ʼವಿವಿಗಳು ಪ್ರಶ್ನಿಸುವ ತಾಣವಾಗಲಿ; ನ್ಯಾಯಾಂಗವೇನೂ ವಿಮರ್ಶೆಗೆ ಹೊರತಲ್ಲʼ: ನ್ಯಾ ಭುಯಾನ್‌ ಹೀಗಂದದ್ದು ಯಾಕೆ?

Date:

ಪ್ರಜಾಪ್ರಭುತ್ವದ ದೇಶದಲ್ಲಿ ಯಾವ ಸಂಸ್ಥೆಯೂ ಪ್ರಶ್ನಾತೀತವಲ್ಲ. ವಿಶ್ವವಿದ್ಯಾಲಯಗಳು ಅಧಿಕಾರವನ್ನು ಪ್ರಶ್ನಿಸುವ, ಭಿನ್ನಮತವನ್ನು ಚರ್ಚಿಸುವ ಮತ್ತು ಸ್ಥಾಪಿತ ನಿಲುವುಗಳನ್ನು ಪರಿಶೀಲಿಸುವ ಸ್ವತಂತ್ರ ಚಿಂತನೆಯ ತಾಣಗಳಾಗಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಹೇಳಿದ್ದಾರೆ. ನ್ಯಾಯಾಂಗದ ಮೇಲಿನ ‘ಅತಿಯಾದ ಗೌರವ’ವನ್ನೂ ತೊರೆಯಬೇಕು ಎಂದಿದ್ದಾರೆ. ಇತ್ತೀಚಿನ ವಿಶ್ವವಿದ್ಯಾಲಯಗಳಲ್ಲಿನ ವಿವಾದಗಳ ನಡುವೆ ಅವರು ಹೇಳಿರುವುದೇನು ಎಂಬುದನ್ನು ಗಂಭೀರವಾಗಿ ಚರ್ಚಿಸುವ ಅಗತ್ಯವಿದೆ.

