ಮಣಿಪುರದಿಂದ ʼಈ ದಿನʼ ವರದಿ -10 | ತಾಯ್ನಾಡು ಮತ್ತು ಮ್ಯಾನ್ಮಾರ್‌, ಎರಡೂ ಕಡೆ ಬೆಂಕಿಯ ನಡುವೆ ಸಿಲುಕಿದವರ ಅನುಭವ ಕಥನ

Date:

Advertisements
ಇಂಡೋ-ಮ್ಯಾನ್ಮಾರ್ ಗಡಿಯಿಂದ ಸುಮಾರು 212 ಮೈತೇಯಿ ಜನರನ್ನು ಭಾರತೀಯ ಸಶಸ್ತ್ರ ಪಡೆಗಳು ಇತ್ತೀಚೆಗೆ ಸ್ವದೇಶಕ್ಕೆ ಮರಳಿ ಕರೆತಂದವು. ಈಗ ನೆಲೆ ಕಳೆದುಕೊಂಡಿರುವ ಇವರನ್ನು ಸದ್ಯ ಮೋರೆಹ್‌ನಲ್ಲಿರುವ ಅಸ್ಸಾಂ ರೈಫಲ್ಸ್ ಶಿಬಿರದಲ್ಲಿ ಇರಿಸಲಾಗಿದೆ.

ಕಳೆದ ಮೂರು ತಿಂಗಳ ಕಾಲ ನಡೆದ ದೀರ್ಘಕಾಲದ ಜನಾಂಗೀಯ ಸಂಘರ್ಷದ ಭಾಗವಾಗಿರುವ ಹೆಚ್ಚಿನ ಮಣಿಪುರಿಗಳಿಗೆ, ಅದರಲ್ಲೂ ಬಹುಸಂಖ್ಯಾತ ಮೈತೇಯಿ ಮತ್ತು ಬುಡಕಟ್ಟು ಕುಕಿ ಸಮುದಾಯಗಳಿಗೆ ಕಾಡುತ್ತಿರುವ ದುಃಸ್ವಪ್ನ ಇನ್ನೂ ಕಡಿಮೆಯಾಗಿಲ್ಲ.

ಈ ಜನಾಂಗೀಯ ಸಂಘರ್ಷ ಭಯಾನಕ ಹಿಂಸಾಚಾರ, ಮರಣ ಮತ್ತು ಜನರು ಗುಳೆಯೆದ್ದು ಹೋಗುವುದಕ್ಕೆ ಕಾರಣವಾಗಿದೆ. ಈ ಎರಡೂ ಸಮುದಾಯಗಳಿಂದ ಅಪಾರ ಪ್ರಮಾಣದ ಸಾವುನೋವುಗಳು ವರದಿಯಾಗಿವೆ.

ಇಂದು, ಮಣಿಪುರ ಮೈತೇಯಿಗಳು ಮತ್ತು ಕುಕಿಗಳು ನಡುವೆ ಭಾಗವಾಗಿ ಹೋಗಿದೆ. ತಮ್ಮ ತಮ್ಮ ಪ್ರದೇಶಗಳನ್ನು ಮೈತೇಯಿಗಳ ನೆಲೆ ಮತ್ತು ಕುಕಿಗಳ ನೆಲೆ ಗುರುತಿಸಿಕೊಂಡು ವಿಭಜಿಸಿಕೊಂಡಿದ್ದಾರೆ.

Advertisements

ಮಣಿಪುರದ ವಾಣಿಜ್ಯ ಕೇಂದ್ರವಾದ ಮೋರೆಹ್, ರಾಜ್ಯದಲ್ಲಿಯೇ ಅತ್ಯಂತ ಕೆಟ್ಟ ಯುದ್ಧ ಪೀಡಿತ ಪಟ್ಟಣವಾಗಿ ಬದಲಾಗಿದೆ.

