ಸಾಲುಸಾಲು ಸವಾಲು ಗೆಲ್ಲಲು ‘ಇಮೇಜ್’ ಬದಲಾಯಿಸಿಕೊಳ್ಳಬಲ್ಲರೆ ‘ಡಿಕೆಶಿ’?

Date:

ಶಾಸಕರ ಅಸಮಾಧಾನ ಉಂಟಾಗಲೆಂದೇ ಕಾಯುತ್ತಿರುವ ಬಿಜೆಪಿಯ ಹಿಂಬದಿ ರಾಜಕಾರಣವನ್ನೂ ಡಿಕೆಶಿ ಗಂಭೀರವಾಗಿ ಗಮನಿಸಬೇಕಾಗುತ್ತದೆ. ಬಂಡಾಯಗಾರರು ಹೆಚ್ಚಾದರೆ, ಸರ್ಕಾರಗಳನ್ನು ಉರುಳಿಸುವ ದುಷ್ಟ ಕೆಲಸಗಳನ್ನು ಮಾಡಬಲ್ಲ ಶಕ್ತಿ ಬಿಜೆಪಿಗಿದೆ. ಈ ಅಪಾಯದ ತೂಗುಗತ್ತಿ ಡಿಕೆಶಿ ಅವರ ಮೇಲೆ ಇದ್ದೇ ಇರುತ್ತದೆ.

ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವುದು ಸುಲಭದ ಮಾತಲ್ಲ. 2028ರ ಚುನಾವಣೆ ಎದುರಿಟ್ಟುಕೊಂಡು, ನಾಯಕತ್ವದ ಭಾರವನ್ನು ಹೆಗಲ ಮೇಲೆ ಹೊತ್ತುಕೊಂಡು, ಮುಂದೆ ಬರುವ ಸಾಲುಸಾಲು ಸವಾಲುಗಳನ್ನು ನಿಭಾಯಿಸಿಕೊಂಡು, ಎಲೆಕ್ಷನ್ನಲ್ಲಿ ಪಕ್ಷವನ್ನು ಗೆಲ್ಲಿಸಿದರೆ ಮಾತ್ರ ಅದು ಡಿಕೆಶಿಯವರ ಅಸ್ತಿತ್ವಕ್ಕೊಂದು ಊರುಗೋಲು ಮತ್ತು ಚರಿತ್ರಾರ್ಹ ದಾಖಲೆ!

- Advertisement -

“ಎಪ್ಪತ್ತರ ದಶಕದ ರಾಜಕಾರಣದ ಮೌಲ್ಯಗಳ ಪ್ರತಿರೂಪದಂತಿದ್ದ ಸಿದ್ದರಾಮಯ್ಯನವರ ಸ್ಥಾನವನ್ನು ಅಲಂಕರಿಸುತ್ತಿದ್ದೇನೆ” ಎಂಬುದೇ ಡಿಕೆಶಿಯವರಿಗೆ ಬಹುದೊಡ್ಡ ಭಾರ. ಕಾಂಗ್ರೆಸ್ ಪಕ್ಷದ ಮತ ಕೋಟೆಯಾದ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯಗಳ ವಿಶ್ವಾಸವನ್ನು ಉಳಿಸಿಕೊಂಡು, ತಮ್ಮ ವರ್ಚಸ್ಸನ್ನೂ ದುಪ್ಪಟ್ಟು ಮಾಡಿಕೊಳ್ಳುವುದೇ ಡಿಕೆಶಿ ಮಾಡಬೇಕಾದ ಪ್ರಮುಖ ಕಸರತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ವೈಯಕ್ತಿಕ ಸೈದ್ಧಾಂತಿಕ ಬದ್ಧತೆ ಮತ್ತು ಜನಪರ ಕಾರ್ಯಕ್ರಮಗಳ ಕಾರಣಕ್ಕೆ ಸಿದ್ದರಾಮಯ್ಯನವರು ಜನಮಾನಸದಲ್ಲಿ ಕುಳಿತ ನಾಯಕ. ರಾಜೀನಾಮೆ ನಂತರದ ಪತ್ರಿಕಾಗೋಷ್ಠಿಯಲ್ಲೂ ಆ ಮೌಲ್ಯಗಳನ್ನು ಪ್ರತಿಧ್ವನಿಸಿ, ಅಧಿಕಾರ ತೊರೆದರು. ಸಿದ್ದರಾಮಯ್ಯನವರು ಮಾಡಬೇಕಿದ್ದ ಕೆಲಸಗಳು, ಉಳಿಸಿ ಹೋದ ಜವಾಬ್ದಾರಿಗಳೆಲ್ಲದರ ಆಚೆಗೆ ನೋಡಿದರೂ ಅವರನ್ನು ಸರಿದೂಗಿಸುವ ನಾಯಕ ಮತ್ತೊಬ್ಬರಿಲ್ಲ. ಈ ಸತ್ಯವನ್ನು ಅರಿತುಕೊಳ್ಳದೆ ಹೆಜ್ಜೆ ಇಟ್ಟಲ್ಲಿ ಅಥವಾ ಮೈಮರೆತಲ್ಲಿ ಡಿಕೆಶಿಗೆ ಆಪತ್ತು ಖಚಿತ. “ನಾನು ಸಿದ್ದರಾಮಯ್ಯನವರ ನೆರಳಲ್ಲೇ ಇರುವ ಮತ್ತು ಅವರಿಗಿಂತ ಭಿನ್ನವಾಗಿ ಯೋಚಿಸುವ ವ್ಯಕ್ತಿ” ಎಂದು ರಾಜ್ಯದ ಜನತೆಗೆ ಡಿಕೆಶಿ ಮನವರಿಕೆ ಮಾಡಬಲ್ಲರೇ?

