ಬಂಗಾಳದಲ್ಲಿ ಕುಸಿಯುತ್ತಿರುವ ಮಮತಾ ಅಲೆಯ ನಡುವೆ ಎಡಪಕ್ಷ-ಕಾಂಗ್ರೆಸ್‌ ಮೈತ್ರಿ ಕಸರತ್ತು

Date:

ಒಂದೆಡೆ, ಟಿಎಂಸಿ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಬಿಜೆಪಿಯೇತರ ಮತಗಳನ್ನು ಸೆಳೆದುಕೊಳ್ಳುವ ಅಗತ್ಯವಿದೆ. ಮತ್ತೊಂದೆಡೆ, ಪಶ್ಚಿಮ ಬಂಗಾಳದಲ್ಲಿ ಎಡಪಕ್ಷ-ಕಾಂಗ್ರೆಸ್‌ ಮೈತ್ರಿ ಎಂದಿಗೂ ಟಿಎಂಸಿ ಮತ್ತು ಬಿಜೆಪಿ ನಡುವೆ ವ್ಯತ್ಯಾಸವನ್ನು ಕಂಡಿಲ್ಲ.

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥ ಮಮತಾ ಬ್ಯಾನರ್ಜಿ ಅವರು ಹಠಾತ್ ಆಗಿ ತಮ್ಮ ನಿಲುವು ಬದಲಿಸಿಕೊಂಡರು. “ಕಾಂಗ್ರೆಸ್‌ ಪ್ರಬಲವಾಗಿರುವ ಪ್ರದೇಶಗಳಲ್ಲಿ ಪಕ್ಷಕ್ಕೆ ಟಿಎಂಸಿ ಬೆಂಬಲ ನೀಡಲಿದೆ” ಎಂದು ಮಮತಾ ಹೇಳಿರುವುದು ವಿಪಕ್ಷಗಳ ಒಕ್ಕೂಟ ರಚನೆಯ ಪ್ರಯತ್ನದಲ್ಲಿದ್ದ ನಿತೀಶ್‌ಕುಮಾರ್‌- ಶರದ್ ಪವಾರ್ ಅವರಂತಹ ಹಿರಿಯ ರಾಜಕಾರಣಿಗಳಿಗೆ ಸಮಾಧಾನ ತಂದಿದೆ. ಆದರೆ ಮಮತಾ ಬ್ಯಾನರ್ಜಿ ಅವರು ನಿಲುವು ಬದಲಿಸಿ ಎಡಪಕ್ಷ-ಕಾಂಗ್ರೆಸ್‌ ಮೈತ್ರಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದು ನಿಜವೆ?

ನಾಲ್ಕು ಪ್ರಮುಖ ಉದಾಹರಣೆಗಳು

ಪಶ್ಚಿಮ ಬಂಗಾಳದಲ್ಲಿ ಎಡಪಕ್ಷ-ಕಾಂಗ್ರೆಸ್‌ ಮೈತ್ರಿ ಎಂದಿಗೂ ಟಿಎಂಸಿ ಮತ್ತು ಬಿಜೆಪಿ ನಡುವೆ ವ್ಯತ್ಯಾಸವನ್ನು ಕಂಡಿಲ್ಲ. ಎಡಪಕ್ಷ-ಕಾಂಗ್ರೆಸ್‌ ಮೈತ್ರಿ ಬದಿಗೆ ಸರಿದಾಗಲೇ ಟಿಎಂಸಿ ಜಯಭೇರಿ ಬಾರಿಸಿದೆ. ಹೀಗಾಗಿ, ಟಿಎಂಸಿ ಮುಸ್ಲಿಂ ಮತಗಳು ಹರಿದು ಹಂಚಿ ಹೋಗಲು ಅವಕಾಶ ಕೊಡುವುದಿಲ್ಲ. ಬಂಗಾಳದ ಮೇಲೆ ಅಧಿಪತ್ಯ ಸಾಧಿಸಬೇಕೆಂದರೆ ಹೊಂದಾಣಿಕೆ ಅಥವಾ ಕಾರ್ಯಯೋಜನೆ ಮೂಲಕ ಎಡಪಕ್ಷ-ಕಾಂಗ್ರೆಸ್‌ ಮೈತ್ರಿ ಹೊರಗಿಡುವುದು ಟಿಎಂಸಿಯ ಅಸ್ತಿತ್ವಕ್ಕೆ ಅತಿ ಅಗತ್ಯ. ಮಮತಾ ಮತ್ತು ಟಿಎಂಸಿಗೆ ಸಂಬಂಧಿಸಿದ ಇತ್ತೀಚೆಗಿನ ಕೆಲವು ಬೆಳವಣಿಗೆಗಳೇ ಅದಕ್ಕೆ ಸಾಕ್ಷಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೊದಲನೆಯದಾಗಿ ಟಿಎಂಸಿಯ ಗೋವಾ ಶಾಖೆಯ ಅಧ್ಯಕ್ಷ ಕಿರಣ್ ಕಾಂಡೋಲ್ಕರ್ ರಾಜೀನಾಮೆ ನೀಡುವ ಸಂದರ್ಭದಲ್ಲಿ ಹೇಳಿದ ಮಾತು. ಟಿಎಂಸಿ ಗೋವಾದಲ್ಲಿ ಸ್ಪರ್ಧಿಸಿದಾಗ ಪಕ್ಷದ ಮುಖ್ಯ ಉದ್ದೇಶ ಕಾಂಗ್ರೆಸ್ ಅನ್ನು ಸೋಲಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ಆಗಿತ್ತು. ಟಿಎಂಸಿಯ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದಲ್ಲಿ ಈ ತಂತ್ರಗಾರಿಕೆ ನಡೆದಿದೆ ಎಂದು ಕಿರಣ್ ಆರೋಪಿಸಿದ್ದರು.

