ಮಣಿಪುರವನ್ನು ಜನಾಂಗೀಯ ಘರ್ಷಣೆಯ ದಳ್ಳುರಿಗೆ ತಳ್ಳಿ ಕೈಚೆಲ್ಲಿದೆ ಮೋ-ಶಾ ಸರ್ಕಾರ!

Date:

ಮ್ಯಾನ್ಮಾರ್‌ನೊಂದಿಗೆ ಸುಮಾರು 400 ಕಿಲೋಮೀಟರ್ ಗಡಿ ಹಂಚಿಕೊಳ್ಳುವ ಈಶಾನ್ಯ ಭಾರತದ ಗಡಿ ರಾಜ್ಯ ಮಣಿಪುರದಲ್ಲಿ ಶತಮಾನಗಳಿಂದ ಬೆಳೆದು ಬಂದಿದ್ದ ಸೌಹಾರ್ದತೆಯ ಬೇರುಗಳನ್ನು ಸಂಪೂರ್ಣವಾಗಿ ಕೊಳೆತು ಹೋಗಲು ಕೇಂದ್ರ ಸರ್ಕಾರ ಬಿಟ್ಟಂತಿದೆ. 2023ರಿಂದ ನಡೆಯುತ್ತಿರುವ ಈ ಭೀಕರ ಜನಾಂಗೀಯ ಹಿಂಸಾಚಾರ, ಒಂದಾನೊಂದು ಕಾಲದಲ್ಲಿ ಕಣಿವೆ ಮತ್ತು ಬೆಟ್ಟ ಪ್ರದೇಶಗಳ ನಡುವೆ ಸಾಗುತ್ತಿದ್ದ ಸೂಕ್ಷ್ಮ ಸಾಮಾಜಿಕ ನೆಮ್ಮದಿಯ ನೆಯ್ಗೆಯನ್ನು ಸುಟ್ಟು ಭಸ್ಮ ಮಾಡಿದೆ. ಕೊನೆಯಿಲ್ಲದ ಈ ಕರಾಳ ಅಧ್ಯಾಯವು ಭಾರತೀಯ ಒಕ್ಕೂಟ ವ್ಯವಸ್ಥೆಯ ಅತ್ಯಂತ ಆತಂಕಕಾರಿ ವಿದ್ಯಮಾನವಾಗಿ ಹೊರಹೊಮ್ಮಿದೆ. ಆದರೆ, ಈ ಒಕ್ಕೂಟದ ರಕ್ಷಣೆಯ ಹೊಣೆ ಹೊತ್ತ ಕೇಂದ್ರದ ಮೋದಿ-ಶಾ ಆಡಳಿತ ವ್ಯವಸ್ಥೆಯು ರಾಜ್ಯವನ್ನು ಉರಿಯುವ ದಳ್ಳುರಿಗೆ ತಳ್ಳಿ, ಸಂಪೂರ್ಣವಾಗಿ ಕೈಚೆಲ್ಲಿ ಕುಳಿತಿದೆ.

- Advertisement -

ಮಾನವ ಕ್ರೌರ್ಯದ ಪರಾಕಾಷ್ಠೆಗೆ ಹಿಡಿದ ಕೈಗನ್ನಡಿಯಂತೆ, ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ ಆ ದೃಶ್ಯಗಳು ಜಗತ್ತಿನ ಮನಸ್ಸಾಕ್ಷಿಯನ್ನೇ ಬೆಚ್ಚಿಬೀಳಿಸಿದ್ದವು. ಆದರೆ, ಇಷ್ಟೆಲ್ಲಾ ರಕ್ತಪಾತ, ಆಕ್ರಂದನ ಮುಗಿಲು ಮುಟ್ಟಿದ್ದರೂ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಇದುವರೆಗೂ ಮಣಿಪುರಕ್ಕೆ ಭೇಟಿ ನೀಡದಿರುವುದು ದಿಗ್ಭ್ರಮೆ ಮೂಡಿಸುತ್ತದೆ. ಅವರ ಈ ಮೌನ ಮತ್ತು ನಿರ್ಲಕ್ಷ್ಯ, ಕೇಂದ್ರ ಸರ್ಕಾರದ ಆದ್ಯತೆಗಳು ಎತ್ತತ್ತ ಸಾಗುತ್ತಿವೆ ಎಂಬುದನ್ನು ತೋರಿಸುವುದಲ್ಲದೆ, ನಮ್ಮ ಪ್ರಜಾಪ್ರಭುತ್ವದ ಆಳದ ಬಿರುಕುಗಳನ್ನು ತೆರೆದಿಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕ ಮಧ್ಯಂತರ ಚುನಾವಣೆ: ಡೊನಾಲ್ಡ್ ಟ್ರಂಪ್ ಕುರ್ಚಿಗಿಲ್ಲ ಕುತ್ತು;...

