ನಿದ್ರೆಯಲ್ಲೂ ಮಿದುಳಿಗೆ ಮಸಾಜ್‌! ಮಾತ್ರೆಯಿಲ್ಲದೆ ಗಾಢ ನಿದ್ರೆ ತರಬಲ್ಲದೇ ಹೊಸ ತಂತ್ರಜ್ಞಾನ?

Date:

ಒತ್ತಡದ ಬದುಕಿನಲ್ಲಿ ನೆಮ್ಮದಿಯ ನಿದ್ರೆ ಎನ್ನುವುದೇ ಹಲವರ ಕನಸು. ನಿದ್ರೆಗಾಗಿ ಮಾತ್ರೆಗಳ ಮೊರೆ ಹೋಗುವವರ ಸಂಖ್ಯೆಯೂ ಕಡಿಮೆಯಿಲ್ಲ. ಇಂತಹವರ ಸಮಸ್ಯೆಗೆ ಪರ್ಯಾಯವೊಂದು ಸಿಕ್ಕರೆ ಹೇಗಿರಬಹುದು? ಮೆದುಳಿಗೆ ಅಲ್ಟ್ರಾಸೌಂಡ್‌ ತರಂಗಗಳ ಮೂಲಕ ಪ್ರಚೋದನೆ ನೀಡಿ ನಿದ್ರೆಯ ಗುಣಮಟ್ಟ ಸುಧಾರಿಸುವ ಹೊಸ ತಂತ್ರಜ್ಞಾನವನ್ನು ವಿಜ್ಞಾನಿಗಳು ಪರೀಕ್ಷಿಸುತ್ತಿದ್ದಾರೆ. ತಲೆಗೆ ಅಂಟಿಸಿಕೊಳ್ಳುವ ಪುಟ್ಟ ಪ್ಯಾಚ್‌ ನಿದ್ರಾಹೀನತೆಯ ಸಮಸ್ಯೆಗೆ ಹೊಸ ದಾರಿ ತೋರಿಸಬಹುದು ಎನ್ನಲಾಗುತ್ತಿದೆ. ಮಾತ್ರೆಯಿಲ್ಲದೆ ನಿದ್ರೆ ತರುವ ಈ ಪ್ರಯತ್ನ ಕುತೂಹಲ ಮೂಡಿಸಿದೆ.

- Advertisement -

ನಿದ್ರಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಜ್ಞಾನಿಗಳು ಈಗ ಹೊಸ ತಂತ್ರಜ್ಞಾನದ ಪ್ರಯೋಗಕ್ಕೆ ಮುಂದಾಗಿದ್ದಾರೆ. ಮೆದುಳಿನ ಚಟುವಟಿಕೆಯನ್ನ ಪ್ರಚೋದಿಸುವ ಮೂಲಕ ನಿದ್ರೆಯ ಗುಣಮಟ್ಟವನ್ನು ಸುಧಾರಿಸುವ ಪ್ರಯತ್ನದ ಭಾಗವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ತಂತ್ರಜ್ಞಾನವೇ ‘NEUSLeeP’. ಇದು ತಲೆಯ ಮೇಲೆ ಅಳವಡಿಸಿಕೊಳ್ಳಬಹುದಾದ ಮೃದುವಾದ, ಧರಿಸಬಹುದಾದ ಪ್ಯಾಚ್‌ ಆಗಿದ್ದು, ಅಲ್ಟ್ರಾಸೌಂಡ್‌ ತರಂಗಗಳ ಸಹಾಯದಿಂದ ಮೆದುಳಿನ ಆಳದಲ್ಲಿರುವ ನಿರ್ದಿಷ್ಟ ಭಾಗಗಳಿಗೆ ಪ್ರಚೋದನೆ ನೀಡುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು ವರದಿ ಮಾಡುವ ಜವಾಬ್ದಾರಿ- ಇವೆರಡನ್ನೂ ನಿಭಾಯಿಸಬೇಕಾದಾಗ ಮಾಡಿಕೊಳ್ಳುವ ಲೆಕ್ಕಾಚಾರಗಳ ಬಗೆಗಿನ ಒಂದು ಸ್ವಾನುಭವ. ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಹೆಣ್ಣುಮಕ್ಕಳ ಮೇಲೆ...

