ಗಾಂಧೀಯ ‘ರಾಮ’-ಮನುವಾದಿಗಳ ‘ಶ್ರೀರಾಮ’ನಲ್ಲ

Date:

ಸಮಾನತೆಯ ರಾಮರಾಜ್ಯಕ್ಕೂ, ವರ್ಣಾಶ್ರಮದ ರಾಜಕಾರಣಕ್ಕೂ ಇರುವ ವ್ಯತ್ಯಾಸವೇನು? ಗಾಂಧೀಜಿಯವರ ಪಾಲಿಗೆ ರಾಮ ಎಂದರೆ ಸತ್ಯ, ಅಹಿಂಸೆ, ಪ್ರೀತಿ ಮತ್ತು ಸರ್ವಧರ್ಮ ಸಮಭಾವದ ಸಂಕೇತ; ಅಂಬೇಡ್ಕರ್ ಅವರ ವಿಮರ್ಶೆಯಲ್ಲಿ ಪುರಾಣದ ರಾಮನ ಆಡಳಿತದಲ್ಲಿ ಜಾತಿ ಶ್ರೇಣೀಕರಣ ಮತ್ತು ಸಾಮಾಜಿಕ ಅನ್ಯಾಯದ ಪ್ರಶ್ನೆಗಳು ಎದ್ದು ಕಾಣುತ್ತವೆ. ಇಂದು ರಾಜಕೀಯದ ಅಸ್ತ್ರವಾಗಿರುವ ಶ್ರೀರಾಮನಿಗೂ ಗಾಂಧೀಜಿ ಕನಸು ಕಂಡ ರಾಮನಿಗೂ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕಿದೆ.

- Advertisement -

ಭಾರತೀಯ ಸಮಾಜ ಮತ್ತು ರಾಜಕಾರಣದಲ್ಲಿ ‘ರಾಮ’ ಎನ್ನುವ ಹೆಸರು ಕೇವಲ ಧಾರ್ಮಿಕ ನಂಬಿಕೆಗೆ ಸೀಮಿತವಾಗಿಲ್ಲ. ಅದು ಶತಮಾನಗಳಿಂದಲೂ ನೈತಿಕತೆ, ಸಂಸ್ಕೃತಿ, ಜನಪದ, ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಗಳ ಭಾಗವಾಗಿದೆ. ಆದರೆ, ಇತ್ತೀಚಿನ ದಶಕಗಳಲ್ಲಿ ರಾಮನ ಹೆಸರು ಧಾರ್ಮಿಕ ರಾಜಕಾರಣದ ಪ್ರಮುಖ ಸಂಕೇತವಾಗಿ ಬಳಕೆಯಾಗುತ್ತಿರುವ ಸಂದರ್ಭದಲ್ಲಿ, ಮಹಾತ್ಮ ಗಾಂಧೀಜಿ ಕಂಡ ರಾಮನಿಗೂ, ಮನುವಾದಿ ಸಿದ್ಧಾಂತಗಳು ಪ್ರತಿಪಾದಿಸುವ ರಾಮನಿಗೂ ಇರುವ ಮೂಲಭೂತ ವ್ಯತ್ಯಾಸವನ್ನು ಚರ್ಚಿಸುವ ಅಗತ್ಯವಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ಮಿತಿಮೀರಿದ ಸಂಚಾರ ದಟ್ಟಣೆ ಸಮಸ್ಯೆ ಪೊಲೀಸರೊಂದಿಗೆ...

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಶಿವಮೊಗ್ಗ ನಗರದಲ್ಲಿ ವಾಹನಗಳ ಸಂಖ್ಯೆ ಏರಿಕೆ, ವಾಣಿಜ್ಯ ಚಟುವಟಿಕೆಗಳ ವಿಸ್ತರಣೆ ಹಾಗೂ ರಸ್ತೆ ಒತ್ತುವರಿಯಿಂದಾಗಿ ಸಂಚಾರ ದಟ್ಟಣೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆಯನ್ನು ಸುಧಾರಿಸಲು ಪೊಲೀಸ್‌ ಇಲಾಖೆ...

ಅಮೆರಿಕ | ಡೆಮೊಕ್ರಟಿಕ್ ಪಕ್ಷದ ತೆಕ್ಕೆಯಲ್ಲಿ ಮತ್ತೊಂದು ಸೆನೆಟ್...

ಒಟ್ಟು 435 ಸೀಟುಗಳ ಸಂಖ್ಯಾಬಲವಿರುವ ಕೆಳಮನೆ “ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್”ನಲ್ಲಿ ಇನ್ನೂ 22 ಸೀಟುಗಳ ಮತ ಎಣಿಕೆ ನಡೆಯುತ್ತಿದ್ದು ಇಲ್ಲಿಯವರೆಗೂ 254 ಡೆಮೊಕ್ರಟಿಕ್ ಅಭ್ಯರ್ಥಿಗಳು ಮತ್ತು 169 ರಿಪಬ್ಲಿಕನ್ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಸಮೀಕ್ಷೆಗಳ...

ಎಸ್‌ಐಆರ್‌ | ಪ್ರಜಾಪ್ರಭುತ್ವದ ಕಾವಲುಗಾರನಿಗೆ ʼಕನ್ನಡಕʼ ಬೇಕಿದೆ…

ತನ್ನ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದ ಚುನಾವಣೆ ಅಯೋಗ ಇಂದು ತನ್ನ ನಿಷ್ಪಕ್ಷಪಾತತೆಯನ್ನೇ ಜನ ಪರೀಕ್ಷೆಗೆ ಒಡ್ಡಿಕೊಂಡಿದೆ. ಆಯೋಗದ ನಿರ್ಣಯಗಳನ್ನು ಅನುಮಾನಿಸಿ ಬೀದಿ ಹೋರಾಟಗಳು, ಹರತಾಳಗಳು ಭುಗಿಲೆದ್ದಿವೆ. ಇಷ್ಟಕ್ಕೆ, ನಿಲ್ಲದೆ ಮುಖ್ಯ...