ಎರಡನೆಯದಾಗಿ, ರೆಡ್ ರೋಡ್ ಈದ್ ಹಬ್ಬದ ಕಾರ್ಯಕ್ರಮದಲ್ಲಿ ಏಪ್ರಿಲ್ 22ರಂದು ಮಮತಾ ವಸ್ತುಶಃ ಮುಸ್ಲಿಂ ಸಮುದಾಯದ ಬಳಿ 2024ರ ಲೋಕಸಭಾ ಚುನಾವಣೆಗೆ ತಮ್ಮ ಪಕ್ಷವನ್ನು ಬೆಂಬಲಿಸಲು ಬೇಡಿಕೊಂಡಿದ್ದರು, ಬಂಗಾಳದಿಂದ ಹೊರಗಿರುವ ಸಂಬಂಧಿಕರೂ ಚುನಾವಣೆಯಲ್ಲಿ ಮತ ಹಾಕಲು ರಾಜ್ಯಕ್ಕೆ ಬರುವಂತೆ ಮಾಡಲು ಕೋರಿಕೊಂಡಿದ್ದರು. ತಮ್ಮ ಸಚಿವಾಲಯದಲ್ಲಿ ಇಬ್ಬರು ಅಲ್ಪಸಂಖ್ಯಾತ ಸಚಿವರಿದ್ದಾರೆ ಎಂದು ಫಿರ್ಹಾದ್ ಹಕೀಮ್ ಮತ್ತು ಜಾವೆದ್ ಖಾನ್‌ ಅವರನ್ನು ಉಲ್ಲೇಖಿಸಿದ್ದರು. ಮುಂದುವರಿದು ಮುಸ್ಲಿಂ ಸಮುದಾಯದವರಾದ ಐಪಿಎಸ್ ಅಧಿಕಾರಿ ಜಾವೆದ್ ಶಮೀಮ್ ಹೆಚ್ಚುವರಿ ಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆಗಿದ್ದಾರೆ ಎಂದು ಬೊಟ್ಟು ಮಾಡಿದ್ದರು.

ಮೂರನೆಯದಾಗಿ, 2021ರ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಾಗಲೂ ಮಮತಾ ಬ್ಯಾನರ್ಜಿ ಟೀಕಿಸಿದ್ದರು. ಮುಸ್ಲಿಂ ಮತ ವಿಭಜನೆಗಾಗಿ ಬಿಜೆಪಿ ಎಐಎಂಐಎಂ ಪಕ್ಷಕ್ಕೆ ಹಣ ನೀಡಿ ಚುನಾವಣಾ ಕಣಕ್ಕೆ ಇಳಿಯಲು ನೆರವಾಗುತ್ತಿದೆ ಎಂದು ಮಮತಾ ಆರೋಪಿಸಿದ್ದರು.

