ಕಾಜಿ ನಜ಼ರುಲ್ ಇಸ್ಲಾಮ್ ಅವರು ಹೇಳುವಂತೆ "ಹಿಂದೂ ಮುಸ್ಲಿಂ ಇಬ್ಬರೂ ಒಂದೇ ತಾಯಿಯ ಎರಡು ಕಣ್ಣುಗಳು" ಇಂತಹ ವಿಶಾಲ ಮನೋಭಾವದ ಕವಿಯನ್ನು ಇಂದು ಚುನಾವಣಾ ಲಾಭಕ್ಕಾಗಿ, ಧ್ರುವೀಕರಣದ ರಾಜಕಾರಣಕ್ಕಾಗಿ, ಸಿದ್ಧಾಂತಗಳ ಬಣ್ಣ ಬಳಿಯಲು ಬಳಸಿಕೊಳ್ಳುತ್ತಿರುವುದು, ಕೇಸರಿ ಲೇಪಿಸುತ್ತಿರುವುದು ಬಿಜೆಪಿಯ ರಾಜಕೀಯ ದುರಂತದ ಸಂಕೇತ.
“ಅವರು ಹಿಂದೂಗಳೇ ಅಥವಾ ಮುಸ್ಲಿಮರೇ ಎಂದು ಯಾರು ಕೇಳುತ್ತಾರೆ? ನಾವಿಕನೇ, ಅವರಿಗೆ ಹೇಳು- ಇಲ್ಲಿ ಮುಳುಗುತ್ತಿರುವುದು ಮನುಷ್ಯರು! ಅವರೆಲ್ಲರೂ ನಮ್ಮ ಭಾರತ ಮಾತೆಯ ಮಕ್ಕಳು!” – ಅಂದರೆ ದೇಶ ಅಥವಾ ಸಮಾಜ ಎಂಬ ನೌಕೆ ಸಂಕಷ್ಟದಲ್ಲಿದ್ದಾಗ, ಮುಳುಗುತ್ತಿರುವ ಜನರನ್ನು ‘ಅವರು ಹಿಂದೂಗಳೋ, ಮುಸ್ಲಿಮರೋ’ ಎಂದು ಧರ್ಮದ ಆಧಾರದ ಮೇಲೆ ಗುರುತಿಸುವುದು ಮೂರ್ಖತನ. ಸಾಯುತ್ತಿರುವುದು ಮನುಷ್ಯರು ಎಂಬ ಪ್ರಜ್ಞೆ ಇರಬೇಕು. ಹೀಗೆ ಹೇಳಿರುವವರು ಬಂಗಾಳಿ ಸಾಹಿತ್ಯ ಲೋಕದ ಧ್ರುವತಾರೆ, ಶೋಷಿತರ ಧ್ವನಿ ಹಾಗೂ ಧಾರ್ಮಿಕ ಸಾಮರಸ್ಯದ ಅಪ್ರತಿಮ ಹರಿಕಾರ ಕವಿ ಕಾಜಿ ನಜ಼ರುಲ್ ಇಸ್ಲಾಮ್.
ಕಾಜಿ ನಜ಼ರುಲ್ ಇಸ್ಲಾಮ್ ಅವರನ್ನು ನಾವು ಒಬ್ಬ ಕವಿಯನ್ನಾಗಿ ನೋಡುವುದಕ್ಕಿಂತ ಹೆಚ್ಚಾಗಿ ದಮನಿತರ ಪರವಾಗಿ ಗುಡುಗಿದ ಕ್ರಾಂತಿಯ ಜ್ವಾಲೆಯಾಗಿ, ಕೋಮುವಾದ ಮತ್ತು ಅಸಮಾನತೆ ವಿರೋಧಿಯಾಗಿ ನೋಡಬಹುದು. ಆದರೆ ಭಗತ್ಸಿಂಗ್, ರವೀಂದ್ರನಾಥ ಠಾಗೋರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಹೀಗೆ ಬಹುತೇಕ ಕೋಮುವಾದ ವಿರೋಧಿ, ರಾಷ್ಟ್ರೀಯತೆ ಸಾರಿದವರನ್ನು ತನ್ನ ಸಿದ್ಧಾಂತದ ಪ್ರಚಾರಕರು ಎಂದು ‘ಟ್ಯಾಗ್’ ನೀಡುತ್ತಾ ಬಂದಿರುವ ಬಿಜೆಪಿ ಈಗ ಕಾಜಿ ನಜ಼ರುಲ್ ಇಸ್ಲಾಮ್ಗೆ ‘ಕೇಸರಿ’ ಲೇಪಿಸುತ್ತಿದೆ. ಇಸ್ಲಾಮ್ ಪರಂಪರೆ ಮತ್ತು ವಿಚಾರಧಾರೆಗಳನ್ನು “ಕೇಸರೀಕರಣ” ಮಾಡಲು ಬಿಜೆಪಿ ಶತಾಯಗತಾಯ ಪ್ರಯತ್ನಕ್ಕಿಳಿದಿದೆ.
