ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ ಕರೆಘಂಟೆಯೇ?

Date:

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ, ಈ ಫಲಿತಾಂಶವೇ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎನ್ನುವುದು ಕೊಂಚ ಅತಿರೇಕವಾಗಬಲ್ಲದು. 

ನಾಲ್ಕು ಕ್ಷೇತ್ರಗಳಲ್ಲಿ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್-‌ ಬಿಜೆಪಿ ಮೈತ್ರಿ (ಎನ್‌ಡಿಎ) ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ. ಈ ಚುನಾವಣೆಯನ್ನು ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದು ಜೆಡಿಎಸ್-‌ಬಿಜೆಪಿ ಪಕ್ಷಗಳು ಈಗಾಗಲೇ ಪ್ರಚಾರ ಶುರು ಮಾಡಿವೆ. ಆದರೆ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಂತಹ ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶದಿಂದ ವಿಧಾನಸಭೆ ಚುನಾವಣೆಯನ್ನು ಅಳೆಯಲಾಗದು ಎಂಬುದು ವಾಸ್ತವ. ಅದೇ ರೀತಿ ಈ ಚುನಾವಣೆ ಕಾಂಗ್ರೆಸ್‌ಗೆ ನೀಡಿರುವ ಎಚ್ಚರಿಕೆಯ ಕರೆಘಂಟೆಯೆಂದೂ ನೋಡಬೇಕಾಗುತ್ತದೆ.

- Advertisement -

ಪಶ್ಚಿಮ ಪದವೀಧರ ಕ್ಷೇತ್ರದಿಂದ ಬಿಜೆಪಿಯ ಎಸ್‌.ವಿ.ಸಂಕನೂರ ಹ್ಯಾಟ್ರಿಕ್‌ ಗೆಲುವು ದಾಖಲಿಸಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್‌ ಜಿ ನಮೋಶಿ ಸತತ ಐದನೇ ಬಾರಿಗೆ ಆಯ್ಕೆಯಾಗಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಮೊದಲಿನಿಂದಲೂ ಬಿಜೆಪಿಯದ್ದೇ ಪಾರಮ್ಯ. ಹೀಗಾಗಿ ಅಲ್ಲಿ ಸಾಂಪ್ರದಾಯಿಕ ಬಲಾಢ್ಯ ಸಮುದಾಯಗಳ ಮತದಾರರು ಬಿಜೆಪಿ- ಜೆಡಿಎಸ್‌ ಜೊತೆ ಇರುವುದರಿಂದ ಸುಲಭವಾಗಿ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ್ ಗೆಲುವು ದಾಖಲಿಸಿದ್ದಾರೆ.‌ ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಫಲಿತಾಂಶ ನಿರೀಕ್ಷಿತವೆಂದು ಭಾವಿಸಬಹುದಾದರೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ತೀರಾ ಭಿನ್ನ ಮತ್ತು ಡಿ.ಕೆ. ಶಿವಕುಮಾರ್‌ ನಾಯಕತ್ವಕ್ಕೆ ಕೊಟ್ಟಿರುವ ರೆಡ್‌ ಸಿಗ್ನಲ್ ಎಂದೇ ಭಾವಿಸಬೇಕಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಪುಟ್ಟಣ್ಣನವರದ್ದು ವಿಶಿಷ್ಟ ರಾಜಕೀಯ ಕಥನ. ವಿದ್ಯಾರ್ಥಿ ದಿಸೆಯಿಂದಲೇ ರಾಜಕಾರಣ ಪ್ರವೇಶಿಸಿದ ಪುಟ್ಟಣ್ಣ 2002ರಲ್ಲಿ ಮೊದಲ ಬಾರಿಗೆ ಜೆಡಿಎಸ್‌ನಿಂದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಆಯ್ಕೆಯಾದರು. ಆನಂತರ ಇನ್ನೆರಡು ಅವಧಿಗೆ ಜೆಡಿಎಸ್‌ನಿಂದಲೇ ಗೆದ್ದರು. ಅವರು 2020ರಲ್ಲಿ ಬಿಜೆಪಿಗೆ ಸೇರಿದಾಗ ಜೆಡಿಎಸ್‌ ಎದುರಾಳಿಯಾಗಿ ನಿಂತಿದ್ದವರು ಎ.ಪಿ. ರಂಗನಾಥ್.‌ ಆದರೆ ಆಗಲೂ ಪುಟ್ಟಣ್ಣ ಜಯಭೇರಿ ಭಾರಿಸಿದರು. ಹಳೆಯ ಪಿಂಚಣಿ ವ್ಯವಸ್ಥೆಗಾಗಿ ದೊಡ್ಡ ಕೂಗು ಎದ್ದಾಗ, ಕೆಲವು ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡರು. ”ಶಿಕ್ಷಕರ ಪ್ರತಿನಿಧಿಯಾಗಿ ಉತ್ನತ ಮಟ್ಟದ ಒಂದು ಸಭೆಯನ್ನು ಮಾಡಿಸಲಾಗಲಿಲ್ಲ” ಎಂಬ ಕಾರಣ ಕೊಟ್ಟು ಪುಟ್ಟಣ್ಣ ಬಿಜೆಪಿ ತೊರೆದರು. ಇದರ ನಡುವೆ 2023ರ ವಿಧಾನಸಭೆ ಚುನಾವಣೆಯಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡರು. ಆದರೆ ಪುಟ್ಟಣ್ಣನವರಿಂದ ತೆರವಾದ ಕ್ಷೇತ್ರಕ್ಕೆ 2024ರಲ್ಲಿ ಉಪಚುನಾವಣೆ ನಡೆದಾಗ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪುಟ್ಟಣ್ಣ ಪರೀಕ್ಷೆಗಿಳಿದರು. ಈ ವೇಳೆಗಾಗಲೇ ಜೊತೆಯಾಗಿದ್ದ ಜೆಡಿಎಸ್-‌ ಬಿಜೆಪಿ ಪಕ್ಷಗಳ ಅಭ್ಯರ್ಥಿಯಾಗಿ ನಿಂತವರು ಎ.ಪಿ. ರಂಗನಾಥ್.‌ ಆ ಚುನಾವಣೆಯು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರಕ್ಕೆ ಸವಾಲಿನ ಸಂಗತಿಯಾಗಿತ್ತು. ಪುಟ್ಟಣ್ಣ ಯಾವುದೇ ಪಕ್ಷದಲ್ಲಿದ್ದರೂ ನಮ್ಮ ಪ್ರತಿನಿಧಿ ಎಂಬ ಭಾವನೆಯನ್ನು ಹೊಂದಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಎಲೀಟ್‌ ವರ್ಗಗಳ ಬಲದಿಂದಾಗಿ ಪುಟ್ಟಣ್ಣನವರು ಸುಮಾರು 1,500 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು.

