ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಹಾಸನ ನೆಲದ ಚೈತನ್ಯ ಅದರೊಡಲ ಕುಡಿಗಳಲೂ ಪಡಿಮೂಡಿವೆ. ಶಿಕ್ಷಣ ಕಲೆಗೆ, ಕಲೆಯು ಶಿಕ್ಷಣಕ್ಕೆ ದಾರಿಯಾಗಿ, ಇಲ್ಲಿನ ಮಹಿಳೆಯರನ್ನು ಚಲನಚಿತ್ರ ಕ್ಷೇತ್ರದ ಕಡೆ ಚಲಿಸುವಂತೆ ಮಾಡಿರುವುದನ್ನು ಗಮನಿಸಬಹುದು. ಚಿತ್ರೋದ್ಯಮದ ವಿಶಾಲದಾಲದ ಮರದಲ್ಲಿ ಹರಡಿ ಹೋಗಿರುವ ಹಾಸನ ಹೃದಯ ಸಿರಿ ಚೈತನ್ಯಗಳ ಸಂಖ್ಯೆ ಅಗಣಿತ. ದಾರಿಯಿಲ್ಲದ ಬಾನಿನಲ್ಲಿ ಇದೇ ಗುರಿ ಹಿಡಿದು ಹೊರಟ ಹೊಸ ಹಕ್ಕಿಗಳಿಗೆ ಬೆಳಕಾಗಿ, ಅರಿವಾಗಿ, ಕಸುವಾಗಿ ದಿಕ್ಕು ತೋರಬಲ್ಲ ಹಾಸನದ ಮಹಿಳಾ ಕಲಾಸಾಧಕರ ಕಿರು ಪರಿಚಯ ಇಲ್ಲಿದೆ.
ಹಾಸನದ ಅರಕಲಗೂಡಿನ ಗಡಿಭಾಗದ ಹಳ್ಳಿ ಅರೆಗಲ್ಲಿನಿಂದ 1954ರಲ್ಲಿ ಶುರುವಾದ ಕನ್ನಡದ ಪ್ರಮುಖ ನಟಿ ಆರತಿಯವರ ಜೀವನ ದಾರಿಯು ತೆರೆದ ಹಾದಿಗಳು, ಸಾಗಿದ ದೂರ ಅಧ್ಯಯನಾರ್ಹ. ಓದಿಗಾಗಿ ಕೊಣನೂರು, ಮೈಸೂರು ಹಾದು, 1969ರಲ್ಲಿ ಚಂದನವನ ಪ್ರವೇಶಿಸಿದ ನಟಿ, ತಮ್ಮ ಸೂಕ್ಷ್ಮ ಅಭಿನಯ ಪ್ರತಿಭೆ, ನಟನೆಯೆಡೆಗಿನ ಬದ್ಧತೆಗಳಿಂದ 17 ವರ್ಷಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಸ್ತ್ರೀ ಕೇಂದ್ರಿತ ಚಲನಚಿತ್ರಗಳಲ್ಲಿ ನಟನೆ, ಮುಖ್ಯವಾಗಿ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ 125ಕ್ಕೂ ಹೆಚ್ಚಿನ ಚಲನಚಿತ್ರಗಳಲ್ಲಿ ನಾಯಕಿಯಾಗಿ ದೃಢವಾದ ಹೆಜ್ಜೆ ಗುರುತುಗಳನ್ನು ಚಿತ್ರರಂಗದಲ್ಲಿ ಮೂಡಿಸಿದ್ದಾರೆ.
ಇದನ್ನು ಓದಿದ್ದೀರಾ?: ಕೃಷಿಯನ್ನೇ ಖುಷಿಯಾಗಿಸಿಕೊಂಡಿರುವ- ಹೇಮಾ ಅನಂತ್
1972ರಲ್ಲಿ ತೆರೆಕಂಡ ನಾಗರಹಾವು, ಉಪಾಸನೆ, ಶುಭಮಂಗಳ, ಧರ್ಮಸೆರೆ ಮತ್ತು ರಂಗನಾಯಕಿ ಇವರ ವೃತ್ತಿಜೀವನದ ಮೈಲಿಗಲ್ಲು ಚಿತ್ರಗಳಾಗಿದ್ದು 6 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, 4 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದು, ಸಾಲು ಸಾಲು ಯಶಸ್ವೀ ಚಿತ್ರಗಳ ಮೂಲಕವೂ ತಮ್ಮ ನಟನಾ ಸಾಮರ್ಥ್ಯ ನಿರೂಪಿಸಿದ್ದಾರೆ. ನಟನೆ ನಿಲ್ಲಿಸಿದ ಅವರು ತಮ್ಮ ಚೈತನ್ಯದ ಹರಿವನ್ನು ಸಾಮಾಜಿಕ ಕಾರ್ಯಗಳೆಡೆಗೆ ತಿರುಗಿಸಿದ ಆರತಿಯವರ ಕಾರ್ಯಶಕ್ತಿಗಳು ಬೆರಗು ಹುಟ್ಟಿಸುವುದಲ್ಲದೆ ಚೇತೋಹಾರಿಯೂ ಆಗಿವೆ. ವರದಿಗಳ ಪ್ರಕಾರ ಬಡ ಹೆಣ್ಣುಮಕ್ಕಳಿಗೆ ಶಿಕ್ಷಣ, ಗ್ರಾಮೀಣಾಭಿವೃದ್ಧಿಗಾಗಿ ಸಕ್ರಿಯವಾಗಿ ಇವರು ಶ್ರಮಿಸಿದ್ದು, ಸುಮಾರು 20 ಹಳ್ಳಿಗಳನ್ನು ದತ್ತು ಪಡೆದು ಅವುಗಳ ಕಲ್ಯಾಣಕ್ಕಾಗಿ ಶ್ರಮಿಸುವ ಮೂಲಕ ಸಾಮಾಜಿಕ ಅಭಿವೃದ್ಧಿ ಕಾರ್ಯಗಳಿಗೆ ಕೊಡುಗೆ ನೀಡಿದ್ದಾರೆ. ಕೆಲಕಾಲ ಅಮೆರಿಕಾವಾಸಿಯಾಗಿದ್ದ ಆರತಿಯವರು 2005ರಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ, ವಿಮರ್ಶಕರ ಮೆಚ್ಚುಗೆ ಪಡೆದ ‘ಮಿಠಾಯಿ ಮನೆ’ ಚಿತ್ರದ ಮೂಲಕ ನಿರ್ದೇಶಕಿಯಾಗಿ ಕಾಲಾಂತರದಲ್ಲಿ ಇನ್ನೂ ಪಕ್ವಗೊಂಡ ತಮ್ಮ ಪ್ರತಿಭೆಯ ಬೆಳಕನ್ನು ಚಿತ್ರಜಗತ್ತಿಗೆ ಹರಿಸಿ ಅವರೊಂದು ವಿಸ್ಮಯವಾದರು. ಕರ್ನಾಟಕದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಇವರು- ಸಾಧನೆ, ಕೊಡುಗೆಗಳು, ಸಾಧನೆಯ ಶಿಖರವೇರ ಬಯಸುವವರಿಗೆ ನವ ಸ್ಫೂರ್ತಿ ತುಂಬಬಲ್ಲದು.
