ಸ್ವತಂತ್ರವಾಗಿ ಅಧಿಕಾರ ಹಿಡಿಯಬೇಕಾದರೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ನೆಲೆಕಂಡುಕೊಳ್ಳಲೇಬೇಕು. ಅದಕ್ಕಾಗಿ ಮಂಡ್ಯವನ್ನು ಕೋಮು ಪ್ರಯೋಗಶಾಲೆಯನ್ನಾಗಿ ಆಯ್ದುಕೊಂಡಿದ್ದಾರೆ. ಕುಮಾರಸ್ವಾಮಿಯವರು ಬಿಜೆಪಿ ಜೊತೆ ಹೋದ ಮೇಲೆ ತುಪ್ಪ ಜಾರಿ, ರೊಟ್ಟಿಗೆ ಬಿದ್ದಂತಾಗಿದೆ.
ಮಂಡ್ಯ ಜಿಲ್ಲೆಯು ಕಳೆದ ನಾಲ್ಕು ವರ್ಷಗಳಿಂದ ಕೋಮು ಪ್ರಯೋಗಶಾಲೆಯಾಗಿ ರೂಪುಗೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕರಾವಳಿ ಕರ್ನಾಟಕವನ್ನು ಹಾಳುಗೆಡವಲಾಯಿತು. ಈಗ ಮಂಡ್ಯವನ್ನು ‘ಕಮ್ಯುನಲ್ ಶಕ್ತಿಕೇಂದ್ರ’ವನ್ನಾಗಿ ರೂಪಿಸುವ ಪಿತೂರಿಗಳು ಎಗ್ಗಿಲ್ಲದೆ ನಡೆಯುತ್ತಿವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಂತಹಂತವಾಗಿ ಬೇರುಬಿಟ್ಟ ಹಿಂದುತ್ವ ರಾಜಕಾರಣವು ಬಿತ್ತಿರುವ ದ್ವೇಷ ಅಷ್ಟಿಷ್ಟಲ್ಲ. ಒಂದಿಷ್ಟು ಆರ್ಥಿಕವಾಗಿ ಚಲನಶೀಲತೆಯನ್ನು ಹೊಂದಿರುವ ‘ಬ್ಯಾರಿ’ (ಮುಸ್ಲಿಂ) ಸಮುದಾಯ ದೊಡ್ಡಮಟ್ಟದಲ್ಲಿ ಕರಾವಳಿಯಲ್ಲಿ ಇರುವುದರಿಂದ ಕಲ್ಪಿತ ಶತ್ರುಗಳನ್ನು ತೋರಿಸಲು ಮತೀಯವಾದಿ ರಾಜಕಾರಣಕ್ಕೆ ಅಷ್ಟು ಕಷ್ಟವಾಗಲಿಲ್ಲ. ಆದರೆ ಮಂಡ್ಯದಲ್ಲಿ ಮುಸ್ಲಿಂ ಬಾಹುಳ್ಯ ತೀರಾ ಕಡಿಮೆ. ಇಲ್ಲಿ ಮತೀಯವಾದಿ ಪ್ರಯೋಗಗಳು ಬಿರುಸಾಗುತ್ತಿರುವುದು ಹೇಗೆ ಮತ್ತು ಏಕೆ ಎಂಬುದನ್ನು ಗಮನಿಸಬೇಕಾಗುತ್ತದೆ.
ಭೂ ಸುಧಾರಣಾ ಕಾಯ್ದೆ ಯಶಸ್ವಿಯಾಗಿ ಜಾರಿಯಾದ ಮತ್ತು ಕಮ್ಯುನಿಸ್ಟ್ ಚಳವಳಿ ಬಲವಾಗಿದ್ದ ನೆಲ ಕರಾವಳಿ. ಆದರೆ ಭೂಮಿ ಕಳೆದುಕೊಂಡ ಬಲಾಢ್ಯ ಸಮುದಾಯಗಳು ತಮ್ಮ ರಾಜಕೀಯ ನೆಲೆಯನ್ನು ಕಂಡುಕೊಳ್ಳಲು ಜನಸಂಘದ ತೆಕ್ಕೆಗೆ ಬರಲಾರಂಭಿಸಿದವು. ನಿಧಾನಕ್ಕೆ ಕೋಮು ಪ್ರಯೋಗಶಾಲೆಯಾಗಿ ರೂಪುಗೊಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತಿ ಅಸಮಾನತೆಯ ಪ್ರಶ್ನೆಗಳು ಹಿಂದಕ್ಕೆ ತಳ್ಳಲ್ಪಟ್ಟು, ಹಿಂದೂ- ಮುಸ್ಲಿಂ ಧ್ರುವೀಕರಣದ ಯುಗ ಆರಂಭವಾಯಿತು. ಇದರ ಫಲವನ್ನು ಉಂಡಿದ್ದು ಜನಸಂಘದ ಇಂದಿನ ರೂಪವಾಗಿರುವ ಬಿಜೆಪಿ. ರಾತ್ರೋರಾತ್ರಿ ಸಂಘಪರಿವಾರ ಇಲ್ಲಿ ಬೇರುಬಿಡಲಿಲ್ಲ. ಅದಕ್ಕೊಂದು ನಿರ್ದಿಷ್ಟ ಕಾರ್ಯವಿಧಾನವಿತ್ತು. ಚಿಕ್ಕಮಟ್ಟದಲ್ಲಿ ಸೇರುತ್ತಿದ್ದ ಗುಂಪುಗಳನ್ನು ನಿರ್ಲಕ್ಷಿಸಿದ ಫಲವಾಗಿ, ಇಂದು ಕೊಲೆ, ಗಲಭೆ, ಹಿಂಸಾಚಾರ, ಕರ್ಫ್ಯೂ, ನಿಷೇಧಾಜ್ಞೆಗಳನ್ನು ಕಾಣುತ್ತಿದ್ದೇವೆ. ಇಂತಹ ಕಾರ್ಯವಿಧಾನವನ್ನು ಮಂಡ್ಯಕ್ಕೆ ವಿಸ್ತರಿಸಿರುವುದು ಸ್ಪಷ್ಟ.
