₹20,000 ಕೋಟಿಯ ನೂತನ ಸಂಸತ್ ಭವನ; ಭಾರತದಲ್ಲಿ ಚರಿತ್ರೆ ಸೃಷ್ಟಿಯಾಗುತ್ತಿದೆ!

Date:

Advertisements
ದೇಶದ ಬಡವರ ಲೆಕ್ಕವನ್ನು ಸ್ಥಗಿತಗೊಳಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆಯೂ ಇತ್ತೀಚಿನ ವರ್ಷಗಳಲ್ಲಿ ಲಭ್ಯವಿಲ್ಲ. ಹೀಗೆ ದೇಶದ ಬಡವರು, ಕಾರ್ಮಿಕರು, ರೈತರ ಲೆಕ್ಕಗಳು ಒಂದೊಂದಾಗಿ ಬರಖಾಸ್ತಾಗುತ್ತಿವೆ. ಆದರೆ, ₹20,000 ಕೋಟಿ ವೆಚ್ಚದಲ್ಲಿ ನೂತನ ಸಂಸತ್ ಭವನ ಎದ್ದುನಿಂತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಚರಿತ್ರೆಯಲ್ಲಿ ಮತ್ತೊಂದು ಮೈಲಿಗಲ್ಲು ನೆಡಲು ಮುಂದಾಗಿದ್ದಾರೆ. ದೆಹಲಿಯಲ್ಲಿ ನೂತನವಾಗಿ ನಿರ್ಮಿಸಿರುವ ಸಂಸತ್ ಭವನವನ್ನು ಭಾನುವಾರ (ಮೇ 28, 2023)ದಂದು ಮೋದಿ ಉದ್ಘಾಟನೆ ಮಾಡಲಿದ್ದಾರೆ. ದೇಶದ ಪ್ರಥಮ ಪ್ರಜೆಯಾದ ಮತ್ತು ಸಂಸತ್ತಿನ ಮುಖ್ಯಸ್ಥರಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಹೊರಗಿಟ್ಟು ಮೋದಿಯವರೇ ಸಂಸತ್ ಭವನ ಉದ್ಘಾಟಿಸಲು ಮುಂದಾಗಿರುವುದಕ್ಕೆ 20ಕ್ಕೂ ಹೆಚ್ಚು ವಿರೋಧ ಪಕ್ಷಗಳು ಪ್ರತಿಭಟನೆ ವ್ಯಕ್ತಪಡಿಸಿದ್ದು, ಸಮಾರಂಭವನ್ನು ಬಹಿಷ್ಕರಿಸಿವೆ. ‘ಪ್ರಜಾಪ್ರಭುತ್ವದ ಆತ್ಮವನ್ನೇ ನಾಶ ಮಾಡಿದ ಮೇಲೆ ನೂತನ ಸಂಸತ್ ಭವನ್ನು ಉದ್ಘಾಟಿಸುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ವಿರೋಧ ಪಕ್ಷಗಳು ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ರಾಮನಾಥ್ ಕೋವಿಂದ್ ರಾಷ್ಟ್ರಪತಿಗಳಾಗಿದ್ದಾಗ ಇದರ ಶಂಕುಸ್ಥಾಪನೆ ನೆರವೇರಿತ್ತು. ದಲಿತರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದ್ದೇವೆ ಎಂದು ಆಗ ಬಿಜೆಪಿ ಬಿಂಬಿಸಿಕೊಂಡಿತ್ತು. ಆದರೆ, ಅವರನ್ನು ಶಂಕಸ್ಥಾಪನೆಗೆ ಕರೆಯದೇ ಪ್ರಧಾನಿ ಮೋದಿಯವರೇ ಪ್ರಕ್ರಿಯೆ ನೆರವೇರಿಸಿದ್ದರು. ಇದೀಗ ದ್ರೌಪದಿ ಮುರ್ಮು ಬುಡಕಟ್ಟು ಸಮುದಾಯದ ಮಹಿಳೆಯಾಗಿರುವುದರಿಂದ ಮತ್ತು ವಿಧವೆ ಆಗಿರುವುದರಿಂದ ಅವರನ್ನು ಉದ್ಘಾಟನೆಯಿಂದ ಹೊರಗಿಡಲಾಗಿದೆ ಎನ್ನುವಂಥ ಆರೋಪಗಳು ಕೇಳಿಬಂದಿವೆ. ಮೇಲಾಗಿ ಆರ್‌ಎಸ್‌ಎಸ್‌ ಸಿದ್ಧಾಂತವಾದಿ ಸಾವರ್ಕರ್ ಹುಟ್ಟಿದ ದಿನವೇ ಸಂಸತ್ ಭವನವನ್ನು ಉದ್ಘಾಟಿಸುತ್ತಿರುವುದರ ಬಗ್ಗೆ ಹಲವು ಗುಮಾನಿಗಳು ವ್ಯಕ್ತವಾಗುತ್ತಿವೆ. ಸಂವಿಧಾನದ ಅನುಸಾರ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ಸಂಸತ್ತಿನಲ್ಲಿಯೇ ಮನುವಾದ ಆಚರಣೆಗೊಳಗಾಗುತ್ತಿದೆ, ಪ್ರಜಾಪ್ರುಭುತ್ವದ ಮೌಲ್ಯಗಳಿಗೆ ಅಪಾಯ ಬಂದೊದಗಿದೆ ಎನ್ನುವ ಕಳವಳ ವ್ಯಕ್ತವಾಗಿದೆ.