ಇದನ್ನು ಓದಿದ್ದೀರಾ?: ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು
ಹಾಸನದ ಹೊಳೆನರಸೀಪುರದಲ್ಲಿ ರಂಗಭೂಮಿ ಕಲಾವಿದರ ಕುಟುಂಬದಲ್ಲಿ 18 ಸೆಪ್ಟೆಂಬರ್ 1975ರಂದು ಜನಿಸಿದ ಗಿರಿಜಾ- ಶೃತಿಯಾಗಿ ಚಂದನವನದಲ್ಲಿ ನಿನಾದ ಹೊಮ್ಮಿಸಿದ ಪರಿ ಪ್ರೇರಣಾದಾಯಕ. 90ರ ದಶಕದಲ್ಲಿ ಇವರು ಪೋಷಿಸಿದ ಭಾವನಾತ್ಮಕ ಪಾತ್ರಗಳಿಂದಾಗಿ ಇವರನ್ನು ಮನೆಮಗಳಾಗಿ ಜನ ಅಪ್ಪಿಕೊಂಡರು. ಹೆಚ್ಚು ಮಹಿಳೆಯರನ್ನು ಚಲನಚಿತ್ರ ಮಂದಿರಕ್ಕೆ ಸೆಳೆದ ಖ್ಯಾತಿ ಇವರದು. ಈ ಮೂಲಕ ಶೃತಿಯವರು ಪೋಷಿಸಿದ ಮಹಿಳಾ ಪಾತ್ರಗಳಲ್ಲಿನ ನೋವು, ತಲ್ಲಣ, ಒತ್ತಡಗಳನ್ನು ಮಹಿಳೆಯರು ತಮ್ಮೊಳಗೂ ಗುರುತಿಸಿಕೊಂಡದ್ದು ಅರಿವಿನ ಒಂದು ಹಂತವಾಗಿ ಕಾಣುತ್ತದೆ. ಶೃತಿ ಪ್ರಧಾನವಾಗಿ ಕನ್ನಡ, ಜೊತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ತುಳು ಚಿತ್ರಗಳೂ ಸೇರಿದಂತೆ 160ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಈ ಪೈಕಿ 130ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ನಾಯಕಿ ಪ್ರಧಾನ ಚಿತ್ರಗಳಲ್ಲಿ ಯಶಸ್ವಿಯಾಗಿ ನಟಿಸಿದ ಕೆಲವೇ ನಟಿಯರಲ್ಲಿ ಇವರೂ ಒಬ್ಬರಾಗಿದ್ದು, ಚುರುಕಾದ, ಶಕ್ತಿಯುತ ನೃತ್ಯವನ್ನೂ ಮಾಡಬಲ್ಲ ಸ್ಟಾರ್ ನಟಿಯಾಗಿದ್ದವರು. ತಮ್ಮ ನಟನಾ ಕೌಶಲ್ಯಕ್ಕಾಗಿ 35 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಇವರು ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಒಂದು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ನಾಲ್ಕು ಫಿಲ್ಮ್‌ಫೇರ್ ಸೌತ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸುರೇಶ್ ಹೆಬ್ಳೀಕರ್ ನಿರ್ದೇಶನದ ಆಘಾತ, ತಮಿಳಿನಲ್ಲಿ ಶ್ರೇಷ್ಠ ನಿರ್ದೇಶಕ ಕೆ.ಬಾಲಚಂದರ್ ಅವರು ನಿರ್ದೇಶಿಸಿ, ತಮಿಳು ಚಿತ್ರರಂಗದಲ್ಲಿ ಶೃತಿ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ತಂದು ಕೊಟ್ಟ ಕಲ್ಕಿ, ವಿಷ್ಣುವರ್ಧನ್ ಅವರ ಜೊತೆ ನಟಿಸಿದ ವೀರಪ್ಪನಾಯ್ಕ, ಸೂರಪ್ಪ, ಕವಿತಾ ಲಂಕೇಶ್ ಅವರ ಅವ್ವ, ರಾಷ್ಟ್ರ ಪ್ರಶಸ್ತಿ- ಪುಟ್ಟಕ್ಕನ ಹೈವೇ, ರಾಮ ಶ್ಯಾಮ ಭಾಮ ಚಿತ್ರದಲ್ಲಿನ ಅವರ ಹಾಸ್ಯ ಪಾತ್ರಗಳು ಶ್ರುತಿ ಅವರಿಗಿರುವ ಅಭಿನಯ ಶಕ್ತಿಯನ್ನು ನಿರೂಪಿಸುತ್ತವೆ. ತಾವೇ ನಿರ್ಮಿಸಿದ ‘ಗಟ್ಟಿಮೇಳ’ ಚಿತ್ರದಲ್ಲಿ ಚಿತ್ರಕಥೆಗೂ ಕೆಲಸ ಮಾಡಿದ್ದಾರೆ. 2008ರಲ್ಲಿ ಬಿಜೆಪಿಗೆ ಸೇರುವ ಮೂಲಕ ರಾಜಕೀಯಕ್ಕೆ ಬಂದ ಇವರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನು ಓದಿದ್ದೀರಾ?: ಸಮಾಜ ಸ್ಪಂದನಶೀಲೆ- ಸೌಭಾಗ್ಯ ಸಿ.
ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾದ ನುಗ್ಗೇಹಳ್ಳಿ ಪಂಕಜರವರ ‘ಬರಲೇ ಇನ್ನು ಯಮುನೆ’ ಕಾದಂಬರಿ (ಸಿಪಾಯಿರಾಮು ಚಿತ್ರ), ‘ಗಗನ’ ಕಾದಂಬರಿಗಳು ಚಲನಚಿತ್ರಗಳಾಗಿವೆ. ಐತಿಹಾಸಿಕವಾಗಿಯೂ ಮಹತ್ವವಾಗಿರುವ ಸಾಹಸ ಪ್ರಧಾನ ಚಿತ್ರ ಸಿಪಾಯಿ ರಾಮು(1972), ಕಾದಂಬರಿಯೊಂದನ್ನು ಆಧರಿಸಿದ ಮೊದಲ ಬಣ್ಣದ ಚಲನಚಿತ್ರವಾಗಿದ್ದು, ಇದರ ಯಶಸ್ಸು ಸಾಲು ಸಾಲು ಸಾಹಿತ್ಯಾಧರಿತ ಚಿತ್ರಗಳು ಬರಲು ಕಾರಣವಾಯಿತು. 1971-72ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಮೂರನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಹಾಗೂ ಲೀಲಾವತಿ ಅವರ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಚಿತ್ರ ಗೆದ್ದುಕೊಂಡಿತು. ವ್ಯವಸ್ಥೆ ನಿರಾಕರಿಸಿದ ನ್ಯಾಯವನ್ನು ಪಡೆಯಲು ಕಾನೂನನ್ನು ಉಲ್ಲಂಘಿಸುವ ನಾಯಕನ, ಈ ಚಿತ್ರ ಡಾ.ರಾಜ್‌ಕುಮಾರ್ ಅವರ ವೃತ್ತಿಜೀವನದ ಮುಖ್ಯ ಚಲನಚಿತ್ರಗಳಲ್ಲೊಂದಾಗಿದೆ. ಇದು ಚಂದನವನದಲ್ಲಿ ನಂತರದ ‘ಸಾಮಾಜಿಕ-ಸಾಹಸ’ ಚಿತ್ರಗಳ ಮೇಲೂ ಪ್ರಭಾವ ಬೀರಿತು.
ಹೊಳೆನರಸೀಪುರದವರಾದ ಮಂಗಳಾ ಸತ್ಯನ್ ಪ್ರಸಿದ್ಧ ಕಾದಂಬರಿಗಾರ್ತಿ. ಇವರ ಕಾದಂಬರಿಯಲ್ಲಿಯ ವಸ್ತುಗಳು ಸಮಾಜಕ್ಕೆ ಉತ್ತಮ ಸಂದೇಶ ಸಾರುವುದರಿಂದ ಇವರ ಭಾಗ್ಯಜ್ಯೋತಿ, ಮುಗ್ಧ ಮಾನವ, ಆಮುಖ ಕಾದಂಬರಿಗಳು ಮುರಳಿಗಾನ, ಅಮೃತಪಾನ ಚಲನಚಿತ್ರಗಳಾಗಿ ಜನಮನ್ನಣೆ ಪಡೆದಿವೆ. ಇವರು ಚಲನಚಿತ್ರ ಕ್ಷೇತ್ರದಲ್ಲಿ ಸ್ವಾತಿ, ಹೂವೊಂದು ಬೇಕು ಬಳ್ಳಿಗೆ ಚಿತ್ರಗಳಿಗೆ ಚಿತ್ರಕಥೆ ಸಂಭಾಷಣೆ ಬರೆಯುವ ಮೂಲಕ ಉತ್ತಮ ಚಿತ್ರ ಸಾಹಿತಿಯಾಗಿಯೂ ಸಾಧನೆ ಮಾಡಿದ್ದಾರೆ. ಇದಲ್ಲದೇ ಲಕ್ಷ್ಮಿ ಚಂದ್ರಶೇಖರ್ ಅವರು- ಚನ್ನರಾಯಪಟ್ಟಣದವರಾಗಿ ಇಡೀ ನಾಡಿನಾದ್ಯಂತ ಪ್ರಸಿದ್ಧರಾದ ರಂಗಭೂಮಿ ಮತ್ತು ಕಿರುತೆರೆ ಧಾರಾವಾಹಿ ಕಲಾವಿದೆ. ಅವರು- ಮತದಾನ, ಅವಸ್ಥೆ, ಕಿರಗೂರಿನ ಗಯ್ಯಾಳಿಗಳು, ಬೇರು, ಅತಿಥಿ, ತನನಂ ತನನಂ… ಇಂತಹ ಪ್ರಯೋಗಾತ್ಮಕ ಚಲನಚಿತ್ರಗಳಲ್ಲಿ ನಟಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ.