- Advertisement -

ಆಗಸ್ಟ್ 30ರಂದು ದೆಹಲಿಯ ನ್ಯಾಷನಲ್ ಲಾ ಯೂನಿವರ್ಸಿಟಿ (NLU Delhi)ಯಲ್ಲಿ ನಡೆದ 13ನೇ ಎಲ್‌ಎಲ್‌ಎಂ ಘಟಿಕೋತ್ಸವದಲ್ಲಿ ಭುಯಾನ್ ಘಟಿಕೋತ್ಸವ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಲ್‌ಎಲ್‌ಎಂನ ವಿವಿಧ ವಿಭಾಗಗಳ 189 ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಲಾಯಿತು. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ವಿವೇಕ್ ಚೌಧರಿ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಭುಯಾನ್, ಮುಂದಿನ ಕಾನೂನು ವೃತ್ತಿಯನ್ನು ಕೇವಲ ಉದ್ಯೋಗವಾಗಿ ನೋಡದೆ ನ್ಯಾಯ, ಪ್ರಾಮಾಣಿಕತೆ ಮತ್ತು ಧೈರ್ಯಕ್ಕೆ ಬದ್ಧವಾದ ಜೀವನವಾಗಿ ನೋಡಬೇಕು ಎಂದು ಹೇಳಿದರು. ಕಾನೂನು ವೃತ್ತಿಯ ನೈತಿಕತೆ ಬಹಳಷ್ಟು ಬಾರಿ ಕಾನೂನಿನ ಪುಸ್ತಕಗಳಲ್ಲಿ ಬರೆಯಲ್ಪಟ್ಟಿರುವುದಿಲ್ಲ, ವೃತ್ತಿಪರ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಲು ಧೈರ್ಯ ಮತ್ತು ದೃಢನಿಶ್ಚಯ ಅಗತ್ಯ ಎಂದು ಒತ್ತಿ ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ವಿಶ್ವವಿದ್ಯಾನಿಲಯಗಳು ಕೇವಲ ಜ್ಞಾನವನ್ನು ವರ್ಗಾಯಿಸುವ ಕಾರ್ಖಾನೆಗಳಾಗದೆ ಸ್ಥಾಪಿತ ನಿಲುವುಗಳನ್ನು ಮರುಪರಿಶೀಲಿಸುವ, ಪ್ರಶ್ನಿಸುವ ಮತ್ತು ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಬೌದ್ಧಿಕ ತಾಣಗಳಾಗಬೇಕು. ಪ್ರಜಾಪ್ರಭುತ್ವದಲ್ಲಿ ಯಾವುದನ್ನಾದರೂ ಪ್ರಶ್ನಿಸುವುದು ಎಂದರೆ ಅದು ಸರ್ಕಾರದ ವಿರುದ್ಧದ ಪ್ರತಿರೋಧವಲ್ಲ, ಅದು ನಾಗರಿಕ ಸ್ವಾತಂತ್ರ್ಯ ಮತ್ತು ಸಂವಿಧಾನಿಕ ಜವಾಬ್ದಾರಿಯ ಅಭಿವ್ಯಕ್ತಿ. ವಿಶೇಷವಾಗಿ, ಪ್ರಾಧಿಕಾರಗಳ ಮೇಲಿನ ಮತ್ತು ನಿರ್ದಿಷ್ಟವಾಗಿ ನ್ಯಾಯಾಂಗದ ಮೇಲಿನ ಅತಿಯಾದ ಗೌರವ ಅಥವಾ ಅಂಜಿಕೆಯನ್ನು ನಾವು ಬಿಡಬೇಕು. ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವುದು ಅಥವಾ ಶಿಕ್ಷಿಸುವುದು ಸಂವಿಧಾನದ ಮೂಲ ತತ್ವಕ್ಕೆ ವಿರುದ್ಧವಾಗಿದೆ. ಆರೋಗ್ಯಕರ ಸಮಾಜದಲ್ಲಿ ಎಲ್ಲರೂ ಒಂದೇ ರೀತಿಯ ಯೋಚನೆ ಮಾಡಬೇಕಿಲ್ಲ ಮತ್ತು ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಸಂಸ್ಕೃತಿ ಕ್ಯಾಂಪಸ್‌ಗಳಿಂದಲೇ ಆರಂಭವಾಗಬೇಕು. ವಿದ್ಯಾರ್ಥಿಗಳು ಪರಿಚಿತವಾಗಿದೆ ಎಂಬ ಒಂದೇ ಕಾರಣಕ್ಕೆ ಯಾವುದೇ ವಿಚಾರವನ್ನು ಒಪ್ಪಿಕೊಳ್ಳಬಾರದು. ಉತ್ತರ ಅಹಿತಕರವಾಗಿರಬಹುದು ಎಂಬ ಕಾರಣಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳುವುದಕ್ಕೂ ಹಿಂಜರಿಯಬಾರದು ಎಂದು ಹೇಳಿದರು.

ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ಭಿನ್ನವಾಗಿ ವ್ಯಕ್ತಪಡಿಸಿದ್ದಕ್ಕಾಗಿ ಅವರನ್ನು ಬೆದರಿಸುವುದು ಅಥವಾ ಶಿಕ್ಷಿಸುವುದು ಅಧಿಕಾರದ ದುರುಪಯೋಗವಾಗುತ್ತದೆ. ಭಿನ್ನಾಭಿಪ್ರಾಯವನ್ನು ಒಪ್ಪಿಕೊಳ್ಳುವ ಸಾಮರ್ಥ್ಯವೇ ಉದಾರ ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ಮೂಲಭೂತ ಗುಣ. ಸ್ವಾತಂತ್ರ್ಯ, ಸಮಾನತೆ, ಘನತೆ ಮತ್ತು ನ್ಯಾಯ ಎಂಬ ಸಂವಿಧಾನಾತ್ಮಕ ಮೌಲ್ಯಗಳು ಭಿನ್ನಮತ, ಸಂಘರ್ಷ ಅಥವಾ ಭಿನ್ನಾಭಿಪ್ರಾಯದ ಸಂದರ್ಭದಲ್ಲೂ ಕಾನೂನಿನ ಅರ್ಥೈಸುವಿಕೆಯ ಕೇಂದ್ರದಲ್ಲೇ ಉಳಿಯಬೇಕು ಎಂದು ಭುಯಾನ್‌ ಅಭಿಪ್ರಾಯಪಟ್ಟರು.