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಇಂದಿನ ವೇಗದ ಬದುಕಿನಲ್ಲಿ ನಿದ್ರಾಹೀನತೆ ಅನೇಕರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ಕೆಲಸದ ಒತ್ತಡ, ಮಾನಸಿಕ ಉದ್ವಿಗ್ನತೆ, ಮೊಬೈಲ್‌ ಬಳಕೆ, ಅನಿಯಮಿತ ಜೀವನಶೈಲಿ ಸೇರಿ ಹಲವು ಕಾರಣಗಳಿಂದ ರಾತ್ರಿ ನಿದ್ರೆ ಬಾರದೆ ಒದ್ದಾಡುವವರಿದ್ದಾರೆ. ಕೆಲವರು ನಿದ್ರೆ ಮಾತ್ರೆಗಳ ಮೊರೆ ಹೋದರೆ, ಇನ್ನು ಕೆಲವರು ವಿವಿಧ ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ. ಆದರೆ ಮಾತ್ರೆಗಳ ಸಹಾಯವಿಲ್ಲದೆ, ಮೆದುಳಿನ ಚಟುವಟಿಕೆಯನ್ನು ಪ್ರಚೋದಿಸುವ ಮೂಲಕ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಾಧ್ಯವಾದರೆ ಅದೊಂದು ಅದ್ಭುತವೇ ಸರಿ.

ಸಾಮಾನ್ಯವಾಗಿ ಅಲ್ಟ್ರಾಸೌಂಡ್‌ ತಂತ್ರಜ್ಞಾನವನ್ನು ಆಸ್ಪತ್ರೆಗಳಲ್ಲಿ ಸ್ಕ್ಯಾನ್‌ ಮಾಡಲು, ದೇಹದ ಒಳಗಿನ ಅಂಗಗಳ ಸ್ಥಿತಿಯನ್ನು ತಿಳಿಯಲು ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಬಳಸಲಾಗುತ್ತದೆ. ಆದರೆ, ಈಗ ಇದೇ ತಂತ್ರಜ್ಞಾನವನ್ನು ಮೆದುಳಿನ ಚಟುವಟಿಕೆಯನ್ನು ಅರ್ಥಮಾಡಿಕೊಳ್ಳಲು ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುವ ಸಾಧ್ಯತೆಯನ್ನು ಪರಿಶೀಲಿಸಲು ಬಳಸಲಾಗುತ್ತಿದೆ. ಇಲ್ಲಿ ಅಲ್ಟ್ರಾಸೌಂಡ್‌ ತರಂಗಗಳು ದೇಹದ ಒಳಗಿನ ಚಿತ್ರವನ್ನು ತೋರಿಸುವುದರ ಜೊತೆಗೆ ಅವುಗಳನ್ನು ಮೆದುಳಿನ ನಿರ್ದಿಷ್ಟ ಭಾಗಗಳಿಗೆ ತಲುಪಿಸಿ, ಅಲ್ಲಿನ ನರಕೋಶಗಳ ಚಟುವಟಿಕೆಯ ಮೇಲೆ ಪರಿಣಾಮ ಬೀರಬಹುದೇ ಎಂಬುದನ್ನು ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ.