ಮೇ 2023 ರ ಮೊದಲ ವಾರದಲ್ಲಿ ಕುಕಿ ಪ್ರಾಬಲ್ಯದ ಪ್ರದೇಶದಿಂದ ಪಲಾಯನ ಮಾಡುವಲ್ಲಿ ಯಶಸ್ವಿಯಾದ ಸುಮಾರು 4,000 ಮೈತೇಯಿಗಳಲ್ಲಿ ಹೆಚ್ಚಿನವರು ಇಂಫಾಲ್ ಮತ್ತು ಇತರ ಮೈತೇಯಿ ಪ್ರಾಬಲ್ಯದ ಪ್ರದೇಶಗಳಲ್ಲಿ ತಾತ್ಕಾಲಿಕ ನೆಲೆಗಳನ್ನು ಕಂಡುಕೊಂಡಿದ್ದಾರೆ. ಆದರೆ ಈ ಸಮುದಾಯದ ಯಾರೊಬ್ಬರಿಗೂ ಘರ್ಷಣೆ ಉತ್ತುಂಗದಲ್ಲಿದ್ದಾಗ ಮೋರೆಹ್‌ನಿಂದ ತಪ್ಪಿಸಿಕೊಳ್ಳುವ ಅದೃಷ್ಟ ಇರಲಿಲ್ಲ.

ಮೇ 3, 2023 ಅವರ ಅದೃಷ್ಟದ ದಿನ. 400ಕ್ಕೂ ಹೆಚ್ಚು ಮೈತೇಯಿಗಳು ನೆರೆಯ ಮ್ಯಾನ್ಮಾರ್‌ಗೆ ತಪ್ಪಿಸಿಕೊಂಡು ಓಡಿಹೋಗಲು ನಿರ್ಧರಿಸಿದ್ದರು. ಅವರಿಗೆ ಅದೊಂದು ಅಗ್ನಿಪರೀಕ್ಷೆಯಾಗಿತ್ತು.

ಇಂಡೋ-ಮ್ಯಾನ್ಮಾರ್ ಗಡಿಯಿಂದ ಸುಮಾರು 212 ಮೈತೇಯಿ ಜನರನ್ನು ಭಾರತೀಯ ಸಶಸ್ತ್ರ ಪಡೆಗಳು ಇತ್ತೀಚೆಗೆ ಸ್ವದೇಶಕ್ಕೆ ಮರಳಿ ಕರೆತಂದವು. ಈಗ ನೆಲೆ ಕಳೆದುಕೊಂಡಿರುವ ಇವರನ್ನು ಸದ್ಯ ಮೋರೆಹ್‌ನಲ್ಲಿರುವ ಅಸ್ಸಾಂ ರೈಫಲ್ಸ್ ಶಿಬಿರದಲ್ಲಿ ಇರಿಸಲಾಗಿದೆ.

ಮಣಿಪುರ ಹಿಂಸಾಚಾರದ ನಂತರದ ಪರಿಣಾಮಗಳನ್ನು ಅಲ್ಲಿಂದಲೇ ವರದಿ ಮಾಡುತ್ತಿರುವ Eedina.com ಮ್ಯಾನ್ಮಾರ್‌ನಿಂದ ಅವರನ್ನು ಕರೆತಂದ ಕೆಲವೇ ದಿನಗಳಲ್ಲಿ ಕೆಲವು ಮೈತೇಯಿ ಕುಟುಂಬಗಳನ್ನು ಭೇಟಿ ಮಾಡಿದೆ.

ಪಪ್ಪಿ ಎಂಬ ಎರಡು ವರ್ಷದ ಲ್ಯಾಬ್ರಡಾರ್ ನಾಯಿಯನ್ನು ಒಳಗೊಂಡಂತೆ ತನ್ನ ಕುಟುಂಬ ಎದುರಿಸಿದ ಭಯಾನಕತೆ ಪರಿಸ್ಥಿತಿಯನ್ನು ವಿವರಿಸುತ್ತಾ ಅಂಗಡಿ ಮಾಲಕ 33 ವರ್ಷದ ಸುರೇಶ್ ಪೌನಮ್ “ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಾಗ ಮೈತೇಯಿಗಳಿಗೆ ಮೋರೆಹ್‌ ತೊರೆಯುವಂತೆ ಒತ್ತಾಯಿಸಲಾಯಿತು,” ಎಂದು ಹೇಳಿದರು.

