ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಕುರಿತು ನಿರಂತರ ಚರ್ಚೆಗಳು ನಡೆಯುತ್ತಲೇ ಇವೆ. ಅದರಲ್ಲೂ, ಪ್ರಸ್ತುತ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆಗಳು ಭಾರೀ ಕುಸಿತ ಕಂಡಿರುವ ಸಮಯದಲ್ಲಿಯೂ ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಗಗನ ಮುಟ್ಟಿವೆ. ಕಚ್ಚಾ ತೈಲದ ಬೆಲೆಗಳು ಏರಿಕೆಯಾದಾಗ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂಧನ ಬೆಲೆ ದಿಢೀರನೆ ಜಿಗಿಯುವಾಗ, ಕ್ರೂಡ್ ಆಯಿಲ್ ಬೆಲೆ ಇಳಿದಾಗಲೂ ಅದೇ ರೀತಿ ಇಂಧನ ಬೆಲೆ ಕಡಿತಗೊಳ್ಳಬೇಕಲ್ಲವೇ ಎಂಬ ಪ್ರಶ್ನೆ ಭಾರತೀಯರಲ್ಲಿ ಮನೆ ಮಾಡಿದೆ.
ಅಂದಹಾಗೆ, 2008ರಲ್ಲಿ ಜಾಗತಿಕ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ ಸುಮಾರು 97 ಡಾಲರ್ ಇತ್ತು (ಆ ವರ್ಷ ಜುಲೈನಲ್ಲಿ 147 ಡಾಲರ್‌ವರೆಗೂ ಜಿಗಿದಿತ್ತು). ಆ ಸಮಯದಲ್ಲಿ ಭಾರತದಲ್ಲಿ ಪೆಟ್ರೋಲ್ ಬೆಲೆ 51 ರೂಪಾಯಿ, ಡೀಸೆಲ್ ಬೆಲೆ 47 ರೂಪಾಯಿ ಆಸುಪಾಸಿನಲ್ಲಿತ್ತು. 2010ರಲ್ಲಿ ಕಚ್ಚಾ ತೈಲ ಬೆಲೆ ಇಳಿದು ಬ್ಯಾರಲ್‌ಗೆ 79 ಡಾಲರ್‌ಗೆ ಬಂದಾಗ ಪೆಟ್ರೋಲ್ 52 ರೂಪಾಯಿ, ಡೀಸೆಲ್ 49 ರೂಪಾಯಿಗೆ ಸ್ವಲ್ಪ ಏರಿಕೆ ಕಂಡಿತ್ತು. ಇನ್ನು, 2012ರಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 111 ಡಾಲರ್‌ಗೆ ದಿಢೀರ್ ಜಿಗಿದಾಗಲೂ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಕ್ರಮವಾಗಿ 68 ರೂ. ಮತ್ತು 65 ರೂ.ಗಳಿಗೆ ಸೀಮಿತವಾಗಿತ್ತು.

ಇದಕ್ಕೆ ಹೋಲಿಸಿದರೆ, ಇಂದು ಜಾಗತಿಕ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ ಸುಮಾರು 70-78 ಡಾಲರ್ ಆಸುಪಾಸಿನಲ್ಲಿದೆ. ಅಂದರೆ 2012, 2010 ಹಾಗೂ 2008ಕ್ಕಿಂತಲೂ ತೀರಾ ಕಡಿಮೆ. ಆದರೆ, ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 110-111 ರೂಪಾಯಿಯ ಆಸುಪಾಸಿನಲ್ಲಿಯೂ, ಡೀಸೆಲ್ ಬೆಲೆ 95-98 ರೂಪಾಯಿಯ ಆಸುಪಾಸಿನಲ್ಲಿಯೂ ಇದೆ. ಅಂದರೆ, 2010ರಲ್ಲಿಯೂ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 79 ಡಾಲರ್ ಇತ್ತು. ಆಗ ಪೆಟ್ರೋಲ್ ಬೆಲೆ ಕೇವಲ 52 ರೂ. ಮಾತ್ರವೇ ಇತ್ತು. ಈಗಲೂ ಕಚ್ಚಾ ತೈಲ ಬೆಲೆ 78 ಡಾಲರ್ ಇದೆ. ಆದರೆ, ಪೆಟ್ರೋಲ್ ಬೆಲೆ 110 ರೂ.ಗೆ ಏರಿಕೆಯಾಗಿದೆ. ಕಚ್ಚಾ ತೈಲ ಬೆಲೆ ಡಾಲರ್ ಲೆಕ್ಕದಲ್ಲಿ 2010ಕ್ಕಿಂತ ಕಡಿಮೆ ಇದ್ದರೂ, ಪಂಪ್‌ಗಳಲ್ಲಿನ ಬೆಲೆ ಮಾತ್ರ ದ್ವಿಗುಣಕ್ಕಿಂತಲೂ ಹೆಚ್ಚಾಗಿದೆ.