ಗಾಂಧೀಜಿಯವರ ಪಾಲಿಗೆ ರಾಮ ಎಂದರೆ ಅಯೋಧ್ಯೆಯ ರಾಜ ದಶರಥನ ಮಗನಾದ ರಾಮನ ವ್ಯಕ್ತಿತ್ವ ಅಥವಾ ಒಂದು ನಿರ್ದಿಷ್ಟ ಧರ್ಮದ ಆರಾಧ್ಯ ದೇವರಿಗೆ ಮಾತ್ರ ಸೀಮಿತವಾದ ಪರಿಕಲ್ಪನೆಯಾಗಿರಲಿಲ್ಲ. ಅವರ ರಾಮ ಸತ್ಯದ ಸಂಕೇತ, ನೈತಿಕತೆಯ ಪ್ರತಿರೂಪ. ರಾಮನಾಮದಲ್ಲಿ ಅವರು ಕಂಡಿದ್ದು ಮನುಷ್ಯರನ್ನು ಒಗ್ಗೂಡಿಸುವ ಶಕ್ತಿ. ಆದರೆ, ಮನುವಾದಿ ರಾಜಕೀಯದ ರಾಮನ ಪರಿಕಲ್ಪನೆಯಲ್ಲಿ ಧಾರ್ಮಿಕ ಗುರುತು, ಸಾಂಸ್ಕೃತಿಕ ಏಕಸ್ವಾಮ್ಯ ಮತ್ತು ವರ್ಣಾಶ್ರಮ ವ್ಯವಸ್ಥೆಯ ಚರ್ಚೆಗಳು ಮುನ್ನೆಲೆಗೆ ಬರುತ್ತವೆ.

ಹಾಗಾದರೆ, ಗಾಂಧೀಜಿಯವರ ರಾಮ ಯಾರು? ಅವರು ಕನಸು ಕಂಡ ರಾಮರಾಜ್ಯ ಹೇಗಿತ್ತು? ಡಾ. ಬಿ.ಆರ್. ಅಂಬೇಡ್ಕರ್ ಅವರು ರಾಮನ ಪಾತ್ರವನ್ನು ಯಾವ ದೃಷ್ಟಿಕೋನದಿಂದ ವಿಮರ್ಶಿಸಿದ್ದರು? ಇಂದಿನ ರಾಜಕೀಯದಲ್ಲಿ ರಾಮನ ಚಿತ್ರಣ ಹೇಗೆ ಬದಲಾಗಿದೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದಾಗ ಭಾರತೀಯ ಸಮಾಜದ ಎರಡು ವಿಭಿನ್ನ ಸೈದ್ಧಾಂತಿಕ ನೆಲೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.

ಗಾಂಧೀಜಿಯವರ ರಾಮ: ಧರ್ಮದ ಗಡಿಗಳನ್ನು ಮೀರಿದ ನೈತಿಕ ಶಕ್ತಿ

ಮಹಾತ್ಮ ಗಾಂಧೀಜಿಯವರ ಜೀವನದಲ್ಲಿ ರಾಮನಾಮಕ್ಕೆ ವಿಶೇಷ ಸ್ಥಾನವಿತ್ತು. ಆದರೆ, ಅವರು ಜಪಿಸುತ್ತಿದ್ದ ರಾಮ ಯಾವುದೇ ಒಂದು ಧರ್ಮದ ಅಥವಾ ಸಮುದಾಯದ ಸ್ವತ್ತಾಗಿರಲಿಲ್ಲ. ಹಿಂದೂಗಳಿಗೆ ರಾಮ ಹೇಗೋ, ಮುಸ್ಲಿಮರಿಗೆ ರಹೀಮ್ ಹಾಗೆಯೇ ಎಂಬುದು ಅವರ ನಂಬಿಕೆಯಾಗಿತ್ತು. ರಾಮ ಮತ್ತು ರಹೀಮ್ ಬೇರೆಬೇರೆ ದೇವರುಗಳಲ್ಲ, ಮನುಷ್ಯರು ತಮ್ಮ ತಮ್ಮ ನಂಬಿಕೆಗಳ ಮೂಲಕ ಆರಾಧಿಸುವ ಪರಮಸತ್ಯದ ವಿಭಿನ್ನ ಹೆಸರುಗಳು ಎಂಬುದು ಅವರ ಧಾರ್ಮಿಕ ದೃಷ್ಟಿಕೋನ.

ಗಾಂಧೀಜಿಯವರ ಆತ್ಮಚರಿತ್ರೆ ಸತ್ಯದೊಂದಿಗೆ ನನ್ನ ಪ್ರಯೋಗಗಳು ಕೃತಿಯಲ್ಲಿ ಬಾಲ್ಯದ ಒಂದು ಮಹತ್ವದ ಘಟನೆಯನ್ನು ದಾಖಲಿಸಿದ್ದಾರೆ. ಬಾಲ್ಯದಲ್ಲಿ ಅವರನ್ನು ನೋಡಿಕೊಳ್ಳುತ್ತಿದ್ದ ರಂಭಾ ಎಂಬ ಸೇವಕಿ ಕತ್ತಲೆಯ ಭಯವನ್ನು ಹೋಗಲಾಡಿಸಲು ರಾಮನಾಮ ಜಪಿಸುವಂತೆ ಹೇಳಿಕೊಟ್ಟಿದ್ದರು. ಆ ಬಾಲ್ಯದ ಅನುಭವ ಅವರ ಮನಸ್ಸಿನಲ್ಲಿ ಆಳವಾಗಿ ಬೇರೂರಿತು. ಮುಂದೆ ಜೀವನದಲ್ಲಿ ಸಂಕಷ್ಟಗಳು ಎದುರಾದಾಗಲೂ ರಾಮನಾಮ ಅವರಿಗೆ ಧೈರ್ಯ ಮತ್ತು ಮಾನಸಿಕ ನೆಮ್ಮದಿಯನ್ನು ನೀಡಿತು ಎಂದು ಅವರು ಸ್ಮರಿಸಿಕೊಂಡಿದ್ದಾರೆ.

ಗಾಂಧೀಜಿಯವರ ರಾಮನಾಮ ಕೇವಲ ಧಾರ್ಮಿಕ ಆಚರಣೆಯಾಗಿರಲಿಲ್ಲ. ಅದು ಸತ್ಯ, ಆತ್ಮಶುದ್ಧಿ, ಅಹಿಂಸೆ ಮತ್ತು ನೈತಿಕ ಬದುಕಿನ ಸಂಕೇತವಾಗಿತ್ತು. ಮನುಷ್ಯನ ಧಾರ್ಮಿಕ ನಂಬಿಕೆ ಆತನನ್ನು ಮತ್ತೊಬ್ಬ ಮನುಷ್ಯನಿಂದ ದೂರ ಮಾಡಬಾರದು; ಬದಲಿಗೆ ಪ್ರೀತಿ, ಸಹಬಾಳ್ವೆ ಮತ್ತು ಮಾನವೀಯತೆಯ ಕಡೆಗೆ ಕರೆದೊಯ್ಯಬೇಕು ಎಂಬುದು ಅವರ ನಿಲುವಾಗಿತ್ತು.