ಮಂಡ್ಯವನ್ನೇ ‘ಟಾರ್ಗೆಟ್’ ಮಾಡಿರುವ ಉದ್ದೇಶವನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರವನ್ನು ಹಿಡಿಯಬೇಕಾದರೆ ಹಳೇ ಮೈಸೂರು ಭಾಗದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲೇಬೇಕಾಗುತ್ತದೆ. 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಜೊತೆಯಲ್ಲಿ ಸೇರಿ ಟ್ವೆಂಟಿ-ಟ್ವಿಂಟಿ ಸರ್ಕಾರವನ್ನು ಬಿಜೆಪಿ ರಚಿಸಿತು. ಆದರೆ ಬಿ.ಎಸ್.ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸಲಿಲ್ಲ. ಬಿಎಸ್‌ವೈಗೆ ಅನ್ಯಾಯವಾಗಿದೆ ಎಂಬ ಕೂಗು ದೊಡ್ಡದಾಯಿತು. 2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪರ ಜನ ಮತ ಚಲಾಯಿಸಿದರೂ, ಬಹುಮತ ಸಿಗಲಿಲ್ಲ. 110ರ ಗಡಿಯಲ್ಲಿ ಬಿಜೆಪಿ ಬಂದು ನಿಂತಿತು. ಆಗ ಆಪರೇಷನ್ ಕಮಲ ಎಂಬ ಕೆಟ್ಟ ರಾಜಕೀಯ ಸಂಸ್ಕೃತಿಗೆ ಅಡಿಪಾಯ ಹಾಕಿದ ಯಡಿಯೂರಪ್ಪ, ಅಧಿಕಾರ ಹಿಡಿದರು. 2013ರ ವೇಳೆಗೆ ಬಿಜೆಪಿ ನಾಯಕರ ಒಳಜಗಳ ಮುಗಿಲು ಮುಟ್ಟಿ, ಕೆಜೆಪಿ ಸ್ಥಾಪನೆಯಾಗಿತ್ತು. ಮೂವರು ಮುಖ್ಯಮಂತ್ರಿಗಳನ್ನು ಕಂಡ ರಾಜ್ಯವು ಭಾರೀ ಭ್ರಷ್ಟಾಚಾರದಿಂದ ರೋಸಿ ಹೋಗಿತ್ತು. ಅಹಿಂದ ರಾಜಕಾರಣವನ್ನು ಬಲಪಡಿಸಿದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ಗೆ ಜಯ ದೊರಕಿತು. ಐದು ವರ್ಷ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಆಡಳಿತರೂಢ ಸರ್ಕಾರವನ್ನು ಬದಲಿಸುವ ರಾಜ್ಯದ ಜನರ ಪ್ರವೃತ್ತಿ 2018ರಲ್ಲಿಯೂ ಮುಂದುವರಿದು ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಯಾವುದೇ ಪಕ್ಷಕ್ಕೆ ಬಹುಮತ ಸಿಗದಿದ್ದರೂ ಬಿಜೆಪಿ 104 ಕ್ಷೇತ್ರಗಳಲ್ಲಿ ಗೆದ್ದು ದೊಡ್ಡ ಪಕ್ಷವಾಗಿ ಹೊಮ್ಮಿತ್ತು. ಅಂದಿನ ರಾಜ್ಯಪಾಲ ವಜುಭಾಯಿ ವಾಲಾ ಅವರು ಯಡಿಯೂರಪ್ಪನವರನ್ನು ಕರೆದು ಪ್ರಮಾಣವಚನ ಬೋಧಿಸಿದರು. ಬಹುಮತ ಸಾಬೀತಿಗೆ 15 ದಿನಗಳ ಕಾಲಾವಕಾಶವನ್ನು ಗವರ್ನರ್ ಒದಗಿಸಿದ್ದರು. ಆದರೆ ಕಾಂಗ್ರೆಸ್- ಜೆಡಿಎಸ್ ನಾಯಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿ ಪ್ರಶ್ನಿಸಿದ ಕಾರಣ, ತಕ್ಷಣವೇ ಬಹುಮತ ದೃಢಪಡಿಸುವ ಸಂದಿಗ್ಧತೆ ಎದುರಾಯಿತು. ಭಾವುಕ ಭಾಷಣ ಮಾಡಿದ ಯಡಿಯೂರಪ್ಪನವರು, ಬಹುಮತ ಸಾಬೀತು ಮಾಡದೆ ಮೂರು ದಿನಗಳ ಆಳ್ವಿಕೆಯನ್ನು ಕೊನೆಗಾಣಿಸಿದರು. 37 ಕ್ಷೇತ್ರಗಳಲ್ಲಿ ಗೆದ್ದಿದ್ದ ಜೆಡಿಎಸ್‌ನೊಂದಿಗೆ, 80 ಕ್ಷೇತ್ರಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ರಚಿಸಿತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ ಈ ಸರ್ಕಾರವು ಸಾಂದರ್ಭಿಕ ಶಿಶುವಾಗಿತ್ತು. ಇದನ್ನೇ ಲಾಭ ಮಾಡಿಕೊಂಡ ಯಡಿಯೂರಪ್ಪನವರು ಮತ್ತೆ ದೊಡ್ಡ ಮಟ್ಟದ ಆಪರೇಷನ್ ಕಮಲ ನಡೆಸಿ ಅಧಿಕಾರ ಹಿಡಿದರು. ಬಿಜೆಪಿಯೊಳಗಿನ ಒಳರಾಜಕಾರಣವು ಬಿಎಸ್‌ವೈ ಅವರನ್ನು ಮತ್ತೆ ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಗದ್ದುಗೆಗೆ ಏರಿಸಿತ್ತು. ದಿನಕ್ಕೊಂದು ಕೋಮು ರಾಜಕಾರಣ ಮಾಡಿ ರಾಜ್ಯವನ್ನು ಅಸ್ಥಿರಗೊಳಿಸಿದ ಬಿಜೆಪಿಗೆ 2023ರ ಚುನಾವಣೆ ದೊಡ್ಡ ಆಘಾತ ನೀಡಿತ್ತು. 66 ಕ್ಷೇತ್ರಗಳಿಗೆ ಬಿಜೆಪಿ ಕುಸಿದರೆ, ಸ್ಥಿರವಾದ ಸೈದ್ಧಾಂತಿಕ ರಾಜಕೀಯ ಮಾಡದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಅಕ್ಷರಶಃ ಮಕಾಡೆ ಮಲಗಿತು. 19 ಕ್ಷೇತ್ರಗಳಲ್ಲಿ ಗೆಲ್ಲುವಷ್ಟರಲ್ಲಿ ಕುಮಾರಸ್ವಾಮಿ ಏದುಸಿರು ಬಿಡಬೇಕಾಯಿತು.