ಈ ದೇಶದ ನ್ಯಾಯಾಂಗ ಮತ್ತು ಕಾನೂನು ಅಕಾಡೆಮಿಯಾ ಎರಡೂ ಪರಸ್ಪರ ಪ್ರತಿಸ್ಪರ್ಧಿಗಳಲ್ಲ, ಪೂರಕ ಸಂಸ್ಥೆಗಳು. ನ್ಯಾಯಾಂಗಕ್ಕೆ ಅಗತ್ಯವಾದ ಬೌದ್ಧಿಕ ಒಳನೋಟವನ್ನು ಅಕಾಡೆಮಿಯಾ ನೀಡಬಹುದು. ಅದೇ ರೀತಿ ನ್ಯಾಯಮೂರ್ತಿಗಳ ತೀರ್ಪುಗಳು, ಅವರ ನ್ಯಾಯಾಂಗ ಕಾರ್ಯವೈಖರಿ, ನ್ಯಾಯಾಲಯಗಳ ಒಟ್ಟಾರೆ ಕಾರ್ಯನಿರ್ವಹಣೆ ಸೇರಿದಂತೆ ವಿವಿಧ ಕಾನೂನು ಕ್ಷೇತ್ರಗಳ ಬಗ್ಗೆ ಸಂಶೋಧನೆ ನಡೆಸುವ ಮೂಲಕ ಅಕಾಡೆಮಿಯಾ ನ್ಯಾಯಾಂಗಕ್ಕೆ ಮಹತ್ವದ ಸೇವೆ ಸಲ್ಲಿಸಬಹುದು ಎಂದು ತಿಳಿಸಿದರು.

ಸಂವಿಧಾನದ ಆರ್ಟಿಕಲ್ 124(3)ರಲ್ಲಿ ‘distinguished jurist’ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗುವ ಅವಕಾಶವಿದ್ದರೂ, ಸಂವಿಧಾನ ಜಾರಿಗೆ ಬಂದು 76 ವರ್ಷಗಳಿಗೂ ಹೆಚ್ಚು ಕಾಲ ಕಳೆದರೂ ಈ ಮಾರ್ಗದ ಮೂಲಕ ಯಾವುದೇ ಕಾನೂನು ಅಕಾಡೆಮಿಕ್ ಸುಪ್ರೀಂ ಕೋರ್ಟ್‌ಗೆ ನೇಮಕವಾಗಿಲ್ಲ ಎಂಬುದರ ಬಗ್ಗೆಯೂ ಭುಯಾನ್ ಗಮನ ಸೆಳೆದರು. ಈ ಸಂವಿಧಾನಾತ್ಮಕ ಅವಕಾಶವನ್ನು ಬಳಸಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಆಡಳಿತವಿರುವ ಈ ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿಮರ್ಶಿಸುವ ಸಂಸ್ಕೃತಿಯನ್ನು ಹೇಗೆಲ್ಲ ದಮನ ಮಾಡಲಾಗಿದೆ, ಪ್ರಶ್ನಿಸುವ ಹಕ್ಕನ್ನು ಹೇಗೆಲ್ಲಾ ಹತ್ತಿಕ್ಕಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಜೆಎನ್‌ಯು, ಹೈದರಾಬಾದ್ ವಿಶ್ವವಿದ್ಯಾನಿಲಯ, ಜಾಮಿಆ ಮಿಲ್ಲಿಆ ಇಸ್ಲಾಮಿಯಾ ಮತ್ತು ದೆಹಲಿ ವಿಶ್ವವಿದ್ಯಾನಿಲಯಗಳಲ್ಲಿ ಸರ್ಕಾರದ ನೀತಿಗಳನ್ನು ಅಥವಾ ಸಿಎಎ ಮುಂತಾದ ಕಾಯ್ದೆಗಳನ್ನು ವಿರೋಧಿಸಿ ಧ್ವನಿ ಎತ್ತಿದ ವಿದ್ಯಾರ್ಥಿಗಳ ಮೇಲೆ ದೇಶದ್ರೋಹ ಹಾಗೂ ಯುಎಪಿಎ ದಂತಹ ಕಠಿಣ ಕಾನೂನುಗಳನ್ನು ಹೇರಲಾಗಿದೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ದೇಶವಿರೋಧಿಗಳು ಎಂದು ಬಿಂಬಿಸಿ ಜೈಲಿಗಟ್ಟುವ ಪ್ರವೃತ್ತಿ ಹೆಚ್ಚಾಗಿದ್ದು, ಇದು ಕ್ಯಾಂಪಸ್‌ಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ.