ಅವರ ಪಾಲಿಗೆ ದೇವರನ್ನು ಕಾಣಬೇಕಾದದ್ದು ಕೇವಲ ದೇವಸ್ಥಾನಗಳಲ್ಲಿ ಅಥವಾ ಧಾರ್ಮಿಕ ವಿಧಿವಿಧಾನಗಳಲ್ಲಿ ಅಲ್ಲ. ಬಡವರ ಸೇವೆಯಲ್ಲಿ, ಶೋಷಿತರ ಬದುಕಿನಲ್ಲಿ, ಸತ್ಯದ ಪರವಾಗಿ ನಿಲ್ಲುವುದರಲ್ಲಿ ಮತ್ತು ಅನ್ಯಾಯದ ವಿರುದ್ಧ ಹೋರಾಡುವುದರಲ್ಲಿ ದೇವರನ್ನು ಕಾಣಬಹುದೆಂಬುದು ಗಾಂಧೀಜಿಯವರ ನಂಬಿಕೆಯಾಗಿತ್ತು.

ರಾಮರಾಜ್ಯ ಎಂದರೆ ಹಿಂದೂ ರಾಜ್ಯವಲ್ಲ!

ಗಾಂಧೀಜಿಯವರ ರಾಜಕೀಯ ಮತ್ತು ಸಾಮಾಜಿಕ ಚಿಂತನೆಗಳಲ್ಲಿ ‘ರಾಮರಾಜ್ಯ’ ಬಹಳ ಮಹತ್ವದ ಪರಿಕಲ್ಪನೆ. ಆದರೆ, ಈ ಪದವನ್ನು ಹಿಂದೂ ಧಾರ್ಮಿಕ ಆಡಳಿತ ಅಥವಾ ಒಂದು ನಿರ್ದಿಷ್ಟ ಧರ್ಮದ ಪ್ರಾಬಲ್ಯವಿರುವ ರಾಜ್ಯವೆಂದು ಅರ್ಥೈಸುವುದು ಅವರ ಆಶಯಕ್ಕೆ ವಿರುದ್ಧವಾದುದು. ಗಾಂಧೀಜಿಯವರು ಕನಸು ಕಂಡ ರಾಮರಾಜ್ಯ ಎಂದರೆ ರಾಜನಿಗೂ ಸಾಮಾನ್ಯ ಪ್ರಜೆಗೂ ಸಮಾನ ಹಕ್ಕುಗಳಿರಬೇಕು. ಶ್ರೀಮಂತ ಮತ್ತು ಬಡವ, ಮೇಲ್ವರ್ಗ ಮತ್ತು ಕೆಳವರ್ಗ, ಹಿಂದೂ ಮತ್ತು ಮುಸ್ಲಿಂ ಎಂಬ ಭೇದಭಾವಗಳಿಗೆ ಅವಕಾಶವಿರಬಾರದು. ಅಧಿಕಾರದಲ್ಲಿರುವವರಿಗೂ ಸಾಮಾನ್ಯ ಜನರಿಗೂ ಒಂದೇ ನ್ಯಾಯ ಅನ್ವಯವಾಗಬೇಕು.

ಅಂತಹ ಸಮಾಜದಲ್ಲಿ ಅಸ್ಪೃಶ್ಯತೆ, ಜಾತಿ ಆಧಾರಿತ ಶೋಷಣೆ, ಆರ್ಥಿಕ ಅಸಮಾನತೆ ಮತ್ತು ಧಾರ್ಮಿಕ ದ್ವೇಷಗಳಿಗೆ ಜಾಗವಿರಬಾರದು. ಪ್ರತಿಯೊಬ್ಬ ವ್ಯಕ್ತಿಗೂ ಗೌರವಯುತ ಬದುಕು ದೊರೆಯಬೇಕು. ಮಹಿಳೆಯರಿಗೆ ಸಮಾನ ಸ್ಥಾನಮಾನ ಸಿಗಬೇಕು. ದುರ್ಬಲರ ಹಕ್ಕುಗಳನ್ನು ರಕ್ಷಿಸುವುದೇ ಆಡಳಿತದ ಮೊದಲ ಕರ್ತವ್ಯವಾಗಬೇಕು. ಹೀಗಾಗಿ, ಗಾಂಧೀಜಿಯವರ ರಾಮರಾಜ್ಯವನ್ನು ಧಾರ್ಮಿಕ ರಾಜ್ಯದ ಪರಿಕಲ್ಪನೆಯಾಗಿ ನೋಡುವುದಕ್ಕಿಂತ ಸಮಾನತೆ, ನ್ಯಾಯ, ಅಹಿಂಸೆ ಮತ್ತು ಸ್ವಾವಲಂಬನೆಯ ಆಧಾರದ ಮೇಲೆ ರೂಪುಗೊಳ್ಳಬೇಕಾದ ಆದರ್ಶ ಸಮಾಜದ ಪರಿಕಲ್ಪನೆಯಾಗಿ ಅರ್ಥೈಸಬೇಕು.

ಅಂಬೇಡ್ಕರ್ ಅವರ ರಾಮನ ವಿಮರ್ಶೆ: ಶಂಬೂಕನಿಂದ ಸೀತೆಯವರೆಗೆ

ಗಾಂಧೀಜಿಯವರ ರಾಮನ ನೈತಿಕ ಮತ್ತು ಆಧ್ಯಾತ್ಮಿಕ ಪರಿಕಲ್ಪನೆಗೆ ಭಿನ್ನವಾಗಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ರಾಮಾಯಣದ ರಾಮನ ಪಾತ್ರವನ್ನು ಸಾಮಾಜಿಕ ನ್ಯಾಯ, ಜಾತಿ ವ್ಯವಸ್ಥೆ ಮತ್ತು ವ್ಯಕ್ತಿಯ ಹಕ್ಕುಗಳ ದೃಷ್ಟಿಕೋನದಿಂದ ವಿಮರ್ಶಿಸಿದ್ದಾರೆ.

ಅಂಬೇಡ್ಕರ್ ಅವರ Riddles in Hinduism ಕೃತಿಯಲ್ಲಿನ ವಿಮರ್ಶೆಯ ಪ್ರಮುಖ ಅಂಶ ಶಂಬೂಕನ ಪ್ರಸಂಗ. ರಾಮಾಯಣದ ಉತ್ತರಕಾಂಡದಲ್ಲಿ ಬರುವ ಈ ಕಥೆಯ ಪ್ರಕಾರ, ಶೂದ್ರನಾದ ಶಂಬೂಕ ತಪಸ್ಸು ಮಾಡುತ್ತಿದ್ದಾನೆ ಎಂಬ ಕಾರಣಕ್ಕೆ ರಾಮ ಅವನನ್ನು ಸಂಹರಿಸುತ್ತಾನೆ. ವರ್ಣಾಶ್ರಮ ವ್ಯವಸ್ಥೆಯಲ್ಲಿ ಕೆಳವರ್ಗಕ್ಕೆ ನಿಗದಿಪಡಿಸಲಾದ ಸಾಮಾಜಿಕ ಮಿತಿಗಳನ್ನು ಮೀರಿದ ಕಾರಣಕ್ಕೆ ಶಂಬೂಕನಿಗೆ ಶಿಕ್ಷೆ ವಿಧಿಸಲಾಯಿತು ಎಂಬ ಕಥನವನ್ನು ಅಂಬೇಡ್ಕರ್ ಪ್ರಶ್ನಿಸುತ್ತಾರೆ.