ಒಕ್ಕಲಿಗ ಪ್ರಾಬಲ್ಯದ ಪಕ್ಷವೆಂದೇ ಗುರುತಿಸಲಾದ ಜೆಡಿಎಸ್, ಒಕ್ಕಲಿಗರೇ ಬಹುಸಂಖ್ಯಾತರಾಗಿರುವ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದಿತು. ಕಾಂಗ್ರೆಸ್‌ನ ಬೆಂಬಲ ಪಡೆದಿದ್ದ ‘ಸರ್ವೋದಯ ಕರ್ನಾಟಕ’ ಪಕ್ಷವು ಮೇಲುಕೋಟೆ ಕ್ಷೇತ್ರದಲ್ಲಿ ಗೆದ್ದದ್ದು ಸೇರಿ ಒಟ್ಟು ಆರರಲ್ಲಿ ‘ಕೈ’ ಮೇಲುಗೈ ಸಾಧಿಸಿತ್ತು. 2018ರವರೆಗೂ ಒಂದಿಷ್ಟು ಜೆಡಿಎಸ್ ಜೊತೆ ಇದ್ದ ಮುಸ್ಲಿಂ ಮತಗಳು ಭಾರೀ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ಶಿಫ್ಟ್ ಆಗಿದ್ದು ಜಾತ್ಯತೀತ ಜನತಾ ದಳದ ಸೈದ್ಧಾಂತಿಕ ತಳಹದಿ ಸಂಪೂರ್ಣ ಕುಸಿದಿರುವ ಸೂಚನೆಯಾಗಿತ್ತು. ಪಕ್ಷವನ್ನು ಉಳಿಸಿಕೊಳ್ಳುವ ಅನಿವಾರ್ಯತೆಗೆ ಬಿದ್ದ ಕುಮಾರಸ್ವಾಮಿಯವರು ಬಿಜೆಪಿಯೊಂದಿಗೆ ಹೋಗಿದ್ದು ಕರ್ನಾಟಕ ರಾಜಕೀಯದ ಮತ್ತೊಂದು ಚಾರಿತ್ರಿಕ ಪಲ್ಲಟ.
ನಾವಿಲ್ಲಿ ಕನಿಷ್ಠ ಎರಡೂವರೆ ದಶಕಗಳ ರಾಜಕಾರಣದ ಏರುಪೇರುಗಳನ್ನು ಸೂಕ್ಷ್ಮವಾಗಿ ನೋಡಬೇಕಾಗುತ್ತದೆ. ಇಷ್ಟು ವರ್ಷಗಳಲ್ಲಿ ಅಧಿಕಾರದ ಹೊಸ್ತಿಲವರೆಗೆ ಬಂದರೂ ಸ್ವತಂತ್ರವಾಗಿ ಕುರ್ಚಿ ಹಿಡಿಯಲು ಬಿಜೆಪಿಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಭದ್ರ ನೆಲೆಯಾದ ಹಳೇ ಮೈಸೂರು ಭಾಗದಲ್ಲಿ, ಮುಖ್ಯವಾಗಿ ಮೈಸೂರು, ಚಾಮರಾಜನಗರ, ಮಂಡ್ಯ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಭಾಗದಲ್ಲಿ ಬಿಜೆಪಿ ಆಳವಾಗಿ ಬೇರು ಬಿಡಲೇಬೇಕು. ಇಂತಹ ಹೊತ್ತಿನಲ್ಲಿ ತುಪ್ಪ ಜಾರಿ, ರೊಟ್ಟಿಗೆ ಬಿದ್ದಂತೆ ಕುಮಾರಸ್ವಾಮಿಯವರು ಬಿಜೆಪಿಯ ಕಪಿಮುಷ್ಟಿಗೆ ಸಿಲುಕಿಕೊಂಡಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೂ, ಅಲ್ಲಿ ತನ್ನ ದೊಡ್ಡ ಮಟ್ಟದ ಕಾರ್ಯಕರ್ತರನ್ನು ಹೊಂದಿದೆ. ರಾಜ್ಯದಲ್ಲಿ ಅಹಿಂದ ಸರ್ಕಾರ ಅಧಿಕಾರದಲ್ಲಿದೆ ಎಂಬುದನ್ನು ಪ್ರಚೋದಿಸುವ ಮೂಲಕ, ಪ್ರಬಲ ಜಾತಿಯೇ ಅಧಿಕಾರ ಗದ್ದುಗೆಯಲ್ಲಿ ಇರಬೇಕು ಎಂಬುದನ್ನು ಯೋಜಿತವಾಗಿ ಪ್ರಚಾರ ಮಾಡುವ ಪಿತೂರಿಗಳ ಹಿಂದೆ ಜಾತಿವಾದವನ್ನು ಉದ್ದೀಪಿಸುವ ನಿರ್ದಿಷ್ಟ ಗುರಿಗಳಿವೆ. ಆದರೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿರುವ ಮಂಡ್ಯದಲ್ಲಿ ಕಲ್ಪಿತ ಶತ್ರುವನ್ನು ಸೃಷ್ಟಿಸುತ್ತಿರುವುದು ಏಕೆ? ಪ್ರಬಲ ಜಾತಿ ಮನಸ್ಥಿತಿಯನ್ನು ಬಡಿದೆಚ್ಚರಿಸುವುದೇ ಇಲ್ಲಿನ ಗುಟ್ಟಷ್ಟೇ. ಈ ಪ್ರಯತ್ನ ಅಷ್ಟು ಸುಲಭವಾಗಿ ಮೇಲುಗೈ ಸಾಧಿಸುವುದು ಕಷ್ಟ.