image 2026 08 31T204459.852

ಹೀಗಾಗಿ, “ವಿಶ್ವವಿದ್ಯಾನಿಲಯವು ಪ್ರಶ್ನಿಸುವ ತಾಣವಾಗಬೇಕು” ಎಂಬ ಭುಯಾನ್ ಅವರ ಮಾತು, ಭಾರತದ ಉನ್ನತ ಶಿಕ್ಷಣ ವಲಯದಲ್ಲಿ ಪ್ರಶ್ನಿಸುವ ಹಕ್ಕು ಮತ್ತು ಅಧಿಕಾರಸ್ಥರ ಪ್ರತಿಕ್ರಿಯೆ ನಡುವಿನ ಸಂಘರ್ಷವನ್ನು ಮತ್ತೆ ಮುನ್ನೆಲೆಗೆ ತರುತ್ತದೆ. ವಿಶ್ವವಿದ್ಯಾನಿಲಯಗಳ ಆಡಳಿತಾತ್ಮಕ ಸ್ವಾಯತ್ತತೆ, ಉಪಕುಲಪತಿಗಳ ನೇಮಕಾತಿ, ಕ್ಯಾಂಪಸ್‌ಗಳಲ್ಲಿ ಪೊಲೀಸ್ ಹಸ್ತಕ್ಷೇಪ, ಪ್ರಾಧ್ಯಾಪಕರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂಶೋಧನೆಯ ಸ್ವಾತಂತ್ರ್ಯ.. ಇವೆಲ್ಲವೂ ಮುಖ್ಯವಾಗಿ ಕೇಳಲೇಬೇಕಾದ ಪ್ರಶ್ನೆಗಳೇ. ಈ ಸಂಘರ್ಷಕ್ಕೆ ಕಳೆದ ಒಂದು ದಶಕದ ಕ್ಯಾಂಪಸ್‌ ರಾಜಕಾರಣವೇ ಸಾಕಷ್ಟು ಉದಾಹರಣೆಗಳನ್ನು ನೀಡುತ್ತದೆ. 2016ರ JNU ಪ್ರಕರಣ ಅದರಲ್ಲಿ ಅತ್ಯಂತ ಪ್ರಮುಖವಾದದ್ದು.