ಸಿದ್ದರಾಮಯ್ಯ ಅಂದ ತಕ್ಷಣ ಜನನಾಯಕನಿಗೆ ಇರಬೇಕಾದ ‘ಇಮೇಜ್’ ಕಣ್ಣಮುಂದೆ ಬರುತ್ತದೆ. ಆದರೆ ಡಿಕೆಶಿ ಅವರ ದೊಡ್ಡ ಹಿನ್ನಡೆ ಇರುವುದೇ ಇಲ್ಲಿ. ಮತರಾಜಕಾರಣದಲ್ಲಿ ಪ್ರಭಾವಿಸುವಂತಹ ಜನಸಮೂಹವೊಂದು ಒಪ್ಪಿಕೊಂಡರೆ ಮಾತ್ರ ಆತ ಜನನಾಯಕ. ಆ ದಿಸೆಯಲ್ಲಿ ನೋಡಿದರೆ, ಡಿಕೆಶಿ ಸಮರ್ಥ ಸಂಘಟಕರಾದರೂ, ಜನನಾಯಕರಾಗಿ ಹೊಮ್ಮಿದವರಲ್ಲ. ಇದೇ ಅವರನ್ನು ಹೈರಾಣಾಗಿಸುವ ಸಂಗತಿಯಾಗಿ ಉಳಿದರೂ ಅಚ್ಚರಿಪಡಬೇಕಿಲ್ಲ. ಶಾಸಕರೆಲ್ಲರೂ ಅವರನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆಂದೂ ಹೇಳುವುದು ಕಷ್ಟ. ಒಬ್ಬ ಕೆಲಸಗಾರನನ್ನು ಗುರುತಿಸಿ, ಉನ್ನತ ಹುದ್ದೆಯನ್ನು ದಯಪಾಲಿಸಿರುವ ಹೈಕಮಾಂಡ್‌ಗೂ ಈ ಸತ್ಯ ಗೊತ್ತಿಲ್ಲದೆ ಇಲ್ಲ. ಚುನಾವಣೆಯಲ್ಲಿ ಸಂಪತ್ತನ್ನು ಹರಿಸಬಲ್ಲ ಶಕ್ತಿ ಇರುವ ಡಿಕೆಶಿಯವರನ್ನು, ಶಾಸಕನೊಬ್ಬ ಕರೆದುಕೊಂಡು ಬಂದು ತನ್ನ ಕ್ಷೇತ್ರದಲ್ಲಿ ಓಡಾಡಿಸಿದರೆ ಮತ್ತು ಭಾಷಣ ಮಾಡಿಸಿದರೆ ಪಕ್ಷಕ್ಕೆ ವೋಟ್ ಬೀಳುತ್ತವೆಯೇ? ಎಂದು ಕೇಳಿಕೊಂಡರೆ, ಈ ಕ್ಷಣಕ್ಕೆ ನಕರಾತ್ಮಕ ಉತ್ತರವೇ ಸಿಗುತ್ತದೆ. ಅದೇ ಸಿದ್ದರಾಮಯ್ಯನವರ ವಿಚಾರದಲ್ಲಿ ಹಾಗೆ ಆಗುವುದಿಲ್ಲ. ಅವರೊಬ್ಬ ಮಾಸ್ ಲೀಡರ್. ಅವರು ಕ್ಷೇತ್ರದಲ್ಲಿ ತಿರುಗಾಡಿದರೆ, ಒಂದು ವಿಭಾಗದ ಮತದಾರರು ಕಾಂಗ್ರೆಸ್‌ನತ್ತ ಹೊರಳಬಲ್ಲರು. ಈ ರೀತಿ ಪ್ರಭಾವಿಸುವ ‘ಇಮೇಜ್’ ಇಲ್ಲವಾದರೆ ಡಿಕೆಶಿ ಅವರು ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಸದಾನಂದಗೌಡ ಅವರಂತೆ ಕೇವಲ ಅಧಿಕಾರ ನಡೆಸಿದ ಮುಖ್ಯಮಂತ್ರಿಯಾಗಿ ಉಳಿಯುತ್ತಾರಷ್ಟೇ! ಸಮರ್ಥ ಆಡಳಿತಗಾರನಾಗುವುದೇ ಬೇರೆ, ಮಾಸ್ ಲೀಡರ್ ಆಗುವುದೇ ಬೇರೆ.