ಕಚ್ಚಾ ತೈಲ ಬೆಲೆ ಮತ್ತು ಮಾರಾಟ ದರ ನಡುವಿನ ಭಾರೀ ವ್ಯತ್ಯಾಸ
ಒಂದು ಬ್ಯಾರೆಲ್ ಎಂದರೆ 159 ಲೀಟರ್. ಇಷ್ಟು ಕಚ್ಚಾ ತೈಲದ ಬೆಲೆ ಪ್ರಸ್ತುತ 78 ಡಾಲರ್ ಅಂದರೆ, ಸುಮಾರು 7,300 ರೂಪಾಯಿ. 159 ಲೀಟರ್ ಕಚ್ಚಾತೈಲದಲ್ಲಿ ಸಿದ್ದವಾಗುವ ಉತ್ಪನ್ನಗಳ ಪ್ರಮಾಣ ಹೀಗಿದೆ;
| ಉತ್ಪನ್ನಗಳು | ಪ್ರಮಾಣ | ಪ್ರಸ್ತುತ ಮಾರುಕಟ್ಟೆ ದರ |
| ಪೆಟ್ರೋಲ್ | ಸುಮಾರು 70–75 ಲೀಟರ್ | 7,817 ರಿಂದ 8,376 ರೂ. |
| ಡೀಸೆಲ್ | ಸುಮಾರು 45–50 ಲೀಟರ್ | 4,480 ರಿಂದ 4,978 ರೂ. |
| ವಿಮಾನ ಇಂಧನ (ATF) | ಸುಮಾರು 15 ಲೀಟರ್ | 1,650 ರೂ. |
| ಎಲ್‌ಪಿಜಿ (ಅಡುಗೆ ಅನಿಲ) | ಸುಮಾರು 5–7 ಲೀಟರ್ ಸಮಾನ | 325 ರಿಂದ 490 ರೂ. |
| ನಾಫ್ತಾ | ಸುಮಾರು 8 ಲೀಟರ್ | 440 ರಿಂದ 480 ರೂ. |
| ಇತರೆ ಉತ್ಪನ್ನಗಳು (ಬಿಟುಮಿನ್, ಲೂಬ್ರಿಕೆಂಟ್, ಫರ್ನೇಸ್ ಆಯಿಲ್, ಕೋಕ್, ಸಲ್ಫರ್ ಇತ್ಯಾದಿ) | ಸುಮಾರು 15–20 ಲೀಟರ್ ಸಮಾನ | 750 ರಿಂದ 1,300 ರೂ. |
| ಒಟ್ಟು | 15,462 ರಿಂದ 17,274 ರೂ. |
ಅಂದರೆ, ಒಂದು ಬ್ಯಾರೆಲ್ (159 ಲೀ) ಕಚ್ಚಾತೈಲದಲ್ಲಿ ಬರೋಬ್ಬರಿ ಪ್ರಸ್ತುತ ಮಾರುಕಟ್ಟೆ ದರದಲ್ಲಿ 17,000 ರೂ. ಮೌಲ್ಯದ ಉತ್ಪನ್ನಗಳನ್ನು ತಯಾರಿಸಬಹುದು. ಈ ಎಲ್ಲ ಉತ್ಪನ್ನಗಳ ತಯಾರಿಕೆಗೆ ತಗುಲುವ ‘ರಿಫೈನರಿ ಪ್ರೋಸೆಸಿಂಗ್ ವೆಚ್ಚ’ (ನಿರ್ವಹಣಾ ವೆಚ್ಚ) ಕೇವಲ ಸುಮಾರು 670 ರೂ.ಗಳಿಂದ 1,100 ರೂ.ಗಳು ಮಾತ್ರ.
