ಕೊನೆಗೂ ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಈ ವಾರಾಂತ್ಯಕ್ಕೆ 100 ಡಾಲರ್ ದಾಟಿ, ಒಂದು ಹಂತದಲ್ಲಿ 110 ಡಾಲರ್ ಕೂಡ ಮುಟ್ಟಿದೆ. ಇರಾನ್ ಮೇಲೆ ಅಮೆರಿಕೆ ದಾಳಿಯ ಮೊದಲು ಇದು ಕೇವಲ 69 ಡಾಲರ್ ಇತ್ತು ಎಂಬುದನ್ನು ಗಮನಿಸಿದರೆ, ಕೇವಲ ಒಂದು ವಾರದಲ್ಲಿ ಬೆಲೆ ಎಷ್ಟು ಭಯಾನಕವಾಗಿ ಏರಿದೆ ಎಂಬುದು ಅರ್ಥವಾಗುತ್ತದೆ. ನಿಜ ಹೇಳಬೇಕೆಂದರೆ, ಇರಾನ್ ತನ್ನ ‘ಹಾರ್ಮುಜ್’ ಸಮುದ್ರ ಮಾರ್ಗವನ್ನು ಬಂದ್ ಮಾಡಿದ್ದರಿಂದ ತೈಲಕ್ಕೆ ತಕ್ಷಣದ ಕೊರತೆಯೇನೂ ಆಗಿಲ್ಲ; ಆದರೆ ಮುಂದೆ ಕೊರತೆ ಆಗಬಹುದು ಎಂಬ ಗಾಬರಿಯೇ ಈ ಬೆಲೆ ಏರಿಕೆಗೆ ಕಾರಣ. 1973ರಲ್ಲಿನ ಬೆಲೆ ಏರಿಕೆಗೆ ಕಾರಣವೇ ಬೇರೆ ಇತ್ತು. ಆಗ ತೈಲ ಉತ್ಪಾದಿಸುತ್ತಿದ್ದ ದೇಶಗಳು ಬೇಕಂತಲೇ ಬೆಲೆಯನ್ನು ಹೆಚ್ಚಿಸಿದ್ದವು. ಹಾಗೆಯೇ 2008 ಮತ್ತು 2022ರಲ್ಲಿ ಆಗಿದ್ದ ಬೆಲೆ ಏರಿಕೆಗೂ ಈಗಿನ ಬೆಲೆ ಏರಿಕೆಗೂ ವ್ಯತ್ಯಾಸವಿದೆ.
ಪೂರೈಕೆ ವ್ಯತ್ಯಯವಾಗಿದ್ದರಿಂದ ಬೆಲೆ ಏರಿತ್ತು, ಆದರೆ ಅದು ಹಿಂದಿನ ಆ ಎರಡು ಸಂದರ್ಭಗಳಲ್ಲಿ ಬೆಲೆ ಏರಿಕೆ ಹೆಚ್ಚು ದಿನ ಇರಲಿಲ್ಲ. 2008ರಲ್ಲಿ ಚೀನಾದಲ್ಲಿ ಬೇಡಿಕೆ ಹೆಚ್ಚಾಗಿದ್ದು ಮತ್ತು ನೈಜೀರಿಯಾದಲ್ಲಿ ತಾತ್ಕಾಲಿಕವಾಗಿತ್ತು. 2022ರಲ್ಲಿ ಉಕ್ರೇನ್ ಯುದ್ಧದ ಕಾರಣ ರಷ್ಯಾದ ಮೇಲೆ ನಿರ್ಬಂಧ ಹೇರಿದ್ದರಿಂದ ಬೆಲೆ ಏರಿತ್ತು. ಆದರೆ ರಷ್ಯಾ ನಿರ್ಬಂಧಗಳ ನಡುವೆಯೂ ಹೇಗೋ ತನ್ನ ತೈಲವನ್ನು ಬಹುತೇಕ ಪೂರೈಸುತ್ತಾ ಬಂತು. ಹಾಗೆಯೇ ಅಮೆರಿಕದ ತೈಲವು ಯುರೋಪಿನ ಮಾರುಕಟ್ಟೆಗೆ ಹರಿದುಬಂತು. ಹಾಗಾಗಿ ಬೆಲೆ ಮತ್ತೆ ಇಳಿಯಿತು. ಆದರೆ ಈಗಿನ ಕಥೆ ಹಾಗಿಲ್ಲ. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯಕ್ಕೆ ಪ್ರತಿಯಾಗಿ ಇರಾನ್ ಈ ಕ್ರಮ ಅನುಸರಿಸಿದೆ. ಈ ಯುದ್ಧ ಎಲ್ಲಿಯವರೆಗೆ ಮುಂದುವರಿಯುತ್ತದೋ, ಅಲ್ಲಿಯವರೆಗೆ ಬೆಲೆ ಏರಿಕೆ ಇಳಿಯುವ ಸಾಧ್ಯತೆಗಳಿಲ್ಲ. ಯಾಕೆಂದರೆ, ಕೇವಲ ಇರಾನ್ ಮಾತ್ರವಲ್ಲದೆ ಇನ್ನೂ ಹತ್ತಾರು ದೇಶಗಳ ತೈಲ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತದೆ. ಇದರ ಪ್ರಮಾಣ ರಷ್ಯಾದ ಒಟ್ಟು ತೈಲ ಉತ್ಪಾದನೆಗಿಂತ ಎರಡರಷ್ಟಿದೆ. ಇತ್ತ ಡೊನಾಲ್ಡ್ ಟ್ರಂಪ್ ಅವರು ಬೆಲೆಯನ್ನು ತಹಬದಿಗೆ ತರುವ ಬದಲು, ಯುದ್ಧದ ಗುರಿ ಮುಟ್ಟಲು ಈ ಬೆಲೆ ಏರಿಕೆ ಒಂದು “ಸಣ್ಣ ಬೆಲೆ” ಎಂದು ಹೇಳಿ ಅದನ್ನು ಹಗುರವಾಗಿ ಕಂಡಿದ್ದಾರೆ.

ಪ್ರೊ. ಪ್ರಭಾತ್ ಪಟ್ನಾಯಕ್ (Prabhat Patnaik) ಅವರು ಭಾರತದ ಪ್ರಸಿದ್ಧ ಆರ್ಥಿಕ ತಜ್ಞ, ಚಿಂತಕ ಮತ್ತು ಲೇಖಕರಾಗಿದ್ದು, Jawaharlal Nehru University ನಲ್ಲಿ ದೀರ್ಘಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಮುಖ್ಯವಾಗಿ ಮಾರ್ಕ್ಸಿಸ್ಟ್ ಆರ್ಥಿಕ ಚಿಂತನೆ, ಜಾಗತೀಕರಣದ ಪರಿಣಾಮಗಳು ಮತ್ತು ಭಾರತದ ಆರ್ಥಿಕ ನೀತಿಗಳ ಕುರಿತು ವಿಶ್ಲೇಷಣೆ ಮಾಡುವುದರಿಂದ ಪ್ರಸಿದ್ಧರಾಗಿದ್ದಾರೆ. ಸಾಮಾನ್ಯ ಜನರ ಬದುಕಿನ ಮೇಲೆ ಆರ್ಥಿಕ ವ್ಯವಸ್ಥೆಗಳ ಪರಿಣಾಮವನ್ನು ತೀಕ್ಷ್ಣವಾಗಿ ವಿಮರ್ಶಿಸುವ ಅವರು, ಅನೇಕ ಪುಸ್ತಕಗಳು ಮತ್ತು ಲೇಖನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವ ಪ್ರಮುಖ ಚಿಂತಕರಲ್ಲಿ ಒಬ್ಬರಾಗಿದ್ದಾರೆ.
