ಹಾಸನ ರಾಜಕಾರಣದ ಶಕ್ತಿಕೇಂದ್ರ. ದೇವೇಗೌಡ, ರೇವಣ್ಣ, ಭವಾನಿ, ಬಾಲಕೃಷ್ಣ, ಪ್ರಜ್ವಲ್ ಹಾಗೂ ಶ್ರೇಯಸ್ ಪಟೇಲ್ ನಡುವಿನ ಜಿದ್ದಾಜಿದ್ದಿನ ಕಣವಾಗಿದೆ. ಮೇಲ್ನೋಟಕ್ಕೆ ಆ ಕಡೆ ತೂಕ ಹೆಚ್ಚಾದಂತೆ ಕಂಡರೂ, ಜಿಲ್ಲೆಯ ಜನ ಆರ್ಭಟಕ್ಕೆ ಅದುರುತ್ತಾರೋ, ಇಲ್ಲ ಒಳ್ಳೆಯತನಕ್ಕೆ ಮಣೆ ಹಾಕುತ್ತಾರೋ ನೋಡಬೇಕು…
ಹಾಸನ ಹಲವು ಕಾರಣಗಳಿಂದ ವಿಶಿಷ್ಟ ಜಿಲ್ಲೆ. ಹೊಯ್ಸಳ ರಾಜರ ಆಳ್ವಿಕೆಯ ಕಾಲದಲ್ಲಿ ಹಾಸನ ಕೇಂದ್ರಸ್ಥಾನವಾಗಿದ್ದು, ಬೇಲೂರು ರಾಜಧಾನಿಯಾಗಿತ್ತು. ಹೊಯ್ಸಳ ರಾಜರು ಕಲೆಗೆ ಪ್ರಾಮುಖ್ಯತೆ ಕೊಟ್ಟಿದ್ದರಿಂದ ಬೇಲೂರು-ಹಳೇಬೀಡು ಅತ್ಯದ್ಭುತ ವಾಸ್ತುಶಿಲ್ಪಗಳ ತವರೂರಾಯಿತು. ಹಾಗೆಯೇ ಶ್ರವಣಬೆಳಗೊಳದಲ್ಲಿ ಗಂಗರ ದಂಡ ನಾಯಕ ಚಾವುಂಡರಾಯ ನಿರ್ಮಿಸಿದ ಗೋಮಟೇಶ್ವರನ ಐವತ್ತೇಳು ಅಡಿ ಎತ್ತರದ ಏಕಶಿಲೆಯ ವಿಗ್ರಹವು ಪ್ರಪಂಚದಾದ್ಯಂತ ಖ್ಯಾತಿ ಪಡೆಯಿತು. ಜೈನರ ಯಾತ್ರಾಸ್ಥಳವಾಯಿತು.
ಹಾಸನ ಜಿಲ್ಲೆ ಕಣ್ಮನ ಸೆಳೆಯುವ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಜಿಲ್ಲೆಯಾಗಿದೆ. ಹಾಸನವನ್ನು ಬಡವರ ಊಟಿ, ಮಲೆನಾಡಿನ ಹೆಬ್ಬಾಗಿಲು, ಶಿಲ್ಪಕಲೆಗಳ ಬೀಡು, ಹೊಯ್ಸಳರ ನಾಡು ಎಂದೆಲ್ಲ ಕರೆಯುತ್ತಾರೆ. ಹಾಗೆಯೇ ಜಿಲ್ಲೆಯ ಅರ್ಧಭಾಗ ನೀರಾವರಿ ಇದ್ದರೆ, ಇನ್ನರ್ಧ ಭಾಗ ಬರಡು ಬಯಲುಸೀಮೆಯಿಂದ ಕೂಡಿದೆ. ತೆಂಗು, ಆಲೂಗಡ್ಡೆ, ರಾಗಿ ಇಲ್ಲಿಯ ಮುಖ್ಯ ಬೆಳೆಗಳಾಗಿವೆ.