ನಮ್ಮ ಮೆದುಳಿನಲ್ಲಿ ನಿದ್ರೆ ಯಾವಾಗ ಆರಂಭವಾಗಬೇಕು, ಅದು ಹೇಗೆ ಮುಂದುವರಿಯಬೇಕು ಮತ್ತು ನಿದ್ರೆಯ ವಿವಿಧ ಹಂತಗಳು ಹೇಗೆ ಬದಲಾಗಬೇಕು ಎಂಬುದನ್ನು ನಿಯಂತ್ರಿಸುವ ಹಲವು ಭಾಗಗಳಿವೆ. ಇವು ಒಂದಕ್ಕೊಂದು ಸಂಪರ್ಕ ಹೊಂದಿದ್ದು, ದೇಹಕ್ಕೆ ವಿಶ್ರಾಂತಿ ದೊರೆಯುವಂತೆ ಕೆಲಸ ಮಾಡುತ್ತವೆ. ಈ ವ್ಯವಸ್ಥೆಯಲ್ಲಿನ ಚಟುವಟಿಕೆಯನ್ನು ಅರ್ಥಮಾಡಿಕೊಂಡು, ಅಗತ್ಯವಿರುವ ಮಿದುಳಿನ ಭಾಗಕ್ಕೆ ಕೇಂದ್ರೀಕೃತ ಅಲ್ಟ್ರಾಸೌಂಡ್‌ ತರಂಗಗಳನ್ನು ಕಳುಹಿಸಿದರೆ ನಿದ್ರೆಯ ಮಾದರಿಯಲ್ಲಿ ಬದಲಾವಣೆ ತರಲು ಸಾಧ್ಯವಾಗಬಹುದೇ ಎಂಬುದನ್ನು ಕಂಡುಕೊಳ್ಳುವುದು ಸಂಶೋಧನೆಯ ಮುಖ್ಯ ಉದ್ದೇಶ.

ಸರಳವಾಗಿ ಹೇಳುವುದಾದರೆ, ನಿದ್ರೆ ಬರಲು ಮಾತ್ರೆ ಸೇವಿಸುವ ಬದಲು, ನಿದ್ರೆಯ ಪ್ರಕ್ರಿಯೆಯಲ್ಲಿ ಪಾತ್ರವಹಿಸುವ ಮಿದುಳಿನ ಭಾಗಕ್ಕೆ ಹೊರಗಿನಿಂದ ಸಣ್ಣ ಪ್ರಮಾಣದ ಪ್ರಚೋದನೆ ನೀಡುವ ವಿಧಾನವನ್ನು ವಿಜ್ಞಾನಿಗಳು ಪರೀಕ್ಷಿಸುತ್ತಿದ್ದಾರೆ. ಈ ಪ್ರಚೋದನೆಯಿಂದ ಮೆದುಳಿನ ಚಟುವಟಿಕೆ ಬದಲಾಗುತ್ತದೆಯೇ, ನಿದ್ರೆಯ ಪ್ರಮುಖ ಹಂತಗಳು ಉತ್ತಮಗೊಳ್ಳುತ್ತವೆಯೇ ಎಂಬುದನ್ನು ದಾಖಲಿಸಿ ಪರಿಶೀಲಿಸಲಾಗುತ್ತಿದೆ. ಆದರೆ, ಅಲ್ಟ್ರಾಸೌಂಡ್‌ ತರಂಗಗಳನ್ನು ಕಳುಹಿಸಿದ ತಕ್ಷಣ ನಿದ್ರೆ ಬರುತ್ತದೆ ಎಂದರ್ಥವಲ್ಲ. ಈ ವಿಧಾನವು ನಿದ್ರೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ, ಯಾರಿಗೆ ಹೆಚ್ಚು ಪ್ರಯೋಜನವಾಗಬಹುದು ಮತ್ತು ದೀರ್ಘಕಾಲ ಬಳಸಿದರೆ ಸುರಕ್ಷಿತವೇ ಎಂಬುದನ್ನು ತಿಳಿಯಲು ಇನ್ನಷ್ಟು ಸಂಶೋಧನೆ ಅಗತ್ಯವಿದೆ.

REM ನಿದ್ರೆ ಎಂದರೇನು? ಅದು ಏಕೆ ಮುಖ್ಯ?

