ಭಾರತದಲ್ಲಿ ಪರಿಸರ ಕಾನೂನು ಬೆಳೆದು ಬಲಿಷ್ಠವಾಗುವಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಪಾತ್ರ ವಹಿಸಿದೆ. ಆದರೆ ಇತ್ತೀಚಿನ ಕೆಲವು ತೀರ್ಪುಗಳನ್ನು ಗಮನಿಸಿದರೆ, ನ್ಯಾಯಾಲಯ ತನ್ನದೇ ಪರಿಸರ ನ್ಯಾಯಶಾಸ್ತ್ರದ ಪರಂಪರೆಯಿಂದ ದೂರ ಸರಿಯುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ ವ್ಯಕ್ತಪಡಿಸಿದ್ದಾರೆ.
ಪರಿಸರ ಮತ್ತು ಅಭಿವೃದ್ಧಿಯನ್ನು ಪರಸ್ಪರ ವಿರುದ್ಧವಾದ ಸಂಗತಿಗಳಂತೆ ನೋಡುವುದು ಸರಿಯಲ್ಲ. ಎರಡನ್ನೂ ಸಮತೋಲನಗೊಳಿಸುವುದೇ ‘ಸುಸ್ಥಿರ ಅಭಿವೃದ್ಧಿ’ಯ ಸಂವಿಧಾನಾತ್ಮಕ ಆಶಯವಾಗಿದೆ ಎಂದು ಅವರು ತಮ್ಮ ಅಭಿಪ್ರಾಯ ಲೇಖನವೊಂದರಲ್ಲಿ ಹೇಳಿದ್ದಾರೆ.
ಸ್ವಾತಂತ್ರ್ಯದ ಆರಂಭಿಕ ವರ್ಷಗಳಲ್ಲಿ ಭಾರತದಲ್ಲಿ ನಿರ್ದಿಷ್ಟ ಪರಿಸರ ನೀತಿ ಇರಲಿಲ್ಲ. ಸಂವಿಧಾನದಲ್ಲಿಯೂ ಪರಿಸರಕ್ಕೆ ಸಂಬಂಧಿಸಿದ ಕೆಲವು ಅಂಶಗಳಿದ್ದರೂ ‘ಪರಿಸರ’ ಎಂಬ ಪದವನ್ನು ನೇರವಾಗಿ ಉಲ್ಲೇಖಿಸಲಾಗಿರಲಿಲ್ಲ. 1976ರಲ್ಲಿ ಸಂವಿಧಾನದ 42ನೇ ತಿದ್ದುಪಡಿಯ ಮೂಲಕ 48ಎ ಹಾಗೂ 51ಎ(ಜಿ) ವಿಧಿಗಳನ್ನು ಸೇರಿಸಲಾಯಿತು. ಪರಿಸರವನ್ನು ರಕ್ಷಿಸುವುದು ಮತ್ತು ಸುಧಾರಿಸುವುದು, ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದು 48ಎ ಹೇಳುತ್ತದೆ. ನೈಸರ್ಗಿಕ ಪರಿಸರವನ್ನು ರಕ್ಷಿಸಿ ಸುಧಾರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು 51ಎ(ಜಿ) ತಿಳಿಸುತ್ತದೆ.
ಭಾರತದ ಪರಿಸರ ನ್ಯಾಯಶಾಸ್ತ್ರಕ್ಕೆ ದೊಡ್ಡ ತಿರುವು ನೀಡಿದ ಘಟನೆ 1984ರ ಭೋಪಾಲ್ ಅನಿಲ ದುರಂತ. ಈ ದುರಂತದ ಬಳಿಕ ಸುಪ್ರೀಂ ಕೋರ್ಟ್ ಪರಿಸರ ಮತ್ತು ಕೈಗಾರಿಕಾ ಹೊಣೆಗಾರಿಕೆಗೆ ಸಂಬಂಧಿಸಿದ ಹಲವು ಮಹತ್ವದ ತತ್ವಗಳನ್ನು ರೂಪಿಸಿತು. ಯೂನಿಯನ್ ಕಾರ್ಬೈಡ್ ಪ್ರಕರಣದಲ್ಲಿ ನ್ಯಾಯಾಲಯ ‘ಸಂಪೂರ್ಣ ಹೊಣೆಗಾರಿಕೆ’ (Absolute Liability) ತತ್ವವನ್ನು ಅಭಿವೃದ್ಧಿಪಡಿಸಿತು. ಅಪಾಯಕಾರಿ ಚಟುವಟಿಕೆಯಲ್ಲಿ ತೊಡಗಿರುವ ಸಂಸ್ಥೆಯಿಂದಾಗಿ ಅಪಘಾತ ಸಂಭವಿಸಿ ಜನರಿಗೆ ಹಾನಿಯಾದರೆ, ಆ ಸಂಸ್ಥೆಯೇ ಹಾನಿಗೊಳಗಾದವರಿಗೆ ಪರಿಹಾರ ನೀಡುವ ಹೊಣೆ ಹೊತ್ತುಕೊಳ್ಳಬೇಕು ಎಂಬುದು ಈ ತತ್ವದ ಸಾರ.