ಈ ದಿಸೆಯಲ್ಲಿ ನೋಡಿದರೆ ಅವರಿಗೆ ಮೊದಲು ಎದುರಾಗುವ ಸವಾಲೇ ‘ಕ್ಯಾಬಿನೆಟ್ ರಚನೆ’. ಸಿದ್ದರಾಮಯ್ಯನವರ ಸಂಪುಟದಲ್ಲಿದ್ದ ಹಿರಿತಲೆಗಳು ಮತ್ತು ಈಗಾಗಲೇ ಐದಾರು ಬಾರಿ ಗೆದ್ದು ಒಮ್ಮೆಯೂ ಸಚಿವರಾಗದೆ ಇದ್ದವರು- ಇವರೆಲ್ಲರೂ ಹೊಸ ಕ್ಯಾಬಿನೆಟ್‌ಗೆ ಸೇರಲು ಉತ್ಸುಕರಾಗಿಯೇ ಇರುತ್ತಾರೆ. ಈ ಸನ್ನಿವೇಶವನ್ನು ಡಿಕೆಶಿ ಹೇಗೆ ಮ್ಯಾನೇಜ್ ಮಾಡುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ. ಕ್ಯಾಬಿನೆಟ್‌ನಲ್ಲಿ ಎಲ್ಲರಿಗೂ ಅವಕಾಶ ಸಿಗಲಾರದು. ಅಂತಹ ಸಂದರ್ಭದಲ್ಲಿ ಅವಕಾಶ ವಂಚಿತರು ಸಿದ್ದರಾಮಯ್ಯನವರ ಬಳಿ ಹೋಗಿ ಕೂರುತ್ತಾರೆ. ಹೀಗಾಗಿ ಸಿದ್ದರಾಮಯ್ಯನವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಶಾಸಕರನ್ನು ಸಮ್ಮನಿರಿಸಬೇಕಾಗುತ್ತದೆ.

ಶಾಸಕರ ಅಸಮಾಧಾನ ಉಂಟಾಗಲೆಂದೇ ಕಾಯುತ್ತಿರುವ ಬಿಜೆಪಿಯ ಹಿಂಬದಿ ರಾಜಕಾರಣವನ್ನೂ ಡಿಕೆಶಿ ಗಂಭೀರವಾಗಿ ಗಮನಿಸಬೇಕಾಗುತ್ತದೆ. ಬಂಡಾಯಗಾರರು ಹೆಚ್ಚಾದರೆ, ಸರ್ಕಾರಗಳನ್ನು ಉರುಳಿಸುವ ದುಷ್ಟ ಕೆಲಸಗಳನ್ನು ಮಾಡಬಲ್ಲ ಶಕ್ತಿ ಬಿಜೆಪಿಗಿದೆ. ಈ ಅಪಾಯದ ತೂಗುಗತ್ತಿ ಡಿಕೆಶಿ ಅವರ ಮೇಲೆ ಇದ್ದೇ ಇರುತ್ತದೆ.

ಡಿಕೆಶಿ ಅವರಿಗೆ ಇರುವ ಫ್ಯೂಡಲಿಸಂ ಚಹರೆಗಳನ್ನು ಅಳಿಸಿಹಾಕುವ ಪ್ರಯತ್ನ ಮಾಡಬೇಕಾದ ಅನಿವಾರ್ಯತೆ ಇದೆ. ಕಾಂಗ್ರೆಸ್‌ನ ಬಹುಮುಖ್ಯ ಮತಬ್ಯಾಂಕ್ ಆಗಿರುವ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯಗಳ ಪ್ರಾತಿನಿಧ್ಯಕ್ಕೆ ಮುಕ್ಕಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಪರಿಶಿಷ್ಟ ಸಮುದಾಯದ ಪ್ರಾತಿನಿಧ್ಯಕ್ಕೆ ಬಂದರೆ ‘ಎಡ, ಬಲ, ಸ್ಪೃಶ್ಯ’ ಸಮುದಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಪ್ರಬಲ ಲಿಂಗಾಯತ ಸಮುದಾಯವನ್ನು ನಿಭಾಯಿಸಬೇಕಾಗುತ್ತದೆ. ಇದೆಲ್ಲವೂ ಸುಸೂತ್ರವಾಗಿ ನಡೆಯಬೇಕಾದರೆ ಸಿದ್ದರಾಮಯ್ಯನವರ ಶ್ರೀರಕ್ಷೆ, ಮಾರ್ಗದರ್ಶನ ಇರಲೇಬೇಕಾಗುತ್ತದೆ.

