ಸಂಸತ್ ಕಲಾಪಗಳನ್ನು ಹಳೇ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಮುನ್ನ ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ಒಂಟಿ ಕಾರ್ಯಕ್ರಮ ಮಂಗಳವಾರ ನಡೆದಿದೆ. ಕಾರ್ಯಕ್ರಮವು ಉಪ ರಾಷ್ಟ್ರಪತಿ ಜಗದೀಪ್ ಧಂಖರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನೇತೃತ್ವದಲ್ಲಿ ನಡೆದಿದೆ. ಈ ಬೆನ್ನಲ್ಲೇ, ಕಾರ್ಯಕ್ರಮವನ್ನು ಉಪ ರಾಷ್ಟ್ರಪತಿ ನಡೆಸಿದ್ದು ಯಾಕೆ? ರಾಷ್ಟ್ರಪತಿ ಯಾಕೆ ನಡೆಸಲಿಲ್ಲ ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
ಮಂಗಳವಾರ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸುಮಾರು ಒಂದೂವರೆ ಗಂಟೆಗಳ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯದ ಶನಮಾನೋತ್ಸವದ (2047) ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪವನ್ನು ತೆಗೆದುಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸ್ಪೀಕರ್, ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಮುಖ್ಯ ಭಾಷಣ ಮಾಡಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಆಹ್ವಾನಿಸಿರಲಿಲ್ಲ.
ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರಶ್ನಿಸಿರುವ ಟೆಕ್ಸ್‌ಪರ್ಟ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ಉಪಾಧ್ಯಕ್ಷ ರಾಜೇಂದ್ರ ಕುಂಬಟ್, “ಸೆಂಟ್ರಲ್ ಹಾಲ್ ಕಾರ್ಯಕ್ರಮದ ನೇತೃತ್ವವನ್ನು ಉಪರಾಷ್ಟ್ರಪತಿ ಧಂಖರ್, ಪ್ರಧಾನಿ ಮೋದಿ ವಹಿಸಿದ್ದಾರೆ. ಉಪ ರಾಷ್ಟ್ರಪತಿ ಏಕೆ? ರಾಷ್ಟ್ರಪತಿ ಯಾಕೆ ನೇತೃತ್ವ ವಹಿಸಿಲ್ಲ? ಓಹ್! ನನಗೆ ಅರ್ಥವಾದಂತೆ, ಇದು ಸನಾತನ ಧರ್ಮದ ಕಾರಣ ಅಲ್ಲವೇ?” ಎಂದಿದ್ದಾರೆ.
“Vice President Dhankhar, PM Modi to lead Central Hall function today”
— Rajendra Kumbhat (@Enraged_Indian) September 19, 2023
Why Vice President? Why not President?
Oh! I get it. Because of Sanatan Dharma. Right?
ರಾಷ್ಟ್ರಪತಿ ಅವರನ್ನು ಆಹ್ವಾನಿಸದೇ ಇರುವ ಬಗ್ಗೆ ಕಿಡಿಕಾರಿರುವ ರಾಜ್ಯಸಭಾ ಸದಸ್ಯ, ಟಿಎಂಸಿ ನಾಯಕ ಸಾಕೇತ್ ಗೋಗಲೆ, “ಹೊಸ ಸಂಸತ್ತಿನ ಉದ್ಘಾಟನೆಗೆ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳನ್ನು ಆಹ್ವಾನಿಸಿರಲಿಲ್ಲ. ಈಗ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮಕ್ಕೂ ಅವರನ್ನು ಆಹ್ವಾನಿಸಿಲ್ಲ. ‘ಮಹಿಳೆ ಮತ್ತು ಆದಿವಾಸಿ’ಗಳ ವಿಚಾರದಲ್ಲಿ ಟೋಕನಿಸಂ ಮಾಡುತ್ತಿರುವ ಪ್ರಧಾನಿ ಮೋದಿ ನಾಚಿಕೆಯಿಲ್ಲದೆ ರಾಷ್ಟ್ರಪತಿಗಳನ್ನು ನಿರಂತರವಾಗಿ ಹೊರಗಿಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Hon’ble President of India was not invited for the inauguration of new Parliament.
— Saket Gokhale (@SaketGokhale) September 19, 2023
Today, she was not invited for the function in Central Hall.
A woman adivasi President being constantly kept out of Parliamentary ceremonies by PM Modi shamelessly while he does tokenism about… https://t.co/Rnl1GDVHPY
“ಗೌರವಾನ್ವಿತ ರಾಷ್ಟ್ರಪತಿಯನ್ನು ಹೊಸ ಸಂಸತ್ತಿನಿಂದ ಅವರು (ಪ್ರಧಾನಿ ಮೋದಿ) ಎಷ್ಟು ದಿನ ದೂರವಿಡುತ್ತಾರೆ? ತೆಲಂಗಾಣದಲ್ಲಿ ಮಹಿಳಾ ರಾಜ್ಯಪಾಲರನ್ನು ವಿಧಾನಸಭೆಗೆ ಆಹ್ವಾನಿಸದಿದ್ದಾಗ ಇದೇ ಬಿಜೆಪಿ ಭಾರೀ ಸುದ್ದಿ ಮಾಡಿತ್ತು. ಆದರೆ, ಬಿಜೆಪಿ ಈಗೇನು ಮಾಡುತ್ತಿದೆ” ಎಂದು ನೆಟ್ಟಿಗ ಶ್ರೀನಿವಾಸ್ ಕಿಡಿಕಾರಿದ್ದಾರೆ.
ಈ ಹಿಂದೆ ನಡೆದಿದ್ದ ಹೊಸ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮಕ್ಕೂ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಆಹ್ವಾನಿಸಿರಲಿಲ್ಲ. ಭವನದ ಉದ್ಘಾಟನೆಯನ್ನು ರಾಷ್ಟ್ರಪತಿಗಳಿಂದಲೇ ಮಾಡಿಬೇಕೆಂದು ದೇಶಾದ್ಯಂತ ಒತ್ತಡ ಕೇಳಿಬಂದಿತ್ತು. ಆದರೂ, ಭವನವನ್ನು ಸ್ವತಃ ಪ್ರಧಾನಿ ಮೋದಿ ಅವರೇ ಉದ್ಘಾಟಿಸಿದ್ದರು. ಇದೀಗ, ಸೆಂಟ್ರಲ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮಕ್ಕೂ ಅವರನ್ನು ಆಹ್ವಾನಿಸಿರಲಿಲ್ಲ.