ಸೌಕಾರ್ ಜಾನಕಿ ಭಾರತೀಯ ಚಿತ್ರರಂಗದಲ್ಲಿ ಏಳು ದಶಕಗಳ ಕಾಲ ವೃತ್ತಿ ಬದುಕು ನಿರ್ವಹಿಸಿದ ಅಪರೂಪದ ಕಲಾವಿದೆ. ವೈಯಕ್ತಿಕ ಬದುಕಿನ ಪ್ರತಿಕೂಲ ಪರಿಸ್ಥಿತಿಗಳನ್ನೇ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡ; ಭಾಷೆ ಮತ್ತು ಪೀಳಿಗೆಗಳ ಗಡಿಗಳನ್ನು ದಾಟಿ ನಿಂತ; ಒಬ್ಬ ಜನಪ್ರಿಯ ನಾಯಕಿಯ ಹಂತದಿಂದ ಭಾರತೀಯ ಚಿತ್ರರಂಗದ ಅತ್ಯಂತ ಸುದೀರ್ಘ ಮತ್ತು ಸಾರ್ವಕಾಲಿಕ ಅಭಿನೇತ್ರಿಯಾಗಿ ರೂಪಾಂತರಗೊಂಡ ಅಪರೂಪದ ಮಹಿಳೆಯ ದಿಟ್ಟತನದ ಕಥೆ ಅವರದು...
1970ನೇ ಇಸವಿಯ ಮಧ್ಯದಲ್ಲಿ ನಾನು ತಮಿಳು, ತೆಲುಗು ಮತ್ತು ಕನ್ನಡ ಭಾಷೆಯ ಸುಮಾರು 20 ಚಿತ್ರಗಳನ್ನು ನೋಡಿದೆ. ತೆರೆಯ ಮೇಲೆ ಕಂಡ ಬಿಂಬಗಳು ಅಳಿಯದೇ ಉಳಿಯುತ್ತಿದ್ದ ಕಾಲ. ಆ ಮೂರು ಭಾಷೆಯಲ್ಲಿ ನೋಡಿದ ಬಹುತೇಕ ಚಿತ್ರಗಳಲ್ಲಿ ಕಾಣಿಸಿಕೊಂಡ ಒಬ್ಬ ನಟಿಯ ಅಭಿನಯ ಮಾತ್ರ ನನ್ನ ಗಮನವನ್ನು ಇನ್ನಿಲ್ಲದಂತೆ ಸೆಳೆಯಿತು. ವಿಚಿತ್ರ ಸನ್ನಿವೇಶದಲ್ಲಿ ತನ್ನನ್ನು ತೊರೆದು ಹೋದ ಪ್ರಿಯಕರನ ಕಚೇರಿಗೆ ಜಿಲ್ಲಾಧಿಕಾರಿಯಾಗಿ ಬಂದು ಈಗ ಸಂಸಾರಿಯಾಗಿ ಎದುರಿಗೆ ಬಂದಾಗ ತಳಮಳಗೊಳ್ಳುವ ಕಲೆಕ್ಟರ್ ಜಾನಕಿ (ತಮಿಳಿನ ಇರು ಕೋಡುಗಳ್), ಜೂಜಿನ ಚಟಕ್ಕೆ ಬಿದ್ದ ಗಂಡ, ದಾರಿತಪ್ಪಿದ ಮಕ್ಕಳನ್ನು ಕಟ್ಟಿಕೊಂಡು ಹೆಣಗುವ ಕಸ್ತೂರಿ(ಕಸ್ತೂರಿ ವಿಜಯಂ), ಕುಡಿದು ಚಿತ್ತಾಗಿ ಗಂಡನ ಎದುರೇ ಅರೆ ಬೆತ್ತಲೆ ಉಡುಪಿನಲ್ಲಿ ಮಾದಕ ನೃತ್ಯ ಮಾಡುವ ಚಿತ್ರಾ (ಪುದಿಯ ಪರವೈ), ತಪಸ್ಸಿನ ಫಲದಿಂದ ಅಹಂನಲ್ಲಿ ಮೆರೆಯುವ ಗಂಡ ಮಹಿಷಾಸುರನನ್ನು ರಕ್ಷಿಸಲು ಹೆಣಗುವ ಗುಣವತಿ(ಮಹಿಷಾಸುರ ಮರ್ದಿನಿ), ಗಂಡಸರಿಂದ ತಪ್ಪಿಸಿಕೊಳ್ಳಲು ನಾನಾವೇಷ ಹಾಕುವ ಸದಾರಮೆ(ಸದಾರಮೆ), ಗಂಡನೆದುರು ಅಂಧಳಂತೆ ನಟಿಸುವ ಮಂಜುಳ (ಸಾಕುಮಗಳು), ತನ್ನ ಮಾದಕತೆಯಿಂದ ವಾಮಾಚಾರಿ ರಕ್ತಾಕ್ಷನನ್ನು ಒಲಿಸಿಕೊಳ್ಳಲು ಯತ್ನಿಸುವ ಮೋಹಿನಿ ನಾಗಲಾ (ಸತಿಶಕ್ತಿ), ಅಪರಾಧಿಯಾಗಿ ನಿಂತ ಗಂಡನ ಬಿಡುಗಡೆಗಾಗಿ ಹೋರಾಡುವ ಜಾನಕಿ (ಅಕ್ಕ ಚೆಲ್ಲಲು), ಅಪನಂಬಿಕೆಯಿಂದ ಅಶಾಂತವಾದ ಮನಸಿನ ಶಾಂತಾ (ಮಂಚಿ ಕುಟುಂಬಂ) -ಹೀಗೆ ಇಮೇಜಿನ ಹಂಗಿಲ್ಲದೆ ಪಾತ್ರಗಳನ್ನು ಜೀವಿಸಿದ ಸೌಕಾರ್ ಜಾನಕಿ (ಕನ್ನಡದಲ್ಲಿ ಅವರು ಸಾಹುಕಾರ್ ಜಾನಕಿ) ಭಾರತೀಯ ಚಿತ್ರರಂಗದಲ್ಲಿ ಏಳು ದಶಕಗಳ ಕಾಲ ವೃತ್ತಿ ಬದುಕು ನಿರ್ವಹಿಸಿದ ಅಪರೂಪದ ಕಲಾವಿದೆ. ತಾನು ನಟಿಸಿದ ಪ್ರತಿಯೊಂದು ಪಾತ್ರಕ್ಕೂ ‘ಸೌಕಾರ್’ ಜಾನಕಿ ತಮ್ಮದೇ ಆದ ವಿಶಿಷ್ಟ ಹಾಗೂ ಜೀವಂತ ಮೆರುಗನ್ನು ನೀಡುತ್ತಿದ್ದರು. ಐದು ಭಾಷೆಯ ನೂರಾರು ವಿಭಿನ್ನ ಪಾತ್ರಗಳನ್ನು ಅಭಿನಯಿಸಿದ ಈ ಕಲಾವಿದೆ ತನ್ನ ಕಾಲದ ಇತರೆ ಜನಪ್ರಿಯ ನಾಯಕಿಯರಿಗಿದ್ದ ಗ್ಲಾಮರ್‌ನ ಬೆಂಬಲವಿರಲಿಲ್ಲ. ಚಿತ್ರ ವಿಮರ್ಶಕರೂ ಅವರನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆದರೂ ಕಾಲದ ಅಗತ್ಯಕ್ಕೆ ತಕ್ಕಂತೆ ತನ್ನ ಅಭಿನಯವನ್ನು ವಿಸ್ತರಿಸುತ್ತಲೇ ಹೋದ ಜಾನಕಿ ಅವರು ನಿರ್ದೆಶಕರ ನಟಿಯಾಗಿದ್ದರು. ದಕ್ಷಿಣ ಭಾರತದ ಎಲ್ಲ ಪೀಳಿಗೆಯ ಕಲಾವಿದರ ಜೊತೆ ಅಭಿನಯ ಪ್ರಯಾಣದಲ್ಲಿ ಜೊತೆಯಾಗಿದ್ದರು. ಅವರ ಉಲ್ಲೇಖವಿಲ್ಲದೆ ಭಾರತೀಯ ಚಲನಚಿತ್ರರಂಗದ ಇತಿಹಾಸ ಅಪೂರ್ಣವೇ ಸರಿ.