ಇದನ್ನು ಓದಿದ್ದೀರಾ?: ಬೆಳಗಾವಿಯಲ್ಲಿ ಡಿ. 7ರಿಂದ ಚಳಿಗಾಲದ ಅಧಿವೇಶನ

ಸತತ ಎರಡು ಸಲ ಸೋತಿದ್ದ ಎ.ಪಿ. ರಂಗನಾಥ್‌ ಅವರ ಮೇಲಿದ್ದ ಅನುಕಂಪ ಮತ್ತು ಅವರು ಹಾಕಿದ ಕಣ್ಣೀರು ಈಗಿನ ಫಲಿತಾಂಶದ ಮೇಲೆ ಪರಿಣಾಮ ಬಿದ್ದಂತೆ ಕಾಣುತ್ತದೆ. ಪರಿಷತ್‌ ಚುನಾವಣೆಯಲ್ಲಿ 908 ಮತಗಳ ಅಂತರದಿಂದ ರಂಗನಾಥ್‌ ಅವರು ಪುಟ್ಟಣ್ಣನವರನ್ನು ಮಣಿಸಿದ್ದಾರೆ. ಇಬ್ಬರ ನಡುವೆಯೂ ತೀವ್ರ ಪೈಪೋಟಿ ನಡೆದಿರುವುದು ಸ್ಪಷ್ಟವಾಗುತ್ತದೆ. ಆದರೆ ಪುಟ್ಟಣ್ಣನವರ ಸೋಲು ಹಲವು ಚರ್ಚೆಗಳಿಗೆ ನಾಂದಿ ಹಾಡುತ್ತದೆ.