ನಾಲ್ಕನೆ ಉದಾಹರಣೆ ಎಂದರೆ ಇತ್ತೀಚೆಗಿನ ಕರ್ನಾಟಕದ ವಿಧಾನಸಭಾ ಫಲಿತಾಂಶದ ಬಗ್ಗೆ ಟಿಎಂಸಿಯ ಪ್ರತಿಕ್ರಿಯೆ. ಕರ್ನಾಟಕದ ಪ್ರಚಾರದಲ್ಲಿ ಭಾಗವಹಿಸಿದ ಗಾಂಧಿ ಕುಟುಂಬವನ್ನು ಉಲ್ಲೇಖಿಸದೆ, ಕಾಂಗ್ರೆಸ್ ಬಗ್ಗೆ ಮಾತೆತ್ತದೇ ಬಿಜೆಪಿ ವಿರುದ್ಧದ ಗೆಲುವನ್ನು ಅವರು ಸ್ವಾಗತಿಸಿದ್ದರು. ಹಾಗಿದ್ದರೂ, ಎಚ್‌ಡಿ ಕುಮಾರಸ್ವಾಮಿ ಅವರ ಜೆಡಿಎಸ್ 18 ಸ್ಥಾನಗಳನ್ನು ಗಳಿಸಿದ್ದಕ್ಕೂ ಮಮತಾ ಅಭಿನಂದನೆ ಹೇಳಿದ್ದರು. ತಮ್ಮ ಪ್ರತಿಕ್ರಿಯೆಯಲ್ಲಿ ಅವರು, “ವಿಪಕ್ಷಗಳ ಏಕತೆ, ಪ್ರಾದೇಶಿಕ ಪಕ್ಷಗಳ ಉಳಿವಿಗೆ ಕಾಂಗ್ರೆಸ್ ತ್ಯಾಗ ಮಾಡಬೇಕು ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ 543 ಸ್ಥಾನಗಳ ಪೈಕಿ 200ರಲ್ಲಿ ಮಾತ್ರವೇ ಸ್ಪರ್ಧಿಸಬೇಕು” ಎಂದು ಹೇಳಿದ್ದಾರೆ.

ಈ ಎಲ್ಲಾ ಹೇಳಿಕೆಗಳಲ್ಲಿ ಅವರಿಗೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಕುರಿತಂತೆ ಇರುವ ಉಪೇಕ್ಷೆ ವ್ಯಕ್ತವಾಗುತ್ತದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೇಳಿದಾಗಲೂ ಮಮತಾ ನೆಪ ಹೇಳಿ ತಪ್ಪಿಸಿಕೊಂಡಿದ್ದರು.

ಎಡಪಕ್ಷ-ಕಾಂಗ್ರೆಸ್ ಮೊದಲ ಶತ್ರು

ಮಮತಾ ತಮ್ಮ ವಿರೋಧಿಗಳೆಂದು ಕಾಂಗ್ರೆಸ್-ಎಡಪಕ್ಷವನ್ನೇ ದೂರಿದ್ದಾರೆಯೇ ಹೊರತು ಬಿಜೆಪಿಯನ್ನಲ್ಲ. ಹಿಂದೆಯೂ, ರೈಲ್ವೇ ಸಚಿವರಾಗಿದ್ದಾಗ ಅವರು ಆಗಿನ ಎಡಪಕ್ಷದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜೀ ಅವರನ್ನು ಮೆಟ್ರೋ ರೈಲ್ವೇ ಉದ್ಘಾಟನೆಗೆ ಕರೆದಿರಲಿಲ್ಲ. ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

ಮಮತಾ ಅವರ ಇಂತಹ ಲೆಕ್ಕಾಚಾರಗಳ ಬಗ್ಗೆ ಸಿಪಿಐ (ಎಂ) ರಾಜ್ಯಸಭಾ ಸದಸ್ಯರು ಮತ್ತು ಪ್ರಮುಖ ವಕೀಲ ಬಿಕಾಶ್ ರಂಜನ್ ಭಟ್ಟಾಚಾರ್ಯ ಅವರು ಪ್ರತಿಕ್ರಿಯಿಸಿ, “ಬಿಜೆಪಿಯೇತರ ಪಕ್ಷಗಳು ಟಿಎಂಸಿಗೆ ಬೆದರಿಕೆಯಾಗಿರುವುದೇ ಮಮತಾ ಅವರ ಮೊದಲ ಆತಂಕ” ಎಂದು ಹೇಳುತ್ತಾರೆ. “ಮಮತಾ ಅವರ ಲೆಕ್ಕಾಚಾರವನ್ನು ಬುಡಮೇಲು ಮಾಡಿ ಇತ್ತೀಚೆಗೆ ಎಡಪಕ್ಷ-ಕಾಂಗ್ರೆಸ್‌ ಮೈತ್ರಿ ಪ್ರಭಾವ ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗುತ್ತಿದೆ. ಮೈತ್ರಿಕೂಟ ಗ್ರಾಮೀಣ ಪ್ರದೇಶಗಳಲ್ಲಿ ಜನರ ಒಲವು ಗಳಿಸುತ್ತಿದೆ. ಎಡಪಕ್ಷ-ಕಾಂಗ್ರೆಸ್‌ ಮೈತ್ರಿಕೂಟದಿಂದ ಟಿಎಂಸಿಗೆ ಹೋದ ನಾಯಕರು ಮರಳಿ ಮಾತೃಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ. ಮುಸ್ಲಿಂ ಸಮುದಾಯ ಸೇರಿದಂತೆ ಅನೇಕರು ಮೈತ್ರಿಕೂಟವನ್ನು ಬೆಂಬಲಿಸುತ್ತಿದ್ದಾರೆ” ಎನ್ನುತ್ತಾರೆ ಬಿಕಾಶ್ ರಂಜನ್.