ಜ್ಞಾನಾರ್ಜನೆ, ತಪಸ್ಸು ಮತ್ತು ಆಧ್ಯಾತ್ಮಿಕ ಸಾಧನೆಗಳು ಮನುಷ್ಯನ ಮೂಲಭೂತ ಹಕ್ಕುಗಳಾಗಿರಬೇಕು. ಆದರೆ, ಜಾತಿಯ ಆಧಾರದ ಮೇಲೆ ಯಾರಿಗೆ ಯಾವ ಜ್ಞಾನ, ಯಾವ ಸಾಧನೆ, ಯಾವ ಸ್ಥಾನಮಾನ ಎಂಬುದನ್ನು ನಿರ್ಧರಿಸುವ ವ್ಯವಸ್ಥೆ ಮಾನವ ಸಮಾನತೆಗೆ ವಿರುದ್ಧವಾಗಿದೆ. ಶಂಬೂಕನ ಪ್ರಸಂಗದಲ್ಲಿ ಅಂಬೇಡ್ಕರ್ ಕಂಡದ್ದು ಇದೇ ಸಾಮಾಜಿಕ ಅನ್ಯಾಯದ ಪ್ರತೀಕ.

ಸೀತೆಯ ವಿಚಾರದಲ್ಲಿಯೂ ಅಂಬೇಡ್ಕರ್ ತೀವ್ರವಾದ ಪ್ರಶ್ನೆಗಳನ್ನು ಎತ್ತಿದ್ದಾರೆ. ರಾವಣನಿಂದ ಮರಳಿ ಬಂದ ಸೀತೆಯ ಅಗ್ನಿಪರೀಕ್ಷೆಯ ನಂತರವೂ, ಒಬ್ಬ ಸಾಮಾನ್ಯ ಪ್ರಜೆಯ ಅಪವಾದಕ್ಕೆ ಹೆದರಿ ಗರ್ಭಿಣಿಯಾಗಿದ್ದ ಸೀತೆಯನ್ನು ರಾಮ ಕಾಡಿಗೆ ಕಳುಹಿಸಿದ ಪ್ರಸಂಗವನ್ನು ಅವರು ಟೀಕಿಸಿದ್ದಾರೆ.

ಒಬ್ಬ ಮಹಿಳೆಯ ಪಾವಿತ್ರ್ಯವನ್ನು ಸಾಬೀತುಪಡಿಸಲು ಅಗ್ನಿಪರೀಕ್ಷೆಗೊಳಪಡಿಸುವುದೇ ಅನ್ಯಾಯದ ಸಂಗತಿ. ಅದಾದ ನಂತರವೂ ಸಾರ್ವಜನಿಕ ಅಪವಾದದ ನೆಪದಲ್ಲಿ ಆಕೆಯನ್ನು ತ್ಯಜಿಸುವುದು ಯಾವ ರೀತಿಯ ನ್ಯಾಯ? ರಾಜನಿಗೆ ತನ್ನ ಪತ್ನಿಯ ಘನತೆ ಮತ್ತು ಹಕ್ಕುಗಳನ್ನು ರಕ್ಷಿಸುವ ಹೊಣೆಗಾರಿಕೆ ಇರಲಿಲ್ಲವೇ? ಸಮಾಜದ ಅಭಿಪ್ರಾಯದ ಎದುರು ಮಹಿಳೆಯ ಬದುಕು ಇಷ್ಟು ಅಸಹಾಯಕವಾಗಬೇಕೇ? ಎಂಬ ಪ್ರಶ್ನೆಗಳು ಅಂಬೇಡ್ಕರ್ ಅವರ ವಿಮರ್ಶೆಯ ಕೇಂದ್ರದಲ್ಲಿವೆ. ಇಲ್ಲಿ ಅಂಬೇಡ್ಕರ್ ಪ್ರಶ್ನಿಸುವುದು ಕೇವಲ ರಾಮನ ವೈಯಕ್ತಿಕ ಬದುಕನ್ನಲ್ಲ. ಮಹಿಳೆಯ ಸ್ವಾತಂತ್ರ್ಯಕ್ಕಿಂತ ಪುರುಷ ಪ್ರಧಾನ ಸಾಮಾಜಿಕ ಮರ್ಯಾದೆಗೆ ಹೆಚ್ಚಿನ ಮೌಲ್ಯ ನೀಡುವ ವ್ಯವಸ್ಥೆಯನ್ನೂ ಅವರು ಪ್ರಶ್ನಿಸುತ್ತಾರೆ.

ವಾಲಿ ವಧೆಯ ಪ್ರಸಂಗದಲ್ಲಿಯೂ ಇದೇ ರೀತಿಯ ನೈತಿಕ ಪ್ರಶ್ನೆಗಳನ್ನು ಅಂಬೇಡ್ಕರ್ ಮುಂದಿಡುತ್ತಾರೆ. ಸುಗ್ರೀವ ಮತ್ತು ವಾಲಿ ನಡುವಿನ ಸಂಘರ್ಷದಲ್ಲಿ ರಾಮ ಮಧ್ಯಪ್ರವೇಶಿಸಿ ಮರೆಯಲ್ಲಿದ್ದು ವಾಲಿಯನ್ನು ಬಾಣದಿಂದ ಸಂಹರಿಸಿದ ಕ್ರಮವನ್ನು ಅವರು ಯುದ್ಧದ ನ್ಯಾಯನೀತಿಯ ದೃಷ್ಟಿಯಿಂದ ವಿಮರ್ಶಿಸಿದ್ದಾರೆ. ಎದುರಾಳಿಗೆ ನೇರವಾಗಿ ಮುಖಾಮುಖಿಯಾಗದೆ ಮರೆಯಿಂದ ದಾಳಿ ಮಾಡುವುದು ಯಾವ ರೀತಿಯ ವೀರಧರ್ಮ? ಸೀತೆಯನ್ನು ಹುಡುಕಲು ಸುಗ್ರೀವನ ಸಹಕಾರ ಪಡೆಯುವ ಉದ್ದೇಶದಿಂದ ನಡೆದ ಈ ಕೃತ್ಯದಲ್ಲಿ ನೈತಿಕತೆಯ ಪ್ರಶ್ನೆ ಎದುರಾಗುವುದಿಲ್ಲವೇ ಎಂಬುದು ಅವರ ವಾದದ ಸಾರ.

