ಯು ಟಿ ಖಾದರ್ ಹೊಸ ಸ್ಪೀಕರ್ : ವಿಧಾನಸೌಧದ ಬೀಗಧಾರಿ; ದೀಪಧಾರಿ

Date:

ವಿಧಾನಮಂಡಲದ ಒಳಗೆ ಅಧ್ಯಕ್ಷಾಧಿಕಾರಿಯು ಸಂವಿಧಾನದ ರಕ್ಷಕ ಮತ್ತು ಸದನದ ಸುಪ್ರೀಂ ಶಕ್ತಿ. ಸದನದ ಒಳಗೆ ಹಲವು ಬಾರಿ ಅವರ ವಿವೇಚನೆಯೇ ಕಾನೂನು. ಆ ಅಧಿಕಾರವನ್ನು ಸಂವಿಧಾನವೇ ಅವರಿಗೆ ಕೊಟ್ಟಿದೆ

ಯು.ಟಿ ಖಾದರ್ ಅವರನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಲು ಕಾಂಗ್ರೆಸ್ ತೀರ್ಮಾನಿಸಿರುವುದು ಒಂದು ಸರಿಯಾದ ತೀರ್ಮಾನ. ನನಗೆ ಆ ಬಗ್ಗೆ ಅನುಮಾನ ಇಲ್ಲ. ಊಹಿಸಿದಂತೆ ನಡೆದರೆ, ಒಂದೇ ಕಲ್ಲಿಗೆ ಹಲವು ಹಕ್ಕಿಗಳನ್ನು ಹೊಡೆಯಬಲ್ಲ ತೀರ್ಮಾನ ಇದು. ಯಾಕೆಂದು ವಿವರಿಸುವೆ.

ಮೊದಲಿಗೆ ಡಿಸ್ಕ್ಲೇಮರ್: ಖಾದರ್ ನನಗೆ ಪರಿಚಿತರಲ್ಲ. ಅಬ್ಬಬ್ಬಾ ಎಂದರೆ ಮಂಗಳೂರಿನಲ್ಲಿ ಅವರು ಕಾನೂನು ಕಲಿಯುತ್ತಿದ್ದಾಗ ನನ್ನ ಪತ್ನಿಯ ಬ್ಯಾಚ್‌ಮೇಟ್; ಆಕೆಗೂ ಅವರು ಕಳೆದ 25 ವರ್ಷಗಳಿಂದ ಪರಿಚಿತರಲ್ಲ. ಹಾಗಾಗಿ ಈ ಬರಹದಲ್ಲಿ ಹಿತಾಸಕ್ತಿಗಳೇನಿಲ್ಲ.

ಸ್ಪೀಕರ್ ಹುದ್ದೆಗೆ, ಖಾದರ್ ಅವರ ಹೆಸರು ಪ್ರಸ್ತಾಪ ಆದ ಬಳಿಕ, ಕರಾವಳಿಯಲ್ಲಿ ‘ಇದು ಇಲ್ಲಿ ಕಾಂಗ್ರೆಸ್ಸಿನ ಕೈ ಕಟ್ಟಿಸುವ ಪ್ರಯತ್ನ, ಪಕ್ಷದ ಸಂಘಟನೆ ದುರ್ಬಲಗೊಳ್ಳಲಿದೆ, ಅವರನ್ನು ಸಚಿವರನ್ನಾಗಿ ಮಾಡಿದರೆ ಲಾಭ ಇತ್ತು. ಅವರಿಗೆ ಮಾತನಾಡಲು ಬರುವುದಿಲ್ಲ’ ಎಂಬೆಲ್ಲ ಹತ್ತಾರು ವಾದಗಳನ್ನು ಆ ಪಕ್ಷದವರೂ ಸೇರಿದಂತೆ ಹಲವರು ಮಂಡಿಸುತ್ತಿರುವುದನ್ನು ಇಲ್ಲಿ ಗಮನಿಸಿದ್ದೇನೆ. ಆ ಹಿನ್ನೆಲೆಯಲ್ಲಿ ನನ್ನ ಅನಿಸಿಕೆಗಳನ್ನು ವಿವರಿಸುತ್ತೇನೆ:

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

1. ಸಾಂವಿಧಾನಿಕ ವ್ಯವಸ್ಥೆಯೊಂದನ್ನು ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಮುನ್ನಡೆಸುವ ಬದಲು, ಅದು ನಮ್ಮ ಮೂಗಿನ ನೇರಕ್ಕೆ ಸಾಗಬೇಕೆಂಬ ರಾಜಕೀಯ ತೀರ್ಮಾನಗಳ ಫಲವಾಗಿಯೇ ಸ್ಪೀಕರ್ ಹುದ್ದೆ ಎಂದರೆ, ಅದು ಮುಂದಿನ ಬಾರಿ ಸೋಲುವ ಹಿರಿಯ ತಲೆಯೊಂದಕ್ಕೆ ಕೊಡುವ “ಗೊಡ್ಡು ಹುದ್ದೆ” ಎಂಬ ಕಲ್ಪನೆ ಜನಮಾನಸದಲ್ಲಿ ಬೇರೂರಿದಂತಿದೆ. ಈ ಕಾರಣದಿಂದಾಗಿಯೇ, ವರ್ಷದಿಂದ ವರ್ಷಕ್ಕೆ ವಿಧಾನಮಂಡಲದ ಕಲಾಪಗಳ ಘನತೆ ತಗ್ಗುತ್ತಿದೆ.

2. ಸಂಸದೀಯ ವ್ಯವಸ್ಥೆಯಲ್ಲಿ ಒಬ್ಬ ಪೀಠಾಸೀನ ಅಧ್ಯಕ್ಷಾಧಿಕಾರಿಯ ಅಧಿಕಾರ ಏನೆಂದು ಗೊತ್ತಿರುವವರಾರೂ ಹೀಗೆ ಮಾತನಾಡರು. ರಾಜ್ಯದಲ್ಲಿ ರಾಜ್ಯಪಾಲರ ಹುದ್ದೆ ಬಿಟ್ಟರೆ, ಎರಡನೆಯ ಅತ್ಯುನ್ನತ ಸ್ಥಾನ ಅದು. ವಿಧಾನಮಂಡಲದ ಒಳಗೆ ಅಧ್ಯಕ್ಷಾಧಿಕಾರಿಯು ಸಂವಿಧಾನದ ರಕ್ಷಕ ಮತ್ತು ಸದನದ ಸುಪ್ರೀಂ ಶಕ್ತಿ. ಸದನದ ಒಳಗೆ ಹಲವು ಬಾರಿ ಅವರ ವಿವೇಚನೆಯೇ ಕಾನೂನು. ಆ ಅಧಿಕಾರವನ್ನು ಸಂವಿಧಾನವೇ ಅವರಿಗೆ ಕೊಟ್ಟಿದೆ. ಹಾಗಾಗಿ, ಆ ಸೀಟಿನಲ್ಲಿ ಕುಳಿತವರು ಮಾತನಾಡುವ ಮೊದಲು ಯೋಚಿಸಿ ಮಾತನಾಡಬೇಕಾಗುತ್ತದೆ. ತಪ್ಪಿ ಮಾತನಾಡಿದರೆ ಅದು ಸಾಂವಿಧಾನಿಕ ಕ್ರೈಸಿಸ್‌ಗೆ ಕಾರಣ ಆಗಬಹುದು. ಅಷ್ಟು ಶಕ್ತಿಯುತವಾದ ಹುದ್ದೆಯದು. ಅದು ಎಲ್ಲಾದರೂ ದುರ್ಬಲ ಆಗಿದ್ದಿದ್ದರೆ, ಅದಕ್ಕೆ ಆ ಪೀಠದಲ್ಲಿ ಕುಳಿತವರ ದೌರ್ಬಲ್ಯ ಕಾರಣವೇ ಹೊರತು ಪೀಠದ ಶಕ್ತಿ ಅಲ್ಲ.

