ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ನವಿ ಪಿಳ್ಳೈಗೆ ಒಲಿದ ಶಾಂತಿ ಪುರಸ್ಕಾರ

Date:

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌ ಪಿಳ್ಳೈ ಅವರಿಗೆ ನೀಡಲಾಗಿದೆ. ಪಿಳ್ಳೈ ಅವರು ಭಾರತೀಯ ಮೂಲದ ಕುಟುಂಬಕ್ಕೆ ಸೇರಿದವರೆಂಬ ಹೆಮ್ಮೆ ನಮ್ಮ ನಿಮ್ಮೆಲ್ಲರದು.

ನಾರ್ವೇಜಿಯನ್ ನೊಬೆಲ್ ಸಮಿತಿಯು, “ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ” ನವನೀತಮ್‌ ಪಿಳ್ಳೈ (ನವಿ ಪಿಳ್ಳೈ) ಅವರಿಗೆ 2026ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿದೆ. ದಕ್ಷಿಣ ಆಫ್ರಿಕಾದವರಾದ ಡಾ. ನವನೀತಮ್‌ ಪಿಳ್ಳೈ ಅವರು 2008 ಮತ್ತು 2014ರ ನಡುವೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥೆಯಾಗಿದ್ದರು. ಗಾಜಾದಲ್ಲಿ ನರಮೇಧ ಎಸಗಿದ ತಪ್ಪಿತಸ್ಥ ಎಂದು ಇಸ್ರೇಲ್ ಅನ್ನು ನಿರ್ಣಯಿಸಿದ ವಿಶ್ವಸಂಸ್ಥೆಯ ಆಯೋಗದ ಅಧ್ಯಕ್ಷತೆಯನ್ನೂ ಸಹಾ ಅವರು ವಹಿಸಿದ್ದರು,

- Advertisement -

ಡಾ. ನವನೀತಮ್‌ ಪಿಳ್ಳೈ ಅವರು ಅಂತಾರಾಷ್ಟ್ರೀಯ ಕಾನೂನು ವಲಯದಲ್ಲಿ “ನವಿ ಪಿಳ್ಳೈ” ಎಂದೇ ಹೆಸರಾದವರು. ನೆಲ್ಸನ್‌ ಮಂಡೇಲಾ ಅವರಿಂದ 1995ರಲ್ಲಿ ದಕ್ಷಿಣ ಆಫ್ರಿಕಾದ ಹೈಕೋರ್ಟ್‌ಗೆ ನ್ಯಾಯಧೀಶರಾಗಿ ಆಯ್ಕೆಯಾಗಿ ಅವರ ಜೊತೆ ವರ್ಣಭೇದ ನೀತಿಯ ವಿರುದ್ಧ ಧ್ವನಿ ಎತ್ತಿದವರಾಗಿದ್ದರು. ಮುಂದೆ ರುವಾಂಡದಲ್ಲಿ ಅಂತಾರಾಷ್ಟ್ರೀಯ ಕ್ರಿಮಿನಲ್‌ ಟ್ರಿಬ್ಯುನಲ್‌ಗೆ 2003ರವರೆಗೂ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ಅದೇ ಸಂಸ್ಥೆಯ ಅಧ್ಯಕ್ಷರಾಗಿಯೂ ಇದ್ದರು. ನಂತರ 2008ರಿಂದ 2014ರವರೆಗೂ ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕುಗಳ ಹೈಕಮೀಷನರ್‌ ಆಗಿದ್ದರು. ನವಿ ಪಿಳ್ಳೈ ಅವರು “ಯುದ್ಧ ಮತ್ತು ಹಿಂಸಾಚಾರವನ್ನು ತಡೆಯಲು ಕಾನೂನು ಕ್ರಮಗಳು ಸಹಾಯ ಮಾಡುತ್ತವೆ ಎಂಬುದನ್ನು ತೋರಿಸಿದ್ದಾರೆ” ಎಂದು ನಾರ್ವೇಜಿಯನ್ ನೊಬೆಲ್ ಸಮಿತಿ ಶ್ಲಾಘಿಸಿದೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಭಾರತೀಯ ಮೂಲದ ನಾವಿ ಪಿಳ್ಳೈ
ನವನೀತಮ್ ಪಿಳ್ಳೈ ಅವರು ಸೆಪ್ಟೆಂಬರ್ 23, 1941ರಂದು ದಕ್ಷಿಣ ಆಫ್ರಿಕಾದಲ್ಲಿ ತಮಿಳು ಮೂಲದ ಭಾರತೀಯ ಪೋಷಕರಿಗೆ ಜನಿಸಿದರು. ಅವರ ತಂದೆ ನಾರಾಯಣಸಾಮಿ ನಾಯ್ಡು ಅವರು ಬಸ್ ಚಾಲಕರಾಗಿದ್ದರು, ಜೊತೆಗೆ ಇತರೆ ಅನೇಕ ಕೆಲಸಗಳನ್ನೂ ಸಹಾ ಮಾಡುತ್ತಿದ್ದರು. ಅವರ ತಾಯಿ ಶಾಂತಮ್ಮ, ಮಕ್ಕಳೊಂದಿಗೆ ಮನೆಯನ್ನು ನಿಭಾಯಿಸುವ ಹೊಣೆ ಹೊತ್ತ ಗೃಹಿಣಿಯಾಗಿದ್ದರು. ನವಿ ಅವರ ಅಜ್ಜ-ಅಜ್ಜಿಯರು 1890ರ ಸುಮಾರಿಗೆ ದಕ್ಷಿಣ ಆಫ್ರಿಕಾಕ್ಕೆ ಒಪ್ಪಂದದ ಕೆಲಸಗಾರ(Bonded Labour)ರಾಗಿ ಕಬ್ಬಿನ ಗದ್ದೆಯ ಕೆಲಸಗಳಿಗೆಂದು ಬಂದು ನೆಲೆಯಾಗಿದ್ದರು. ಹಾಗಾಗಿ ಆಗಿನ ವರ್ಣಭೇದ ನೀತಿಯಡಿಯಲ್ಲಿ ಬಡ ಭಾರತೀಯ ದಕ್ಷಿಣ ಆಫ್ರಿಕನ್ ಆಗಿ, ಬೆಳೆದ ನಾವಿ ಅವರು ಕಷ್ಟಗಳು ಮತ್ತು ತಾರತಮ್ಯದ ಸಂದರ್ಭಗಳನ್ನು ಅನುಭವಿಸಿದವರಾಗಿದ್ದಾರೆ. ಈ ಅನುಭವವು ಅಂತಿಮವಾಗಿ ಅವರಿಗೆ ಕಾನೂನು ವೃತ್ತಿಯಲ್ಲಿ ಜನಪರ ಕೆಲಸಕ್ಕೆ ಉತ್ತೇಜನ ನೀಡಿತು.

