ನೂರು ಸಾಮಿ: ಸ್ತ್ರೀವಾದಿ ಸಿನೆಮಾ ಅಧ್ಯಯನದ ದೃಷ್ಟಿಯಿಂದ ಚರ್ಚಾರ್ಹ ಚಿತ್ರ

Date:

ಸಾಂಪ್ರದಾಯಿಕ ಭಾರತೀಯ ಸಿನೆಮಾಗಳು ತಾಯಿಯನ್ನು ನಿಸ್ವಾರ್ಥದ ಸಾಕಾರಮೂರ್ತಿಯಾಗಿ ಚಿತ್ರಿತಗೊಳಿಸುತ್ತವೆ. ಆದರೆ 'ನೂರು ಸಾಮಿ' ಚಿತ್ರ ತಾಯಿಯೂ ಒಬ್ಬ ಸಾಮಾನ್ಯ ಮನುಷ್ಯಳು, ಆಕೆಗೂ ಭಾವನೆಗಳು ಹಾಗೂ ಏಕಾಂತದ ಯಾತನೆಗಳಿರುತ್ತವೆ ಎಂಬುದನ್ನು ಸ್ಪಷ್ಟವಾಗಿ ಧ್ವನಿಸುತ್ತದೆ. 

ಸಿನೆಮಾಗಳಲ್ಲಿ ಅಮ್ಮ ಸೆಂಟಿಮೆಂಟ್ ಸಾಮಾನ್ಯ. ಹಾಗಾಗಿ ಅಂತಹ ದೃಶ್ಯಗಳನ್ನು ಕಂಡ ತಕ್ಷಣ ಪ್ರೇಕ್ಷಕರು ಸಿನಿಕರಾಗುತ್ತಾರೆ. ಆದರೆ, ‘ನೂರು ಸಾಮಿ‘ ಸಿನೆಮಾ ಆರಂಭವಾದ ಹತ್ತು ನಿಮಿಷಗಳಲ್ಲೇ, ಅಂಥದ್ದೇ ಅಮ್ಮನ ಸೆಂಟಿಮೆಂಟ್ ಮೂಲಕ ನಮ್ಮನ್ನು ಭಾವನಾಲೋಕಕ್ಕೆ ಕರೆದೊಯ್ಯುತ್ತದೆ. ಕಲಕುತ್ತದೆ.

- Advertisement -

ಆ ದೃಶ್ಯ ಹೀಗಿದೆ: ಇಬ್ಬರು ಚಿಕ್ಕ ಮಕ್ಕಳನ್ನು ಅವರ ಅಮ್ಮ ಬಲವಂತವಾಗಿ ಬೋರ್ಡಿಂಗ್ ಸ್ಕೂಲ್‌ಗೆ ಹಾಕಲು ನಿರ್ಧರಿಸುತ್ತಾಳೆ. ಅಮ್ಮನನ್ನು ಬಿಟ್ಟು ಹೋಗಲು ಇಷ್ಟಪಡದ ಮಕ್ಕಳು ಅತ್ತೂ ಕರೆದು ಬಸ್ ಹತ್ತಲು ನಿರಾಕರಿಸುತ್ತಾರೆ. ಚಂಡಿ ಹಿಡಿಯುತ್ತಾರೆ. ಕೊನೆಗೆ ಕಣ್ಣೀರು ಸುರಿಸುತ್ತ ಅಮ್ಮನತ್ತ ನೋಡುತ್ತಾರೆ. ಆದರೆ ಅಮ್ಮನಿಗೆ ಅವರ ಕಣ್ಣುಗಳನ್ನು ನೋಡಲಾಗುವುದಿಲ್ಲ, ಮಕ್ಕಳನ್ನು ಬಿಟ್ಟುಕೊಡಲು ಸಾಧ್ಯವಾಗುವುದಿಲ್ಲ. ಆದರೂ, ಮಕ್ಕಳನ್ನು ಬಸ್ ಹತ್ತಿಸಿ, ಗಟ್ಟಿಮನಸ್ಸು ಮಾಡಿ ಹಿಂದಿರುಗುತ್ತಾಳೆ. ಕಣ್ಣುಮುಚ್ಚಿ ಎದೆ ಹಿಡಿದುಕೊಳ್ಳುತ್ತಾಳೆ. ಇಡೀ ಪ್ರಪಂಚವೇ ತನ್ನ ಎದೆಯ ಮೇಲೆ ಭಾರ ಬಿಟ್ಟಂತೆ, ಆ ಭಾರವನ್ನೆಲ್ಲ ಆಕೆಯೊಬ್ಬಳೆ ಹೊತ್ತುನಿಂತಂತೆ ಭಾವಿಸುತ್ತಾಳೆ. ವಿಧವೆ ಸೆಲ್ವಿ ಪಾತ್ರದಲ್ಲಿ ಸ್ವಾಸಿಕಾ ಆ ದೃಶ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಅಭಿನಯಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