2024ರಲ್ಲಿ ಬೈ ಎಲೆಕ್ಷನ್‌ ನಡೆದಾಗ ನೆಕ್ ಟೂ ನೆಕ್ ಫೈಟ್‌ನಲ್ಲಿ ಪುಟ್ಟಣ್ಣ ಕಡಿಮೆ ಅಂತರದಲ್ಲಾದರೂ ಗೆದ್ದರು. ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಸಿದ್ದರಾಮಯ್ಯ. ಹಾಗೇ ನೋಡಿದರೆ, ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಪುಟ್ಟಣ್ಣ ಅವರನ್ನು ಈ ಬಾರಿ ಗೆಲ್ಲಿಸಿಕೊಳ್ಳಬೇಕಾದದ್ದು ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ವಿಷಯವಾಗಬೇಕಿತ್ತು. ಪುಟ್ಟಣ್ಣ ಗೆದ್ದರೆ, ಅದು ತಮ್ಮ ಒಕ್ಕಲಿಗ ನಾಯಕತ್ವಕ್ಕೆ ಮೈಲೇಜ್ ತಂದುಕೊಡುತ್ತದೆ ಎಂದು ಡಿ.ಕೆ. ಶಿವಕುಮಾರ್ ಭಾವಿಸಬೇಕಿತ್ತು. ಈಗ ಫಲಿತಾಂಶ ಹೊರಬಿದ್ದಿರುವ ಹೊತ್ತಿನಲ್ಲಿ, ಈ ಚುನಾವಣೆಯಲ್ಲಿ ಮುಖ್ಯಮಂತ್ರಿಯವರು ವಹಿಸಿದ ಪಾತ್ರವೇನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಂತಹ ಚುನಾವಣೆಗಳಲ್ಲಿನ ಮತದಾರರು ದೊಡ್ಡ ಮಟ್ಟದಲ್ಲಿ ಸಾಂಪ್ರದಾಯಿಕವಾಗಿ ಮೇಲ್ವರ್ಗದವರೇ ಇದ್ದಾರೆ. ಈ ಕಾರಣಕ್ಕೆ ಪುಟ್ಟಣ್ಣ ಮೊದಲಿನಿಂದಲೂ ತಮ್ಮನ್ನು ಕಾಂಗ್ರೆಸ್‌ ಅಭ್ಯರ್ಥಿ ಎಂದು ಗುರುತಿಸಿಕೊಂಡು ಹೋಗಿದ್ದಕ್ಕಿಂತ, ”ನಾನು ಪಕ್ಷಾತೀತವಾಗಿ ಬೆಂಬಲ ಪಡೆದ ವ್ಯಕ್ತಿ ಹಾಗೂ ಸಮಸ್ತ ಶಿಕ್ಷಕರೇ ನನ್ನ ಕುಟುಂಬ” ಎಂಬ ಮನೋಭಾವದಲ್ಲೇ ಚುನಾವಣೆಯನ್ನು ಎದುರಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಪುಟ್ಟಣ್ಣನವರಿಗಿರುವ ಒಲವು ಕೂಡ, ಅವರ ಎಲೀಟ್‌ ವರ್ಗದ ಪರವಾದ ಧೋರಣೆಗೆ ಕನ್ನಡಿ ಹಿಡಿಯುತ್ತದೆ. ಪುಟ್ಟಣ್ಣನವರಿಗಿರುವ ಈ ಕಾರ್ಪೋರೇಟ್ ಚಹರೆ ಮತ್ತು ಡಿ.ಕೆ. ಶಿವಕುಮಾರ್‌ ಅವರ ಒಕ್ಕಲಿಗ ನಾಯಕತ್ವದ ಅಧಿಕಾರ ಬಲದಿಂದಾಗಿ ಹೆಚ್ಚಿನ ಮತದಾರರು ಕಾಂಗ್ರೆಸ್‌ಗೆ ವಾಲಬಹುದು ಎಂದೇ ಅಂದಾಜಿಸಲಾಗಿತ್ತು. ಆದರೆ ಫಲಿತಾಂಶದಲ್ಲಿ ಕಾಂಗ್ರೆಸ್‌ಗೆ ಆಘಾತ ಎದುರಾಗಿದೆ.