ಈ ಪ್ರಸಂಗಗಳನ್ನು ಮುಂದಿಟ್ಟುಕೊಂಡು ಅಂಬೇಡ್ಕರ್ ರಾಮನನ್ನು ದೈವಿಕ ಮತ್ತು ಪ್ರಶ್ನಾತೀತ ವ್ಯಕ್ತಿತ್ವವಾಗಿ ನೋಡುವ ಬದಲು, ಆತನ ಕೃತ್ಯಗಳನ್ನು ತರ್ಕದ ಒರೆಗೆ ಹಚ್ಚಬೇಕು ಎಂದು ಪ್ರತಿಪಾದಿಸುತ್ತಾರೆ. ಪುರಾಣದ ಪಾತ್ರಗಳಾಗಲಿ, ಧಾರ್ಮಿಕ ನಾಯಕರುಗಳಾಗಲಿ, ಅವರ ನಡವಳಿಕೆಗಳನ್ನು ಸಾಮಾಜಿಕ ನ್ಯಾಯದ ಮಾನದಂಡದಲ್ಲಿ ಪರಿಶೀಲಿಸುವ ಹಕ್ಕು ಪ್ರತಿಯೊಬ್ಬರಿಗೂ ಇರಬೇಕು ಎಂಬುದು ಅಂಬೇಡ್ಕರ್ ಅವರ ವೈಚಾರಿಕ ನಿಲುವಿನ ಮಹತ್ವದ ಭಾಗವಾಗಿದೆ.

ಗಾಂಧಿಯ ರಾಮ ಮತ್ತು ಮನುವಾದದ ರಾಮ: ಎರಡು ವಿಭಿನ್ನ ವ್ಯಾಖ್ಯಾನಗಳು

ಗಾಂಧೀಜಿಯವರ ರಾಮನ ಪರಿಕಲ್ಪನೆ ಮತ್ತು ಮನುವಾದಿ ಚಿಂತನೆಯ ರಾಮನ ಪರಿಕಲ್ಪನೆಗಳನ್ನು ಹೋಲಿಸಿದಾಗ ಅವುಗಳ ನಡುವೆ ಸ್ಪಷ್ಟವಾದ ಸೈದ್ಧಾಂತಿಕ ವ್ಯತ್ಯಾಸ ಗೋಚರಿಸುತ್ತದೆ. ಗಾಂಧೀಜಿಯವರ ಪಾಲಿಗೆ ರಾಮ ಸತ್ಯ, ನೈತಿಕತೆ. ರಾಮರಾಜ್ಯದಲ್ಲಿ ಎಲ್ಲ ಧರ್ಮದವರಿಗೂ ಸಮಾನ ಅವಕಾಶವಿದೆ. ಬಡವ ಮತ್ತು ಶ್ರೀಮಂತ ಎಂಬ ಭೇದವಿಲ್ಲ. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮನುಷ್ಯರನ್ನು ವಿಭಜಿಸುವುದಕ್ಕೆ ಅವಕಾಶವಿಲ್ಲ.

ಆದರೆ, ಮನುವಾದಿ ಸಾಮಾಜಿಕ ಚಿಂತನೆಯ ಸಂದರ್ಭದಲ್ಲಿ ರಾಮನನ್ನು ವರ್ಣಾಶ್ರಮ ಧರ್ಮ, ಶಾಸ್ತ್ರಾಧಾರಿತ ಸಾಮಾಜಿಕ ಶ್ರೇಣೀಕರಣ ಮತ್ತು ಸಾಂಪ್ರದಾಯಿಕ ಅಧಿಕಾರ ವ್ಯವಸ್ಥೆಯೊಂದಿಗೆ ಜೋಡಿಸುವ ವ್ಯಾಖ್ಯಾನಗಳು ಮುನ್ನೆಲೆಗೆ ಬರುತ್ತವೆ. ಇಲ್ಲಿ ರಾಮನನ್ನು ಕೇವಲ ನೈತಿಕ ಮೌಲ್ಯದ ಸಂಕೇತವಾಗಿ ನೋಡುವುದಕ್ಕಿಂತ ಧಾರ್ಮಿಕ-ಸಾಂಸ್ಕೃತಿಕ ಗುರುತಿನ ಸಂಕೇತವಾಗಿ ಬಳಸಲಾಗುತ್ತದೆ.

ಇವೆರಡರ ನಡುವಿನ ವ್ಯತ್ಯಾಸವನ್ನು ಹೀಗೆ ಗುರುತಿಸಬಹುದು:

  • ರಾಮನ ಸ್ವರೂಪ: ಗಾಂಧೀಜಿಯವರ ರಾಮ ಸತ್ಯ ಮತ್ತು ನೈತಿಕತೆಯ ಸಂಕೇತ. ಮನುವಾದಿ ವ್ಯಾಖ್ಯಾನದಲ್ಲಿ ರಾಮ ಐತಿಹಾಸಿಕ ರಾಜ ಮತ್ತು ಅವತಾರ ಪುರುಷನಾಗಿ ಆರಾಧಿಸಲ್ಪಡುತ್ತಾನೆ.
  • ಸಾಮಾಜಿಕ ದೃಷ್ಟಿಕೋನ: ಗಾಂಧೀಜಿಯವರ ರಾಮರಾಜ್ಯ ಅಸ್ಪೃಶ್ಯತೆ ನಿವಾರಣೆ, ಸಮಾನತೆ ಮತ್ತು ಸರ್ವಧರ್ಮ ಸಹಬಾಳ್ವೆಯನ್ನು ಪ್ರತಿಪಾದಿಸುತ್ತದೆ. ಮನುವಾದಿ ಸಾಮಾಜಿಕ ವ್ಯವಸ್ಥೆಯೊಂದಿಗೆ ಜೋಡಿಸಲ್ಪಡುವ ರಾಮನ ವ್ಯಾಖ್ಯಾನವು ವರ್ಣಾಶ್ರಮದ ಶ್ರೇಣೀಕರಣದ ಪ್ರಶ್ನೆಗಳಿಗೆ ಒಳಗಾಗುತ್ತದೆ.
  • ರಾಜ್ಯದ ಪರಿಕಲ್ಪನೆ: ಗಾಂಧೀಜಿಯವರ ರಾಮರಾಜ್ಯ ಬಡವ-ಬಲ್ಲಿದರ ನಡುವೆ ಸಮಾನತೆ, ನ್ಯಾಯ ಮತ್ತು ಅಹಿಂಸೆಯನ್ನು ಆಧರಿಸಿದೆ. ಮನುವಾದಿ ವ್ಯಾಖ್ಯಾನದಲ್ಲಿ ಶಾಸ್ತ್ರಾಧಾರಿತ ಸಾಮಾಜಿಕ ನಿಯಮಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.
  • ಮನುಷ್ಯನ ಸ್ಥಾನಮಾನ: ಗಾಂಧೀಜಿಯವರಿಗೆ ಪ್ರತಿಯೊಬ್ಬ ಮನುಷ್ಯನೂ ಸಮಾನ ಗೌರವಕ್ಕೆ ಅರ್ಹ. ಮನುವಾದಿ ಜಾತಿ, ಧರ್ಮ ಮತ್ತು ಆರ್ಥಿಕ ಸ್ಥಿತಿಯ ಆಧಾರದ ಮೇಲೆ ವ್ಯಕ್ತಿಯ ಮೌಲ್ಯ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ರಾಮನನ್ನು ನಂಬುವ ಪ್ರತಿಯೊಬ್ಬರೂ ಮನುವಾದಿಗಳಲ್ಲ. ಹಿಂದೂ ಧರ್ಮದೊಳಗೆ ಅನೇಕ ಬಗೆಯ ರಾಮಾಯಣಗಳು, ರಾಮನ ಕುರಿತ ವಿಭಿನ್ನ ವ್ಯಾಖ್ಯಾನಗಳು ಮತ್ತು ಸಾಮಾಜಿಕ ಚಿಂತನೆಗಳಿವೆ. ಆದರೆ, ರಾಮನ ಹೆಸರಿನಲ್ಲಿ ಜಾತಿ ಶ್ರೇಣೀಕರಣ ಅಥವಾ ಧಾರ್ಮಿಕ ಬಹಿಷ್ಕಾರವನ್ನು ಸಮರ್ಥಿಸುವ ರಾಜಕೀಯ ನಿಲುವುಗಳನ್ನು ಗಾಂಧೀಜಿಯವರ ಸಮಾನತೆಯ ರಾಮರಾಜ್ಯದೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ.