ನಿರ್ದೇಶಕ ಶಶಿಯವರು ‘ನೂರು ಸಾಮಿ’ ಚಿತ್ರಕ್ಕೆ ತಮಿಳುನಾಡಿನ ಹಳ್ಳಿಯೊಂದರಲ್ಲಿ ನಡೆದ ನಿಜಘಟನೆಯೊಂದನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಆ ವಿಷಯ ಪ್ರಸ್ತುತವೂ ಅಗತ್ಯವೂ ಆಗಿದೆ. ಸಾಮಾಜಿಕ ಚಲನಚಿತ್ರ ಅಧ್ಯಯನದಲ್ಲಿ ‘ಮಾತೃತ್ವ’ ಮತ್ತು ‘ಲಿಂಗಸಮಾನತೆ’ ವಿಷಯಗಳು ಸದಾ ಮಹತ್ವದ ಚರ್ಚಾ ವಸ್ತುವಾಗಿವೆ. ‘ನೂರು ಸಾಮಿ’ ಚಿತ್ರವು ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಸ್ತ್ರೀಯನ್ನು ದೇವತೆಯ ಸ್ಥಾನದಲ್ಲಿರಿಸಿ, ಅವಳ ವೈಯಕ್ತಿಕ ಬಯಕೆಗಳನ್ನು ನಿಕೃಷ್ಟವಾಗಿ ಕಾಣುವ ಪಿತೃಪ್ರಧಾನ ಮನೋಭಾವವನ್ನು ಪ್ರಶ್ನಿಸುವ ಒಂದು ಮಹತ್ವದ ಸಾಂಸ್ಕೃತಿಕ ಪಠ್ಯವಾಗಿದೆ.

Advertisements

ಇದನ್ನು ಓದಿದ್ದೀರಾ?: ಚಿನ್ನ ಚಿನ್ನ ಆಸೈ: ಮನ ಸೆಳೆಯುವ ಮಾಗಿದ ಮನಸುಗಳ ಮೌನ ಮತ್ತು ಮಾತು

hq720 11

ಚಿತ್ರವು ತಮಿಳುನಾಡಿನ ಹಳ್ಳಿಗಾಡಿನ ಬದುಕನ್ನು ತೆರೆದಿಡುತ್ತಲೇ, ಒಂಟಿಯಾಗಿ ದುಡಿದು ಜೀವನ ಸಾಗಿಸುವ ಸೆಲ್ವಿಯನ್ನು ಕೇಂದ್ರೀಕರಿಸುತ್ತದೆ. ಸಮಾಜದ ನಿಂದನೆಗಳನ್ನು ಸಹಿಸಿಕೊಂಡು ತನ್ನಿಬ್ಬರು ಮಕ್ಕಳನ್ನು ಬೆಳೆಸುವ ಈಕೆ, ತನ್ನ ವಯಸ್ಕ ಮಕ್ಕಳಲ್ಲಿ ತನಗಿರುವ ಏಕಾಂಗಿತನವನ್ನು ಹಾಗೂ ಮರುಮದುವೆಯ ಆಶಯವನ್ನು ವ್ಯಕ್ತಪಡಿಸುತ್ತಾಳೆ. ಈ ಪುಟ್ಟ ವಿನಂತಿ ಸಮಾಜದಲ್ಲಿ, ಸ್ವಂತ ಮಕ್ಕಳಲ್ಲಿ ಸೃಷ್ಟಿಸುವ ಆಘಾತ, ಪ್ರಕ್ರಿಯೆ ಮತ್ತು ನೈತಿಕ ದ್ವಂದ್ವಗಳನ್ನು ಚಿತ್ರವು ವಸ್ತುನಿಷ್ಠವಾಗಿ ತೆರೆದಿಡುತ್ತದೆ.