ಒಂದು ವೇಳೆ ಈ ತೈಲ ಬೆಲೆ ಏರಿಕೆ ಹೀಗೇ ಮುಂದುವರಿದರೆ, ಇಡೀ ಜಗತ್ತಿನ ಆರ್ಥಿಕತೆಯ ಮೇಲೆ ಇದರ ಪರಿಣಾಮ ತೀರಾ ತೀವ್ರವಾಗಿರುತ್ತದೆ. ಇದರಿಂದ ಕೇವಲ ಪೆಟ್ರೋಲ್-ಡೀಸೆಲ್ ಬೆಲೆಗಳು ಮಾತ್ರ ಹೆಚ್ಚುವುದಿಲ್ಲ. ಬದಲಿಗೆ ತೈಲವನ್ನೇ ಅವಲಂಬಿಸಿರುವ ಪ್ರತಿಯೊಂದು ವಸ್ತು ಮತ್ತು ಸೇವೆಗಳ ಬೆಲೆಗಳೂ ಏರುತ್ತವೆ. ಉದಾಹರಣೆಗೆ, ತೈಲ ಬೆಲೆ ಹೆಚ್ಚಾದರೆ ರಸಗೊಬ್ಬರದ ಬೆಲೆ ಏರುತ್ತದೆ. ಇದರಿಂದ ಕೃಷಿ ವೆಚ್ಚ ದುಬಾರಿಯಾಗುತ್ತದೆ. ಪರಿಣಾಮವಾಗಿ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರುತ್ತದೆ. ಇದರ ಜೊತೆಗೆ ಪ್ರತಿಯೊಂದು ವಸ್ತುವಿನ ಸಾಗಾಣಿಕೆ ವೆಚ್ಚವೂ ಹೆಚ್ಚುವುದರಿಂದ, ಹಣದುಬ್ಬರ ಇನ್ನಷ್ಟು ತೀವ್ರವಾಗುತ್ತದೆ. ಸಾಮಾನ್ಯ ಜನರ ಬದುಕು ಹೈರಾಣಾಗುತ್ತದೆ.
ಇದನ್ನೂ ಓದಿ:ಜಿಡಿಪಿ ಲೆಕ್ಕಾಚಾರದ ಎಡವಟ್ಟು: ಆರ್ಥಿಕತೆ ಮತ್ತು ನೀತಿಗಳ ಮೇಲೆ ಅದರ ಗಂಭೀರ ಪರಿಣಾಮ
ತೈಲ ಬೆಲೆ ಏರಿಕೆಯಿಂದ ವಿಪರೀತ ಲಾಭ ಮಾಡಿಕೊಳ್ಳುತ್ತಿರುವವರು. ಬಂದ ಹಣದಿಂದ ಏನನ್ನು ಖರೀದಿಸುವುದಿಲ್ಲ, ಬದಲಿಗೆ ಆ ಹಣವನ್ನು ಬ್ಯಾಂಕಿನಲ್ಲಿ ಇಡುತ್ತಾರೆ. ಆದರೆ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುವ ಸಾಮಾನ್ಯ ಜನರು ತಮ್ಮ ಖರ್ಚನ್ನು ಕಡಿತಗೊಳಿಸಬೇಕಾಗುತ್ತದೆ. ಇದರಿಂದ ಜಗತ್ತಿನಾದ್ಯಂತ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿ, ವ್ಯಾಪಾರ-ವಹಿವಾಟು ಕುಸಿದು ಜಾಗತಿಕ ಆರ್ಥಿಕತೆ ಕುಸಿತವನ್ನು (recession) ಅನುಭವಿಸುತ್ತದೆ. ನಾವು ಇಂದಿನ ತೈಲದ ಬೆಲೆ ಏರಿಕೆಯ ಒಂದು ನಿರ್ದಿಷ್ಟ ಲಕ್ಷಣವನ್ನು ಗಮನಿಸಬೇಕು. ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲದಿದ್ದಾಗ, ತೈಲ ಉತ್ಪಾದಕರು ಸಂಘಟಿತವಾಗಿ ನಿರ್ಧರಿಸಿ ತೈಲ ಬೆಲೆಯನ್ನು ಏರಿಸಿದ್ದರೆ ತೊಂದರೆಗೊಳಗಾದ ದೇಶಗಳು ವಿಸ್ತರಣಾ ಹಣಕಾಸು ಹಾಗೂ ವಿತ್ತೀಯ ನೀತಿಗಳನ್ನು ಅಳವಡಿಸಿಕೊಳ್ಳಬಹುದು (ಆದರೆ 1970ರ ದಶಕದ ಆರಂಭದಲ್ಲಿ ಸರ್ಕಾರಗಳು ಈ ರೀತಿ ಮಾಡಿರಲಿಲ್ಲ). ಆ ಮೂಲಕ ಆರ್ಥಿಕ ಕುಸಿತವನ್ನು ತಡೆಯಲು ಮತ್ತು ಒಟ್ಟು ಬೇಡಿಕೆಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸಬಹುದು. ಆದರೆ, ಪೂರೈಕೆಯ ಕೊರತೆಯಿಂದ ಬೆಲೆ ಏರಿಕೆಯುಂಟಾಗಿದ್ದರೆ, ಅಂತಹ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ಆರ್ಥಿಕ ಹಿಂಜರಿತವು ಅನಿವಾರ್ಯವಾಗುತ್ತದೆ. ಅಷ್ಟೇ ಅಲ್ಲ, ಅದು ಪೂರೈಕೆಯ ಕೊರತೆಯನ್ನು ಸರಿದೂಗಿಸುವುದಕ್ಕೆ ಒಂದು ಅನಿವಾರ್ಯ ಮಾರ್ಗವೂ ಆಗಿರುತ್ತದೆ (ಅನುವಾದಕರ ಟಿಪ್ಪಣಿ: ಲಭ್ಯವಿರುವ ಕಡಿಮೆ ಪೂರೈಕೆಗೆ ಅನುಗುಣವಾಗಿ ಬೇಡಿಕೆಯನ್ನು ಕಡಿಮೆ ಮಾಡಲು ಆರ್ಥಿಕತೆ ಮಂದಗತಿಯಲ್ಲಿ ಸಾಗಬೇಕಾಗುತ್ತದೆ.) ಹೀಗಾಗಿ, ತೈಲ ಬೆಲೆಯಲ್ಲಿನ ನಿರಂತರ ಏರಿಕೆಯು ಜಾಗತಿಕ ಆರ್ಥಿಕತೆಯಲ್ಲಿ ಅನಿವಾರ್ಯವಾಗಿ ‘ಹಣದುಬ್ಬರದ ಜೊತೆಗೆ ಆರ್ಥಿಕ ಹಿಂಜರಿತಕ್ಕೂ ಕಾರಣವಾಗುತ್ತದೆ.
ತೈಲ ಬೆಲೆ ಏರಿಕೆಯಿಂದಾಗಿ ತೈಲವನ್ನು ಆಮದು ಮಾಡಿಕೊಳ್ಳುವ ಎಲ್ಲಾ ದೇಶಗಳ ಚಾಲ್ತಿ ಖಾತೆಯ ಕೊರತೆ (ರಫಿಗಿಂತ ಆಮದು ಹೆಚ್ಚಾದಾಗ ಉಂಟಾಗುವ ಅರ್ಥಿಕ ಆಸಮತೋಲನ.) ಹೆಚ್ಚಾಗುತ್ತದೆ. ಈ ಹಿಂದಿನ ಚರ್ಚೆಯಲ್ಲಿ ನಾವು ಒಂದು ವಿಷಯವನ್ನು ಗಮನಿಸಿರಲಿಲ್ಲ. ಆದೆಂದರೆ, ಈ ಹೆಚ್ಚುವರಿ ಕೊರತೆಯನ್ನು ಸರಿದೂಗಿಸಲು ಹಣಕಾಸಿನ ನೆರವು ಸುಲಭವಾಗಿ ಸಿಗುತ್ತದೆ ಎಂದು ನಾವು ಭಾವಿಸಿದ್ದೆವು. ಉದಾಹರಣೆಗೆ, ತೈಲ ರಫ್ತು ಮಾಡುವ ದೇಶಗಳು ಬ್ಯಾಂಕುಗಳಲ್ಲಿ ಇಡುವ ಹೆಚ್ಚಿನ ಹಣವನ್ನು, ಅದೇ ಬ್ಯಾಂಕುಗಳು ತೈಲ ಆಮದು ಮಾಡಿಕೊಳ್ಳುವ ದೇಶಗಳಿಗೆ ಸಾಲವಾಗಿ ನೀಡಿ ಅವರ ಕೊರತೆಯನ್ನು ನೀಗಿಸುತ್ತವೆ ಎಂದು ಭಾವಿಸಿದ್ದೆವು.