ಹಾಸನದ ದೇಸಿ ದೇವತೆ ಪುರದಮ್ಮ-ಹಾಸನದಮ್ಮ ವೈದಿಕರ ಹಿಡಿತಕ್ಕೊಳಗಾಗಿ ಹಾಸನಾಂಬ ಆಗಿ, ವರ್ಷಕ್ಕೊಮ್ಮೆ ತೆರೆಯುವ ದೇವಿ ದರ್ಶನಕ್ಕೆ ಮುಗಿಬೀಳುವ ಭಕ್ತರಿಂದಾಗಿ, ಬಡವರ ಊಟಿ ಎನಿಸಿಕೊಂಡಿದ್ದ ಹಾಸನ ಈಗ ಧಾರ್ಮಿಕ ಶ್ರೀಮಂತಿಕೆಯ ಜರತಾರಿ ಸೆರಗು ಹೊದ್ದುಕೊಳ್ಳುವಂತಾಗಿದೆ. ಹಾಗೆಯೇ ಎಂಬತ್ತರ ದಶಕದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ರೈತ ಮತ್ತು ದಲಿತ ಚಳವಳಿ, ಈಗ ಹಿನ್ನೆಲೆಗೆ ಸರಿದು, ಹೋರಾಟದ ಕೆಚ್ಚನ್ನು ಕಳೆದುಕೊಂಡಿದೆ.
ಇಂತಹ ಹಾಸನ ಜಿಲ್ಲೆಯಿಂದ ಎಲ್.ಟಿ. ಕಾರ್ಲೆ, ಕೆ.ಟಿ. ದಾಸಪ್ಪ, ಎಚ್.ಡಿ. ದೇವೇಗೌಡ, ಎಚ್.ಎನ್. ನಂಜೇಗೌಡ, ಕೆ.ಎಚ್. ಹನುಮೇಗೌಡ, ಎಚ್.ಸಿ.ಶ್ರೀ ಕಂಠಯ್ಯ, ಜಿ. ಪುಟ್ಟಸ್ವಾಮಿಗೌಡ, ಬಿ.ಬಿ. ಶಿವಪ್ಪ, ಲಕ್ಷ್ಮಣಯ್ಯ, ಹಾರನಹಳ್ಳಿ ರಾಮಸ್ವಾಮಿಗಳಂತಹ ಘಟಾನುಘಟಿ ರಾಜಕೀಯ ನಾಯಕರು ಹೊರಹೊಮ್ಮಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಗಳಂತಹ ಅತ್ಯುನ್ನತ ಸ್ಥಾನ ಅಲಂಕರಿಸಿ ಜಿಲ್ಲೆಗೆ ಹೆಸರು ತಂದಿದ್ದಾರೆ. ಇವರ ನಂತರದ ತಲೆಮಾರಿನ ನಾಯಕರಾದ ಕೆ.ಬಿ. ಮಲ್ಲಪ್ಪ, ಈ. ನಂಜೇಗೌಡ, ದೊಡ್ಡೇಗೌಡ, ಎ.ಟಿ. ರಾಮಸ್ವಾಮಿ, ಸಿ.ಎಸ್. ಪುಟ್ಟೇಗೌಡ, ಗಂಡಸಿ ಶಿವರಾಂ, ಎಚ್.ಕೆ. ಕುಮಾರಸ್ವಾಮಿ, ವಿಶ್ವನಾಥ್ ಜಿಲ್ಲೆಯ ಹೆಸರು ಕೆಡದಂತೆ ನೋಡಿಕೊಂಡಿದ್ದಾರೆ.