ಇದನ್ನು ಓದಿದ್ದೀರಾ?: ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು
‘ಮರಳಿ ಬಾ ಮನ್ವಂತರವೇ’ ಚಿತ್ರಕ್ಕೆ ಪ್ರಥಮ ಬಾರಿಗೆ ಗೀತ ಸಾಹಿತ್ಯ ನೀಡಿರುವ ಹೋರಾಟಗಾರ್ತಿ, ಕವಿ, ರೂಪ ಹಾಸನರ ಗೀತೆಗಳು- ಉಸಿರುಗಟ್ಟಿಸುವ ಕಾಲದಲ್ಲಿ ಪರಿವರ್ತನೆಯ, ಹೊಸಯುಗದ ಅಗತ್ಯವನ್ನು ಗುರುತಿಸಿ ಒಳನೋಟ ದಾಟಿಸಬಲ್ಲ, ದಿಕ್ಸೂಚಿ ಒದಗಿಸಬಲ್ಲ ಶಕ್ತಿಯಾಗಿ ಕಾಣುತ್ತವೆ. ಮಹಿಳಾ, ಜನಪರ ಕ್ಷೇತ್ರಗಳಲ್ಲಿ ಕವಯಿತ್ರಿ ನೇರ ಅನುಭವ ಹೊಂದಿರುವುದರಿಂದಲೂ ಸಾಹಿತ್ಯದಲ್ಲಿನ ದನಿ ಗಟ್ಟಿ ಹಾಗೂ ದಿಟ್ಟವಾಗಿರುವುದನ್ನು ಗಮನಿಸಬಹುದು. ಇಲ್ಲಗಳ ಬದಿಗೊತ್ತಿ ಎಲ್ಲವಾಗುವ ಛಲ ನಮಗೆ ಬೇಕೀಗ, ನೀ ಬರಿಯ ಹೆಣ್ಣಲ್ಲ, ನೀನೊಂದು ನದಿ ನದಿ ನದಿ, ನೀನೊಂದು ಎಚ್ಚರ, ನೀನೊಂದು ಅಚ್ಚರಿ, ನೀನೇ ಜಗದ ಮುನ್ನಡೆಗೆ ದಾರಿ ಮತ್ತು ನಿಂತ ನೀರಲ್ಲ ನದಿಯೆಂದರೆ… ನದಿಯಂತೆ ಹೆಣ್ಣೂ ಸದಾ ಪುಟಿವ ಚೈತನ್ಯದಾಗರ- ಗೀತೆ ಮತ್ತು ಸಾಲುಗಳು ಸಶಕ್ತವಾಗಿವೆ. ಈ ಗೀತೆಗಳ ಮೂಲಕ ಸಾಮಾಜಿಕ ಮೌಲ್ಯಗಳ ಅಪಮೌಲ್ಯವಾದಲ್ಲಿ ಮೌಲ್ಯಮಾಪನ ಮಾಡುವ ಸಮಾಜವಿಜ್ಞಾನಿಯಾಗಬೇಕು ಎಂಬ ಎಚ್ಚರ ಅವರ ಗೀತೆಗಳಲ್ಲಿದೆ. ಕ್ರೌರ್ಯ, ಅಜ್ಞಾನಗಳ ಜಾತಿ ಮತ್ತು ಮಹಿಳಾ ಶೋಷಣೆಗಳನ್ನು ಮೀರುವ ಕಾಣ್ಕೆಯ, ಘನತೆಯ ಅಗತ್ಯ ಸಾರುವ ತಿಳಿವಿನ, ಸಾರ್ಥಕ ಬದುಕಿಗೆ ದಾರಿಗಾಣಿಸುವ, ಸಾಹಿತ್ಯ, ವಿಚಾರಧಾರೆಗಳನ್ನು ದಾಟಿಸುವ ಈ ಚಿತ್ರದ ಗೀತಸಾಹಿತ್ಯದಲ್ಲಿ ಹೊಮ್ಮಿರುವ ದನಿ ಹೊಸಜಗದ ನಿರ್ಮಾಣಕ್ಕೆ ಕಾಣ್ಕೆಯಾಗಬಲ್ಲದು.
