ದೇವಾ: ಸಂಗೀತ ಲೋಕದ ‘ತೇನಿಸೈ ತೆಂಡ್ರಲ್’

Date:

ಅಪಾರ ಶ್ರಮ, ನಿರಂತರ ಅಧ್ಯಯನ ಹಾಗೂ ಸತತ ಪ್ರಯತ್ನಗಳಿಂದ ಸಂಗೀತ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿ, ಭಾರಿ ಜನಪ್ರಿಯತೆ ಗಳಿಸಿದರೂ ಸದಾ ವಿನಯ ಮತ್ತು ಸರಳತೆ ದೇವಾ ಅವರಲ್ಲಿ ಎದ್ದು ಕಾಣುತ್ತಿತ್ತು. ಇಂತಹ ಮೇರು ವ್ಯಕ್ತಿತ್ವದ ದೇವಾ ತಮ್ಮ ಅಪೂರ್ವವಾದ ಹಾಡುಪಾಡು ಮತ್ತು ಸಂಗೀತಸುಧೆಯ ಮೂಲಕ ಚಿತ್ರರಸಿಕರ ಮನದಲ್ಲಿ ಸದಾ ಜೀವಂತವಾಗಿರುತ್ತಾರೆ.

ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ‘ತೇನಿಸೈ ತೆಂಡ್ರಲ್’ ಎಂದೇ ಅಪಾರ ಜನಪ್ರಿಯತೆ ಗಳಿಸಿರುವ ಪ್ರಸಿದ್ಧ ಸಂಗೀತ ನಿರ್ದೇಶಕ ಹಾಗೂ ಗಾಯಕ ದೇವಾ ತಮ್ಮ 75ನೆಯ(20 ನವೆಂಬರ್ 1950- 17 ಅಕ್ಟೋಬರ್ 2026) ವಯಸ್ಸಿನಲ್ಲಿ ನಿಧನರಾದರು. ತಮಿಳು, ಕನ್ನಡ, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಸುಮಾರು 400 ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದ ಇವರ ಅಗಲಿಕೆ ಭಾರತೀಯ ಚಿತ್ರರಂಗ ಮತ್ತು ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವೇ ಸರಿ. ದೇವಾ ನಾಲ್ಕು ದಶಕಗಳ ಕಾಲ ಸಂಗೀತಲೋಕದಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿ, ಪ್ರೇಕ್ಷಕರನ್ನು ರಂಜಿಸಿ ಜನಮನ್ನಣೆ ಪಡೆದರು. ಕನ್ನಡ ಸಿನಿಮಾರಂಗದ ದಿಗಂತವನ್ನೂ ವಿಸ್ತರಿಸಿರುವ ದೇವಾ ಅವರ ಸಾಧನೆಯನ್ನು ಸ್ಮರಿಸುವುದು ಸೂಕ್ತ.

- Advertisement -

ಬಾಲ್ಯ ಜೀವನ ಮತ್ತು ಸಿನಿಮಾಸಕ್ತಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಿರಳೆ ಪ್ರತಿಕೃತಿ ದಹನದ ನೆಪದಲ್ಲಿ ಯುವ ದನಿಯನ್ನು ಹತ್ತಿಕ್ಕುವ...

ದೆಹಲಿಯ ಪೀತಾಂಪುರದಲ್ಲಿ ಮಂಗಳವಾರ ನಡೆದ ದಸರಾ ಆಚರಣೆಯು ಈ ಬಾರಿ ಧಾರ್ಮಿಕ ಶ್ರದ್ಧೆಗಿಂತ ಹೆಚ್ಚಾಗಿ ಆಡಳಿತಾರೂಢ ಬಿಜೆಪಿ ಸರ್ಕಾರದ ಅಹಂಕಾರ ಮತ್ತು ಯುವಜನ ವಿರೋಧಿ ಮನಸ್ಥಿತಿಯ ನೇರ ಪ್ರದರ್ಶನವಾಗಿ ಮಾರ್ಪಟ್ಟಿತು. ರಾವಣ, ಕುಂಭಕರ್ಣ...

ಪಶ್ಚಿಮ ಪದವೀಧರರ ಕ್ಷೇತ್ರ: ಭದ್ರಕೋಟೆ ಮರುಹಿಡಿಯಲು ಕಾಂಗ್ರೆಸ್ ಯತ್ನ;...

ಪಶ್ಚಿಮ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣಾ ಕಾವು ಗರಿಗೆದರಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ವೇದಿಕೆ ಸಜ್ಜಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಪಶ್ಚಿಮ ಪದವೀಧರರ ಕ್ಷೇತ್ರವೀಗ ಬಿಜೆಪಿಯ...

ಮೀಸಲಾತಿ ಹೆಚ್ಚಳ ಮತ್ತು ನ್ಯಾಯಾಂಗದ ಮಿತಿ: ಸಾಮಾಜಿಕ ನ್ಯಾಯಕ್ಕೆ...