ಇದನ್ನು ಓದಿದ್ದೀರಾ?: ನೊಬೆಲ್‌ ಪ್ರಶಸ್ತಿ ಸರಣಿ | ಶಾಸ್ತ್ರೀಯ ಪರಂಪರೆಗೆ ಸಮಕಾಲೀನ ಸಂವಾದದ ಪಾತ್ರಗಳಿಂದ ಸಾಹಿತ್ಯ ರಚಿಸಿದ ಆನ್‌ ಕಾರ್ಸನ್‌

ಬಡತನದಲ್ಲಿದ್ದ ಪಿಳ್ಳೈ ಅವರ ಪೋಷಕರು ತಮ್ಮ ಎಂಟು ಮಕ್ಕಳಿಗೆ ಬೇಕಾದ ಎಲ್ಲ ಅಗತ್ಯಗಳನ್ನು ಒದಗಿಸಲು ಹೆಣಗಾಡಿದರು. ಆದಾಗ್ಯೂ ಅವರ ಮನೆಯಲ್ಲಿ ಶಿಕ್ಷಣವು ಆದ್ಯತೆಯಾಗಿತ್ತು. ಅವರ ಪೋಷಕರು ತುಂಬಾ ಕಟ್ಟುನಿಟ್ಟಾದ ಶಿಸ್ತಿನ ಜೀವನಕ್ಕೆ ಬದ್ಧರಾಗಿದ್ದರು. ತಮ್ಮ ಎಲ್ಲಾ ಮಕ್ಕಳನ್ನು ಸಮಾನವಾಗಿ ಬೆಳೆಸುವಲ್ಲಿ, ಗಂಡು ಮಕ್ಕಳ ಜೊತೆಗೆ, ಹೆಣ್ಣು ಮಕ್ಕಳಿಗೂ ಶಿಕ್ಷಣ ನೀಡುವುದರಲ್ಲಿ ನಂಬಿಕೆ ಇಟ್ಟಿದ್ದರು. ಅದು ಆ ಸಮಯದಲ್ಲಿ ಪಾಲಿಸಲು ಕಷ್ಟವೇ ಆಗಿತ್ತು. ಅವರ ಬೆಂಬಲ ಮತ್ತು ಪ್ರಯತ್ನಗಳ ಹೊರತಾಗಿಯೂ, ಅಲ್ಲಿದ್ದ ವರ್ಣಭೇದ ನೀತಿಯು ಜನಾಂಗೀಯವಾಗಿ ತುಳಿತಕ್ಕೊಳಗಾದ ಜನರಿಗೆ ಅವಕಾಶಗಳನ್ನು ನೀಡುವುದು ಕಡುಕಷ್ಟದ ಕೆಲಸವಾಗಿತ್ತು. ಆದರೂ ಅವೆಲ್ಲವನ್ನೂ ದಾಟಿ, ಅಡೆತಡೆಗಳನ್ನು ನಿವಾರಿಸಿ ವಿದ್ಯಾಭ್ಯಾಸ ಮಾಡುವಲ್ಲಿ ನಾವಿ ಕುಟುಂಬವು ಶ್ರಮಿಸಿತ್ತು.