ಇದನ್ನೂ ಓದಿರಿ: ಮಂಡ್ಯದಲ್ಲಿ ಕೋಮು ರಾಜಕಾರಣ: ಭದ್ರಕೋಟೆಯನ್ನು ಬಿಜೆಪಿಗೊಪ್ಪಿಸುವುದೇ ಜೆಡಿಎಸ್?
ಮಂಡ್ಯ ಹೇಳಿಕೇಳಿ ಚಳವಳಿಗಳ ನೆಲ. ಫ್ಯೂಡಲ್ ಜಾತಿ ವ್ಯವಸ್ಥೆ ಬಲವಾಗಿದ್ದರೂ ಅಷ್ಟೇ ದೊಡ್ಡ ಮಟ್ಟದಲ್ಲಿ ದಲಿತ ಮತ್ತು ರೈತ ಚಳವಳಿಗಳು ಪ್ರೀತಿ, ಸೌಹಾರ್ದತೆ, ಮನುಷ್ಯ ಸಂಬಂಧಗಳನ್ನು ಗಟ್ಟಿಯಾಗಿಸುವ ಕೆಲಸವನ್ನು ನಿರಂತರ ಮಾಡುತ್ತಲೇ ಬಂದಿವೆ. ಕನ್ನಡ ಚಳವಳಿಗೂ ಮಂಡ್ಯ ಹೆಸರುವಾಸಿ. ಕುವೆಂಪು ಅವರ ವೈಚಾರಿಕ ಪ್ರಜ್ಞೆಯನ್ನು ಮುಂದುವರಿಸುತ್ತಿರುವ ಒಕ್ಕಲಿಗ ಪ್ರಜ್ಞಾವಂತರು ಮಂಡ್ಯದಲ್ಲಿದ್ದಾರೆ. ಮುಖ್ಯವಾಗಿ ಮುಸ್ಲಿಂ ಪಿತೂರಿ ಥಿಯರಿಯನ್ನು ಎಷ್ಟೇ ಪ್ರಚೋದಿಸಲು ಯತ್ನಿಸಿದರೂ ಮಂಡ್ಯ ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಮುಸ್ಲಿಮರಿಲ್ಲ ಎಂಬುದನ್ನು ಯೋಚಿಸಬೇಕಾಗುತ್ತದೆ. ವಿಧಾನಸಭಾ ಕ್ಷೇತ್ರವಾರು ಮುಸ್ಲಿಂ ಬಾಹುಳ್ಯವನ್ನು ವಿವರವಾಗಿ ನೋಡುವುದು ಸೂಕ್ತ. ಅದರ ಜೊತೆಗೆ ಬಹುದೊಡ್ಡ ಒಕ್ಕಲಿಗ ಸಮುದಾಯದ ಸಂಖ್ಯೆಯನ್ನು ಗಮನಿಸಬಹುದು.
ಶ್ರೀರಂಗಪಟ್ಟಣ: ಒಟ್ಟು ಜನಸಂಖ್ಯೆ- 2,26,334, ಒಕ್ಕಲಿಗರು- 1,14,261 ಮುಸ್ಲಿಮರು- 6,940 (ಶೇ. 3.07).
ನಾಗಮಂಗಲ: ಒಟ್ಟು- 1,95,983. ಒಕ್ಕಲಿಗರು- 1,13,069. ಮುಸ್ಲಿಮರು- 11,712 (ಶೇ. 5.97).
ಮೇಲುಕೋಟೆ: ಒಟ್ಟು- 2,76,923, ಒಕ್ಕಲಿಗ- 1,54,608, ಮುಸ್ಲಿಮರು- 5,213 (ಶೇ. 1.88).
ಮಂಡ್ಯ: ಒಟ್ಟು- 2,46,463, ಒಕ್ಕಲಿಗರು- 1,10,220, ಮುಸ್ಲಿಮರು- 21,266 (ಶೇ.8.62).
ಮಳವಳ್ಳಿ: ಒಟ್ಟು- 2,79,707, ಒಕ್ಕಲಿಗರು- 88,063, ಮುಸ್ಲಿಮರು- 11,300 (ಶೇ. 4.039).
ಮದ್ದೂರು: ಒಟ್ಟು 2,87,723, ಒಕ್ಕಲಿಗರು- 1,75,528. ಮುಸ್ಲಿಮರು- 8,698 (ಶೇ. 3.023).
ಕೆ.ಆರ್.ಪೇಟೆ: ಒಟ್ಟು 2,58,324, ಒಕ್ಕಲಿಗರು- 117386, ಮುಸ್ಲಿಮರು- 7494 (ಶೇ. 2.901).
ಕೆ.ಆರ್.ನಗರ ಒಟ್ಟು- 2,49,813, ಒಕ್ಕಲಿಗರು- 57502, ಮುಸ್ಲಿಮರು- 10350 (4.14.)
