈಟಿ ಹಾಗೂ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್ ಅವರು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ರಾಜ್ಯದ 28 ಕ್ಷೇತ್ರಗಳ ಪೈಕಿ, 7 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಘೋಷಿಸಿರುವ ಕಾಂಗ್ರೆಸ್‌, ಬಾಗಲಕೋಟೆಗೆ ಇನ್ನೂ ಅಭ್ಯರ್ಥಿಯನ್ನು ಘೋಷಿಸಿಲ್ಲ. ಆಕಾಂಕ್ಷಿಗಳಲ್ಲಿ ವೀಣಾ ಕಾಶಪ್ಪನವರ ಲಿಂಗಾಯತ ಪಂಚಸಾಲಿ ಸಮಾಜದವರಾಗಿದ್ದರೆ, ಅಜೇಯಕುಮಾರ ಸರನಾಯಕ ರೆಡ್ಡಿ ಸಮುದಾಯ ಹಾಗೂ ರಕ್ಷಿತಾ ಈಟಿ ಕುರುಬ ಸಮುದಾಯದವರಾಗಿದ್ದಾರೆ. ಕ್ಷೇತ್ರದಲ್ಲಿ ಜಾತಿಯಿಂದಾಗಿ ಲಿಂಗಾಯತ ಹಾಗೂ ಕುರುಬ ಜನಾಂಗದವರು ನಿರ್ಣಾಯಕರಾಗಿದ್ದಾರೆ. ಇನ್ನು, ಬಾಗಲಕೋಟೆ ಪಕ್ಕದ ಜಿಲ್ಲೆ ವಿಜಯಪುರ ಮೂಲದ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್ ಅವರಿಗೆ ಕಾಂಗ್ರೆಸ್‌ ಟಿಕೆಟ್ ನೀಡಬಹುದು ಎಂದೂ ಹೇಳಲಾಗುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಾಮಾನ್ಯವಾಗಿ ಅನ್ಯ ಜಿಲ್ಲೆಯವರನ್ನು ತಮ್ಮ ಜಿಲ್ಲೆಗೆ ತಂದು ಅಭ್ಯರ್ಥಿ ಮಾಡಲು ಹೊರಟಿದ್ದಾರೆ ಎಂದು ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಈಗಾಗಲೇ ಅಸಾಮಾಧಾನವನ್ನೂ ಹೊರಹಾಕಿದ್ದಾರೆ. ಕಾರ್ಯಕರ್ತರ ಅಸಮಾಧಾನವನ್ನೇ ಮುಂದಿಟ್ಟಿರುವ ಜಿಲ್ಲೆಯ ಆಕಾಂಕ್ಷಿಗಳು ಸಂಯುಕ್ತ ಅವರಿಗೆ ಟಿಕೆಟ್ ನೀಡುವುದನ್ನು ತಪ್ಪಿಸಲು ಯತ್ನಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ ? ಬಾಗಲಕೋಟೆ ಲೋಕಸಭಾ ಕ್ಷೇತ್ರ | ವೀಣಾ ಕಾಶಪ್ಪನವರ ಪಾಲಾಗುತ್ತಾ ಕೈ ಟಿಕೆಟ್?

ಸತತ ಐದನೇ ಬಾರಿಗೆ ಗದ್ದಿಗೌಡರ್ ಗೆಲುವು?

1967 ರಿಂದ 1996ರವರೆಗೂ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಬಾಗಲಕೋಟೆ ಕ್ಷೇತ್ರ ಒಮ್ಮೆ ಜನತಾದಳ, ಮತ್ತೊಮ್ಮೆ ಲೋಕಶಕ್ತಿ ಅಭ್ಯರ್ಥಿ ಗೆಲುವಿಗೆ ಅವಕಾಶ ಮಾಡಿಕೊಟ್ಟಿದೆ. 1999ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಎಸ್‌.ಪಾಟೀಲ ಗೆಲುವು ಸಾಧಿಸಿದ್ದರು. ಅದಾದ ಬಳಿಕ, 2004ರಿಂದ ಈವರೆಗಿನ 20 ವರ್ಷಗಳಲ್ಲಿ ಬಿಜೆಪಿಯೇ ನಿರಂತರವಾಗಿ ಗೆಲ್ಲುತ್ತಿದೆ. ಅದರಲ್ಲೂ ಬಿಜೆಪಿ ಸಂಸದ ಪಿ.ಸಿ.ಗದ್ದಿಗೌಡರ್ ಅವರೇ ನಾಲ್ಕು ಬಾರಿ ಗೆದ್ದು, ಸಂಸತ್‌ನಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಗಾಣಿಗ ಲಿಂಗಾಯಿತ ಸಮುದಾಯಕ್ಕೆ ಸೇರಿದ ಪಿ.ಸಿ.ಗದ್ದಿಗೌಡರ ಐದನೇಯ ಬಾರಿಗೆ ಲೋಕಸಭಾ ಅಖಾಡಕ್ಕೆ ಇಳಿದಿದ್ದಾರೆ. ಸರಳತೆ, ಸಾತ್ವಿಕ ರಾಜಕಾರಣಿ ಎಂದೇ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದಾರೆ. ಪರ್ವತಗೌಡ ಚಂದನಗೌಡ ಗದ್ದಿಗೌಡರ್ ಎಂಬುದು ಅವರ ಮೂಲ ಹೆಸರಾದರೂ, ಪಿ.ಸಿ. ಗದ್ದಿಗೌಡರ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