ಉಡುಪಿ ಮತ್ತು ಅದರ ಸುತ್ತಮುತ್ತಲಿನ ಕರಾವಳಿ ಮಣ್ಣಿಗೂ ಭಾರತದ ಸಿನೆಮಾ ಜಗತ್ತಿನ ಹಲವು ಅಪ್ರತಿಮ ತಾರೆಯರಿಗೂ ಅಚ್ಚರಿಯ ನಂಟಿದೆ. ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ಬದುಕಿನ ಹಾದಿ ಅರಸಿ ಕರಾವಳಿಯಿಂದ ದೇಶದ ವಿವಿಧ ಮೂಲೆಗಳಿಗೆ ವಲಸೆ ಹೋದ ಪೂರ್ವಜರ ಕುಡಿಗಳಿವು. ಗತಕಾಲದ ಮಹಾನ್ ತಾರೆಗಳೆನಿಸಿದ ಗುರುದತ್, ಸುಮನ ಕಲ್ಯಾಣಪುರ, ಜಮುನಾ, ಹರಿಣಿ, ವಾದಿರಾಜ್ ಮತ್ತು ‘ಫೈಟರ್’ ಶೆಟ್ಟಿಯಂತಹ ಮುಂತಾದ ಖ್ಯಾತನಾಮರ ಬೇರುಗಳು ಈ ನೆಲದವು. ಈ ಪರಂಪರೆಯ ಸಾಲಿನಲ್ಲಿ ಸಿನೆಮಾರಂಗದಲ್ಲಿ ತಮ್ಮದೇ ವಿಶಿಷ್ಟ ನೆಲೆಯೊಂದನ್ನು ಕಟ್ಟಿಕೊಂಡ ‘ಸೌಕಾರ್’ ಜಾನಕಿ ಮತ್ತು ಅವರ ತಂಗಿ ಟಿ. ಕೃಷ್ಣಕುಮಾರಿ ಕೂಡ ಇದೇ ನೆಲದ ಮೂಲದವರು; ಕನ್ನಡದವರು.

ಉಡುಪಿಯ ಮಾಧ್ವ ಬ್ರಾಹ್ಮಣ ಕುಟುಂಬದ ಹಿನ್ನೆಲೆಯ ಜಾನಕಿ ಇವರ ತಂದೆ ಟಿ. ವೆಂಕೋಜಿ ರಾವ್ ಕಾಗದ ತಂತ್ರಜ್ಞಾನದಲ್ಲಿ ಲಂಡನ್ ಶಿಕ್ಷಣ ಪಡೆದವರು. ಉದ್ಯೋಗದ ನಿಮಿತ್ತ ಕುಟುಂಬವು ದೇಶದ ವಿವಿಧೆಡೆ ಪಯಣಿಸಬೇಕಾಯಿತು. ಈ ಕಾರಣದಿಂದಲೇ ಡಿಸೆಂಬರ್ 12, 1931ರಲ್ಲಿ ಜಾನಕಿಯವರು ರಾಜಮಂಡ್ರಿಯಲ್ಲಿ ಜನಿಸಿದರೆ, ಅವರ ತಂಗಿ ಕೃಷ್ಣಕುಮಾರಿ ಬಂಗಾಳದ ನೈಹಾಟಿಯಲ್ಲಿ ಜನಿಸಿದರು. ಜಾನಕಿಯವರಿಗೆ ಸುಮಾರು 12 ವರ್ಷವಿದ್ದಾಗ, ತಂದೆಯ ಕೆಲಸದ ನಿಮಿತ್ತ ಕುಟುಂಬವು ಮದ್ರಾಸ್‌ನ (ಈಗಿನ ಚೆನ್ನೈ) ಬೋಗ್ ರೋಡ್ ಪ್ರದೇಶದಲ್ಲಿ ಬಂದು ನೆಲೆಸಿತು. ಮದ್ರಾಸಲ್ಲಿ ಹದಿಹರೆಯದ ಹುಡುಗಿಯಾಗಿದ್ದಾಗ, ಅವರು ಆಕಾಶವಾಣಿಯ ಜೊತೆ ನಂಟು ಬೆಳೆಸಿಕೊಂಡು ಬಾಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅವರ ಅದ್ಭುತ ತೆಲುಗು ಭಾಷಾ ಪ್ರಭುತ್ವ ಮತ್ತು ಹರಳಿನಂತಹ ಸ್ಪಷ್ಟ ಉಚ್ಚಾರಣೆ ಅವರನ್ನು ಯಶಸ್ವಿ ರೇಡಿಯೋ ಕಲಾವಿದೆಯನ್ನಾಗಿ ಮಾಡಿತು. ಆ ರೇಡಿಯೋ ಕಂಠಸಿರಿಯೇ ಚಲನಚಿತ್ರ ರಂಗದ ಕಣ್ಣು ಮೊದಲ ಬಾರಿಗೆ ಅವರ ಮೇಲೆ ಬೀಳಲು ಕಾರಣವಾಯಿತು. ಹಾಗೆ ಅವರನ್ನು ತಮ್ಮ ‘ಗುಣಸುಂದರಿ ಕಥಾ’ ಚಿತ್ರದ ನಟಿಯ ಶೋಧನೆಯಲ್ಲಿದ್ದ ನಿರ್ದೇಶಕ-ನಿರ್ಮಾಪಕ ಕೆ.ವಿ. ರೆಡ್ಡಿಯವರು ರೇಡಿಯೋದಲ್ಲಿ ಜಾನಕಿ ಅವರ ಧ್ವನಿಯ ಏರಿಳಿತ, ಉಕ್ಕುವ ಭಾವವನ್ನು ಕೇಳಿಸಿಕೊಂಡು ಬಂದು, ನಾಯಕಿ ಪಾತ್ರಕ್ಕೆ ಆಹ್ವಾನ ನೀಡಿದರು. ಜಾನಕಿಯವರು ಸಂಭ್ರಮದಿಂದಲೇ ಅದಕ್ಕೆ ಒಪ್ಪಿಕೊಂಡರು. ಆದರೆ, ತಮ್ಮ ಮನೆಯ ಹೆಣ್ಣುಮಗಳು ಚಿತ್ರರಂಗಕ್ಕೆ ಕಾಲಿಡುವುದನ್ನು ಒಪ್ಪದ ಕುಟುಂಬದವರು 15ರ ಹರೆಯದ ಜಾನಕಿಯವರನ್ನು ಗುಂಟೂರು-ಕಾಕಿನಾಡ ಪ್ರದೇಶದಲ್ಲಿ ರೇಡಿಯೋ ಎಂಜಿನಿಯರಾಗಿದ್ದ ಶಂಕರಮಂಚಿ ಶ್ರೀನಿವಾಸ ರಾವ್ ಅವರೊಂದಿಗೆ “ತರಾತುರಿಯಲ್ಲಿ ಮದುವೆ” ಮಾಡಿ ಮುಗಿಸಿದರು.