ನಿದ್ರೆ ಎಂದರೆ ದಿನವಿಡೀ ಕೆಲಸ ಮಾಡಿ ದಣಿದ ದೇಹಕ್ಕೆ ವಿಶ್ರಾಂತಿ ನೀಡುವುದಷ್ಟೇ ಅಲ್ಲ, ನಾವು ನಿದ್ರಿಸುತ್ತಿರುವಾಗಲೂ ಮೆದುಳು ಹಲವು ಮಹತ್ವದ ಕೆಲಸಗಳನ್ನು ಮಾಡುತ್ತಿರುತ್ತದೆ. ದಿನವಿಡೀ ನೋಡಿದ, ಕೇಳಿದ ಮತ್ತು ಕಲಿತ ವಿಷಯಗಳನ್ನು ನೆನಪಿನಲ್ಲಿ ಉಳಿಸಿಕೊಳ್ಳುವುದು, ಅನಗತ್ಯ ಮಾಹಿತಿಯನ್ನು ಬೇರ್ಪಡಿಸುವುದು, ಅನುಭವಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಭಾವನೆಗಳನ್ನು ನಿಯಂತ್ರಿಸಲು ನೆರವಾಗುವುದು ಇವೆಲ್ಲವೂ ನಿದ್ರೆಯ ಸಮಯದಲ್ಲಿ ನಡೆಯುವ ಪ್ರಕ್ರಿಯೆಗಳ ಭಾಗಗಳು. ಹೀಗಾಗಿ ಉತ್ತಮ ನಿದ್ರೆ ದೇಹದ ಆರೋಗ್ಯಕ್ಕೆ ಮಾತ್ರವಲ್ಲ, ಮೆದುಳಿನ ಕಾರ್ಯಕ್ಷಮತೆಗೂ ಅತ್ಯಗತ್ಯ.

ನಿದ್ರೆಯಲ್ಲಿ ಒಂದೇ ರೀತಿಯ ಸ್ಥಿತಿ ಇರುವುದಿಲ್ಲ. ನಾವು ನಿದ್ರಿಸಿದ ಬಳಿಕ ಮೆದುಳು ವಿವಿಧ ಹಂತಗಳ ಮೂಲಕ ಸಾಗುತ್ತದೆ. ಇವುಗಳಲ್ಲಿ ಒಂದು ಪ್ರಮುಖ ಹಂತವೇ ‘REM ನಿದ್ರೆ’. REM ಎಂಬುದು ‘ರ್ಯಾಪಿಡ್ ಐ ಮೂವ್‌ಮೆಂಟ್‌’ (Rapid Eye Movement) ಎಂಬ ಇಂಗ್ಲಿಷ್‌ ಪದಗಳ ಸಂಕ್ಷಿಪ್ತ ರೂಪ. ಕನ್ನಡದಲ್ಲಿ ಇದನ್ನು ‘ಕ್ಷಿಪ್ರ ನೇತ್ರ ಚಲನೆಯ ನಿದ್ರೆ’ ಎಂದು ಕರೆಯಬಹುದು. ಈ ಹಂತದಲ್ಲಿ ಕಣ್ಣುಗಳು ಮುಚ್ಚಿದ ಕಣ್ಣುರೆಪ್ಪೆಗಳ ಒಳಗೆ ವೇಗವಾಗಿ ಚಲಿಸುತ್ತವೆ. ಮೆದುಳಿನ ಚಟುವಟಿಕೆಯೂ ಹೆಚ್ಚು ಸಕ್ರಿಯವಾಗಿರುತ್ತದೆ. ಈ ಸಮಯದಲ್ಲಿ ಅನೇಕರು ಸ್ಪಷ್ಟವಾದ ಮತ್ತು ಕಥೆಯ ರೂಪದಲ್ಲಿರುವ ಕನಸುಗಳನ್ನು ಕಾಣಬಹುದು.