2016ರಲ್ಲಿ JNU ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರ ಬಳಿಕ ವಿದ್ಯಾರ್ಥಿ ನಾಯಕರಾದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಸೇರಿದಂತೆ ಹಲವರ ವಿರುದ್ಧ ದೇಶದ್ರೋಹದ ಆರೋಪಗಳು ದಾಖಲಾಗಿದ್ದವು. ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಲಾಗಿದೆ ಎಂಬ ಆರೋಪವೇ ವಿವಾದದ ಕೇಂದ್ರವಾಗಿತ್ತು. ಕನ್ಹಯ್ಯ ಕುಮಾರ್ ಅವರನ್ನು ಬಂಧಿಸಲಾಯಿತು. ನಂತರ ಪ್ರಕರಣದಲ್ಲಿ ಘೋಷಣೆಗಳನ್ನು ಕೂಗಿದವರ ಗುರುತಿನ ಬಗ್ಗೆ, ವಿಡಿಯೊಗಳ ಸತ್ಯಾಸತ್ಯತೆ ಮತ್ತು ದೇಶದ್ರೋಹದ ಆರೋಪಗಳ ಆಧಾರದ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯಿತು.

ಈ ಘಟನೆ ಬಳಿಕ, ಸರ್ಕಾರದ ನೀತಿಯನ್ನು ಅಥವಾ ರಾಷ್ಟ್ರೀಯತೆಯ ಅಧಿಕೃತ ವ್ಯಾಖ್ಯಾನವನ್ನು ಪ್ರಶ್ನಿಸುವ ವಿದ್ಯಾರ್ಥಿಯನ್ನು ‘ದೇಶವಿರೋಧಿ’ ಎಂದು ಕರೆಯಬಹುದೇ? ಎಂಬ ಪ್ರಶ್ನೆ ದೇಶಾದ್ಯಂತ ಚರ್ಚೆಯಾಯಿತು. ಇಲ್ಲಿ ವಿದ್ಯಾರ್ಥಿಯ ಕೆಲಸ ಪರಿಚಿತವಾದ ಅಭಿಪ್ರಾಯವನ್ನು ಒಪ್ಪಿಕೊಳ್ಳುವುದಷ್ಟೇ ಅಲ್ಲ, ಅಹಿತಕರವಾಗಿದ್ದರೂ ಕಠಿಣ ಪ್ರಶ್ನೆಗಳನ್ನು ಕೇಳುವುದೂ ಆಗಿದ್ದರೆ, ಆ ಪ್ರಶ್ನೆಯನ್ನೇ ದೇಶದ್ರೋಹದ ದೃಷ್ಟಿಯಿಂದ ನೋಡುವುದು ವಿಶ್ವವಿದ್ಯಾನಿಲಯದ ಮೂಲ ಉದ್ದೇಶಕ್ಕೆ ವಿರುದ್ಧವಾಗುವುದಿಲ್ಲವೇ? ಎಂಬುದು ಭುಯಾನ್‌ ಅವರ ವಿವರಣೆ.

2016ರ ರೋಹಿತ್ ವೇಮುಲಾ ಪ್ರಕರಣವೂ ಭಾರತದ ವಿಶ್ವವಿದ್ಯಾನಿಲಯಗಳಲ್ಲಿನ ಸಾಮಾಜಿಕ ಮತ್ತು ರಾಜಕೀಯ ಸ್ವಾತಂತ್ರ್ಯದ ಕುರಿತು ದೊಡ್ಡ ಚರ್ಚೆಗೆ ಕಾರಣವಾಯಿತು. ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಸೇರಿದಂತೆ ಐವರು ದಲಿತ ವಿದ್ಯಾರ್ಥಿಗಳ ವಿರುದ್ಧ ವಿಶ್ವವಿದ್ಯಾನಿಲಯ ಕೈಗೊಂಡ ಕ್ರಮ, ಅವರ ಅಮಾನತು ಮತ್ತು ನಂತರ ವೇಮುಲಾ ಅವರ ಆತ್ಮಹತ್ಯೆ ದೇಶಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಯಿತು. Ambedkar Students’ Association ಸಂಘಟನೆಯ ಚಟುವಟಿಕೆಗಳು, ಕ್ಯಾಂಪಸ್‌ನ ರಾಜಕೀಯ ಭಿನ್ನಾಭಿಪ್ರಾಯಗಳು ಮತ್ತು ಕೇಂದ್ರ ಸಚಿವಾಲಯದಿಂದ ವಿಶ್ವವಿದ್ಯಾನಿಲಯಕ್ಕೆ ಬಂದ ಪತ್ರಗಳ ಕುರಿತು ವಿವಾದ ಉಂಟಾಯಿತು. ವಿಶ್ವವಿದ್ಯಾನಿಲಯದಲ್ಲಿ ಜಾತಿ, ರಾಜಕೀಯ ಮತ್ತು ಅಧಿಕಾರದ ವಿರುದ್ಧ ಪ್ರಶ್ನೆ ಎತ್ತುವ ವಿದ್ಯಾರ್ಥಿಗಳಿಗೆ ಎಷ್ಟು ಸ್ವಾತಂತ್ರ್ಯವಿದೆ? ಎಂಬ ಪ್ರಶ್ನೆಯನ್ನು ಈ ಘಟನೆ ರಾಷ್ಟ್ರಮಟ್ಟಕ್ಕೆ ವಿಸ್ತರಿಸಿತು.