ಆದರೆ, ಕುಟುಂಬಸ್ಥರು ನಿರೀಕ್ಷಿಸಿದ ಆರ್ಥಿಕ ಭದ್ರತೆಯನ್ನು ಆ ಮದುವೆ ತಂದುಕೊಡಲಿಲ್ಲ. ಜಾನಕಿಯವರ ಪತಿಗೆ ಖಾಯಂ ಆದ ಅಥವಾ ಸೂಕ್ತ ಆದಾಯ ತರುವ ಕೆಲಸವಿರಲಿಲ್ಲ; ಪರಿಣಾಮವಾಗಿ ಆ ನವದಂಪತಿಗಳು ಶೀಘ್ರದಲ್ಲೇ ತೀವ್ರ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿದರು. ದಿನನಿತ್ಯದ ಹೊಟ್ಟೆಯ ಹಸಿವನ್ನು ನೀಗಿಸಿಕೊಳ್ಳುವುದಕ್ಕೂ ಪರದಾಡುವಂತಹ ಕರುಣಾಜನಕ ಸ್ಥಿತಿ ಎದುರಾಯಿತೆಂದು ಜಾನಕಿಯವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಈ ನಡುವೆ, ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದರು. ಬದುಕಿನ ದಾರಿಯೇ ಕಾಣದಾದಾಗ, ಕುಟುಂಬವನ್ನು ಸಲಹಲು ಅವರು ಮತ್ತೆ ಬಣ್ಣದ ಪ್ರಪಂಚಕ್ಕೆ ಪ್ರವೇಶ ಕೋರಿ ರೆಡ್ಡಿಯವರನ್ನು ಭೇಟಿ ಮಾಡಿದರು. ವಿಶೇಷವೆಂದರೆ ಅವರ ಪತಿ ಚಿತ್ರರಂಗ ಪ್ರವೇಶಕ್ಕೆ ಯಾವುದೇ ಅಡ್ಡಿಪಡಿಸಲಿಲ್ಲ. ಆದರೆ ವಿಧಿಯ ಆಟ ವಿಚಿತ್ರವಾಗಿತ್ತು; ರೆಡ್ಡಿಯವರು ಆರಂಭದಲ್ಲಿ ಅವರನ್ನು ನಟಿಸಲು ಕೇಳಿಕೊಂಡಿದ್ದ ಆ ಚಿತ್ರ ಆಗಲೇ ಪೂರ್ಣಗೊಂಡಿತ್ತು! ಆದರೂ ಜಾನಕಿಯವರನ್ನು ಬರಿಗೈಯಲ್ಲಿ ಕಳುಹಿಸದ ರೆಡ್ಡಿಯವರು, ವಿಜಯಾ ಪ್ರೊಡಕ್ಷನ್ಸ್ ನ ಚೊಚ್ಚಲ ತಯಾರಿಕೆಯಾಗಿ ಬಿ. ನಾಗಿ ರೆಡ್ಡಿಯವರು ನಿರ್ಮಿಸುತ್ತಿದ್ದ ಹೊಸ ಚಿತ್ರದತ್ತ ಅವರಿಗೆ ಹಾದಿ ತೋರಿದರು.
ಆಗ ಜಾನಕಿಯವರು ತಮ್ಮ ಮೂರು ತಿಂಗಳ ಕೂಸನ್ನು ಎದೆಗೆ ಬಿಗಿದಪ್ಪಿಕೊಂಡು ಬಿ.ಎನ್. ರೆಡ್ಡಿಯವರ ಬಳಿ ತೆರಳಿದರು. ಅಲ್ಲಿ ನಡೆದ ಅಭಿನಯ ಪರೀಕ್ಷೆಯಲ್ಲಿ ಆಯ್ಕೆಯಾದರು. ಎನ್.ಟಿ. ರಾಮರಾವ್ ನಾಯಕರಾಗಿದ್ದ, ಎಲ್.ವಿ. ಪ್ರಸಾದ್ ನಿರ್ದೇಶನದ ಆ ಚಿತ್ರವೇ ‘ಶಾವುಕಾರು’ (ಸಾಹುಕಾರ). “ನಾನು ಬಣ್ಣದ ಪ್ರಪಂಚದ ಮೋಹದಿಂದ ಅಥವಾ ನಟನೆಯ ಹುಚ್ಚಿನಿಂದ ನಟಿಯಾಗಲಿಲ್ಲ; ನನ್ನ ಕುಟುಂಬದ ಹಸಿವನ್ನು ನೀಗಿಸಲು, ನನ್ನ ಮಕ್ಕಳಿಗೆ ಅನ್ನ, ಇರಲು ಸೂರು ಮತ್ತು ಶಿಕ್ಷಣ ಕೊಡಿಸಲು ಮಾತ್ರ ನಟಿಯಾದೆ.” ಬದುಕಿನ ಈ ವೈಚಿತ್ರ್ಯವನ್ನು ಜಾನಕಿಯವರು ತಮ್ಮ ಜೀವನದುದ್ದಕ್ಕೂ ಪದೇ ಪದೇ ಒತ್ತಿ ಹೇಳುತ್ತಿದ್ದರು. ವಿಧಿಯಾಟವೆಂದರೆ ಇದೇ ಇರಬೇಕು. ಮದುವೆಗೆ ಮುನ್ನ ನಟನೆ ಎಂಬುದು ಅವರ ಪಾಲಿಗೆ ಕುಟುಂಬ ತಡೆದು ನಿಲ್ಲಿಸಿದ ಒಂದು ಸುಂದರ ಕನಸಾಗಿತ್ತು; ಆದರೆ ಮದುವೆ ಮತ್ತು ತಾಯ್ತನದ ನಂತರ, ಅದೇ ನಟನೆ ಅವರ ಬದುಕಿನ ಉಳಿವಿಗಾಗಿ ಕಂಡುಕೊಂಡ ಏಕೈಕ ಆಸರೆಯಾಯಿತು! ಜಾನಕಿಯವರು ಚಿತ್ರರಂಗದಲ್ಲಿ ನೆಲೆಕಂಡುಕೊಂಡಾಗ ಅವರ ಹಿಂದೆಯೇ ಚಿತ್ರರಂಗಕ್ಕೆ ಬಂದ ಸೋದರಿ ಕೃಷ್ಣಕುಮಾರಿ ಅವರಿಗೆ ಕುಟುಂಬದವರು ಅಡ್ಡಿಪಡಿಸಲಿಲ್ಲ!

ಎನ್.ಟಿ. ರಾಮರಾವ್ ಅವರ ಎದುರು ಜಾನಕಿಯವರು ನಟಿಸಿದ ‘ಶಾವುಕಾರು’ (1949-50) ಚಿತ್ರವು ಅಭೂತಪೂರ್ವ ಯಶಸ್ಸು ಕಂಡು, ಅವರಿಗೆ ಅಪಾರ ಜನಪ್ರಿಯತೆ ತಂದಿತ್ತಿತು. ಅಂದಿನ ಮತ್ತೊಬ್ಬ ಪ್ರಸಿದ್ಧ ನಟಿ ವಿ.ಎನ್. ಜಾನಕಿ (ಮುಂದೆ ಎಂಜಿಆರ್ ಅವರ ಪತ್ನಿ) ಅವರ ಹೆಸರಿನೊಂದಿಗೆ ಉಂಟಾಗುತ್ತಿದ್ದ ಗೊಂದಲವನ್ನು ಪರಿಹರಿಸಲು, ಅವರನ್ನು ಅವರು ನಟಿಸಿದ ಚಿತ್ರದ ಹೆಸರು ‘ಸೌಕಾರ್’ ಎಂಬ ಅಭಿದಾನದಿಂದ ಕರೆಯಲಾಯಿತು. ವಿಪರ್ಯಾಸವೆಂದರೆ, ಯಾವ ‘ಬಡತನ’ ಅವರನ್ನು ಬೆಳ್ಳಿಪರದೆಯತ್ತ ತಳ್ಳಿತೋ, ಅದನ್ನು ಹಿಮ್ಮೆಟ್ಟಿಸಿದ ರೀತಿಯಲ್ಲಿ ಈ ಚಿತ್ರ ನೀಡಿದ ‘ಸೌಕಾರ್’ ಎಂಬ ಹೆಸರೇ ಅವರ ಶಾಶ್ವತ ಗುರುತಾಗಿ ಪ್ರಸಿದ್ಧವಾಯಿತು!