3 4
ಸುರೇಶ್ ಪೌನ ತನ್ನ ನಾಯಿ ಜೊತೆ

ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧದಿಂದಾಗಿ ಮಣಿಪುರದಿಂದ ವಲಸೆ ಹೋದ ಕುಟುಂಬಗಳಿಗೆ ಆಘಾತಗಳು ಇನ್ನೂ ಹೆಚ್ಚಾದವು ಎಂದು ಅವರು ಹೇಳಿದರು. ಆದರೆ ಅವರು ಬರ್ಮಾ ದೇಶಕ್ಕೆ ತಪ್ಪಿಸಿಕೊಂಡು ಓಡುವುದು ಅನಿವಾರ್ಯವಾಗಿತ್ತು.

“ಮೇ 3 ರಂದು ಸಂಜೆ 4.30 ರ ಸುಮಾರಿಗೆ, ಜನರು ದೊಡ್ಡ ದೊಡ್ಡ ಗುಂಪುಗಳಾಗಿ ಮೈತೇಯಿಗಳ ಮನೆಗಳ ಮೇಲೆ ಗುಂಡು ಹಾರಿಸುತ್ತಾ ಬೆಂಕಿ ಕೊಡಲು ಆರಂಭಿಸಿದವು. ಗಡಿ ದಾಟಿ ಪಲಾಯನ ಮಾಡುವುದನ್ನು ಬಿಟ್ಟು ನಮಗೆ ಬೇರೆ ಯಾವ ದಾರಿಯೂ ಇರಲಿಲ್ಲ. ನನ್ನ ಮೊದಲ ಆದ್ಯತೆ ಅನಾರೋಗ್ಯ ಪೀಡಿತ ತಾಯಿ ಮತ್ತು ಸೊಸೆಯಂದಿರು ಹಾಗೂ ಸೋದರಳಿಯರ ಜೋಪಾನ ಮಾಡುವುದಾಗಿತ್ತು. ಪುಣ್ಯಕ್ಕೆ ನನ್ನ ಮನೆ ಗಡಿಯಿಂದ ಕೆಲವೇ ಮೀಟರ್ ದೂರದಲ್ಲಿದೆ. ಗಡಿ ದಾಟಿದ ನಂತರ ನಾವು ಕೆಲವು ನೇಪಾಳಿಗಳು ಮತ್ತು ಬರ್ಮಾದವರನ್ನು ಭೇಟಿಯಾದೆವು. ಅವರು ಕೃಷ್ಣನ ದೇವಾಲಯದಲ್ಲಿ ನಮಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. ಆದರೆ ನಾವು ಅಲ್ಲಿ ಉಳಿಯುವುದು ಸುರಕ್ಷಿತ ಅಲ್ಲವೆಂದು ತಿಳಿದು ಸ್ವಲ್ಪ ಸಮಯದ ನಂತರ ಅಲ್ಲಿಂದ ತೆರಳಿದೆವು. ನಿರಂತರವಾಗಿ ಗುಂಡಿನ ದಾಳಿ ಮತ್ತು ಶೆಲ್ ದಾಳಿ ನಡೆದಿದೆ. ನಾವು ಹತ್ತಿರದ ಬೌದ್ಧ ಮಠಕ್ಕೆ ಹೋಗುವುದೇ ಒಳ್ಳೆಯದು ಎಂದು ಸ್ಥಳೀಯರು ತಿಳಿಸಿದರು,” ಎಂದು ಅವರು ಹೇಳಿದರು.