2019ರಲ್ಲಿ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಗೆ ತಂದ ನಂತರ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದವು. ದೆಹಲಿಯ Jamia Millia Islamia ಮತ್ತು Aligarh Muslim University ಸೇರಿದಂತೆ ಹಲವು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಾಮಿಯಾದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗೆ ಪೊಲೀಸರು ಪ್ರವೇಶಿಸಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿದ ಘಟನೆ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಯಿತು. ಗ್ರಂಥಾಲಯದೊಳಗೆ ಪೊಲೀಸರು ಪ್ರವೇಶಿಸಿದ ದೃಶ್ಯಗಳು ಕೂಡ ವ್ಯಾಪಕವಾಗಿ ಪ್ರಸಾರವಾದವು. ವಿಶ್ವವಿದ್ಯಾನಿಲಯದ ಆವರಣಕ್ಕೆ ಪೊಲೀಸರ ಪ್ರವೇಶ ಮತ್ತು ಬಲಪ್ರಯೋಗದ ಕುರಿತು ಮಾನವ ಹಕ್ಕುಗಳ ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಪ್ರಶ್ನೆ ಎತ್ತಿದವು.

CAA ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ನಂತರ ದೆಹಲಿ ಪೊಲೀಸರು ಹಲವರ ವಿರುದ್ಧ ಕಠಿಣ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದರು. ಯುಎಪಿಎ (Unlawful Activities (Prevention) Act) ಅಡಿಯಲ್ಲಿ ಬಂಧಿಸಲ್ಪಟ್ಟವರಲ್ಲಿ ವಿದ್ಯಾರ್ಥಿಗಳು ಮತ್ತು ಯುವ ಹೋರಾಟಗಾರರೂ ಇದ್ದರು. ದೆಹಲಿ ಗಲಭೆ ಪ್ರಕರಣದಲ್ಲೂ JNU ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮತ್ತು Jamia ವಿದ್ಯಾರ್ಥಿ ಕಾರ್ಯಕರ್ತ ಶರ್ಜೀಲ್ ಇಮಾಮ್ ಸೇರಿದಂತೆ ಹಲವರ ವಿರುದ್ಧವೂ ಯುಎಪಿಎ ಆರೋಪಗಳು ದಾಖಲಾಗಿವೆ. ಇಂತಹ ಕಾನೂನುಗಳ ಅಡಿಯಲ್ಲಿ ಆರೋಪ ಎದುರಿಸುವುದು ಸಾಮಾನ್ಯ ಕ್ರಿಮಿನಲ್ ಪ್ರಕರಣಕ್ಕಿಂತ ಬಹಳ ಗಂಭೀರ. ವಿಚಾರಣೆ ಮುಗಿದು ಆರೋಪ ಸಾಬೀತಾಗುವ ಮೊದಲೇ ದೀರ್ಘಕಾಲ ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಬಹುದು.