ಇದೇ 20 ವರ್ಷಗಳಲ್ಲಿ ಜಾತಿ ರಾಜಕಾರಣವೂ ಮುನ್ನೆಲೆಗೆ ಬಂದಿದೆ. ಹಿಂದೆ ಇದ್ದ ಪಕ್ಷ ರಾಜಕಾರಣಕ್ಕಿಂತ ಜಾತಿ ರಾಜಕಾರಣವೇ ಅನೇಕ ಸಲ ಮೇಲುಗೈ ಸಾಧಿಸುತ್ತಿದೆ. ಪಕ್ಷ ನಿಷ್ಠೆಗಿಂತ ಜಾತಿ ನಿಷ್ಠೆಗೆ ಜನಪ್ರತಿನಿಧಿಗಳು ಆದ್ಯತೆ ನೀಡಿದ ಸಮಯದಲ್ಲಿ ಅಧಿಕಾರ ಎನ್ನುವುದು ಮೇಲ್ವರ್ಗದವರ ಕೈಯಡಿ ಸಿಲುಕಿಕೊಂಡಿದೆ.

ಇನ್ನು ಗದ್ದಿಗೌಡರ್‌ ಅವರಿಗೆ ಟಕ್ಕರ್‌ ಕೊಡಲು ಆ ಕ್ಷೇತ್ರದವರೇ ಕಣಕ್ಕಿಳಿಯಬೇಕು. ಆಗ ಮಾತ್ರ ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ತರಲು ಸಾಧ್ಯ. ಇಲ್ಲವಾದರೇ, ಈ ಬಾರಿಯೂ ಬಿಜೆಪಿಯೇ ಗೆಲುವು ಕಾಣುವ ಸಾಧ್ಯತೆಯಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಬಾಗಲಕೋಟೆ ಲೋಕಸಭಾ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಕಳೆದ ನಾಲ್ಕು ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಬದಲಿಸಿದರೂ ಗೆಲುವು ದಕ್ಕಿಲ್ಲ. ಈ ಸಲವೂ ಅಭ್ಯರ್ಥಿಯನ್ನು ಬದಲಿಸುವುದೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.

ಸದ್ಯಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವಲ್ಪ ಮತಗಳ ಅಂತರದೊಂದಿಗೆ ಸೋಲುಂಡಿದ್ದ ವೀಣಾ ಕಾಶಪ್ಪನವರ ಅವರಿಗೆ ಟಿಕೆಟ್ ನೀಡಿದರೇ, ಚುನಾವಣೆಯಲ್ಲಿ ಕೊಂಚ ಪೈಟ್ ಇರಲಿದೆ. ಬೇರೆಯವರಿಗೆ ಟಿಕೆಟ್ ನೀಡಿದರೇ, ನಿರಾಯಸವಾಗಿ ಗದ್ದಿಗೌಡರ ಗೆಲುವು ಸಾಧಿಸುತ್ತಾರೆ ಎಂದೆನ್ನುತ್ತಾರೆ ಕ್ಷೇತ್ರದ ಜನರು.

ಬಾಗಲಕೋಟೆಯಲ್ಲಿ ಮತ್ತೆ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿರುವ ವೀಣಾ ಕಾಶಪ್ಪನವರ್ ಅವರು ಈದಿನ.ಕಾಮ್ ಜೊತೆ ಮಾತನಾಡಿದ್ದು, “ಕಳೆದ ಚುನಾವಣೆಯಲ್ಲಿ ಸ್ವಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದೇನೆ. ಈ ಬಾರಿ ನನಗೆ ಟಿಕೆಟ್ ನೀಡಿದರೆ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಈ ಜಿಲ್ಲೆಯವರನ್ನು ಬಿಟ್ಟು ಬೇರೆ ಜಿಲ್ಲೆಯವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದರೆ, ಗೆಲುವು ಸಾಧಿಸುವುದು ಕನಸಿನ ಮಾತಾಗುತ್ತದೆ. ಕಳೆದ ಚುನಾವಣೆಯಲ್ಲಿ ನಾನು ಸೋಲುಂಡರು ಕಳೆದ ಐದು ವರ್ಷದಿಂದ ಜನರಿಗಾಗಿ ದುಡಿದಿದ್ದೇನೆ. ಮುಂದೆಯೂ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ” ಎಂದರು.