ಹಾಸನ ಮೂಲದವರಾದ ಪ್ರಣೀತಾ ಸುಭಾಷ್- ಕನ್ನಡ, ಮಲಯಾಳಂ, ಹಿಂದಿ ಅಲ್ಲದೆ ಅನೇಕ ವಾಣಿಜ್ಯಿಕವಾಗಿ ಯಶಸ್ವಿಯಾದ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ವಿಮರ್ಶಕರಿಂದ ಮೆಚ್ಚುಗೆ ಪಡೆದ ‘ಭೀಮ ತೀರದಲ್ಲಿ’ ಚಿತ್ರದ ನಟನೆಗಾಗಿ ಸಂತೋಷಮ್ ಪ್ರಶಸ್ತಿ, ಮಸ್ಸು ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟಿ ಎಡಿಸನ್ ಪ್ರಶಸ್ತಿ ಈಕೆಗೆ ದೊರೆತಿದ್ದು, ಫಿಲ್ಮ್‌ಫೇರ್ ಪ್ರಶಸ್ತಿ- ದಕ್ಷಿಣಕ್ಕೆ ಸಹ ನಾಮನಿರ್ದೇಶನಗೊಂಡಿದ್ದರು. ಕನ್ನಡದ ವಿಸ್ಲ್, ಬ್ರಹ್ಮ ಚಿತ್ರಗಳಿಗೆ ಸೇರಿದಂತೆ ಒಟ್ಟು ಮೂರು ಬಾರಿ ಸೈಮಾ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದ್ದರು. ಅವರ ಸಗುನಿ ಚಿತ್ರ ಪ್ರಪಂಚದಾದ್ಯಂತ 1,150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ದಾಖಲೆ ಮಾಡಿದ್ದು, ನೂರು ಕೋಟಿಗೂ ಹೆಚ್ಚು ಗಳಿಸಿದ ಅವರ ನಟನೆಯ ‘ಅತ್ತಾರಿಂಟಿಕಿ ದಾರೇದಿ’ ಚಿತ್ರ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗು ಭಾಷೆಯ ಚಲನಚಿತ್ರವಾಯಿತು. ಜೊತೆಗೆ ಇದೇ ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ- ದಕ್ಷಿಣ ಮತ್ತು ವಿವಿಧ ಪ್ರಶಸ್ತಿ ಸಮಾರಂಭಗಳಲ್ಲಿ ನಾಮನಿರ್ದೇಶನಗೊಂಡಿದ್ದರು.
ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್
ಪ್ರಣೀತಾ ಸುಭಾಷ್ ಭಾರತದಲ್ಲಿ ವಿವಿಧ ಲೋಕೋಪಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಉತ್ತಮ ಮೂಲಸೌಕರ್ಯ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಾರ್ವಜನಿಕ ಶಿಕ್ಷಣವನ್ನು ಆಧುನೀಕರಿಸುವತ್ತ ಕೆಲಸ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ಸ್ವಯಂಸೇವಕರ ಗುಂಪಿನೊಂದಿಗೆ ಹಳೆಯ ಸರ್ಕಾರಿ ಶಾಲೆಯೊಂದನ್ನೂ ನವೀಕರಿಸಿದ್ದಾರೆ. ಪ್ರಣೀತಾರಿಂದ ಪ್ರೇರಣೆಗೊಂಡು 13 ಇಂತಹುದೇ ಶಾಲೆಗಳನ್ನು ವಿವಿಧ ವ್ಯಕ್ತಿಗಳು ದತ್ತು ಪಡೆದಿದ್ದಾರೆ. ಪ್ರಣೀತಾ ಇದೇ ಉದ್ದೇಶಕ್ಕಾಗಿ 10 ಸಾವಿರ ಪೌಂಡ್ ಕೊಡುಗೆ ನೀಡಿದ್ದಾರೆ. ಏಪ್ರಿಲ್ 2019ರಲ್ಲಿ, ಚುನಾವಣಾ ಆಯೋಗವು, ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅವರನ್ನು ಬ್ರಾಂಡ್ ರಾಯಭಾರಿಯಾಗಿ ನೇಮಿಸಿತ್ತು. ಅದರಿಂದ ‘ರಾಜ್ಯ ಐಕಾನ್‌ಗಳು’ ಎಂದು ಕರೆಯಲ್ಪಟ್ಟಿದ್ದರು. 2018ರಲ್ಲಿ ಇವರು ಇಸ್ರೇಲ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಯೋಜಿಸಿದ್ದ ಯುವ ದಕ್ಷಿಣ ಭಾರತೀಯ ನಾಯಕರ ನಿಯೋಗದ ಭಾಗವಾಗಿದ್ದರು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಹಿನ್ನೆಲೆ ಗಾಯಕಿ ನಂದಿತಾ ಇಲ್ಲಿಯವರೆಗೆ, ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ 500ಕ್ಕೂ ಹೆಚ್ಚು ಚಲನಚಿತ್ರಗಳಿಗೆ 2000ಕ್ಕೂ ಹೆಚ್ಚು ಹಾಡುಗಳನ್ನು ಹಾಗೂ ಒಂಭತ್ತಕ್ಕೂ ಹೆಚ್ಚು ಭಾಷೆಗಳಲ್ಲಿ 5000ಕ್ಕೂ ಹೆಚ್ಚು ಭಕ್ತಿ, ಜಾನಪದ, ಸುಗಮ ಸಂಗೀತ ಗೀತೆಗಳನ್ನೂ ಹಾಡಿದ್ದಾರೆ. ನಂದಿತಾ ಅವರು ಇಳಯರಾಜ, ಮನೋಮೂರ್ತಿ, ಹಂಸಲೇಖ, ವಿ.ಮನೋಹರ್, ರಾಜೇಶ್ ರಾಮನಾಥ್ ಮುಂತಾದ ಅನೇಕ ಸಂಗೀತ ಸಂಯೋಜಕರೊಂದಿಗೆ ಕೆಲಸ ಮಾಡಿದ್ದು, ಎಸ್‌ಎಫ್‌ಎಂ ಮೆಚ್ಚಿನ ಗಾಯಕಿ ಪ್ರಶಸ್ತಿ, ಎರಡು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿ- ಫಿಲಂಫೇರ್ ದಕ್ಷಿಣ ಪ್ರಶಸ್ತಿ, ಉದಯ ಹಾಗೂ ಸುವರ್ಣ ಫಿಲ್ಮ್ ಪ್ರಶಸ್ತಿಗಳು ಮತ್ತು ಸತತ ಮೂರು ಬಾರಿ ಸೇರಿದಂತೆ ನಾಲ್ಕು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕರ್ನಾಟಕದಿಂದ ಈ ಸಾಧನೆ ಮಾಡಿದ ಏಕೈಕ ಗಾಯಕಿ ಅವರಾಗಿದ್ದು, ಡಬ್ಬಿಂಗ್ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಮೂಲತಃ ವೀಣಾವಾದಕಿಯಾಗಿರುವ ನಂದಿತಾ ಅವರು ಆಪ್ತಮಿತ್ರ ಮತ್ತು ಶ್ರೀ ಮಂಜುನಾಥ ಚಿತ್ರಗಳ ಹಾಡುಗಳಿಗಾಗಿ ವೀಣೆಯನ್ನೂ ನುಡಿಸಿದ್ದಾರೆ.