ಹೈದರಾಬಾದ್‌ನ NALSAR ವಿಶ್ವವಿದ್ಯಾನಿಲಯದ ಘಟಿಕೋತ್ಸವಕ್ಕೆ ಸಿಜೆಐ ಸೂರ್ಯಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಪ್ರಸ್ತಾವಕ್ಕೆ ವಿದ್ಯಾರ್ಥಿಗಳ ಒಂದು ದೊಡ್ಡ ವರ್ಗ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಪ್ರತಿಭಟನೆ ಕುರಿತ ಸಿಜೆಐ ಅವರ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿ, ಅವರನ್ನು ಘಟಿಕೋತ್ಸವಕ್ಕೆ ಆಹ್ವಾನಿಸುವುದು ಸೂಕ್ತವಲ್ಲ ಎಂದು ವಿದ್ಯಾರ್ಥಿಗಳು ಆಕ್ಷೇಪಿಸಿದ್ದರು. ವಿವಾದದ ನಡುವೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕೂಡ ಪದವೀಧರ ವಕೀಲರ ನೋಂದಣಿ ವಿಚಾರದಲ್ಲಿ ಕಠಿಣ ನಿಲುವು ತಳೆದಿತ್ತು. ಬಳಿಕ ಸಿಜೆಐ ಸೂರ್ಯಕಾಂತ್ ಅವರು ತಾವು NALSARನ ಆಹ್ವಾನವನ್ನು ಸ್ವೀಕರಿಸಿಯೇ ಇರಲಿಲ್ಲ ಎಂದರು.

ಇದನ್ನೂ ಓದಿ: ಪರಿಸರ ರಕ್ಷಣೆಯಲ್ಲಿ ಬದಲಾಗುತ್ತಿದೆಯೇ ಸುಪ್ರೀಂ ನಿಲುವು? ನ್ಯಾಯಮೂರ್ತಿ ಭುಯಾನ್‌ ಕಳವಳ

ಈ ಘಟನೆ ವಿದ್ಯಾರ್ಥಿಗಳ ಭಿನ್ನಮತ, ಪ್ರತಿಭಟಿಸುವ ಹಕ್ಕು ಮತ್ತು ನ್ಯಾಯಾಂಗದ ಪ್ರಮುಖ ವ್ಯಕ್ತಿಗಳನ್ನೂ ಪ್ರಶ್ನಿಸುವ ಸ್ವಾತಂತ್ರ್ಯದ ಕುರಿತು ಚರ್ಚೆಗೆ ಕಾರಣವಾಯಿತು. ಇದೇ ಬೆಳವಣಿಗೆಯ ಬೆನ್ನಲ್ಲೇ ಬೆಂಗಳೂರಿನ NLSIUನಲ್ಲೂ ಸಿಜೆಐ ಸೂರ್ಯಕಾಂತ್ ಅವರ ಘಟಿಕೋತ್ಸವ ಭಾಗವಹಿಸುವಿಕೆಗೆ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳ ಒಂದು ವರ್ಗ ಆಕ್ಷೇಪ ವ್ಯಕ್ತಪಡಿಸಿತು. ನಂತರ ವಿಶ್ವವಿದ್ಯಾನಿಲಯ ಘಟಿಕೋತ್ಸವವನ್ನೇ ರದ್ದುಗೊಳಿಸಿತು. ಹೀಗಾಗಿ, ಕಾನೂನು ಕಲಿಯುವ ವಿದ್ಯಾರ್ಥಿಗಳೇ ನ್ಯಾಯಾಂಗದ ಬಗ್ಗೆ ಪ್ರಶ್ನೆ ಎತ್ತಿದ ಈ ಬೆಳವಣಿಗೆಗಳ ನಡುವೆ, “ನ್ಯಾಯಾಂಗದ ಮೇಲಿನ ಅತಿಯಾದ ಗೌರವವನ್ನು ತೊರೆಯಬೇಕು” ಎಂಬ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಮಾತುಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.