3. ಸದನದ ಒಳಗೆ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಎಂಬುದಿಲ್ಲ. ಅವರೆಲ್ಲರೂ ವಿಧಾನಸಭಾ ಸದಸ್ಯರು. ಹಾಗೆಯೇ ಸ್ಪೀಕರ್, ಆ ಸದನದ ನಿಯಂತ್ರಣಾಧಿಕಾರಿ; ವಿಧಾನಸೌಧದ ಬೀಗಧಾರಿಯೂ ಹೌದು, ದೀಪಧಾರಿಯೂ ಹೌದವರು. ಈ ಕಾರಣಕ್ಕಾಗಿಯೇ ರಾಜಕೀಯ ಪಕ್ಷಗಳು ತಮ್ಮ “ಪಕ್ಷದವರು” ಅಧ್ಯಕ್ಷಾಧಿಕಾರಿ ಆಗಲಿ ಎಂದು ಬಯಸುವುದು. ಅದು ಸಂಸದೀಯ ವ್ಯವಸ್ಥೆಯನ್ನು ಹೇಗೆ ಬುಲ್ಡೋಜ್ ಮಾಡುತ್ತದೆಂಬದಕ್ಕೆ ಒಳ್ಳೆಯ ಉದಾಹರಣೆ 15ನೇ ವಿಧಾನಸಭೆಯ ವೇಳೆ ಸಿಕ್ಕಿದೆ. ಆ ಅವಧಿಯಲ್ಲಿ, ವಿಧಾನ ಪರಿಷತ್ತಿನಲ್ಲಿ “ಕೃಷಿ ಕಾಯಿದೆಗಳನ್ನು” ಸರ್ಕಾರ ಸದನದಲ್ಲಿ ಬುಲ್ಡೋಜ್ ಮಾಡಲು ಹೊರಟಾಗ, ಅದನ್ನು ತಡೆದದ್ದಕ್ಕಾಗಿ ವಿಧಾನ ಪರಿಷತ್ತಿನ ಸಭಾಪತಿಯವರ ತಲೆದಂಡ ಮಾಡಲು ಹೊರಟದ್ದು, ಆ ಪೀಠವನ್ನು ಹೈಜಾಕ್ ಮಾಡುವ ಪ್ರಯತ್ನ, ಅದು ಕಡೆಗೆ ಉಪಾಧ್ಯಕ್ಷಾಧಿಕಾರಿಯೊಬ್ಬರ ಸಾವಿಗೆ ಕಾರಣವಾದದ್ದು… ಎಲ್ಲವನ್ನೂ ನೆನಪು ಮಾಡಿಕೊಳ್ಳಿ. ಆಗಲೂ ಸದನದ ಅಧ್ಯಕ್ಷ ಪೀಠದಲ್ಲಿದ್ದು, ಸಂವಿಧಾನದ ರಕ್ಷಣೆ ಮಾಡಿ, ಸದನದ ಘನತೆ ಎತ್ತಿ ಹಿಡಿದದ್ದು ಕರಾವಳಿಯವರೇ- ಕೆ. ಪ್ರತಾಪಚಂದ್ರ ಶಟ್ಟಿ.

4. ಅಧ್ಯಕ್ಷಾಧಿಕಾರಿಗೆ ತನ್ನ ಕ್ಷೇತ್ರದ ಆಶೋತ್ತರಗಳಿಗೆ ನೆರವಾಗಲು ಸಾಧ್ಯವಾಗುವುದಿಲ್ಲ, ಹಾಗಾಗಿ ಮುಂದಿನ ಬಾರಿ ಸೋಲುತ್ತಾರೆ ಎಂಬುದು ಒಂದು ಮಿಥ್ ಅಥವಾ ಆ ಅಧ್ಯಕ್ಷಾಧಿಕಾರಿಯ ಮಿತಿ. ಪೀಠಾಸೀನಾಧಿಕಾರಿ ಕೊಟ್ಟ ರೂಲಿಂಗ್ ಅಂತಿಮ. ಸರ್ಕಾರಕ್ಕೂ ಅದು ಬೈಂಡಿಂಗ್. ಹಾಗಾಗಿ ತನ್ನ ಕ್ಷೇತ್ರಕ್ಕೆ ಬೇಕಾದ ಸವಲತ್ತು ಸಾಂವಿಧಾನಿಕ ಹಾದಿಯಲ್ಲೇ ತೆಗೆದುಕೊಡಲು ಆ ಜಾಗ ಅತ್ಯಂತ ಪ್ರಶಸ್ತ. ಅಲ್ಲಿ ಕುಳಿತು ಮಾತನಾಡುವ ಮೊದಲು ಅವರು ಆ ಮಾತಿನ ಪರಿಣಾಮ ಯೋಚಿಸಿಕೊಳ್ಳಬೇಕು. ಅಷ್ಟೊಂದು ಅಧಿಕಾರ ಆ ಪೀಠಕ್ಕಿದೆ.

5. ಕಾಂಗ್ರೆಸ್ಸಿಗೆ ಪಕ್ಷ ಸಂಘಟನೆಗೆ ಕರಾವಳಿ ಮಾತ್ರವಲ್ಲ, ರಾಜ್ಯದ ಎಲ್ಲೆಡೆ ಒಂದು ಹಾದಿ ಹುಡುಕಿಕೊಳ್ಳುವುದು ಬಾಕಿ ಇದೆ. ಹಾಗಾಗಿ, ಅವರು ಆ ಚಿಂತನೆ ಇಲ್ಲದೆ ಖಾದರ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಕೂರಿಸುತ್ತಿದ್ದಾರೆ ಎಂಬುದನ್ನು ನಂಬುವುದು ಕಷ್ಟ.

6. ಸ್ಪೀಕರ್ ಪದವಿ “ಪಾಠ ಮಾಡುವ” ಪದವಿ ಎಂಬ ಕಲ್ಪನೆಗೆ ಕಾರಣವಾದದ್ದು ಇತ್ತೀಚೆಗೆ ರಮೇಶ್ ಕುಮಾರ್ ಅವರ ಅವಧಿ. ಅದು ತಪ್ಪು ಕಲ್ಪನೆ. ಕೇವಲ ಗ್ಯಾಲರಿಗೆ ಆಡುವ ಆಟ. ನಿಜಕ್ಕೆಂದರೆ, ಸಂವಿಧಾನ ಮತ್ತು ಸದನದ ನಿಯಮಗಳ ಪಾಲನೆಯನ್ನು ಎಲ್ಲಕ್ಕಿಂತ ಮೇಲೆ ಎತ್ತಿ ಹಿಡಿಯುವ ಪದವಿ ಅದು. ಅದಕ್ಕೆ ದೊಡ್ಡ ಬಾಯಿ ಅನಗತ್ಯ. ಖಾದರ್ ಸರಾಗ ಮಾತನಾಡುವುದಿಲ್ಲ ಎಂಬ ದೂರು ಕೇಳಿಬರುತ್ತಿದೆ. ಸ್ಪೀಕರ್ ಎದ್ದು ನಿಂತು, “ನಾನು ಎದ್ದು ನಿಂತಿದ್ದೇನೆ” (I am on my feet) ಎಂದರೆ, ಇಡೀ ಸದನದ ಮರ್ಯಾದಸ್ಥ ಸದಸ್ಯರು ಗಪ್‌ಚಿಪ್ ಕುಳಿತುಕೊಳ್ಳಬೇಕು. ಹಾಗೆ ಸದನವನ್ನು ನಿರ್ವಹಿಸಿದ ಪೂರ್ವೋದಾಹರಣೆಗಳಿವೆ. ಮಾತಾಡದೆಯೂ ಇದನ್ನು ಸಾಧಿಸಬಲ್ಲ ಅರ್ಹತೆಯನ್ನು ಕಾನೂನು ಪದವೀಧರ ಖಾದರ್ ಹೊಂದಿದ್ದಾರೆ ಮತ್ತು ಆ ಸಾಮರ್ಥ್ಯವನ್ನು ಸದನದಲ್ಲಿ ತೋರಿಸುವ ಶಕ್ತಿ ಅವರಿಗೆ ಸಿಗಲಿ ಎಂದು ಹಾರೈಸುತ್ತೇನೆ.

7. ವಿಧಾನಮಂಡಳದ ಉಸ್ತುವಾರಿ ಪದವಿ ಎಂಬುದು ಅಲ್ಲಿನ ಎಸ್ಟೇಟ್ ಉಸ್ತುವಾರಿ ಪದವಿಯೂ ಆಗಿರುವುದರಿಂದ, ಅಲ್ಲಿ ಅವರ ಮೂಗಿನ ಕೆಳಗೇ ಭ್ರಷ್ಟಾಚಾರಕ್ಕೆ ವಿಪುಲ ಅವಕಾಶಗಳಿವೆ ಮತ್ತು ಅದು ಸಾಂವಿಧಾನಿಕ ವ್ಯವಸ್ಥೆ ಆಗಿರುವುದರಿಂದ, ಅಲ್ಲಿ ರಕ್ಷಣೆಯೂ ಸುಲಭ. ಈ ಬಗ್ಗೆ ಹಲವು ಉದಾಹರಣೆಗಳೂ ಇತ್ತೀಚೆಗೆ ಕಾಣ/ಕೇಳಸಿಕ್ಕಿವೆ. ಹದತಪ್ಪಿದರೆ ಅದೊಂದು ಎಸ್ಟೇಟ್ ಮಾಫಿಯಾ. ಖಾದರ್ ಅವರಂತಹ ಸರಳ, ನೇರ ವ್ಯಕ್ತಿತ್ವ, ಅಲ್ಲಿ ಅಗತ್ಯವಿರುವ ಶಿಸ್ತನ್ನು ತರುವುದು ಸಾಧ್ಯವಿದೆ.