ಆಶ್ರಮಕ್ಕೆ ಸ್ಥಳಾಂತರಗೊಂಡ ನಂತರವೂ ಮೈತೇಯಿಗಳು ಯುದ್ಧದ ಆಘಾತದಲ್ಲಿಯೇ ಇದ್ದರು. “ಮ್ಯಾನ್ಮಾರ್‌ನಲ್ಲೂ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ದಿನಸಿ ಸಾಮಾನುಗಳನ್ನು ಖರೀದಿಸಲು ಸಹ ನಮಗೆ ಹೊರಬರಲು ಅವಕಾಶವಿರಲಿಲ್ಲ. ಸ್ಥಳೀಯರಲ್ಲಿ ಯಾರಾದರೂ ಒಬ್ಬರು ಸದಾ ನಮ್ಮ ಜೊತೆಯಲ್ಲಿರುತ್ತಿದ್ದರು. ಅವರೇ ನಮ್ಮನ್ನು ಒಳಗೆ ಮತ್ತು ಹೊರಗೆ ಕರೆದುಕೊಂಡು ಹೋಗುತ್ತಿದ್ದರು. ನಾವು ನಮ್ಮ ಸಾವಿಗೆ ಹೆದರಿ ಅನೇಕ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇವೆ. ಇದೆಲ್ಲದರ ನಡುವೆ ವೈದ್ಯರಿಲ್ಲದ ಕಾರಣ ಅಸ್ವಸ್ಥರು ಮತ್ತು ಗರ್ಭಿಣಿಯರನ್ನೂ ನಾವು ನೋಡಿಕೊಳ್ಳಬೇಕಿತ್ತು. ಕೆಲವು ಮಹಿಳೆಯರು ಯಾವುದೇ ವೈದ್ಯಕೀಯ ನೆರವಿಲ್ಲದೆ ಮಠದಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವಂತೆ ಆಯ್ತು. ನಾವು ಮಣಿಪುರಕ್ಕೆ ಹಿಂತಿರುಗಲು ತುದಿಗಾಲಲ್ಲಿ ನಿಂತಿದ್ದೆವು. ಆದರೆ ನಾವು ಅಕ್ಷರಶಃ ಎರಡು ಕಡೆಯ ಬೆಂಕಿಯ ನಡುವೆ ಸಿಕ್ಕಿಹಾಕಿಕೊಂಡಿರುವುದರಿಂದ ಇದು ಸಾಧ್ಯವಾಗಲಿಲ್ಲ. ನಾವು ಮಣಿಪುರಕ್ಕೆ ಹಿಂತಿರುಗುತ್ತಿದ್ದೇವೆ ಎಂಬುದನ್ನು ತಿಳಿದಾಗ ನಿಜಕ್ಕೂ ಸಮಾಧಾನಪಟ್ಟಿದ್ದೆವು ಎಂದು ಸುರೇಶ್ ಹೇಳಿದರು.

ಅವರನ್ನು ಮರಳಿ ಅವರ ನೆಲೆಗೆ ಕರೆತರುವ ದಿನ ಮೈತೇಯಿ ಕುಟುಂಬಗಳು ಮಧ್ಯಾಹ್ನದ ವೇಳೆಗೆ ಭಾರತೀಯ ಸಶಸ್ತ್ರ ಪಡೆಗಳನ್ನು ಭೇಟಿಯಾಗಬೇಕಿದ್ದ ಅಂತಾರಾಷ್ಟ್ರೀಯ ಗಡಿಗೆ ಆಟೋಗಳಲ್ಲಿ ಬಂದರು.

“ಗಡಿಗೆ ಹೋಗುವ ದಾರಿಯಲ್ಲಿ ನಮಗೆ ಕೆಲವು ಉಗ್ರಗಾಮಿಗಳು ಸಿಕ್ಕರು. ನಮ್ಮ ಪುಣ್ಯಕ್ಕೆ ಅವರು ನಮ್ಮ ಮೇಲೆ ದಾಳಿ ಮಾಡಲಿಲ್ಲ. ನಾವು ನಮ್ಮ ಪರಿಸ್ಥಿತಿಯನ್ನು ವಿವರಿಸಿದ್ದರಿಂದ ನಮಗೆ ಹೋಗಲು ಅವಕಾಶ ಮಾಡಿಕೊಟ್ಟರು. ನಂತರ ನಾವು ಅಸ್ಸಾಂ ರೈಫಲ್ಸ್ ಸಿಬ್ಬಂದಿಯನ್ನು ಭೇಟಿಯಾದೆವು. ಅವರು ನಮ್ಮನ್ನು ಮೋರೆಹ್‌ನಲ್ಲಿರುವ ಈ ಪರಿಹಾರ ಶಿಬಿರಕ್ಕೆ ಕರೆತಂದರು.”

