ದೆಹಲಿಯಲ್ಲಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ವಿವಿಧ ಎಡ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
ಎಐಡಿಎಸ್‌ಒ, ಕೆವಿಎಸ್, ಎಐಎಸ್‌ಎಫ್, ಎಸ್‌ಎಫ್‌ಐ, ಎಐಎಸ್‌ಎ ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೆವಿಎಸ್ ರಾಜ್ಯಾಧ್ಯಕ್ಷ ಸರೋವರ್ ಬೆಂಕಿಕೆರೆ, “ವಿದ್ಯಾರ್ಥಿ ನಾಯಕರನ್ನು ಪೊಲೀಸರು ಬಂಧಿಸಿರುವುದೇ ಯುವಜನರ ಹೋರಾಟದ ಯಶಸ್ಸಿನ ಸಂಕೇತವಾಗಿದೆ. ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆಗಳಲ್ಲಿ ಮತ ಚಲಾಯಿಸುವುದಕ್ಕೆ ಸೀಮಿತವಾದ ವ್ಯವಸ್ಥೆಯಲ್ಲ. ಜನರು ಪ್ರತಿದಿನ ಸಾಮಾಜಿಕ ಮತ್ತು ರಾಜಕೀಯ ಪ್ರಕ್ರಿಯೆಗಳಲ್ಲಿ ಭಾಗವಹಿಸುವುದು, ಆಡಳಿತದ ಕ್ರಮಗಳನ್ನು ಪ್ರಶ್ನಿಸುವುದು ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಪ್ರಜಾಪ್ರಭುತ್ವದ ಪ್ರಮುಖ ಭಾಗಗಳಾಗಿವೆ” ಎಂದರು.
ಪ್ರತಿಭಟನೆ ನಡೆಸುವುದು, ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಸಂಘಟಿತವಾಗಿ ಹೋರಾಡುವುದು ಪ್ರಜಾಪ್ರಭುತ್ವ ನೀಡಿರುವ ಹಕ್ಕುಗಳಾಗಿವೆ. ಪೊಲೀಸ್ ಕ್ರಮಗಳ ಮೂಲಕ ಇಂತಹ ಹೋರಾಟಗಳನ್ನು ಹತ್ತಿಕ್ಕಲು ಪ್ರಯತ್ನಿಸಿದರೂ ಜನರ ಪ್ರಶ್ನೆಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಷ್ಟೇ ಬಲಿಷ್ಠರಾಗಿದ್ದರೂ ತಮ್ಮ ಹೋರಾಟವನ್ನು ಮುಂದುವರಿಸಲು ಹಿಂಜರಿಯುವುದಿಲ್ಲ. ಹೋರಾಟಗಳನ್ನು ಹತ್ತಿಕ್ಕುವ ಯಾವುದೇ ಸರ್ಕಾರ ದೀರ್ಘಕಾಲ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಸರೋವರ್ ಹೇಳಿದರು.
ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ್ ಬಿ.ಜೆ. ಮಾತನಾಡಿ, ಭಗತ್ ಸಿಂಗ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಂತಹ ಹೋರಾಟಗಾರರು ಜನಿಸಿದ ದೇಶದಲ್ಲಿ ಅನ್ಯಾಯವನ್ನು ಸಹಿಸುವುದಿಲ್ಲ ಎಂಬ ಸಂದೇಶ ಸಾರಲು ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದಾರೆ. ಸರ್ಕಾರ ಮತ್ತು ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವ ಮೂಲಕ ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಸುವ ಸಂಕಲ್ಪವನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಮಾತನಾಡಿದ ಶಿವಸುಂದರ್, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆ ಅಥವಾ ಎಸ್‌ಐಆರ್ ಪ್ರಕ್ರಿಯೆ ರದ್ದತಿಯ ಬೇಡಿಕೆ ಈಡೇರಿದ ಮಾತ್ರಕ್ಕೆ ಹೋರಾಟ ನಿಲ್ಲಬಾರದು. ಸರ್ಕಾರ ಸಂವಿಧಾನವನ್ನು ದುರ್ಬಳಕೆ ಮಾಡಿಕೊಂಡು ಫ್ಯಾಸಿಸ್ಟ್ ಧೋರಣೆಯನ್ನು ಹೇರುತ್ತಿದೆ. ಫ್ಯಾಸಿಸಂ ಎಂದರೆ ಕೇವಲ ಆರ್‌ಎಸ್‌ಎಸ್ ಮತ್ತು ಬಿಜೆಪಿ ಮಾತ್ರವಲ್ಲ; ಅದು ಆಳುವ ವರ್ಗದ ಸಿದ್ಧಾಂತದ ಪ್ರಾಬಲ್ಯವೂ ಹೌದು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಯುವಶಕ್ತಿಯಿಂದ ಶೀಘ್ರದಲ್ಲೇ ದೊಡ್ಡ ಬದಲಾವಣೆಯಾಗಲಿದೆ: ಅಂಬೇಡ್ಕರ್ ಮರಿಮೊಮ್ಮಗ ಅಮನ್
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ದಮನಕಾರಿ ಎಂದು ಟೀಕಿಸಿದ ಅವರು, ಇಂತಹ ವ್ಯವಸ್ಥೆಗಳ ವಿರುದ್ಧ ಕೇವಲ ಚುನಾವಣೆಗಳ ಮೂಲಕ ಹೋರಾಡಿ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಬಸವರಾಜು, ಎಐಎಸ್‌ಎಫ್ ರಾಜ್ಯಾಧ್ಯಕ್ಷೆ ವೀಣಾ ನಾಯಕ್, ಎಐಡಿಎಸ್‌ಒ ರಾಜ್ಯಾಧ್ಯಕ್ಷೆ ಅಶ್ವಿನಿ ಕೆ.ಎಸ್., ಕೆವಿಎಸ್‌ನ ದುರ್ಗೇಶ್, ಎಐಎಸ್‌ಎಯ ಗಂಗಾ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.