ಇದರ ಜೊತೆಗೆ ಪರಿಶಿಷ್ಟ ಜಾತಿಯ ಬಲಗೈ, ಎಡಗೈ ಸಮುದಾಯಗಳು, ಕುರುಬರು, ಇತರೆ ಹಿಂದುಳಿದ ವರ್ಗಗಳ ಜನಸಂಖ್ಯೆಯನ್ನು ನೋಡಿದರೂ ಮುಸ್ಲಿಮರು ಶಕ್ತಿ ಕನಿಷ್ಠ ಐದನೇ ಅಥವಾ ಆರನೇ ಸ್ಥಾನದಲ್ಲಿ ಇರುತ್ತದೆ. ನಾಗಮಂಗಲ ಮತ್ತು ಮಂಡ್ಯ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಎಲ್ಲಿಯೂ ಶೇ.5ರಷ್ಟು ಪ್ರಮಾಣವನ್ನು ಮುಸ್ಲಿಮರು ಮಂಡ್ಯ ಜಿಲ್ಲೆಯಲ್ಲಿ ದಾಟುವುದಿಲ್ಲ. ಹೀಗಿರುವಾಗ ಮುಸ್ಲಿಮರು, ಹಿಂದೂಗಳನ್ನು ಪ್ರಚೋದಿಸುತ್ತಿದ್ದಾರೆಂದು ನಂಬುವುದು ಮೂರ್ಖತನದ ಪರಮಾವಧಿಯಾಗುತ್ತದೆ.
ಟಿಪ್ಪು ಸುಲ್ತಾನ್ ಆಳ್ವಿಕೆಯ ಕಾಲದಿಂದಲೂ ಮಂಡ್ಯ ಸೌಹಾರ್ದತೆಯ ನೆಲ. ಟಿಪ್ಪು ತಂದ ಭೂ ಸುಧಾರಣೆಗಳನ್ನು, ರೈತ ಪರ ಕಾರ್ಯಕ್ರಮಗಳನ್ನು ಈಗಲೂ ಮಂಡ್ಯದ ಹಿರಿಯರು ನೆನೆಯುತ್ತಾರೆ. ಟಿಪ್ಪು ಹೆಸರಲ್ಲಿ ಕೋಮುದ್ವೇಷ ಹರಡಲು ಯತ್ನಿಸಿದಾಗಲೂ ಮಂಡ್ಯದ ಪ್ರಜ್ಞಾವಂತರು ಬಲವಾಗಿ ಖಂಡಿಸಿದ್ದಾರೆ. ಆದರೆ ನಿರಂತರ ಪ್ರಯತ್ನ ನಡೆಸುವುದನ್ನು ಸಂಘಪರಿವಾರ ಬಿಟ್ಟಿಲ್ಲ. ಮಂಡ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆದ ಪ್ರಮುಖ ಪ್ರಕರಣಗಳನ್ನು ಅವಲೋಕಿಸಿದರೆ ಸತ್ಯ ಮತ್ತಷ್ಟು ಸ್ಪಷ್ಟವಾಗುತ್ತದೆ.
ಶ್ರೀರಂಗಪಟ್ಟಣ ಮತ್ತು ಉರಿಗೌಡ, ನಂಜೇಗೌಡ
ಶ್ರೀರಂಗಪಟ್ಟಣದಲ್ಲಿನ ಜಾಮೀಯ ಮಸೀದಿ ಇದ್ದ ಸ್ಥಳದಲ್ಲಿ ಮೂಡಲ ಬಾಗಿಲು ಶ್ರೀ ಆಂಜನೇಯ ದೇವಾಲಯವಿತ್ತು. ಮೂಲ ಸ್ಥಾನವನ್ನು ಮದರಸಾ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಸಂಘಪರಿವಾರ ಮಂಡ್ಯದಲ್ಲಿ ಕಾರ್ಯಾಚರಣೆ ಆರಂಭಿಸಿತು. ಟಿಪ್ಪುವಿನ ಕೋಮು ಸೌಹಾರ್ದತೆಗೆ ಮಸಿ ಬಳಿಯುವ ಕೆಲಸ ನಡೆಯಿತು. ಮಂಡ್ಯದ ಸೌಹಾರ್ದತೆಯನ್ನು ಕದಡಲು ಹೊರಗಿನ ಜನರು ಬರುತ್ತಿದ್ದಾರೆಂದು ಜನ ಅಲರ್ಟ್ ಆದರು. ಶ್ರೀರಂಗಪಟ್ಟಣ ಚಲೋ ಮಾಡಲು ಮುಂದಾದವರ ಪ್ರಯತ್ನ ವಿಫಲವಾಯಿತು. ಆದರೆ ವಿಧಾನಸಭಾ ಚುನಾವಣೆಯ ಹೊತ್ತಿಗೆ ಹೊಸ ಕಥನಗಳನ್ನು ಹಿಡಿದುಕೊಂಡು ಬಂದರು.
ಇದನ್ನೂ ಓದಿರಿ: ಗೌರಿ ಲಂಕೇಶ್ ಪ್ರಕರಣ: ನ್ಯಾಯದ ವಿಳಂಬದಲ್ಲಿ ಸರ್ಕಾರ – ನ್ಯಾಯಾಂಗ ನಿಷ್ಕ್ರಿಯತೆ
“ಟಿಪ್ಪುವನ್ನು ಕೊಂದಿದ್ದು ಬ್ರಿಟಿಷರಲ್ಲ, ಉರಿಗೌಡ ಮತ್ತು ನಂಜೇಗೌಡ ಎಂಬ ಸೈನಿಕರು” ಎಂಬ ನಕಲಿ ನಿರೂಪಣೆಯನ್ನು ಹರಿಯಬಿಡಲಾಯಿತು. ತಮಿಳುನಾಡಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದ ಪೆರಿಯ ಮರುದು ಮತ್ತು ಚಿನ್ನ ಮರುದು ಎಂಬ ಸಹೋದರರ ವರ್ಣಚಿತ್ರಗಳನ್ನು ಬಳಸಿ, “ಇವರೇ ನೋಡಿ, ಟಿಪ್ಪುವನ್ನು ಕೊಂದ ಉರಿಗೌಡ, ನಂಜೇಗೌಡ” ಎಂದು ಹಸಿಹಸಿಯಾಗಿ ಸುಳ್ಳು ಹಬ್ಬಿಸಲಾಯಿತು. ಇದನ್ನು ಬಲವಾಗಿ ಖಂಡಿಸಿದ ಒಕ್ಕಲಿಗ ಸಮುದಾಯ, “ಇತಿಹಾಸವನ್ನು ತಿರುಚಬೇಡಿ” ಎಂದು ಎಚ್ಚರಿಕೆ ನೀಡಿತು. ಮಂಡ್ಯಕ್ಕೆ ಪ್ರಧಾನಿ ಮೋದಿಯವರು ಭೇಟಿ ನೀಡಿದ್ದ ಸಂದರ್ಭದಲ್ಲಿ, “ಉರಿಗೌಡ, ನಂಜೇಗೌಡ ದ್ವಾರಬಾಗಿಲು” ನಿರ್ಮಿಸಿದ್ದು ದೊಡ್ಡ ವಿವಾದವನ್ನು ಹುಟ್ಟುಹಾಕಿತು. ಪ್ರಧಾನಿ ಬಂದಿದ್ದು ಗೊತ್ತಾಗಲಿಲ್ಲ, ಹೋಗಿದ್ದೂ ಗೊತ್ತಾಗಲಿಲ್ಲ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರು ಮಧ್ಯಪ್ರವೇಶಿಸಿದ ಬಳಿಕ ಉರಿಗೌಡ, ನಂಜೇಗೌಡ ಕಥೆ ಬಿದ್ದು ಹೋಯಿತು. ಆದರೆ ಇಷ್ಟಕ್ಕೆ ಸುಮ್ಮನಾಗಲಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಮಂಡ್ಯವನ್ನು ಕಲುಷಿತಗೊಳಿಸುವ ಪ್ರಯತ್ನ ಮುಂದುವರಿಯಿತು.