ಗ್ರಾಮೀಣ ಸಮಾಜದ ವಿಧವೆಯ ಕುರಿತ ಪೂರ್ವಗ್ರಹಗಳ ನಡುವೆ ಬದುಕುತ್ತಿರುವ ಆಕೆಗೆ ಮತ್ತೊಮ್ಮೆ ಮದುವೆಯಾಗಿ ತನ್ನದೇ ಆದ ಬದುಕು ಕಟ್ಟಿಕೊಳ್ಳುವ ಆಸೆ ಚಿಗುರೊಡೆಯುತ್ತದೆ. ಅದಕ್ಕೆ ಪೂರಕವಾಗಿ, ‘ನಾನೇ ನನ್ನ ಗಂಡನನ್ನು ಕೊಂದಿದ್ದರೂ, ಕೆಲವೇ ವರ್ಷ ಜೈಲಿನಲ್ಲಿ ಇರುತ್ತಿದ್ದೆ. ಈಗ ಗಂಡ ಸತ್ತಿರುವುದರಿಂದ ಜೀವನಪೂರ್ತಿ ಜೈಲಿನಲ್ಲಿರುವಂತಾಗಿದೆ’ ಎನ್ನುತ್ತಾಳೆ.

ಈ ಸಂಭಾಷಣೆ ನೋಡುಗರಿಗೆ ಪರಿಣಾಮಕಾರಿಯಾಗಿ ಕೇಳಿಸಬಹುದು; ಲಿಂಗ ಸಮಾನತೆ ಬಯಸುವವರಿಗೆ ಸರಿ ಎನಿಸಬಹುದು. ಆದರೆ ಸೆಲ್ವಿ ಬದುಕುತ್ತಿರುವ ಗ್ರಾಮೀಣ ಪರಿಸರದಲ್ಲಿ, ಸಾಮಾಜಿಕ ಕಟ್ಟುಪಾಡುಗಳ ಬದುಕಿನಲ್ಲಿ, ಬಡತನದ ಬೇಗೆಯಲ್ಲಿ ಭಿನ್ನ ಎನಿಸುವುದಿಲ್ಲ. ಸೆಲ್ವಿಯಂತೆಯೇ ಬದುಕುತ್ತಿರುವ ಹಳ್ಳಿಯ ವಿಧವೆಯರು ಜೈಲು ಎಂದು ಭಾವಿಸಿದರೂ, ಜೈಲು ವಾಸಕ್ಕಿಂತ ಕಡೆಯಾಗಿ ಬದುಕುತ್ತಿದ್ದರೂ… ಹೀಗೆ ಹೇಳುವುದಿಲ್ಲ.