ಮೀಸಲಾತಿ ಬಯಸುವ ಜಾತಿಗಳೆಲ್ಲವೂ ಕೂಡ ವರ್ತಮಾನದ ಸಾಮಾಜಿಕ ಪರಿಸ್ಥಿತಿ ಮತ್ತು ಕಾನೂನು ನಿಯಮಗಳನ್ನು ಸಾಮಾಜಿಕ ನ್ಯಾಯದ ಬೆಳಕಿನಲ್ಲಿ ಅಂತಃಕರಣ ಪೂರ್ವಕವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾದಾಗ ಮಾತ್ರ ಸಾಮಾಜಿಕ ನ್ಯಾಯವೆಂಬ...

ಖ್ಯಾತ ಸಂಗೀತ ನಿರ್ದೇಶಕ ದೇವಾ(ಸಿ. ದೇವಾ) 20 ಜನವರಿ 1950 ಎಂ.ಸಿ. ಚೊಕ್ಕಲಿಂಗಂ ಮತ್ತು ಕೃಷ್ಣವೇಣಿ ದಂಪತಿಗಳ ಮಗನಾಗಿ ಚೈನ್ನೈನ ಮೈಲಾಪುರದಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ದೇವನೇಸನ್ ಚೊಕ್ಕಲಿಂಗಂ. ಚಿತ್ರರಂಗಕ್ಕೆ ಬರುವ ಮೊದಲು ತಮಿಳುನಾಡಿನ ಲೋಕೋಪಯೋಗಿ ಇಲಾಖೆ(ಪಿ.ಡಬ್ಲ್ಯೂ.ಡಿ.)ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮೇಲ್ ಮರುವತ್ತೂರ್ ಆಧಿಪರಾಶಕ್ತಿ ದೇವಿಯ ಪರಮ ಭಕ್ತರಾಗಿದ್ದ ಇವರು 1970ರ ದಶಕದಲ್ಲಿ ಮದ್ರಾಸ್ ದೂರದರ್ಶನ ಕೇಂದ್ರದಲ್ಲಿ ಕೀಬೋರ್ಡ್ ವಾದಕರಾಗಿದ್ದರು. ಆಗ ಚಂದ್ರಭೋಸ್ ಎಂಬ ಮತ್ತೊಬ್ಬ ಸಂಗೀತ ನಿರ್ದೇಶಕರ ಜೊತೆ ಸೇರಿ ನಾಟಕಗಳಿಗೆ ಮ್ಯೂಸಿಕ್ ಮಾಡುತ್ತಿದ್ದರು.

ಬಾಲ್ಯದಿಂದಲೂ ಸಂಗೀತದ ಬಗ್ಗೆ ಅತೀವ ಪ್ರೀತಿ ಮತ್ತು ಆಸಕ್ತಿಯಿದ್ದ ದೇವಾ ಅವರು 1986ರಲ್ಲಿ ಬಿಡುಗಡೆಯಾದ ‘ಮಾಟ್ಟುಕ್ಕಾರ ಮನ್ನಾರು’ ಸಿನಿಮಾದ ಮೂಲಕ ಪೂರ್ಣಪ್ರಮಾಣದ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಆನಂತರ 1989ರಲ್ಲಿ ಬಿಡುಗಡೆಯಾದ ‘ಮನಸುಕ್ಕೇತ್ತ ಮಹಾರಾಸ’ ಎಂಬ ಚಿತ್ರದ ಸಂಗೀತ ನಿರ್ದೇಶನವು ಇವರಿಗೆ ಹೆಸರನ್ನು ತಂದುಕೊಟ್ಟರೆ, ‘ವೈಗಾಸಿ ಪೊರಂಥಾಚು’ ಎಂಬ ಮತ್ತೊಂದು ಚಿತ್ರ ಇವರ ತಾರಾ ವರ್ಚಸ್ಸನ್ನು ಇಮ್ಮಡಿಗೊಳಿಸಿತು. ಹೀಗೆ ಹಂತ ಹಂತವಾಗಿ ದೇವಾ ತಮ್ಮ ವಿಭಿನ್ನ ಸಂಗೀತ ಸಂಯೋಜನೆಯ ಮೂಲಕ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿಯೇ ಅಪೂರ್ವ ಛಾಪು ಮೂಡಿಸಿದರು.