ಅಮೆರಿಕದ ಕಾಂಗ್ರೆಸ್‌ಗೆ ನ. 3ರಂದು ನಡೆಯಲಿರುವ 'ಮಧ್ಯಂತರ ಚುನಾವಣೆ' ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಬಹುದೊಡ್ಡ ಅಗ್ನಿಪರೀಕ್ಷೆ. ಈ ಸಮರದಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಬಹುಮತ ಕಳೆದುಕೊಂಡರೂ ಅವರ ಅಧ್ಯಕ್ಷ ಸ್ಥಾನಕ್ಕೇನೂ ಕುತ್ತಿಲ್ಲ;...

ಗೆಲ್ಲಬಹುದಾಗಿದ್ದ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಲ್ಟಿ ಹೊಡೆದದ್ದು...

ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆದ ನಾಲ್ಕು ಎಮ್ಮೆಲ್ಸಿ ಸ್ಥಾನಗಳ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಒಂದೇ ಒಂದು ಸೀಟನ್ನೂ ಪಡೆಯಲಾಗದೆ ಮುಗ್ಗರಿಸಿರುವುದು ರಾಜಕೀಯ ಪಡಸಾಲೆಯಲ್ಲಿ ನಾನಾ ನಮೂನೆಯ ವ್ಯಾಖ್ಯಾನ-ವಿಶ್ಲೇಷಣೆ ಹುಟ್ಟುಹಾಕಿದೆ....

ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ

ಹಳ್ಳಿಗಳ ಮಣ್ಣಿನ ಸೊಗಡು, ಮಹಿಳೆಯರ ಬದುಕಿನ ಅನುಭವ, ಕುಟುಂಬದ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಸೋಬಾನೆ ಪದಗಳ ಗಾಯನಕ್ಕೆ ದಶಕಗಳಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಚಾಮರಾಜನಗರದ ಹಿರಿಯ ಜಾನಪದ...

ಯಾವುದೇ ಜವಾಬ್ದಾರಿಯುತ ಆಡಳಿತವಾಗಿದ್ದರೆ ಇದನ್ನು ‘ರಾಷ್ಟ್ರೀಯ ತುರ್ತು ಪರಿಸ್ಥಿತಿ’ ಎಂದು ಪರಿಗಣಿಸಿ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿತ್ತು. ಆದರೆ, ಮಣಿಪುರವನ್ನು ತನ್ನ ಪಾಡಿಗೆ ತಾನು ನರಳಲು ಬಿಡಲಾಯಿತು. ಕಣಿವೆ ಪ್ರದೇಶದ ಬಹುಸಂಖ್ಯಾತ ಮೈತೈ ಮತ್ತು ಬೆಟ್ಟ ಪ್ರದೇಶಗಳಲ್ಲಿ ವಾಸಿಸುವ ಕುಕಿ-ಝೋ ಹಾಗೂ ನಾಗಾ ಸಮುದಾಯಗಳ ನಡುವಿನ ಭೂಮಿ ಹಾಗೂ ಸಾಮಾಜಿಕ ಭದ್ರತೆಯ ಅಸಮಾಧಾನ ಹಳೆಯದೇ. 2023ರ ಏಪ್ರಿಲ್‌ನಲ್ಲಿ ಮೈತೈ ಸಮುದಾಯಕ್ಕೂ ಪರಿಶಿಷ್ಟ ಪಂಗಡ (ST) ಕಾಯ್ದೆಯಡಿ ಮೀಸಲಾತಿ ನೀಡುವ ಪ್ರಸ್ತಾವನೆ ಬಂದಾಗ ಈ ಅಸಮಾಧಾನವು ಹಿಂಸಾತ್ಮಕ ಕಿಚ್ಚಾಗಿ ಮಾರ್ಪಟ್ಟಿತು.