ಪರಿಪೂರ್ಣವಾಗಿ ನೋಡಿದರೆ, ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ ಪ್ರಸ್ತುತ ಸುಮಾರು 7,300 ರೂ.. ನಿರ್ವಹಣಾ ವೆಚ್ಚ ಗರಿಷ್ಠ 1,100 ರೂ.. ಅಂದರೆ, ತೈಲ ಕಂಪನಿಗಳಿಗೆ ತಗುಲುವ ಒಟ್ಟು ವೆಚ್ಚ 7,400 ರೂ.ಗಳು ಮಾತ್ರ. ಆದರೆ, ಭಾರತದ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದಿಂದ ಬರುವ ಇಂಧನ ಉತ್ಪನ್ನಗಳ ಒಟ್ಟು ಮೌಲ್ಯ ಗರಿಷ್ಠ 17,000 ರೂ. ಆಗುತ್ತದೆ. ಸಾರಾಸರಿ 8,000 ರೂ.ಗಳನ್ನು ವ್ಯತ್ಯಾಸವಿದೆ. ಇದು ಸರ್ಕಾರಗಳು ಮತ್ತು ಡೀಲರ್‌ಗಳಿಗೆ ಲಾಭದ ಮೊತ್ತ, ಭಾರತೀಯರಿಗೆ ಭೀಕರ ಹೊರೆ.
ಇಂಧನ ಮೂಲ ವೆಚ್ಚ ಮತ್ತು ಅಂತಿಮ ಚಿಲ್ಲರೆ ದರದ ನಡುವೆ ಇರುವ 8,000 ರೂ.ಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ಅಬಕಾರಿ ಸುಂಕ, ವ್ಯಾಟ್, ಸೆಸ್ (ತೆರಿಗೆಗಳು) ಹಾಗೂ ತೈಲ ಡೀಲರ್‌ಗಳ ಕಮಿಷನ್‌ಗಳಿವೆ. ಈ ಮೊತ್ತವು ತೈಲ ಖರೀದಿ, ಸಂಸ್ಕರಣೆ, ನಿರ್ವಹಣೆ ಮೊತ್ತಕ್ಕಿಂತ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ.
ಮೋದಿ ಸರ್ಕಾರದ ಸುಂಕ ಮತ್ತು ಲೂಟಿ
2014ರ ನಂತರದ ವರ್ಷಗಳಲ್ಲಿ, ಜಾಗತಿಕ ಕಚ್ಚಾ ತೈಲ ಬೆಲೆ ಗಣನೀಯವಾಗಿ ಇಳಿಯುತ್ತಿದ್ದರೂ, ಮೋದಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹಲವು ಬಾರಿ ಏರಿಸಿದೆ. ಪರಿಣಾಮವಾಗಿ, ಕಚ್ಚಾ ತೈಲ ಅಗ್ಗವಾದಾಗ ಸಿಗಬೇಕಿದ್ದ ಲಾಭ ಗ್ರಾಹಕರಿಗೆ ವರ್ಗಾವಣೆಯಾಗುವ ಬದಲು, ಅದು ಸರ್ಕಾರದ ಬೊಕ್ಕಸ ತುಂಬಿಸುತ್ತಿದೆ.