ಇದನ್ನು ಓದಿದ್ದೀರಾ?: ನೂರು ಸಾಮಿ: ಸ್ತ್ರೀವಾದಿ ಸಿನೆಮಾ ಅಧ್ಯಯನದ ದೃಷ್ಟಿಯಿಂದ ಚರ್ಚಾರ್ಹ ಚಿತ್ರ

ದೇವಾ ಅವರ ಸಂಗೀತ ಕ್ಷೇತ್ರದ ಸಾಧನೆಯಲ್ಲಿ ಸ್ವತಃ ತಮ್ಮ ಸಹೋದರರಾದ  ಸಭೇಶ್ ಮತ್ತು ಮುರಳಿ ಬೆನ್ನೆಲುಬಾಗಿದ್ದರು. ಮೊದಲಿಗೆ ತುಂಬಾ ವರ್ಷ ಇಳಯರಾಜ ಅವರ ಬಳಿ ವಾದ್ಯಗಾರರಾಗಿ ಕೆಲಸ ಮಾಡುತ್ತಿದ್ದ ಇವರಿಬ್ಬರು ಆನಂತರ ತನ್ನ ಅಣ್ಣನಿಗೆ ಸಹಾಯಕರಾಗಿ ಕೆಲಸ ಮಾಡಲಾರಂಭಿಸಿದರು.

ತಮಿಳು ಸಂಗೀತ ಕ್ಷೇತ್ರದಲ್ಲಿ ‘ತೇನಿಸೈ ತೆಂಡ್ರಲ್’ ಎಂದೇ ದೇವಾ ಅವರು ಜನಪ್ರಿಯರಾಗಿದ್ದಾರೆ. ತಮಿಳಿನಲ್ಲಿ ‘ತೇನಿಸೈ ತೆಂಡ್ರಲ್’ ಎಂದರೆ ಮಧುರ ಸಂಗೀತದ ತಂಗಾಳಿ ಎಂದು ಅರ್ಥ. ಅದರಂತೆ ತಮಿಳು ಚಿತ್ರರಂಗದ ದಿಗ್ಗಜ ಎಂ.ಎಸ್.ವಿಶ್ವನಾಥನ್ ಅವರಿಂದ ‘ತೇನಿಸೈ ತೆಂಡ್ರಲ್’ ಎಂದು ಕರೆಸಿಕೊಂಡ ದೇವಾ ತಮ್ಮ ಮಾಧುರ್ಯಭರಿತ ಹಾಡುಗಳಿಂದ ಜೇನಿನಂತಹ ಸಂಗೀತ ಸುಧೆಯನ್ನೇ ಸುರಿಸಿದರು. ಆ ಮೂಲಕ ಇಡೀ ದಕ್ಷಿಣ ಭಾರತೀಯ ಚಿತ್ರ ರಸಿಕರ ಮನಗೆದ್ದರು. ದೇವಾ ಅವರ ಸಂಗೀತ ಪರಂಪರೆಯನ್ನು ತಮ್ಮ ಪುತ್ರ ಶ್ರೀಕಾಂತ್ ದೇವಾ ಕೂಡ ಮುಂದುವರಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Deva2
ರಜನಿಕಾಂತ್ ಅವರೊಂದಿಗೆ ದೇವಾ

ಸಿನಿ ಜೀವನ

ಭಾರತೀಯ ಸಿನಿಮಾರಂಗದ ಪ್ರಸಿದ್ಧ ನಾಯಕನಟರಾದ ರಜನಿಕಾಂತ್, ಕಮಲ್ ಹಾಸನ್, ಮುರಳಿ, ವಿಜಯ್, ಅಜಿತ್ ಕುಮಾರ್, ಸೂರ್ಯ, ಮೋಹನ್‌ಲಾಲ್, ಮುಮ್ಮಟ್ಟಿ, ರಹಮಾನ್, ವಿಷ್ಣುವರ್ಧನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಚಿರಂಜೀವಿ, ಪವನ್ ಕಲ್ಯಾಣ್, ನಾಗಾರ್ಜುನ ಮೊದಲಾದ ಸಿನಿ ದಿಗ್ಗಜರ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿರುವ ಇವರು ಸಿನಿಮಾ ಪಯಣದಲ್ಲಿ ಮಹತ್ವದ ಹೆಜ್ಜೆ ಗುರುತುಗಳನ್ನು ಮೂಡಿಸಿದರು.