Navi Pillay1

ಕಾನೂನು ಶಿಕ್ಷಣಾರ್ಥಿಯಾಗಿ ಸಾಧನೆಗಳು
ಪ್ರಾಥಮಿಕ ಶಾಲೆಯ ಶಿಕ್ಷಣದ ನಂತರ, ಪಿಳ್ಳೆ 1960ರ ದಶಕದ ಆರಂಭದಲ್ಲಿ ದಕ್ಷಿಣ ಆಫ್ರಿಕಾದ ನಟಾಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾದರು. ವಿಶ್ವವಿದ್ಯಾಲಯದಲ್ಲಿ, ಅವರು ತಮ್ಮ ಪದವಿ ಮತ್ತು ಕಾನೂನು ಪದವಿ ಎರಡನ್ನೂ ಪಡೆದರು. ಶಾಲೆಯಲ್ಲಿದ್ದ ಸಮಯದುದ್ದಕ್ಕೂ, ಪಿಳ್ಳೆ ವರ್ಣಭೇದ ನೀತಿಯ ವಿರುದ್ಧ ಪ್ರತಿಭಟನೆಗಳು ಮತ್ತು ಬಹಿಷ್ಕಾರಗಳಲ್ಲಿ ಸಕ್ರಿಯರಾಗಿದ್ದರು. ಕಾನೂನು ಅಭ್ಯಾಸ ಮಾಡಲು ಸ್ವಲ್ಪ ಸಮಯ ತೆಗೆದುಕೊಂಡ ನಂತರ, ಅವರು ಪದವಿ ಶಿಕ್ಷಣವನ್ನು ಮುಂದುವರಿಸಿದರು ಮತ್ತು 1982ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಮಾನವ ಹಕ್ಕುಗಳು ಮತ್ತು ಅಂತಾರಾಷ್ಟ್ರೀಯ ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. 1988ರಲ್ಲಿ, ಅವರು ಹಾರ್ವರ್ಡ್ ಕಾನೂನು ಶಾಲೆಯಿಂದ ಡಾಕ್ಟರ್ ಆಫ್ ಜ್ಯೂರಿಡಿಕಲ್ ಸೈನ್ಸ್ ಪದವಿಯನ್ನು ಪಡೆದರು, ಪ್ರತಿಷ್ಠಿತ ಸಂಸ್ಥೆಯಿಂದ ಕಾನೂನಿನಲ್ಲಿ ಡಾಕ್ಟರೇಟ್ ಪಡೆದ ಮೊದಲ ದಕ್ಷಿಣ ಆಫ್ರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1967ರಲ್ಲಿ, ದಕ್ಷಿಣ ಆಫ್ರಿಕಾದ ನಟಾಲ್ ಪ್ರಾಂತ್ಯದಲ್ಲಿ ಕಾನೂನು ವೃತ್ತಿಯನ್ನು ಪ್ರಾರಂಭಿಸಿದ ಮೊದಲ ಶ್ವೇತವರ್ಣೀಯರಲ್ಲದ ಮಹಿಳೆ ಎಂಬ ಹೆಗ್ಗಳಿಕೆಗೂ ನವಿ ಪಿಳ್ಳೈ ಪಾತ್ರರಾದರು. ವರ್ಣಭೇದ ನೀತಿಯ ದಮನಕಾರಿ ಸ್ವರೂಪದಿಂದ ತಾವು ಅನುಭವಿಸಿದ ಕಷ್ಟಕರ ಅನುಭವಗಳೇ, ಅವರನ್ನು ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಲು ಮತ್ತು ವರ್ಣಭೇದ ನೀತಿಯ ವಿರುದ್ಧ ಹೋರಾಡುತ್ತಿದ್ದವರ ಪರ ವಾದಿಸುವ ವಕೀಲರಾಗಲು ಪ್ರೇರೇಪಿಸಿದವು. ಪಿಳ್ಳೈ ತಮ್ಮ ವೃತ್ತಿಜೀವನದ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲವನ್ನು ವರ್ಣಭೇದ ನೀತಿ ವಿರೋಧಿ ಹೋರಾಟಗಾರರ ಪರವಾಗಿ ವಾದಿಸುವುದರಲ್ಲಿ ಕಳೆದರು. ಜೈಲಿನಲ್ಲಿ ಅನೇಕ ವರ್ಣಭೇದ ನೀತಿ ವಿರೋಧಿ ಹೋರಾಟಗಾರರು ಅನುಭವಿಸುತ್ತಿದ್ದ ಚಿತ್ರಹಿಂಸೆಯ ಘಟನೆಗಳನ್ನು ಅವರು ಬಹಿರಂಗಪಡಿಸಲು ಪ್ರಾರಂಭಿಸಿದರು. 1980ರಲ್ಲಿ, ಅವರು ನಟಾಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾದರು. ಅದೇ ಸಮಯದಲ್ಲಿ, ಅವರು ದಕ್ಷಿಣ ಆಫ್ರಿಕಾದ ಹೈಕೋರ್ಟ್‌ನ ವಕೀಲರಾಗಿ ಮತ್ತು ಆಸ್ತಿ ಹಕ್ಕು ವರ್ಗಾವಣೆ ಪ್ರಕ್ರಿಯೆಗಳ ತಜ್ಞರಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು.
ನ್ಯಾಯಕ್ಕಾಗಿನ ಅವರ ತುಡಿತವು ಮಹಿಳೆಯರು ಮತ್ತು ಅಲ್ಪಸಂಖ್ಯಾತ ಗುಂಪುಗಳ ಪರವಾಗಿ ಕೆಲಸ ಮಾಡಲು ಅವರಿಗೆ ಸ್ಫೂರ್ತಿಯಾಯಿತು. 1985ರಲ್ಲಿ, ಪಿಳ್ಳೈ ಅವರು ‘ಈಕ್ವಾಲಿಟಿ ನೌ’ (Equality Now) ಎಂಬ ಅಂತಾರಾಷ್ಟ್ರೀಯ ಮಹಿಳಾ ಹಕ್ಕುಗಳ ಸಂಘಟನೆಯ ಸಹ-ಸ್ಥಾಪಕರಾದರು. 1995ರಿಂದ ಡರ್ಬನ್ ವೆಸ್ಟ್‌ವಿಲ್ಲೆ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಪಿಳ್ಳೈ ಸೇವೆ ಸಲ್ಲಿಸಿದರು. ಅವರು ತಮ್ಮ ಜೀವನ ಮತ್ತು ವೃತ್ತಿಜೀವನವನ್ನು ಇತರರ ಶಿಕ್ಷಣಕ್ಕಾಗಿ ಮುಡಿಪಾಗಿಡುವುದನ್ನು ಮುಂದುವರಿಸಿದರು. ಅದೇ ವರ್ಷದಲ್ಲಿ ವರ್ಣಭೇದ ನೀತಿಯು ಅಂತ್ಯಗೊಂಡಿತು ಮತ್ತು ಪಿಳ್ಳೈ ಅವರನ್ನು ದಕ್ಷಿಣ ಆಫ್ರಿಕಾದ ಹೈಕೋರ್ಟ್‌ನಲ್ಲಿ ಹಂಗಾಮಿ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. 1998ರಲ್ಲಿ, ರುವಾಂಡಾದಲ್ಲಿ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅವರನ್ನು ಆಯ್ಕೆ ಮಾಡಿತು. ಅವರು ಆ ಹುದ್ದೆಯಲ್ಲಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದರು ಮತ್ತು ನ್ಯಾಯಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು; ರುವಾಂಡಾಕ್ಕಾಗಿನ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿಯಲ್ಲಿ ಕೆಲಸ ಮಾಡುವಾಗ ಪಿಳ್ಳೈ ಅವರು ಮಹತ್ವದ ಸುಧಾರಣೆಗಳನ್ನು ತಂದರು.

