“ದೇಶದಲ್ಲಿ ನರೇಂದ್ರ ಮೋದಿಯವರ ಹವಾ ಇದ್ದು, ಅವರು ಮತ್ತೊಮ್ಮೆ ಪ್ರಧಾನಿಯಾಗುವುದನ್ನು ತಪ್ಪಿಸಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ. ಕಾಂಗ್ರೆಸ್‌ಗೆ ದಿಕ್ಕು ದಿಸೆ ಇಲ್ಲ, ನಾಯಕರೂ ಇಲ್ಲ” ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜೆಡಿಎಸ್ ಕೂಡ ಬಿಜೆಪಿ ಜೊತೆ ಸೇರಿರುವುದರಿಂದ ಹಾಲು ಜೇನು ಬೆರೆತಂತಾಗಿದೆ. ಲೋಕಸಭೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲು ವ್ಯವಸ್ಥಿತವಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಿಕ್ಕು ದಿಸೆಯಿಲ್ಲದೆ ನಾಯಕನಿಲ್ಲದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಅಜೆಂಡಾ ಇಲ್ಲ. ಬಿಹಾರ, ತಮಿಳುನಾಡಿನಲ್ಲಿ ಹಿಂದೂಗಳನ್ನು ನಿಂದಿಸಲಾಗುತ್ತಿದೆ. ರಾಮ ಮಂದಿರದ ಬಗ್ಗೆ ಕೀಳಾಗಿ ಮಾತನಾಡಲಾಗುತ್ತಿದೆ” ಎಂದರು.
“ಅಯೋಧ್ಯೆಯಲ್ಲಿ ಗೊಂಬೆ ಇತ್ತು ಎಂದು ರಾಜ್ಯದ ಸಚಿವರು ಟೀಕೆ ಮಾಡುತ್ತಾರೆ. ಹಿರಣ್ಯಕಶಿಪು ಕೂಡ ದೇವರಿದ್ದಾನೆಯೇ ಎಂದು ಪ್ರಶ್ನೆ ಮಾಡಿ ನಂತರ ಕಂಬದಿಂದಲೇ ದೇವರು ಹೊರಬಂದಿದ್ದ. ನೆಹರು ಕಾಲದಿಂದಲೂ ಕಾಂಗ್ರೆಸ್ ಹಿಂದೂಗಳನ್ನು ದಮನ ಮಾಡಲು ಯತ್ನಿಸುತ್ತಿದೆ. ಕರಸೇವಕರನ್ನು ಬಂಧಿಸಿರುವುದನ್ನು ವಿರೋಧಿಸಿದರೆ ನನ್ನ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ಇವರಿಗೆ ಜನ್ಮದಲ್ಲಿ ಬುದ್ಧಿ ಬರುವುದಿಲ್ಲ” ಎಂದು ಹೇಳಿದರು.
“ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ಮೋದಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ಅವರು ಮತ್ತೆ ಪ್ರಧಾನಿಯಾಗಬೇಕೆಂದು ದೇವೇಗೌಡರು ಬಯಸಿದ್ದಾರೆ. ಜೆಡಿಎಸ್‌ಗೆ ಎಲ್ಲೇ ಸೀಟು ಕೊಟ್ಟರೂ ಅವೆಲ್ಲವನ್ನೂ ಗೆಲ್ಲಿಸುವ ಹೊಣೆಯನ್ನು ಬಿಜೆಪಿ ಹೊರಲಿದೆ. ಅದೇ ರೀತಿ ಜೆಡಿಎಸ್ ಕೂಡ ಜವಾಬ್ದಾರಿ ಹೊರಲಿದೆ. ಜೆಡಿಎಸ್ ಹಾಗೂ ಬಿಜೆಪಿ ಮನಸ್ಸುಗಳು ಒಂದಾಗಿದೆ. ಹಿಂದೆ ಕಾಂಗ್ರೆಸ್‌ನವರು ಜೆಡಿಎಸ್‌ಗೆ ವಂಚಿಸಿದ್ದರು. ಬಿಜೆಪಿಯಿಂದ ಎರಡು ಸಮೀಕ್ಷೆ ಮಾಡಿದ್ದು, ಇದು ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ಆರಿಸಲಾಗುತ್ತದೆ. ಆದಷ್ಟು ಬೇಗ ಪಟ್ಟಿ ಬಿಡುಗಡೆಯಾಗಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಎಸ್.ಸಿ.ಎಸ್.ಪಿ/ಟಿ.ಎಸ್.ಪಿ | ಆಯಾ ವರ್ಷದ ಅನುದಾನ ಆಯಾ ವರ್ಷವೇ ಖರ್ಚು ಮಾಡಬೇಕು: ಸಚಿವ ಮಹದೇವಪ್ಪ
ಪುಣ್ಯಸ್ಮರಣೆ ಕಾರ್ಯಕ್ರಮ
ಆದಿಚುಂಚನಗಿರಿ ಮಠದಲ್ಲಿ ಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆರ್.ಅಶೋಕ, “ಬಾಲಗಂಗಾಧರನಾಥ ಸ್ವಾಮಿಗಳು ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಅಕ್ಷರ ನೀಡಿ ಜೀವನ ಕೊಟ್ಟಿದ್ದರು. ಅವರಿಂದ ಶಿಕ್ಷಣ ಪಡೆದ ಅನೇಕರು ಇಂದು ದೇಶ ವಿದೇಶಗಳಲ್ಲಿ ದೊಡ್ಡ ಹುದ್ದೆ ಪಡೆದು ಉತ್ತಮ ಜೀವನ ನಡೆಸುತ್ತಿದ್ದಾರೆ. ಒಕ್ಕಲಿಗ ಸಮುದಾಯಕ್ಕೂ ಅವರು ಮಾರ್ಗದರ್ಶನ ನೀಡಿದ್ದರು” ಎಂದರು.
ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಉಪಸ್ಥಿತರಿದ್ದರು.