ಈ ಸೂಕ್ಷ್ಮ ಸನ್ನಿವೇಶವನ್ನು ನಿಭಾಯಿಸಬೇಕಿದ್ದ ಅಂದಿನ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವು ಪರಿಸ್ಥಿತಿಯನ್ನು ಸುಧಾರಿಸುವ ಬದಲು, ತಮ್ಮದೇ ಮೇಜಾರಿಟೇರಿಯನ್ ರಾಜಕೀಯ ಲಾಭಕ್ಕಾಗಿ ಉರಿಯುವ ಬೆಂಕಿಗೆ ತುಪ್ಪ ಸುರಿಯಿತು. ಕಣಿವೆ ಮೂಲದ ಮೈತೈ ಸಂಘಟನೆಗಳಿಗೆ ಬಹಿರಂಗ ಬೆಂಬಲ ನೀಡುತ್ತಾ, ಬೆಟ್ಟದ ನಿವಾಸಿಗಳನ್ನು “ಅಕ್ರಮ ನುಸುಳುಕೋರರು” ಹಾಗೂ “ನಾರ್ಕೋ-ಭಯೋತ್ಪಾದಕರು” ಎಂದು ಬಿಂಬಿಸಿ ಧ್ರುವೀಕರಣದ ರಾಜಕಾರಣ ನಡೆಸಲಾಯಿತು.

ಇನ್ನೊಂದೆಡೆ, ಅರಣ್ಯ ಜಾಗಗಳಿಂದ ಬಲವಂತವಾಗಿ ಒಕ್ಕಲೆಬ್ಬಿಸಲ್ಪಟ್ಟ ಕುಕಿಗಳ ಆಕ್ರೋಶವು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತು. ಈ ಸಂಘರ್ಷಗಳು ಬ್ರಿಟಿಷರ ಕಾಲದ ನೀತಿಗಳು ಮತ್ತು ಸ್ವಾತಂತ್ರ್ಯೋತ್ತರ ಆಡಳಿತದ ವೈಫಲ್ಯಗಳಿಂದ ಬೆಳೆದು ಬಂದಿದ್ದರೂ, ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಇವು ಮತ್ತಷ್ಟು ವಿಷಪೂರಿತಗೊಂಡವು. ಹಿಂಸಾಚಾರದಲ್ಲಿ 300ಕ್ಕೂ ಹೆಚ್ಚು ಅಮಾಯಕ ಜೀವಗಳು ಬಲಿಯಾಗಿ, 60,000ಕ್ಕೂ ಹೆಚ್ಚು ಜನರು ಸ್ವಂತ ಮನೆಯನ್ನು ಕಳೆದುಕೊಂಡು ಬೀದಿಗೆ ಬಿದ್ದರು. ಊರುಗಳಿಗೆ ಬೆಂಕಿ ಬಿದ್ದಿದೆ, ವ್ಯಾಪಾರಗಳನ್ನು ಲೂಟಿ ಮಾಡಲಾಗಿದೆ, ಪ್ರಾರ್ಥನಾ ಮಂದಿರಗಳನ್ನು ಧ್ವಂಸಗೊಳಿಸಲಾಗಿದೆ. ಅದರಲ್ಲೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳು ಮನುಷ್ಯತ್ವವೇ ತಲೆತಗ್ಗಿಸುವಂತೆ ಮಾಡಿವೆ.

ಹಿಂಸೆಯ ಬೆಂಕಿ ಹರಡುತ್ತಿದ್ದರೂ ಪ್ರಧಾನಿ ಮೋದಿ ಅವರ ಮೌನ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನಿಷ್ಕ್ರಿಯತೆ ಆಡಳಿತಾತ್ಮಕ ವೈಫಲ್ಯಕ್ಕೆ ಅತಿದೊಡ್ಡ ನಿದರ್ಶನ. ಇಡೀ ರಾಜ್ಯವೇ ಹೊತ್ತಿ ಉರಿಯುತ್ತಿದ್ದಾಗಲೂ ಪ್ರಧಾನಿ ಮೋದಿ ಒಮ್ಮೆಯೂ ಮಣಿಪುರಕ್ಕೆ ಭೇಟಿ ನೀಡಲಿಲ್ಲ. ಗೃಹ ಸಚಿವ ಅಮಿತ್ ಶಾ ಅವರು 2023ರಲ್ಲಿ ಕೈಗೊಂಡ ಅಲ್ಪಾವಧಿಯ ಭೇಟಿಯೂ ಸಹಜ ಸ್ಥಿತಿಯನ್ನು ತರಲು ನೆರವಾಗಲಿಲ್ಲ. ಅವರು ಇದನ್ನು ಕೇವಲ “ಜನಾಂಗೀಯ ಘರ್ಷಣೆ” ಎಂದು ಹಗುರವಾಗಿ ಪರಿಗಣಿಸಿ, ಸಿಎಂ ಬಿರೇನ್ ಸಿಂಗ್‌ರನ್ನು ಬಹುಕಾಲ ಸಮರ್ಥಿಸಿಕೊಂಡು ಬಂದದ್ದು ಪರಿಸ್ಥಿತಿ ಕೈಮೀರಲು ಪ್ರಮುಖ ಕಾರಣವಾಯಿತು. ಶಾಂತಿ ಸ್ಥಾಪನೆಗಿಂತ ರಾಜಕೀಯ ಲೆಕ್ಕಾಚಾರವೇ ಕೇಂದ್ರಕ್ಕೆ ಮುಖ್ಯವಾಯಿತೇ ಎಂಬ ಪ್ರಶ್ನೆ ಮೂಡುತ್ತದೆ.