ಹಾಗೆಯೇ ಮತ್ತೊಂದು ಸಂಭಾಷಣೆ… ತನ್ನ ತಾಯಿಯ ಕಡುಕಷ್ಟದ ಬದುಕನ್ನು ಕಂಡ, ಆಕೆಯ ಕೂಲಿ ಕಾಸಿನಲ್ಲಿ ವಿದ್ಯಾವಂತನಾದ ವಯಸ್ಕ ಮಗನೇ ಅಮ್ಮನ ಮರುಮದುವೆ ಮಾತಿನಿಂದ ಕಸಿವಿಸಿಗೊಳಗಾಗುತ್ತಾನೆ. ತಾನು ಅತಿಯಾಗಿ ಪ್ರೀತಿಸುವ ಅಮ್ಮನಿಂದ ಅಂತರ ಕಾಪಾಡಿಕೊಳ್ಳುತ್ತಾನೆ. ದಿನಗಳು ಉರುಳಿದಂತೆ, ಮಾಗಿದಂತೆ ಮಗ ಭಾಸ್ಕರ್ ಬಾಯಿಂದ, ‘ಬಲೆಗೆ ಸಿಕ್ಕ ಇಲಿಯಂತೆ ನನ್ನ ತಾಯಿಯೂ ಈ ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ’ ಎಂಬ ಸಂಭಾಷಣೆ ಹೊರಹೊಮ್ಮುತ್ತದೆ. ಆತ ವಯಸ್ಕ, ವಿದ್ಯಾವಂತ. ಆ ಸಂಭಾಷಣೆಯನ್ನು ತಾನು ಮದುವೆಯಾಗುವ ಯುವತಿಯೊಂದಿಗೆ ಹಂಚಿಕೊಳ್ಳುತ್ತಾನೆ. ಅವರ ಆಧುನಿಕ ಕಾಲ, ಪ್ರದೇಶ ಮತ್ತು ಪರಿಸ್ಥಿತಿಗಳ ಕಾರಣಕ್ಕೆ ಆ ಸಂಭಾಷಣೆ ಸಹ್ಯ ಎನಿಸಿಕೊಳ್ಳುತ್ತದೆ.  

ಇದನ್ನು ಓದಿದ್ದೀರಾ?: ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’: ಪುರಾಣ, ಅಸ್ತಿತ್ವ ಮತ್ತು ಸಿನೆಮಾದ ಹೊಸ ಭಾಷೆ

ಸೆಲ್ವಿಯ ಮರುಮದುವೆ ನಿರ್ಧಾರಕ್ಕೆ ಮಕ್ಕಳು, ಸಂಬಂಧಿಕರು ಮತ್ತು ಸಮಾಜದಿಂದ ವಿರೋಧ ವ್ಯಕ್ತವಾಗುತ್ತದೆ. ಇದರ ಜೊತೆಗೆ, ತನ್ನ ತಂಗಿಯ ಮಕ್ಕಳಲ್ಲಿ ಒಬ್ಬನಿಗೆ ತನ್ನ ಮಗಳನ್ನು ಮದುವೆ ಮಾಡಿಸಬೇಕೆಂಬ ಹಠಕ್ಕೆ ಬಿದ್ದ ಮಾವ ಮತ್ತವರ ಕುಟುಂಬದಿಂದ ಸೆಲ್ವಿ ಹತ್ಯಾ ಯತ್ನವೂ ನಡೆದುಹೋಗುತ್ತದೆ. ಈ ದೃಶ್ಯ ದೇಶದಲ್ಲಿ ಸದ್ಯ ನಡೆಯುತ್ತಿರುವ ಮರ್ಯಾದೆಗೇಡು ಹತ್ಯೆಯನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ಹಳ್ಳಿಯ ಜನ ಒಂದಾಗಿ, ವಿಧವೆ ಮದುವೆಯಾಗುವುದು ಹಳ್ಳಿಗೆ ಕೆಟ್ಟ ಹೆಸರು ತರುತ್ತದೆ ಎಂದು ಮದುವೆ ತಡೆಯಲು ಷಡ್ಯಂತ್ರ ಹೆಣೆಯುವುದು; ಮಗನ ಯತ್ನಗಳಿಗೆ ಅಡ್ಡಿಪಡಿಸುವುದು; ರಕ್ಷಣೆ ಕೇಳಿ ಬರುವ ಮಗನ ಕೋರಿಕೆಯನ್ನು ಪೊಲೀಸ್ ನಿರಾಕರಿಸುವುದು; ಮಕ್ಕಳಿಬ್ಬರ ಪ್ರೇಮ ಮುರಿದುಬೀಳುವುದು- ಸಂಘರ್ಷಗಳ ಸರಮಾಲೆಯನ್ನೇ ಪೋಣಿಸಲಾಗಿದೆ. ಒಟ್ಟಾರೆ ಚಿತ್ರದಲ್ಲಿ ಸಂಘರ್ಷಗಳು ಸ್ವಲ್ಪ ಜಾಸ್ತಿಯೇ ಇವೆ.