ಅದೇ ರೀತಿ, ‘ಮಾಲಿನ್ಯಕಾರನೇ ಪಾವತಿಸಬೇಕು’ (Polluter Pays) ಎಂಬ ತತ್ವವನ್ನೂ ಭಾರತೀಯ ಪರಿಸರ ನ್ಯಾಯಶಾಸ್ತ್ರದಲ್ಲಿ ಅಳವಡಿಸಲಾಯಿತು. ಇಂಡಿಯನ್ ಕೌನ್ಸಿಲ್ ಫಾರ್ ಎನ್ವಿರೋ-ಲೀಗಲ್ ಆ್ಯಕ್ಷನ್ ಪ್ರಕರಣದಲ್ಲಿ ಈ ತತ್ವವನ್ನು ಭಾರತದಲ್ಲಿ ಮೊದಲ ಬಾರಿಗೆ ಅನ್ವಯಿಸಲಾಯಿತು.
ವೆಲ್ಲೋರ್ ಸಿಟಿಜನ್ಸ್ ವೆಲ್ಫೇರ್ ಫೋರಂ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ʼಮುನ್ನೆಚ್ಚರಿಕೆ ತತ್ವ (Precautionary Principle)ʼವನ್ನು ಪರಿಸರ ಸಂರಕ್ಷಣೆಯ ಪ್ರಮುಖ ಆಧಾರವನ್ನಾಗಿ ಗುರುತಿಸಿತು. ಪರಿಸರ ಹಾನಿಯಾಗುವುದನ್ನು ಕಾಯದೆ, ಅದರ ಕಾರಣಗಳನ್ನು ಮುಂಚಿತವಾಗಿಯೇ ಗುರುತಿಸಿ ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಈ ತತ್ವದ ಆಶಯ.
ತಮ್ಮದೇ ಭಿನ್ನಾಭಿಪ್ರಾಯದ ತೀರ್ಪನ್ನು ಉಲ್ಲೇಖಿಸಿರುವ ನ್ಯಾಯಮೂರ್ತಿ ಭುಯಾನ್, ಪರಿಸರ ನ್ಯಾಯಶಾಸ್ತ್ರದಲ್ಲಿ ಮುನ್ನೆಚ್ಚರಿಕೆ ತತ್ವವೇ ಮೂಲಾಧಾರ ಎಂದು ಹೇಳಿದ್ದಾರೆ. ‘ಮಾಲಿನ್ಯಕಾರನೇ ಪಾವತಿಸಬೇಕು’ ಎಂಬುದು ಹಾನಿ ಸಂಭವಿಸಿದ ಬಳಿಕ ಪರಿಹಾರ ನೀಡುವ ತತ್ವವಾಗಿದ್ದರೆ, ಮುನ್ನೆಚ್ಚರಿಕೆ ತತ್ವವು ಹಾನಿಯೇ ಸಂಭವಿಸದಂತೆ ತಡೆಯುವ ಉದ್ದೇಶ ಹೊಂದಿದೆ. ಹೀಗಾಗಿ ಪರಿಸರ ತತ್ವಗಳಿಗೆ ಆದ್ಯತೆಯ ಕ್ರಮ ನಿಗದಿಪಡಿಸಬೇಕಾದರೆ, ‘ಮಾಲಿನ್ಯಕಾರನೇ ಪಾವತಿಸಬೇಕು’ ತತ್ವಕ್ಕಿಂತ ಮುನ್ನೆಚ್ಚರಿಕೆ ತತ್ವಕ್ಕೆ ಹೆಚ್ಚಿನ ಸ್ಥಾನ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಕಾಯ್ದುಕೊಳ್ಳುವುದೇ ಸುಸ್ಥಿರ ಅಭಿವೃದ್ಧಿಯ ಆಶಯ. ವೆಲ್ಲೋರ್ ಪ್ರಕರಣದಲ್ಲಿ ಮುನ್ನೆಚ್ಚರಿಕೆ ತತ್ವ ಹಾಗೂ ಮಾಲಿನ್ಯಕಾರನೇ ಪಾವತಿಸಬೇಕು ಎಂಬ ತತ್ವಗಳು ಸುಸ್ಥಿರ ಅಭಿವೃದ್ಧಿಯ ಅವಿಭಾಜ್ಯ ಭಾಗಗಳಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಎಂ.ಸಿ. ಮೆಹ್ತಾ ವರ್ಸಸ್ ಕಮಲ್‌ನಾಥ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ಸಾರ್ವಜನಿಕ ನಂಬಿಕೆಯ ಸಿದ್ಧಾಂತ’ (Public Trust Doctrine)ವನ್ನು ಅಭಿವೃದ್ಧಿಪಡಿಸಿತು. ನೈಸರ್ಗಿಕ ಸಂಪನ್ಮೂಲಗಳು ಸರ್ಕಾರದ ಸ್ವಂತ ಆಸ್ತಿ ಅಲ್ಲ; ಅವುಗಳನ್ನು ಸಾರ್ವಜನಿಕರ ಹಿತಕ್ಕಾಗಿ ಸಂರಕ್ಷಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ ಎಂಬುದು ಈ ಸಿದ್ಧಾಂತದ ಮೂಲ ಆಶಯ.