ಕೆರಗೋಡು ಪ್ರಕರಣ
ಮಂಡ್ಯ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ದೊಡ್ಡ ಮಟ್ಟದಲ್ಲಿ ಸಕ್ರಿಯವಾಗಿರಲಿಲ್ಲ. ಆದರೆ ಕೆರಗೋಡು ಭಾಗದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಆರ್‌ಎಸ್‌ಎಸ್‌ನ ಒಂದು ಶಾಲೆ ಅಸ್ತಿತ್ವದಲ್ಲಿದೆ. ಸುತ್ತಮುತ್ತಲಿನ ಜನಕ್ಕೂ ಅಂತಹ ಆಸಕ್ತಿಯೇನೂ ಆ ಶಾಲೆಯ ಮೇಲೆ ಇದ್ದಂತೆ ತೋರುವುದಿಲ್ಲ. “ಸಂಸ್ಕೃತ ಕಲಿತು ನಮ್ಮ ಮಕ್ಕಳು ಏನು ಸಾಧನೆ ಮಾಡ್ತಾರೆ ಬಿಡಿ, ಆ ಶಾಲೆಗೆ ಹೋಗುವುದರಿಂದ ಪ್ರಯೋಜನವಿಲ್ಲ” ಎನ್ನುವ ಮನಸ್ಥಿತಿಯೂ ಕೆರಗೋಡು ಸುತ್ತಮುತ್ತಲಿನ ಅನೇಕರಲ್ಲಿರುವುದು ನಿಜ. ಆದರೆ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಹೋದ ಮೇಲೆ ಕೆರಗೋಡು ಸುತ್ತಲಿನ ಹಳ್ಳಿಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಆರ್‌ಎಸ್‌ಎಸ್‌ನವರಂತೆ ಆಡಲು ಶುರುವಾಗಿದ್ದು ಮಾತ್ರ ಸತ್ಯ. ಅದರ ಫಲವೇ ಕೆರಗೋಡು ಹನುಮಧ್ವಜ ಪ್ರಕರಣ!
ಹಿಂದೂ ಮುಸ್ಲಿಂ ಗಲಭೆಯಂತೆ ಚಿತ್ರಿತವಾದ ಈ ಪ್ರಕರಣದ ಸುತ್ತ ಮಾಧ್ಯಮಗಳು ಭಾರೀ ಪ್ರಚಾರವನ್ನೇ ನೀಡಿದವು. ಕೆರಗೋಡು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಕೈಗೊಂಡಿದ್ದ ಕಾರ್ಯಕರ್ತರಲ್ಲಿ ಕೆಲ ಕಿಡಿಗೇಡಿಗಳು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿದ್ದ ಕುರುಬರ ಸಂಘದ ವಿದ್ಯಾರ್ಥಿನಿಲಯಕ್ಕೆ ನುಗ್ಗಿ ದಾಂಧಲೆ ನಡೆಸಿದ್ದರು. ಕನಕದಾಸರ ಚಿತ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ಲೆಕ್ಸ್ ಹರಿದು ಹಾಕಿದ್ದರು.
