ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ನಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ‘ಇಂಡಿಯಾ’ ಮೈತ್ರಿಕೂಟದಿಂದ ನಿರ್ಗಮಿಸಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ. 2024ರ ಜನವರಿಯಲ್ಲಿ ನಿತೀಶ್ ಕುಮಾರ್ ಅವರು ಮೈತ್ರಿಕೂಟದಿಂದ ಹೊರಬಂದಿದ್ದು ಪೂರ್ವನಿಯೋಜಿತವಾಗಿತ್ತು ಎಂದು ಎಂದು ಬರೆದಿದ್ದಾರೆ. ಸೋನಿಯಾ ಗಾಂಧಿ ಅವರು ನಿತೀಶ್ ಕುರಿತು ಬರೆದಿರುವುದರ ವಿಚಾರವು ಕಾಂಗ್ರೆಸ್ ಮತ್ತು ಜನತಾದಳ (ಯುನೈಟೆಡ್) ನಡುವೆ ತೀವ್ರ ವಾಕ್ಸಮರನ್ನು ಸೃಷ್ಟಿಸಿದೆ.
ಮಂಗಳವಾರ ಬಿಡುಗಡೆಯಾದ ತಮ್ಮ ಆತ್ಮಕಥೆಯಲ್ಲಿ ಸೋನಿಯಾ ಗಾಂಧಿ ಅವರು ಲೋಕಸಭಾ ಚುನಾವಣೆಯ ಪೂರ್ವದಲ್ಲಿ ವಿಪಕ್ಷಗಳ ಒಕ್ಕೂಟ ಎದುರಿಸಿದ ಸವಾಲುಗಳನ್ನು ನೆನಪಿಸಿಕೊಂಡಿದ್ದಾರೆ.
2024ರ ಜನವರಿಯಲ್ಲಿ ವಿಪಕ್ಷಗಳ ಸಭೆಯೊಂದರಿಂದ ನಿತೀಶ್ ಕುಮಾರ್ “ಕ್ಷುಲ್ಲಕ ನೆಪ” ಹೇಳಿ ದಿಢೀರ್ ಹೊರನಡೆದರು ಎಂದು ಸೋನಿಯಾ ಬರೆದಿದ್ದಾರೆ. “ಅದೇನೋ ಸರಿ ಕಾಣಿಸಲಿಲ್ಲ, ಏನೋ ನಡೆಯುತ್ತಿದೆ ಎನಿಸಿತು. ನಿರೀಕ್ಷಿಸಿದಂತೆಯೇ ಅವರು ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಮರಳಿದ ಸುದ್ದಿ ಬಂತು. ಅದು ಸ್ಪಷ್ಟವಾಗಿ ಪೂರ್ವನಿಯೋಜಿತವಾಗಿತ್ತು” ಎಂದು ಅವರು ಉಲ್ಲೇಖಿಸಿದ್ದಾರೆ.
ನಿತೀಶ್ ಕುಮಾರ್ ಮೈತ್ರಿಕೂಟದಿಂದ ಹೊರಬರಲು ನಿರಂತರವಾಗಿ ಹೊಸ ದಾರಿಗಳನ್ನು ಹುಡುಕುತ್ತಿದ್ದರು ಮತ್ತು ಅವರು ಬಿಜೆಪಿಯ ಪ್ರಭಾವಕ್ಕೆ ಒಳಗಾಗಿದ್ದರು ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ನಿತೀಶ್ ಅವರ ನಿರ್ಗಮನ ಆರಂಭದಲ್ಲಿ ಒಕ್ಕೂಟಕ್ಕೆ ಹಿನ್ನಡೆಯಾದರೂ, ಆರಂಭಿಕ ಆಘಾತ ಕಡಿಮೆಯಾದ ಬಳಿಕ ಒಕ್ಕೂಟವು ಇನ್ನಷ್ಟು ಬಲಿಷ್ಠ ಸಂಕಲ್ಪದೊಂದಿಗೆ ಮುನ್ನಡೆಯಿತು ಎಂದು ಅವರು ವಿವರಿಸಿದ್ದಾರೆ.