ಇದೇ ಪ್ರಕರಣದಲ್ಲಿ ಪ್ರಸ್ತುತ ಪೀಳಿಗೆಯು ಭವಿಷ್ಯದ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸುವ ಕರ್ತವ್ಯ ಹೊಂದಿದೆ ಎಂಬ ಪೀಳಿಗಾಂತರ ಸಮಾನತೆಯ (Inter-generational Equity) ತತ್ವಕ್ಕೂ ನ್ಯಾಯಾಲಯ ಒತ್ತು ನೀಡಿತ್ತು.
ಈ ಎಲ್ಲ ತೀರ್ಪುಗಳನ್ನು ಗಮನಿಸಿದರೆ, ಭಾರತದ ಪರಿಸರ ನ್ಯಾಯಶಾಸ್ತ್ರಕ್ಕೆ ಪೋಷಕರಿದ್ದರೆ ಅದು ಸುಪ್ರೀಂ ಕೋರ್ಟ್ ಎಂದು ಹೇಳಬಹುದು. ಪರಿಸರ ಕಾನೂನು ಆರಂಭಿಕ ಹಂತದಲ್ಲಿದ್ದಾಗಿನಿಂದಲೂ ನ್ಯಾಯಾಲಯ ಅದನ್ನು ಬೆಳೆಸಿದೆ ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದ್ದಾರೆ.
‘ಪರಿಸರ ಹೋರಾಟಗಾರರ ಅರ್ಜಿಗಳನ್ನು ಒಂದೇ ದೃಷ್ಟಿಯಿಂದ ನೋಡಬೇಡಿ’
ಬಾಂಬೆ ಹೈಕೋರ್ಟ್‌ನ ತಮ್ಮ ಮಾಜಿ ಸಹೋದ್ಯೋಗಿ ನ್ಯಾಯಮೂರ್ತಿ ಗೌತಮ್ ಪಟೇಲ್ ಅವರು ಬರೆದಿರುವ ‘Consistently Inconsistent: Environmental Law and the Supreme Court’ ಎಂಬ ಲೇಖನವನ್ನು ಉಲ್ಲೇಖಿಸಿರುವ ಭುಯಾನ್ ಅವರು, ಪರಿಸರ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ನ ನಿಲುವುಗಳಲ್ಲಿ ಅಸಂಗತತೆ ಕಂಡುಬರುತ್ತಿದೆ ಎಂದು ಹೇಳಿದ್ದಾರೆ. ಪರಿಸರ ಸಂರಕ್ಷಣೆಗಾಗಿ ಎನ್‌ಜಿಒಗಳು ಸಲ್ಲಿಸುವ ಅರ್ಜಿಗಳಿಗೆ ನ್ಯಾಯಾಲಯ ಸಾಮಾನ್ಯವಾಗಿ ಬೆಂಬಲ ನೀಡಿದ್ದರೂ, ಮೂಲಸೌಕರ್ಯ ಯೋಜನೆಗಳನ್ನು ಪ್ರಶ್ನಿಸುವ ಪ್ರಕರಣಗಳಲ್ಲಿ ಅದೇ ಮಟ್ಟದ ಬೆಂಬಲ ಕಾಣಿಸುವುದಿಲ್ಲ ಎಂಬುದು ಗೌತಮ್ ಪಟೇಲ್ ಅವರ ವಿಶ್ಲೇಷಣೆ. ಪರಿಸರಕ್ಕೆ ಸಂಬಂಧಿಸಿದ ನ್ಯಾಯಾಂಗ ಹಸ್ತಕ್ಷೇಪ ಅತ್ಯಂತ ಅಗತ್ಯವಾಗಿರುವ ಕ್ಷೇತ್ರವೂ ಇದೇ ಎಂದು ಅವರು ಹೇಳಿದ್ದಾರೆ.