Nooru Sami hour 231f93a0 6978 11f1 b841 5beb6e5ea9e7
ನೂರು ಸಾಮಿ ಚಿತ್ರದಲ್ಲಿ ವಿಜಯ್ ಆಂಟನಿ ಮತ್ತು ಸ್ವಾಸಿಕಾ

ಆ ಸಂಘರ್ಷಗಳನ್ನು ಕೊಂಚ ತಗ್ಗಿಸಿ ತಾಯಿಯ ಪುನರ್ವಿವಾಹದ ಕುರಿತ ಆಂತರಿಕ ಸಂಘರ್ಷವನ್ನು ಮುಖ್ಯವಾಗಿ ಕೇಂದ್ರೀಕರಿಸಿದ್ದರೆ, ಚಿತ್ರ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು. ಚಿತ್ರದ ಕೊನೆಯ ಹಂತದಲ್ಲಿ ನಿರ್ದೇಶಕ ಶಶಿ, ಸಂಗಾತಿಗಳನ್ನು ಕಳೆದುಕೊಂಡ ಇಬ್ಬರು ವ್ಯಕ್ತಿಗಳಿಗೆ ನಲವತ್ತರ ವಯಸ್ಸಿನಲ್ಲಿ ಪ್ರೀತಿ ಅರಳಿದರೆ ಹೇಗಿರುತ್ತದೆ ಎಂಬ ನಿಜ ವಿಷಯದತ್ತ ಹೊರಳುತ್ತಾರೆ. ಕಳೆದುಕೊಂಡ ಪ್ರೀತಿಯನ್ನು ಮತ್ತೆ ಗಳಿಸಿಕೊಳ್ಳುವ ಆ ಕಲ್ಪನೆ, ಚಿತ್ರದಲ್ಲಿರುವ ಹಲವು ಕಥಾ ಸಂಘರ್ಷಗಳಿಗಿಂತ ಹೆಚ್ಚು ಆಸಕ್ತಿದಾಯಕವಾಗಿದೆ. ಆದರೆ ಆ ಸಾಧ್ಯತೆಯನ್ನು ಚಿತ್ರದಲ್ಲಿ ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ನಿರ್ದೇಶಕರು ವಿಫಲವಾಗಿದ್ದಾರೆ.

ವಿಧುರನಾಗಿ ವಿಜಯ್ ಆಂಟನಿ ಚಿತ್ರದ ಕೊನೆಯಲ್ಲಿ ಕಾಣಿಸಿಕೊಂಡರೂ, ಮೌನ ಮತ್ತು ಪಕ್ವ ನಟನೆಯ ಮೂಲಕ ಕಥೆಗೆ, ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಬಾಲಾಜಿ ಶಕ್ತಿವೇಲ್ ಮತ್ತು ಕರುಣಾಸ್ ಅವರಂತಹ ಹಿರಿಯ ನಟರಿದ್ದರೂ, ಅವಧಿ ಕಡಿಮೆಯಿದ್ದು ನೆನಪಿನಲ್ಲಿ ಉಳಿಯದಂತಾಗಿದ್ದಾರೆ. ಆದರೆ ಸೆಲ್ವಿ ಪಾತ್ರದಲ್ಲಿ ನಟಿಸಿರುವ ಸ್ವಾಸಿಕಾ ‘ನೂರು ಸಾಮಿ’ಯ ಜೀವನಾಡಿಯಾಗಿದ್ದಾರೆ. ಸೆಲ್ವಿಯ ನೋವು, ತಾಯ್ತನ, ಅಸಹಾಯಕತೆ ಮತ್ತು ತನ್ನದೇ ಬದುಕನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಹಂಬಲವನ್ನು ಅವರು ಸಹಜವಾಗಿ ಜೀವಿಸಿದ್ದಾರೆ. ಅವರ ಶಕ್ತಿಯುತ ಅಭಿನಯ, ತಮಿಳು ಚಿತ್ರರಂಗದ ನಿರ್ದೇಶಕರಿಗೆ ಇನ್ನಷ್ಟು ಗಟ್ಟಿಯಾದ ಮಹಿಳಾ ಪ್ರಧಾನ ಪಾತ್ರಗಳನ್ನು ಪರದೆ ಮೇಲೆ ತರುವಂತೆ ಪ್ರೇರೇಪಿಸಬಹುದು.