ದೇವಾ ಅವರು ತಮಿಳಿನ ಅಣ್ಣಾಮಲೈ, ಬಾಷಾ, ಅರುಣಾಚಲಂ, ಅವ್ವೈ ಷಣ್ಮುಗಿ, ಆಶೈ, ಕಾದಲ್ ಕೊಟೈ, ವಾಲಿ, ನೇರುಕ್ಕು ನೇರ್, ಖುಷಿ; ತೆಲುಗಿನ ಮಾಸ್ಟರ್, ತೋಲಿ ಪ್ರೇಮ, ಆಟೋ ಡ್ರೈವರ್; ಕನ್ನಡದ ಅಮೃತವರ್ಷಿಣಿ, ಗಲಾಟೆ ಅಳಿಯಂದ್ರು, ಕೋಟಿಗೊಬ್ಬ, ನಾನು ನಾನೇ, ಸೈನಿಕ, ಸಿಂಹಾದ್ರಿಯ ಸಿಂಹ; ಮಲೆಯಾಳಂ ಭಾಷೆಯ ದಿ ಪ್ರಿನ್ಸ್, ಕಿಂಗ್ ಸಾಲೋಮನ್, ಫ್ಯಾಂಟಮ್ ಮುಂತಾದ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾಗಳ ಸಂಗೀತ ಸಂಯೋಜನೆಯಿಂದ ದೇವಾ ಅವರ ಜನಪ್ರಿಯತೆ ಉತ್ತುಂಗಕ್ಕೇರಿತು. ರಜನಿಕಾಂತ್ ಸಿನಿಮಾಗಳ ಆರಂಭದಲ್ಲಿ ಮೊಳಗುವ ‘ಸೂಪರ್‌ಸ್ಟಾರ್ ಟೈಟಲ್ ಕಾರ್ಡ್ ಮ್ಯೂಸಿಕ್’ ಕಂಪೋಸ್ ಮಾಡಿದ್ದು ಕೂಡ ದೇವಾ ಅವರೇ ಎಂಬುದನ್ನು ನಾವು ಗಮನಿಸಿದರೆ ಅವರ ಸಂಗೀತದ ಶಕ್ತಿ ಮತ್ತು ಸಾಮರ್ಥ್ಯ ಅರಿವಿಗೆ ಬರುತ್ತದೆ.

ಹಾಗೆಯೇ ಚೆನ್ನೈನ ಸಾಂಪ್ರದಾಯಿಕ ‘ಗಾನಾ’ ಸಂಗೀತದ ನಾದ ಮತ್ತು ಲಯಗಳನ್ನು ತಮಿಳು ಸಿನಿಮಾರಂಗದ ಮುಖ್ಯವಾಹಿನಿಗೆ ತಂದು ಪರಿಚಯಿಸಿದ ಹೆಗ್ಗಳಿಕೆ ದೇವಾ ಅವರಿಗೆ ಸಲ್ಲುತ್ತದೆ. ಜನಪದ ಶೈಲಿಯ ನವಿರೇಳಿಸುವ ಉತ್ಸಾಹಭರಿತ ಹಾಡುಗಳನ್ನೂ ಮಾಧುರ್ಯಭರಿತ ಪ್ರೇಮಗೀತೆಗಳನ್ನು ಸಂಯೋಜಿಸಿ ಕಲಾರಸಿಕರನ್ನು ಸಂಗೀತಲೋಕದಲ್ಲಿ ಮಿಂದೇಳುವಂತೆ ಮಾಡಿದರು.

ಹೆಚ್ಚೂ ಕಡಿಮೆ ತನ್ನ ಸಮಕಾಲೀನರು ಹಾಗೂ ಸಂಗೀತಲೋಕದ ದಿಗ್ಗಜರಾದ ಇಳಯರಾಜ ಮತ್ತು ಎ.ಆರ್. ರೆಹಮಾನ್ ಅವರಂತಹ ನಿರ್ದೇಶಕರ ಪ್ರಭಾವಳಿಯಲ್ಲೂ ಕೂಡ ದೇವಾ ಅವರು ತಮ್ಮದೇ ಆದ ಸಂಗೀತ ಶೈಲಿಯಿಂದ ತಮಿಳಿಗರ ಮನಗೆದ್ದರು. ಬರೀ ಮಾಧುರ್ಯ ಭರಿತ ಹಾಡುಗಳನ್ನಷ್ಟೇ ಅಲ್ಲದೇ, ಹುರುಪು ತುಂಬುವ ಜನಪ್ರಿಯ ಗೀತೆಗಳನ್ನೂ ಸಂಯೋಜಿಸಿ ಯುವಕರ ಮನ ಗೆದ್ದಿದ್ದಾರೆ.