ನೀವು ಹಗಲಿನಲ್ಲಿ ಹೊಸ ವಿಷಯವೊಂದನ್ನು ಕಲಿತಿದ್ದೀರಿ ಅಥವಾ ಪರೀಕ್ಷೆಗೆ ಓದಿದ್ದೀರಿ ಎಂದುಕೊಳ್ಳಿ. ರಾತ್ರಿ ಉತ್ತಮ ನಿದ್ರೆ ಪಡೆದಾಗ, ಕಲಿತ ಮಾಹಿತಿಯನ್ನು ಮೆದುಳು ಸರಿಯಾಗಿ ಸಂಸ್ಕರಿಸಿ ನೆನಪಿನಲ್ಲಿ ಉಳಿಸಿಕೊಳ್ಳಲು ನೆರವಾಗುತ್ತದೆ. ನಿದ್ರೆಯ ವಿವಿಧ ಹಂತಗಳು ಈ ಪ್ರಕ್ರಿಯೆಯಲ್ಲಿ ಪಾತ್ರವಹಿಸುತ್ತವೆ. REM ನಿದ್ರೆಯೂ ನೆನಪುಗಳ ಸಂಸ್ಕರಣೆ ಮತ್ತು ಭಾವನಾತ್ಮಕ ಅನುಭವಗಳನ್ನು ನಿಭಾಯಿಸುವುದರೊಂದಿಗೆ ಸಂಬಂಧ ಹೊಂದಿದೆ ಎಂದು ಸಂಶೋಧನೆಗಳು ಸೂಚಿಸಿವೆ. ಅದೇ ರೀತಿ, ದಿನವಿಡೀ ಎದುರಾದ ಸಂತೋಷ, ದುಃಖ, ಆತಂಕ ಅಥವಾ ಒತ್ತಡದಂತಹ ಅನುಭವಗಳನ್ನು ಮೆದುಳು ಹೇಗೆ ಸಂಸ್ಕರಿಸುತ್ತದೆ ಎಂಬುದರಲ್ಲೂ ನಿದ್ರೆಯ ಪಾತ್ರವಿದೆ. ಸಾಕಷ್ಟು ನಿದ್ರೆ ಸಿಗದಿದ್ದರೆ ಮರುದಿನ ದಣಿವು, ಏಕಾಗ್ರತೆಯ ಕೊರತೆ, ಕಿರಿಕಿರಿ ಮತ್ತು ಮನಸ್ಥಿತಿಯ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಆದರೆ ಇವೆಲ್ಲಕ್ಕೂ REM ನಿದ್ರೆಯ ಕೊರತೆಯೊಂದೇ ಕಾರಣವಲ್ಲ, ಒಟ್ಟು ನಿದ್ರೆಯ ಪ್ರಮಾಣ ಮತ್ತು ಅದರ ಗುಣಮಟ್ಟವೂ ಮುಖ್ಯ.

ಅಧ್ಯಯನದಲ್ಲಿ ಕಂಡುಬಂದಿದ್ದೇನು?

ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ NEUSLeeP ಪ್ಯಾಚ್‌ ಅನ್ನು ಆರೋಗ್ಯವಂತರು ಹಾಗೂ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದ ಕೆಲವು ಜನರ ಮೇಲೆ ಪರೀಕ್ಷಿಸಿದ್ದಾರೆ. ಈ ಪ್ಯಾಚ್‌ ಬಳಕೆಯಿಂದ ನಿದ್ರೆಯ ಗುಣಮಟ್ಟದಲ್ಲಿ ಕೆಲವು ಬದಲಾವಣೆಗಳು ಕಂಡುಬಂದಿವೆ. ವಿಶೇಷವಾಗಿ, ಕನಸುಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಮತ್ತು ಮೆದುಳು ಹೆಚ್ಚು ಸಕ್ರಿಯವಾಗಿರುವ ನಿದ್ರೆಯ ಹಂತವಾದ REM ನಿದ್ರೆ ಆರಂಭವಾಗುವ ಸಮಯದಲ್ಲಿ ಬದಲಾವಣೆ ಕಂಡುಬಂದಿದೆ. NEUSLeeP ಪ್ಯಾಚ್‌ ಬಳಸಿದವರಲ್ಲಿ REM ನಿದ್ರೆ ಸರಾಸರಿ 40 ನಿಮಿಷ ಮುಂಚಿತವಾಗಿ ಆರಂಭವಾಗಿದೆ. ಅಲ್ಲದೆ, ಈ ಹಂತದಲ್ಲಿ ಅವರು ಕಳೆಯುವ ಸಮಯವೂ ಸರಾಸರಿ 16 ನಿಮಿಷ ಹೆಚ್ಚಾಗಿದೆ ಎಂದು ವರದಿಯಾಗಿದೆ.

