- ವೈರಲ್ ವಿಡಿಯೋ ಮೂಲಕ ದೇಶದ ಗಮನ ಸೆಳೆದಿದ್ದ ತರಕಾರಿ ವ್ಯಾಪಾರಿ ರಾಮೇಶ್ವರ್ ಅವರ ಕಣ್ಣೀರು
- ‘ಕೋಟಿಗಟ್ಟಲೆ ಭಾರತೀಯರ ಸಹಜ ಸ್ವಭಾವವನ್ನು ರಾಮೇಶ್ವರ್ ಅವರಲ್ಲಿ ಕಂಡೆ’ ಎಂದ ಕಾಂಗ್ರೆಸ್ ಮುಖಂಡ
ದೆಹಲಿಯ ಆಝಾದ್ಪುರ್ ಮಂಡಿಯಲ್ಲಿ ಟೊಮೆಟೊ ಖರೀದಿಸಲು ಬಂದು, ಹಣವಿಲ್ಲದೆ ಕಣ್ಣೀರಿಟ್ಟು ದೇಶದ ಗಮನ ಸೆಳೆದಿದ್ದ ತರಕಾರಿ ವ್ಯಾಪಾರಿ ರಾಮೇಶ್ವರ್ ಅವರು ರಾಹುಲ್ ಗಾಂಧಿ ಅವರನ್ನು ಸೋಮವಾರ ಭೇಟಿಯಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ, ಫೋಟೋ ಹಂಚಿಕೊಂಡಿರುವ ರಾಹುಲ್ ಗಾಂಧಿ, ‘ರಾಮೇಶ್ವರ್ ಅವರು ಉತ್ಸಾಹಭರಿತ ವ್ಯಕ್ತಿ. ಅವರಲ್ಲಿ ಕೋಟಿಗಟ್ಟಲೆ ಭಾರತೀಯರ ಸಹಜ ಸ್ವಭಾವವನ್ನು ನಾನು ಕಂಡೆ. ಕಷ್ಟದ ಸಂದರ್ಭದಲ್ಲೂ ನಗುನಗುತ್ತಲೇ ಮುನ್ನಡೆಯುವವರು ನಿಜಕ್ಕೂ ‘ಭಾರತ ಭಾಗ್ಯ ವಿಧಾತರು’ ಎಂದು ಬರೆದುಕೊಂಡಿದ್ದಾರೆ.
ದೆಹಲಿಯ ಗಲ್ಲಿಗಳಲ್ಲಿ ತರಕಾರಿ ಮಾರುತ್ತಿರುವ ಚಿಲ್ಲರೆ ವ್ಯಾಪಾರಿ ರಾಮೇಶ್ವರ್ ಬೆಲೆ ಏರಿಕೆಗೆ ಸಂಬಂಧಿಸಿ ಕಣ್ಣೀರಿಡುತ್ತಾ ಮಾತನಾಡಿದ್ದ ಮನಕಲಕುವ ವಿಡಿಯೋವೊಂದು ಎರಡು ವಾರಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಇಡೀ ದೇಶದ ಗಮನ ಸೆಳೆದಿತ್ತು.
ರಾಹುಲ್ ಗಾಂಧಿ, ಖ್ಯಾತ ಬಾಲಿವುಡ್ ನಟ ವಿಜಯ್ ವರ್ಮಾ ಸೇರಿದಂತೆ ಹಲವರು ಈ ವಿಡಿಯೋ ತುಣುಕನ್ನು ಹಂಚಿಕೊಂಡು ವಿಷಾದ ವ್ಯಕ್ತಪಡಿಸಿದ್ದರು.
ರಾಮೇಶ್ವರ್ ದೆಹಲಿಯ ಆಝಾದ್ಪುರ್ ಮಂಡಿಯಲ್ಲಿ ಟೊಮೆಟೊ ಖರೀದಿಸಲು ಬಂದಿದ್ದರು. ಆದರೆ, ದುಬಾರಿ ಬೆಲೆಯ ಕಾರಣಕ್ಕೆ ಯಾವುದೇ ತರಕಾರಿಯನ್ನು ಖರೀದಿಸಲಾಗದೆ ಖಾಲಿ ಕೈಯಲ್ಲಿ ಮನೆಗೆ ಹಿಂದಿರುಗಿದ್ದರು.
ಇದನ್ನು ಓದಿದ್ದೀರಾ? ಬೆಲೆ ಏರಿಕೆಗೆ ತತ್ತರಿಸಿ ಕಣ್ಣೀರಾದ ದೆಹಲಿಯ ತರಕಾರಿ ವ್ಯಾಪಾರಿ
ಇದನ್ನು ಗಮನಿಸಿದ್ದ ‘ಲಲ್ಲನ್ಟಾಪ್ʼ ಯುಟ್ಯೂಬ್ ಮಾಧ್ಯಮದ ಪ್ರತಿನಿಧಿ ಭಾನು ಕುಮಾರ್ ಜಾ ರಾಮೇಶ್ವರ್ ಅವರನ್ನು ಮಾತನಾಡಿಸಿ ವ್ಯಾಪಾರ-ವಹಿವಾಟಿನ ಬಗ್ಗೆ ವಿಚಾರಿಸುತ್ತಿರುವಾಗ ರಾಮೇಶ್ವರ್ ಕಣ್ಣೀರಾಗಿದ್ದರು.
ರಾಮೇಶ್ವರ್ ಅವರ ನೋವಿನ ಮಾತುಗಳನ್ನು ಕೇಳಿಸಿಕೊಂಡಿದ್ದ ಲಕ್ಷಾಂತರ ಮಂದಿ ಅವರಿಗೆ ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದರು.
ವಿಡಿಯೋ ವೈರಲ್ ಬೆನ್ನಲ್ಲೇ ರಾಹುಲ್ ಗಾಂಧಿಯವರು ದೆಹಲಿಯ ಆಝಾದ್ಪುರ್ ಮಂಡಿಗೆ ಬೆಳ್ಳಂಬೆಳಗ್ಗೆ ಭೇಟಿ ನೀಡಿ, ಅಲ್ಲಿನ ವ್ಯಾಪಾರಸ್ಥರ ಕಷ್ಟಸುಖಗಳನ್ನು ಕಂಡು ಮಾತುಕತೆ ನಡೆಸಿದ್ದರು.
ಈ ನಡುವೆ ನಿನ್ನೆ ಮತ್ತೆ ‘ಲಲ್ಲನ್ಟಾಪ್’ ಪ್ರತಿನಿಧಿ ಭಾನು ಕುಮಾರ್ ಝಾ ರಾಮೇಶ್ವರ್ ಅವರ ಮನೆಯನ್ನು ಹುಡುಕಿ, ಅವರನ್ನು ಮಾತನಾಡಿಸಿದ್ದರು. ಆ ವೇಳೆ ‘ರಾಹುಲ್ ಗಾಂಧಿ ಭೇಟಿ ಸಾಧ್ಯವಾದರೆ ಅದು ನನ್ನ ಸೌಭಾಗ್ಯವಾಗಲಿದೆ’ ಎಂದು ಹೇಳಿಕೆ ನೀಡಿದ್ದರು.