ಇದನ್ನು ಓದಿದ್ದೀರಾ?: ಸೌಕಾರ್ ಜಾನಕಿ: ಬದುಕಿನ ಏಳುಬೀಳಿನಲ್ಲಿ ಅರಳಿದ ಕಲಾವಿದೆ

1997ರಲ್ಲಿ ಬಿಡುಗಡೆಯಾದ ಮುರಳಿ(ಕನ್ನಡದ ಪ್ರಸಿದ್ಧ ಸಿನಿಮಾ ನಿರ್ದೇಶಕ ಸಿದ್ಧಲಿಂಗಯ್ಯನವರ ಪುತ್ರ) ಕಥಾನಾಯಕನಾಗಿರುವ ‘ಪೊರ್ಕಾಲಂ’ ಚಿತ್ರದಲ್ಲಿ ‘ತಂಜಾವೂರು ಮಣ್ಣು ಎಡುತ್ತು’ ಎಂಬ ದೇವಾ ಅವರು ಸಂಗೀತ ನೀಡಿರುವ ಹಾಡು ಸೂಪರ್ ಹಿಟ್ ಆಗಿತ್ತು. ಅಷ್ಟೇ ಅಲ್ಲ; ತಮಿಳುನಾಡಿನ ಮಣ್ಣಿನ ಅಸ್ಮಿತೆ ಹಾಗೂ ಸೊಗಡನ್ನು ಜಗತ್ತಿಗೇ ಸಾರಿತು. ಅದು ಎಷ್ಟರಮಟ್ಟಿಗೆ ಜಗತ್ರಸಿದ್ಧಿಯಾಗಿದೆ ಎಂದರೆ ಸಿಂಗಾಪುರದ ಮಾಜಿ ರಾಷ್ಟ್ರಪತಿ ಎಸ್.ಆರ್. ನಾಥನ್ ಆಗಸ್ಟ್ 2016ರಲ್ಲಿ ತೀರಿಹೋದಾಗ ಸರ್ಕಾರಿ ಅಂತ್ಯಕ್ರಿಯೆಯ ಆರಂಭದಲ್ಲಿ ಅವರಿಗೆ ಅಂತಿಮ ಗೌರವವಾಗಿ ತನಗೆ ಇಷ್ಟವಾಗಿದ್ದ ಈ ಹಾಡನ್ನು ನುಡಿಸಲಾಯಿತು. ಇದೇ ಹಾಡು ರವಿಚಂದ್ರನ್ ಅಭಿನಯದ ‘ಒಡಹುಟ್ಟಿದವಳು’ ಎಂಬ ಕನ್ನಡ ಸಿನಿಮಾದಲ್ಲಿ ಅಲ್ಪಸ್ವಲ್ಪ ಮಾರ್ಪಾಡುಗಳೊಂದಿಗೆ ಬಳಕೆಯಾಗಿದೆ.

ದೇವಾ ಅವರ ಸಂಗೀತ ಸಾಧನೆಗೆ ತಮಿಳುನಾಡು ಸರ್ಕಾರದ ‘ಕಲೈಮಾಮಣಿ ಹಾಗೂ ವೈಗಾಸಿ ಪೊರಂತಾಚು(1990), ಆಸೈ(1995), ಖುಷಿ(2000) ಈ ಮೂರು ಸಿನಿಮಾಗಳಿಗೂ 3 ಬಾರಿ ‘ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ’ಗಳು ಲಭಿಸಿವೆ. ಕನ್ನಡದ ‘ಅಮೃತವರ್ಷಿಣಿ’ ಸಿನಿಮಾದ ಸಂಗೀತ ನಿರ್ದೇಶನಕ್ಕಾಗಿ ಫಿಲ್ಮ್‌ಫೇರ್(ಅತ್ಯುತ್ತಮ ಸಂಗೀತ ನಿರ್ದೇಶಕ) ಪ್ರಶಸ್ತಿ ಸೇರಿದಂತೆ ಹಲವು ಗೌರವ-ಪುರಸ್ಕಾರಗಳು ಸಂದಿವೆ.

Deva1

ದೇವಾ-ಅಮೃತವರ್ಷಿಣಿ ಮತ್ತು ಕನ್ನಡ ಸಿನಿಮಾರಂಗ

ಕನ್ನಡಿಗರಿಗೆ ‘ಅಮೃತವರ್ಷಿಣಿ’ ಅಂದಕೂಡಲೇ ದೇವಾ ಅವರ ಹೆಸರು ತಟ್ಟನೆ ನೆನಪಿಗೆ ಬರುತ್ತದೆ. 1997ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಈ ರೋಮ್ಯಾಂಟಿಕ್ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ರಮೇಶ್ ಅರವಿಂದ್, ಸುಹಾಸಿನಿ, ನಿವೇದಿತಾ ಜೈನ್ ಮತ್ತು ಶರತ್ ಬಾಬು ಅಭಿನಯಿಸಿ, ನಿರ್ದೇಶನವನ್ನೂ ಮಾಡಿದ್ದಾರೆ. ತ್ರಿಕೋನ ಪ್ರೇಮಕಥೆಯುಳ್ಳ ‘ಅಮೃತವರ್ಷಿಣಿ’ ಸಿನಿಮಾ ಕನ್ನಡ ಚಿತ್ರಸಂಗೀತದ ದೃಷ್ಟಿಯಿಂದ ಒಂದು ಮೈಲಿಗಲ್ಲು ಎಂದರೆ ಅತಿಶಯ ಎನಿಸದು. ಈ ಚಿತ್ರದಲ್ಲಿ ರಮೇಶ್ ಮತ್ತು ಸುಹಾಸಿನಿ ಜೋಡಿ ನೋಡುಗರಲ್ಲಿ ಕುತೂಹಲ ಮೂಡಿಸಿದರೆ, ದೇವಾ ಅವರ ಇಂಪಾದ ಸಂಗೀತ ಕೇಳುಗರೆದೆಯಲ್ಲಿ ಕಚಗುಳಿ ಇಡುತ್ತದೆ. ಹಾಗೆಯೇ ಕೆ. ಕಲ್ಯಾಣ್ ಅವರ ಸೊಗಸಾದ ಸಾಹಿತ್ಯ, ದಿನೇಶ್ ಬಾಬು ಅವರ ಸುಂದರ ಛಾಯಾಗ್ರಹಣ ಈ ಸಿನಿಮಾದ ಕಥೆಯ ಹಂದರಕ್ಕೆ ಮೆರುಗು ನೀಡಿದೆ.