ಇದನ್ನು ಓದಿದ್ದೀರಾ? ‘ವಂದೇ ಮಾತರಂ’ಗೆ ಕತ್ತರಿ; ಸರ್ದಾರ್ ಪಟೇಲ್, ಸುಭಾಷ್ ಚಂದ್ರ ಬೋಸ್ ಪಾತ್ರವೇನು?
ಅಷ್ಟಕ್ಕೂ ಯಾರು ಈ ಕಾಜಿ ನಜ಼ರುಲ್ ಇಸ್ಲಾಮ್?
1899ರಲ್ಲಿ ಪಶ್ಚಿಮ ಬಂಗಾಳದ ವರ್ಧಮಾನ್ ಜಿಲ್ಲೆಯ ಚುರುಲಿಯಾ ಎಂಬ ಹಳ್ಳಿಯಲ್ಲಿ ಬಡ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದವರು ಕಾಜಿ ನಜ಼ರುಲ್ ಇಸ್ಲಾಮ್. ಬಾಲ್ಯದಿಂದಲೇ ಕಷ್ಟಗಳ ಸರಣಿಯನ್ನೇ ಎದುರಿಸಿದವರು. ಆರಂಭದಲ್ಲಿ ಮಸೀದಿಯೊಂದರಲ್ಲಿ ಮುಅಜ್ಜಿನ್ (ಪ್ರಾರ್ಥನೆಗೆ ಕರೆಯುವವನು) ಆಗಿ ಕೆಲಸ ಶುರು ಮಾಡಿದ ಇಸ್ಲಾಮ್, ಬಳಿಕ ನಾಟಕ ಕಂಪನಿ, ಭಾರತೀಯ ಸೇನೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರು. ಈ ಎಲ್ಲ ಅನುಭವಗಳೇ ಅವರ ಸಾಹಿತ್ಯಕ್ಕೆ ಭದ್ರ ಬುನಾದಿ ಎಂದರೆ ತಪ್ಪಾಗಲಾರದು.
ಅವರ ಕವಿತೆಗಳು ಬ್ರಿಟಿಷ್ ಸರ್ಕಾರವನ್ನು ನಡುಗಿಸಿದ್ದವು. ಅವರ ‘ಬಿದ್ರೋಹಿ’ (ಬಂಡುಕೋರ) ಎಂಬ ಕವಿತೆ ಬಂಗಾಳಿ ಸಾಹಿತ್ಯದಲ್ಲೇ ಕ್ರಾಂತಿ. ಕವಿತೆ ಮೂಲಕ ಬ್ರಿಟಿಷರ ವಿರುದ್ಧ ದಂಗೆ ಏಳಲು ಜನರನ್ನು ಪ್ರೇರೇಪಿಸಿದ್ದಕ್ಕೆ ಜೈಲು ಶಿಕ್ಷೆಯನ್ನೂ ಅನುಭವಿಸಿದವರು ಇಸ್ಲಾಮ್. ಕೇವಲ ಬ್ರಿಟೀಷರು ಮಾತ್ರವಲ್ಲ, ಸಮಾಜದಲ್ಲಿದ್ದ ಜಮೀನ್ದಾರಿ ಪದ್ಧತಿ, ಬಡತನ ಮತ್ತು ಧಾರ್ಮಿಕ ಮುಖಂಡರ ಧೋರಣೆಗಳ ವಿರುದ್ಧವೂ ಕಟುವಾಗಿ ಬರೆಯುತ್ತಿದ್ದರು.