ಸಂಶೋಧಕರು REM ನಿದ್ರೆಯ ಸಮಯವನ್ನು ಮಾತ್ರವಲ್ಲದೆ, ನಿದ್ರೆಯ ವೇಳೆ ಹೃದಯ ಬಡಿತದಲ್ಲಿ ಆಗುವ ಬದಲಾವಣೆಗಳನ್ನೂ ಗಮನಿಸಿದ್ದಾರೆ. ಜೊತೆಗೆ, ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ನಿಯಂತ್ರಿಸುವುದಕ್ಕೆ ಸಂಬಂಧಿಸಿದ ಮೆದುಳಿನ ಚಟುವಟಿಕೆಯನ್ನೂ ಪರಿಶೀಲಿಸಿದ್ದಾರೆ. ಆದರೆ, ಈ ಅಧ್ಯಯನದಲ್ಲಿ ಭಾಗವಹಿಸಿದವರ ಸಂಖ್ಯೆ ಕಡಿಮೆಯಿರುವುದರಿಂದ ಫಲಿತಾಂಶಗಳನ್ನು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳಬೇಕಾಗಿದೆ. ಪ್ಯಾಚ್‌ ಎಲ್ಲರಲ್ಲೂ ಇದೇ ರೀತಿಯ ಪರಿಣಾಮ ಬೀರುತ್ತದೆ ಎಂದು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ವಯಸ್ಸು, ಆರೋಗ್ಯದ ಸ್ಥಿತಿ ಮತ್ತು ನಿದ್ರೆಯ ಸಮಸ್ಯೆಗಳ ಸ್ವರೂಪದಂತಹ ಅಂಶಗಳು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂದಿದೆ ವರದಿ.

ಒತ್ತಡ ಕಡಿಮೆ ಮಾಡಲು NEUSLeeP ಸಹಾಯ ಮಾಡಬಹುದೇ?

ನಿದ್ರೆ ಮತ್ತು ಮಾನಸಿಕ ಆರೋಗ್ಯದ ನಡುವೆ ನಿಕಟ ಸಂಬಂಧವಿದೆ. ಪ್ರತಿದಿನ ಸರಿಯಾಗಿ ನಿದ್ರೆ ಮಾಡದಿದ್ದರೆ ದೇಹಕ್ಕೆ ದಣಿವು ಉಂಟಾಗುವುದಷ್ಟೇ ಅಲ್ಲ, ಗಮನ ಕೇಂದ್ರೀಕರಿಸುವ ಸಾಮರ್ಥ್ಯ, ನೆನಪಿನ ಶಕ್ತಿ, ಮನಸ್ಥಿತಿ ಮತ್ತು ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯದ ಮೇಲೂ ಪರಿಣಾಮ ಬೀರಬಹುದು. ನಿದ್ರೆಯ ಕೊರತೆಯಿಂದ ಕೆಲವರಲ್ಲಿ ಕಿರಿಕಿರಿ, ಆತಂಕ ಮತ್ತು ಒತ್ತಡವೂ ಹೆಚ್ಚಾಗಬಹುದು. ಈ ಹಿನ್ನೆಲೆಯಲ್ಲಿ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ನೆರವಾಗುವ ತಂತ್ರಜ್ಞಾನವು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದೇ ಎಂಬ ಪ್ರಶ್ನೆ ಮೂಡುತ್ತದೆ.