ಇದನ್ನು ಓದಿದ್ದೀರಾ?: ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ ರಹಸ್ಯಕ್ಕೆ ಪರಿಹಾರ

ರುವಾಂಡಾದಲ್ಲಿ ಒಂದು ಪ್ರಾಸಿಕ್ಯೂಟರ್ ವಿರುದ್ಧದ ಪ್ರಕರಣದಲ್ಲಿ ಅತ್ಯಾಚಾರವನ್ನು ನರಮೇಧದ ಒಂದು ಭಾಗವೆಂದು ಪರಿಗಣಿಸುವ ಕಾನೂನು ತತ್ವವನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಇದರಿಂದಾಗಿ ರುವಾಂಡಾದಲ್ಲಿ ನಡೆದ ನರಮೇಧದ ನಂತರ ಅಲ್ಲಿನ ಮಹಿಳೆಯರಿಗೆ ಈ ತೀರ್ಪು ಅತ್ಯಂತ ಮಹತ್ವದ್ದಾಗಿ ಪರಿಣಮಿಸಿತು. 2003ರಲ್ಲಿ, ಅವರು ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ (International Criminal Court) ನ್ಯಾಯಾಧೀಶರಾಗಿ ನೇಮಕಗೊಂಡರು. 2008ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉನ್ನತ ಆಯುಕ್ತರ (UN High Commissioner for Human Rights) ಹುದ್ದೆಯನ್ನು ವಹಿಸಿಕೊಳ್ಳಲು ರಾಜೀನಾಮೆ ನೀಡುವವರೆಗೂ ಅವರು ಆ ನ್ಯಾಯಾಲಯದ ಮೇಲ್ಮನವಿ ವಿಭಾಗದಲ್ಲಿ ಸೇವೆ ಸಲ್ಲಿಸಿದರು. ಈ ಹುದ್ದೆಯಲ್ಲಿದ್ದಾಗ, ಕಾನೂನಿನ ಅಡಿಯಲ್ಲಿ ಸಮಾನ ಹಕ್ಕುಗಳಿಂದ ವಂಚಿತರಾದ ಜನರ ಪರವಾಗಿ ಧ್ವನಿ ಎತ್ತುವ ಮೂಲಕ, ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳು ಮತ್ತು ನ್ಯಾಯಕ್ಕಾಗಿ ಹೋರಾಡಿದರು. ತಮ್ಮ ವೃತ್ತಿಜೀವನದ ಉದ್ದಕ್ಕೂ, ಆಫ್ರಿಕಾ ಖಂಡದ ಕಪ್ಪು ವರ್ಣೀಯರು ಹಾಗೂ ಪ್ರಪಂಚದಾದ್ಯಂತದ ಜನರಿಗಾಗಿ ಅವರು ಮಹತ್ವದ ಸಾಧನೆಗಳನ್ನು ಮಾಡಿದರು.