ಇದನ್ನು ಓದಿದ್ದೀರಾ?: ‘ಸಟ್ಲುಜ್‌’ ಸಿನಿಮಾ: ಹೇಳಬೇಕಾಗಿದ್ದೇನು, ಹೇಳಿದ್ದೇನು?

ಸಂಗೀತ ನಿರ್ದೇಶಕ ಬಾಲಾಜಿ ಶ್ರೀರಾಮ್‌ರ ಹಿನ್ನೆಲೆ ಸಂಗೀತ, ಎರಡು ಹಾಡುಗಳು ಕೇಳುವಂತಿದ್ದರೆ, ಇನ್ನೆರಡು ಹಾಡುಗಳು ಚಿತ್ರದ ಮುಖ್ಯಧಾರೆಗೆ ಅಷ್ಟಾಗಿ ಹೊಂದಿಕೆಯಾಗದೆ ಹೊರಗುಳಿಯುತ್ತವೆ. ಆದರೆ, ಹಳ್ಳಿಯ ಬಿಡಿ ವಿವರಗಳನ್ನೂ ಬಿಡದಂತೆ, ಸಹಜ ಚಿತ್ರಣ ಕಟ್ಟಿಕೊಡುವಲ್ಲಿ ಸಿನಿಮಾಟೋಗ್ರಫಿ ಚಿತ್ರವನ್ನು ಆಪ್ತವಾಗಿಸುತ್ತದೆ.

ಕಥೆಯ ಮೂಲ ಆಶಯ ಒಳ್ಳೆಯದಾದರೂ, ಅದನ್ನು ಹೇಳುವಾಗ ಸಿನೆಮಾ ಕೆಲವೆಡೆ ಅತಿಯಾದ ಭಾವುಕತೆ ಮತ್ತು ಅನಗತ್ಯ ಉಪಕಥೆಗಳಿಂದ ತನ್ನ ಪರಿಣಾಮವನ್ನು ಕಳೆದುಕೊಳ್ಳುತ್ತದೆ. ‘ನೂರು ಸಾಮಿ’ ಪರಿಪೂರ್ಣ ಸಿನೆಮಾ ಅಲ್ಲ. ಆದರೆ ವಿಧವೆಯೊಬ್ಬಳಿಗೆ ಮರುಮದುವೆ ಕೇವಲ ‘ಎರಡನೇ ಮದುವೆ’ ಅಲ್ಲ, ತನ್ನ ಬದುಕನ್ನು ಮತ್ತೆ ತನ್ನದಾಗಿಸಿಕೊಳ್ಳುವ ಹಕ್ಕು ಎಂಬ ವಿಚಾರವನ್ನು ಮುಂದಿಡುತ್ತದೆ. ಆ ವಿಚಾರಕ್ಕೆ ಸ್ವಾಸಿಕಾರ ಅಭಿನಯ ಬಲ ನೀಡುತ್ತದೆ. ಕಥೆಯನ್ನು ಇನ್ನಷ್ಟು ಸರಳವಾಗಿ, ಕಡಿಮೆ ಮೆಲೋಡ್ರಾಮಾದೊಂದಿಗೆ ಹೇಳಿ, ನಾಯಕಿ ಸೆಲ್ವಿಯ ಭಾವನಾತ್ಮಕ ತಲ್ಲಣಗಳ ಮೇಲೆ ಗಮನ ಹರಿಸಿದ್ದರೆ, ನೆನಪಿನಲ್ಲಿ ಉಳಿಯುವ ಚಿತ್ರವಾಗುತ್ತಿತ್ತು.