ಕನ್ನಡ ಸಿನಿಮಾರಂಗದ ‘ಪ್ರೇಮಕವಿ’ ಎಂದೇ ಹೆಸರಾದ ಕೆ. ಕಲ್ಯಾಣ್ ಸಾಹಿತ್ಯ ರಚಿಸಿರುವ ಹಾಗೂ ಎಸ್.ಪಿ. ಬಾಲಸುಬ್ರಮಣ್ಯಂ, ಕೆ.ಎಸ್. ಚಿತ್ರಾ ಹಾಗೂ ಗಂಗಾಧರ್ ಹಾಡಿರುವ ‘ತುಂತುರು ಅಲ್ಲಿ ನೀರ ಹಾಡು’, ‘ಈ ಸುಂದರ ಬೆಳದಿಂಗಳ’, ‘ಮನಸೇ ಬದುಕು ನಿನಗಾಗಿ’, ‘ಕಣ್ಣಿನ ನೋಟಗಳು, ಕೋಲ್ಮಿಂಚಿನ ಬಾಣಗಳು’, ‘ಭಲೇ ಭಲೇ ಚಂದದ ಚೆಂದುಳ್ಳಿ ಹೆಣ್ಣು ನೀನು’ ಇನ್ನೂ ಮುಂತಾದ ಹಾಡುಗಳು ಅಪಾರ ಜನಪ್ರಿಯತೆ ಪಡೆದಿವೆ. ಅಷ್ಟೇ ಅಲ್ಲ; ಸಾರ್ವಕಾಲಿಕ ಶ್ರೇಷ್ಠ ಗೀತೆಗಳೆಂದೇ ಜನಮನ್ನಣೆ ಗಳಿಸಿವೆ. ಹೀಗೆ ಹಲವಾರು ಅಂಶಗಳಿಂದ ನೋಡುಗರ ಮನಸೆಳೆಯುವ ಈ ಸಿನಿಮಾ ದೇವಾ ಅವರಿಗೆ ಖ್ಯಾತಿಯನ್ನು ಕೂಡ ತಂದುಕೊಟ್ಟಿತು. ಈ ಸಿನಿಮಾದ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ದೇವ್ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿ ಲಭಿಸಿವೆ. ಈ ಸಿನಿಮಾದ ಯಶಸ್ಸಿಗೆ ಕೆ. ಕಲ್ಯಾಣ್ ಅವರ ನವಿರಾದ ಸಾಹಿತ್ಯ ಮತ್ತು ದೇವ್ ಅವರ ಇಂಪಾದ ಸಂಗೀತವೂ ಕಾರಣ ಎಂಬುದನ್ನು ಮರೆಯಬಾರದು.

ಸೊಗಸಾದ ಗೀತ ಸಂಯೋಜನೆಯ ಮೂಲಕ ಕನ್ನಡಿಗರ ಮನಗೆದ್ದ ದೇವಾ ‘ರಾಜ’, ‘ಗಲಾಟೆ ಅಳಿಯಂದ್ರು’, ‘ಇಂಡಿಪೆಂಡೆನ್ಸ್ ಡೇ’, ‘ಕೋಟಿಗೊಬ್ಬ’, ‘ನಾನು ನಾನೇ’, ‘ಸೈನಿಕ’, ‘ಸಿಂಹಾದ್ರಿಯ ಸಿಂಹ’, ‘ಕದಂಬ’ ಮತ್ತು ‘ವಿಷ್ಣುಸೇನಾ’ ಮೊದಲಾದ ಕನ್ನಡ ಚಿತ್ರಗಳಿಗೂ ಸಂಗೀತ ನೀಡಿ ಸೈ ಎನಿಸಿಕೊಂಡರು. ಉದಾಹರಣೆಗೆ: ಗಲಾಟೆ ಅಳಿಯಂದ್ರು ಸಿನಿಮಾದ ‘ಸಾಗರಿಯೇ ಸಾಗರಿಯೇ’, ‘ಕುಂದಾಪುರದ ಮೀನಮ್ಮಾ’, ಸೈನಿಕ ಸಿನಿಮಾದ ‘ಮಳೆಬಿಲ್ಲೆ ಮಳೆಬಿಲ್ಲೆ’, ‘ಸೋಲ್ಜರ್ ಸೋಲ್ಜರ್’, ಸಿಂಹಾದ್ರಿಯ ಸಿಂಹ ಸಿನಿಮಾದ ‘ಮಲ್ನಾಡ್ ಅಡಿಕೆ, ಮೈಸೂರ್ ವೀಳ್ಯೆದೆಲೆ’, ‘ಕಲ್ಲಾದರೆ ನಾನು’, ಕದಂಬ ಸಿನಿಮಾದ ‘ಯಾಮಿನಿ, ಯಾರಮ್ಮ ನೀನು ಯಾಮಿನಿ?’, ಒಲವೇ ಮಂದಾರ ಸಿನಿಮಾದ ‘ಒಲವೇ ಒಲವೇ ಮಂದಾರವಾಯ್ತು…’ ಮೊದಲಾದ ಸೂಪರ್ ಹಿಟ್ ಹಾಡುಗಳಿಗೆ ಸಂಗೀತ ಸಂಯೋಜಿಸಿದ ಕೀರ್ತಿ ದೇವಾ ಅವರಿಗೆ ಸಲ್ಲುತ್ತದೆ.