ಆದರೆ ಅಸಲಿ ಸತ್ಯಗಳನ್ನು ಹುಡುಕುತ್ತಾ ಹೋದಾಗ ‘ಈದಿನ ಡಾಟ್ ಕಾಮ್’ಗೆ ಅನೇಕ ಸಂಗತಿಗಳು ಸಿಕ್ಕಿದ್ದವು. ಕೆರಗೋಡಿನ ಬಸ್‌ಸ್ಟಾಂಡ್‌ನಲ್ಲಿದ್ದ ಜಾಗದಲ್ಲಿ ಹನುಮಧ್ವಜ ಹಾರಿಸುವುದನ್ನು ಕೆಲವು ದಲಿತ ಯುವಕರು ಪ್ರಶ್ನಿಸಿದ ಬಳಿಕ ಉಂಟಾಗಿದ್ದ ವಿವಾದವನ್ನು ‘ಹಿಂದೂ- ಮುಸ್ಲಿಂ ಗಲಭೆ’ ಎಂಬಂತೆ ಬಿಂಬಿಸಲಾಗಿತ್ತು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುವ ಹೊತ್ತಿನಲ್ಲಿ, ಸಾಂವಿಧಾನಿಕ ಮೌಲ್ಯಗಳು ಬದಿಗೆ ಸರಿಯುತ್ತಿರುವುದನ್ನು ಗಮನಿಸಿದ್ದ ದಲಿತರು, ಹೀಗೆಲ್ಲ ಕೇಸರಿ ಧ್ವಜ ಹಾರಿಸುವುದು ಸರಿಯಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. “ದಲಿತರು ಮೇಲ್ಜಾತಿಗಳನ್ನು ಪ್ರಶ್ನಿಸುತ್ತಿದ್ದಾರೆ” ಎಂದು ಕಾಣದ ಕೈಗಳು ಜಾತಿದ್ವೇಷವನ್ನು ಉದ್ದೀಪಿಸತೊಡಗಿದವು. “ಇಲ್ಲಿ ಹನುಮಧ್ವಜವನ್ನೇ ಹಾರಿಸಬೇಕು” ಎಂದು ಕೆರಗೋಡು ಗ್ರಾಪಂಗೆ ಸೇರಿದ ಹಲವು ದೊಡ್ಡಿಗಳಿಂದ ಎಂಟು ನೂರಕ್ಕೂ ಹೆಚ್ಚು ಅರ್ಜಿಗಳು ಗ್ರಾಪಂಗೆ ಸಲ್ಲಿಕೆಯಾಗಿದ್ದವು. ಸುಮಾರು ಎರಡು ತಿಂಗಳಿಂದಲೂ ನಡೆಯುತ್ತಿದ್ದ ಮುಸುಕಿನ ಗುದ್ದಾಟವು ಇಂತಹದ್ದೊಂದು ಗಲಾಟೆಯ ಸೂಚನೆಯನ್ನು ನೀಡಿತ್ತು. ಕೆರಗೋಡಿಗಿಂತ ಆ ಗ್ರಾಮದ ಸುತ್ತಮುತ್ತಲಿನ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಈ ವಿವಾದದಲ್ಲಿ ಭಾಗಿಯಾಗಿದ್ದಾರೆಂಬುದು ಆನಂತರ ಬಯಲಾಗಿತ್ತು.
ಕೆರಗೋಡು ಎಂದಿಗೂ ಇಂತಹ ಜಾತಿ ಕಲಹಕ್ಕೆ ಗುರಿಯಾಗಿರಲಿಲ್ಲ. ಒಂದು ಕಾಲದಲ್ಲಿ ವಿಧಾನಸಭಾ ಕ್ಷೇತ್ರವಾಗಿದ್ದ ಕೆರಗೋಡು ಸಮುದಾಯಗಳ ಸಾಮರಸ್ಯದ ನೆಲವೂ ಹೌದು. ಇದಕ್ಕೆ ಉದಾಹರಣೆಯಾಗಿ ಚರಿತ್ರೆಯನ್ನು ನೋಡಬೇಕಾಗುತ್ತದೆ. 1989ನೇ ಇಸವಿಯ ಜನವರಿ 15ನೇ ತಾರೀಕು ಕೆರಗೋಡಿನಲ್ಲಿ ಜಾತಿ ಕಲಹವನ್ನು ಉಂಟುಮಾಡುವ ಪ್ರಯತ್ನಗಳಾಗಿದ್ದವು. ವಾಸ್ತವದಲ್ಲಿ ಅದು ಕೆರಗೋಡು ಮತ್ತು ಹಲ್ಲೆಗೆರೆ ಗ್ರಾಮಗಳಿಗೆ ಸಂಬಂಧಿಸಿದ ಘಟನೆಯಾಗಿತ್ತು. ಹಲ್ಲೆಗೆರೆಯಲ್ಲಿ ಜಾತಿ ತಾರತಮ್ಯ ಮಾಡಿದ್ದು ಕಾಡ್ಗಿಚ್ಚಿನಂತೆ ಹಬ್ಬಿ, ಅದು ಕೆರಗೋಡಿಗೂ ವ್ಯಾಪಿಸಿತು. ಅಂದು ಹಲ್ಲೆಗೆರೆಯ ಸವರ್ಣೀಯರು ಕೆರಗೋಡಿನ ದಲಿತ ಕಾಲೋನಿಯ ಮೇಲೆ ದಂಡೆತ್ತಿ ಬಂದರು. ಅಂತಹ ಸಂದರ್ಭದಲ್ಲಿ ದಲಿತರ ರಕ್ಷಣೆಗೆ ನಿಂತದ್ದು ಕೆರಗೋಡಿನ ಒಕ್ಕಲಿಗರು. “ನಮ್ಮ ಕೇರಿಗೆ ಬರಲು ನೀವ್ಯಾರು? ನಿಮಗೆ ಯಾವುದೇ ಕಾರಣಕ್ಕೂ ಪ್ರವೇಶ ನೀಡುವುದಿಲ್ಲ” ಎಂದು ಘೇರಾವ್ ಹಾಕಿದ ಲಾಯರ್ ಶಂಕರೇಗೌಡರು, ಟಿ.ಶಂಕರೇಗೌಡರು ಮತ್ತು ಇನ್ನಿತರ ಮುಖಂಡರು ತಮ್ಮೂರಿನ ದಲಿತರ ರಕ್ಷಣೆಗೆ ನಿಂತರು. ಆ ವೇಳೆಗಾಗಲೇ ಸ್ಥಳದಲ್ಲಿ ಹಾಜರಿದ್ದ ಪೊಲೀಸರನ್ನೂ ಲೆಕ್ಕಿಸದೆ ದಾಂಧಲೆ ಎಬ್ಬಿಸಲು ಯತ್ನಿಸಲಾಗಿತ್ತು. ಪೊಲೀಸರು ಅಶ್ರುವಾಯು ಸಿಡಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಘಟನೆಯನ್ನು ನೆನೆದಿದ್ದ ಹಿರಿಯ ದಲಿತ ಹೋರಾಟಗಾರ ಗುರುಪ್ರಸಾದ್ ಕೆರಗೋಡು ಅವರು, “ಅಂದು ನಮ್ಮೂರಿನ ಒಕ್ಕಲಿಗರು ನಮ್ಮ ರಕ್ಷಣೆಗೆ ನಿಂತಿದ್ದರೆ ಹೊರತು, ಎಂದಿಗೂ ಗಲಾಟೆ ಮಾಡಿದವರಲ್ಲ. ಇಂದೂ ಅಷ್ಟೇ, ನಮ್ಮೂರಲ್ಲಿ ಒಟ್ಟಾಗಿ ಬಾಳುತ್ತಿದ್ದೇವೆ. ಹೊರಗಿನ ಜನರು ಊರಿಗೆ ಕೆಟ್ಟ ಹೆಸರು ತರಲು ಯತ್ನಿಸಿದ್ದಾರೆ” ಎಂದಿದ್ದರು.