ಇವರು ಯಾವುದೇ ಅಡೆತಡೆಗಳಿಲ್ಲದೆ ಮೋರೆಹ್‌ಗೆ ಹಿಂತಿರುಗಿರಬಹುದು. ಆದರೆ ಅವರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಮೋರೆಹ್‌ನಲ್ಲಿ ಬಹುತೇಕ ಎಲ್ಲಾ ಮೈತೇಯಿಗಳ ಮನೆಗಳನ್ನು ಸುಟ್ಟು ಧ್ವಂಸಗೊಳಿಸಲಾಗಿದೆ ಅಸ್ಸಾಂ ರೈಫಲ್ಸ್ ಶಿಬಿರದಲ್ಲಿ ಉಳಿದುಕೊಳ್ಳದ ಹೊರತು ಅವರಲ್ಲಿ ಬೇರೆ ಯಾವುದೇ ಆಯ್ಕೆಯಿಲ್ಲ.

ಅಲ್ಲದೇ ರೋಗಿಗಳನ್ನು ನೋಡಿಕೊಳ್ಳಲು ಇಲ್ಲಿ ಯಾರೂ ಇಲ್ಲ. “ನನ್ನ ತಾಯಿ ಮಧುಮೇಹ ಮತ್ತು ಥೈರಾಯ್ಡ್ ಸಮಸ್ಯೆಗಳಿರುವ ಅಸ್ತಮಾ ರೋಗಿ. ಅವರು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ನನ್ನ ನೆರೆಮನೆಯವರಾದ ಮಣಿ ಸಿಂಗ್ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಕಿಮೋಥೆರಪಿ ಚಿಕಿತ್ಸೆಗಾಗಿ ಅವರು ಮುಂಬೈಗೆ ಹೋಗಬೇಕಾಗಿದೆ. ಹಾಗೆಯೇ, ವೈದ್ಯಕೀಯ ಸೇವೆಯ ಅಗತ್ಯವಿರುವ ಅನೇಕ ಜನರು ಇಲ್ಲಿದ್ದಾರೆ. ನಮಗೆ ಇಂಫಾಲ್‌ಗೆ ಹೋಗಲು ಅವಕಾಶ ನೀಡುವಂತೆ ಅಸ್ಸಾಂ ರೈಫಲ್ಸ್ ಸಿಬ್ಬಂದಿಗೆ ಮನವಿ ಮಾಡಿದ್ದೇವೆ. ಆದರೆ ತೆಂಗನೌಪಾಲ್‌ನಲ್ಲಿ ಕುಕಿ ಮಹಿಳೆಯರು ರಸ್ತೆ ತಡೆ ಮಾಡಿರುವುದರಿಂದ ಇದು ಅಸಾಧ್ಯ,” ಎಂದು ಅವರು ಹೇಳಿದರು.

ನಮಗೆ ಪ್ರತೀಕಾರ ಬೇಡ, ಶಾಂತಿ ಬೇಕು!

ಮೊರೆಹ್‌ನ ಶಿಕ್ಷಕಿ ಪ್ರೇಮ್‌ಜಿತಾ ಮೈತೇಯಿ ಮತ್ತು ಕುಕಿ ಜನರು ಸಾಮರಸ್ಯದಿಂದ ಮತ್ತೆ ಬದುಕು ಕಟ್ಟಿಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ.