ಅಂತಿಮವಾಗಿ, 2024ರ ಲೋಕಸಭಾ ಚುನಾವಣೆಯಲ್ಲಿ ಮಣಿಪುರದ ಪ್ರಜೆಗಳು ಬಿಜೆಪಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ಎರಡೂ ಕ್ಷೇತ್ರಗಳಲ್ಲಿ ವಿರೋಧ ಪಕ್ಷವನ್ನು ಗೆಲ್ಲಿಸುವ ಮೂಲಕ ತಮ್ಮ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ತರುವಾಯ 2025ರ ಫೆಬ್ರವರಿಯಲ್ಲಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಬೇಕಾಯಿತು ಹಾಗೂ ರಾಜ್ಯವನ್ನು ರಾಷ್ಟ್ರಪತಿ ಆಡಳಿತಕ್ಕೆ ಒಳಪಡಿಸಲಾಯಿತು.

ಆದರೆ, ಈ ರಾಷ್ಟ್ರಪತಿ ಆಳ್ವಿಕೆಯು ನಿಜವಾಗಿಯೂ ಶಾಂತಿ ತರುವ ಪ್ರಾಮಾಣಿಕ ಪ್ರಯತ್ನವೋ ಅಥವಾ ಸರ್ಕಾರದ ತಲೆದಂಡ ತಪ್ಪಿಸಿಕೊಳ್ಳುವ ರಾಜಕೀಯ ತಂತ್ರವೋ ಎಂಬ ಅನುಮಾನ ಪರಿಹಾರವಾಗಲಿಲ್ಲ. ಒಂದು ವರ್ಷದ ರಾಷ್ಟ್ರಪತಿ ಆಡಳಿತದ ನಂತರ, ಫೆಬ್ರವರಿ 2026ರಲ್ಲಿ ವೈ. ಖೇಮ್‌ಚಂದ್ ಸಿಂಗ್ ನೇತೃತ್ವದಲ್ಲಿ ನೂತನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೂ ಹಿಂಸಾಚಾರಕ್ಕೆ ತಡೆಬೀಳಲಿಲ್ಲ. ಏಪ್ರಿಲ್ 2026ರಲ್ಲಿ ವಿಷ್ಣುಪುರದ ಟ್ರೋಂಗ್ಲಾಒಬಿ ಪ್ರದೇಶದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಇಬ್ಬರು ಮುಗ್ಧ ಮಕ್ಕಳು ಬಲಿಯಾದ ಘಟನೆ ಶಾಂತಿಯ ಭರವಸೆಯನ್ನು ಧೂಳೀಪಟ ಮಾಡಿತು.

ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಂಡು, ಮೈತೈ-ಕುಕಿ ಸಂಘರ್ಷದ ಜೊತೆಗೆ 2026ರಲ್ಲಿ ನಾಗಾ ಮತ್ತು ಕುಕಿ-ಝೋ ಸಮುದಾಯಗಳ ನಡುವೆಯೂ ಸಶಸ್ತ್ರ ಘರ್ಷಣೆಗಳು ಆರಂಭವಾದವು. ಮೇ ತಿಂಗಳಲ್ಲಿ ಮೂವರು ಕುಕಿ ಪಾದ್ರಿಗಳ ಹತ್ಯೆಯಾದ ಬಳಿಕ ಸೇಡು-ಪ್ರತಿಸೇಡಿನ ಅಪಹರಣಗಳು ಹಾಗೂ ಹತ್ಯೆಗಳು ಸರಣಿಯಾಗಿ ನಡೆದವು. ಇತ್ತೀಚೆಗಷ್ಟೇ ನೊನೆ ಮತ್ತು ಕಂಪ್ಲಿ ಗಡಿ ಭಾಗದಲ್ಲಿ ಕುಕಿ ಸಮುದಾಯದ ಐವರು ಯುವಕರ ಸಶಸ್ತ್ರ ಹತ್ಯೆಯಾಗಿದ್ದು, ಇಡೀ ರಾಜ್ಯದಲ್ಲಿ ಬೃಹತ್ ಪ್ರತಿಭಟನೆಗಳು, ರಸ್ತೆ ತಡೆ ಹಾಗೂ ಆಕ್ರೋಶದ ಕಿಚ್ಚು ಮತ್ತೆ ಉದ್ಭವಿಸಿದೆ.

ಇನ್ನೊಂದೆಡೆ, ಶಸ್ತ್ರಸಜ್ಜಿತ ಗುಂಪುಗಳ ಅಟ್ಟಹಾಸದಿಂದಾಗಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿದೆ. ಸರ್ಕಾರಿ ಶಸ್ತ್ರಾಗಾರಗಳಿಂದ ಲೂಟಿಯಾದ ಬಂದೂಕುಗಳು ದಾಳಿಗೆ ಬಳಕೆಯಾಗುತ್ತಿದ್ದು, ಪೊಲೀಸ್ ಪಡೆಗಳು ಪಕ್ಷಪಾತ ಮಾಡುತ್ತಿವೆ ಎಂಬ ಗಂಭೀರ ಆರೋಪಗಳಿವೆ. ಸೈನ್ಯವನ್ನು ನಿಯೋಜಿಸಲಾಗಿದ್ದರೂ, ಅವರಿಗೆ ಸೂಕ್ತ ರಾಜಕೀಯ ನಿರ್ದೇಶನ ಮತ್ತು ಅಧಿಕಾರವಿಲ್ಲದೆ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.

ರಾಜಧಾನಿ ಇಂಪಾಲ್‌ನಲ್ಲಿ ಸಶಸ್ತ್ರ ಕುಕಿ ಗುಂಪುಗಳೊಂದಿಗಿನ ಕದನ ವಿರಾಮ ಒಪ್ಪಂದವನ್ನು ತಕ್ಷಣ ರದ್ದುಗೊಳಿಸುವಂತೆ ಒತ್ತಾಯಿಸಿ ಲಕ್ಷಾಂತರ ಪ್ರಜೆಗಳು ಬೀದಿಗಿಳಿದಿದ್ದಾರೆ. ಕುಕಿ ಸಮುದಾಯವು ತಮಗಾಗಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಕ್ಕೆ  ಒತ್ತಾಯಿಸುತ್ತಿದ್ದರೆ, ಮೈತೈ ಮತ್ತು ನಾಗಾ ಸಮುದಾಯಗಳು ರಾಜ್ಯದ ವಿಭಜನೆಯನ್ನು ವಿರೋಧಿಸುತ್ತಿವೆ.

ಇದರ ಜೊತೆಗೆ, ಮ್ಯಾನ್ಮಾರ್‌ನ “ಗೋಲ್ಡನ್ ಟ್ರಯಾಂಗಲ್” ಗಡಿಗೆ ಹತ್ತಿರವಿರುವ ಮಣಿಪುರದಲ್ಲಿ ಬ್ಲ್ಯಾಕ್‌ ಮಾರ್ಕೆಟ್‌, ಮಾದಕ ದ್ರವ್ಯ ಸಾಗಣೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಸರಬರಾಜು ಜಾಲಗಳು ಈ ಅರಾಜಕತೆಯ ವಾತಾವರಣದಿಂದಲೇ ಕೊಬ್ಬುತ್ತಿವೆ. ಈ ಅಕ್ರಮ ಆರ್ಥಿಕತೆಯಿಂದ ಲಾಭ ಪಡೆಯುತ್ತಿರುವ ಸಶಸ್ತ್ರ ಶಕ್ತಿಗಳನ್ನು ಹತ್ತಿಕ್ಕಲು ಕೇಂದ್ರದ ಭದ್ರತಾ ಪಡೆಗಳಿಗೆ ಸ್ಪಷ್ಟ ರಾಜಕೀಯ ನಿರ್ದೇಶನ ಸಿಗದಿರುವುದು ಆಡಳಿತದ ಹಿನ್ನಡೆಗೆ ಸಾಕ್ಷಿ. ಪ್ರಸ್ತುತ ಇಡೀ ರಾಜ್ಯವು 250ಕ್ಕೂ ಹೆಚ್ಚು ಕಂಪನಿಗಳ ಭದ್ರತಾ ಪಡೆಗಳ ‘ಬಫರ್ ಝೋನ್’ ಮೂಲಕ ಇಬ್ಬಾಗವಾಗಿದ್ದು, ಕೃಷಿ, ವ್ಯಾಪಾರ ಮತ್ತು ಶಿಕ್ಷಣ ವ್ಯವಸ್ಥೆಗಳು ಸಂಪೂರ್ಣವಾಗಿ ಹಳಿ ತಪ್ಪಿವೆ.