ಇದನ್ನು ಓದಿದ್ದೀರಾ?: ದಸರಾ ಸಿನಿಮೋತ್ಸವ: ಸಂಸ್ಕೃತಿಯ ವಿಕೇಂದ್ರೀಕರಣ ಮತ್ತು ದೃಶ್ಯ ಪ್ರಜ್ಞೆಯ ಉಳಿವು

ಕನ್ನಡ ಸಿನಿಮಾ ರಂಗದ ಹೊಸಮುಖಗಳೂ ಸೇರಿದಂತೆ ವಿಷ್ಣುವರ್ಧನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಸಿ.ಪಿ. ಯೋಗೇಶ್ವರ್, ಉಪೇಂದ್ರ ಮುಂತಾದ ಜನಪ್ರಿಯ ನಟರ ಚಿತ್ರಗಳಿಗೂ ಸಂಗೀತ ಸಂಯೋಜಿಸಿ ಚಂದನವನದ ಜೊತೆಗೆ ದೇವಾ ವಿಶೇಷ ನಂಟನ್ನು ಬೆಸೆದುಕೊಂಡಿದ್ದಾರೆ. ತಮ್ಮ ಹಾಡುಗಳ ಸರಳತೆ, ಸುಮಧುರ ರಾಗಗಳು ಹಾಗೂ ಮನಸ್ಸಿಗೆ ತಟ್ಟುವ ಪಲ್ಲವಿಗಳಿಂದ ಕೇಳುಗರ ಮನಸ್ಸನ್ನು ಅವರು ತಟ್ಟುತ್ತಾರೆ. ಅಷ್ಟು ಮಾತ್ರವಲ್ಲ; ಯಾವುದೇ ಹಾಡುಗಳನ್ನು ಒಮ್ಮೆ ಕೇಳಿದರೂ ಸಾಕು, ಮತ್ತೆ ಮತ್ತೆ ಕೇಳಬೇಕೆನಿಸುವಷ್ಟು ಆಕರ್ಷಣೆ ದೇವಾ ಅವರ ಸಂಗೀತಕ್ಕಿದೆ. ಆದ್ದರಿಂದ ಇವರ ಸಂಗೀತಕ್ಕೆ ಬರೀ ತಮಿಳಿಗರಷ್ಟೇ ಅಲ್ಲದೇ; ಭಾರತೀಯರೇ ಮಾರು ಹೋಗಿದ್ದಾರೆ.

Deva3

ಯಾವುದೇ ಭಾಷೆಗಳ ಬಾಂಧವ್ಯಕ್ಕೆ ಕಲೆಯಾಗಲೀ, ಸಂಗೀತವಾಗಲೀ ಹೇಗೆ ಕೊಂಡಿಯಾಗುತ್ತದೆ ಎಂಬುದಕ್ಕೆ ದೇವಾ ಅವರ ಸಂಗೀತವೇ ಅತ್ಯುತ್ತಮ ಉದಾಹರಣೆ. ದೇವಾ ತಮ್ಮ ಸಂಗೀತದ ಮೂಲಕ ತಮಿಳು ಮತ್ತು ಕನ್ನಡಿಗರ ಮನಸನ್ನು ಬೆಸೆದರು. ಅದೇ ರೀತಿ ಸಿನಿಮಾದಲ್ಲಿ ಸಂಗೀತ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ತೋರಿಸಿಕೊಟ್ಟವರಲ್ಲಿ ದೇವ ಕೂಡ ಒಬ್ಬರು.

ಅಪಾರ ಶ್ರಮ, ನಿರಂತರ ಅಧ್ಯಯನ ಹಾಗೂ ಸತತ ಪ್ರಯತ್ನಗಳಿಂದ ಸಂಗೀತ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿ, ಭಾರಿ ಜನಪ್ರಿಯತೆ ಗಳಿಸಿದರೂ ಸದಾ ವಿನಯ ಮತ್ತು ಸರಳತೆ ದೇವಾ ಅವರಲ್ಲಿ ಎದ್ದು ಕಾಣುತ್ತಿತ್ತು. ಇಂತಹ ಮೇರು ವ್ಯಕ್ತಿತ್ವದ ದೇವಾ ತಮ್ಮ ಅಪೂರ್ವವಾದ ಹಾಡುಪಾಡು ಮತ್ತು ಸಂಗೀತಸುಧೆಯ ಮೂಲಕ ಚಿತ್ರರಸಿಕರ ಮನದಲ್ಲಿ ಸದಾ ಜೀವಂತವಾಗಿರುತ್ತಾರೆ.