ರಾಜ್ಯದ ಒಟ್ಟು ಮುಸ್ಲಿಂ ಜನಸಂಖ್ಯೆ ಶೇ 28-29ರಷ್ಟು ಇರುವುದರಿಂದಲೇ ಮಮತಾ ಅವರು ಪದೇ ಪದೆ ಮುಸ್ಲಿಂ ಸಮುದಾಯದ ಬೆಂಬಲ ಕೋರಲು ಕಾರಣ- ಅನೇಕ ಕೊಲೆಗಳು, ಅಸಹಜ ಸಾವುಗಳು, ಕಾನೂನು ಸುವ್ಯವಸ್ಥೆ ಮತ್ತು ಗುಪ್ತಚರ ವೈಫಲ್ಯ. ಇವೆಲ್ಲವೂ ಅಲ್ಪಸಂಖ್ಯಾತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿವೆ. ಇತ್ತೀಚೆಗೆ ಸುರಿಯಲ್ಲಿ ನಡೆದ ಎಡಪಕ್ಷ-ಕಾಂಗ್ರೆಸ್‌ ಸಭೆಗೆ ದೊಡ್ಡ ಮಟ್ಟದಲ್ಲಿ ಜನರು ಆಗಮಿಸಿರುವುದನ್ನು ರಾಜಕೀಯ ವಿಶ್ಲೇಷಕರು ಬದಲಾವಣೆಯ ಸೂಚಕವಾಗಿ ನೋಡುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಕೇಜ್ರೀವಾಲ್ ಸರ್ಕಾರದ ವಿರುದ್ಧ ಮೋದಿ ಸೇಡಿನ ಕ್ರಮ

ಆರ್‌ಎಸ್‌ಎಸ್‌ಗೆ ಆಪ್ತರೆನ್ನುವ ಆರೋಪ

ಅಂತಿಮವಾಗಿ ರಾಷ್ಟ್ರ ರಾಜಕಾರಣದಲ್ಲೂ ಮಮತಾ ಅವರ ಪ್ರಾಮುಖ್ಯತೆ ಕಡಿಮೆಯಾಗಿದೆ. ಪಕ್ಷದ ನಾಯಕರೇ ಈಗ ಅವರನ್ನು ಬಿಜೆಪಿಯೇತರ ವಿಪಕ್ಷ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದನ್ನು ಬಿಟ್ಟಿದ್ದಾರೆ. “ಮಮತಾ ಅವರು ಹಿಂದಿನಿಂದಲೂ ನಾಗಪುರದ (ಆರ್‌ಎಸ್‌ಎಸ್ ಮುಖ್ಯ ಕಚೇರಿ) ಅಧ್ಯಕ್ಷರ ಜೊತೆಗೆ ನೇರ ಸಂಪರ್ಕ ಹೊಂದಿದ್ದಾರೆ ಎನ್ನುವ ಬಲವಾದ ನಂಬಿಕೆ ನಮಗಿದೆ. ಆರ್‌ಎಸ್‌ಎಸ್‌ಗೆ ಎಡಪಕ್ಷಗಳ ಬಗ್ಗೆ ತೀವ್ರ ವಿರೋಧವಿದೆ. ಅದೇ ಕಾರಣದಿಂದ ಮಮತಾ ಅವರು ನಾಗಪುರದ ಜೊತೆಗೆ ಸಂಪರ್ಕ ಇಟ್ಟುಕೊಳ್ಳುವುದು ಸರಳವಾಗಿದೆ” ಎಂದು ಬಿಕಾಶ್ ರಂಜನ್ ಮಾಧ್ಯಮಗಳಿಗೆ ಹೇಳಿದ್ದರು.