ಆದರೆ, ಜಗತ್ತಿನ ಉತ್ತರದ ಶ್ರೀಮಂತ ದೇಶಗಳಿಗೆ ಹೋಲಿಸಿದರೆ, ಜಗತ್ತಿನ ದಕ್ಷಿಣದ ಬಡ ಅಥವಾ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅಂತರರಾಷ್ಟ್ರೀಯ ಬ್ಯಾಂಕುಗಳ ಸಾಲ ನೀಡಲು ಹಿಂಜರಿಯುತ್ತವೆ. ಈ ಕಾರಣದಿಂದಾಗಿ ಆ ದೇಶಗಳಿಗೆ ತಮ್ಮ ಹೆಚ್ಚುತ್ತಿರುವ ಆರ್ಥಿಕ ಕೊರತೆಯನ್ನು ಸರಿದೂಗಿಸಲು ಸಾಲ ಪಡೆಯುವುದು ಕಷ್ಟವಾಗುತ್ತದೆ. ಇದರ ಪರಿಣಾಮವಾಗಿ ಆ ದೇಶಗಳ ಹಣದ ಮೌಲ್ಯ ಕುಸಿಯಲಾರಂಭಿಸುತ್ತದೆ. ಅಷ್ಟೇ ಅಲ್ಲದೆ, ಅತ್ಯಂತ ಕಠಿಣವಾದ ಕಟ್ಟುನಿಟ್ಟಿನ ಆರ್ಥಿಕ ಷರತ್ತುಗಳಿಗೆ ಒಪ್ಪಿಕೊಂಡು ವಿದೇಶಿ ಸಾಲ ಪಡೆಯಬೇಕಾಗುತ್ತದೆ. ಅಥವಾ ತಮ್ಮಲ್ಲಿರುವ ಖನಿಜ ಸಂಪನ್ಮೂಲಗಳನ್ನು ವಿದೇಶಿ ಸಾಲದಾತರಿಗೆ ಅಡಮಾನವಿಟ್ಟು ಸಾಲ ಪಡೆಯಬೇಕಾಗುತ್ತದೆ. ಇಂತಹ ದೇಶಗಳಲ್ಲಿ ಹಣದುಬ್ಬರವು ಅತ್ಯಂತ ತೀವ್ರವಾಗಿರುತ್ತದೆ. ಇದಕ್ಕೆ ತೈಲ ಬೆಲೆ ಏರಿಕೆಯಷ್ಟೇ ಕಾರಣವಲ್ಲ. ಹಣದ ಮೌಲ್ಯದ ಕುಸಿತದಿಂದ ಆಮದು ಮಾಡಿಕೊಳ್ಳುವ ಪ್ರತಿಯೊಂದು ವಸ್ತುವಿನ ಬೆಲೆಗಳೂ ಹೆಚ್ಚಾಗಿರುತ್ತದೆ. ಇದು ಕೂಡ ಹಣದುಬ್ಬರಕ್ಕೆ ಕಾರಣವಾಗಿರುತ್ತದೆ.”