ನಾಮಪತ್ರ ಸಲ್ಲಿಕೆಯ ದಿನ ಪುಟ್ಟಣ್ಣ ಅವರೊಂದಿಗೆ ಕಾಣಿಸಿಕೊಂಡಿದ್ದು ಬಿಟ್ಟರೆ ಡಿ.ಕೆ. ಶಿವಕುಮಾರ್‌ ಅವರು ಪ್ರಚಾರದ ಕಣದಲ್ಲಿ ಇರಲೇ ಇಲ್ಲ ಎಂಬ ಟೀಕೆಗಳು ಬಂದಿವೆ. ಪುಟ್ಟಣ್ಣನವರೊಂದಿಗೆ ಸಂಪುಟ ಸಚಿವರು ಪ್ರಚಾರ ಕಾರ್ಯಗಳಲ್ಲಿ ಕೈಜೋಡಿಸಿದ್ದೂ ಕಾಣುವುದಿಲ್ಲ. ಇನ್ನೊಂದೆಡೆ ಬಿಜೆಪಿ- ಜೆಡಿಎಸ್‌ನ ನಾಯಕರು ಹೇಗಾದರೂ ಗೆಲುವು ದಾಖಲಿಸಲೇಬೇಕು ಎಂದು ಶ್ರಮಿಸುತ್ತಿದ್ದದ್ದು ಢಾಳಾಗಿ ಕಾಣಿಸುತ್ತದೆ. ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಹೊರತುಪಡಿಸಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಳೆದುಕೊಂಡಿದ್ದು ಏನು ಇಲ್ಲವಾದರೂ, ಪುಟ್ಟಣ್ಣನವರ ಸೋಲನ್ನು ಒಕ್ಕಲಿಗ ಪ್ರಾಬಲ್ಯದ ಪ್ರದೇಶದಲ್ಲಿ ಡಿ.ಕೆ.ಶಿವಕುಮಾರ್‌ ತೋರಿರುವ ನಿರ್ಲಕ್ಷ್ಯದ ಭಾಗವಾಗಿಯೂ ನೋಡಬೇಕಾಗುತ್ತದೆ. ಇಲ್ಲಿ ಪುಟ್ಟಣ್ಣನವರ ವೈಯಕ್ತಿಕ ವರ್ಚಿಸ್ಸಿನ ಜೊತೆಗೆ ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವದ ಮೇಲೂ ಬರೆ ಬಿದ್ದಿದೆ.

puttanna ranganath
ಸೋತ ಪುಟ್ಟಣ್ಣ, ಗೆದ್ದ ರಂಗನಾಥ್

ಮುಂದಿನ ಚುನಾವಣೆಗೆ ಮುನ್ಸೂಚನೆಯೇ?

ಅಂದಹಾಗೆ, ಪರಿಷತ್ ಚುನಾವಣೆಯ ಫಲಿತಾಂಶವು ಮುಂಬರುವ ವಿಧಾನಸಭೆಯ ಫಲಿತಾಂಶವನ್ನು ನಿರ್ಧರಿಸುತ್ತದೆ ಎಂದು ಹೇಳಲಾಗದು. ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿಧಿಸುವ ವಾರಣಾಸಿಯಲ್ಲಿ ನಡೆದ ಶಿಕ್ಷಕರ ಚುನಾವಣೆಯಲ್ಲಿ ಎಸ್.ಪಿ ಅಭ್ಯರ್ಥಿ ಗೆದ್ದಿದ್ದಾರೆ. ಈ ಕಾರಣಕ್ಕೆ ಮೋದಿಯವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಾರೆಂದು ಹೇಳುವುದು, ನಂಬುವುದು ರಾಜಕೀಯ ದಡ್ಡತನವಾಗುತ್ತದೆಯಲ್ಲವೇ? ಆದರೆ ಮೋದಿಯವರ ನಾಯಕತ್ವವನ್ನು ಟೀಕಿಸಲು ವಾರಣಾಸಿ ಫಲಿತಾಂಶ ದೊಡ್ಡ ಅಸ್ತ್ರವಾಗುವುದಂತೂ ಖಚಿತ.