ಮೋದಿ ಸರ್ಕಾರವು 2014ರಿಂದ 2016ರ ನಡುವೆ ಅಂದರೆ, ಕೇವಲ ಎರಡೇ ವರ್ಷಗಳಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 9 ಬಾರಿ ಹೆಚ್ಚಿಸಿತ್ತು. ಆ ನಂತರವೂ ಆಗ್ಗಾಗ್ಗೆ ಅಬಕಾಋಇ ಸುಂಕವನ್ನು ಹೆಚ್ಚಿಸುತ್ತಲೇ ಬಂದಿದೆ.
2013ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಬಕಾರಿ ಸುಂಕದ ಪಾಲು ಸುಮಾರು 10% ಇತ್ತು. ಆದರೆ, ಮೋದಿ ಸರ್ಕಾರವು ಇದನ್ನು ಸರಾಸರಿ 32%ಗೆ ಹೆಚ್ಚಿಸಿದೆ. ಅಂದರೆ, ಪ್ರತಿ ಲೀಟರ್‌ಗೆ ಪೆಟ್ರೋಲ್ ಬೆಲೆ 100 ರೂ. ಇದ್ದರೆ, ಅದರಲ್ಲಿ ಬರೋಬ್ಬರಿ 32 ರೂ.ಗಳನ್ನು ಮೋದಿ ಸರ್ಕಾರವೇ ನಿರಾಯಾಸವಾಗಿ ಸಾಮಾನ್ಯ ಭಾರತೀಯರಿಂದ ಲೂಟಿ ಹೊಡೆಯುತ್ತಿತ್ತು.
ಈ ನಡುವೆ, ಇತ್ತೀಚೆಗೆ ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 10 ರೂ. ಕಡಿಮೆ ಮಾಡಿತು. ಆದಾಗ್ಯೂ, ಪ್ರಸ್ತುತ ಪೆಟ್ರೋಲ್ ಬೆಲೆ 110 ರೂ. ಇದ್ದು, ಇದರಲ್ಲಿ ಸುಮಾರು 22 ರೂ. (20%) ಕೇಂದ್ರ ಸರ್ಕಾರದ ಅಬಕಾರಿ ಸುಂಕ ಮತ್ತು ಸೆಸ್ ಚಾರ್ಜ್ ಇದೆ. ಅಂತೆಯೇ, ರಾಜ್ಯ ಸರ್ಕಾರಗಳ ವ್ಯಾಟ್ ತೆರಿಗೆ 26 ರೂ. (23%) ಇದೆ. ಅಂದರೆ, ಗ್ರಾಹಕರು ಪಾವತಿಸುವ ಪ್ರತಿ ಲೀಟರ್ ಬೆಲೆಯ ಸುಮಾರು ಅರ್ಧದಷ್ಟು ಭಾಗ ತೆರಿಗೆಯದ್ದೇ ಆಗಿದೆ.
ಖಾಸಗಿ ತೈಲ ಕಂಪನಿಗಳ ಲಾಭ
ಇನ್ನೊಂದು ಮುಖ್ಯ ಅಂಶ ಖಾಸಗಿ ಸಂಸ್ಕರಣಾ ಕಂಪನಿಗಳ ಪಾತ್ರ. 2022ರಿಂದ ನಡೆಯುತ್ತಿರುವ ನಾನಾ ರಾಷ್ಟ್ರಗಳ ನಡುವಿನ ಸಂಘರ್ಷದಿಂದಾಗ ಜಾಗತಿಕ ಕಚ್ಚಾ ತೈಲ ಬೆಲೆ ತೀವ್ರ ಏರಿಕೆ ಕಂಡಿತ್ತು. ಆದಾಗ್ಯೂ, ರಷ್ಯಾ ಮತ್ತು ಇರಾನ್ ರೀತಿಯ ರಾಷ್ಟ್ರಗಳು ಭಾರತಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಪೂರೈಕೆ ಮಾಡುತ್ತಿದ್ದವು ಆದರೂ, ONGC, Oil India ಹಾಗೂ Reliance Industries ನಂತಹ ದೇಶೀಯ ಉತ್ಪಾದಕರು ಮತ್ತು ರಫ್ತುದಾರರು ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಇಚ್ಛೆ ತೋರಲಿಲ್ಲ. ಬದಲಾಗಿ, ತಾವೇ ಲಾಭ ಮಾಡಿಕೊಳ್ಳಲು ಹವಣಿಸಿದರು. ಮೋದಿ ಸರ್ಕಾರವೂ ಅವರಿಗೆ ಬೆಂಬಲವಾಗಿ ನಿಂತಿದೆ.
