- ಸಮಾಜದ ಮುಖಂಡರೊಂದಿಗೆ ಚರ್ಚಿಸುವೆ ಎಂದ ಬಿಎಸ್‌ವೈ
- ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದ ತೀವ್ರ ವಿರೋಧ
ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದು ಅತ್ಯಂತ ನೋವುಂಟು ಮಾಡಿದೆ. ಈ ಘಟನೆಯ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದೆ. ಪ್ರತಿಭಟನಾಕಾರರು ಯಡಿಯೂರಪ್ಪ ಮನೆಯ ಕಿಟಕಿ ಗಾಜು ಒಡೆದು ಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಸವರಾಜ ಬೊಮ್ಮಾಯಿ, “ಯಡಿಯೂರಪ್ಪ ಅವರು ಎಲ್ಲ ಸಮುದಾಯಗಳನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ತೆಗೆದುಕೊಂಡು ಹೋದವರು. ತಾಂಡಾ ಅಭಿವೃದ್ಧಿ ನಿಗಮವನ್ನು ಪ್ರಾರಂಭ ಮಾಡಿದ್ದು ಅವರು. ಕೆಲವರ ತಪ್ಪು ಕಲ್ಪನೆಯಿಂದ ಮತ್ತು ಕೆಲವರ ಪ್ರಚೋದನೆಯಿಂದ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಾಡಾಳ್ ವಿರೂಪಾಕ್ಷಪ್ಪರನ್ನು ತನಿಖಾಧಿಕಾರಿ ಮುಂದೆ ಹಾಜರುಪಡಿಸಿದ ಲೋಕಾಯುಕ್ತ ಪೊಲೀಸ್
ವಿಪಕ್ಷಗಳ ಪ್ರಚೋದನೆಯಿಂದ ಕಲ್ಲು ತೂರಾಟ ನಡೆದಿರುವುದಾಗಿ ಆರೋಪಿಸಿದ ಬಸವರಾಜ ಬೊಮ್ಮಾಯಿ, “ವಿರೋಧ ಪಕ್ಷಗಳ ಪ್ರಚೋದನೆಯಿಂದಲೇ ಈ ಘಟನೆ ಇದೆ. ನಮ್ಮ ನೀತಿಯಿಂದ ಇದು ಜರುಗಿಲ್ಲ. ಎಲ್ಲರಿಗೂ ನ್ಯಾಯ ಕೊಟ್ಟಿದ್ದೇವೆ. ಇದು ರಾಜಕೀಯ ಪ್ರೇರಿತ ಘಟನೆ” ಎಂದಿದ್ದಾರೆ.
“ಯಾವ ವರದಿಯಲ್ಲಿ ಈ ಬಗ್ಗೆ ಆತಂಕ ಇತ್ತೋ, ಅದನ್ನು ನಾವು ಒಪ್ಪಿಕೊಂಡಿಲ್ಲ. ನಾವು ಕ್ಯಾಬಿನೆಟ್ ಉಪಸಮಿತಿ ವರದಿಯಂತೆ ಶೇ. 4.5ಕ್ಕೆ ಹೆಚ್ಚಳ ಮಾಡಿದ್ದೇವೆ. ಅವರ ಆತಂಕ ದೂರ ಮಾಡಿ ಹೆಚ್ಚಿನ ಮೀಸಲಾತಿ ಕೊಟ್ಟಿದ್ದೇವೆ. ರಾಜಕೀಯ ಪ್ರಚೋದನೆ ಮಾಡುವ ಕೆಲಸ ನಿಲ್ಲಬೇಕು. ಈ ಸಂಬಂಧ ಯಡಿಯೂರಪ್ಪ ಅವರಿಗೆ ಸಂಬಂಧವೇ ಇಲ್ಲ. ಅವರಿಗೆ ಹೀಗೆ ಮಾಡಿದ್ದು ನಿಜಕ್ಕೂ ನೋವು ತರಿಸಿದೆ” ಎಂದು ಹೇಳಿದ್ದಾರೆ.
ತಮ್ಮ ನಿವಾಸದ ಮೇಲಿನ ಕಲ್ಲು ತೂರಾಟದ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, “ಬಂಜಾರ ಸಮುದಾಯದ ಜನರು ಯಾರದೋ ತಪ್ಪು ಗ್ರಹಿಕೆಯಿಂದ ನನ್ನ ಮನೆ ಮೇಲೆ ದಾಳಿ ಮಾಡಿದ್ದಾರೆ. ಘಟನೆಯ ಸಂಬಂಧ ಯಾರನ್ನೂ ಬಂಧಿಸದಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದೇನೆ. ನಾನು ಶಿಕಾರಿಪುರಕ್ಕೆ ಹೋಗಿ ಸಮಾಜದ ಮುಖಂಡರ ಜೊತೆಗೆ ಚರ್ಚಿಸುತ್ತೇನೆ. ಅವರ ಸಮಸ್ಯೆ ಪರಿಹರಿಸಲು ಯತ್ನಿಸುತ್ತೇನೆ” ಎಂದಿದ್ದಾರೆ.
“ಕೆಲವು ತಪ್ಪು ಗ್ರಹಿಕೆಯಿಂದ ನಡೆದಿರುವಂತಿದೆ. ಘಟನೆಯ ಸಂಬಂಧ ಯಾರನ್ನೂ ಬಂಧಿಸದಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದೇನೆ” ಎಂದು ತಿಳಿಸಿದ್ದಾರೆ.