ಕಾಜಿ ಇಸ್ಲಾಮ್ ಅವರ ಇಡೀ ಬದುಕು ಮತ್ತು ಬರಹಗಳು ಮುಖ್ಯವಾಗಿ ಕೋಮು ಸೌಹಾರ್ದತೆಯ ಸಾಕ್ಷಿ. ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ನಜ಼ರುಲ್, ಹಿಂದೂ ಧರ್ಮದ ಪ್ರಮೀಳಾ ಸೇನ್ ಎಂಬಾಕೆಯನ್ನು ವಿವಾಹವಾದರು. ತಮ್ಮ ಮಕ್ಕಳಿಗೆ ಕೃಷ್ಣ ಮತ್ತು ಇಸ್ಲಾಮಿಕ್ ಸಂಸ್ಕೃತಿ ಎರಡನ್ನೂ ಬಿಂಬಿಸುವ ಹೆಸರುಗಳನ್ನಿಟ್ಟರು. ಕೃಷ್ಣ ಮೊಹಮ್ಮದ್, ಅರಿಂದಮ್ ಖಾಲಿದ್, ಕಾಜಿ ಸಬ್ಯಸಾಚಿ ಇಸ್ಲಾಮ್, ಕಾಜಿ ಅನಿರುದ್ಧ ಇಸ್ಲಾಮ್ – ಇವುಗಳು ಇಸ್ಲಾಮ್ ಮಕ್ಕಳ ಹೆಸರು.
ಧರ್ಮ, ಜಾತಿ, ಲಿಂಗದ ಆಧಾರದ ಮೇಲೆ ಮನುಷ್ಯರನ್ನು ಪ್ರತ್ಯೇಕಿಸುವುದನ್ನು ತೀವ್ರವಾಗಿ ವಿರೋಧಿಸಿದವರು ಇಸ್ಲಾಮ್. ಮನುಷ್ಯ ಧರ್ಮಕ್ಕಿಂತ ದೊಡ್ಡದಾದದ್ದು ಯಾವುದೂ ಇಲ್ಲ ಎಂಬುದು ಅವರ ಅಚಲ ನಂಬಿಕೆಯಾಗಿತ್ತು. ಗಜಲ್ಗಳನ್ನು ಎಷ್ಟು ಅದ್ಭುತವಾಗಿ ಬರೆದಿದ್ದಾರೋ, ಅಷ್ಟೇ ಶ್ರೇಷ್ಠವಾಗಿ ಕಾಳಿ ಮತ್ತು ದುರ್ಗೆಯನ್ನು ಆರಾಧಿಸುವ ‘ಶ್ಯಾಮಾ ಸಂಗೀತ’ ಹಾಗೂ ಭಜನೆಗಳನ್ನು ರಚಿಸಿದ್ದಾರೆ. ಹಿಂದೂ-ಮುಸ್ಲಿಂ ಗಲಭೆಗಳು ನಡೆದಾಗಲೆಲ್ಲಾ ತಮ್ಮ ಬರಹಗಳ ಮೂಲಕ ಉಭಯ ಕೋಮಿನ ಉಗ್ರಗಾಮಿ ಚಿಂತನೆಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಪಶ್ಚಿಮ ಬಂಗಾಳದಲ್ಲಿ ತನ್ನ ರಾಜಕೀಯ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ ಈ ಕೋಮುವಾದ ವಿರೋಧಿ ಕವಿಗೂ ಕೇಸರಿ ಬಣ್ಣ ಬಳಿಯುತ್ತಿದೆ.
ಇದನ್ನು ಓದಿದ್ದೀರಾ? ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟಿದ್ದೀರಾ?: ಡಿಕೆ ಶಿವಕುಮಾರ್ ತರಾಟೆ
ಬಿಜೆಪಿಯ ಈ ತಂತ್ರ ಮೊದಲನೆಯದ್ದಲ್ಲ!