ರಾಜಕೀಯ ಶ್ರೀರಾಮನಾಗಿ ಬದಲಾದ ರಾಮ: ಚಂದ್ರೆಗೌಡರ ಕಳವಳ

ಇಂದಿನ ರಾಜಕೀಯ ಸಂದರ್ಭದಲ್ಲಿ ರಾಮನ ಚಿತ್ರಣ ಹೇಗೆ ಬದಲಾಗಿದೆ ಎಂಬುದನ್ನು ಹಿರಿಯ ಪತ್ರಕರ್ತ ಬಿ. ಚಂದ್ರೆಗೌಡ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಮತ್ತೊಂದು ಆಯಾಮದಲ್ಲಿ ತೆರೆದಿಡುತ್ತವೆ.

ಈದಿನ.ಕಾಮ್ ಜೊತೆ ಮಾತನಾಡಿದ ಅವರು, ಅನಾದಿ ಕಾಲದಿಂದಲೂ ಜನರು ರಾಮ, ಸೀತೆ ಮತ್ತು ಆಂಜನೇಯರನ್ನು ತಮ್ಮ ಮನೆಗಳಲ್ಲಿನ ದೇವರ ಚಿತ್ರಗಳ ಮೂಲಕ ಶಾಂತ ಮತ್ತು ಸೌಮ್ಯ ಸ್ವರೂಪದಲ್ಲಿ ಕಂಡುಕೊಂಡಿದ್ದರು ಎಂದು ಸ್ಮರಿಸುತ್ತಾರೆ.

ಆದರೆ, ಕಾಲಕ್ರಮೇಣ ಈ ಚಿತ್ರಣ ರಾಜಕೀಯ ಸಂಕೇತವಾಗಿ ಬದಲಾಗಿರುವುದನ್ನು ಅವರು ಗಮನಿಸಿದ್ದಾರೆ. ಅವರ ಮಾತಿನಲ್ಲಿ ಹೇಳುವುದಾದರೆ, ಶಾಂತ ಸ್ವರೂಪದಲ್ಲಿದ್ದ ರಾಮ ಬಿಜೆಪಿಯ ರಾಜಕೀಯ ಶ್ರೀರಾಮನಾದಾಗ ಕೈಗೆ ಬಿಲ್ಲು ಬಂತು; ಆತ ಒಂಟಿಯಾದ. ಸೌಮ್ಯ ಸ್ವರೂಪದ ಹನುಮ ಉಗ್ರರೂಪಿಯಾದ, ಏಕಾಂಗಿಯಾದ. ಇದು ಇಂದಿನ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಯ ಪ್ರತಿಬಿಂಬ ಎಂದು ಅವರು ವಿಶ್ಲೇಷಿಸುತ್ತಾರೆ.

ಅಯೋಧ್ಯೆಗೆ ತಾವು ಭೇಟಿ ನೀಡಿದ ಸಂದರ್ಭದಲ್ಲಿ ಎದುರಾದ ಭದ್ರತಾ ತಪಾಸಣೆಯ ಅನುಭವವನ್ನೂ ಚಂದ್ರೆಗೌಡ ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಡೆಯುವ ಭದ್ರತಾ ತಪಾಸಣೆಯಂತೆಯೇ ದೇವಸ್ಥಾನದ ಸುತ್ತಮುತ್ತಲಿನ ತಪಾಸಣೆಗಳು ಕಂಡವು. ದೇವಸ್ಥಾನದಲ್ಲಿ ಇಷ್ಟೊಂದು ಕಾವಲು ಏಕೆ ಎಂಬ ಪ್ರಶ್ನೆ ತಮ್ಮಲ್ಲಿ ಮೂಡಿತು. ಒಂದು ನಿರ್ದಿಷ್ಟ ಸಮುದಾಯದಿಂದ ಶ್ರೀರಾಮನಿಗೆ ಅಪಾಯವಿದೆ ಎಂಬ ಭಾವನೆ ಮೂಡಿಸುವ ರೀತಿಯಲ್ಲಿ ಆ ವ್ಯವಸ್ಥೆ ಕಂಡಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೇವಸ್ಥಾನವೆಂದರೆ ಸಾಮಾನ್ಯವಾಗಿ ಪ್ರಶಾಂತತೆ, ಭಕ್ತಿ ಮತ್ತು ಆಧ್ಯಾತ್ಮಿಕ ನೆಮ್ಮದಿಯ ಅನುಭವವಾಗಬೇಕು. ಆದರೆ, ಅಲ್ಲಿ ಚೀತ್ಕಾರ, ಧಾರ್ಮಿಕ ಉನ್ಮಾದ ಮತ್ತು ಮತೀಯವಾದದ ವಿಕಾರತೆಗಳು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂಬುದು ಅವರ ಅಭಿಪ್ರಾಯ.