ಕರ್ನಾಟಕದ ರಾಜಕೀಯ ಇತಿಹಾಸದ ಕಟು ವಾಸ್ತವ

ಕರ್ನಾಟಕದ ರಾಜಕೀಯ ಇತಿಹಾಸವನ್ನು ತೆರೆದು ನೋಡಿದರೆ ಐದು ವರ್ಷ ಪೂರ್ಣಾವಧಿ ಅಧಿಕಾರ ನಡೆಸಿದ ಯಾವುದೇ ಪಕ್ಷ ಮರು ಆಯ್ಕೆಯಾಗಿ 48 ವರ್ಷಗಳೇ ಕಳೆದಿವೆ. ಡಿ. ದೇವರಾಜ ಅರಸು ಅವರು 1972ರಲ್ಲಿ ಮುಖ್ಯಮಂತ್ರಿಯಾಗಿ 1977ರ ಕೊನೆಯವರೆಗೂ (ಸುಮಾರು 5 ವರ್ಷ 9 ತಿಂಗಳು) ಯಶಸ್ವಿಯಾಗಿ ಆಡಳಿತ ನಡೆಸಿದ್ದರು. ಆಡಳಿತದ ಕೊನೆಯಲ್ಲಿ ಕೆಲವೇ ತಿಂಗಳು ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು. ತದನಂತರ 1978ರಲ್ಲಿ ನಡೆದ ಚುನಾವಣೆಯಲ್ಲಿ ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ (ಐ) ಪಕ್ಷ ಭರ್ಜರಿ ಬಹುಮತದೊಂದಿಗೆ ಮರು ಆಯ್ಕೆಯಾಯಿತು. ಇದು ಘಟಿಸಿ 48 ವರ್ಷವಾಯಿತು. 1983ರಲ್ಲಿ ಜನತಾ ಪಕ್ಷದ ನೇತೃತ್ವದಲ್ಲಿ ರಾಮಕೃಷ್ಣ ಹೆಗಡೆ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಆದರೆ 1984ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜನತಾ ಪಕ್ಷ ಹಿನ್ನಡೆ ಅನುಭವಿಸಿದಾಗ, ಹೆಗಡೆ ಅವರು ನೈತಿಕ ಹೊಣೆ ಹೊತ್ತು ಅವಧಿಗೂ ಮುನ್ನವೇ (ಕೇವಲ 2 ವರ್ಷಗಳಲ್ಲಿ) ವಿಧಾನಸಭೆ ವಿಸರ್ಜಿಸಿ 1985ರಲ್ಲಿ ಚುನಾವಣೆಗೆ ಹೋದರು. ಆಗ ಜನತಾ ಪಕ್ಷ ಭಾರೀ ಬಹುಮತದೊಂದಿಗೆ ಮರು ಆಯ್ಕೆಯಾಯಿತು. ಇದು ಘಟಿಸಿ 41 ವರ್ಷಗಳು ಕಳೆದಿವೆ. ಕರ್ನಾಟಕದ ಈ ರಾಜಕೀಯ ಇತಿಹಾಸವು ಡಿಕೆಶಿಯವರಿಗೆ ದೊಡ್ಡ ಎಚ್ಚರಿಕೆ. ಯಾಕೆಂದರೆ ಇಲ್ಲಿನ ಮತದಾರರು ಐದು ವರ್ಷಗಳಿಗೊಮ್ಮೆ ಸರ್ಕಾರವನ್ನು ಬದಲಿಸುವ ಪ್ರವೃತ್ತಿಯನ್ನು ಹೊಂದಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡು, ಇತಿಹಾಸವನ್ನು ಸುಳ್ಳಾಗಿಸುವ ಸಾಹಸ ಮಾಡಬೇಕಾದರೆ ಡಿಕೆಶಿ ಅಪ್ರತಿಮ ನಾಯಕರಾಗಿ ಹೊಮ್ಮಬೇಕಾಗುತ್ತದೆ. 2028ರಲ್ಲೂ ಸರ್ಕಾರವನ್ನು ಅಧಿಕಾರಕ್ಕೆ ತರುವುದೇ ದೊಡ್ಡ ಸವಾಲು.

ಒಕ್ಕಲಿಗರ ವೋಟ್ ಬೇಸ್ ಏನಾಗಲಿದೆ?