ಅದೇ ರೀತಿ, ಈ ದೇಶಗಳಲ್ಲಿ ಆರ್ಥಿಕ ಹಿಂಜರಿತವು ಅತ್ಯಂತ ತೀವ್ರವಾಗಿರುತ್ತದೆ. ಇದಕ್ಕೆ ಹಣದುಬ್ಬರದಿಂದಾಗಿ ಸರಕು ಮತ್ತು ಸೇವೆಗಳಿಗೆ ಸ್ಥಳೀಯ ಜನರ ಬೇಡಿಕೆ ಕಡಿಮೆಯಾಗುವುದು ಕೇವಲ ಒಂದು ಕಾರಣ. ವಿದೇಶಿ ಸಾಲದಾತರು ಹೇರುವ ‘ಕಟ್ಟುನಿಟ್ಟಿನ ಆರ್ಥಿಕ ಮಿತಿಗಳು (Austerity Measures) ಕೂಡ ಆರ್ಥಿಕ ಹಿಂಜರಿತಕ್ಕೆ ಕಾರಣ. ಇದರ ನೇರ ಪರಿಣಾಮ ಅಂದರೆ ದೇಶಗಳ ಜನರ ಸಂಕಷ್ಟಗಳು ಇನ್ನಷ್ಟು ತೀವ್ರಗೊಳ್ಳುತ್ತವೆ. ಆದ್ದರಿಂದ, ಈ ಅನೈತಿಕ ಮತ್ತು ಅಕ್ರಮ ಯುದ್ಧವನ್ನು ನಿಲ್ಲಿಸುವಂತೆ ಅಮೆರಿಕದ ಮೇಲೆ ಈ ದೇಶಗಳು ಜರೂರಾಗಿ ಒತ್ತಡ ಹೇರಬೇಕು.
ಜಾಗತಿಕ ತೈಲ ಬೆಲೆಗಳ ಸತತ ಏರಿಕೆಯಿಂದ ಭಾರತಕ್ಕೆ ತೀವ್ರವಾಗಿ ತೊಂದರೆಯಾಗುತ್ತದೆ. ಹಾರ್ಮುಜ್ ಜಲಸಂಧಿಯ ಮೂಲಕ ಹಾದು ಬರುವ ಸುಮಾರು ಶೇಕಡ 84 ಪ್ರತಿಶತದಷ್ಟು ಕಚ್ಚಾ ತೈಲವು ಚೀನಾ, ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ಏಷ್ಯಾದ ದೇಶಗಳಿಗೆ ಸರಬರಾಜಾಗುತ್ತದೆ. ಆದ್ದರಿಂದ ಈ ಜಲಸಂಧಿ ಮುಚ್ಚಲ್ಪಟ್ಟರೆ, ಜಾಗತಿಕ ತೈಲ ಬೆಲೆ ಮತ್ತು ವಿದೇಶಿ ವಿನಿಮಯ ದರಗಳ ಮೇಲಾಗುವ ಪರಿಣಾಮದ ಜೊತೆಗೆ. ಈ ದೇಶಗಳ ತೈಲ ಪೂರೈಕೆಯ ಲಭ್ಯತೆಯ ಮೇಲೂ ನೇರ ಪರಿಣಾಮ ಬೀರುತ್ತದೆ. ಪ್ರಮುಖವಾಗಿ ಭಾರತಕ್ಕೂ ಹೊಡೆತ ಬೀಳುತ್ತದೆ.

ತೈಲ ಬೆಲೆ ಏರಿಕೆಯ ಪ್ರಭಾವವನ್ನು ತಪ್ಪಿಸಲು ಡೊನಾಲ್ಡ್ ಟ್ರಂಪ್ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಭಾರತಕ್ಕೆ ಸ್ವಲ್ಪ ಸಮಯದವರೆಗೆ ‘ಅನುಮತಿ’ ನೀಡಿದ್ದಾರೆ. (ನಮ್ಮ ಸ್ವಾತಂತ್ರ್ಯ ಬಂದು ಎಂಟು ದಶಕಗಳಾಗುತ್ತಾ ಬಂದರೂ, ನಮಗೆ ಬೇಕಾದ ದೇಶದಿಂದ ತೈಲ ಆಮದು ಮಾಡಿಕೊಳ್ಳಲು ನಾವು ಇನ್ನೂ ಒಂದು ವಸಾಹತಿನಂತೆ ‘ಅನುಮತಿ’ ಪಡೆಯಬೇಕಾಗಿರುವುದು ನಮ್ಮ ವಸಾಹತುಶಾಹಿ ವಿರೋಧಿ ಹೋರಾಟಕ್ಕೆ ಮಾಡಿದ ಅವಮಾನವಾಗಿದೆ; ಮತ್ತು ಟ್ರಂಪ್‌ಗೆ ಸರಿಯಾದ ಉತ್ತರ ನೀಡುವ ಬದಲು ಅಂತಹ ‘ಅನುಮತಿ’ಯನ್ನು ವಿನಮ್ರವಾಗಿ ಒಪ್ಪಿಕೊಳ್ಳುವ ಸರ್ಕಾರ ನಮ್ಮಲ್ಲಿರುವುದು ಒಂದು ದುರಂತವಾಗಿದೆ).