Navi Pillay2

ನವಿ ಅವರು ಕಾನೂನು ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಅವರು ಪ್ರಪಂಚದಾದ್ಯಂತದ ಮಹಿಳೆಯರಿಗೆ ಹೊಸ ದಾರಿಯನ್ನು ಸುಗಮಗೊಳಿಸಿದರು. ದಕ್ಷಿಣ ಆಫ್ರಿಕಾದ ನಟಾಲ್ ಪ್ರಾಂತ್ಯದಲ್ಲಿ ಕಾನೂನು ವೃತ್ತಿಯನ್ನು ಪ್ರಾರಂಭಿಸಿದ ಮೊದಲ ಮಹಿಳೆ ಹಾಗೂ ಅಧ್ಯಕ್ಷ ಮಂಡೇಲಾ ಅವರಿಂದ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡ ಮೊದಲ ಕಪ್ಪು ವರ್ಣೀಯ ಮಹಿಳೆ ಅವರಾಗಿದ್ದರು. ವರ್ಣಭೇದ ನೀತಿ ಆಚರಣೆಯಲ್ಲಿದ್ದ ದೇಶವೊಂದರಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗುವುದು ಅಥವಾ ವಕೀಲರಾಗುವುದು ಅಸಾಧ್ಯವೆಂದು ಭಾವಿಸಿದ್ದ ಅನೇಕ ಮಹಿಳೆಯರಿಗೆ ಅವರು ದಾರಿದೀಪವಾಗಿದ್ದಾರೆ. ತಮ್ಮ ವೃತ್ತಿಜೀವನದಾದ್ಯಂತ ಅವರು ವರ್ಣಭೇದ ನೀತಿ, ತಾರತಮ್ಯ ಮತ್ತು ದ್ವೇಷಪೂರಿತ ಭಾಷಣದ ವ್ಯವಸ್ಥೆಗಳ ವಿರುದ್ಧ ಹೋರಾಡಿದರು ಹಾಗೂ ಎಲ್ಲರಿಗೂ ನ್ಯಾಯ ಮತ್ತು ಮಾನವ ಹಕ್ಕುಗಳು ಸಿಗುವಂತೆ ಮಾಡಲು ಶ್ರಮಿಸಿದ್ದಾರೆ.

ಪ್ರಶಸ್ತಿ ಮತ್ತು ಗೌರವಗಳು
ಪ್ರಸ್ತುತ 2026ರ ನೊಬೆಲ್‌ ಪುರಸ್ಕಾರವನ್ನು ಪಡೆದಿರುವ ನವನೀತಮ್‌ ಪಿಳ್ಳೈ ಅವರಿಗೆ ಅಮೆರಿಕದ ನ್ಯೂಯಾರ್ಕ್‌ ಸಿಟಿ ವಿಶ್ವವಿದ್ಯಾಲಯ, ಲಂಡನ್ನಿನ ಸ್ಕೂಲ್‌ ಆಫ್‌ ಇಕಾನಾಮಿಕ್ಸ್‌ ಸೇರಿದಂತೆ ದಕ್ಷಿಣ ಆಫ್ರಿಕಾ, ಬೆಲ್ಜಿಯಂ ಮತ್ತು ನೆದೆರ್‌ಲ್ಯಾಂಡ್‌ ದೇಶಗಳ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ ಪದವಿಗಳನ್ನು ನೀಡಿ ಪುರಸ್ಕರಿಸಿವೆ. 2003ರಲ್ಲಿ ಮಹಿಳಾ ಹಕ್ಕುಗಳ ಗ್ರಾಬರ್‌ ಪ್ರಶಸ್ತಿ, 2009ರಲ್ಲಿ “ಫೋರ್ಬ್ಸ್‌” ಅವರನ್ನು ವಿಶ್ವದ 64ನೆಯ ಅತ್ಯಂತ ಪ್ರಭಾವಶಾಲಿ ಮಹಿಳೆ ಎಂದು ಶ್ರೇಯಾಂಕ ನವಿ ಪಿಳ್ಳೈ ಅವರಿಗೆ ನೀಡಲಾಗಿತ್ತು. ನವಿ ಅವರು 2023ರಲ್ಲಿ ವರ್ಲ್ಡ್ ಲಾ ಫೌಂಡೇಶನ್‌ನ ‘ರೂಲ್ ಆಫ್ ಲಾ ಡಿಜಿಟಲ್ ಸೆಂಟರ್’ನಲ್ಲಿ ಅವರು ವರ್ಲ್ಡ್ ಜ್ಯೂರಿಸ್ಟ್ ಅಸೋಸಿಯೇಷನ್‌ನ ‘ರೂತ್ ಬೇಡರ್ ಗಿನ್ಸ್‌ಬರ್ಗ್ ಮೆಡಲ್ ಆಫ್ ಆನರ್’ ಅನ್ನು ಪಡೆದಿದ್ದಾರೆ. ಕಳೆದ ವರ್ಷ 2025ರಲ್ಲಿ ಸಿಡ್ನಿ ಶಾಂತಿ ಪ್ರತಿಷ್ಠಾನದಿಂದ ‘ಶಾಂತಿ ಪುರಸ್ಕಾರ’ವನ್ನೂ ಪಡೆದಿದ್ದಾರೆ.