Narasimhamurthy halehatti
ನರಸಿಂಹಮೂರ್ತಿ ಹಳೇಹಟ್ಟಿ
+ posts

ಲೇಖಕ ಮತ್ತು ಅಧ್ಯಾಪಕ‌. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಹಳೇಹಟ್ಟಿ ಗ್ರಾಮದವರು. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿ ಪಡೆದಿದ್ದು, 'ಸಮಕಾಲೀನ ಕನ್ನಡ ಕಾವ್ಯ: ಸ್ವರೂಪ ಮತ್ತು ಧೋರಣೆಗಳು' ಎಂಬ ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ., ಪದವಿ ನೀಡಿದೆ. ’ಕಾಗದದ ದೋಣಿ’ ಇವರ ವಿಮರ್ಶಾ ಕೃತಿ. 'ಅಂಬೇಡ್ಕರ್ ವಿಚಾರಧಾರೆ', 'ಕನ್ನಡದ ತೇಜಸ್ಸು' ಇವರ ಸಂಪಾದಿತ ಕೃತಿಗಳು.

ಪೋಸ್ಟ್ ಹಂಚಿಕೊಳ್ಳಿ:

ನರಸಿಂಹಮೂರ್ತಿ ಹಳೇಹಟ್ಟಿ
ನರಸಿಂಹಮೂರ್ತಿ ಹಳೇಹಟ್ಟಿ
ಲೇಖಕ ಮತ್ತು ಅಧ್ಯಾಪಕ‌. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಹಳೇಹಟ್ಟಿ ಗ್ರಾಮದವರು. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿ ಪಡೆದಿದ್ದು, 'ಸಮಕಾಲೀನ ಕನ್ನಡ ಕಾವ್ಯ: ಸ್ವರೂಪ ಮತ್ತು ಧೋರಣೆಗಳು' ಎಂಬ ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ., ಪದವಿ ನೀಡಿದೆ. ’ಕಾಗದದ ದೋಣಿ’ ಇವರ ವಿಮರ್ಶಾ ಕೃತಿ. 'ಅಂಬೇಡ್ಕರ್ ವಿಚಾರಧಾರೆ', 'ಕನ್ನಡದ ತೇಜಸ್ಸು' ಇವರ ಸಂಪಾದಿತ ಕೃತಿಗಳು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೀಸಲಾತಿ ಹೆಚ್ಚಳ ಮತ್ತು ನ್ಯಾಯಾಂಗದ ಮಿತಿ: ಸಾಮಾಜಿಕ ನ್ಯಾಯಕ್ಕೆ ಸಂವಿಧಾನಾತ್ಮಕ ಪರಿಹಾರವೇನು?

ಮೀಸಲಾತಿ ಬಯಸುವ ಜಾತಿಗಳೆಲ್ಲವೂ ಕೂಡ ವರ್ತಮಾನದ ಸಾಮಾಜಿಕ ಪರಿಸ್ಥಿತಿ ಮತ್ತು ಕಾನೂನು...

ಮತದಾರರ ಪಟ್ಟಿ ಪರಿಷ್ಕರಣೆ ಸಾಫ್ಟ್‌ವೇರ್‌ನಲ್ಲಿ 4 ಬದಲಾವಣೆ; ಮಹಾರಾಷ್ಟ್ರದ ಮನವಿಗೆ ಕೊನೆಗೂ ಒಪ್ಪಿದ ಚುನಾವಣಾ ಆಯೋಗ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಧಿಕಾರಿಗಳಿಗೆ ಹೆಚ್ಚಿನ...

ಒಬ್ಬ ರಾವಣ ಮತ್ತೊಬ್ಬ ರಾವಣನ ಮೇಲೆ ಬಾಣ ಬಿಡುವ ನಾಟಕ: ಮೋದಿ ವಿರುದ್ಧ ಧೃವ್ ರಾಠಿ ವ್ಯಂಗ್ಯ

ದೆಹಲಿಯಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾವಣನ...

ಭಾರತೀಯರೊಂದಿಗೆ ಗರ್ಬಾ ಹೆಜ್ಜೆ ಹಾಕಿದ ನ್ಯೂಯಾರ್ಕ್‌ ಮೇಯರ್‌ ಜೋಹ್ರಾನ್ ಮಮ್ದಾನಿ

ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿ ಅವರು ನವರಾತ್ರಿ ಆಚರಣೆಯಲ್ಲಿ ಭಾರತೀಯರೊಂದಿಗೆ...