ಆದರೆ, ನಿದ್ರೆಯಲ್ಲಿ ಸುಧಾರಣೆ ಕಂಡುಬಂದಿದೆ ಎಂಬ ಕಾರಣಕ್ಕೆ ಒತ್ತಡ ಕಡಿಮೆಯಾಗಿದೆ ಅಥವಾ ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆ ದೊರೆತಿದೆ ಎಂದು ಹೇಳಲು ಸಾಧ್ಯವಿಲ್ಲ. ನಿದ್ರೆಯ ಬದಲಾವಣೆಗಳು ಆತಂಕ, ಒತ್ತಡ ಮತ್ತು ಭಾವನಾತ್ಮಕ ಸ್ಥಿತಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಯಲು ಪ್ರತ್ಯೇಕ ಹಾಗೂ ಹೆಚ್ಚು ವ್ಯಾಪಕವಾದ ಅಧ್ಯಯನಗಳು ಅಗತ್ಯವಿವೆ. ಹಾಗಾಗಿ, ಸದ್ಯಕ್ಕೆ NEUSLeeP ಅನ್ನು ಒತ್ತಡ ನಿವಾರಕ ಸಾಧನ ಅಥವಾ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯೆಂದು ಪರಿಗಣಿಸುವುದು ಸೂಕ್ತವಲ್ಲ.

ಇದನ್ನೂ ಓದಿ: ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ನವಿ ಪಿಳ್ಳೈಗೆ ಒಲಿದ ಶಾಂತಿ ಪುರಸ್ಕಾರ

ಮಿದುಳು ಮಾನವ ದೇಹದ ಅತ್ಯಂತ ಸಂಕೀರ್ಣ ಅಂಗಗಳಲ್ಲಿ ಒಂದು. ನೆನಪು, ಚಿಂತನೆ, ಭಾವನೆ, ದೇಹದ ಚಲನೆ ಮತ್ತು ನಿದ್ರೆಯಂತಹ ಹಲವು ಕಾರ್ಯಗಳನ್ನು ಮೆದುಳಿನ ವಿವಿಧ ನರಜಾಲಗಳು ಪರಸ್ಪರ ಸಂಪರ್ಕ ಹೊಂದಿ ನಿಯಂತ್ರಿಸುತ್ತವೆ. ಹೀಗಾಗಿ, ಮೆದುಳಿಗೆ ಹೊರಗಿನಿಂದ ಪ್ರಚೋದನೆ ನೀಡುವ ಯಾವುದೇ ಹೊಸ ತಂತ್ರಜ್ಞಾನವನ್ನು ಬಳಸುವಾಗ ಅದರ ಪರಿಣಾಮಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಅತ್ಯಗತ್ಯ. NEUSLeeP ಪ್ಯಾಚ್‌ ಅಲ್ಟ್ರಾಸೌಂಡ್‌ ಆಧಾರಿತ ತಂತ್ರಜ್ಞಾನವನ್ನು ಬಳಸುವುದರಿಂದ, ಅದನ್ನು ಪದೇಪದೇ ಅಥವಾ ದೀರ್ಘಕಾಲ ಬಳಸಿದಾಗ ಮೆದುಳಿನ ಕಾರ್ಯಚಟುವಟಿಕೆಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬುದನ್ನು ತಿಳಿಯಬೇಕು. ಈ ಸಾಧನವನ್ನು ನಿರಂತರವಾಗಿ ಬಳಸುವುದರಿಂದ ನೆನಪು, ಚಿಂತನೆ ಅಥವಾ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಅಲ್ಲದೆ, ಕಾಲಕ್ರಮೇಣ ಮೆದುಳು ಈ ರೀತಿಯ ಪ್ರಚೋದನೆಗೆ ಹೊಂದಿಕೊಳ್ಳುತ್ತದೆಯೇ, ಅದರ ಪರಿಣಾಮ ಕಡಿಮೆಯಾಗುತ್ತದೆಯೇ ಅಥವಾ ಪ್ರಚೋದನೆಯ ಪ್ರಮಾಣವನ್ನು ಬದಲಾಯಿಸುವ ಅಗತ್ಯ ಉಂಟಾಗುತ್ತದೆಯೇ ಎಂಬುದನ್ನೂ ಸಂಶೋಧಕರು ಪರಿಶೀಲಿಸಬೇಕಿದೆ.