1952ರಲ್ಲಿ, ಮೊದಲ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಹಾಸನವನ್ನು ಚಿಕ್ಕಮಗಳೂರು ಜಿಲ್ಲೆಯೊಂದಿಗೆ ಸೇರಿಸಿದ್ದರಿಂದ, ಹಾಸನ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ಸಿನ ಸಿದ್ದನಂಜಪ್ಪನವರು ಸ್ಪರ್ಧಿಸಿ ಗೆದ್ದಿದ್ದರು. 1957ರಿಂದ ಹಾಸನ ಪ್ರತ್ಯೇಕ ಲೋಕಸಭಾ ಕ್ಷೇತ್ರವಾಗಿ ಗುರುತಿಸಿಕೊಂಡ ನಂತರ, 1957 ಮತ್ತು 62ರಲ್ಲಿ ಕಾಂಗ್ರೆಸ್ಸಿನ ಸಿದ್ದನಂಜಪ್ಪನವರೇ ಗೆಲುವು ಸಾಧಿಸಿದ್ದರು. ಆನಂತರ ನುಗ್ಗೇಹಳ್ಳಿ ಶಿವಪ್ಪನವರು ಸ್ವತಂತ್ರ ಅಭ್ಯರ್ಥಿಯಾಗಿ 1967ರಲ್ಲಿ ಗೆದ್ದಿದ್ದವರು, ಆ ನಂತರ ಕಾಂಗ್ರೆಸ್ ಸೇರಿ, 1971ರಲ್ಲಿಯೂ ಗೆಲುವು ಸಾಧಿಸಿದರು. 1974ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎಚ್.ಆರ್. ಲಕ್ಷ್ಮಣ್ ಗೆದ್ದರೆ, ಆ ನಂತರ 1977ರ ಚುನಾವಣೆಯಲ್ಲಿ ಜನತಾ ಪಕ್ಷದ ಎಸ್. ನಂಜೇಶಗೌಡ ಗೆದ್ದು, ದೇಶದಾದ್ಯಂತ ಸುದ್ದಿಯಾಗಿದ್ದರು.
ತುರ್ತು ಪರಿಸ್ಥಿತಿಯ ನಂತರ ನಡೆದ 1977ರ ಚುನಾವಣೆಯಲ್ಲಿ, ದೇಶದಾದ್ಯಂತ ಕಾಂಗ್ರೆಸ್ ವಿರೋಧಿ ಅಲೆ ಇತ್ತು. ಇಂದಿರಾ ಗಾಂಧಿ ವಿರುದ್ಧ ಜನ ತಿರುಗಿಬಿದ್ದಿದ್ದರು. ದೇಶದೆಲ್ಲೆಡೆ ಕಾಂಗ್ರೆಸ್ ಸೋತರೂ ರಾಜ್ಯದ 28 ಕ್ಷೇತ್ರಗಳ ಪೈಕಿ 26 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದು ಬೀಗಿತ್ತು. ಹಾಗೆಯೇ ಎರಡು ಕ್ಷೇತ್ರಗಳಲ್ಲಿ- ಬೆಂಗಳೂರು ದಕ್ಷಿಣ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ಜನತಾ ಪಕ್ಷ ಜಯಭೇರಿ ಬಾರಿಸಿತ್ತು. ಆದರೆ, 1980 ಮತ್ತು 84ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎಚ್.ಎನ್. ನಂಜೇಗೌಡ ಗೆಲ್ಲುವ ಮೂಲಕ ಮತ್ತೆ ಜಿಲ್ಲೆಯನ್ನು ಕಾಂಗ್ರೆಸ್ ತೆಕ್ಕೆಗೆ ತಂದಿದ್ದರು. 1989ರಲ್ಲಿ ಕಾಂಗ್ರೆಸ್ಸಿನ ಎಚ್.ಸಿ. ಶ್ರೀಕಂಠಯ್ಯನವರು ಗೆದ್ದು ಬೀಗಿದ್ದರು.
ಇದನ್ನು ಓದಿದ್ದೀರಾ?: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ | ದಿಗ್ಗಜರ ದಿಕ್ಕೆಡಿಸಿದ, ಅವಾಂತರಕಾರಿಗಳಿಗೆ ಮಣೆ ಹಾಕಿದ ಕ್ಷೇತ್ರ
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅಲ್ಲಿಯವರೆಗಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಆರು ಸಲ ಗೆದ್ದು ಮೇಲುಗೈ ಸಾಧಿಸಿರುವುದು ಎದ್ದುಕಾಣುತ್ತದೆ. ಆನಂತರ, 1991ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ದಳದ ಎಚ್.ಡಿ. ದೇವೇಗೌಡ ಗೆದ್ದು ಜಿಲ್ಲೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. 1996ರಲ್ಲಿ ಜನತಾ ದಳದ ರುದ್ರೇಶಗೌಡ, 1996 ಮತ್ತು 98ರಲ್ಲಿ ಮತ್ತೆ ದೇವೇಗೌಡ ಗೆಲ್ಲುತ್ತಾರೆ. ಹಾಸನ ಎಂದಾಕ್ಷಣ ಕಾಂಗ್ರೆಸ್ಸಿನ ಶ್ರೀಕಂಠಯ್ಯ, ಜನತಾ ದಳದ ದೇವೇಗೌಡರ ನಡುವಿನ ಜಿದ್ದಾಜಿದ್ದಿನ ಗೌಡರ ಗುದ್ದಾಟವೆಂದು ಗುರುತಿಸಲ್ಪಟ್ಟರೂ, 1999ರಲ್ಲಿ ಚಿತ್ರಣ ಬದಲಾಗುತ್ತದೆ. ದೇವೇಗೌಡರ ವಿರುದ್ಧ ಕಾಂಗ್ರೆಸ್ಸಿನ ಪುಟ್ಟಸ್ವಾಮಿಗೌಡರು ಕಣಕ್ಕಿಳಿದು ಜಯ ಸಾಧಿಸುತ್ತಾರೆ. ಆದರೆ ಜಿ. ಪುಟ್ಟಸ್ವಾಮಿಗೌಡ ಮತ್ತು ಎಚ್.ಸಿ. ಶ್ರೀಕಂಠಯ್ಯನವರ ನಿರ್ಗಮನದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಲೆಯೇ ಇಲ್ಲದಂತಾಗುತ್ತದೆ. ಅದು ಜನತಾ ದಳಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತದೆ.
ಆನಂತರ, 2004, 2009, 2014ರಲ್ಲಿ ಜನತಾ ದಳದ ಎಚ್.ಡಿ. ದೇವೇಗೌಡರು ಗೆದ್ದು ಜಿಲ್ಲೆಯನ್ನು ದಳದ ಭದ್ರಕೋಟೆಯನ್ನಾಗಿ ಮಾಡುತ್ತಾರೆ. ಅಷ್ಟೇ ಅಲ್ಲ, 2019ರ ಚುನಾವಣೆಯಲ್ಲಿ ಮೊಮ್ಮಗ ಪ್ರಜ್ವಲ್‌ಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟು ತುಮಕೂರಿನತ್ತ ಹೆಜ್ಜೆ ಹಾಕುತ್ತಾರೆ. ಹಾಸನದಲ್ಲಿ ಮೊಮ್ಮಗ ಗೆದ್ದರೆ, ತುಮಕೂರಿನಲ್ಲಿ ಗೌಡರು ಸೋತು ಮನೆ ಸೇರುತ್ತಾರೆ.
ಹಾಸನ ಲೋಕಸಭಾ ಕ್ಷೇತ್ರ, ದೇಶದ ರಾಜಕಾರಣದಲ್ಲಿ ರಾಜಕೀಯ ಶಕ್ತಿ ಕೇಂದ್ರವೆಂದೇ ಹೆಸರಾಗಿದೆ. ಹಾಸನ ಜಿಲ್ಲೆಯ ಗುಣವೋ, ಒಕ್ಕಲಿಗರು ಬಹುಸಂಖ್ಯಾತರಿರುವ ಕಾರಣಕ್ಕೋ, ರಾಜಕೀಯ ಎನ್ನುವುದು ಜನರ ರಕ್ತದಲ್ಲಿ ಬೆರೆತುಹೋಗಿದೆ. ಚುನಾವಣೆ ಎಂದಾಕ್ಷಣ ಎದ್ದು ನಿಲ್ಲುವ ಇಲ್ಲಿಯ ಜನ, ರಾಜಕಾರಣವನ್ನೇ ಉಂಡುಟ್ಟು ಉಸಿರಾಡುತ್ತಾರೆ. ಒಂದೇ ಮನೆಯ ಮೂವರು ಅಣ್ಣತಮ್ಮಂದಿರು ಮೂರು ಪಕ್ಷಗಳಾಗಿ ಒಡೆದು ಹೋಳಾಗಿ ಜಿದ್ದಾಜಿದ್ದಿಗಿಳಿಯುತ್ತಾರೆ. ಪರ-ವಿರೋಧ ಕದನಕ್ಕಿಳಿಯುತ್ತಾರೆ.