ಇದನ್ನು ಓದಿದ್ದೀರಾ?: ನೊಬೆಲ್‌ ಪ್ರಶಸ್ತಿ ಸರಣಿ | ಕಣ ಭೌತವಿಜ್ಞಾನ-ಖಗೋಳವಿಜ್ಞಾನಗಳೆರಡರ ಸಮ್ಮಿಳನದ ಅತ್ಯಂತ ಮಹತ್ವಾಕಾಂಕ್ಷೆಯ ಸಾಧ್ಯತೆಗೆ ಸಂದ ಪುರಸ್ಕಾರ

ದಕ್ಷಿಣ ಆಫ್ರಿಕಾ ಮತ್ತು ನೊಬೆಲ್‌ ಪುರಸ್ಕಾರಗಳು
ಡಾ. ನವನೀತಮ್‌ ಪಿಳ್ಳೈ ಅವರು ನೊಬೆಲ್‌ ಶಾಂತಿ ಪುರಸ್ಕಾರವನ್ನು ಪಡೆದ 5ನೆಯ ದಕ್ಷಿಣ ಆಫ್ರಿಕಾ ದೇಶದ ಪ್ರಜೆಯಾಗಿದ್ದಾರೆ. ಈ ಹಿಂದೆ ಮಾಜಿ ಆಫ್ರಿಕನ್ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಆಲ್ಬರ್ಟ್ ಲುಥುಲಿ (Albert Luthuli), ಆರ್ಚ್‌ಬಿಷಪ್ ಡೆಸ್ಮಂಡ್ ಟುಟು (Desmond Tutu) ಮತ್ತು ಮಾಜಿ ಅಧ್ಯಕ್ಷರಾದ ನೆಲ್ಸನ್ ಮಂಡೇಲಾ (Nelson Mandela) ಮತ್ತು ಫ್ರೆಡೆರಿಕ್‌ ವಿಲಿಯಂ ಡಿ ಕ್ಲರ್ಕ್ (Frederik Willem de Klerk) ಅವರೂ ಸಹಾ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಲ್ಲದೆ ವೈದ್ಯಕೀಯ ವಿಭಾಗದಲ್ಲಿ ಮೂವರು, ರಸಾಯನ ವಿಜ್ಞಾನದಲ್ಲಿ ಇಬ್ಬರು ಮತ್ತು ಸಾಹಿತ್ಯದಲ್ಲಿ ಇಬ್ಬರು ನೊಬೆಲ್‌ ಪ್ರಶಸ್ತಿಯನ್ನು ಪಡೆದಿದ್ದಾರೆ. ಜೊತೆಗೆ ಎರಡು ಸಂಸ್ಥೆಗಳು (ದಕ್ಷಿಣ ಆಫ್ರಿಕಾದ ರೆಡ್‌ ಕ್ರಾಸ್‌ ಸೊಸೈಟಿ, ದಕ್ಷಿಣ ಆಫ್ರಿಕಾದ – UNICEF) ಸಹಾ ನೊಬೆಲ್‌ ಪ್ರಶಸ್ತಿಯನ್ನು ಪಡೆದಿವೆ. ಒಟ್ಟು 12 ವ್ಯಕ್ತಿಗಳು ಮತ್ತು 2 ಸಂಸ್ಥೆಗಳು ನೊಬೆಲ್‌ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿವೆ.

“ನ್ಯಾಯಮೂರ್ತಿ ಪಿಳ್ಳೈ ಅವರಿಗೆ ನೊಬೆಲ್ ಪ್ರಶಸ್ತಿ ಪುರಸ್ಕಾರ ನೀಡಿರುವುದು, ದಕ್ಷಿಣ ಆಫ್ರಿಕಾ ಮತ್ತು ಜಾಗತಿಕವಾಗಿ ಜನರಿಗೆ ಶಾಂತಿಯನ್ನು ಬಲಪಡಿಸಲು, ಮಾನವ ಘನತೆಯನ್ನು ಎತ್ತಿಹಿಡಿಯಲು ಮತ್ತು ಭರವಸೆಯನ್ನು ತರಲು ಅವರು ನೀಡಿದ ಪ್ರಗತಿಪರ ಕೊಡುಗೆಗಳನ್ನು ಆಚರಿಸಲು ನಮಗೆ ಅವಕಾಶ ನೀಡುತ್ತದೆ” ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದ ಸಿರಿಲ್‌ ರಾಂಪೊಸಾ (Ciril Ramposa) ನವಿ ಪಿಳ್ಳೈ ಅವರನ್ನು ಅಭಿನಂದಿಸಿ ಶ್ಲಾಘಿಸಿದ್ದಾರೆ. ”ಅವರಿಗೆ ನೀಡಲಾದ ಗೌರವವು, ಪ್ರತಿಯೊಬ್ಬ ವ್ಯಕ್ತಿಯು, ಅವರ ಪರಿಸ್ಥಿತಿಗಳು ಏನೇ ಇರಲಿ, ತಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಿ ಸಾಧನೆಗೆಯ್ಯಬಹುದು ಮತ್ತು ಆ ಮೂಲಕ ನಮ್ಮ ರಾಷ್ಟ್ರ ಮತ್ತು ಜಗತ್ತಿಗೆ ಸಂಪೂರ್ಣವಾಗಿ ಕೊಡುಗೆ ನೀಡಬಹುದಾದ ಸಮಾಜವನ್ನು ನಿರ್ಮಿಸುವುದನ್ನು ನಮಗೆ ನೆನಪಿಸುತ್ತದೆ” ಎಂದೂ ಅವರು ಹೇಳಿದ್ದಾರೆ.