“2003 ಸೆಪ್ಟೆಂಬರ್‌ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನವದೆಹಲಿಯಲ್ಲಿ ಮಮತಾ ಅವರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಪ್ರಶಂಸಿಸಿದ್ದರು. 2022 ನಬಾನ ಕಾರ್ಯಕ್ರಮದಲ್ಲಿ ಬಿಜೆಪಿಯನ್ನು ಟೀಕಿಸಿದರೂ, ಆರ್‌ಎಸ್‌ಎಸ್ ಬಗ್ಗೆ ಅವರು ಏನೂ ಹೇಳಿಲ್ಲ” ಎನ್ನುವುದನ್ನು ಬಿಕಾಶ್ ನೆನಪಿಸಿಕೊಂಡಿದ್ದಾರೆ.

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷದ ಜೊತೆಗೆ ಮೈತ್ರಿಯೇ ಅಂತಿಮ. ಟಿಎಂಸಿ ಜೊತೆಗೆ ವಿಶೇಷ ಮೈತ್ರಿಯ ಒಲವನ್ನು ಕಾಂಗ್ರೆಸ್‌ನ ಹೈಕಮಾಂಡ್ ಆಗಲಿ ಪಶ್ಚಿಮ ಬಂಗಾಳದ ನಾಯಕರಾಗಿ ತೋರಿಸಿಲ್ಲ. ಹೀಗಾಗಿ, ಲೋಕಸಭಾ ಚುನಾವಣೆಯಲ್ಲೂ ತ್ರಿಕೋಣ ಮೈತ್ರಿಯ ಬದಲಾಗಿ ಕಾಂಗ್ರೆಸ್- ಎಡಪಕ್ಷದ ಮೈತ್ರಿ ಬೆಳೆಯುವ ಸಾಧ್ಯತೆಯೇ ಹೆಚ್ಚು.

ಇದೀಗ ಮೂರನೇ ಬಾರಿ ಅಧಿಕಾರಕ್ಕೆ ಬಂದ ನಂತರ ಕಳೆದ 15 ತಿಂಗಳಲ್ಲಿ ಮಮತಾ ಬ್ಯಾನರ್ಜಿ ಅವರ ಪ್ರಭಾವ ಪಶ್ಚಿಮ ಬಂಗಾಳದಲ್ಲಿ ಕಡಿಮೆಯಾಗಿದೆ. 2011ರ ಮೇಯಲ್ಲಿ ಬಂಗಾಳ ಮಾತ್ರವಲ್ಲದೆ, ದೇಶಾದ್ಯಂತ ಮಮತಾ ದೀದಿ ಬಗ್ಗೆ ಇದ್ದ ಗೌರವ ಈಗ ಮಾಸಿ ಹೋಗಿದೆ. ಮಮತಾ ಬಿಜೆಪಿಯನ್ನು ಸೋಲಿಸಬಲ್ಲ ಪ್ರಬಲ ನಾಯಕಿ ಎಂದೇ ವಿಪಕ್ಷಗಳು ಅವರಿಗೆ ಗೌರವ ನೀಡುತ್ತಿವೆಯೇ ಹೊರತು, ಆಡಳಿತದ ವಿಚಾರದಲ್ಲಿ ಅವರ ಬಗ್ಗೆ ಹಿಂದಿನ ಗೌರವ ಉಳಿದಿಲ್ಲ. ಬಂಗಾಳದಲ್ಲಿ ಬಿಡದೇ ಕಾಡುವ ಕಾನೂನು ಮತ್ತು ಸುವ್ಯವಸ್ಥೆ ಬಿಕ್ಕಟ್ಟು, ಆಕೆಯ ಪಕ್ಷದ ನಾಯಕರು ಮತ್ತು ಸಚಿವರು ಭ್ರಷ್ಟಾಚಾರದ ಆರೋಪ ಎದುರಿಸಿರುವುದು ಮಮತಾ ಅವರ ಜನಪ್ರಿಯತೆಯನ್ನು ಕಸಿದುಕೊಂಡಿವೆ. 