ಭಾರತೀಯ ಚಲನಚಿತ್ರ ರಂಗದ ಇತಿಹಾಸದಲ್ಲಿ ‘ಸೌಕಾರ್’ ಜಾನಕಿಯವರ ಚಿತ್ರರಂಗದ ಪ್ರವೇಶವು ಮೂರು ಪ್ರಮುಖ ಕಾರಣಗಳಿಗಾಗಿ ಅಪರೂಪವಾದದ್ದು. ಅವರು ನಟಿಯಾಗಬೇಕೆಂಬ ದೊಡ್ಡ ಕನಸು ಹೊತ್ತು ಚಿತ್ರರಂಗಕ್ಕೆ ಕಾಲಿಡಲಿಲ್ಲ. ಅವರು ರೇಡಿಯೋ ಕಲಾವಿದೆಯಾಗಿದ್ದರೂ, ಸಿನೆಮಾವೇ ಅವರ ಅಂತಿಮ ಗುರಿಯಾಗಿರಲಿಲ್ಲ. ಅವರು ಅಭಿನಯ ವೃತ್ತಿಯನ್ನು ಆಯ್ದುಕೊಂಡದ್ದು ಡಾ. ರಾಜ್‌ಕುಮಾರ್ ಅವರು ಹೇಳುತ್ತಿದ್ದ ಹಾಗೆ ‘ಕೇವಲ ಹೊಟ್ಟೆಪಾಡಿಗಾಗಿ’; ಕುಟುಂಬದ ಉಳಿವಿಗಾಗಿ, ಹಸಿವಿನ ವಿರುದ್ಧದ ಹೋರಾಟಕ್ಕಾಗಿ! ಆದರೆ ಜೀವನೋಪಾಯಕ್ಕೆ ಆಸರೆಯಾದ ಕಲೆಯನ್ನು ಉಪೇಕ್ಷಿಸದೇ ಕಲಿಯುತ್ತಾ ಹೋದ ಅವರ ಶ್ರದ್ಧೆ ಅವರ ಭವಿಷ್ಯವನ್ನು ಉಜ್ವಲಗೊಳಿಸಿತು. ಆ ಮಟ್ಟಿಗೆ ಅವರು ವೃತ್ತಿಗೆ ಪ್ರಾಮಾಣಿಕರಾಗಿದ್ದರು.
ಎರಡನೆಯ ವಿಶೇಷತೆ: ಸಾಮಾನ್ಯ ನಟಿಯರಂತೆ ಚಿತ್ರರಂಗಕ್ಕೆ ಬಂದ ನಂತರ ಅವರು ಮದುವೆಯಾಗಲಿಲ್ಲ. ಬದಲಾಗಿ ಮದುವೆ ಮತ್ತು ತಾಯ್ತನದ ನಂತರವೇ ಅವರ ನಟನಾ ಜೀವನ ಆರಂಭವಾಯಿತು. ಆ ಕಾಲಘಟ್ಟದಲ್ಲಿ ಮುಂಚೂಣಿ ನಾಯಕಿಯೊಬ್ಬಳು ಹದಿಹರೆಯದ ಪತ್ನಿಯಾಗಿ, ಕಂದಮ್ಮನ ತಾಯಿಯಾಗಿ ರಂಗಪ್ರವೇಶ ಮಾಡಿದ್ದು ಅತ್ಯಂತ ಅಭೂತಪೂರ್ವ ಸಂಗತಿ.
ಯಾವ ಮದುವೆಯು ಅವರನ್ನು ಬಣ್ಣದ ಪ್ರಪಂಚದಿಂದ ದೂರವಿಡಲು ಆತುರದಿಂದ ನಡೆಯಿತೋ, ಅದೇ ಮದುವೆಯ ಸನ್ನಿವೇಶಗಳು ಕೊನೆಗೆ ಅವರನ್ನು ಅದೇ ಬೆಳ್ಳಿಪರದೆಯ ಮಡಿಲಿಗೆ ತಂದು ನಿಲ್ಲಿಸಿದ ವೈಚಿತ್ರ್ಯವೇ ಅವರನ್ನೊಂದು ತಾರೆಯಾಗಿಯೂ ರೂಪಿಸಿತು!
1949-50ರಲ್ಲಿ ಆರಂಭವಾದ ಅವರ ನಟನಾ ಪಯಣವು 1959ರ ವೇಳೆಗೆ, ಅಂದರೆ ಕೇವಲ ಹತ್ತು ವರ್ಷಗಳ ಅಲ್ಪಾವಧಿಯಲ್ಲಿ ಅವರನ್ನು ದೊಡ್ಡ ತಾರೆಯಾಗಿ ರೂಪಿಸಿತು. ಆ ಅವಧಿಯಲ್ಲಿ ಅವರು ದಕ್ಷಿಣ ಭಾರತದ ಮೂರು ಪ್ರಮುಖ ಭಾಷೆಗಳಲ್ಲಿ 53 ಚಿತ್ರಗಳಲ್ಲಿ ಅಭಿನಯಿಸಿ, ಅತ್ಯಂತ ಬೇಡಿಕೆಯ ಅಗ್ರಪಂಕ್ತಿಯ ನಾಯಕಿಯಾಗಿ ಹೊರಹೊಮ್ಮಿದರು. ತಮ್ಮ ಸಮಕಾಲೀನ ದಿಗ್ಗಜ ನಟಿಯರೆನಿಸಿದ್ದ ಜಿ. ವರಲಕ್ಷ್ಮಿ, ಪಿ. ಭಾನುಮತಿ, ಸಿ. ಲಕ್ಷ್ಮಿ, ಸಾವಿತ್ರಿ, ಪದ್ಮಿನಿ, ಶ್ರೀರಂಜನಿ, ಜಮುನಾ ಮತ್ತು ಕೃಷ್ಣವೇಣಿಯಂತಹ ನಟಿಯರು ಪೌರಾಣಿಕ, ಜಾನಪದ ಮತ್ತು ವೈಭವೋಪೇತ ಚಿತ್ರಗಳಲ್ಲಿ ಮಿಂಚುತ್ತಿದ್ದರೆ, ‘ಸೌಕಾರ್’ ಜಾನಕಿಯವರು ತಮ್ಮ ಸುಸಂಸ್ಕೃತ ಕಳೆ, ಸೌಮ್ಯ ರೂಪ ಮತ್ತು ಸ್ಫಟಿಕದಂತಹ ಸ್ಪಷ್ಟ ಉಚ್ಚಾರಣೆಯಿಂದಾಗಿ ಸಾಮಾಜಿಕ ಮತ್ತು ಕೌಟುಂಬಿಕ ಚಿತ್ರಗಳಲ್ಲಿ ಎಲ್ಲರ ಮೊದಲ ಆಯ್ಕೆಯಾದರು. ಕಾಲ ಸರಿದಂತೆ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿಸ್ತರಿಸುತ್ತಲೇ ಹೋದ ಅವರ ವೃತ್ತಿ ಬದುಕು, ಅಭಿನಯದ ವಿಷಯದಲ್ಲೂ ಕಾಲಕ್ಕೆ ತಕ್ಕಂತೆ ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಯತು. 1950 ಮತ್ತು 60ರ ದಶಕಗಳಲ್ಲಿ ಸೌಮ್ಯ ಸುಂದರ ನಾಯಕಿಯಾಗಿ ಆರಂಭವಾಗಿ, ಕಾಲಕ್ರಮೇಣ ಪ್ರಬುದ್ಧ ಪೋಷಕ ಪಾತ್ರಗಳು, ವಾತ್ಸಲ್ಯಮಯಿ ತಾಯಂದಿರು, ನಗೆಗಡಲಲ್ಲಿ ತೇಲಿಸುವ ಹಾಸ್ಯ ಪಾತ್ರಗಳು ಹಾಗೂ ಭಾವನಾತ್ಮಕವಾಗಿ ಅತ್ಯಂತ ಸಂಕೀರ್ಣವಾದ ಸ್ತ್ರೀ ಪಾತ್ರಗಳಾಗಿ ಅರಳಿತು. ಏಳು ದಶಕಗಳಿಗೂ ಹೆಚ್ಚು ಕಾಲ ಸುದೀರ್ಘವಾಗಿ ಸಾಗಿದ ಈ ರಂಗಪಯಣದಲ್ಲಿ, ಸುದೀರ್ಘ ರಂಗಭೂಮಿ ಸೇವೆಯ ಜೊತೆಗೆ ಅವರು ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದರು.