ಇನ್ನು ಸೋನಿಯಾ ಗಾಂಧಿ ಅವರ ಈ ಬರವಣಿಗೆಗೆ ಜೆಡಿಯು ರಾಷ್ಟ್ರೀಯ ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಮತ್ತು ರಾಷ್ಟ್ರೀಯ ವಕ್ತಾರ ರಾಜೀವ್ ರಂಜನ್ ಪ್ರಸಾದ್ ಬುಧವಾರ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
“ಸೋನಿಯಾ ಗಾಂಧಿ ಅವರ ಪುಸ್ತಕದಲ್ಲಿ ನಿತೀಶ್ ಕುಮಾರ್ ಅವರನ್ನು ಉಲ್ಲೇಖಿಸಿರುವ ರೀತಿಯಿಂದ ಪಕ್ಷಕ್ಕೆ ತೀವ್ರ ನೋವಾಗಿದೆ. ಇಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮುನ್ನಡೆಸುತ್ತಿರುವ ಇಂಡಿಯಾ ಒಕ್ಕೂಟದ ನಿಜವಾದ ಶಿಲ್ಪಿ ಮತ್ತು ಪ್ರೇರಕ ಶಕ್ತಿ ನಿತೀಶ್ ಕುಮಾರ್” ಎಂದು ವಕ್ತಾರ ರಾಜೀವ್ ರಂಜನ್ ಪ್ರಸಾದ್ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಟ್ನಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್ ಕುಮಾರ್ ಝಾ, “ದೇಶಾದ್ಯಂತ ಸಂಚರಿಸಿ ವಿಪಕ್ಷ ನಾಯಕರನ್ನು ಒಗ್ಗೂಡಿಸಿ 2023ರ ಜೂನ್‌ನಲ್ಲಿ ಪಟ್ನಾದಲ್ಲಿ ಮೊದಲ ಸಭೆ ಆಯೋಜಿಸಿದ್ದೇ ನಿತೀಶ್ ಕುಮಾರ್. ಆರಂಭದಲ್ಲಿ ಬಹುತೇಕ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಅನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಹಿಂದೇಟು ಹಾಕಿದ್ದವು. ಆ ಪಕ್ಷಗಳ ಮನವೊಲಿಸಿ ಕಾಂಗ್ರೆಸ್ ಅನ್ನು ಜೊತೆಗೂಡಿಸಿದ್ದೇ ನಿತೀಶ್” ಎಂದು ಪ್ರತಿಪಾದಿಸಿದ್ದಾರೆ.
ಇಂಡಿಯಾ ಒಕ್ಕೂಟವು ದೇಶಕ್ಕೆ ಸಕಾರಾತ್ಮಕ ಪರ್ಯಾಯ ಕಾರ್ಯಸೂಚಿ ರೂಪಿಸುವ ಬದಲು ಕೇವಲ ನರೇಂದ್ರ ಮೋದಿ ಅವರನ್ನು ಟೀಕಿಸುವುದಕ್ಕಷ್ಟೇ ಸೀಮಿತವಾಯಿತು ಎಂಬುದು ಕ್ರಮೇಣ ಸ್ಪಷ್ಟವಾಯಿತು ಎಂದು ಝಾ ಹೇಳಿದ್ದಾರೆ. ಅಲ್ಲದೆ, ಹಿರಿಯ ನಾಯಕರ ವಿರುದ್ಧ ವೈಯಕ್ತಿಕ ಮತ್ತು ಘನತೆಯಿಲ್ಲದ ಟೀಕೆಗಳನ್ನು ಮಾಡುವ ಹೊಸ ಸಂಸ್ಕೃತಿ ಕಾಂಗ್ರೆಸ್‌ನಲ್ಲಿ ಬೆಳೆಯುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
#WATCH | Patna, Bihar: On Sonia Gandhi’s book, JD(U) MP Sanjay Kumar Jha says, “What I have particularly noticed in Sonia Gandhi’s book is the remark about Nitish Kumar. It reflects what appears to be a new culture within the Congress, where senior leaders make personal and… pic.twitter.com/EiF572fpf8— ANI (@ANI) November 11, 2026
ನಿತೀಶ್ ಕುಮಾರ್ ನಿರ್ಗಮನದ ವಿಚಾರ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲೂ ಪ್ರತಿಧ್ವನಿಸಿತ್ತು. ಆ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಪಕ್ಷವು ನಿತೀಶ್ ಕುಮಾರ್ ಅವರನ್ನು ಒಕ್ಕೂಟ ಬಿಟ್ಟು ಹೋಗಲು ಬಿಡಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸೋನಿಯಾ ಗಾಂಧಿ, “ದೇವರ ದಯೆಯಿಂದ ನಿತೀಶ್ ಕುಮಾರ್ ಸರಿಯಾದ ಸಮಯಕ್ಕೆ ಹೊರಹೋದರು. ಅವರು ಯಾವಾಗಲೂ ಅಲ್ಲಿಗೇ (ಎನ್‌ಡಿಎಗೆ) ಹೋಗಬೇಕಿದ್ದವರು” ಎಂದು ಹೇಳಿದ್ದಾಗಿ ಸಭೆಯಲ್ಲಿದ್ದ ಮೂಲಗಳು ತಿಳಿಸಿವೆ. ದಿಗ್ವಿಜಯ್ ಸಿಂಗ್ ಅವರಿಗೆ ನಿತೀಶ್ ಕುಮಾರ್ ಅವರ ರಾಜಕೀಯ ಮೌಲ್ಯದ ಅರಿವಾಗಿರಬೇಕು ಎಂದು ಸಂಜಯ್ ಕುಮಾರ್ ಝಾ ಇದೇ ವೇಳೆ ಉಲ್ಲೇಖಿಸಿದ್ದಾರೆ.