ಇದನ್ನು ಓದಿದ್ದೀರಾ?: ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ
ಕನ್ನಡದ ಜನಪ್ರಿಯ ಹಿನ್ನೆಲೆ ಗಾಯಕಿ ನಂದಿತಾ ಸಂಗೀತ ನಿರ್ದೇಶನಕ್ಕೆ ಕಾಲಿಟ್ಟಿದ್ದು, ತಮ್ಮ ಗಾಯನದಷ್ಟೇ ತಮ್ಮ ಸಂಯೋಜನೆಯಿಂದಲೂ ನೆನಪಿನಲ್ಲಿ ಉಳಿಯಬೇಕೆಂಬ ಬಯಕೆ ವ್ಯಕ್ತಪಡಿಸಿದ್ದಾರೆ. ಇವರಿಗೆ ದಸರಾ ಮಹೋತ್ಸವದಲ್ಲಿ ರಾಜ್ಯ ಸರ್ಕಾರ ಕಲ್ಪನಾ ಚಾವ್ಲಾ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ, ಐದು ಬಾರಿ ಸತತವಾಗಿ ಸಿನಿ ಫ್ಯಾನ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಮತ್ತು ಚಿತ್ರಪ್ರೇಮಿಗಳ ಸಂಘ, ಆರ್ಯಭಟ ಸಾಂಸ್ಕೃತಿಕ ಸಂಸ್ಥೆ, ಸುವರ್ಣ ವಾಹಿನಿ, ಝೀ ವಾಹಿನಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ಹಾಸನದ ಚಲನಚಿತ್ರ ನಟಿ, ನಿರ್ಮಾಪಕಿ ಮಿಲನ ನಾಗರಾಜ್ ಬರಹದಲ್ಲೂ ತೊಡಗಿಕೊಂಡಿದ್ದು, ತಮ್ಮ ಯಶಸ್ಸಿನ ಹಿಂದೆ ಕ್ರೀಡಾ ಅನುಭವ, ಮನೋಭಾವಗಳು ಮುಖ್ಯ ಪಾತ್ರ ವಹಿಸಿವೆ ಎನ್ನುತ್ತಾರೆ. ಇವರು ನಟಿಸಿ ನಿರ್ಮಿಸಿದ ಲವ್ ಮಾಕ್‌ಟೇಲ್ ಚಿತ್ರಕ್ಕಾಗಿ ಅತ್ಯುತ್ತಮ ನಟಿ(ಕನ್ನಡ) ವಿಭಾಗದಲ್ಲಿ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್, ಸೈಮಾ ಪ್ರಶಸ್ತಿ, ಉದಯೋನ್ಮುಖ ತಾರೆ- ಚಿತ್ತಾರ ಸ್ಟಾರ್ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ- ಎರಡನೇ ಅತ್ಯುತ್ತಮ ಚಿತ್ರ, ಸೈಮಾ- ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದ್ದು, ಹಲವು ನಾಮನಿರ್ದೇಶನಗಳನ್ನೂ ಗಳಿಸಿದ್ದಾರೆ. ಒಂದು ಮಲಯಾಳಂ ಚಿತ್ರವೂ ಸೇರಿದಂತೆ ಒಟ್ಟು 16 ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ನಟಿಯರಿಗೆ ನಟನಾವಧಿ ಕಡಿಮೆ ಎನಿಸುವ, ಮದುವೆಯ ನಂತರ ಬೇಡಿಕೆ ಕುಸಿಯುವ ಪ್ರವೃತ್ತಿ ಇರುವ ಚಿತ್ರರಂಗದಲ್ಲಿ ತಮ್ಮ ನಟನಾ ಸಾಮರ್ಥ್ಯದಿಂದ ಮಿಲನಾ ಇದನ್ನು ಬದಲಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್
ಹಾಸನ ಮೂಲದ ನಟಿ ಆಶಿಕಾ ರಂಗನಾಥ್ ವಿಶೇಷವಾಗಿ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದು, ತಮಿಳಿನಲ್ಲೂ ನಟನೆ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ, ಮದಗಜ, ಔ2 ಕನ್ನಡ ಚಲನಚಿತ್ರಗಳಿಗೆ ಅತ್ಯುತ್ತಮ ನಟಿ ಸೈಮಾ ಪ್ರಶಸ್ತಿ ಪಡೆದಿದ್ದು, ತೆಲುಗು ಚಿತ್ರಕ್ಕೆ ಸೇರಿದಂತೆ ಮೂರು ಬಾರಿ ನಾಮ ನಿರ್ದೇಶನಗೊಂಡಿದ್ದಾರೆ. ಈಕೆ ಫ್ರೀಸ್ಟೈಲ್, ಬೆಲ್ಲಿ ಮತ್ತು ವೆಸ್ಟರ್ನ್ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳಲ್ಲಿ ತರಬೇತಿ ಪಡೆದಿದ್ದಾರೆ. ಎರಡು ಛಾಯೆಗಳ ಪಾತ್ರವನ್ನು, ನಾಲ್ಕು ಪಾತ್ರಗಳನ್ನು ಸುಲಲಿತವಾಗಿ ನಿರ್ವಹಿಸಿರುವ ಕುರಿತು, ದುರ್ಬಲ ಬರವಣಿಗೆಯ ಚಿತ್ರಗಳಲ್ಲಿಯೂ ಸಹ ಆಶಿಕಾರ ಆತ್ಮವಿಶ್ವಾಸ, ಸಮತೋಲಿತ ಉಪಸ್ಥಿತಿಯನ್ನು, ಬಹುಮುಖ ಸಾಮರ್ಥ್ಯವನ್ನು ವಿಮರ್ಶಕರು ಪ್ರಶಂಸಿಸಿದ್ದಾರೆ. ಪ್ರಸಿದ್ಧ ನಟರಾದ ನಾಗಾರ್ಜುನ, ಚಿರಂಜೀವಿ ಮುಂತಾದವರೊಡನೆಯೂ ಆಶಿಕಾ ನಟಿಸಿದ್ದಾರೆ.