ಸಂಘಟನೆಯನ್ನು ಕಟ್ಟುವಲ್ಲಿ, ಚುನಾವಣೆಗಳಿಗಾಗಿ ಬಂಡವಾಳ ಹೂಡಿ, ಬಂಡವಾಳ ತೆಗೆಯುವಲ್ಲಿ ಡಿಕೆಶಿ ಚಾಣಾಕ್ಷರೇ ಇದ್ದರೂ ಅವರು ಪ್ರತಿನಿಧಿಸುವ ಒಕ್ಕಲಿಗ ಸಮುದಾಯವನ್ನು ಸಂಪೂರ್ಣವಾಗಿ ಪ್ರಭಾವಿಸಿದವಲ್ಲ. ಅಧಿಕಾರ ಸ್ಥಾನದಲ್ಲಿರುವ ಕಾರಣ ಸಣ್ಣಮಟ್ಟಿಗಿನ ಒಕ್ಕಲಿಗರು ಡಿಕೆಶಿ ಅವರೊಂದಿಗೆ ಬರಬಲ್ಲರು ಎಂಬುದು ನಿಜ. ಆದರೆ ಹಳೇಮೈಸೂರು ಭಾಗ ವಾಸ್ತವದಲ್ಲಿ ಜೆಡಿಎಸ್ ಭದ್ರಕೋಟೆ. ಇಲ್ಲಿ ಒಕ್ಕಲಿಗ ಸಮುದಾಯದ ಅದ್ವಿತೀಯ ನಾಯಕರಾಗಿ ಹೊಮ್ಮಬೇಕಾದರೆ ದೊಡ್ಡ ಕಸರತ್ತುಗಳನ್ನೇ ಮಾಡಬೇಕು. ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹೀಗಿರುವ ಬಿಡದಿ ಟೌನ್ಶಿಪ್ ನಂತಹ ಯೋಜನೆಗಳಿಗೆ ಕೈಹಾಕಿದರೆ, ಡಿಕೆಶಿಯವರನ್ನು ಮುಳುಗಿಸಲು ಬೇರೆ ತಪ್ಪುಗಳು ಬೇಡವಾಗುತ್ತವೆ. ಒಕ್ಕಲಿಗರನ್ನು ಎತ್ತಂಗಡಿ ಮಾಡುವ ಈ ಟೌನ್ಶಿಪ್ ಯೋಜನೆ ಡಿಕೆಶಿಯವರನ್ನು ಸಮುದಾಯದ ನಾಯಕನನ್ನಾಗಿ ರೂಪಿಸುವುದಿಲ್ಲ.

ಒಕ್ಕಲಿಗ ನಾಯಕತ್ವವು ಸುಲಭ ಸಂಗತಿಯಲ್ಲ. ಯಾಕೆಂದರೆ ಡಿಕೆಶಿ ನಾಯಕರಾದರೆ, ತಮ್ಮ ಅಸ್ತಿತ್ವಕ್ಕೆ ತೊಡಕು ಎಂದು ಭಾವಿಸುವ ದೇವೇಗೌಡರ ಕುಟುಂಬವು ರಾಜಕೀಯ ದಾಳಗಳನ್ನು ಉರುಳಿಸದೆ ಇರುವುದಿಲ್ಲ. ಮತ್ತೊಂದೆಡೆ ಒಕ್ಕಲಿಗರ ಪ್ರದೇಶದಲ್ಲಿ ಬೇರು ಬಿಡುವುದಕ್ಕೆ ಮತ್ತು ಜೆಡಿಎಸ್ ಪಕ್ಷವನ್ನು ಆಪೋಷನ ತೆಗೆದುಕೊಳ್ಳುವುದಕ್ಕೆ ಕಾಯುತ್ತಿರುವ ಬಿಜೆಪಿ ಹಾಗೂ ಅದರ ಕೇಂದ್ರ ನಾಯಕರು ಡಿಕೆಶಿ ಮೇಲೂ ಕಣ್ಣಿಡುವುದು ಖಚಿತ.