“ಮೋದಿ ಅಲೆಯಲ್ಲಿ ಕಳೆದ ಬಾರಿ ಗದ್ದಿಗೌಡರ್ ಅವರು ಗೆಲುವು ಸಾಧಿಸಿದ್ದಾರೆ. ಈ ಬಾರಿ ವೀಣಾ ಅವರಿಗೆ ಟಿಕೆಟ್‌ ನೀಡಿದರೆ, ಚುನಾವಣೆಯಲ್ಲಿ ಸ್ವಲ್ಪವಾದರೂ ಫೈಟ್‌ ಇರುತ್ತದೆ. ಇಲ್ಲವಾದಲ್ಲಿ, ಗದ್ದಿಗೌಡರ್ ಅವರು ಕ್ಯಾಂಪೇನ್ ಇಲ್ಲದೆಯೇ ಆರಾಮಾಗಿ ಗೆಲುವು ಸಾಧಿಸುತ್ತಾರೆ. ಗದ್ದಿಗೌಡರ್ ಅವರು ಯಾರೊಂದಿಗೂ ಭಿನ್ನಾಭಿಪ್ರಾಯ ಹೊಂದಿಲ್ಲ. ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದಾರೆ. ಸರ್ಕಾರ ನೀಡಿದ ಯೋಜನೆಗಳೆನೆಲ್ಲ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತಂದಿದ್ದಾರೆ” ಎಂದು ಹೆಸರು ಹೇಳಲಿಚ್ಚಿಸದ ಸ್ಥಳೀಯರೊಬ್ಬರು ಈ ದಿನ.ಕಾಮ್‌ಗೆ ತಿಳಿಸಿದರು.

“ಈ ಬಾರಿ ವೀಣಾ ಕಾಶಪ್ಪನವರಿಗೆ ಕಾಂಗ್ರೆಸ್‌ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ಹಾಗಾಗಿ, ಇಲ್ಲಿ ಮತ್ತೆ ಗದ್ದಿಗೌಡರ್ ಅವರು ಗೆಲುವು ಸಾಧಿಸುತ್ತಾರೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ ಜನರು ಕಾಂಗ್ರೆಸ್‌ಗೆ ಮತ ನೀಡುತ್ತಾರೆ. ಆದರೆ, ಲೋಕಸಭಾ ಚುನಾವಣೆಗೆ ಬಂದಾಗ ಜನರೇ ಮುಂದಾಗಿ ಬಿಜೆಪಿಗೆ ಮತ ಹಾಕುತ್ತಾರೆ. ಇಲ್ಲಿ ಜಾತಿ ರಾಜಕಾರಣ ಹೆಚ್ಚಾಗಿದೆ” ಎಂದು ಮತ್ತೊಬ್ಬರು ಈ ದಿನ.ಕಾಮ್‌ಗೆ ಹೇಳಿದರು.

ಬಿಜೆಪಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್​ ಯಾರನ್ನು ಕಣಕ್ಕಿಳಿಸಲಿದೆ. ಕ್ಷೇತ್ರದ ಚುನಾವಣಾ ಕಣ ಏನಾಗಲಿದೆ. ಕ್ಷೇತ್ರದ ಮತದಾರರು ಯಾರಿಗೆ ಮಣೆ ಹಾಕುತ್ತಾರೆ. ಕಾದು ನೋಡಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ ಪೆನ್‌ಡ್ರೈವ್ ಪ್ರಕರಣ | ಎಸ್‌ಐಟಿ ತಂಡದ ಮುಖ್ಯಸ್ಥರಾಗಿ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ನೇಮಕ

ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ವಿಶೇಷ ತನಿಖಾ...

ಹಾಸನ ಪೆನ್‌ಡ್ರೈವ್ ಪ್ರಕರಣ | ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಎಫ್‌ಐಆರ್

ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್...

ದೇಶಪ್ರೇಮಿ ಯುವಜನರ ಸಮಾವೇಶ | ಪಕೋಡಾ ಪ್ರದರ್ಶಿಸಿ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ

ದೇಶವನ್ನು ಅಭಿವೃದ್ಧ ಪತದಲ್ಲಿ ಕೊಂಡೊಯ್ಯುತ್ತೇವೆ ಎಂದಿದ್ದ ಮೋದಿ, ವರ್ಷಕ್ಕೆ 2 ಕೋಟಿ...

ಹಾಸನ ಪೆನ್‌ಡ್ರೈವ್ | ಪ್ರಜ್ವಲ್ ರೇವಣ್ಣ ತಪ್ಪಿಸಿಕೊಂಡಿದ್ದರೆ ನನಗೆ ಸಂಬಂಧವಿಲ್ಲ: ಎಚ್‌.ಡಿ ಕುಮಾರಸ್ವಾಮಿ

ಹಾಸನದ ಅಶ್ಲೀಲ ವಿಡಿಯೋಗಳ (ಪೆನ್‌ಡ್ರೈವ್‌) ಪ್ರಕರಣದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ....