ನಮ್ಮ ಸಚಿವರು | ಹಳೆ ಮೈಸೂರಿನ ದಲಿತ ನಾಯಕ; ಸಿದ್ದರಾಮಯ್ಯ ಆಪ್ತನೆನ್ನುವುದೇ ಎಚ್‌ಸಿಎಂ ಪ್ಲಸ್-ಮೈನಸ್

Date:

ಹಾಲಿ ಕಾಂಗ್ರೆಸ್ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿರುವ ಹೆಚ್ ಸಿ ಮಹದೇವಪ್ಪ ಕಾಂಗ್ರೆಸ್‌ನ ಪ್ರಭಾವಿ ನಾಯಕ.

ಹಳೆ ಮೈಸೂರು ಭಾಗದ ಪ್ರಮುಖ ದಲಿತ ಮುಖಂಡರೂ ಆಗಿರುವ ಅವರು, ಸಿದ್ದರಾಮಯ್ಯನವರ ಪರಮಾಪ್ತರಲ್ಲಿ ಒಬ್ಬರು. ಸೋಲು ಗೆಲುವುಗಳೆರಡನ್ನೂ ಕಂಡಿರುವ ಮಹದೇವಪ್ಪ, ಸಿದ್ದರಾಮಯ್ಯನವರೊಂದಿಗೆ ಜನತಾ ದಳದಿಂದ ವಲಸೆ ಬಂದು ಇದೀಗ ಕಾಂಗ್ರೆಸ್ಸಿನೊಳಗೆ ಬೆರೆತು ಹೋಗಿದ್ದಾರೆ.

ಒಟ್ಟು ಆರು ಬಾರಿ ಶಾಸಕ ಹಾಗೂ ಮೂರು ಬಾರಿ ಸಚಿವರಾಗಿರುವ ಮಹದೇವಪ್ಪ ಈ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಜಾಯತ್ ರಾಜ್, ಆರೋಗ್ಯ ಮತ್ತು ಲೋಕೋಪಯೋಗಿ ಖಾತೆಗಳನ್ನು ನಿಭಾಯಿಸಿದ್ದರು. ಅಂದ ಹಾಗೆ ಇವರು ಕಟ್ಟಾ ಸಂವಿಧಾನವಾದಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹೆಚ್‌ ಸಿ ಮಹದೇವಪ್ಪ ವೈಯಕ್ತಿಕ ಜೀವನ

ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹದಿನಾರು ಗ್ರಾಮದಲ್ಲಿ 1953ರ ಏಪ್ರಿಲ್ 20ರಂದು ಜನಿಸಿದವರು. ಅವರ ತಂದೆ ಚಿಕ್ಕಮಾದಯ್ಯ. ತಾಯಿ ಮಾದಮ್ಮ. ಪರಿಶಿಷ್ಟ ಜಾತಿ (ಬಲಗೈ) ಸಮುದಾಯದ ಇವರು ಎಂಬಿಬಿಎಸ್ ಪದವೀಧರರು. 1999ರಲ್ಲಿ ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಮಹದೇವಪ್ಪ ಎಂಬಿಬಿಎಸ್ ಪೂರೈಸಿದ್ದರು. ಮಹದೇವಪ್ಪ ಹಾಗೂ ಮಹದೇವಮ್ಮ ದಂಪತಿಗೆ ಇಬ್ಪರು ಮಕ್ಕಳು, ಪುತ್ರ ಸುನಿಲ್ ಬೋಸ್‌ ಹಾಗೂ ಪುತ್ರಿ ಅನಿತಾ ಬೋಸ್‌,

ರಾಜಕೀಯ ಜೀವನ

ಮಹದೇವಪ್ಪ ಮೊದಲ ಬಾರಿ ವಿಧಾನಸೌಧದ ಮೆಟ್ಟಿಲು ಹತ್ತಿದ್ದು 1985ರಲ್ಲಿ. ಟಿ ನರಸೀಪುರ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಅವರು ವಿಜಯಶಾಲಿಯಾಗಿದ್ದರು.

ಮುಂದೆ ಭರವಸೆಯ ನಾಯಕರಾಗಿ ಗುರುತಿಸಿಕೊಂಡ ಎಚ್ ಸಿ ಎಂ, 1994- 1999ರಲ್ಲಿ ಎಚ್ಡಿ ದೇವೇಗೌಡ, ಜೆಎಚ್ ಪಟೇಲ್ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2004ರಲ್ಲಿ ಧರ್ಮಸಿಂಗ್ ಅವರ ನೇತೃತ್ವದ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವರಾಗಿದ್ದಾರು.

ಈ ಹೊತ್ತಿನಲ್ಲಿ ದಳದೊಳಗೆ ದೇವೇಗೌಡ ಹಾಗೂ ಸಿದ್ದರಾಮಯ್ಯ ನಡುವೆ ಮನಸ್ತಾಪ ಆರಂಭವಾಗಿತ್ತು. ಸಿದ್ದರಾಮಯ್ಯನವರೊಂದಿಗಿನ ಒಡನಾಟ ಹೊಂದಿದ್ದವರನ್ನು ದೊಡ್ಡಗೌಡರು ಪಕ್ಷದಿಂದ ಆಚೆ ಹಾಕುವ ನಿರ್ಧಾರ ಕೈಗೊಂಡಿದ್ದರು.

ಈ ಏಟಿಗೆ ಮಹದೇವಪ್ಪನವರೂ ಸಿಲುಕಿದ ಪರಿಣಾಮ ಧರಂಸಿಂಗ್ ಸಮ್ಮಿಶ್ರ ಸರ್ಕಾರದಲ್ಲಿ ಸಿಕ್ಕಿದ್ದ ಸಚಿವ ಪದವಿಯನ್ನು ಕಳೆದುಕೊಳ್ಳುವಂತಾಯ್ತು. ಗೆಳೆತನಕ್ಕೆ ಒತ್ತುಕೊಟ್ಟ ಮಹದೇವಪ್ಪ ಸಿದ್ದರಾಮಯ್ಯ ಹೆಗಲು ಕೊಟ್ಟು ನಿಲ್ಲುವ ವಾಗ್ದಾನ ಮಾಡಿ ಕಾಂಗ್ರೆಸ್ ಸೇರಿಕೊಂಡರು.

ಮುಂದಿನ ಚುನಾವಣೆಗಳಲ್ಲಿ ಅಂದರೆ 2008 ಮತ್ತು 2013ರಲ್ಲಿ ಗೆದ್ದ ಅವರು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. 2018ರ ಚುನಾವಣೆಯಲ್ಲಿ ಸೋತ ಮಹದೇವಪ್ಪ ಮರುಆಯ್ಕೆ ಕಂಡಿದ್ದು 2023ರಲ್ಲಿ. ಈ ಗೆಲುವು ಅವರನ್ನು ಮರಳಿ ಸಚಿವರನ್ನಾಗಿಸಿತು.

ಎರಡು ಕ್ರಿಮಿನಲ್ ಪ್ರಕರಣಗಳನ್ನು (ವಿಚಾರಣೆ ಬಾಕಿ) ಹೊಂದಿರುವ ಮಹದೇವಪ್ಪನವರು ಮೂರು ಕೋಟಿಗೂ ಅಧಿಕ ಆಸ್ತಿ ಮೌಲ್ಯದ ಒಡೆಯರು.

ದಲಿತ ಸಂವೇದನೆ ಹೊಂದಿರುವ ಇವರು, ಸಮುದಾಯದ ಸೇವಾ ಕೈಂಕರ್ಯದ ವಿಚಾರದಲ್ಲಿ ನಿಷ್ಠ ವ್ಯಕ್ತಿ. ಸಂವಿಧಾನದ ಬಗೆಗೆ ಅಪಾರ ಕಾಳಜಿ ಹೊಂದಿರುವ ಮಹದೇವಪ್ಪ, ಇದಕ್ಕೆ ಧಕ್ಕೆ ಬರುವ ವಿಚಾರ ಎದುರಾದಾಗಲೆಲ್ಲ, ಗಟ್ಟಿ ಧ್ವನಿ ಹೊರಡಿಸಿ ಹೋರಾಟ ನಡೆಸಿದ ನಾಯಕ. ದಲಿತ ನಾಯಕನೆನ್ನುವ ಶಕ್ತಿ ಹಾಗೂ ಸಿದ್ದರಾಮಯ್ಯನವರ ಆಪ್ತನೆನ್ನುವ ವಿಚಾರವೇ ಇವರ ಪಾಲಿಗೆ ಪ್ಲಸ್ ಮತ್ತು ಮೈನಸ್ ವಿಚಾರಗಳು.

ಅಧಿಕಾರಕ್ಕೇರಿದ ಸಂದರ್ಭದಲ್ಲಿ ಕ್ಷೇತ್ರ ಮರೆತು ನಿಲ್ಲುತ್ತಾರೆನ್ನುವ ಗುರುತರ ಆರೋಪ ಮಹದೇವಪ್ಪನವರ ಮೇಲಿದೆ. ಮಹದೇವಪ್ಪನವರ ವಿರುದ್ದ ಪಕ್ಷ ನಿಷ್ಠೆ ವಿಚಾರಕ್ಕಿಂತ ವ್ಯಕ್ತಿ ನಿಷ್ಠೆ ಪ್ರದರ್ಶನ ಮಾಡುತ್ತಾರೆನ್ನುವ ಆರೋಪ ಮಾಡಿದ್ದ ಮೂಲ ಕಾಂಗ್ರೆಸ್ಸಿಗರು, ಹೈಕಮಾಂಡ್‌ಗೆ ದೂರು ನೀಡಿದ್ದರು.

