ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ಮತ್ತು ಎಸ್ಐಆರ್ ರದ್ದತಿಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಸುತ್ತಿರುವ ಸಿಜೆಪಿ ಪ್ರತಿಭಟನೆಯನ್ನು ಬೆಂಬಲಿಸಿ ಬೀದಿಗಿಳಿದಿದ್ದ ಮೂವರು ಮಾಜಿ ಮುಖ್ಯಮಂತ್ರಿಗಾಳದ ಬಂಗಾಳದ ಮಮತಾ ಬ್ಯಾನರ್ಜಿ, ಕೇರಳದ ಪಿಣರಾಯಿ ವಿಜಯನ್ ಹಾಗೂ ದೆಹಲಿಯ ಅರವಿಂದ ಕೇಜ್ರಿವಾಲ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಸೌತ್ ಅವೆನ್ಯೂಯಿಂದ ಜಂತರ್ ಮಂತರ್ ಎಡೆಗೆ ಹೊರಟಿದ್ದ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಟಿಎಂಸಿಯ ಡೆರೆಕ್ ಓಬ್ರಿಯಾನ್, ಡೋಲಾ ಸೇನ್ ಹಾಗೂ ಪಕ್ಷದ ಇತರ ಸದಸ್ಯರನ್ನು ಮೆರವಣಿಗೆ ಆರಂಭವಾಗುತ್ತಿದ್ದಂತೆಯೇ ಪೊಲೀಸರು ಬಂಧಿಸಿದ್ದಾರೆ.
ಅಂತೆಯೇ, ದೆಹಲಿಯಲ್ಲಿರುವ ಕೇರಳ ಭವನದ ಬಳಿಯಿಂದ ಜಂತರ್ ಮಂತರ್ಗೆ ಹೊರಟಿದ್ದ ಕೇರಳ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಎಂನ ಹಲವು ನಾಯಕರನ್ನೂ ಪೊಲೀಸರು ಬಂಧಿಸಿ, ಬಂಧನ ಕೇಂದ್ರಕ್ಕೆ ಹೊತ್ತೋಯ್ದಿದ್ದಾರೆ.
ಪೊಲೀಸರ ಈ ದೌರ್ಜನ್ಯನವನ್ನು ಸಿಪಿಎಂ ನಾಯಕರು ತೀವ್ರವಾಗಿ ಖಂಡಿಸಿದ್ದು, “ಕೇಂದ್ರದ ಎನ್ಡಿಎ ಸರ್ಕಾರವು ರಾಷ್ಟ್ರ ರಾಜಧಾನಿಯನ್ನು ‘ಮುಕ್ತ ಬಂದೀಖಾನೆ’ಯನ್ನಾಗಿ ಪರಿವರ್ತಿಸಿದೆ. ಸಶಸ್ತ್ರ ಪಡೆಗಳು ಮತ್ತು ಅರೆಸೇನಾ ಪಡೆಯನ್ನು ನಿಯೋಜಿಸಿ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ದೆಹಲಿಯ ಲೊಧಿ ಎಸ್ಟೇಟ್ನಲ್ಲಿರುವ ತಮ್ಮ ನಿವಾಸದಿಂದ ಜಂತರ್ ಮಂತರ್ಗೆ ಮೆರವಣಿಗೆ ಹೊರಟಿದ್ದ ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ, ಎಎಪಿ ಕಾರ್ಯಕರ್ತರು ಮತ್ತು ನಾಯಕರು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯುಕ್ತರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಕೇಜ್ರಿವಾಲ್ ಮಾತ್ರವಲ್ಲದೆ, ಎಎಪಿ ನಾಯಕರಾದ ಸಂಜಯ್ ಸಿಂಗ್, ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಹಾಗೂ ಚಂಡೀಘಢದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ಪ್ರಮುಖ ನಾಯಕರು ಮತ್ತು ಕಾರ್ಯಕರ್ತರನ್ನು ದೆಹಲಿ ಹಾಗೂ ಇತರೆಡೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.