ರಾಜಕಾರಣದಲ್ಲಿ ಭ್ರಷ್ಟಚಾರವನ್ನು ಮೈಗೆತ್ತಿಕೊಳ್ಳದೆ ಇದ್ದ ಸಿದ್ದರಾಮಯ್ಯನಂಥವರನ್ನೇ ಕೇಂದ್ರ ತನಿಖಾ ಸಂಸ್ಥೆಗಳ ಕುಣಿಕೆಗೆ ಹಾಕಲು ಬಿಜೆಪಿ ಯತ್ನಿಸಿತ್ತು. ಹೀಗಿರುವಾಗ ಈಗಾಗಲೇ ಇ.ಡಿ, ಸಿಬಿಐ ಸಂಕಷ್ಟಗಳನ್ನು ಎದುರಿಸಿರುವ ಡಿಕೆಶಿ ಅವರ ಮೇಲೆ ಕೇಂದ್ರವು ಮತ್ತೊಂದು ಸುತ್ತಿನ ಕಾರ್ಯಾಚರಣೆಗೆ ಇಳಿಯಬಹುದು. ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಯ ಮೇಲೆ ದಾಳಿ ಮಾಡುವ ಮೂಲಕ ಕಾಂಗ್ರೆಸ್‌ನ ನೈತಿಕ ಸ್ಥೈರ್ಯವನ್ನೂ ಕಸಿಯಬಹುದು. ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್ ಕೂಡ ಇಂತಹ ದಾಳಿಗಳನ್ನು ಬೆಂಬಲಿಸಿ, ಡಿಕೆಶಿಯವರನ್ನು ರಾಜಕೀಯವಾಗಿ ಮುಗಿಸಲು ಯತ್ನಿಸಬಹುದು. ಇಂತಹ ರಾಜಕೀಯ ಅಡಕತ್ತರಿಗಳಿಗೆ ಸಿಗಬಾರದೆಂದರೆ ಡಿಕೆಶಿ ಆದಷ್ಟು ಬೇಗ, ದೊಡ್ಡ ಇಮೇಜ್ ಕಟ್ಟಿಕೊಳ್ಳಬೇಕಾಗುತ್ತದೆ. ‘ಡಿಕೆಶಿಯವರನ್ನು ಮುಟ್ಟಿದರೆ, ಒಂದು ಸಮುದಾಯದ ವೋಟ್ ಬ್ಯಾಂಕ್ ಎದುರು ಹಾಕಿಕೊಂಡಂತೆ, ಡಿಕೆಶಿ ಅವರನ್ನು ಮುಟ್ಟಿದರೆ ಕರ್ನಾಟಕದ ಒಬ್ಬ ಜನಪ್ರಿಯ ಮುಖ್ಯಮಂತ್ರಿಯನ್ನು ಮುಟ್ಟಿದಂತೆ, ಡಿಕೆಶಿ ಸಹವಾಸಕ್ಕೆ ಹೋದರೆ ಅಧಿಕಾರ ಹಿಡಿಯುವುದು ಕಷ್ಟವಾಗುತ್ತದೆ’ ಎಂಬ ಸಂದೇಶ ಕೊಡುವಷ್ಟರ ಮಟ್ಟಿಗೆ ಇಮೇಜ್ ಬೆಳೆದರೆ ಮಾತ್ರ ಡಿಕೆಶಿಯವರ ಅಸ್ತಿತ್ವ ಉಳಿಯುತ್ತದೆ. ಅಡ್ಜೆಸ್ಟ್‌ಮೆಂಟ್ ರಾಜಕೀಯ ನಡೆಸಲು ಹೋದರೆ, ಪಕ್ಷಕ್ಕೂ, ಸಿದ್ಧಾಂತಕ್ಕೂ, ಅಸ್ತಿತ್ವಕ್ಕೂ ಹೊಡೆತ ಬೀಳುತ್ತದೆ.

ಜಾತಿ ಸಮೀಕ್ಷೆ ಸ್ವೀಕರಿಸಬಲ್ಲದೇ?

ಸಿದ್ದರಾಮಯ್ಯನವರ ಬಹುದೊಡ್ಡ ಕನಸು – ‘ಕರ್ನಾಟಕ ರಾಜ್ಯದ ಸಾಮಾಜಿಕ, ಶಿಕ್ಷಣಿಕ, ಆರ್ಥಿಕ ಸಮೀಕ್ಷೆ’ಯನ್ನು ಹೊರತರುವುದಾಗಿತ್ತು. 2013ರಲ್ಲಿ ಅಧಿಕಾರಕ್ಕೆ ಬಂದಾಗಲೇ ಕಾಂತರಾಜ ಆಯೋಗದ ನೇತೃತ್ವದಲ್ಲಿ ಸಮೀಕ್ಷೆ ನಡೆಸಿದರು. ಆದರೆ ವರದಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸದ ಸ್ಥಿತಿಯಲ್ಲಿ ಸಿದ್ದರಾಮಯ್ಯ ಇದ್ದರು. ಕಾಂತರಾಜ ಆಯೋಗದ ಅಂಕಿ-ಅಂಶಗಳ ವಿರುದ್ಧ ಬಲಾಢ್ಯ ಸಮುದಾಯಗಳ ತೀವ್ರ ಆಕ್ಷೇಪ ವ್ಯಕ್ತವಾಗಿ ಮಧುಸೂದನ್ ನಾಯ್ಕ್ ಕಮಿಷನ್ ನೇತೃತ್ವದಲ್ಲಿ ಮತ್ತೊಂದು ಸಮೀಕ್ಷೆಯನ್ನು ಸಿದ್ದರಾಮಯ್ಯ ಸರ್ಕಾರ ನಡೆಸಿತು. ತಾವು ರಾಜೀನಾಮೆ ಕೊಡುವ ಮುನ್ನಾ ದಿನ, ಅಂತಿಮ ಸಮಯದಲ್ಲಿ ಆಯೋಗದ ವರದಿಯನ್ನೂ ಸ್ವೀಕರಿಸಿ ಮುಖ್ಯಸಂದೇಶವೊಂದನ್ನು ಡಿ ಕೆ ಶಿವಕುಮಾರ್ ಅವರಿಗೆ ರವಾನಿಸಿದ್ದಾರೆ. ಡಿಕೆಶಿ ಅವರು ಜಾತಿ ಸಮೀಕ್ಷೆ ನಡೆಯುವಾಗಲೇ ಅಸಡ್ಡೆಯಿಂದ ಮಾತನಾಡಿದ್ದರು. ಅಂದರೆ ಸಮೀಕ್ಷೆಯನ್ನು ಹಳ್ಳಹಿಡಿಸುವಂತಹ ಹೇಳಿಕೆಗಳನ್ನು ಬಿಜೆಪಿ ನಾಯಕರು ನೀಡುತ್ತಿರುವಾಗ, ಅಂತಹದ್ದೇ ಅಭಿಪ್ರಾಯಗಳನ್ನು ಹೋಲುವಂತೆ ಡಿಕೆಶಿ ಪ್ರತಿಕ್ರಿಯಿಸಿದ್ದರು. ಕಾಂಗ್ರೆಸ್‌ನ ಬಲ ಇರುವುದೇ ಅಹಿಂದ ಸಮುದಾಯಗಳಲ್ಲಿ. ಅಹಿಂದ ಸಮುದಾಯಗಳ ಅಭಿವೃದ್ಧಿಗೆ ಹೊಸ ದಿಕ್ಸೂಚಿಯಾಗಬಲ್ಲ ಜಾತಿ ಸಮೀಕ್ಷೆಯನ್ನು ತೆರೆಯದಿದ್ದರೆ, ಕಾಂಗ್ರೆಸ್ ಸರ್ಕಾರಕ್ಕೂ ಡಿಕೆಶಿಯವರಿಗೂ ಕೆಟ್ಟ ಹೆಸರು ಬರುವುದಂತೂ ಖಚಿತ. ಮುಖ್ಯವಾಗಿ ಹಿಂದುಳಿದ ಸಮುದಾಯಗಳ ವೋಟ್ಗಳನ್ನು ನಿರ್ಧರಿಸಬಲ್ಲ ಶಕ್ತಿ ಈ ಜಾತಿ ಸಮೀಕ್ಷೆಗಿದೆ. ಈ ವಿಚಾರದಲ್ಲಿ ಆಂತರಿಕವಾಗಿ ಬರಬಹುದಾದ ಸ್ವಜಾತಿ ಒತ್ತಡವನ್ನು ಮೀರಿ ನಿಂತರೆ ಡಿಕೆಶಿಯವರ ‘ಇಮೇಜ್’ ಬದಲಾಗುವುದಂತೂ ಖಚಿತ.