ದೇಶದಲ್ಲಿರುವ ಸಾಂಸ್ಕೃತಿಕ ನಾಯಕರು, ಹೋರಾಟಗಾರರು, ಕೋಮುವಾದ ವಿರೋಧಿಗಳು, ಸಮಾನತೆಯ ಪ್ರತಿಪಾದಕರನ್ನು ಬಿಜೆಪಿ ತನ್ನ ರಾಜಕೀಯಕ್ಕೆ ಬಳಸಿಕೊಳ್ಳುವುದು, ಪ್ರಾದೇಶಿಕ ಮತ್ತು ಸಾಂಸ್ಕೃತಿಕ ನಾಯಕರನ್ನು ಅಪ್ಪಿಕೊಳ್ಳುವ ತಂತ್ರ ನಡೆಸಿರುವುದು ಇದೇ ಮೊದಲೇನಲ್ಲ. ಸ್ವಾಮಿ ವಿವೇಕಾನಂದ, ರವೀಂದ್ರನಾಥ ಟ್ಯಾಗೋರ್, ಸುಭಾಷ್ ಚಂದ್ರ ಬೋಸ್ ಅವರ ಸಾಲಿನಲ್ಲಿ ಈಗ ಕಾಜಿ ನಜ಼ರುಲ್ ಇಸ್ಲಾಮ್ ಅವರನ್ನೂ ಸೇರಿಸಿಕೊಳ್ಳಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಈ ತಂತ್ರವನ್ನು ಹೊಸದಾಗಿ ಮಾಡುತ್ತಿಲ್ಲ. ಹಲವು ವರ್ಷಗಳ ಹಿಂದಿನಿಂದಲೇ ಆರ್ಎಸ್ಎಸ್ ನಾಯಕರು ಇಸ್ಲಾಮ್ ಅವರನ್ನು “ಒಳ್ಳೆಯ ಹಿಂದೂ” ಎಂದು ನೂಲಿನಲ್ಲಿ ಪೋಣಿಸುವ ಯತ್ನ ಮಾಡಿದ್ದಾರೆ. ಮುಸ್ಲಿಮರಾಗಿ ಹುಟ್ಟಿದರೂ ಕಾಜಿ ಹಿಂದೂವಾಗಿ ಬದುಕಿದರು ಎಂದು ಸಂಘಪರಿವಾರ ಆಗಾಗೆ ಹೇಳುತ್ತಿದೆ. ಈ ವೇಳೆ ಮಾಜಿ ಸಚಿವ ಮುರಳಿ ಮನೋಹರ್ ಜೋಶಿ “ಪ್ರತಿಯೊಬ್ಬ ಭಾರತೀಯನು ಹಿಂದೂ, ಕೆಲವರು ಮೊಹಮ್ಮದೀಯ ಹಿಂದೂ ಮತ್ತು ಇತರರು ಜೆಸುಯಿ ಹಿಂದೂ” ಎಂದು ನೀಡಿದ ‘ಸ್ಟೀರಿಯೊಟೈಪಿಕಲ್’ ಹೇಳಿಕೆಯನ್ನು ನಾವು ಇಂದಿಗೂ ಮರೆಯುವಂತಿಲ್ಲ.
2014ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸ್ತುತಿಸಲು ಆರಂಭಿಸಿದ್ದರು. ಗುಜರಾತ್ನಲ್ಲಿ ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ನಿರ್ಮಿಸುವ ಘೋಷಣೆ ಮಾಡಿದರು. ಆದರೆ ತಾವು ಗೃಹ ಸಚಿವರಾಗಿದ್ದಾಗ ಸರ್ದಾರ್ ಪಟೇಲ್ ಆರ್ಎಸ್ಎಸ್ ಅನ್ನು ನಿಷೇಧಿಸಿದ್ದರು. ತ್ರಿವರ್ಣ ಧ್ವಜವನ್ನು ತುಳಿದ ಆರ್ಎಸ್ಎಸ್ನ ರಾಷ್ಟ್ರೀಯತೆಯನ್ನು ಪ್ರಶ್ನಿಸಿದ್ದರು ಎಂಬುದನ್ನು ಪಾಪ ನಮ್ಮ ಪ್ರಧಾನಿ ಮರೆತಂತಿದೆ.