ಜಾನಕಿಯವರ ಅಭಿನಯ ಪಯಣದ ಮೊದಲ ಹೆಜ್ಜೆಗೆ ಆಸರೆಯಾದ ತೆಲುಗು ಚಿತ್ರರಂಗವು ಅವರ ಇಡೀ ಬದುಕಿನುದ್ದಕ್ಕೂ ಅತ್ಯಂತ ಪ್ರಮುಖ ಭಾಗವಾಗಿ ಉಳಿಯಿತು. ‘ಶಾವುಕಾರು’ ಚಿತ್ರದ ಅಮೋಘ ಯಶಸ್ಸಿನ ನಂತರ ಅವರನ್ನು ತಮಿಳು ನಂತರ ಕನ್ನಡ ಚಿತ್ರರಂಗ ಅವರನ್ನು ಸ್ವಾಗತಿಸಿತು. ಆದರೂ ಅವರ ಆರಂಭದ ಅತ್ಯಂತ ಉತ್ತಮ ಅಭಿನಯದ ಹೆಚ್ಚು ಚಿತ್ರಗಳು ತೆಲುಗಿನಲ್ಲೇ ಬಿಡುಗಡೆಯಾದವು. ಮುಖ್ಯವಾಗಿ ರೋಜುಲು ಮಾರಾಯಿ (1955) ಚಿತ್ರವು ಅವರನ್ನು ತೆಲುಗಿನ ಪ್ರಮುಖ ನಾಯಕಿಯಾಗಿ ನೆಲೆಗೊಳಿಸಿದ ಚಿತ್ರಗಳಲ್ಲಿ ಪ್ರಮುಖವಾದದ್ದು. ಪ್ರೇಮದ ಮೆರುಗಿನ ಜೊತೆಗೆ ತೀವ್ರ ಭಾವನಾತ್ಮಕತೆಯನ್ನು ಬೆರೆಸಿ ನಟಿಸುವ ಅವರ ಕೌಶಲಕ್ಕೆ ಇದು ಸಾಕ್ಷಿಯಾಯಿತು. ಅದೇವರ್ಷ ಗುರಜಾಡ ಅಪ್ಪಾರಾವ್ ಅವರ ಪ್ರಸಿದ್ಧ ಸಾಮಾಜಿಕ ನಾಟಕ ಆಧಾರಿತ ಕನ್ಯಾಶುಲ್ಕಂ (1955) ಚಿತ್ರವು, ಜಾನಕಿಯವರಿಗೆ ಗಂಭೀರ ಸಾಹಿತ್ಯಕ ಕೃತಿಯಾಧಾರಿತ ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿತು. ಸಾಂಪ್ರದಾಯಿಕ ರೊಮ್ಯಾಂಟಿಕ್ ಚೌಕಟ್ಟನ್ನು ಮೀರಿ ನಟಿಸಬಲ್ಲ ಸಾಮರ್ಥ್ಯವನ್ನು ಇದು ಸಾಬೀತುಪಡಿಸಿತು.
ಎ.ಎನ್.ಆರ್ ನಾಯಕರಾಗಿದ್ದ, ಅಪಾರ ಯಶಸ್ಸು ಗಳಿಸಿದ ಪ್ರಸಿದ್ಧ ಕೌಟುಂಬಿಕ ಡಾಕ್ಟರ್ ಚಕ್ರವರ್ತಿ(1964) ಚಿತ್ರದಲ್ಲಿ ಪೋಷಕ ನಟಿಯಾಗಿ ‘ನಿರ್ಮಲಾ’ ಪಾತ್ರದಲ್ಲಿ ಅವರು ತಮ್ಮ ನಟನೆಯ ಪ್ರಬುದ್ಧ ಹಂತಕ್ಕೆ ಕಾಲಿಟ್ಟರು. ತಮಿಳು ಚಿತ್ರರಂಗದಲ್ಲೂ ನೆಲೆ ಕಂಡುಕೊಂಡ ನಂತರವೂ ತೆಲುಗಿನಲ್ಲಿ ಅವರಿಗಿದ್ದ ಅಪಾರ ಬೇಡಿಕೆಯನ್ನು ಅಕ್ಕ ಚೆಲ್ಲೆಲು (1970) ಚಿತ್ರದ ಗಂಡನ ಬಿಡುಗಡೆಗಾಗಿ ಬಸವಳಿಯುವ ಮುಗ್ಧ ಜಾನಕಿಯ ಪಾತ್ರ ಸ್ಥಿರಗೊಳಿಸಿತು.
ಎಪ್ಪತ್ತರ ದಶಕದ ಅಂತ್ಯದ ವೇಳೆಗೆ ನಾಯಕಿಯ ಪಟ್ಟದಿಂದ ಹೊರಬಂದ ಅವರು ತಾಯಾರಮ್ಮ ಬಂಗಾರಯ್ಯ (1979) ಚಿತ್ರದ ‘ತಾಯಾರಮ್ಮ’ ಎಂಬ ಶಕ್ತಿಯುತ ಪ್ರಬುದ್ಧ ಪಾತ್ರದ ಮೂಲಕ ಇಡೀ ಚಿತ್ರವನ್ನು ಆವರಿಸಿಕೊಂಡರು. ಆ ಚಿತ್ರದ ಮೈ ನೇಮ್ ಈಸ್ ತಾಯಾರಮ್ಮ ಹಾಡನ್ನು ಮರೆಯಲಾದೀತೆ? ಸಂಸಾರಂ ಒಕ ಚದರಂಗಂ (1987) ಕೌಟುಂಬಿಕ ನಾಟಕದಲ್ಲಿ ‘ಚಿಲಕಮ್ಮ’ ಎಂಬ ಗಟ್ಟಿ ತಾಯಿಯ ಪಾತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ‘ನಂದಿ ಪ್ರಶಸ್ತಿ’ ಪಡೆದ ಅವರು ತಮ್ಮ ನಾಲ್ಕನೆಯ ದಶಕದ ವೃತ್ತಿಯಲ್ಲಿ ಪರದೆಯ ಮೇಲಿನ ತಮ್ಮ ಘನತೆಯನ್ನು ಕಳೆದುಕೊಳ್ಳದೆ ಪ್ರಬುದ್ಧ ಪೋಷಕ ನಟಿಯಾಗಿ ತಮ್ಮ ಸ್ಥಾನವನ್ನು ಅಬಾಧಿತವಾಗಿ ಕಾಯ್ದುಕೊಂಡಿದ್ದರು.