ಜಾತಿ ಸಮೀಕ್ಷೆಯ ವರದಿ ಬಿಡುಗಡೆಯು ಡಿಕೆಶಿಯವರಿಗೆ ಸವಾಲಲ್ಲ, ಹೊರತಾಗಿ ಬಹುದೊಡ್ಡ ಅವಕಾಶ ಎಂದು ತಿಳಿಯಬೇಕಾಗುತ್ತದೆ. ಕುರುಬೇತರ ಹಿಂದುಳಿದ ವರ್ಗಗಳು ವಾಸ್ತವದಲ್ಲಿ ಕಾಂಗ್ರೆಸ್ ಜೊತೆಯಲ್ಲಿ ಇಲ್ಲ. ಜಾತಿ ಸಮೀಕ್ಷೆಯ ವರದಿಯನ್ನು ಹೊರತಂದಲ್ಲಿ ಎಲ್ಲ ಹಿಂದುಳಿದ ಸಮುದಾಯಗಳನ್ನು ಕಾಂಗ್ರೆಸ್ ಜೊತೆಯಲ್ಲಿ ಕರೆತರಲು ಸಾಧ್ಯವಾಗುತ್ತದೆ. ದೇವರಾಜ ಅರಸು ಅವರನ್ನು ಉದಾಹರಣೆಯಾಗಿ ನೋಡಬಹುದು. ಅರಸು ಅವರು ದೊಡ್ಡ ಸಂಖ್ಯೆಯ ಜಾತಿಯಿಂದ ಬಂದವರಾಗಿರಲಿಲ್ಲ. ಆದರೆ ಅವರು ಹಾವನೂರು ಆಯೋಗದ ವರದಿಯನ್ನು ಜಾರಿಗೆ ತರಲು ಸಾಧ್ಯವಾಗಿದ್ದು ಹೇಗೆ? ತೆಲಂಗಾಣದಲ್ಲಿ ರೇವಂತ ರೆಡ್ಡಿಯವರು ಒಳಮೀಸಲಾತಿಯನ್ನು ಸಶಕ್ತವಾಗಿ ಜಾರಿಗೆ ತರಲು ಸಾಧ್ಯವಾಗಿದ್ದು ಹೇಗೆ? ಈ ಪ್ರಶ್ನೆಗಳನ್ನು ಡಿಕೆಶಿ ಕೇಳಿಕೊಳ್ಳಬೇಕಾಗುತ್ತದೆ. ಹಿಂದುಳಿದ ಸಮುದಾಯದ ಹಿನ್ನೆಲೆಯಿಂದ ಬಂದ ನಾಯಕನಿಗೆ, ಹಿಂದುಳಿದ ಸಮುದಾಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅಡ್ರೆಸ್ ಮಾಡುವಾಗ ರಚನಾತ್ಮಕ ತೊಡಕುಗಳಾಗುತ್ತವೆ. ಉದಾಹರಣೆಗೆ ದಲಿತರಲ್ಲಿನ ಬಲಗೈ ಸಮುದಾಯದ ನಾಯಕನೊಬ್ಬ ಸಮಸ್ತ ದಲಿತರ ಸಮಸ್ಯೆಯನ್ನು ಬಗೆಹರಿಸುವುದು ಕಷ್ಟ. ಒಬಿಸಿ ಭವಿಷ್ಯ ನಿರ್ಧರಿಸುವ ಜಾತಿ ಸಮೀಕ್ಷೆಯ ವಿಚಾರದಲ್ಲಿ ಸಿದ್ದರಾಮಯ್ಯ ಎದುರಿಸಿದ್ದು ಇದೇ ಸವಾಲು. ಹೀಗಾಗಿ ಜಾತಿ ಸಮೀಕ್ಷೆಯನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಡಿಕೆಶಿಯವರಿಗೆ ವರದಾನವಾಗಿಯೂ ಮಾರ್ಪಡಾಗಬಹುದು.