ಇಂತಹ ಹಾಸನ ಜಿಲ್ಲೆ ಈಗ ಮತ್ತೊಮ್ಮೆ ಚುನಾವಣೆಗೆ ಸಜ್ಜಾಗಿದೆ. ಬಿಸಿಲಿನ ಝಳ ಜಾಸ್ತಿಯಾದಂತೆಲ್ಲ, ಚುನಾವಣೆಯ ಕಾವು ಕೂಡ ಏರತೊಡಗಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಾದ ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ ಕ್ಷೇತ್ರಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರ, ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುತ್ತವೆ. ನಾಲ್ಕರಲ್ಲಿ ಜನತಾ ದಳ, ಎರಡರಲ್ಲಿ ಕಾಂಗ್ರೆಸ್, ಎರಡರಲ್ಲಿ ಬಿಜೆಪಿ ಗೆದ್ದಿವೆ. ಈಗ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ, ಮೈತ್ರಿಕೂಟ ಆರು ಕ್ಷೇತ್ರಗಳನ್ನು ಗೆದ್ದಿರುವುದರಿಂದ ಮೇಲ್ನೋಟಕ್ಕೆ ಅದರ ಬಲ ಹೆಚ್ಚಾದಂತೆ ಕಾಣಿಸುತ್ತದೆ. ಅರಸೀಕೆರೆ ಮತ್ತು ಕಡೂರು ಕ್ಷೇತ್ರಗಳನ್ನು ಗೆದ್ದಿರುವ ಕಾಂಗ್ರೆಸ್ ಪಕ್ಷ ಸೊರಗಿದಂತೆಯೂ ಕಾಣುತ್ತದೆ. ಮೈತ್ರಿಕೂಟ ಪ್ರಜ್ವಲ್ ರೇವಣ್ಣ ಅವರನ್ನು ಅಭ್ಯರ್ಥಿಯನ್ನಾಗಿಸಿದರೆ, ಕಾಂಗ್ರೆಸ್ ಶ್ರೇಯಸ್ ಪಟೇಲ್‌ರನ್ನು ಕಣಕ್ಕಿಳಿಸಿದೆ.
ಪ್ರಜ್ವಲ್- ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ, ರೇವಣ್ಣನವರ ಮಗ. ಶ್ರೇಯಸ್- ಮಾಜಿ ಮಂತ್ರಿ, ದಿವಂಗತ ಜಿ. ಪುಟ್ಟಸ್ವಾಮಿಗೌಡರ ಮೊಮ್ಮಗ. ಇಬ್ಬರೂ ಮೂರನೇ ತಲೆಮಾರನ್ನು ಪ್ರತಿನಿಧಿಸುತ್ತಿರುವ ಯುವ ಉತ್ಸಾಹಿಗಳು. ಇಬ್ಬರೂ ರಾಜಕೀಯ ಕುಟುಂಬದ ಕುಡಿಗಳು, ಹೊಳೆನರಸೀಪುರಕ್ಕೆ ಸೇರಿದವರು. ಪ್ರಜ್ವಲ್ ಈಗಾಗಲೇ 2019ರಲ್ಲಿ ಗೆದ್ದು, ಸಂಸದರಾಗಿ ಜಿಲ್ಲೆಯನ್ನು ಪ್ರತಿನಿಧಿಸಿದ ಅನುಭವವುಳ್ಳವರು. ಇದು ಅವರಿಗೆ ಎರಡನೇ ಅವಧಿಯಾದರೆ, ಶ್ರೇಯಸ್ ಇದೇ ಮೊದಲ ಬಾರಿಗೆ ಅಭ್ಯರ್ಥಿಯಾಗಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ
ಹಾಸನ ಎಂದಾಕ್ಷಣ ದೇವೇಗೌಡ ಮತ್ತವರ ಕುಟುಂಬದ ಭದ್ರಕೋಟೆ ಎನ್ನುವುದು ಜನಜನಿತ ಮಾತು. ಅದನ್ನು ಪುಷ್ಟೀಕರಿಸುವಂತೆ, 1962ರಿಂದ ರಾಜಕಾರಣದಲ್ಲಿರುವ ದೇವೇಗೌಡರು, ಜಿಲ್ಲೆಯನ್ನು ಮಗ ರೇವಣ್ಣನವರ ಸುಪರ್ದಿಗೆ ಬಿಟ್ಟುಕೊಟ್ಟಿದ್ದಾರೆ, ಕುಟುಂಬವನ್ನು ಸಮೃದ್ಧವಾಗಿ ಬೆಳೆಸಿದ್ದಾರೆ. ಮೊಮ್ಮಗ ಪ್ರಜ್ವಲ್ ಸಂಸದ, ಮತ್ತೊಬ್ಬ ಮೊಮ್ಮಗ ಸೂರಜ್ ವಿಧಾನ ಪರಿಷತ್ ಸದಸ್ಯ, ಮಗ ಎಚ್.ಡಿ. ರೇವಣ್ಣ ಶಾಸಕ, ಸೊಸೆ ಭವಾನಿ ರೇವಣ್ಣ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ, ಅಳಿಯನ ಸಹೋದರ ಸಿ.ಎನ್. ಬಾಲಕೃಷ್ಣ ಶಾಸಕ- ಇಡೀ ಕುಟುಂಬವೇ ರಾಜಕಾರಣದ ಆಯಕಟ್ಟಿನ ಸ್ಥಾನಗಳನ್ನು ಆಕ್ರಮಿಸಿಕೊಂಡಿದೆ. ಜೊತೆಗೆ ಜಾತಿಯಲ್ಲಿ ಒಕ್ಕಲಿಗರಾಗಿರುವುದು, ಜಿಲ್ಲೆಯಲ್ಲಿ ಒಕ್ಕಲಿಗರೇ ಅಧಿಕ ಸಂಖ್ಯೆಯಲ್ಲಿರುವುದು ಪ್ರಜ್ವಲ್‌ಗೆ ಪ್ಲಸ್ ಪಾಯಿಂಟ್ ಆಗಿದೆ. ಜೊತೆಗೆ ಮೈತ್ರಿಕೂಟದ ಆರು ಶಾಸಕರು ಗೆದ್ದಿರುವುದರಿಂದ ಲೀಡ್ ಸಿಗುವ ಸಾಧ್ಯತೆ ಇದೆ. ಜೊತೆಗೆ ಮೋದಿ ಅಲೆಯೂ ಪ್ರಜ್ವಲ್‌ಗೆ ಅನುಕೂಲಕರ ವಾತಾವರಣ ಸೃಷ್ಟಿಸಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಆದರೆ, ಹಾಸನ ಜಿಲ್ಲೆ ಎಂದಾಕ್ಷಣ ಗೌಡರ ಕುಟುಂಬದ ಆಸ್ತಿ ಎನ್ನುವುದು, ಅವರೇ ಹೆಚ್ಚಾಗಿ ಆಸ್ತಿ-ಪಾಸ್ತಿ ಹೊಂದಿರುವುದು, ಮನೆಗೆ ಹೋದರೆ ಒಂದೇ ಚೇರ್ ಹಾಕಿಕೊಂಡು ಅವರಷ್ಟೇ ಕೂರುವುದು, ನೋಡಲು ಬಂದವರು ನಿಂತುಕೊಂಡೇ ಇರುವುದು ಜಿಲ್ಲೆಯ ಮಾನವಂತರಿಗೆ ಅರಗಿಸಿಕೊಳ್ಳಲಾಗದ ಸಂಗತಿಯಾಗಿದೆ. ಇವರ ಅಬ್ಬರ, ಆರ್ಭಟಕ್ಕೆ ಪುಷ್ಟಿ ನೀಡುವಂತೆ ಕಳೆದ ಡಿಸೆಂಬರ್‍ನಲ್ಲಿ ಭವಾನಿ ರೇವಣ್ಣನವರ ಕಾರಿಗೆ ಗುದ್ದಿದ ಬೈಕ್ ಸವಾರನಿಗೆ ಅವಾಚ್ಯವಾಗಿ ನಿಂದಿಸಿದ್ದು, ಮನುಷ್ಯನಿಗಿಂತ ಕಾರು ಮುಖ್ಯವಾಗಿದ್ದು, ಅದು ವೈರಲ್ ಆಗಿದ್ದು ಜಿಲ್ಲೆ ಜನರಲ್ಲಿ ಗೌಡರ ಕುಟುಂಬದ ಬಗ್ಗೆ ಹೇವರಿಕೆ ಉಂಟಾಗಿದೆ.