ವಾಸ್ತವದಲ್ಲಿ, ಮಣಿಪುರದ ದುರಂತ ಕೇವಲ ಒಂದು ರಾಜ್ಯದ ಸಮಸ್ಯೆಯಲ್ಲ. ಅಲ್ಪಸಂಖ್ಯಾತರನ್ನು ಮೂಲೆಗುಂಪು ಮಾಡಿ ಅಧಿಕಾರ ಹಿಡಿಯುವ ಅಪಾಯಕಾರಿ ರಾಜಕೀಯ ಧೋರಣೆಗೆ ಇದೊಂದು ಜಾಗತಿಕ ಉದಾಹರಣೆಯಾಗಿದೆ. ದೆಹಲಿಯಲ್ಲಿ ಕುಳಿತಿರುವ ಆಡಳಿತಗಾರರು ಈ ಸಮಸ್ಯೆಯನ್ನು ದೀರ್ಘಕಾಲೀನವಾಗಿ ಬರಿ ‘ನಿರ್ವಹಿಸಬಹುದು’ ಎಂಬ ಭ್ರಮೆಯಲ್ಲಿದ್ದಾರೆ. ಆದರೆ, ಕೇವಲ ಭದ್ರತಾ ಪಡೆಗಳನ್ನು ನಿಯೋಜಿಸಿ ಮೇಲ್ಮೈಗೆ ಮಾತ್ರ ಮುಲಾಮು ಹಚ್ಚುವ ತಾತ್ಕಾಲಿಕ ಕೆಲಸ ಎಂದಿಗೂ ಶಾಶ್ವತ ಪರಿಹಾರವಾಗುವುದಿಲ್ಲ. ಕೇವಲ ಬಂದೂಕಿನ ಬಲದಿಂದ ಶಾಂತಿ ತರಲು ಸಾಧ್ಯವಿಲ್ಲ, ಅದಕ್ಕೆ ರಾಜಕೀಯ ಪ್ರಾಮಾಣಿಕತೆ ಬೇಕು.

ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದರೆ ತಕ್ಷಣವೇ ಕೆಲ ನಿರ್ಣಾಯಕ ಕ್ರಮಗಳು ಜಾರಿಯಾಗಬೇಕು. 

ಬೆಟ್ಟ ಮತ್ತು ಕಣಿವೆ ಪ್ರದೇಶಗಳ ನಡುವಿನ ರಸ್ತೆ ನಿರ್ಬಂಧಗಳನ್ನು ಹಾಗೂ ಆರ್ಥಿಕ ದಿಗ್ಬಂಧನಗಳನ್ನು ತಕ್ಷಣ ತೆರವುಗೊಳಿಸಿ ಸಂಚಾರ ಹಾಗೂ ಅಗತ್ಯ ಸಾಮಗ್ರಿಗಳ ಪೂರೈಕೆಗೆ ಅನುವು ಮಾಡಿಕೊಡಬೇಕು.

ಕೇವಲ ಕಾಗದದ ಮೇಲಿನ ಆಡಳಿತ ಬದಲಾವಣೆಯಲ್ಲದೆ, ಪ್ರಧಾನಿ ಮತ್ತು ಗೃಹ ಸಚಿವರ ನೇರ ಮೇಲ್ವಿಚಾರಣೆಯಲ್ಲಿ ಮೈತೈ, ಕುಕಿ ಮತ್ತು ನಾಗಾ ಸಮುದಾಯಗಳ ಪ್ರಮುಖ ಭಾಗೀದಾರರೊಂದಿಗೆ ಮುಕ್ತ ಹಾಗೂ ನಿಷ್ಪಕ್ಷಪಾತ ರಾಜಕೀಯ ಸಂಭಾಷಣೆ ಆರಂಭಿಸಬೇಕು.