ತೆಲುಗು ಅವರಿಗೆ ಜನ್ಮ ನೀಡಿದರೆ, ತಮಿಳು ಚಿತ್ರರಂಗವು ಅವರೊಳಗಿನ ಅಭಿನಯದ ಅಗಾಧ ಸಾಮರ್ಥ್ಯಕ್ಕೆ ಅತ್ಯಂತ ವೈವಿಧ್ಯಮಯ ಪಾತ್ರಗಳನ್ನು ದೊರಕಿಸಿಕೊಟ್ಟಿತು. ೧೯೫೨ರ ‘ವಲಯಾಪತಿ’ ಮೂಲಕ ತಮಿಳಿಗೆ ಕಾಲಿಟ್ಟ ಅವರು ಚಿತ್ರ ದೊಡ್ಡ ಯಶಸ್ಸು ಸಾಧಿಸದಿದ್ದರೂ ಮೊದಲ ತಮಿಳು ಚಿತ್ರದಲ್ಲಿಯೇ ಪ್ರಭಾವಿ ಅಭಿನೇತ್ರಿಯರೇ ಆಳುತ್ತಿದ್ದ ತಮಿಳು ರಂಗದಲ್ಲಿ ತಮ್ಮದೇ ಛಾಪು ಮೂಡಿಸಿ ಉದ್ಯಮದ ಗಮನ ಸೆಳೆದರು.
ಸಾಮಾಜಿಕ ಹಾಗೂ ಭಾವನಾತ್ಮಕ ಒತ್ತಡಗಳಿಗೆ ಸಿಲುಕುವ ಹೆಣ್ಣಿನ ಕರುಣಾಜನಕ ಸ್ಥಿತಿಗೆ ಸ್ಪಂದಿಸಿ ಭಾವಪೂರ್ಣವಾಗಿ ನಟಿಸಿದ ಪಣಂ ಪಡುತ್ತುಮ್ ಪಾಡು (1954) ಚಿತ್ರ ಅವರಿಗೆ ತಮಿಳು ಚಿತ್ರರಂಗದಲ್ಲಿ ಶಾಶ್ವತ ಸ್ಥಾನ ಗಳಿಸಿಕೊಟ್ಟಿತು. ಅಲ್ಲದೆ ತಮಿಳು ಚಿತ್ರರಂಗದ ನಟರತ್ನ ಶಿವಾಜಿ ಗಣೇಶನ್ ಮತ್ತು ನಿರ್ದೇಶಕರಾದ ಎ. ಭೀಮ್‌ಸಿಂಗ್ ಮತ್ತು ಕೆ. ಬಾಲಚಂದರ್ ಅವರ ಸಹಯೋಗ ಜಾನಕಿ ಅವರ ವೃತ್ತಿಬದುಕನ್ನು ಉಜ್ವಲಗೊಳಿಸಿತು.

ಶಿವಾಜಿ ಗಣೇಶನ್ ಮತ್ತು ಸೌಕಾರ್ ಜಾನಕಿಯವರ ಜೋಡಿಯಲ್ಲಿ ಅತ್ಯಂತ ಅಪರೂಪದ ಹಾಗೂ ಕಲಾತ್ಮಕ ನಟನಾ ಜುಗಲ್ಬಂದಿ ನಡೆದದ್ದು ತಮಿಳು ಚಿತ್ರರಂಗದ ಇತಿಹಾಸದಲ್ಲಿ ದಾಖಲೆಯಾಗಿದೆ. ಶಿವಾಜಿ ಗಣೇಶನ್ ಪಾತ್ರದ ದ್ವಿತೀಯ ಪತ್ನಿಯಾಗಿ ನಟಿಸಿದ ಪಾಲುಂ ಪಳಮುಂ (1961) ಚಿತ್ರದಲ್ಲಿ ಗಂಡನ ಹಳೆಯ ನೆನಪುಗಳನ್ನು ಅಳಿಸಲಾಗದೆ, ತಾನೇ ಸ್ವತಃ ಹಿಂದೆ ಸರಿಯುವ ಪಾತ್ರಕ್ಕೆ ಜಾನಕಿಯವರು ನೀಡಿದ ಸಂಯಮದ ಅಭಿನಯ ಅಪಾರ ಘನತೆ ತಂದಿತ್ತಿತು. ಪತಿಗೆ ನಿಷ್ಠೆಯಾದ, ಭಾವನೆಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವ ಗೌರವಪೂರ್ಣ ಹೆಣ್ಣಾಗಿ ಅವರು ಪಾರ್ ಮಗಳೇ ಪಾರ್ (1963) ಚಿತ್ರದಲ್ಲಿ ಶಿವಾಜಿಯವರೊಂದಿಗೆ ಮರಳಿ ಮಿಂಚಿದರು. ಶಿವಾಜಿ ಅವರ ಸ್ವಂತ ನಿರ್ಮಾಣದ ಚಿತ್ರ ಪುದಿಯ ಪರವೈ (1964) ಜಾನಕಿ ಅವರ ಅಭಿನಯದ ಕಲಾತ್ಮಕ ಮೈಲಿಗಲ್ಲು: ನಿಗೂಢ ಮತ್ತು ಮನೋವೈಜ್ಞಾನಿಕ ತೀವ್ರತೆಯನ್ನು ಮೇಳೈಸಿದ ‘ಚಿತ್ರಾ’ ಮತ್ತು ‘ಸರಸಾ’ ದ್ವಿಪಾತ್ರವು ಶಿವಾಜಿಯವರಿಗೆ ಸರಿಸಾಟಿಯಾಗಿ ನಿಂತಿತ್ತು. “ಪಾರ್ಥ ಜ್ಞಾಪಕಮ್ ಇಲ್ಲೆಯೋ” ಹಾಡಿನಲ್ಲಿ ಅವರ ಅಭಿನಯ ಅಮರ. ತಾನು ಕೇವಲ “ಕಣ್ಣೀರಿನ ನಾಯಕಿ” ಅಲ್ಲ ಎಂಬುದನ್ನು ಈ ಚಿತ್ರದ ಮೂಲಕ ಸಾರಿದರು! ಇದಲ್ಲದೆ ಮೋಟಾರ್ ಸುಂದರಂ ಪಿಳ್ಳೈ, ಉಯರ್ದ ಮಣ್ ಅವರ ಜೋಡಿಯ ಇನ್ನೆರಡು ಮಹೋನ್ನತ ಚಿತ್ರಗಳು.