ಜೊತೆಗೆ, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಗೌಡರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ ಬಿಜೆಪಿಯ ಪ್ರೀತಂ ಗೌಡರನ್ನು ಸೋಲಿಸಲು, ಇಡೀ ಕುಟುಂಬವೇ ಕಣಕ್ಕಿಳಿದು ಸೋಲಿಸಿದ್ದರು. ಈಗ ಅದೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಅದೇ ಪ್ರೀತಂ ಗೌಡ ಪ್ರಜ್ವಲ್ ಪರ ಮತಯಾಚಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇವರು ತುಂಬು ಮನಸ್ಸಿನಿಂದ ಮತಯಾಚಿಸುತ್ತಾರ ಎಂಬುದು ಪ್ರಶ್ನೆಯಾಗಿದೆ. ಬಿಜೆಪಿಯ ನಾಯಕರು ‘ನಮಗಂತೂ ಈ ಮೈತ್ರಿ ಇಷ್ಟವಿಲ್ಲ. ನಾವು ಮತಹಾಕಿದರೂ ಅದು ಮೋದಿಗಾಗಿಯೇ ಹೊರತು, ಪ್ರಜ್ವಲ್‌ಗಲ್ಲ. ಅದರಲ್ಲೂ ಮೂಲ ಬಿಜೆಪಿಗರು ಮತ ಹಾಕುತ್ತಾರೆಂಬ ಬಗ್ಗೆ ಗ್ಯಾರಂಟಿ ಇಲ್ಲ’ ಎನ್ನುತ್ತಾರೆ.
ಇದು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯ ಹಣೆಬರಹವಾದರೆ, ಕಾಂಗ್ರೆಸ್ಸಿನ ಅಭ್ಯರ್ಥಿ ಶ್ರೇಯಸ್ ಪರ ಇಡೀ ಜಿಲ್ಲೆಯ ಜನರೇ ಎದ್ದು ನಿಂತಿದ್ದಾರೆ. ಗೌಡರ ಕುಟುಂಬದ ಮೇಲಿನ ಸಿಟ್ಟಿಗೋ ಅಥವಾ ಮೈತ್ರಿ ಮಾಡಿಕೊಂಡ ಬಗೆಗಿನ ಬೇಸರಕ್ಕೋ ಅಥವಾ ಶ್ರೇಯಸ್ ಒಳ್ಳೆ ಹುಡುಗ ಎಂಬ ಅನುಕಂಪಕ್ಕೋ- ಕಾಂಗ್ರೆಸ್ ನಾಯಕರಿಗಿಂತ ಜನರೇ ಮುಂದಾಗಿ ಶ್ರೇಯಸ್ ಪರ ಕೆಲಸ ಮಾಡುತ್ತಿದ್ದಾರೆ. ದೇವೇಗೌಡರ ತತ್ವ-ಸಿದ್ಧಾಂತಕ್ಕೆ ಒಲಿದಿದ್ದ ಜಿಲ್ಲೆಯ ಜನ, ಇತ್ತೀಚಿನ ಅವರ ಕುಟುಂಬ ರಾಜಕಾರಣದ ಅಬ್ಬರಕ್ಕೆ ಹಾಗೂ ಮೋದಿಯನ್ನು ಅಪಾರವಾಗಿ ಹೊಗಳುತ್ತಿರುವ ಅವಕಾಶವಾದಿ ರಾಜಕಾರಣಕ್ಕೆ ಬೇಸತ್ತು, ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ.