ಹಾಗೆಯೇ ವಾಜಪೇಯಿಯವರ ಕಾಲದಲ್ಲಿಯೂ ಭಗತ್ ಸಿಂಗ್ ಅವರ ಪರಂಪರೆಯನ್ನು ತಮ್ಮದಾಗಿಸಿಕೊಳ್ಳಲು ಇದೇ ರೀತಿಯ ಪ್ರಯತ್ನವನ್ನು ಬಿಜೆಪಿ ಮಾಡುತ್ತಲೇ ಬಂದಿದೆ. ಮಾರ್ಕ್ಸ್ ವಾದಿ ಸಮಾಜವಾದಿ ಕ್ರಾಂತಿಕಾರಕ ಭಗತ್ ಸಿಂಗ್ಗೆ ಕೇಸರಿ ಟೋಪಿ ತೊಡೆಸಿ ಬಿಜೆಪಿಗರು ಎಂಬಂತೆ ಚಿತ್ರಿಸಲು ಯತ್ನಿಸಿದರು. ಇನ್ನೂ ನೀಚ ಹಂತಕ್ಕೆ ಇಳಿದ ಬಿಜೆಪಿ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು ಫೆಬ್ರವರಿ 14 ರಂದು ಗಲ್ಲಿಗೇರಿಸಲಾಗಿದೆ. ಆದ್ದರಿಂದ ಅಂದು ಪ್ರೇಮಿಗಳ ದಿನ ಆಚರಿಸಬಾರದು ಎಂಬ ಸುಳ್ಳನ್ನು ಹರಡಿತು. ಇಂದಿಗೂ ಸಂಘಪರಿವಾರದ ಈ ಪ್ರೊಪಗಂಡಾವನ್ನೇ ನಂಬಿರುವವರು ಇದ್ದಾರೆ ಎಂಬುದು ಆಶ್ಚರ್ಯ!
“ನಾನು ಹಿಂದೂವಾಗಿ ಹುಟ್ಟಿದ್ದೇನೆ. ನಾನು ಹಿಂದೂವಾಗಿ ಸಾಯುವುದಿಲ್ಲ” ಎಂದು ಹೇಳಿದ್ದ ಅಂಬೇಡ್ಕರ್ ಅವರ ಕೇಸರೀಕರಣಕ್ಕೂ ಬಿಜೆಪಿ ನಿರಂತರವಾಗಿ ಪ್ರಯತ್ನಿಸಿದೆ. 2018ರ ಮಾರ್ಚ್ನಲ್ಲಿ ಅಂಬೇಡ್ಕರ್ ಕೊನೆಯುಸಿರೆಳೆದ ದೆಹಲಿಯ 26 ಅಲಿಪುರ ರಸ್ತೆ ಬಳಿ ಡಾ. ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕಕ್ಕೆ ಮೋದಿ ಅಡಿಪಾಯ ಹಾಕಿದ್ದರು. ಭಾರತೀಯ ಸಂವಿಧಾನದ ಶಿಲ್ಪಿಗೆ ಸ್ಮಾರಕವನ್ನು ಅರ್ಪಿಸಲು ರಾಷ್ಟ್ರಕ್ಕೆ 60 ವರ್ಷಗಳು ಏಕೆ ಬೇಕಾಯಿತು ಎಂದು ಮೋದಿ ಹೇಳಿಕೊಂಡರು. “ಬಹುಶಃ ಇದು ನನ್ನ ಅದೃಷ್ಟ. ಬಹುಶಃ ಬಾಬಾ ಸಾಹೇಬರ ಆಶೀರ್ವಾದ ನನ್ನ ಮೇಲೆ ಇತ್ತು” ಎಂಬ ಹೇಳಿಕೆಗಳನ್ನೂ ನೀಡಿದ್ದರು. ಹಾಗೆಯೇ ದೀರ್ಘವಾದ ಬಿಳಿ ಗಡ್ಡವನ್ನು ಬಿಟ್ಟು ಸ್ವಾತಂತ್ರ್ಯ ಹೋರಾಟಗಾರ ಮತ್ತು ಕವಿ ರವೀಂದ್ರನಾಥ್ ಠಾಗೋರ್ ಅವರಂತೆ ಫೋಸ್ ಕೊಟ್ಟವರೂ ಪ್ರಧಾನಿ ನರೇಂದ್ರ ಮೋದಿ. ಹೀಗೆ ಮತಕ್ಕಾಗಿ ಯಾರದೇ ಪೋಷಾಕು ತೊಟ್ಟು ನಿಲ್ಲುವವರು ಬಿಜೆಪಿಗರು!