DSC03334 13
ಶಿಕ್ಷಕಿ ಪ್ರೇಮ್‌ಜಿತಾ

“ನಾವು ಅನುಭವಿಸಿದ ನೋವಿನಿಂದ ಚೇತರಿಸಿಕೊಳ್ಳಲು ನಮಗೆ ತುಂಬಾ ಸಮಯ ಬೇಕು. ಆದರೆ ನಾವು ಕುಕಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಅಥವಾ ಅವರಿಗೆ ಯಾವುದೇ ಹಾನಿಯನ್ನುಂಟುಮಾಡಲು ಹೋಗುವುದಿಲ್ಲ. ಮೊರೆಹ್‌ಗೆ ಹಿಂತಿರುಗಿ ನಮ್ಮ ಕುಕಿ ಸ್ನೇಹಿತರ ಜೊತೆಗೆ ಮೊದಲಿನಂತೆಯೇ ಶಾಂತಿಯುತವಾಗಿ ಬದುಕಲು ನಾವು ಬಯಸುತ್ತೇವೆ. ನಮ್ಮ ಮನೆಗಳು ಸಂಪೂರ್ಣ ಹಾಳಾಗಿರುವುದು ಸತ್ಯ. ಆದರೆ ನಮಗೆ ಹೋಗಲು ಬೇರೆ ಯಾವ ಸ್ಥಳವೂ ಇಲ್ಲ. ನಾವು ಮೋರೆಹ್‌ನಲ್ಲಿ ಜನಿಸಿದ್ದೇವೆ – ಅದೇ ನಮ್ಮ ಮನೆ” ಎಂದು ಅವರು ಹೇಳಿದರು.

ಪ್ರೇಮ್‌ಜಿತಾ ತಮ್ಮ ಕುಟುಂಬದ 13 ಸದಸ್ಯರೊಂದಿಗೆ ಸ್ವಲ್ಪ ಹಣದೊಂದಿಗೆ ಮ್ಯಾನ್ಮಾರ್‌ಗೆ ಪಲಾಯನ ಮಾಡಿದ್ದರು. “ಈಗ ನಮ್ಮ ಹೆಸರಿನಲ್ಲಿ ಏನೂ ಇಲ್ಲ. ನಾವು ಎಲ್ಲಾ ಹಣವನ್ನು ಬಳಸಿದ್ದೇವೆ. ಮಹಿಳೆಯರು ತಪ್ಪಿಸಿಕೊಂಡು ಬರುವಾಗ ತಮ್ಮಲ್ಲಿದ್ದ ಸಣ್ಣಪುಟ್ಟ ಒಡವೆಗಳನ್ನೂ ಮಾರಿದ್ದಾರೆ. ಭವಿಷ್ಯದ ಬಗ್ಗೆ ಯೋಚಿಸುವಾಗ ನನಗೆ ಭಯವಾಗುತ್ತದೆ” ಎಂದು ಅವರು ಹೇಳಿದರು.

ಮ್ಯಾನ್ಮಾರ್‌ನಿಂದ ಹಿಂತಿರುಗುವಾಗ ಕುಕಿ ಜನರು ಅವರನ್ನು ತಡೆಯುತ್ತಾರೆ ಎಂದು ಮೈತೇಯಿ ಕುಟುಂಬಗಳು ಆತಂಕಕ್ಕೊಳಗಾಗಿದ್ದವು ಎಂದು ಅವರು ಹೇಳಿದರು. “ಬೆಂಗಾವಲು ಪಡೆಗಳು ಮೋರೆಹ್ ಪಟ್ಟಣದ ಬೀದಿಗಳಲ್ಲಿ ಸಂಚರಿಸಬೇಕಾಗಿರುವುದರಿಂದ, ಅಲ್ಲಿ ಕುಕಿಗಳು ಮುಷ್ಕರ ಮಾಡುತ್ತಾರೆ ಎಂದು ನಾವೆಲ್ಲರೂ ತುಂಬಾ ಭಯಪಟ್ಟಿದ್ದೇವೆ. ಆದರೆ ಕರ್ಫ್ಯೂ ಇದ್ದ ಕಾರಣ ನಾವು ಸುರಕ್ಷಿತವಾಗಿ ಊರಿನಿಂದ ಹೊರಗೆ ಹೋಗಬಹುದು” ಎಂದರು.