ದುರದೃಷ್ಟಕರ ಸಂಗತಿ ಎಂದರೆ, ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ವರ್ಚಸ್ವಿ ನಾಯಕರೇ ಇಲ್ಲ. ಇರುವ ಗಂಡಸಿ ಶಿವರಾಂ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವವರಲ್ಲ. ಉಸ್ತುವಾರಿ ಸಚಿವ ರಾಜಣ್ಣರ ನಾಲಗೆಯೇ ಹಿಡಿತದಲ್ಲಿಲ್ಲ. ಕೈ ಚೆಲ್ಲಿ ಖರ್ಚು ಮಾಡುವ ಮುಂದಾಳುಗಳಿಲ್ಲ. ಆದರೂ, ಕಾಂಗ್ರೆಸ್ಸಿಗೆ ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಸೀಕೆರೆ ಮತ್ತು ಕಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಲೀಡ್ ಸಿಗಲಿದೆ. ಸಕಲೇಶಪುರ, ಬೇಲೂರು ಮತ್ತು ಹಾಸನ ಕ್ಷೇತ್ರಗಳು ಬಿಜೆಪಿ ಪರವಿರುವುದರಿಂದ, ಅವು ಮೈತ್ರಿ ಪರವೋ-ವಿರುದ್ಧವೋ ಗುಟ್ಟು ಗುಟ್ಟಾಗಿಯೇ ಇದೆ. ಉಳಿದದ್ದು ಒಂದೇ ಅದು ಅರಕಲಗೂಡು, ಅಲ್ಲಿ ಜೆಡಿಎಸ್‌ನಲ್ಲಿದ್ದ ಎ.ಟಿ. ರಾಮಸ್ವಾಮಿ ಈಗ ಬಿಜೆಪಿಯಲ್ಲಿದ್ದಾರೆ. ಬಿಜೆಪಿಯಲ್ಲಿದ್ದ ಎ. ಮಂಜು ಜೆಡಿಎಸ್‌ನಲ್ಲಿದ್ದಾರೆ. ಅವರೆಡೂ ಮೈತ್ರಿ ಮಾಡಿಕೊಂಡಿರುವುದರಿಂದ, ಅವರಿಬ್ಬರೂ ಒಂದಾಗುವ ಪ್ರಶ್ನೆಯೇ ಇಲ್ಲ.
ಜಿಲ್ಲೆಯ ಚಿತ್ರಣ ಹೀಗಿದ್ದರೂ, ಮಾಜಿ ಪ್ರಧಾನಿ ದೇವೇಗೌಡರು ಸಣ್ಣ ಸಮುದಾಯವನ್ನೂ ಬಿಡದೆ, ಮುಟ್ಟಿ ಮಾತನಾಡಿಸುತ್ತಿದ್ದಾರೆ. ಬಾಯಲ್ಲಿ ಮೋದಿ ಗೆಲ್ಲುವುದು ಮುಖ್ಯ ಎಂದರೂ, ಮನಸ್ಸಿನಲ್ಲಿ ಮೊಮ್ಮಗ ಗೆಲ್ಲಬೇಕೆಂಬ ಆಸೆ ಇಟ್ಟುಕೊಂಡಿದ್ದಾರೆ. ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಇದೇ ನನ್ನ ಕೊನೆ ಚುನಾವಣೆ ಎನ್ನುತ್ತಿದ್ದಾರೆ.
ಹಾಗಾಗಿ ಇದು ದೇವೇಗೌಡ, ರೇವಣ್ಣ, ಭವಾನಿ, ಬಾಲಕೃಷ್ಣ, ಪ್ರಜ್ವಲ್ ಹಾಗೂ ಶ್ರೇಯಸ್ ಪಟೇಲ್ ನಡುವಿನ ಜಿದ್ದಾಜಿದ್ದಿನ ಕಣವಾಗಿದೆ. ಮೇಲ್ನೋಟಕ್ಕೆ ಆ ಕಡೆ ತೂಕ ಹೆಚ್ಚಾದಂತೆ ಕಂಡರೂ, ಜಿಲ್ಲೆಯ ಜನ ಆರ್ಭಟಕ್ಕೆ ಅದುರುತ್ತಾರೋ, ಇಲ್ಲ ಒಳ್ಳೆಯತನಕ್ಕೆ ಮಣೆ ಹಾಕುತ್ತಾರೋ, ಕಾದು ನೋಡಬೇಕು.
ಒಟ್ಟು ಮತದಾರರ ಸಂಖ್ಯೆ 20,07,001
ಒಕ್ಕಲಿಗರು- 5,67,605
ಪರಿಶಿಷ್ಟ ಜಾತಿ-ಪಂಗಡ- 2,91,930
ಲಿಂಗಾಯತರು- 2,56,354
ಕುರುಬರು- 1,88,425
ಮುಸ್ಲಿಮರು- 1,34,714

ಲೇಖಕ, ಪತ್ರಕರ್ತ