ಈ ದಿನ ಸಂಪಾದಕೀಯ | ಕೇಜ್ರೀವಾಲ್ ಸರ್ಕಾರದ ವಿರುದ್ಧ ಮೋದಿ ಸೇಡಿನ ಕ್ರಮ

Date:

ದೆಹಲಿಯ ಅಧಿಕಾರಯಂತ್ರವನ್ನು ನಿಯಂತ್ರಿಸುವ ಅಧಿಕಾರವನ್ನು ಸುಪ್ರೀಮ್ ಕೋರ್ಟು ಈ ತಿಂಗಳ ಮೊದಲ ವಾರ ಕೇಜ್ರೀವಾಲ್ ಸರ್ಕಾರಕ್ಕೆ ಮರಳಿಸಿತ್ತು. ಈ ತೀರ್ಪನ್ನು ತಟಸ್ಥಗೊಳಿಸುವುದೇ ಮೋದಿ ಸರ್ಕಾರದ ಸುಗ್ರೀವಾಜ್ಞೆಯ ದುರುದ್ದೇಶ. ಕಾಯಿದೆ ಕಾನೂನು, ಸಂವಿಧಾನ, ಜನತಂತ್ರ  ಹಾಗೂ ಒಕ್ಕೂಟ ವ್ಯವಸ್ಥೆಯ ತಳಹದಿ ತತ್ವಗಳು ಮೌಲ್ಯಗಳನ್ನು ಬುಡಮೇಲು ಮಾಡುವ ಕೃತ್ಯವಿದು.

ದೇಶದ ರಾಜಧಾನಿ ದೆಹಲಿಯ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಂಡು ನರೇಂದ್ರ ಮೋದಿ ಸರ್ಕಾರ ಇತ್ತೀಚೆಗೆ ಸುಗ್ರೀವಾಜ್ಞೆ ಹೊರಡಿಸಿತು.

ದೆಹಲಿಯ ಅಧಿಕಾರಯಂತ್ರವನ್ನು ನಿಯಂತ್ರಿಸುವ ಅಧಿಕಾರವನ್ನು ಸುಪ್ರೀಮ್ ಕೋರ್ಟು ಈ ತಿಂಗಳ ಮೊದಲ ವಾರ ಕೇಜ್ರೀವಾಲ್ ಸರ್ಕಾರಕ್ಕೆ ಮರಳಿಸಿತ್ತು. ಈ ತೀರ್ಪನ್ನು ತಟಸ್ಥಗೊಳಿಸುವುದೇ ಮೋದಿ ಸರ್ಕಾರದ ಸುಗ್ರೀವಾಜ್ಞೆಯ ದುರುದ್ದೇಶ.