ವಿಶ್ವವಿದ್ಯಾನಿಲಯಗಳು ಅಧಿಕಾರವನ್ನು ಪ್ರಶ್ನಿಸುವ ಧೈರ್ಯವನ್ನು ಬೆಳೆಸುವ ತಾಣಗಳಾಗಬೇಕೇ ಹೊರತು, ಅಧಿಕಾರದ ನಿಲುವುಗಳನ್ನು ಪುನರುಚ್ಚರಿಸುವ ಸಂಸ್ಥೆಗಳಾಗಬಾರದು. ಸರ್ಕಾರವಾಗಲಿ, ನ್ಯಾಯಾಂಗವಾಗಲಿ, ವಿಶ್ವವಿದ್ಯಾನಿಲಯದ ಆಡಳಿತವಾಗಲಿ, ಯಾವುದೇ ಸಂಸ್ಥೆ ವಿಮರ್ಶೆ ಮತ್ತು ಪ್ರಶ್ನೆಗಳಿಗೆ ಹೊರತಾಗಬಾರದು. ಭಿನ್ನಮತವನ್ನು ದೇಶವಿರೋಧಿತನ ಅಥವಾ ಅಶಿಸ್ತಿನ ಪಟ್ಟಿಗೆ ಸೇರಿಸುವುದನ್ನು ಒಪ್ಪಿಕೊಳ್ಳಲಾಗದು. ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಮಾತುಗಳ ಸಾರವೂ ಇದೇ. ನ್ಯಾಯಾಂಗವನ್ನು ಗೌರವಿಸುವುದು ಎಂದರೆ ಅದನ್ನು ಪ್ರಶ್ನಾತೀತಗೊಳಿಸುವುದಲ್ಲ, ವಿಶ್ವವಿದ್ಯಾನಿಲಯವನ್ನು ಗೌರವಿಸುವುದು ಎಂದರೆ ಅಲ್ಲಿ ಭಿನ್ನಮತವನ್ನು ಹತ್ತಿಕ್ಕುವುದಲ್ಲ. ಪ್ರಶ್ನಿಸುವ ವಿದ್ಯಾರ್ಥಿಗಳು, ವಿಮರ್ಶಿಸುವ ಅಧ್ಯಾಪಕರು ಮತ್ತು ಸ್ವತಂತ್ರವಾಗಿ ಸಂಶೋಧಿಸುವ ಅಕಾಡೆಮಿಯೇ ಬಲಿಷ್ಠ ದೇಶದ ಅಡಿಪಾಯ. ಪ್ರಶ್ನೆಗಳನ್ನು ಹತ್ತಿಕ್ಕುವ ಕ್ಯಾಂಪಸ್‌ಗಳು ವಿಧೇಯ ನಾಗರಿಕರನ್ನು ರೂಪಿಸಬಹುದು, ಸ್ವತಂತ್ರ ಸಮಾಜವನ್ನು ನಿರ್ಮಿಸಲು ಸಾಧ್ಯವಿಲ್ಲ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವಾಮಾನ ವರದಿ | ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಅ.22ರವರೆಗೆ ಮಳೆ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆ ಮುಂದುವರಿಯುವ...

ಬೀಳಗಿ | ಬೆಳೆ ಉಳಿಸಲು ಘಟಪ್ರಭಾ ಎಡದಂಡೆ ಕಾಲುವೆಯ ಕೊನೆಯವರೆಗೆ ನೀರು ಹರಿಸಿ: ಭಾರತೀಯ ಕಿಸಾನ್‌ ಸಂಘ ಆಗ್ರಹ

ಘಟಪ್ರಭಾ ಮತ್ತು ಕೃಷ್ಣಾ ನದಿಗಳಲ್ಲಿ ಸಾಕಷ್ಟು ನೀರಿದ್ದರೂ ಘಟಪ್ರಭಾ ಎಡದಂಡೆ ಕಾಲುವೆಯ...

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...