ಇದನ್ನು ಓದಿದ್ದೀರಾ?: ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌ ಪ್ರಶಸ್ತಿ ಪಡೆದ ಸಂಶೋಧನೆಯ ಸುತ್ತ ಒಂದು ನೋಟ

ಇಬ್ಬರು ಮಕ್ಕಳ ತಾಯಿಯಾಗಿರುವ ಡಾ. ನವನೀತಮ್‌ ಪಿಳ್ಳೈ ಅವರು, 1965ರಲ್ಲಿ ಪರಂಜ್ಯೋತಿ ಪಿಳ್ಳೈ ಅವರನ್ನು ವಿವಾಹವಾಗಿದ್ದರು. ಅಟಾರ್ನಿಯಾಗಿರುವ ಪರಂಜ್ಯೋತಿ ಪಿಳ್ಳೈ ಅವರೂ ಸಹ ಕಾನೂನು ವಿದ್ಯಾರ್ಥಿಯೇ! “ಸಾರ್ವತ್ರಿಕ ಕಾನೂನು ತತ್ವಗಳಿಗೆ ನಾವಿ ಪಿಳ್ಳೆ ಅವರ ಬದ್ಧತೆ ಮತ್ತು ಅವರ ದೃಢವಾದ ನೈತಿಕ ದಿಕ್ಸೂಚಿಯಿಂದಾಗಿ ಅವರ ದೀರ್ಘ ವೃತ್ತಿಜೀವನವು ಸ್ಥಿರವಾಗಿದೆ”. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ಆಡಳಿತದಲ್ಲಿ ನೆಲ್ಸನ್ ಮಂಡೇಲಾ ಅವರನ್ನು ಸಮರ್ಥಿಸುವ ಅವರ ಆರಂಭಿಕ ಕೆಲಸದಿಂದ ಅಂತಾರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ನಂತರ ವಿಶ್ವಸಂಸ್ಥೆಯಲ್ಲಿ ಎತ್ತರಕ್ಕೆ ಕೊಂಡೊಯ್ದ ಕೀರ್ತಿಗೆ ಡಾ. ನವನೀತಮ್‌ ಪಿಳ್ಳೈ ಅವರು ಭಾರತೀಯ ಮೂಲದ ಕುಟುಂಬಕ್ಕೆ ಸೇರಿದವರೆಂಬ ಹೆಮ್ಮೆ ನಮ್ಮ ನಿಮ್ಮೆಲ್ಲರದು.