ಅಭಿವೃದ್ಧಿ ಯೋಜನೆಗಳ ವಿರುದ್ಧ ಸಲ್ಲಿಕೆಯಾಗುವ ಎಲ್ಲ ಅರ್ಜಿಗಳನ್ನು ಒಂದೇ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಕೆಲವರು ಪ್ರಚಾರಕ್ಕಾಗಿ ಅಥವಾ ವೈಯಕ್ತಿಕ ಉದ್ದೇಶದಿಂದ ಆಧಾರರಹಿತ ಅರ್ಜಿಗಳನ್ನು ಸಲ್ಲಿಸುವುದು ನಿಜ. ಆದರೆ ಅದರ ಆಧಾರದ ಮೇಲೆ ಪರಿಸರ ಹೋರಾಟಗಾರರು ಸಲ್ಲಿಸುವ ಎಲ್ಲ ಅರ್ಜಿಗಳನ್ನೂ ಅನುಮಾನದಿಂದ ನೋಡುವಂತಿಲ್ಲ.
ಇದನ್ನೂ ಓದಿ: ಎಸ್‌ಐಆರ್ | ಬೆಂಗಳೂರಿನ ಒಂದೇ ಬೂತ್‌ನಲ್ಲಿ 93.71% ಮತದಾರರ ಹೆಸರು ನಾಪತ್ತೆ
ಪರಿಸರ ನಿಯಮಗಳನ್ನು ಉಲ್ಲಂಘಿಸಿರುವ ಯೋಜನೆಯ ವಿರುದ್ಧ ಜವಾಬ್ದಾರಿಯುತ ನಾಗರಿಕರು ನ್ಯಾಯಾಲಯದ ಮೊರೆ ಹೋದಾಗ, ನ್ಯಾಯಾಲಯವು ಅರ್ಜಿಯನ್ನು ಆರಂಭದಲ್ಲೇ ತಿರಸ್ಕರಿಸುವ ಬದಲು ಯೋಜನೆಯು ನಿಗದಿತ ಪರಿಸರ ನಿಯಮಗಳನ್ನು ಪಾಲಿಸಿದೆಯೇ ಎಂಬುದನ್ನು ಪರಿಶೀಲಿಸಬೇಕು. “ಭಾರತದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗೆ ವಿರೋಧ ವ್ಯಕ್ತವಾಗಿಲ್ಲವೇ?” ಎಂಬ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಅರ್ಜಿಯನ್ನು ಆರಂಭದಲ್ಲೇ ತಿರಸ್ಕರಿಸುವುದು ಸಾಂವಿಧಾನಿಕ ನ್ಯಾಯಾಲಯದ ನಿಲುವಾಗಬಾರದು.
ದೊಡ್ಡದಾಗಿರಲಿ ಅಥವಾ ಸಣ್ಣದಾಗಿರಲಿ, ಮೂಲಸೌಕರ್ಯ ಯೋಜನೆಯಾಗಿರಲಿ ಅಥವಾ ಇನ್ಯಾವುದೇ ಯೋಜನೆಯಾಗಿರಲಿ, ಎಲ್ಲವೂ ಪರಿಸರ ನಿಯಮಗಳನ್ನು ಪಾಲಿಸುತ್ತಿವೆ ಎಂಬುದನ್ನು ನ್ಯಾಯಾಲಯ ಖಚಿತಪಡಿಸಿಕೊಳ್ಳಬೇಕು. ಇದರಿಂದ ನ್ಯಾಯಾಲಯದ ಮೇಲಿನ ನಾಗರಿಕರ ವಿಶ್ವಾಸವೂ ಉಳಿಯುತ್ತದೆ ಎಂದು ಅವರು ಹೇಳಿದ್ದಾರೆ.
ಪರಿಸರ ಮತ್ತು ಅಭಿವೃದ್ಧಿಯನ್ನು ಪರಸ್ಪರ ವಿರುದ್ಧವಾಗಿ ನಿಲ್ಲಿಸುವ ‘ಸುಳ್ಳು ನಿರೂಪಣೆ’ ಸೃಷ್ಟಿಯಾಗುತ್ತಿದೆ. ವಾಸ್ತವದಲ್ಲಿ ಎರಡೂ ಸುಸ್ಥಿರ ಅಭಿವೃದ್ಧಿಯ ಸಂವಿಧಾನಾತ್ಮಕ ಪರಿಕಲ್ಪನೆಯ ಭಾಗಗಳಾಗಿವೆ ಎಂದು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ತಮ್ಮ ಲೇಖನದಲ್ಲಿ ಸ್ಪಷ್ಟಪಡಿಸಿದ್ದಾರೆ.