‘ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಡೆಗಣಿಸಿ, ಪ್ರಧಾನಿ ಮೋದಿಯವರೇ ನೂತನ ಸಂಸತ್ ಭವನದ ಉದ್ಘಾಟನೆ ನೆರವೇರಿಸುತ್ತಿರುವುದು ಪ್ರಜಾಪ್ರಭುತ್ವದ ಮೇಲಿನ ನೇರ ಪ್ರಹಾರವಾಗಿದೆ’ ಎಂದು ವಿರೋಧ ಪಕ್ಷಗಳು ಜಂಟಿ ಹೇಳಿಕೆ ನೀಡಿವೆ. ‘ಸಂಸತ್ ಭವನವನ್ನು ಸಾಂವಿಧಾನಿಕ ಮೌಲ್ಯಗಳಿಂದ ನಿರ್ಮಿಸಲಾಗಿದೆಯೇ ಹೊರತು, ಅಹಂಕಾರವೆಂಬ ಇಟ್ಟಿಗೆಗಳಿಂದ ಅಲ್ಲ’ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ‘ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೇವಲ ಮತಬ್ಯಾಂಕ್ ಭದ್ರಪಡಿಸಿಕೊಳ್ಳಲಷ್ಟೇ ರಾಷ್ಟ್ರಪತಿ ಹುದ್ದೆಗೆ ದಲಿತರು ಮತ್ತು ಬುಡಕಟ್ಟು ಸಮುದಾಯದವರನ್ನು ನೇಮಿಸುತ್ತಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ‘ಇದು ಪ್ರಧಾನಿ ಮೋದಿಯವರ ಗೃಹಪ್ರವೇಶ ಕಾರ್ಯಕ್ರಮವಲ್ಲ’ ಎಂದು ಟಿಎಂಸಿ ಸಂಸದೆ ಮಹುವಾ ಮೊಹಿತ್ರಾ ಕಿಡಿ ಕಾರಿದ್ದಾರೆ. ಬಿಜೆಪಿ ಮಾತ್ರ, ಇದು ಇಡೀ ದೇಶ ಹೆಮ್ಮೆ ಪಡಬೇಕಾದ, ಸಂಭ್ರಮಿಸಬೇಕಾದ ಸಂಗತಿ ಎಂದು ಬಿಂಬಿಸುತ್ತಿದೆ.      

Advertisements

ಈ ಸುದ್ಧಿ ಓದಿದ್ದೀರಾ: ಜಿಂಬಾಬ್ವೆ ವಿಶ್ವದ ಅತ್ಯಂತ ದಟ್ಟದರಿದ್ರ ರಾಷ್ಟ್ರ: ಭಾರತದ ಸ್ಥಾನ ಎಷ್ಟು ಗೊತ್ತೆ?

ಸೆಂಟ್ರಲ್ ವಿಸ್ತಾ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು; ಇಡೀ ದೇಶ ಕೊರೊನಾ ಹೊಡೆತಕ್ಕೆ ಸಿಕ್ಕಿ ಜರ್ಝರಿತವಾಗಿದ್ದಾಗ ಆರಂಭವಾಗಿದ್ದು ಅಂದಾಜು 20,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ. ಕೊರೊನಾದಿಂದ ಅತಿ ಹೆಚ್ಚು ಘಾಸಿಗೊಂಡ ದೇಶಗಳಲ್ಲಿ ಭಾರತವೂ ಒಂದು. ದೇಶದಲ್ಲಿ ತುರ್ತು ಚಿಕಿತ್ಸೆ ಲಭ್ಯವಾಗದೇ, ಆಸ್ಪತ್ರೆಯಲ್ಲಿ ಬೆಡ್‌ಗಳು ಸಿಗದೇ, ಕೊನೆ ಗಳಿಗೆಯಲ್ಲಿ ಆಕ್ಸಿಜನ್ ಸಿಗದೇ ಸತ್ತವರ ಸಂಖ್ಯೆ ದೊಡ್ಡದು.

ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ಮಾಡಲು ಕೆಲಸವಿಲ್ಲದೇ, ತಿನ್ನಲು ಅನ್ನವಿಲ್ಲದೇ ಜನ ಅಪಾರ ಪಾಡು ಪಟ್ಟರು. ಕೆಲಸದ ಸ್ಥಳಗಳಿಂದ ಬರಿಗಾಲಲ್ಲಿ ಸರಕು ಸರಂಜಾಮು, ಮಕ್ಕಳು ಮರಿ ಹೊತ್ತು ನಡೆದರು; ಅನೇಕರು ಹಾದಿ ನಡುವೆಯೇ ಹೆಣವಾದರು. ಹೀಗೆ ದೇಶದಲ್ಲಿ ಎಷ್ಟು ಜನ ಸತ್ತರು ಎನ್ನುವ ಲೆಕ್ಕವಿಡಲೂ ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಅಂಥ ಸಂದರ್ಭದಲ್ಲೂ ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಯೋಜನೆಗೆ ಹಣದ ಕೊರತೆಯಾಗದಂತೆ ನೋಡಿಕೊಂಡಿತು. ತಮ್ಮ ಆಡಳಿತಾವಧಿಯಲ್ಲೇ ನೂತನ ಸಂಸತ್ ಭವನ ಉದ್ಘಾಟಿಸಿ ಚರಿತ್ರೆ ಸೃಷ್ಟಿಸುವ ಉಮೇದಿನಲ್ಲಿದ್ದವರಿಗೆ ಬಡವರ, ರೈತ ಕೂಲಿಗಳ, ಕಾರ್ಮಿಕರ ಕಣ್ಣೀರು, ಸಾವುಗಳು ಕಾಣುವುದು ಸಾಧ್ಯವಿರಲಿಲ್ಲ.

ಸಂಸತ್ ಭವನಆಳುವವರ ಚರಿತ್ರೆ ಕಟ್ಟುವ ಉಮೇದನ್ನು ಬದಿಗಿರಿಸಿ ವಾಸ್ತವದತ್ತ ನೋಡಿದರೆ, ದಾರುಣ ಚಿತ್ರಗಳು ಇದಿರಾಗುತ್ತವೆ. ದೇಶದಲ್ಲಿ ಸಂಪತ್ತು ಮತ್ತು ಅಧಿಕಾರದ ಹಂಚಿಕೆಯಲ್ಲಿ ಅಗಾಧ ಅಸಮಾನತೆ ಇದೆ. 1991ರಲ್ಲಿ ಭಾರತ ಜಾಗತೀಕರಣಕ್ಕೆ ತೆರೆದುಕೊಂಡಾಗ ದೇಶದಲ್ಲಿ ಒಬ್ಬ ಬಿಲಿಯನೇರ್‌ ಕೂಡ  ಇರಲಿಲ್ಲ. 2014ರ ಹೊತ್ತಿಗೆ ದೇಶದಲ್ಲಿ 56 ಬಿಲಿಯನೇರ್‌ಗಳು ಹುಟ್ಟಿಕೊಂಡಿದ್ದರು. 2014ರಿಂದ 2023ರ ಹೊತ್ತಿಗೆ ಬಿಲಿಯನೇರ್‌ಗಳ ಸಂಖ್ಯೆ 166ಕ್ಕೆ ಏರಿದೆ. ದೇಶದಲ್ಲಿ ಪ್ರತಿ ಇಪ್ಪತ್ತು ದಿನಕ್ಕೆ ಒಬ್ಬ ಬಿಲಿಯನೇರ್ ಹುಟ್ಟುತ್ತಿದ್ಧಾನೆ.