ಆದರೆ ಈ ‘ಅನುಮತಿ’ ಕೂಡ ಕೇವಲ ಒಂದು ತಿಂಗಳ ಅಲ್ಪಾವಧಿಗೆ ಮಾತ್ರ, ಅದರ ನಂತರ ಮೇಲೆ ಗಮನಿಸಿದ ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಭಾರತವು ಅಮೆರಿಕ ಮತ್ತು ಇಸ್ರೇಲ್ ಆಕ್ರಮಣವನ್ನು ಪ್ರತಿಭಟಿಸದೇ ಸುಮ್ಮನಿರುವುದು ಅತ್ಯಂತ ಆತ್ಮಹತ್ಯಾತ್ಮಕ ನಿರ್ಧಾರವಾಗುತ್ತದೆ.
ಇರಾನ್ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿ ತೈಲ ಬೆಲೆ ಏರಿಸುವುದರ ಹಿಂದಿನ ನಿಜವಾದ ಉದ್ದೇಶ ಜಾಗತಿಕ ದಕ್ಷಣದ ದೇಶಗಳಲ್ಲಿ ಈ ಯುದ್ಧಕ್ಕೆ ವಿರೋಧವನ್ನು ಮೂಡಿಸುವುದು. ಈ ಯುದ್ಧ ಕೇವಲ ಇರಾನ್ ವಿರುದ್ಧ ಅಲ್ಲ, ಇದು ದಕ್ಷಿಣದ ದೇಶಗಳ ವಿರುದ್ಧವೂ ಹೌದು. ಇದರಿಂದ ಈ ದೇಶಗಳಿಗೆ ತುಂಬಾ ತೊಂದರೆಯಾಗುತ್ತದೆ ಎಂದು ಜಗತ್ತಿನ ಬಡ ರಾಷ್ಟ್ರಗಳಿಗೆ ಅರ್ಥ ಮಾಡಿಸೋಕೆ ಇರಾನ್ ಹೀಗೆ ಮಾಡ್ತಿದೆ. ಹಾಗಾಗಿ ನಾವೆಲ್ಲಾ ಸುಮ್ಮನೆ ಇರಬಾರದು ಎಂಬುದನ್ನು ಮನವರಿಕೆ ಮಾಡಿಕೊಡೋಕೆ ಪ್ರಯತ್ನಿಸುತ್ತಿದೆ. ಅವರ ಪ್ಲಾನ್. ಇರಾನ್ ಮಿಲಿಟರಿ ಕಮಾಂಡರ್‌ಗಳ ಲೆಕ್ಕಾಚಾರದ ಪ್ರಕಾರ, ತೈಲ ಬೆಲೆ ಒಂದು ಬ್ಯಾರೆಲ್‌ಗೆ ಬರೋಬ್ಬರಿ 5200 ಡಾಲರ್ ದಾಟಬಹುದು. ಅದು ಜಗತ್ತಿನ ಜನರ ಬದುಕನ್ನೇ ತೀವ್ರವಾಗಿ ಘಾಸಿಗೊಳಿಸುತ್ತದೆ. ಹಾಗಾಗಿ ಅವರೆಲ್ಲಾ ತಕ್ಷಣ ಈ ಸಾಮ್ರಾಜ್ಯಶಾಹಿ ಆಕ್ರಮಣದ ವಿರುದ್ಧ ಧ್ವನಿ ಎತ್ತಲೇಬೇಕು.