ಈ ಸುದ್ದಿ ಓದಿದ್ದೀರಾ? : ನಮ್ಮ ಸಚಿವರು | ಆರ್‌ ಬಿ ತಿಮ್ಮಾಪೂರ್‌ ಮಂತ್ರಿಯಾದರೂ ಮುಧೋಳ ಕ್ಷೇತ್ರದ ಜನರಿಗೆ ನೀಗದ ಬವಣೆ  

ಪಕ್ಷದೊಳಗೆ ಮಲ್ಲಿಕಾರ್ಜುನ ಖರ್ಗೆ ನಂತರದ ಸ್ತರದಲ್ಲಿ ನಿಲ್ಲಬಲ್ಲ ದಲಿತ ನಾಯಕನೆನ್ನುವ ಹೆಸರು ಗಳಿಸಿರುವ ಮಹದೇವಪ್ಪ, ಸಮುದಾಯ ಮೀರಿ ಬೆಳೆದು ನಿಂತಿದ್ದರೆ ರಾಜ್ಯ ನಾಯಕರಾಗಬಹುದಿತ್ತೆನ್ನುವುದು ಇವರನ್ನು ಬಲ್ಲ ರಾಜಕೀಯ ಪಂಡಿತರ ಅನಿಸಿಕೆ.

ಮಹದೇವಪ್ಪನವರ ವಿರುದ್ಧದ ಆಪಾದನೆಗಳ ಪಟ್ಟಿಯನ್ನು ಇನ್ನು ಕೊಂಚ ಬೆಳೆಯುವಂತೆ ಮಾಡಿದ್ದು ಅವರ ಪುತ್ರ ಸುನೀಲ್ ಬೋಸ್. ಮಗನ ವ್ಯಾಮೋಹದಿಂದ ಕ್ಷೇತ್ರದಲ್ಲಿ ಹಿಂದೊಮ್ಮೆ ನಡೆದ ಮರುಳು ದಂಧೆ ಅಕ್ರಮವನ್ನು ಮಹದೇಪ್ಪ ಮುಚ್ಚಿಟ್ಟಿದ್ದರೆನ್ನುವ ಆರೋಪ ಅವರನ್ನು ಚುನಾವಣೆಯಲಿ ಸೋಲುವಂತೆ ಮಾಡಿತ್ತು ಎನ್ನುವ ಮಾತುಗಳಿವೆ.

ಸದ್ಯ ಹಿಂದಿನ ಎಲ್ಲ ಅಡೆತಡೆಗಳನ್ನು ತಪ್ಪುಒಪ್ಪಿನ ಅಡೆತಡೆಗಳನ್ನು ದಾಟಿ ಬಂದಿರುವ ಮಹದೇವಪ್ಪ ನೂತನ ಸರ್ಕಾರದಲ್ಲಿ ಸಚಿವರಾಗಿ ಗಮನ ಸೆಳೆದಿದ್ದಾರೆ. ಶಾಲಾಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದಿಸುವ ಜನಮೆಚ್ಚಿದ ಜವಾಬ್ಧಾರಿ ನಡೆ ಪ್ರದರ್ಶಿಸಿ ಶಹಬ್ಬಾಸ್ ಎನಿಸಿಕೊಂಡಿದ್ದಾರೆ.

ಹಾಗೆಯೇ ತಮ್ಮ ಇಲಾಖೆಯನ್ನು ಜನರ ಬಳಿ ನೇರವಾಗಿ ತೆಗೆದುಕೊಂಡು ಹೋಗಲು ಹಲವು ಹೊಸ ಕ್ರಮಗಳನ್ನು ಅವರು ರೂಪಿಸಿದ್ದು ಸಾಮಾಜಿಕ ಜಾಲತಾಣಗಳಲ್ಲೇ ದೂರು ಸ್ವೀಕರಿಸುವುದಾಗಿ ತಿಳಿಸಿ ಪಾರದರ್ಶಕ ವ್ಯವಸ್ಥೆ ರೂಪಿಸಲು ಮುಂದಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೇವ್ ಪಾರ್ಟಿ | ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ ತೆಲುಗು ನಟಿ ಹೇಮಾ

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಜಿ.ಆರ್‌.ಫಾರ್ಮ್‌ಹೌಸ್‌ನಲ್ಲಿ ನಡೆದಿದ್ದ ‘ರೇವ್‌ ಪಾರ್ಟಿ’ ಪ್ರಕರಣಕ್ಕೆ...

ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ | ಸಚಿವ ಬಿ.ನಾಗೇಂದ್ರ ವಜಾಗೊಳಿಸಿ: ಪ್ರಲ್ಹಾದ್‌ ಜೋಶಿ ಆಗ್ರಹ

ಕರ್ನಾಟಕ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆ...

ಪಠ್ಯಪುಸ್ತಕ ಪರಿಷ್ಕರಣೆ | ಕೆಲವು ಪದ ಮತ್ತು ವಾಕ್ಯಗಳಲ್ಲಷ್ಟೇ ಬದಲಾವಣೆ: ಸಚಿವ ಮಧು ಬಂಗಾರಪ್ಪ

"ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಕ್ಕಳು ಯಾವುದೇ ತೊಂದರೆ ಇಲ್ಲದಂತೆ ತೊಡಗಿಸಿಕೊಳ್ಳಲು...