‘ಸೌಕಾರ್’ ಜಾನಕಿ ಅವರೊಳಗಿನ ಕಲಾಚೇತನವನ್ನು ಹೊಸ ಎತ್ತರಕ್ಕೆ ಒಯ್ದವರು ನಿರ್ದೇಶಕ ಕೆ. ಬಾಲಚಂದರ್. ನೀರ್ಕುಮಿಳೆ (1965) ಚಿತ್ರದಿಂದ ಆರಂಭವಾದ ಈ ಜೋಡಿಯ ಕಲಾತ್ಮಕ ಪಯಣ ದೀರ್ಘಕಾಲ ಉಳಿಯಿತು. ಬಾಲಚಂದರ್ ಅವರ ಸಮರ್ಥ ನಿರ್ದೇಶನದಲ್ಲಿ ಜಾನಕಿಯವರು ಕೇವಲ ಕಣ್ಣೀರಿಡುವ ಹೆಣ್ಣಿನ ಪಾತ್ರದಿಂದ ಆಚೆಗೆ ಬಂದರು. ಅವರ ಚಿತ್ರಗಳಲ್ಲಿ ಮನದಾಳದ ತಲ್ಲಣಗಳಿರುವ ಕಷ್ಟಸಹಿಷ್ಣು ಮಧ್ಯಮ ವರ್ಗದ ಮಹಿಳೆಯಾಗಿ, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಉಲ್ಲಾಸಮಯ ಹಾಸ್ಯ ಪಾತ್ರಗಳಲ್ಲಿ, ಮದುವೆ ಮತ್ತು ಸುಂದರ ಸಂಬಂಧಗಳನ್ನು ನಿಭಾಯಿಸುವ ಪ್ರಬುದ್ಧ ನಾರಿಯಾಗಿ, ದೃಢ ನಿರ್ಧಾರಗಳ ಶಕ್ತಿಯುತ ಹಾಗೂ ಅಧಿಕಾರಯುತ ಮಹಿಳೆಯಾಗಿ, ತಮ್ಮದೇ ಆದ ಸ್ವತಂತ್ರ ಭಾವನೆ, ಸ್ವಾಭಿಮಾನ ಮತ್ತು ಭಾವನಾತ್ಮಕ ಸ್ವಾವಲಂಬನೆ ಹೊಂದಿರುವ ಹೆಣ್ಣಾಗಿ ಗಂಭೀರ ಪಾತ್ರಗಳಿಗೆ ಜೀವ ತುಂಬಿದರು. ಇವರಿಬ್ಬರ ಈ ಐತಿಹಾಸಿಕ ಕಲಾ-ಸಂಗಮದಲ್ಲಿ ನೀರ್ಕುಮಿಳೆ ಅಲ್ಲದೆ ಬಾಮಾ ವಿಜಯಂ, ಎದಿರ್ ನೀಚಲ್, ಇರು ಕೋಡುಗಳ್, ಕಾವಿಯ ತಲೈವಿ, ತಿಲ್ಲು ಮುಲ್ಲು ಮತ್ತು ಪುದು ಪುದು ಅರ್ಥಂಗಳ್ ನಂತಹ ಅನರ್ಘ್ಯ ರತ್ನಗಳು ರೂಪುಗೊಂಡವು. ನೀರ್ಕುಮಿಳೆ ಚಿತ್ರದಲ್ಲಿ ಸಾಮಾನ್ಯ ಮಧ್ಯಮ ವರ್ಗದ ಹೆಣ್ಣಿನ ಮನದಾಳದ ಭಾವನೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಅಭಿವ್ಯಕ್ತಿಸಿದ ಜಾನಕಿ ಅವರು ಎದಿರ್ ನೀಚಲ್ (1968) ಚಿತ್ರದ ‘ಪಟ್ಟು ಮಾಮಿ’ಯಾಗಿ ಹರಟೆ ಹೊಡೆಯುವ, ತಂಟೆಕೋರ, ತಮಾಷೆಯ ನೆರೆಮನೆಯಾಕೆಯಾಗಿ ನಗುವಿನ ಹೊಳೆಯನ್ನೇ ಹರಿಸಿದರು. ಜನರನ್ನು ಅಳಿಸುತ್ತಿದ್ದ ನಟಿ, ನಗಿಸಲೂ ಬಲ್ಲರು ಎಂದು ನಿರೂಪಿಸಿದ ಕ್ಷಣವಿದು!
ಕನ್ನಡದಲ್ಲಿ ಇವರ ಸಿನೆಮಾಗಳು ಸಂಖ್ಯೆಯಲ್ಲಿ (24) ಕಡಿಮೆಯಿದ್ದರೂ, ಐತಿಹಾಸಿಕವಾಗಿ ಪ್ರಮುಖವಾದವುಗಳು: ಮುಖ್ಯವಾಗಿ ಪ್ರಸಿದ್ಧ ನಾಟಕವನ್ನು ಆಧರಿಸಿ ತಯಾರಾದ ‘ಸದಾರಮೆ’ (1956) ಚಿತ್ರದ ನಾಯಕಿಯಾಗಿ ಅವರು ಕನ್ನಡ ಪ್ರೇಕ್ಷಕರ ಗಮನ ಸೆಳೆದರು. ತನಗಾಗಿ ರಾಜ್ಯವನ್ನೂ ದಾನ ಮಾಡಿ ದೇಶಭ್ರಷ್ಟನಾದ ರಾಜನನ್ನು ಹುಡುಕಲು ಹೊರಡುವ ಸದಾರಮೆಯ ಸಾಹಸಗಳಿಗೆ ಅವರು ಜೀವ ತುಂಬಿದರು. ಉದಯಕುಮಾರ್ ಅವರ ಮೊದಲ ಚಿತ್ರ ‘ಭಾಗ್ಯೋದಯ’ (1956) ಚಿತ್ರದಲ್ಲಿ ನಟಿಸಿದ ಅವರು ತಮಿಳು ತೆಲುಗು ಚಿತ್ರಗಳಲ್ಲಿ ಬಿಡುವಿಲ್ಲದೆ ನಟಿಸುತ್ತಿದ್ದ ಸಮಯದಲ್ಲಿ ಕನ್ನಡದಲ್ಲಿ ಆಹ್ವಾನ ಬಂದಾಗ ಸಂತೋಷದಿಂದಲೇ ಒಪ್ಪಿಕೊಳ್ಳುತ್ತಿದ್ದರು. ಬಿ.ಆರ್. ಪಂತುಲು ಅವರ ರತ್ನಗಿರಿ ರಹಸ್ಯ ಮತ್ತು ಸ್ಕೂಲ್ ಮಾಸ್ಟರ್ ಚಿತ್ರಗಳಲ್ಲಿ ಪಾತ್ರ ಚಿಕ್ಕದಾದರೂ ಒಪ್ಪಿ ಅಭಿನಯಿಸುತ್ತಿದ್ದದ್ದು ಕನ್ನಡದ ಅಭಿಮಾನದಿಂದಲೇ.