ಅದೇ ಹಾದಿಯಲ್ಲಿ ಸಾಗಿ ಇದೀಗ ಬಿಜೆಪಿಗರು ಇಸ್ಲಾಮ್ ಅವರು ನಮ್ಮವರು, “ಒಳ್ಳೆಯ ಹಿಂದೂ” ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಇಸ್ಲಾಮ್ ಅವರು ಬರೆದ ಕಾಳಿ ಭಕ್ತಿಗೀತೆಗಳು, ಕೃಷ್ಣನ ಮೇಲಿನ ಕೀರ್ತನೆಗಳು ಮತ್ತು ಅವರಲ್ಲಿದ್ದ ತೀವ್ರ ರಾಷ್ಟ್ರೀಯತಾವಾದಿ ಗುಣಗಳನ್ನು ಮಾತ್ರ ಹೆಕ್ಕಿ ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಗಳು ಕೇಸರಿ ಬಣ್ಣ ಹಚ್ಚುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ಅವರು ಮುಸ್ಲಿಂ ಜಾಗೃತಿಗಾಗಿ ಬರೆದ ಗೀತೆಗಳನ್ನು, ಧಾರ್ಮಿಕ ಆಚರಣೆಗಳಲ್ಲಿದ್ದ ಮೂಢನಂಬಿಕೆಗಳನ್ನು ವಿರೋಧಿಸಿದ ಕವಿತೆಗಳನ್ನು ಮಾತ್ರ ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡುತ್ತಿದೆ.
ಬಂಗಾಳದಲ್ಲಿ ಮುಸ್ಲಿಂ ಮತ್ತು ಹಿಂದೂ ಇಬ್ಬರ ಮೇಲೂ ಪ್ರಭಾವ ಬೀರುವ ಶಕ್ತಿ ಇಸ್ಲಾಮ್ ಅವರಿಗಿದೆ. ಆದ್ದರಿಂದ ಇಸ್ಲಾಮ್ ಅವರು ಹಿಂದೂ ಪ್ರತಿಪಾದಕ ಎಂಬಂತೆ ಬಿಂಬಿಸಿ ಈ ಪ್ರಭಾವ ಕುಗ್ಗಿಸುವ ಯತ್ನ ಬಿಜೆಪಿಯದ್ದು. ಅವರ ಜಯಂತಿಯನ್ನು ದೊಡ್ಡ ಮಟ್ಟದಲ್ಲಿ ಆಚರಿಸುವ ಮೂಲಕ ಬಂಗಾಳಿ ಭದ್ರಕೋಟೆಯನ್ನು ಭೇದಿಸುವುದು ಬಿಜೆಪಿಯ ರಾಜಕೀಯ ತಂತ್ರ. ಅಷ್ಟಕ್ಕೂ ಓರ್ವ ಕೋಮುವಾದದ ವಿರೋಧಿಯನ್ನು ಕೋಮುವಾದಿಯಂತೆ ಬಿಂಬಿಸುವುದು ಅವರ ಸಿದ್ಧಾಂತಕ್ಕೆ ಬಗೆಯುವ ದ್ರೋಹ.
ಕುರಾನ್ನ ಆಯತ್ಗಳಿಂದಲೂ ಪ್ರಭಾವಿತರಾಗಿದ್ದವರು, ಉಪನಿಷತ್ತುಗಳ ಜ್ಞಾನವನ್ನೂ ಗೌರವಿಸುತ್ತಿದ್ದವರು ಇಸ್ಲಾಮ್. ಅವರ ಇಡೀ ವ್ಯಕ್ತಿತ್ವದಿಂದ ಕೇವಲ ‘ಹಿಂದೂ ಧರ್ಮದ ಪ್ರಭಾವ’ವನ್ನು ಮಾತ್ರ ಪ್ರತ್ಯೇಕಿಸಿ ನೋಡುವುದು ಬಿಜೆಪಿಯ ಕೀಳು ರಾಜಕೀಯ. ಕಾಜಿ ನಜ಼ರುಲ್ ಇಸ್ಲಾಮ್ ಅವರು ಹೇಳುವಂತೆ “ಹಿಂದೂ ಮುಸ್ಲಿಂ ಇಬ್ಬರೂ ಒಂದೇ ತಾಯಿಯ ಎರಡು ಕಣ್ಣುಗಳು” ಇಂತಹ ವಿಶಾಲ ಮನೋಭಾವದ ಕವಿಯನ್ನು ಇಂದು ಚುನಾವಣಾ ಲಾಭಕ್ಕಾಗಿ, ಧ್ರುವೀಕರಣದ ರಾಜಕಾರಣಕ್ಕಾಗಿ, ಸಿದ್ಧಾಂತಗಳ ಬಣ್ಣ ಬಳಿಯಲು ಬಳಸಿಕೊಳ್ಳುತ್ತಿರುವುದು ಬಿಜೆಪಿಯ ರಾಜಕೀಯ ದುರಂತದ ಸಂಕೇತ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