ಬಿಗ್ ಬಾಸ್ ಕನ್ನಡದಲ್ಲಿ ತಮ್ಮ ಭಾವನಾತ್ಮಕ ಪ್ರಬುದ್ಧತೆಯಿಂದ ತಮ್ಮದೇ ಅಭಿಮಾನಿ ವರ್ಗ ಗಳಿಸಿದ, ಪ್ರೇಕ್ಷಕರನ್ನು ಹಿಡಿದಿಟ್ಟ ಹಾಸನದ ನಟಿ, ನಾಗಿಣಿ ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್‌ರ 2025ರಲ್ಲಿ ತೆರೆಕಂಡ- ಪಾರುಪಾರ್ವತಿ ಚಿತ್ರದಲ್ಲಿನ ಪ್ರವಾಸಿಗಳ ಪಾತ್ರ ನಿರ್ವಹಿಸಿರುವ ದೀಪಿಕಾ ತಮ್ಮ ಅಭಿವ್ಯಕ್ತಿಶೀಲ ಕಣ್ಣುಗಳ ನಟನೆಯಿಂದ, ಭಾವನಾತ್ಮಕ ದೃಶ್ಯಗಳನ್ನು ನಿರ್ವಹಿಸುವ ಸಾಮರ್ಥ್ಯದಿಂದ ಹೆಸರುವಾಸಿಯಾಗಿದ್ದಾರೆ. ಡಾನ್ಸ್ ಕರ್ನಾಟಕ ಡ್ಯಾನ್ಸ್‌ನಂತಹ ರಿಯಾಲಿಟಿ ನೃತ್ಯ ಸ್ಪರ್ಧೆಯಲ್ಲಿ ಗೆದ್ದಿರುವ ದೀಪಿಕಾ, ಅಭಿವ್ಯಕ್ತಿಶೀಲ ಪ್ರದರ್ಶನ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಪ್ರತಿಭೆಯ ವ್ಯಾಪ್ತಿಯನ್ನು ಪ್ರದರ್ಶಿಸಿದ್ದು ಇದುವರೆಗೂ ಸುಮಾರು 9 ಚಿತ್ರಗಳಲ್ಲಿ ನಟಿಸಿದ್ದಾರೆ.
ಇದನ್ನು ಓದಿದ್ದೀರಾ?: ಜಾನಪದ ಕ್ಷೇತ್ರದ ಅನನ್ಯ ಸಾಧಕಿ- ಡಾ. ವೈ.ಸಿ.ಭಾನುಮತಿ
ಹಾಸನದ ಪ್ರಿಯಾ ಹಾಸನ್ ನಟಿ, ನಿರ್ದೇಶಕಿ, ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ನಟಿ ಜಾಹ್ನವಿಯವರು ಪ್ಯಾನ್ ಇಂಡಿಯಾ ತಮಿಳು ಚಿತ್ರವಾದ ಯುವನ್ ರಾಬಿನ್ ಹುಡ್, ಕನ್ನಡದ ಅಧಿಪಾತ್ರ ಚಿತ್ರಗಳಲ್ಲಿ ನಟಿಸಿದ್ದು ಪ್ರಮುಖ ಪಾತ್ರಗಳನ್ನು ನಿಭಾಯಿಸಬಲ್ಲ ಸಾಮರ್ಥ್ಯವನ್ನು ಪ್ರದರ್ಶಿಸಿರುವುದಾಗಿ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಅರಸೀಕೆರೆ ಮೂಲದ ಉಷಾ ದಾತಾರ್ ಅವರು ‘ಕಾಡು ಕುದುರೆ’, ‘ಮಾಡಿ ಮಾಡಿದವರು’ ಮುಂತಾದ ಕನ್ನಡ ಚಲನಚಿತ್ರಗಳಿಗೆ ನೃತ್ಯ ನಿರ್ದೇಶನವನ್ನು ಮಾಡಿದ್ದಾರೆ. ಹಾಗೂ ನಾಟ್ಯ ವಿಶಾರದೆ- ಖ್ಯಾತ ಚಲನಚಿತ್ರ ತಾರೆ ವೈಜಯಂತಿ ಮಾಲಾರವರು ಮೋಹಿನಿ ಆಟ್ಟಂ ನೃತ್ಯವನ್ನು ಉಷಾ ದಾತಾರ್‌ರಿಂದ ಕಲಿತಿದ್ದಾರೆ ಎಂಬುದು ಹೆಮ್ಮೆಯ ವಿಷಯವಾಗಿದೆ. ವೇದಾ ಹಾಸನ ಅವರು ಪೋಷಕ ನಟಿಯಾಗಿ ಮಲಯಾಳಂ, ಕನ್ನಡ, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ರಂಗಭೂಮಿ ಕಲಾವಿದೆಯಾಗಿ ಗುರ್ತಿಸಿಕೊಂಡಿದ್ದ ಹಾಸನದ ಪೂಜಾ ರಘುನಂದನ್ ಇತ್ತೀಚಿನ ದಿನಗಳಲ್ಲಿ ಕಲಾತ್ಮಕ ಚಿತ್ರಗಳಲ್ಲಿ ನಟಿಸಿ, ಒಳ್ಳೆಯ ಚಿತ್ರ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ‘ಕೊನೆಯ ನಿಲ್ದಾಣ’, ‘ಪುಟ್ಟಗೂಡಿನ ಪಟ್ಟದರಸಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಪೂಜಾ ನಟಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರೆಜಿಲ್‌ನ ಕ್ಯಾಂಪಿನಾಸ್ ಚಿತ್ರೋತ್ಸವದಲ್ಲಿ ‘ಮಾರ್ವೆನ್’ ಕಿರುಚಿತ್ರಕ್ಕಾಗಿ ‘ಅತ್ಯುತ್ತಮ ನಟಿ’ ಪ್ರಶಸ್ತಿಯು ಸಹ ಲಭಿಸಿದೆ. ವೇದಾ ಶಿವಕುಮಾರ್ ಪೋಷಕ ನಟಿಯಾಗಿ ಕನ್ನಡ, ತೆಲುಗು ಮತ್ತು ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಸನದ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಒಂದಾನೊಂದು ಕಾಲದಾಗ.. ಕಿರುಚಿತ್ರದಲ್ಲಿಯೂ ನಟಿಸಿದ್ದಾರೆ. ವಂಡರ್ ಕಿಡ್ ಖ್ಯಾತಿಯ ಬಹುಮುಖ ಪ್ರತಿಭೆ ಡಾ.ಶ್ರೀಯಾ ದಿನಕರ್, ಕನ್ನಡದಲ್ಲಿ ‘ಬಿಲಿಯನ್ ಡಾಲರ್ ಬೇಬಿ’ ಎಂಬ ಚಲನಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ನಿರ್ದೇಶಕಿಯಾಗಿಯೂ ಅವರು ಸಿನಿಮಾ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಇದನ್ನು ಓದಿದ್ದೀರಾ?: ಪೌರಕಾರ್ಮಿಕ ಮಹಿಳೆಯರಿಗೆ ಸಿಗಬೇಕಿದೆ ಘನತೆಯ ಬದುಕು…
ಇದಿಷ್ಟು- ಕಡಿಮೆ ಅವಧಿಯಲ್ಲಿ ಆದ ನನ್ನ ಅಧ್ಯಯನ, ಕ್ಷೇತ್ರ ಕಾರ್ಯಗಳ ಮೂಲಕ ಸಿಕ್ಕ, ಲೇಖನದ ಚಿಕ್ಕ ಪರಿಧಿಯಲ್ಲಿ ದಾಖಲಿಸುತ್ತಿರುವ ಚಿತ್ರೋದ್ಯಮದಲ್ಲಿ ಹಾಸನ ಮಹಿಳೆಯರ ಕಿರು ಹೆಜ್ಜೆ ಗುರುತುಗಳ ಮಾಹಿತಿಯಷ್ಟೇ. ಇನ್ನೂ ಬಹಳಷ್ಟು ಮಂದಿ ದಾಖಲೆಗೆ ಸಿಗದೇ ಚಿತ್ರರಂಗದ ನಟನೆ, ಗಾಯನ, ಸಾಹಿತ್ಯ… ಮುಂತಾದ ಕ್ಷೇತ್ರಗಳಲ್ಲಿ ಸಣ್ಣ ಅವಧಿಗೆ ಕೆಲಸ ಮಾಡಿ ಮರೆಯಾದ ಮಹಿಳೆಯರಿರಬಹುದು. ಒಟ್ಟಾರೆಯಾಗಿ ಹಾಸನ ಜಿಲ್ಲೆಯ ಮಹಿಳೆಯರು ಎಲ್ಲ ಕ್ಷೇತ್ರಗಳಂತೆ ಚಿತ್ರೋದ್ಯಮದಲ್ಲೂ ಎಲ್ಲಾ ಆಯಾಮಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಮರೆಯಲಾಗದ ಛಾಪು ಮೂಡಿಸಿದ್ದಾರೆ. ಇದರೊಂದಿಗೆ ಸಾಮಾಜಿಕವಾಗಿಯೂ ತೊಡಗಿಕೊಂಡು ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರೋದ್ಯಮದಲ್ಲಿ ಅವಕಾಶಗಳು ಹೆಚ್ಚುತ್ತಿದ್ದು ಅವಕಾಶಗಳನ್ನರಸಿ ಹಾಸನದ ಹೆಣ್ಣುಮಕ್ಕಳೂ ಚಿತ್ರರಂಗವನ್ನು ಪ್ರವೇಶಿಸುತ್ತಿದ್ದಾರೆ, ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸುತ್ತಿದ್ದಾರೆ ಎಂಬುದು ಹೆಮ್ಮೆಯ ವಿಷಯ.
-ರೇಖಾ ಹೊಸಹಳ್ಳಿ