ಗಡಿ ಭಾಗದ ಮಾದಕ ದ್ರವ್ಯ ದಂಧೆ, ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಮತ್ತು ಗಡಿ ನುಸುಳುವಿಕೆ ಜಾಲವನ್ನು ಕಟ್ಟುನಿಟ್ಟಾಗಿ ಹತ್ತಿಕ್ಕಬೇಕು. ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ಹಾಗೂ ಸಂತ್ರಸ್ತರಿಗೆ ನ್ಯಾಯ ಖಚಿತಪಡಿಸಿ, ಆಡಳಿತಾತ್ಮಕ ವೈಫಲ್ಯಕ್ಕೆ ಕಾರಣರಾದವರ ಹೊಣೆಗಾರಿಕೆಯನ್ನು ನಿರ್ಧರಿಸಬೇಕು.

ಒಂದೇ ರೀತಿಯ ವಿಫಲ ತಂತ್ರಗಳನ್ನು ಮರಳಿ ಮರಳಿ ಪ್ರಯೋಗಿಸುತ್ತಾ ವಿಭಿನ್ನ ಫಲಿತಾಂಶವನ್ನು ನಿರೀಕ್ಷಿಸುವುದು ರಾಜಕೀಯ ಮೂರ್ಖತನ. ‘ಭಾರತದ ರತ್ನ’ ಎಂದು ಕರೆಸಿಕೊಳ್ಳುತ್ತಿದ್ದ ಮಣಿಪುರ ಇಂದು ರಾಜಕೀಯ ನಿರ್ಲಕ್ಷ್ಯ, ಜನಾಂಗೀಯ ಕಲಹ ಮತ್ತು ಸರ್ಕಾರದ ವೈಫಲ್ಯಕ್ಕೆ ಸಿಲುಕಿ ರಕ್ತ ಹರಿಸುತ್ತಿದೆ. ಮಣಿಪುರದ ಸಮಾಜಕ್ಕೆ ಮತ್ತು ಸಾಮಾನ್ಯ ಜನರಿಗೆ ಬೇಕಿರುವುದು ಕೇಂದ್ರದ ಬಾಯಿಮಾತಿನ ಆಶ್ವಾಸನೆಗಳಲ್ಲ, ಬದಲಿಗೆ ಕಳೆದುಹೋದ ಭರವಸೆ, ಭದ್ರತೆ ಮತ್ತು ಶಾಂತಿಯ ಮರುಸ್ಥಾಪನೆ. ದ್ವೇಷದ ರಾಜಕೀಯದ ಆಚೆಗೆ ನಿಂತು ಮಣಿಪುರವನ್ನು ಹೀಗೆಯೇ ನಿರ್ಲಕ್ಷಿಸುತ್ತಾ ಹೋದರೆ, ಅದರ ಭೀಕರ ಪರಿಣಾಮ ಇಡೀ ಈಶಾನ್ಯ ಭಾರತದ ಸ್ಥಿರತೆಯನ್ನೇ ದಹಿಸಿಹಾಕಲಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಮಮಂದಿರ ಲೂಟಿ ಪ್ರಕರಣ: ಸಿಬಿಐ ತನಿಖೆ ಕೋರಿದ್ದ ಅರ್ಜಿಗಳ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಾಣಿಕೆ ಕಳವು ಮತ್ತು ಹಣಕಾಸು...

ಬೀದರ್‌ | ಅರಣ್ಯ ಭವನ, ಟ್ರೀ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಬೀದರ್ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ತಲಾ ₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ...

ಸಿದ್ದರಾಮಯ್ಯ ನಕಲಿ ಸ್ಟಿಂಗ್ ಪ್ರಕರಣ: ಪವರ್ ಟಿವಿ ಕಚೇರಿ, ರಾಕೇಶ್ ಶೆಟ್ಟಿ ಮನೆ ಮೇಲೆ ಸಿಸಿಬಿ ದಾಳಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ, ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ನಡೆಸಲಾಗಿದೆ...