8. ಖಾದರ್ ನೇಮಕದ ಮೂಲಕ ಸಿದ್ಧರಾಮಯ್ಯ ಸರ್ಕಾರ, ಬಾಬಾ ಸಾಹೇಬರ ಸಂವಿಧಾನದ ಒಂದು ದೊಡ್ಡ ಆಶಯವನ್ನು ಪೂರೈಸುತ್ತಿದೆ. ಹೆಚ್ಚಾಗಿ ಬಲಿಷ್ಠ ಜಾತಿಗಳವರೇ ಕುಳಿತುಕೊಳ್ಳುತ್ತಾ ಬಂದಿರುವ ಆ ಪೀಠಕ್ಕೆ, ಹೆಚ್ಚಿನಂಶ ಮೊದಲ ಬಾರಿಗೆ ಒಬ್ಬ ಮುಸ್ಲಿಂ ಸಮುದಾಯದ ವ್ಯಕ್ತಿ ಏರುತ್ತಿದ್ದಾರೆ. ದಲಿತ, ಅಲ್ಪಸಂಖ್ಯಾತ ಸಮುದಾಯಗಳ ಮಟ್ಟಿಗೆ ಸಾಮಾಜಿಕವಾಗಿ “ಎಕ್ಸ್‌ಕ್ಲೂಷನ್” ರಾಜಕೀಯ ಮಾಡುವವರು (ಉದಾ: ವ್ಯಾಪಾರ, ಸಾಮಾಜಿಕ ವ್ಯವಸ್ಥೆಗಳಲ್ಲಿ ಅವರನ್ನು ದೂರ ಇಡುವುದು) ಸದನದ ಒಳಗೆ ಸ್ಪೀಕರ್ ಅವರ ಅನುಮತಿ ಪಡೆದೇ ವ್ಯವಹರಿಸಬೇಕಾಗುತ್ತದೆ. ಇದು ಸಂವಿಧಾನದ ಶಕ್ತಿ. ಸಂವಿಧಾನದ ಎದುರು ಎಲ್ಲರೂ ಸಮಾನರು, ಎಲ್ಲರಿಗೂ ಸಮಾನಾವಕಾಶ ಎಂಬ ದೊಡ್ಡ ಸಂದೇಶ ಕೂಡ ಈ ಆಯ್ಕೆಯಲ್ಲಿದೆ.

ಕರ್ನಾಟಕದ 23ನೆಯ ಸ್ಪೀಕರ್ ಆಗಲಿರುವ ಯು ಟಿ ಖಾದರ್ ಅವರಿಗೆ ಅಭಿನಂದನೆಗಳು.

ಪೋಸ್ಟ್ ಹಂಚಿಕೊಳ್ಳಿ:

ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ದುನಿಯಾ ವಿಜಯ್​​​​​​ ವಿಚ್ಛೇದನ ಅರ್ಜಿ ವಜಾಗೊಳಿಸಿದ ಕೋರ್ಟ್

ನಟ ದರ್ಶನ್​​ ವಿವಾದದ ನಡುವೆ ಇದೀಗ ಸ್ಯಾಂಡಲ್​​​​ವುಡ್‌ನ ಮತ್ತೋಬ್ಬ​​​​​ ನಟ ದುನಿಯಾ...

ದಲಿತ ಯುವಕರ ದಾರಿ ತಪ್ಪಿಸುತ್ತಿದೆ ಕೋಮುವಾದಿ ಸಂಘಟನೆ; ಮುತ್ತು ಬಿಳಿಯಲಿ ಆರೋಪ

ಗದಗ ಜಿಲ್ಲಾಧಿಕಾರಿ ಕಚೇರಿ ಮುಂದೆ 'ದಲಿತ ಮಿತ್ರ ಮೇಳ ಗದಗ' ಎಂಬ...

ಕಲಬುರಗಿ | ಭಿಕ್ಷೆ ಬೇಡಿ ಬದುಕುತ್ತಿರುವ ಅಲೆಮಾರಿ ಸಮುದಾಯಕ್ಕಿಲ್ಲ ನೆಲೆ

ಅಲೆಮಾರಿ ಸಮುದಾಯದ 40 ಕುಟುಂಬಗಳ ಜನರು ಜೇವರ್ಗಿ ಪಟ್ಟಣದ ಕೊಳ್ಳಕೂರು ಕ್ರಾಸ್...

ಮಂಗಳೂರು | ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಉಮರ್ ಯು ಹೆಚ್ ಅಧಿಕಾರ ಸ್ವೀಕಾರ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ನೇಮಕಗೊಂಡಿದ್ದ ಉಮರ್...