TS Channesh
ಡಾ. ಟಿ.ಎಸ್. ಚನ್ನೇಶ್
+ posts

ಲೇಖಕರು ಕೃಷಿ ವಿಜ್ಞಾನಿ. ಮಣ್ಣು ವಿಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆದವರು. ಆಸಕ್ತಿಯನ್ನು ಅಷ್ಟಕ್ಕೆ ಸೀಮಿತಗೊಳಿಸದೆ ವಿಜ್ಞಾನ ಮತ್ತು ಸಮಾಜದ ಸಮೀಕರಣದ ಚರ್ಚೆಗಳನ್ನು ರೂಪಿಸುವಲ್ಲಿ ತಮ್ಮನ್ನು ವಿಸ್ತರಿಸಿಕೊಂಡವರು. ಸಾರ್ವಜನಿಕರಿಗೆ ವಿಜ್ಞಾನದ ಸಾಮಾನ್ಯ ತಿಳಿವಳಿಕೆಯನ್ನು ನೀಡಲು "ಸೆಂಟರ್ ಫಾರ್ ಪಬ್ಲಿಕ್ ಅಂಡರ್ಸ್ಟಾಂಡಿಂಗ್ ಆಫ್ ಸೈನ್ಸ್" - CPUS ಎಂಬ ವಿನೂತನವಾದ ಸಂಸ್ಥೆಯನ್ನು ಆರಂಭಿಸಿ ಅಲ್ಲಿ ಸಂಶೋಧನೆ, ಪುಸ್ತಕ ಪ್ರಕಟಣೆ, ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ವಿಜ್ಞಾನದ ಸರಿಯಾದ ತಿಳಿವಳಿಕೆ ನೀಡಲು ಕಾರ್ಯಾಗಾರಗಳು, ಸಸ್ಯಗಳು ಮತ್ತು ನೊಬೆಲ್ ಪುರಸ್ಕಾರ ಪಡೆದ ವಿಜ್ಞಾನಿಗಳ ಬಗ್ಗೆ ಮಾಹಿತಿಯುಳ್ಳ ವೀಡಿಯೋಗಳನ್ನು ಮಾಡುತ್ತಿರುವುದು ಅವರ ವಿಶಿಷ್ಟ ಆಸಕ್ತಿಗಳನ್ನು ಪ್ರತಿಫಲಿಸುವಂತಿವೆ. 'ಸಸ್ಯಯಾನ', 'ಅನುರಣನ', 'ಪ್ರತಿಫಲನ', 'ನೊಬೆಲ್ 2017', 'ಮಣ್ಣು ಮತ್ತು ಮಾನವ', 'ಕೃಷಿ ಮತ್ತು ಪೇಟೆಂಟ್', 'ಬೆಳಕಿನ ಬೆನ್ನು ಹತ್ತಿ', 'ಉಳುವವರ ಪರ ವಕಾಲತ್ತು', 'ಅನ್ನದ ಬಟ್ಟಲು' ಮುಂತಾದ ಮೂಲ ಕೃತಿಗಳು ಅಲ್ಲದೆ 'ಆಲ್ಬರ್ಟ್ ಐನ್ಸ್ಟೈನ್' ಮತ್ತು 'ಅಲೆಕ್ಸಾಂಡರ್ ಗ್ರಹಾಂ ಬೆಲ್' ಕೃತಿಗಳನ್ನು ರಚಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಟಿ.ಎಸ್. ಚನ್ನೇಶ್
ಡಾ. ಟಿ.ಎಸ್. ಚನ್ನೇಶ್
ಲೇಖಕರು ಕೃಷಿ ವಿಜ್ಞಾನಿ. ಮಣ್ಣು ವಿಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆದವರು. ಆಸಕ್ತಿಯನ್ನು ಅಷ್ಟಕ್ಕೆ ಸೀಮಿತಗೊಳಿಸದೆ ವಿಜ್ಞಾನ ಮತ್ತು ಸಮಾಜದ ಸಮೀಕರಣದ ಚರ್ಚೆಗಳನ್ನು ರೂಪಿಸುವಲ್ಲಿ ತಮ್ಮನ್ನು ವಿಸ್ತರಿಸಿಕೊಂಡವರು. ಸಾರ್ವಜನಿಕರಿಗೆ ವಿಜ್ಞಾನದ ಸಾಮಾನ್ಯ ತಿಳಿವಳಿಕೆಯನ್ನು ನೀಡಲು "ಸೆಂಟರ್ ಫಾರ್ ಪಬ್ಲಿಕ್ ಅಂಡರ್ಸ್ಟಾಂಡಿಂಗ್ ಆಫ್ ಸೈನ್ಸ್" - CPUS ಎಂಬ ವಿನೂತನವಾದ ಸಂಸ್ಥೆಯನ್ನು ಆರಂಭಿಸಿ ಅಲ್ಲಿ ಸಂಶೋಧನೆ, ಪುಸ್ತಕ ಪ್ರಕಟಣೆ, ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ವಿಜ್ಞಾನದ ಸರಿಯಾದ ತಿಳಿವಳಿಕೆ ನೀಡಲು ಕಾರ್ಯಾಗಾರಗಳು, ಸಸ್ಯಗಳು ಮತ್ತು ನೊಬೆಲ್ ಪುರಸ್ಕಾರ ಪಡೆದ ವಿಜ್ಞಾನಿಗಳ ಬಗ್ಗೆ ಮಾಹಿತಿಯುಳ್ಳ ವೀಡಿಯೋಗಳನ್ನು ಮಾಡುತ್ತಿರುವುದು ಅವರ ವಿಶಿಷ್ಟ ಆಸಕ್ತಿಗಳನ್ನು ಪ್ರತಿಫಲಿಸುವಂತಿವೆ. 'ಸಸ್ಯಯಾನ', 'ಅನುರಣನ', 'ಪ್ರತಿಫಲನ', 'ನೊಬೆಲ್ 2017', 'ಮಣ್ಣು ಮತ್ತು ಮಾನವ', 'ಕೃಷಿ ಮತ್ತು ಪೇಟೆಂಟ್', 'ಬೆಳಕಿನ ಬೆನ್ನು ಹತ್ತಿ', 'ಉಳುವವರ ಪರ ವಕಾಲತ್ತು', 'ಅನ್ನದ ಬಟ್ಟಲು' ಮುಂತಾದ ಮೂಲ ಕೃತಿಗಳು ಅಲ್ಲದೆ 'ಆಲ್ಬರ್ಟ್ ಐನ್ಸ್ಟೈನ್' ಮತ್ತು 'ಅಲೆಕ್ಸಾಂಡರ್ ಗ್ರಹಾಂ ಬೆಲ್' ಕೃತಿಗಳನ್ನು ರಚಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...