ಹೊಸ ವೈದ್ಯಕೀಯ ತಂತ್ರಜ್ಞಾನಗಳು ಅಭಿವೃದ್ಧಿಯಾದಾಗ ಅವುಗಳ ಪರಿಣಾಮಕಾರಿತ್ವದ ಜೊತೆಗೆ ಬೆಲೆಯೂ ಪ್ರಮುಖ ವಿಷಯವಾಗುತ್ತದೆ. NEUSLeeP ಪ್ಯಾಚ್‌ ಭವಿಷ್ಯದಲ್ಲಿ ಬಳಕೆಗೆ ಬಂದರೆ, ಈ ಸಾಧನದ ಬೆಲೆ ಅದರಲ್ಲಿರುವ ಸಂವೇದಕಗಳು, ಅಲ್ಟ್ರಾಸೌಂಡ್‌ ವ್ಯವಸ್ಥೆ, ಸಾಫ್ಟ್‌ವೇರ್‌, ತಯಾರಿಕಾ ವೆಚ್ಚ ಹಾಗೂ ನಿರ್ವಹಣೆಗೆ ಬೇಕಾಗುವ ಭಾಗಗಳ ಮೇಲೆ ಅವಲಂಬಿತವಾಗಿರಬಹುದು. ಸಾಧನದ ಕೆಲವು ಭಾಗಗಳನ್ನು ಕಾಲಕಾಲಕ್ಕೆ ಬದಲಾಯಿಸಬೇಕಾದ ಅಗತ್ಯವಿದ್ದರೆ, ಬಳಕೆಯ ಒಟ್ಟು ವೆಚ್ಚವೂ ಹೆಚ್ಚಾಗಬಹುದು.

ಒಟ್ಟಿನಲ್ಲಿ, ಯಾವುದೇ ಹೊಸ ವೈದ್ಯಕೀಯ ತಂತ್ರಜ್ಞಾನವನ್ನು ಮೌಲ್ಯಮಾಪನ ಮಾಡುವಾಗ ಅದರ ಹೊಸತನವನ್ನಷ್ಟೇ ಗಮನಿಸಬಾರದು. ಅದು ಎಷ್ಟು ಪರಿಣಾಮಕಾರಿ, ಎಷ್ಟು ಸುರಕ್ಷಿತ, ಎಷ್ಟು ವೆಚ್ಚದಾಯಕ ಮತ್ತು ಜನಸಾಮಾನ್ಯರಿಗೆ ಎಷ್ಟು ಸುಲಭವಾಗಿ ಲಭ್ಯವಾಗುತ್ತದೆ ಎಂಬುದನ್ನೂ ಪರಿಗಣಿಸಬೇಕು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR ಪೂರ್ಣಗೊಂಡ ರಾಜ್ಯಗಳಲ್ಲಿ SSR ಪ್ರಕ್ರಿಯೆ: ಕೇಂದ್ರ ಚುನಾವಣಾ ಆಯೋಗ

'ವಿಶೇಷ ಸಮಗ್ರ ಪರಿಷ್ಕರಣೆ' (SIR- Special Intensive Revision) ಪ್ರಕ್ರಿಯೆ ಪೂರ್ಣಗೊಂಡಿರುವ...

ಕಲಬುರಗಿ | ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣ ದಾಖಲು

ಕಲಬುರಗಿ ಹೊರವಲಯದ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ...

ಎಸ್‌ಐಆರ್ ಕುರಿತು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ: ಸಿಎಂ ಡಿ.ಕೆ. ಶಿವಕುಮಾರ್

ಎಸ್‌ಐಆರ್ (SIR) ದತ್ತಾಂಶಗಳ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವತಿಯಿಂದ ಸುಪ್ರೀಂ...