HLTv3T1b0AAkH4j
ಚಿತ್ರಕ್ಕೆ ಪ್ರೇರಣೆಯಾದ ತಮಿಳುನಾಡಿನ ಹಳ್ಳಿಯೊಂದರ ಕುಟುಂಬ…

ಆದರೂ ತಮಿಳುನಾಡಿನ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯನ್ನು ಚಿತ್ರಕ್ಕೆ ಅಳವಡಿಸಿರುವುದು, ವಿಧವಾ ಪುನರ್ವಿವಾಹ ವಿಚಾರಕ್ಕೆ ಒತ್ತುಕೊಟ್ಟಿರುವುದು, ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಯತ್ತ ಬೆಳಕು ಚೆಲ್ಲಿರುವುದು ಮೆಚ್ಚಬೇಕಾದ ಅಂಶ. ಸಾಂಪ್ರದಾಯಿಕ ಭಾರತೀಯ ಸಿನೆಮಾಗಳು ತಾಯಿಯನ್ನು ನಿಸ್ವಾರ್ಥದ ಸಾಕಾರಮೂರ್ತಿಯಾಗಿ ಚಿತ್ರಿತಗೊಳಿಸುತ್ತವೆ. ಆದರೆ ‘ನೂರು ಸಾಮಿ’ ಚಿತ್ರ ತಾಯಿಯೂ ಒಬ್ಬ ಸಾಮಾನ್ಯ ಮನುಷ್ಯಳು, ಆಕೆಗೂ ಭಾವನೆಗಳು ಹಾಗೂ ಏಕಾಂತದ ಯಾತನೆಗಳಿರುತ್ತವೆ ಎಂಬುದನ್ನು ಸ್ಪಷ್ಟವಾಗಿ ಧ್ವನಿಸುತ್ತದೆ. ಸ್ತ್ರೀವಾದಿ ಸಿನೆಮಾ ಅಧ್ಯಯನದ ದೃಷ್ಟಿಕೋನದಲ್ಲಿ ಇದೊಂದು ಸಕಾಲಿಕ ಹಾಗೂ ಚರ್ಚಾರ್ಹ ಚಲನಚಿತ್ರವಾಗಿದೆ. ಆ ಕಾರಣಕ್ಕಾಗಿಯಾದರೂ ಚಿತ್ರವನ್ನು ಒಮ್ಮೆ ನೋಡಬಹುದಾಗಿದೆ.

(ಆಸಕ್ತರು ಚಿತ್ರವನ್ನು ಝೀ5, ಓಟಿಟಿಯಲ್ಲಿ ವೀಕ್ಷಿಸಬಹುದು)

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಭಲ್ ಪ್ರಕರಣ: ಆರೋಪಿ ಮೇಲಿನ NSA ರದ್ದು, ಯೋಗಿ ಸರ್ಕಾರಕ್ಕೆ 10 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂ!

2024ರ ಸಂಭಲ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮುಲ್ಲಾ ಅಫ್ರೋಜ್ ವಿರುದ್ಧ...

ಸೊಹ್ರಾಬುದ್ದೀನ್ ಪ್ರಕರಣ: ಅಮಿತ್ ಶಾ ಬಿಡುಗಡೆ ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ನಕಾರ

ತೀವ್ರ ಕುತೂಹಲ ಕೆರಳಿಸಿರುವ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹವಾಮಾನ | ರಾಜ್ಯದಲ್ಲಿ ಮುಂದಿನ 2 ದಿನ ಭಾರಿ ಮಳೆ: 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಬಿರುಗಾಳಿ ಸಹಿತ...