ಮೋರೆಹ್‌ಗೆ ಹಿಂತಿರುಗುವ ನಿರ್ಧಾರ

ಈ ಪರಿಸ್ಥಿತಿಯನ್ನು ಆದಷ್ಟು ಬೇಗ ಪರಿಹರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಪ್ರಭಾವ ಬೀರಿದ ಮೈತೇಯಿ ಕೌನ್ಸಿಲ್ ಮೊರೆಹ್‌ನ ಅಧ್ಯಕ್ಷರಾದ ಎಂ ಥೋಬಿಯಾ “ ಈ ಕುಟುಂಬಗಳ ಒಂದೇ ಒಂದು ಬೇಡಿಕೆಯೆಂದರೆ ಅವರ ಮನೆಗಳನ್ನು ಮರುನಿರ್ಮಿಸಿ ಅವರು ಮತ್ತೆ ಮೋರೆಹ್‌ಗೆ ಹಿಂತಿರುಗುವಂತೆ ಮಾಡುವುದು,” ಎಂದು ಹೇಳಿದರು.

“ನಮಗೆ ಮೋರೆಹ್‌ನಿಂದ ಹೊರಗೆ ಭೂಮಿ ಅಥವಾ ಯಾವುದೇ ಆಸ್ತಿ ಇಲ್ಲ. ನಾವು ಮೋರೆಹ್‌ಗೆ ಹಿಂತಿರುಗಲು ನಿರ್ಧರಿಸಿದ್ದೇವೆ. ಮತ್ತೆ ಕುಕಿ ಸಮುದಾಯದ ಜನರೊಂದಿಗೆ ನಾವು ಸಾಮರಸ್ಯದಿಂದ ಬದುಕಬಹುದು ಎಂಬ ವಿಶ್ವಾಸ ನಮಗಿದೆ. ಆದರೂ ಸರ್ಕಾರಗಳು ಈ ಬಿಕ್ಕಟ್ಟನ್ನು ಕೊನೆಗೊಳಿಸಬೇಕು ಮತ್ತು ಮುಂದೆ ಇಂತಹ ಯಾವುದೇ ಕಲಹವಾಗದಂತೆ ನೋಡಿಕೊಳ್ಳಬೇಕು. ಸಮಸ್ಯೆ ಇರುವುದು ಮೈತೇಯಿ ಮತ್ತು ಸ್ಥಳೀಯ ಕುಕಿಗಳ ನಡುವೆ ಅಲ್ಲ. ಬಾಹ್ಯ ಶಕ್ತಿಗಳು ಇದರಲ್ಲಿ ಆಟವಾಡುತ್ತಿವೆ ಎಂಬುದು ಎಲ್ಲರಿಗೂ ತಿಳಿದಿದೆ,” ಎಂದು ಅವರು ಹೇಳಿದರು.

ಇದನ್ನು ಓದಿ ʼಈ ದಿನʼ ವಿಶೇಷ ಸಂದರ್ಶನ ಭಾಗ-1 | ‘ಮಣಿಪುರವನ್ನು ಒಡೆದರೆ, ನಾವು ಭಾರತವನ್ನೇ ಒಡೆಯುತ್ತೇವೆ’- ತೌನೋಜಮ್ ಬೃಂದಾ

ಅಶ್ವಿನಿ 2
ಅಶ್ವಿನಿ ವೈ ಎಸ್‌
+ posts

ಪತ್ರಕರ್ತೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಮೈತೇಯಿ ಮತ್ತು ಕುಕಿಗಳ ಮದ್ಯೆ ಆಳವಾದ ಕಂದಕ ನಿರ್ಮಿಸಿದ ಮನುವಾದಿಗಳಿಗೆ ದಿಕ್ಕಾರವಿರಲಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X