ಇದನ್ನು ಓದಿದ್ದೀರಾ?: ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎ.ಪಿ. ರಂಗನಾಥ್ ಗೆಲುವು

ಅಂತೆಯೇ, ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಭಾರೀ ಪ್ರಚಾರ ಮಾಡಲು ಈ ಫಲಿತಾಂಶ ಅವಕಾಶ ನೀಡುವುದರಿಂದ ಇದು ಡಿ.ಕೆ. ಶಿವಕುಮಾರ್‌ ನಾಯಕತ್ವಕ್ಕೆ ಮುಜುಗರ ತರುವ ಸಂಗತಿಯಾಗುತ್ತದೆ. ಈ ವಿಧಾನ ಪರಿಷತ್‌ ಚುನಾವಣೆ ನಮ್ಮ ವ್ಯಾಪ್ತಿಗೊಳಪಟ್ಟಿಲ್ಲ ಎಂಬ ಧೋರಣೆಯಲ್ಲಿ ಕಾಂಗ್ರೆಸ್‌ ಇದ್ದಂತೆಯೂ ಭಾಸವಾಗುತ್ತದೆ. ಒಟ್ಟಾರೆ ಕಾಂಗ್ರೆಸ್ ಪಕ್ಷವು ನಾಲ್ಕು ಕ್ಷೇತ್ರಗಳ ಪರಿಷತ್ ಚುನಾವಣೆಯನ್ನು ಎಷ್ಟರಮಟ್ಟಿಗೆ ‘ಗಂಭೀರ’ವಾಗಿ ತೆಗೆದುಕೊಂಡಿದೆ ಎಂಬುದೂ ಜಗಜ್ಜಾಹೀರಾಗುತ್ತದೆ.

ರಾಜ್ಯದ ಬಹುತೇಕ ಎಲೀಟ್ ಎನಿಸುವ ವರ್ಗಗಳನ್ನು ಪ್ರತಿನಿಧಿಸುವ ಚುನಾವಣೆ ಎಂದಿಗೂ ರಾಜ್ಯದ ಪ್ರತಿ ಮತದಾರರ ನಡುವೆ ನಡೆಯುವ ವಿಧಾನಸಭಾ ಚುನಾವಣೆಯನ್ನು ನಿರ್ಧರಿಸಲಾರದು. ಮೇಲ್ಮನೆಗೂ, ಕೆಳಮನೆಗೂ ದೊಡ್ಡ ವ್ಯತ್ಯಾಸಗಳಿವೆ ಎಂಬುದೂ ಅಷ್ಟೇ ಮುಖ್ಯ. ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವ ಸಮುದಾಯಗಳ ಮತದಾರರು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ನಿರ್ಣಾಯಕ ಮಟ್ಟದಲ್ಲಿ ಇಲ್ಲದಿರುವುದರಿಂದ ಮೇಲ್ಮನೆಯು ಎಂದಿಗೂ ಕೆಳಮನೆಯನ್ನು ನಿರ್ಧರಿಸುವುದಿಲ್ಲ. ಹೀಗಾಗಿ ಎನ್‌.ಡಿ.ಎ ಮೈತ್ರಿಕೂಟವು ವಿಧಾನಸಭೆಯನ್ನೂ ಗೆದ್ದು ಬೀಗುತ್ತದೆ ಎಂದು ನಂಬುವುದು ಅತಿರೇಕವಾಗುತ್ತದೆ.

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಎಸ್ಐಆರ್ ಅಂತಿಮ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 18,94,144 ಮತದಾರರು:

ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್ಐಆರ್) ಚುನಾವಣಾ ಆಯೋಗದ...

SIR | ಬೀದರ್ ಜಿಲ್ಲೆಯ 2.15 ಲಕ್ಷ ಮತದಾರರು ಕರಡು ಪಟ್ಟಿಯಿಂದ ಹೊರಕ್ಕೆ!

ಬೀದರ್ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ...

ಬೆಳಗಾವಿಯಲ್ಲಿ ಡಿ. 7ರಿಂದ ಚಳಿಗಾಲದ ಅಧಿವೇಶನ

ರಾಜ್ಯ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ...

ಪ್ರಶಾಂತ್ ಕಿಶೋರ್ ಆಪ್ತ, ‘ಜನ್ ಸುರಾಜ್’ ಡಿಜಿಟಲ್ ಮ್ಯಾನೇಜರ್ ರೈಲಿನಿಂದ ನಾಪತ್ತೆ, ನಿಗೂಢ ಸಾವು

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ 'ಜನ್ ಸುರಾಜ್ ಪಾರ್ಟಿ'ಯ (ಜೆಎಸ್‌ಪಿ)...