ಗಾಂಧೀಜಿಯವರ ಉಡುಪಿ ಭೇಟಿಯ ಸಂದರ್ಭದಲ್ಲಿ ನಡೆದ ಘಟನೆಯನ್ನೂ ಚಂದ್ರೆಗೌಡ ನೆನಪಿಸಿಕೊಳ್ಳುತ್ತಾರೆ. ದೇವಸ್ಥಾನಕ್ಕೆ ಭೇಟಿ ನೀಡುವುದಕ್ಕಿಂತ ದೇವಸ್ಥಾನದ ಹಿಂಭಾಗದಲ್ಲಿದ್ದ ಕನಕನ ಕಿಂಡಿಯನ್ನು ವೀಕ್ಷಿಸಲು ಗಾಂಧೀಜಿ ಆದ್ಯತೆ ನೀಡಿದ್ದರು ಎಂಬ ಪ್ರಸಂಗವನ್ನು ಅವರು ಉಲ್ಲೇಖಿಸುತ್ತಾರೆ. ದೇವಸ್ಥಾನದ ಆವರಣಗಳಲ್ಲಿ ಸಭೆ, ಸಮಾರಂಭಗಳನ್ನು ನಡೆಸದಿರುವುದು ಸೇರಿದಂತೆ ಗಾಂಧೀಜಿಯವರ ಧಾರ್ಮಿಕ ಬದುಕಿನಲ್ಲಿದ್ದ ಬದ್ಧತೆಯನ್ನು ಅವರು ನೆನಪಿಸುತ್ತಾರೆ.

ಚಂದ್ರೆಗೌಡರ ಮಾತಿನ ಸಾರ ಸ್ಪಷ್ಟವಾಗಿದೆ: ಗಾಂಧೀಜಿಯವರ ರಾಮ ಎಂದರೆ ಆದರ್ಶ ಸಮಾಜ, ಭಯಮುಕ್ತ ಸಮಾಜ ಮತ್ತು ಸಮಾನತೆಯ ಸಮಾಜ. ಅದು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ರಾಜಕೀಯ ರಾಮನ ಪರಿಕಲ್ಪನೆಯಾಗಿರಲಿಲ್ಲ.

ರಾಮ ಯಾರಿಗೆ ಸೇರಬೇಕು?

ಭಾರತದ ಬಹುತ್ವದ ಪರಂಪರೆಯಲ್ಲಿ ರಾಮನಿಗೆ ಅನೇಕ ರೂಪಗಳಿವೆ. ವಾಲ್ಮೀಕಿ ರಾಮಾಯಣದ ರಾಮ, ತುಳಸೀದಾಸರ ರಾಮ, ಕಂಬ ರಾಮಾಯಣದ ರಾಮ, ಜನಪದ ರಾಮ ಮತ್ತು ಗಾಂಧೀಜಿಯವರ ರಾಮ ಇವೆಲ್ಲವೂ ಒಂದೇ ರೀತಿಯ ವ್ಯಾಖ್ಯಾನಗಳಲ್ಲ. ಪ್ರತಿಯೊಂದು ಕಾಲಘಟ್ಟವೂ ತನ್ನ ಸಾಮಾಜಿಕ ಮತ್ತು ಸಾಂಸ್ಕೃತಿಕ ಅನುಭವಗಳ ಮೂಲಕ ರಾಮನನ್ನು ಅರ್ಥೈಸಿಕೊಂಡಿದೆ.

ಆದರೆ, ಒಂದು ಧಾರ್ಮಿಕ ಸಂಕೇತವನ್ನು ರಾಜಕೀಯ ಅಧಿಕಾರದ ಸಾಧನವನ್ನಾಗಿ ಪರಿವರ್ತಿಸುವಾಗ ಅದರ ಮೂಲ ನೈತಿಕ ಆಶಯಗಳು ಮರೆಯಾಗುವ ಅಪಾಯವಿದೆ. ರಾಮನ ಹೆಸರಿನಲ್ಲಿ ಸಮಾಜದಲ್ಲಿ ಭಯ, ದ್ವೇಷ ಮತ್ತು ಧಾರ್ಮಿಕ ವಿಭಜನೆ ಹೆಚ್ಚಾದರೆ, ಅದು ಗಾಂಧೀಜಿಯವರು ಪ್ರತಿಪಾದಿಸಿದ ರಾಮನಾಮದ ಆಶಯಕ್ಕೆ ವಿರುದ್ಧವಾಗುತ್ತದೆ.

ಅದೇ ರೀತಿ, ಅಂಬೇಡ್ಕರ್ ಎತ್ತಿದ ಪ್ರಶ್ನೆಗಳನ್ನು ಕಡೆಗಣಿಸಿ ಪುರಾಣದ ಪಾತ್ರಗಳನ್ನು ಪ್ರಶ್ನಾತೀತರನ್ನಾಗಿ ಮಾಡುವುದರಿಂದ ಸಾಮಾಜಿಕ ನ್ಯಾಯದ ಚರ್ಚೆಗೆ ಅವಕಾಶವಿರುವುದಿಲ್ಲ. ಶಂಬೂಕನಿಗೆ ಜ್ಞಾನಾರ್ಜನೆಯ ಹಕ್ಕು ಇರಬೇಕೇ? ಸೀತೆಗೆ ಸ್ವತಂತ್ರ ವ್ಯಕ್ತಿತ್ವ ಮತ್ತು ಗೌರವಯುತ ಬದುಕಿನ ಹಕ್ಕು ಇರಬೇಕೇ? ವಾಲಿಯ ವಧೆಯಲ್ಲಿ ನ್ಯಾಯನೀತಿ ಪಾಲನೆಯಾಗಿದೆಯೇ? ಇಂತಹ ಪ್ರಶ್ನೆಗಳನ್ನು ಕೇಳುವುದು ಧರ್ಮದ ವಿರುದ್ಧದ ಕ್ರಮವಲ್ಲ; ಅದು ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯವನ್ನು ಸ್ಥಾಪಿಸುವ ವೈಚಾರಿಕ ಪ್ರಯತ್ನ.

ಇಂದು ದೇಶಕ್ಕೆ ಬೇಕಾಗಿರುವುದು ಧಾರ್ಮಿಕ ಗುರುತಿನ ಆಧಾರದ ಮೇಲೆ ಮನುಷ್ಯರನ್ನು ವಿಭಜಿಸುವ ರಾಮರಾಜ್ಯವಲ್ಲ. ಜಾತಿ, ಧರ್ಮ, ಭಾಷೆ ಮತ್ತು ಆರ್ಥಿಕ ಸ್ಥಿತಿಯ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕು, ಗೌರವ ಮತ್ತು ನ್ಯಾಯ ದೊರೆಯುವ ಸಮಾಜ. ಹಸಿದವನಿಗೆ ಅನ್ನ, ಶೋಷಿತನಿಗೆ ನ್ಯಾಯ, ಮಹಿಳೆಗೆ ಸಮಾನತೆ, ದುರ್ಬಲರಿಗೆ ರಕ್ಷಣೆ ಮತ್ತು ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ದೊರೆಯುವ ವ್ಯವಸ್ಥೆ.