ನಮ್ಮ ದೇಶದಲ್ಲಿ ಶ್ರೀಮಂತರ ಲೆಕ್ಕ ಸುಲಭವಾಗಿ ಸಿಗುತ್ತಿದೆ. ಆದರೆ, ಬಡವರ ಲೆಕ್ಕ ಕಣ್ಮರೆಯಾಗಿದೆ. 1973-74ರಿಂದ ಯೋಜನಾ ಆಯೋಗವು ಪ್ರತಿ ಐದಾರು ವರ್ಷಗಳಿಗೊಮ್ಮೆ ಬಡತನದ ರೇಖೆಗಿಂತ ಕೆಳಗಿರುವವರ (ಬಿಪಿಎಲ್) ಸಂಖ್ಯೆಯನ್ನು ಬಿಡುಗಡೆ ಮಾಡುತ್ತಿತ್ತು. ಆದರೆ, ಮೋದಿ ಅಧಿಕಾರಕ್ಕೆ ಬಂದ ನಂತರ ಯೋಜನಾ ಆಯೋಗವನ್ನು ರದ್ದು ಮಾಡಿ ನೀತಿ ಆಯೋಗ ತಂದರು. ಅಲ್ಲಿಗೆ ದೇಶದ ಬಡವರನ್ನು ಲೆಕ್ಕ ಹಾಕುವುದೂ ನಿಂತುಹೋಯಿತು. ಅಷ್ಟೇ ಅಲ್ಲ, ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆಯೂ ಇತ್ತೀಚಿನ ವರ್ಷಗಳಲ್ಲಿ ಲಭ್ಯವಿಲ್ಲ. ಹೀಗೆ ದೇಶದಲ್ಲಿ ಬಡವರು, ಕಾರ್ಮಿಕರು, ರೈತರ ಲೆಕ್ಕಗಳು ಒಂದೊಂದಾಗಿ ಬರಖಾಸ್ತಾಗುತ್ತಿವೆ.

ಈ ಸುದ್ದಿ ಓದಿದ್ದೀರಾ: ನೂತನ ಸಂಸತ್‌ ಭವನ ಉದ್ಘಾಟನೆ | ಆಹ್ವಾನ ಸ್ವೀಕರಿಸಿದ ಬಿಜೆಡಿ, ವೈಎಸ್‌ಆರ್‌ಸಿಪಿ

ಇಷ್ಟಾದರೂ ವಿವಿಧ ಜಾಗತಿಕ ಅಧ್ಯಯನಗಳು, ಸೂಚ್ಯಂಕಗಳು ನಮ್ಮ ದೇಶದ ಸ್ಥಿತಿಗತಿಗೆ ಕನ್ನಡಿ ಹಿಡಿಯುತ್ತಿವೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 121 ದೇಶಗಳ ಪೈಕಿ ಭಾರತ 107ನೇ ಸ್ಥಾನದಲ್ಲಿದೆ. ಪರಿಸರ ಕಾರ್ಯಕ್ಷಮತೆಯ ಸೂಚ್ಯಂಕದಲ್ಲಿ ದೇಶವು ಜಗತ್ತಿನ 180 ರಾಷ್ಟ್ರಗಳ ಪೈಕಿ 180 ನೇ ಸ್ಥಾನ-ಅಂದರೆ ಕಟ್ಟ ಕಡೆಯ- ಸ್ಥಾನದಲ್ಲಿದೆ. ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 191 ರಾಷ್ಟ್ರಗಳ ಪೈಕಿ ಭಾರತವು 132 ಸ್ಥಾನದಲ್ಲಿದೆ.

ಅಷ್ಟೇ ಏಕೆ, ನೂತನ ಸಂಸತ್ ಭವನ ನಿರ್ಮಾಣವಾಗಿರುವ ಅದೇ ದೆಹಲಿಯಲ್ಲಿ ಸುಮಾರು 2000 ಕೊಳಗೇರಿಗಳಿದ್ದು, ಅವುಗಳಲ್ಲಿ ಅಂದಾಜು 40 ಲಕ್ಷ ಜನ ಅತಿ ಹೀನ ಸ್ಥಿತಿಯಲ್ಲಿ ಬದುಕು ಸವೆಸುತ್ತಿದ್ದಾರೆ. ದೆಹಲಿ ಸೇರಿದಂತೆ ದೇಶದ ನೂರಾರು ನಗರಗಳ, ಲಕ್ಷಾಂತರ ಹಳ್ಳಿ ಪಟ್ಟಣಗಳ ಬಡವರ ಬವಣೆ ₹20,000 ಕೋಟಿ ವೆಚ್ಚದ ಮಹಲಿನ ಭವ್ಯ ಬೆಳಕಿನಲ್ಲಿ ಮಸುಕಾಗಿಹೋಗಿದೆ.

ಇದೆಲ್ಲದರ ನಡುವೆಯೇ, ಭಾರತದಲ್ಲಿ ಚರಿತ್ರೆ ಸೃಷ್ಟಿಯಾಗುತ್ತಿದೆ!    

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X