ಕಾಯಿದೆ ಕಾನೂನು, ಸಂವಿಧಾನ, ಜನತಂತ್ರ  ಹಾಗೂ ಒಕ್ಕೂಟ ವ್ಯವಸ್ಥೆಯ ತಳಹದಿ ತತ್ವಗಳು ಮೌಲ್ಯಗಳನ್ನು ಬುಡಮೇಲು ಮಾಡುವ ಕೃತ್ಯವಿದು. ಅಧಿಕಾರದ ನಿರ್ಲಜ್ಜ ಹಪಾಹಪಿ ಮತ್ತು ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರದ ನಗ್ನ ದುರುಪಯೋಗ. ಆಮ್ ಆದ್ಮೀ ಪಾರ್ಟಿ ಎಂಬ ಗುಬ್ಬಚ್ಚಿಯ ಮೇಲೆ ಚಂಡಪ್ರಚಂಡ ಮೋದಿ-ಅಮಿತ್ ಶಾ ಜೋಡಿ ಕಾಲಕಾಲಕ್ಕೆ ಬ್ರಹ್ಮಾಸ್ತ್ರಗಳನ್ನೇ ಪ್ರಯೋಗಿಸುತ್ತ ಬಂದಿದೆ. ಆದರೂ ಗುಬ್ಬಚ್ಚಿ ಸೋತಿಲ್ಲ, ಅಧೀರವಾಗಿಲ್ಲ. ಬದಲಾಗಿ ಕೇಜ್ರೀವಾಲ್ ಸರ್ಕಾರ ಹೆಚ್ಚು ಹೆಚ್ಚು ಜನಪ್ರಿಯತೆ ಗಳಿಸುತ್ತ ಸಾಗಿದೆ. ‘ಯಕಃಶ್ಚಿತ್’ ಗುಬ್ಬಚ್ಚಿಯಿಂದ ಹತ್ತು ಹಲವು ಮುಖಭಂಗಗಳನ್ನು ಎದುರಿಸಿರುವ ಈ ಜೋಡಿ ಪ್ರತೀಕಾರಕ್ಕಾಗಿ ಕುದಿಯುತ್ತಲೇ ಇದೆ. ದೆಹಲಿ ತನ್ನ ಬಿಗಿಮುಷ್ಠಿಯಲ್ಲೇ ಬಂದಿಯಾಗಿ ಇರಬೇಕೆಂಬ ಸರ್ವಾಧಿಕಾರಿ ಹಟವನ್ನು ಬಿಟ್ಟುಕೊಡುತ್ತಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸುಪ್ರೀಮ್ ಕೋರ್ಟಿನ ತೀರ್ಪನ್ನು ನಿಷ್ಕ್ರಿಯಗೊಳಿಸಲು ಶಾಸನ ರೂಪಿಸುವ ಅಧಿಕಾರ ಸಂಸತ್ತಿಗೆ ಉಂಟು. ಆದರೆ ಈ ತೀರ್ಪನ್ನು ವ್ಯತಿರೇಕಿಸುವ ಏಕೈಕ ಉದ್ದೇಶದಿಂದ ಶಾಸನ ರೂಪಿಸಲು ಬರುವುದಿಲ್ಲ. ನ್ಯಾಯಾಲಯ ತನ್ನ ತೀರ್ಪಿನಲ್ಲಿ ಮುಂದೆ ಮಾಡಿರುವ ತರ್ಕ- ತಳಹದಿ ಸರಿಯಲ್ಲವೆಂದು ಸಿದ್ಧಪಡಿಸಿ ತೋರಿಸಬೇಕು.

ಪ್ರಾತಿನಿಧಿಕ ಜನತಂತ್ರ, ಒಕ್ಕೂಟ ವ್ಯವಸ್ಥೆ ಹಾಗೂ ಉತ್ತರದಾಯಿತ್ವದ ಮೂರು ಸಾಂವಿಧಾನಿಕ ತತ್ವಗಳನ್ನು ದೆಹಲಿಯ ಚುನಾಯಿತ ಸರ್ಕಾರಕ್ಕೆ ಸುಪ್ರೀಮ್ ಕೋರ್ಟು ನೀಡಿದ್ದ ತೀರ್ಪು ಅನ್ವಯಿಸಿತ್ತು. ಜನತಾಂತ್ರಿಕ ತತ್ವಗಳು ಮತ್ತು ಒಕ್ಕೂಟ ವ್ಯವಸ್ಥೆಯು ಸಂವಿಧಾನದ ಮೂಲ ರಚನೆಯ ಅವಿಭಾಜ್ಯ ಅಂಗವೆಂದೂ ನ್ಯಾಯಾಲಯ ಗುರುತಿಸಿತ್ತು. ಇಂತಹ ಗಹನ ತೀರ್ಪೊಂದನ್ನು ಕೇವಲ ಸಾಮಾನ್ಯ ಕಾಯಿದೆಯೊಂದಕ್ಕೆ (ಜಿ.ಎನ್.ಸಿ.ಟಿ.ಡಿ.1991) ತಿದ್ದುಪಡಿ ತಂದು ಇಷ್ಟು ಸಲೀಸಾಗಿ ಅಸಿಂಧುಗೊಳಿಸಿರುವ ಕೇಂದ್ರದ ನಡೆ ಸಂವಿಧಾನತಜ್ಞರ ಹುಬ್ಬೇರಿಸಿದೆ.

ಅಧಿಕಾರಿಗಳು ಮತ್ತು ನೌಕರವರ್ಗಗಳ ಸೇವೆಯನ್ನು ನಿಯಂತ್ರಿಸುವ ಸಾಂವಿಧಾನಿಕ ಅಧಿಕಾರ ಕೇವಲ ರಾಜ್ಯ ಸರ್ಕಾರಗಳಿಗೆ ಮಾತ್ರವಲ್ಲದೆ ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಮೇ ಐದರ ತನ್ನ ತೀರ್ಪಿನಲ್ಲಿ ನಿಚ್ಚಳವಾಗಿ ತಿಳಿಸಿತ್ತು. ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ದೆಹಲಿ ಕೂಡ ಸೇರಿದೆಯೆಂದು ಸಾರಿತ್ತು. ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯು ದೆಹಲಿಯ ಚುನಾಯಿತ ಸರ್ಕಾರದಿಂದ (ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮೀ ಪಾರ್ಟಿ ಸರ್ಕಾರ) ಈ ಅಧಿಕಾರವನ್ನು ಕಿತ್ತುಕೊಂಡಿದೆ.

ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ನೀಡುವುದು ಸಾಧ್ಯವಿಲ್ಲ. ಆದರೆ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆ ದೆಹಲಿಗೆ ಸಂಪೂರ್ಣವಾಗಿ ಅನ್ವಯಿಸುತ್ತದೆ ಎಂದು ಸುಪ್ರೀಮ್ ಕೋರ್ಟಿನ ಸಾಂವಿಧಾನಿಕ ಪೀಠವು 2018ರ ತೀರ್ಪಿನಲ್ಲೇ ಸ್ಪಷ್ಟವಾಗಿ ಸಾರಿತ್ತು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ತೃತೀಯ ರಂಗಕ್ಕೆ ಶಕ್ತಿ ತುಂಬಲಿದೆಯೇ ಕರ್ನಾಟಕದ ಗೆಲುವು?

ದೆಹಲಿಯ ಅಧಿಕಾರಿಗಳ ನಿಯುಕ್ತಿ ಮತ್ತು ವರ್ಗಾವಣೆ ನಿಯಂತ್ರಣದ ಅಧಿಕಾರ ದೆಹಲಿಯ ಚುನಾಯಿತ ಸರ್ಕಾರಕ್ಕೆ ಸೇರಿದ್ದು ಎಂಬ ಸಂಗತಿಯನ್ನು ಸಾಧಿಸಿ ತೋರಿಸಿತ್ತು ಸುಪ್ರೀಮ್ ಕೋರ್ಟು. ಈ ಉದ್ದೇಶಕ್ಕಾಗಿ ಸಂವಿಧಾನದ ಆಶಯವನ್ನು ಎಳೆಎಳೆಯಾಗಿ ವ್ಯಾಖ್ಯಾನಿಸಿತ್ತು. ಈ ವ್ಯಾಖ್ಯಾನ ಯಾವ್ಯಾವ ರೀತಿ ನಿರಾಧಾರವೆಂದು ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯು ಸಾಧಿಸಿ ತೋರಬೇಕಿತ್ತು. ಆದರೆ ಅಂತಹ ಯಾವುದೇ ಪ್ರಸ್ತಾಪವಾಗಲಿ, ಸಂವಿಧಾನದ ವ್ಯಾಖ್ಯಾನದ ತರ್ಕವಾಗಲಿ ಅದರಲ್ಲಿ ಇಲ್ಲ. ಸಂವಿಧಾನದ ಮೂಲರಚನೆಯನ್ನು ಉಲ್ಲಂಘಿಸುವ ಯಾವುದೇ ಕಾಯಿದೆಯನ್ನು ಅಥವಾ ಯಾವುದೇ ಸಂವಿಧಾನ ತಿದ್ದುಪಡಿಯನ್ನು ತರುವ ಅಧಿಕಾರ ಸಂಸತ್ತಿಗೆ ಇಲ್ಲ.
ಚುನಾಯಿತ ಸರ್ಕಾರವಿದ್ದರೂ, ರಾಜ್ಯವೊಂದರ ಅಧಿಕಾರಶಾಹಿ ನಿಯಂತ್ರಣದ ಅಧಿಕಾರಗಳನ್ನು ಸುಗ್ರೀವಾಜ್ಞೆ ಹೊರಡಿಸಿ ಕಿತ್ತುಕೊಳ್ಳುವ ಕ್ರಮ ಸಂವಿಧಾನಬಾಹಿರ.

ದೆಹಲಿಯ ಅಧಿಕಾರಶಾಹಿಯ ನಿಯಂತ್ರಿಸುವ ಅಧಿಕಾರವನ್ನು ಕಿತ್ತುಕೊಳ್ಳುವ ಮೋದಿ ಸರ್ಕಾರದ ಪ್ರಯತ್ನ ಇಂದು ನೆನ್ನೆಯದಲ್ಲ. 2015ರಿಂದಲೂ ಜಾರಿಯಲ್ಲಿದೆ. ಈ ವ್ಯಾಜ್ಯ ಕಳೆದ ಎಂಟು ವರ್ಷಗಳಿಂದ ಸುಪ್ರೀಮ್ ಕೋರ್ಟಿನ ಮುಂದಿತ್ತು. ಕೇಜ್ರೀವಾಲ್ ಸರ್ಕಾರದ ಪರವಾಗಿ ಸರ್ವಾನುಮತದ ತೀರ್ಪು ಇತ್ತೀಚೆಗೆ ಹೊರಬಿತ್ತು. ದೇಶದ ರಾಜಧಾನಿಯಾದ ಕಾರಣದಿಂದಾಗಿ ದೆಹಲಿಯ ಕಾನೂನು ವ್ಯವಸ್ಥೆ ಮತ್ತು ಅಲ್ಲಿನ ಜಮೀನಿನ ಮೇಲೆ ಕೇಂದ್ರ ಸರ್ಕಾರದ ನಿಯಂತ್ರಣ ಇರಬೇಕಾದದ್ದು ಸ್ವಾಭಾವಿಕ. ಅಂತಹ ಅಧಿಕಾರವನ್ನು ಕೇಂದ್ರ ಸರ್ಕಾರ ಈಗಾಗಲೆ ಹೊಂದಿದೆ. ಆದರೆ ಅಲ್ಲಿಂದಾಚೆಗೂ ತಾನೇ ಆಡಳಿತ ನಡೆಸಬೇಕೆಂಬುದು ಸರ್ವಾಧಿಕಾರೀ ಧೋರಣೆಯಲ್ಲದೆ ಬೇರೇನೂ ಅಲ್ಲ.

ಸುಪ್ರೀಮ್ ಕೋರ್ಟಿನ ತೀರ್ಪಿನ ನಿರ್ಲಜ್ಜ ಉಲ್ಲಂಘನೆಯಿದು. ಈ ದುಸ್ಸಾಹಸಕ್ಕೆ ಸೋಲು ನಿಶ್ಚಿತ. ನ್ಯಾಯಾಂಗದ ಅಂಗಳದಲ್ಲಿ ಮತ್ತೊಂದು ಸುತ್ತಿನ ವ್ಯಾಜ್ಯ ಅನಿವಾರ್ಯ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಎಲ್ಲೆಲ್ಲೂ ಪುರುಷರದೇ ಪಾರುಪತ್ಯ; ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟು

ಎಲ್ಲ ಕ್ಷೇತ್ರವನ್ನೂ ಪುರುಷರೇ ಆವರಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷ, ಸರ್ಕಾರದೊಳಗೆ, ಸಾಂಸ್ಕೃತಿಕ ಸಂಸ್ಥೆಗಳಲ್ಲಿ...

ಈ ದಿನ ಸಂಪಾದಕೀಯ | ಇದು ಬಿಜೆಪಿ-ಜೆಡಿಎಸ್ ನಡುವಿನ ಬಿರುಕಲ್ಲ, ಬಿಕ್ಕಟ್ಟಲ್ಲ, ಆಟ

ಗೌಡರ ಕುಟುಂಬಕ್ಕೆ ಚುನಾವಣೆ ಎಂದರೆ ಖರ್ಚಿನ ಬಾಬತ್ತಲ್ಲ, ಲಾಭದ ಹೊಸ ಮಾರ್ಗ....

ಈ ದಿನ ಸಂಪಾದಕೀಯ | ಹೇಳುವುದು ಹಬ್ಬ, ಮಾಡುವುದು ಯುದ್ಧ, ಸಾಯುವುದು ಸೈನಿಕರು

ಹಬ್ಬಗಳು ಎಲ್ಲ ಕಾಲಕ್ಕೂ ಉಳ್ಳವರ ಸಂಭ್ರಮ-ಸಂತೋಷವನ್ನು ಹೆಚ್ಚು ಮಾಡುತ್ತವೆ. ಬಡವರನ್ನು ನೋಯಿಸಿ...

ಈ ದಿನ ಸಂಪಾದಕೀಯ | ಮುಚ್ಚಿಟ್ಟ ಮಾಧ್ಯಮಗಳು ಬಿಚ್ಚಿಟ್ಟ ಸಾಮಾಜಿಕ ಮಾಧ್ಯಮಗಳು

ಚುನಾವಣಾ ಆಯೋಗ ಬಿಡುಗಡೆ ಮಾಡಿದ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಸುದ್ದಿ ಮಾಧ್ಯಮಗಳು...