ತೆರೆಯ ಮೇಲೆ ಡಾ. ರಾಜ್‌ಕುಮಾರ್ ಅವರೊಂದಿಗೆ ದೀರ್ಘಕಾಲದ ಮತ್ತು ವೈವಿಧ್ಯಮಯ ಬಾಂಧವ್ಯವನ್ನು ಹೊಂದಿದ ವಿಶಿಷ್ಟ ಹೆಗ್ಗಳಿಕೆ ಅವರದು. ರಾಜಕುಮಾರ್ ಅವರನ್ನು ಯೋಗಿಯೆಂದು ಸಂದರ್ಶನದಲ್ಲಿ ಕರೆದ ಅವರು ಎಲ್ಲರಿಂದಲೂ ಒಳ್ಳೆಯದನ್ನೇ ಕಲಿಯುವ ಆಸಕ್ತಿಯ ರಾಜ್ ಅವರ ಗುಣಕ್ಕೆ ಮರುಳಾಗಿದ್ದರು. ಆರಂಭದಲ್ಲಿ ಅವರು ‘ಮಹಿಷಾಸುರ ಮರ್ದಿನಿ’ (1959) ಚಿತ್ರದಲ್ಲಿ ಮಹಿಷಾಸುರನ ಪತ್ನಿ ಗುಣವತಿಯ ಪಾತ್ರವನ್ನು ನಿರ್ವಹಿಸಿದರು. ರಾಜಕುಮಾರ್ ಅವರು ಎಸ್. ಜಾನಕಿ ಅವರೊಂದಿಗ ಹಾಡಿದ ‘ತುಂಬಿತು ಮನವ ತಂದಿತು ಸುಖವ’ ಯುಗಳ ಗೀತೆಯನ್ನು ಸಾಹುಕಾರ್ ಜಾನಕಿ ಮತ್ತು ರಾಜ್ ಅವರ ಮೇಲೆ ಚಿತ್ರೀಕರಿಸಲಾಗಿತ್ತು. ದಾರಿತಪ್ಪಿದ ಗಂಡನನ್ನು ಉಳಿಸಿಕೊಳ್ಳಲು ಸರ್ವಪ್ರಯತ್ನವನ್ನು ಮಾಡುವ ಸಾಧ್ವಿ ಗುಣವತಿಯ ಪಾತ್ರ ಬಹುಕಾಲ ನೆನಪಿನಲ್ಲುಳಿಯುವಂಥದ್ದು. ಭಾರತದ ಏಳು ಭಾಷೆಗಳಿಗೆ ಡಬ್ ಆಗಿ ಜಯಭೇರಿ ಬಾರಿಸಿದ ಮಹಿಷಾಸುರ ಮರ್ದಿನಿಯನ್ನು ಭಾರತದ ಮೊದಲ ಪ್ಯಾನ್ ಇಂಡಿಯಾ ಸಿನೆಮಾ ಎಂದೂ ಚಿತ್ರರಸಿಕರು ಹೇಳುತ್ತಾರೆ!

ಮುಂದೆ ‘ಗೌರಿ’ (1963), ‘ನವಕೋಟಿ ನಾರಾಯಣ’ (1964), ಮತ್ತು ‘ಸಾಕು ಮಗಳು’ (1963) ಸೇರಿದಂತೆ ಹಲವು ಗಮನಾರ್ಹ ಚಿತ್ರಗಳಲ್ಲಿ ರಾಜ್ ಅವರ ನಾಯಕಿಯಾಗಿ ನಟಿಸಿದರು. ‘ಸತಿ ಶಕ್ತಿ’ (1964) ಚಿತ್ರದಲ್ಲಿ ರಾಜ್ ವಹಿಸಿದ ವಾಮಾಚಾರಿ ರಕ್ತಾಕ್ಷನನ್ನು ಮೋಹಿಸುವ ನಾಗಲೆಯಾಗಿ ಅವರು ‘ಈ ವಿಲಾಸಿ ಚರಣದಾಸಿ’ ಹಾಡಿನಲ್ಲಿ ಅಭಿವ್ಯಕ್ತಿಸಿದ ಮಾದಕತೆ ಅವರ ನಟನಾ ಸಾಮರ್ಥ್ಯಕ್ಕೆ ಸೊಗಸಾದ ಉದಾಹರಣೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ, ಅವರು ರಾಜ್ ಅವರೊಂದಿಗೆ ಸಂಪೂರ್ಣವಾಗಿ ಭಿನ್ನವಾದ ಕೌಟುಂಬಿಕ ಪಾತ್ರಗಳಿಗೆ ರೂಪಾಂತರಗೊಂಡರು; ‘ಕನ್ಯಾರತ್ನ’ (1963) ಚಿತ್ರದಲ್ಲಿ ಸಹೋದರಿಯಾಗಿ, ‘ಮನಸಾಕ್ಷಿ’ ಚಿತ್ರದಲ್ಲಿ ವಿಧವೆಯಾಗಿ ಹಾಗೂ ‘ತಾಯಿಗೆ ತಕ್ಕ ಮಗ’ (1978) ಮತ್ತು ಡಾ. ರಾಜ್‌ಕುಮಾರ್ ಅವರ ಕೊನೆಯ ಚಿತ್ರವಾದ ‘ಶಬ್ದವೇಧಿ’ (2000)ಯಲ್ಲಿ ಅವರ ತಾಯಿಯಾಗಿ ನಟಿಸಿದರು. ಪುನೀತ್ ಅವರ ‘ಅಭಿ’ ಚಿತ್ರದಲ್ಲಿ ನಟಿಸಿದರು. ‘ಆರದ ಗಾಯ’ ಚಿತ್ರದಲ್ಲಿ ನ್ಯಾಯಾಧೀಶೆಯ ಪಾತ್ರದಲ್ಲಿ ಅವರು ತಮ್ಮ ಅಭಿನಯದ ಹಳೆಯ ವೈಭವವನ್ನು ಮರಳಿ ತೆರೆಗೆ ತಂದರು. ‘ಪುಂಗಿದಾಸ’ (2014) ಅವರ ಅಭಿನಯಿಸಿದ ಕೊನೆಯ ಕನ್ನಡ ಚಿತ್ರವಾದರೆ ‘ಅನ್ನಿ ಮಂಚಿ ಶಕುನಾಲೆ’ ತೆಲುಗು ಚಿತ್ರ ಅವರ ಕೊನೆಯ ಚಿತ್ರ.
ಹಿಂದೀ ಚಿತ್ರರಂಗ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಚಿತ್ರಗಳ ಸಂಖ್ಯೆ ಕಡಿಮೆಯಿದ್ದರೂ, ಭಾಷೆಯ ಎಲ್ಲೆಗಳನ್ನು ಮೀರಿದ ದಕ್ಷಿಣ ಭಾರತದ ನಟಿಯರ ಹೆಮ್ಮೆಯ ಪರಂಪರೆಯ ಭಾಗವಾದರು.
ಸಂಕ್ಷಿಪ್ತವಾಗಿ ಹೇಳುವುದಾದರೆ ಸಾಹುಕಾರ್ (ಸೌಕಾರ್) ಜಾನಕಿ ಅವರ ಜೀವನಗಾಥೆಯು ತಮ್ಮ ವೈಯಕ್ತಿಕ ಬದುಕಿನ ಪ್ರತಿಕೂಲ ಪರಿಸ್ಥಿತಿಗಳನ್ನೇ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡ, ಭಾಷೆ ಮತ್ತು ಪೀಳಿಗೆಗಳ ಗಡಿಗಳನ್ನು ದಾಟಿ ನಿಂತ, ಹಾಗೂ ಒಬ್ಬ ಜನಪ್ರಿಯ ನಾಯಕಿಯ ಹಂತದಿಂದ ಭಾರತೀಯ ಚಿತ್ರರಂಗದ ಅತ್ಯಂತ ಸುದೀರ್ಘ ಮತ್ತು ಸಾರ್ವಕಾಲಿಕ ಅಭಿನೇತ್ರಿಯಾಗಿ ರೂಪಾಂತರಗೊಂಡ ಅಪರೂಪದ ಮಹಿಳೆಯ ದಿಟ್ಟತನದ ಕಥೆ. ಅವರು ಭಾರತೀಯ ಸಿನಿಮಾರಂಗದಲ್ಲಿ ಬದುಕುಳಿಯಲು ಹೆಣಗಲಿಲ್ಲ; ಬದಲಾಗಿ ಕಾಲಕ್ಕನುಗುಣವಾಗಿ ತಮ್ಮನ್ನು ತಾವು ಮರುಶೋಧಿಸಿಕೊಳ್ಳುತ್ತಾ, ತಮ್ಮ ಆ ಸುದೀರ್ಘ ಕಲಾಪಯಣವನ್ನೇ ಒಂದು ಅದ್ಭುತ ಕಲೆಯನ್ನಾಗಿ ಪರಿವರ್ತಿಸಿದರು.

ಡಾ. ಕೆ. ಪುಟ್ಟಸ್ವಾಮಿ
ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.



