ದೆಹಲಿಯ ವಿವಿಧ ಪ್ರದೇಶಗಳಿಂದ CJP ನೂರಾರು ಕಾರ್ಯಕರ್ತರು ಸೇರಿದಂತೆ ಹಲವು ನಾಗರಿಕರು ಮತ್ತು ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು, ಮಾಡೆಲ್ ಟೌನ್‌ನ ಛತ್ರಸಾಲ್ ಕ್ರೀಡಾಂಗಣಕ್ಕೆ ಕರೆದೊಯ್ದಿದ್ದಾರೆ. ನೂರಾರು ಮಂದಿ ಪ್ರತಿಭಟನಾಕಾರರನ್ನು ಬಲವಂತವಾಗಿ ಕ್ರೀಡಾಂಗಣದೊಳಗೆ ದಬ್ಬಲಾಗಿತ್ತು ಎಂದು ಅಲ್ಲಿನ ಸ್ಥಳೀಯರು ತಿಳಿಸಿರುವುದಾಗಿ ವರದಿಯಾಗಿದೆ.
ವಶಕ್ಕೆ ಪಡೆದವರನ್ನು ಹೊತ್ತೊಯ್ದ ಬಸ್‌ಗಳನ್ನು ನೇರವಾಗಿ ಕ್ರೀಡಾಂಗಣದ ಆವರಣದೊಳಗೆ ಕರೆದೊಯ್ಯಲಾಗಿದೆ. ಅಲ್ಲಿಗೆ ಕರೆತಂದು ಹಲವು ಗಂಟೆಗಳು ಕಳೆದರೂ ಯಾವುದೇ ಅಧಿಕೃತ ಆಡಳಿತಾತ್ಮಕ ಪ್ರಕ್ರಿಯೆ ಆರಂಭವಾಗಿರಲಿಲ್ಲ. ಹೀಗಾಗಿ ಅನೇಕರು ಕ್ರೀಡಾಂಗಣದ ಮೈದಾನದಲ್ಲೇ ಕಾಯುವಂತಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ವಶಕ್ಕೆ ಒಳಗಾದವರಲ್ಲಿ ಒಬ್ಬರಾದ ವಿಜಯ್ ಮಲ್ಲಂಗಿ, “ವ್ಯವಸ್ಥೆಯು ನಮ್ಮ ಧ್ವನಿಯನ್ನು ಅಡಗಿಸಲು ಬಯಸುತ್ತಿರುವುದರಿಂದ ನಾವೆಲ್ಲರೂ ಇಲ್ಲಿದ್ದೇವೆ. ಆದರೆ ಸಾವಿರಾರು ಜನರನ್ನು ಕ್ರೀಡಾಂಗಣದಲ್ಲಿ ಇರಿಸುವುದರಿಂದ ನಮ್ಮ ಹೋರಾಟದ ಸಂಕಲ್ಪವನ್ನು ಕುಗ್ಗಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ದೆಹಲಿಯಲ್ಲಿ ಮೂವರು ಮಾಜಿ ಸಿಎಂ – ಮಮತಾ, ಪಿಣರಾಯಿ, ಕೇಜ್ರಿವಾಲ್ – ಬಂಧನ
ಕ್ರೀಡಾಂಗಣದೊಳಗೆ ಭದ್ರತಾ ಸಿಬ್ಬಂದಿ ಮುಖ್ಯವಾಗಿ ಜನರನ್ನು ಸ್ಥಳಾಂತರಿಸುವ ಮತ್ತು ಕಾವಲು ಕಾಯುವ ಕಾರ್ಯದಲ್ಲಿ ತೊಡಗಿದ್ದರು ಎಂದು ಅಲ್ಲಿದ್ದವರು ತಿಳಿಸಿದ್ದಾರೆ. ಆವರಣದೊಳಗೆ ಜನರು ಸಂಚರಿಸುವುದು, ಓಡುವುದು ಅಥವಾ ಗುಂಪುಗಳಾಗಿ ಒಟ್ಟುಗೂಡುವುದನ್ನು ತಡೆಯಲು ಬಲಪ್ರಯೋಗ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಆದರೆ, ದೈಹಿಕವಾಗಿ ಹಲ್ಲೆ ನಡೆಸಿದ ಘಟನೆಗಳು ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಈ ಎಲ್ಲ ನಿರ್ಬಂಧಗಳ ನಡುವೆಯೂ ಕ್ರೀಡಾಂಗಣದೊಳಗೆ ಕಾಲಕಾಲಕ್ಕೆ ಘೋಷಣೆಗಳು ಮೊಳಗುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.