2021ರ ಚುನಾವಣೆಯಲ್ಲಿ ಅಧಿಕಾರ ರಚಿಸುವ ಉಮೇದಿನಲ್ಲಿ ಉಗ್ರ ಪ್ರಚಾರ ನಡೆಸಿದ ಬಿಜೆಪಿಯನ್ನು ಕಂಡು ಭಯಪಟ್ಟ ಮುಸ್ಲಿಂ ಸಮುದಾಯ ಒಗ್ಗಟ್ಟಿನಿಂದ ಮಮತಾ ಅವರನ್ನು ಬೆಂಬಲಿಸಿದ್ದರು. ಕಾಂಗ್ರೆಸ್- ಎಡಪಕ್ಷಗಳ ಮೈತ್ರಿಯೂ ಗಂಭೀರ ಪ್ರಯತ್ನವನ್ನೂ ಹಾಕಿರಲಿಲ್ಲ, ಸಮುದಾಯದ ವಿಶ್ವಾಸವನ್ನೂ ಗಳಿಸಲಿಲ್ಲ. ಆದರೆ ಮೂರು ವರ್ಷಗಳ ನಂತರ ಪರಿಸ್ಥಿತಿ ಬದಲಾಗಿದೆ. ಟಿಎಂಸಿ ಸರ್ಕಾರಕ್ಕೆ ಪರ್ಯಾಯವಾಗಿ ಎಡಪಕ್ಷ-ಕಾಂಗ್ರೆಸ್‌ ಮೈತ್ರಿ ಕಡೆಗೆ ಜನರು ಹೊರಳುತ್ತಿರುವುದು ಪಶ್ಚಿಮ ಬಂಗಾಳದ ಇತ್ತೀಚೆಗಿನ ದಿನಗಳ ವಿದ್ಯಮಾನ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮಮತಾ ಅವರ ಸೋದರಳಿಯನಿಗೆ ಟಿಎಂಸಿಯಲ್ಲಿ ಸಿಗುತ್ತಿರುವ ಆದ್ಯತೆಯೂ ಪಕ್ಷದೊಳಗೆ ಭಿನ್ನಮತಕ್ಕೆ ಕಾರಣವಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ʼಈ ದಿನʼ ಸಮೀಕ್ಷೆ | ನಂಬಿಕೆ ಉಳಿಸಿಕೊಂಡ ಕಾಂಗ್ರೆಸ್‌; ʼಗ್ಯಾರಂಟಿʼ ಎದುರು ಮಂಕಾದ ಮೋದಿ ಯೋಜನೆಗಳು

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಘೋಷಿಸಿದ್ದ ಪಂಚ ಗ್ಯಾರಂಟಿಯನ್ನು ವರ್ಷದೊಳಗೆ...

ಭಾರತದ ಮುಸ್ಲಿಮರು ಎಷ್ಟು ಸಂಪತ್ತು ಹೊಂದಿದ್ದಾರೆ? ಇಲ್ಲಿದೆ ಅಧ್ಯಯನದ ವರದಿ

ಪ್ರಧಾನಿ ನರೇಂದ್ರ ಮೋದಿ ಏ.21 ರಂದು ರಾಜಸ್ಥಾನದಲ್ಲಿ ಭಾಷಣ ಮಾಡುತ್ತಾ ಕಾಂಗ್ರೆಸ್...

ಹಾಸನ ಪೆನ್‌ಡ್ರೈವ್‌ ಪ್ರಕರಣ: ನಾಲ್ವರು ಸಂತ್ರಸ್ತೆಯರು ಆತ್ಮಹತ್ಯೆಗೆ ಯತ್ನ

ಹಾಸನದ ಪೆನ್‌ಡ್ರೈವ್‌ ಪ್ರಕರಣ ದಿನದಿಂದ ದಿನಕ್ಕೆ ಜಿಲ್ಲಾದ್ಯಂತ ಆತಂಕ ಹೆಚ್ಚಿಸ್ತಾ ಇದೆ....

ಬೀದರ್‌ | ಕಾಂಗ್ರೆಸ್‌ ಪ್ರಧಾನಿ ಅಭ್ಯರ್ಥಿ ಯಾರೆಂದು ಕೇಳಿದರೆ ಹೇಳುವುದಿಲ್ಲ : ಬಿ.ಎಸ್.ಯಡಿಯೂರಪ್ಪ

ರಾಜ್ಯದ ಉದ್ದಗಲಕ್ಕೂ ಸುತ್ತಿ ಬಂದಿದ್ದೇನೆ. ಭವಿಷ್ಯ ಹೇಳುತ್ತಿಲ್ಲ. ವಾಸ್ತವ ಹೇಳುತ್ತಿದ್ದೇನೆ. ಜೆಡಿಎಸ್‌-ಬಿಜೆಪಿ...