ಸಾಮಾನ್ಯ ಜನರ ಮೇಲಿನ ಹೊರೆ
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಕೇವಲ ಪೆಟ್ರೋಲ್ ಬಂಕ್‌ಗಳಲ್ಲಿ ಮಾತ್ರವೇ ಗ್ರಾಹಕರ ಮೇಲೆ ಪರಿಣಾಮ ಬೀರುವುದಿಲ್ಲ. ಪೆಟ್ರೋಲ್ ಬಂಕ್‌ಗಳಲ್ಲಿ ನೇರ ಪರಿಣಾಮ ಕಂಡರೂ, ಪರೋಕ್ಷವಾಗಿ ನಾನಾ ಕ್ಷೇತ್ರಗಳಲ್ಲಿ ಗ್ರಾಹಕರ ಮೇಲೆಯೇ ಬೃಹತ್ ಹೊರೆ ಬೀಳುತ್ತದೆ.
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದಾಗಿ ಸಾರಿಗೆ ವೆಚ್ಚವೂ ಹೆಚ್ಚುತ್ತದೆ. ಈ ಸಾರಿಗೆ ವೆಚ್ಚ ಏರಿಕೆ ಪ್ರತಿಯೊಂದು ಅಗತ್ಯ ವಸ್ತುವಿನ ಬೆಲೆಗಳ ಏರಿಕೆಗೂ ಕಾರಣವಾಗುತ್ತದೆ. ಗಮನಾರ್ಹವಾಗಿ, ಡೀಸೆಲ್ ಬೆಲೆ ಏರಿಕೆಯು ವಿಶೇಷವಾಗಿ ಕೃಷಿ ಕ್ಷೇತ್ರಕ್ಕೂ, ಸರಕು ಸಾಗಣೆಗೂ ನೇರ ಸಂಬಂಧ ಹೊಂದಿರುವುದರಿಂದ, ಡೀಸೆಲ್ ಬೆಲೆ ಏರಿಕೆ ರೈತರಿಗೂ ಟ್ರಕ್ ಮಾಲೀಕರಿಗೂ ಹೆಚ್ಚಿನ ಹೊರೆಯಾಗುತ್ತದೆ.
ಅಂತಿಮವಾಗಿ, ಈ ಹೊರೆ ಆಹಾರ ಪದಾರ್ಥಗಳ ಬೆಲೆಯಲ್ಲಿ ಪ್ರತಿಫಲಿಸುತ್ತದೆ. ಆದ್ದರಿಂದ, ಇಂಧನ ಬೆಲೆ ಏರಿಕೆ ಕೇವಲ ವಾಹನ ಬಳಕೆದಾರರಿಗೆ ಮಾತ್ರ ಸೀಮಿತವಾಗಿರದೆ, ಇಡೀ ಆರ್ಥಿಕ ವ್ಯವಸ್ಥೆಯ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಮರೆಯುವಂತಿಲ್ಲ!
ವಿಶೇಷ ಧನ್ಯವಾದ: ಸಂಜನಾ, (ಈದಿನ.ಕಾಮ್‌ನ ಸಂಶೋಧನಾ ತಂಡ); 2004ರಿಂದ ಈವರೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯ ಮಾಹಿತಿಯನ್ನು ಕಲೆ ಹಾಕುವಲ್ಲಿ ಶ್ರಮಿಸಿದವರು.