ರಾಮನ ಹೆಸರಿನಲ್ಲಿ ರಾಜಕೀಯ ಮಾಡುವವರು ಗಾಂಧೀಜಿಯವರ ರಾಮರಾಜ್ಯದ ಆಶಯಗಳನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಅದೇ ರೀತಿ, ಅಂಬೇಡ್ಕರ್ ಅವರ ವಿಮರ್ಶಾತ್ಮಕ ಚಿಂತನೆಯನ್ನೂ ಅರ್ಥಮಾಡಿಕೊಳ್ಳಬೇಕು. ಧಾರ್ಮಿಕ ನಂಬಿಕೆ ವೈಯಕ್ತಿಕ ಸ್ವಾತಂತ್ರ್ಯ. ಆದರೆ, ಆ ನಂಬಿಕೆಯ ಹೆಸರಿನಲ್ಲಿ ಮತ್ತೊಬ್ಬರ ಹಕ್ಕುಗಳನ್ನು ನಿರಾಕರಿಸುವ ಅಧಿಕಾರ ಯಾರಿಗೂ ಇಲ್ಲ.

ಈ ವಿಶೇಷ ಲೇಖನ ಓದಿದ್ದೀರಾ? ಹೊರಗೆ ‘ರಾಮ’-ಒಳಗೆ ‘ನಾಥೂರಾಮ’: ಗಾಂಧೀಜಿಯವರ ತಾತ್ವಿಕತೆಯ ಮುಂದೆ ಬಲಪಂಥೀಯ ರಾಜಕಾರಣದ ಆತಂಕ

ಗಾಂಧೀಜಿಯವರ ರಾಮ ಮನುಷ್ಯರನ್ನು ಒಗ್ಗೂಡಿಸುವ ರಾಮ. ಮನುವಾದಿ ಸಾಮಾಜಿಕ ಶ್ರೇಣೀಕರಣದೊಂದಿಗೆ ಜೋಡಿಸಲ್ಪಟ್ಟ ರಾಮನ ವ್ಯಾಖ್ಯಾನ ಮನುಷ್ಯರನ್ನು ಮೇಲ್ಜಾತಿ-ಕೆಳಜಾತಿ ಎಂಬ ಅಸಮಾನತೆಯ ಪ್ರಶ್ನೆಗಳ ಎದುರು ನಿಲ್ಲಿಸುತ್ತದೆ. ಈ ಎರಡು ಪರಿಕಲ್ಪನೆಗಳ ನಡುವಿನ ವ್ಯತ್ಯಾಸವನ್ನು ಅರಿಯುವುದು ಇಂದಿನ ಭಾರತದ ಸಾಮಾಜಿಕ ಮತ್ತು ರಾಜಕೀಯ ಸಂದರ್ಭದಲ್ಲಿ ಅತ್ಯಂತ ಅಗತ್ಯ.

ಈ ವಿಶೇಷ ವರದಿ ಓದಿದ್ದೀರಾ? ಮೆಕ್ಕೆಜೋಳಕ್ಕೆ ಉತ್ತಮ ಬೆಲೆ: ಬರದಿಂದ ಉತ್ಪಾದನೆ ಶೇ.33ರಷ್ಟು ಕುಸಿತ, ರಾಜ್ಯದ ಕೃಷಿ-ಮಾರುಕಟ್ಟೆ ಚಿತ್ರಣವೇನು?

ರಾಮನ ಹೆಸರಿನಲ್ಲಿ ಭಯ ಹುಟ್ಟಿಸುವುದಕ್ಕಿಂತ ರಾಮನ ಹೆಸರಿನಲ್ಲಿ ಪ್ರೀತಿ ಬೆಳೆಸುವುದು ಮುಖ್ಯ. ರಾಮರಾಜ್ಯದ ಹೆಸರಿನಲ್ಲಿ ಧಾರ್ಮಿಕ ಪ್ರಾಬಲ್ಯ ಸ್ಥಾಪಿಸುವುದಕ್ಕಿಂತ ಪ್ರತಿಯೊಬ್ಬ ಮನುಷ್ಯನಿಗೂ ಸಮಾನ ನ್ಯಾಯ ಒದಗಿಸುವುದು ಮುಖ್ಯ. ಗಾಂಧೀಜಿಯವರು ಕಂಡ ರಾಮರಾಜ್ಯದ ನಿಜವಾದ ಅರ್ಥವೂ ಅದೇ.

WhatsApp Image 2025 02 05 at 18.09.20
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟ್ರಂಪ್‌ಗೆ ಮುಖಭಂಗ, ಯುರೋಪಿನಲ್ಲಿ ಆತಂಕ; ಜಗತ್ತಿನಲ್ಲಿ ಬದಲಾಗುತ್ತಿರುವ ಬಲಪಂಥೀಯ ರಾಜಕೀಯ?

2026ರ ಅಮೆರಿಕ ಮತ್ತು ಬ್ರೆಜಿಲ್‌ನ ಚುನಾವಣಾ ಫಲಿತಾಂಶಗಳು ಜಾಗತಿಕ ಮಟ್ಟದಲ್ಲಿ ರಾಜಕೀಯ...

ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದುಗೊಳಿಸಿದ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ರಾಜ್ಯ ಸರ್ಕಾರ

ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇಕಡ 15ರಿಂದ 17ಕ್ಕೆ, ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು...

ಹೆಣ್ಣು-ಹಣ-ಚಾರಣ ಹಗರಣ: ಜಾಗತಿಕ ಚಿಪ್ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ Nvidia CEO ಸ್ಕ್ಯಾಮ್ ಹೂರಣವೇನು?

ಚಿಪ್ ಸಾಮ್ರಾಜ್ಯದ ಸಿಇಒ ಸುತ್ತ ಹೆಣೆದುಕೊಂಡಿರುವ ವಿವಾಹೇತರ ಸಂಬಂಧ, ಚೀನಿ ಚಾರಣ...

ಹೊರಗೆ ‘ರಾಮ’-ಒಳಗೆ ‘ನಾಥೂರಾಮ’: ಗಾಂಧೀಜಿಯವರ ತಾತ್ವಿಕತೆಯ ಮುಂದೆ ಬಲಪಂಥೀಯ ರಾಜಕಾರಣದ ಆತಂಕ

ಗಾಂಧೀಜಿಯವರನ್ನು ವಿರೋಧಿಸುವ ರಾಜಕೀಯ ಪ್ರಯತ್ನಗಳು ಅವರ ವ್ಯಕ್ತಿತ್ವವನ್ನು ಕುಗ್ಗಿಸುವ ಬದಲು, ಅವರ...