ಸರ್ಕಾರದ ಕೆಲಸವನ್ನು ಜನಕ್ಕೆ ತಲುಪಿಸಬೇಕಾದ ತುರ್ತು

2013ರ ಅವಧಿಯಲ್ಲಿ ಸಿದ್ದರಾಮಯ್ಯನವರು ಅಧಿಕಾರ ನಡೆಸಿದ ರೀತಿಗೂ 2023ರ ನಂತರ ಆಡಳಿತ ನಡೆಸಿದ ರೀತಿಗೂ ವ್ಯತ್ಯಾಸಗಳಿದ್ದರೂ ಈಗ ತೀರಾ ಕೆಟ್ಟದಾದ ಸರ್ಕಾರ ಅಸ್ತಿತ್ವದಲ್ಲಿದೆ ಎಂಬ ಅಭಿಪ್ರಾಯವೇನೂ ಇಲ್ಲ. ಕೆಲವು ಗಂಭೀರ ಸಂಗತಿಗಳಲ್ಲಿ ಎಡವಿದರೂ, ಗ್ಯಾರಂಟಿಗಳ ಮೂಲಕ ಜನರ ಖಾತೆಗೆ ನೇರವಾಗಿ 1 ಲಕ್ಷ ಕೋಟಿ ರೂ. ಕೊಟ್ಟ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲುತ್ತದೆ. ಹಲವು ಇಲಾಖೆಗಳಲ್ಲಿ ವರ್ಗಾವಣೆಯನ್ನು ಕೌನ್ಸಲಿಂಗ್ ಮೂಲಕ ನಡೆಸುತ್ತಿರುವುದು ಭ್ರಷ್ಟಾಚಾರಕ್ಕೆ ತಕ್ಕ ಮಟ್ಟಿಗೆ ಕಡಿವಾಣ ಹಾಕಿದೆ. ಕಂದಾಯ ಇಲಾಖೆಯಲ್ಲಂತೂ ರಚನಾತ್ಮಕ ಬದಲಾವಣೆಗಳನ್ನು ಮಾಡಲಾಗಿದೆ. ಕೆಪಿಎಸ್ ಶಾಲೆಗಳಿಗೆ ಕೊಡಬೇಕಾಗಿರುವ ಆದ್ಯತೆ ದೊಡ್ಡ ಪರಿಣಾಮಗಳನ್ನು ತರಬಲ್ಲದು. ಸಿದ್ದರಾಮಯ್ಯನವರು ಹೊಸ ತಲೆಮಾರಿನ ಪ್ರಚಾರ ತಂತ್ರಗಳನ್ನು ತಿಳಿದವರಾಗಿರಲಿಲ್ಲ. ಒಳ್ಳೆಯ ಕೆಲಸಗಳನ್ನು ಮಾಡಿದ್ದರೂ ಸಿದ್ದರಾಮಯ್ಯ ಅವರು ಅವುಗಳನ್ನುಪರಿಣಾಮಕಾರಿಯಾಗಿ ಪ್ರಚಾರ ಮಾಡುವಲ್ಲಿ ಸೋತಿದ್ದಾರೆ. ಡಿಕೆಶಿಯವರ ಸುತ್ತ ಕೂಡ ಹೇಳಿಕೊಳ್ಳುವಂತಹ ಪ್ರಚಾರ ಯಂತ್ರಾಂಗವಿಲ್ಲ. ಮಾಡಿದ ಕೆಲಸವನ್ನು ಜನಕ್ಕೆ ಸಮರ್ಥವಾಗಿ ಹೇಳಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಬೇಕಿದೆ.

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್ ಕಿರಿಕಿರಿಗೆ ಪ್ರಯಾಣಿಕರು ಹೈರಾಣ

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು,...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...