ಈಗ ಸುಮ್ಮನೆ ಇರುವುದರ ಪರಿಣಾಮ ಮುಂದೆ ತುಂಬಾ ದುಬಾರಿಯಾಗಬಹುದು. ಡೊನಾಲ್ಡ್ ಟ್ರಂಪ್ ತಾನು ಪ್ರಾರಂಭಿಸಿದ ಈ ಯುದ್ಧದಿಂದ ಅಮೆರಿಕೆಯ ಆರ್ಥಿಕತೆಯಲ್ಲಿ ಹಣದುಬ್ಬರದ ಜೊತೆಗೆ ಆರ್ಥಿಕ ಹಿಂಜರಿತ ತೀವ್ರಗೊಂಡು ಅದರ ಪರಿಣಾಮವಾಗಿ ಹುಟ್ಟಿಕೊಂಡ ಜನರ ತೀವ್ರ ಸಿಟ್ಟನ್ನು ಎದುರಿಸಬೇಕಾಗಿ ಬಂದಾಗ, ಈ ಯುದ್ಧವನ್ನ ಬೇಗ ಮುಗಿಸೋಕೆ ಇರಾನ್ ಮೇಲೆ ಸಣ್ಣ ಪ್ರಮಾಣದ ‘ಅಣುಬಾಂಬ್’ ಹಾಕೋ ಸಾಹಸಕ್ಕೂ ಕೈ ಹಾಕಬಹುದು! ನೆನಪಿಡಿ, ಜಗತ್ತಿನಲ್ಲಿ ಬೇರೆ ದೇಶದ ಮೇಲೆ ಅಣುಬಾಂಬ್ ಹಾಕಿರೋ ಏಕೈಕ ದೇಶ ಅಂದ್ರೆ ಅದು ಅಮೆರಿಕಾ. ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜೇಮ್ಸ್ ಗಾಲ್ ಬ್ರೆತ್ ಹೇಳೋ ಪ್ರಕಾರ, ಈ ಹಿಂದೆಯೂ ಅಮೆರಿಕಾ ಮೂರು ಬಾರಿ ಇಂತಹ ಅನಾಹುತ ಮಾಡೋಕೆ ಹೋಗಿ ಒಳಗಿನವರ ಸಲಹೆಯಿಂದ ಹಿಂದೆ ಸರಿದಿತ್ತು. “ಇಡೀ ಜಗತ್ತು ಅಮೆರಿಕಾ ಸರ್ಕಾರವನ್ನು ಎದುರು ನಿಂತು, ಅದು ಪ್ರಾರಂಭಿಸಿರುವ ಈ ಯುದ್ಧವನ್ನು ನಿಸ್ಸಂದಿಗ್ಧವಾಗಿ ವಿರೋಧಿಸದಿದ್ದರೆ ಮತ್ತು ಅಂತರರಾಷ್ಟ್ರೀಯ ಕಾನೂನುಗಳ ಬಗ್ಗೆ ಅಮೆರಿಕಾಕ್ಕಿರುವ ತಾತ್ಸಾರ ಮನೋಭಾವವನ್ನು ಖಂಡಿಸದಿದ್ದರೆ, ಆ ಭಯಾನಕ ಹೆಜ್ಜೆಯನ್ನು (ಅಣುಬಾಂಬ್ ಬಳಕೆ) ಅಮೆರಿಕಾ ಮತ್ತೊಮ್ಮೆ ಇಡುವ ಸಾಧ್ಯತೆ ನಿಜವಾಗಿಯೂ ಎದುರಾಗಬಹುದು.
ಕೃಪೆ: ಪೀಪಲ್ ಡೆಮಾಕ್ರೆಸಿ ಪತ್ರಿಕೆಯಿಂದ ತೆಗೆದುಕೊಳ್ಳಲಾಗಿದೆ.

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.