ಇದನ್ನೂ ಓದಿರಿ: ಜ್ಯೋತಿ ಬಾ ಫುಲೆ ಬದಲಾಗಿ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನವನ್ನು ಶಿಕ್ಷಕರ ದಿನವೆಂದು ಆಚರಿಸುವುದೇಕೆ?
ಕೇವಲ ಮೂರ್ನಾಲ್ಕು ಮುಸ್ಲಿಂ ಮನೆಗಳನ್ನು ಹೊಂದಿರುವ ಕೆರಗೋಡು ವಿಚಿತ್ರವಾಗಿ ಚಿತ್ರಿತವಾಯಿತು. “ಕೇಸರಿ ಭಾವುಟವನ್ನು ಕೆಳಗಿಳಿಸಿ, ಮುಸ್ಲಿಂ ಪರ ಸರ್ಕಾರ ನಿಲುವು ತಾಳಿದೆ” ಎಂದು ಬಿಂಬಿಸಲಾಯಿತು. ಅಸಲಿಯಾಗಿ ಕೇಸರಿ ಬಾವುಟದ ಒಳಗೆ ಜಾತೀಯತೆಯನ್ನು ಪ್ರಚೋದಿಸಿದ್ದು ಮಾತ್ರ ಮಾಧ್ಯಮಗಳಲ್ಲಿ ಗೌಣವಾಯಿತು. “ಕೇಸರೀಕರಣದ ಉದ್ದೇಶವೇ ಜಾತಿ ಅಸಮಾನತೆಯನ್ನು ಜೀವಂತವಾಗಿಟ್ಟು, ಶ್ರೇಣಿಕೃತ ವ್ಯವಸ್ಥೆಯನ್ನು ಪೋಷಿಸುವುದು” ಎಂಬುದನ್ನು ಕೆರಗೋಡು ಪ್ರಕರಣ ಸ್ಪಷ್ಟಪಡಿಸಿತ್ತು (ಪೂರ್ಣ ವಿವರಗಳನ್ನು ‘ಇಲ್ಲಿ’ ಓದಬಹುದು).
ನಾಗಮಂಗಲದಲ್ಲಿ ಕೋಮುದಳ್ಳುರಿ
ಸಂಘಪರಿವಾರ ಕಾಣಿಸಿಕೊಳ್ಳುವ ಬಹುತೇಕ ಕೋಮುಗಲಭೆಗಳಲ್ಲಿ ಒಂದು ಪ್ಯಾಟರ್ನ್ ಇರುತ್ತದೆ. ಬಹುತೇಕ ಗಲಭೆಗಳು ಗಣೇಶ ಉತ್ಸವಗಳಂತಹ ಮೆರವಣಿಗೆಗಳ ಸಂದರ್ಭದಲ್ಲಿ ಘಟಿಸುತ್ತವೆ. ನಾಗಮಂಗಲದಲ್ಲಿ 2024ರ ಸೆಪ್ಟೆಂಬರ್‌ನಲ್ಲಿ ಗಣೇಶ ಹಬ್ಬದ ಗಲಭೆಯಾಯಿತು. ಮಸೀದಿ ಬಳಿ ಮೆರವಣಿಗೆ ಹೊರಡಲು ಸಂಘಪರಿವಾರ ಬಯಸಿತ್ತು. ಪೊಲೀಸರು ಅನುಮತಿ ನೀಡಲಿಲ್ಲ. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಕೆಲಸವಾಯಿತು. ಆನಂತರ ಮಸೀದಿ ಮುಂದೆ ಮೆರವಣಿಗೆ ಹೋಗಲು ಅನುಮತಿ ಕೊಟ್ಟಿದ್ದು ಕೋಮುಗಲಭೆಗೆ ನಾಂದಿಹಾಡಿತು ಎನ್ನುತ್ತವೆ ಮೂಲಗಳು.
ನಾಗಮಂಗಲ ಪಟ್ಟಣದಾದ್ಯಂತ 26 ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದರು. 1 ಕೋಟಿ 47 ಲಕ್ಷ ಮೌಲ್ಯದ ಕಟ್ಟಡಗಳು ಸುಟ್ಟು ಭಸ್ಮವಾದವು. 1 ಕೋಟಿ 18 ಲಕ್ಷ ಮೌಲ್ಯದ ಸರಕು ಸುಟ್ಟು ಹಾಕಲಾಯಿತು ಎಂದು ಅಂದಾಜಿಸಲಾಗಿದೆ.
ಅಂದು ಪಟ್ಟಣದ ಕೋಟೆಬೆಟ್ಟ ರಸ್ತೆ, ಟಿ.ಬಿ. ವೃತ್ತ, ಮರಿಯಪ್ಪ ವೃತ್ತ, ಮಂಡ್ಯ ವೃತ್ತದ ಮೂಲಕ ಮೆರವಣಿಗೆ ಸಾಗಿ, ಮಸೀದಿ ಇರುವ ಮೈಸೂರು ರಸ್ತೆಯನ್ನು ತಲುಪಿತು. ಮಸೀದಿ ಬಳಿ ಯು-ಟರ್ನ್ ತೆಗೆದುಕೊಂಡ ಸುಮಾರು 100 ರಿಂದ 150 ಮಂದಿ ಪಟಾಕಿ ಸಿಡಿಸಿ, ಡಾನ್ಸ್ ಮಾಡಿ, 10 ನಿಮಿಷಗಳ ಕಾಲ ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿದರು. ಪೊಲೀಸರು ಯುವಕರನ್ನು ಮುಂದೆ ಸಾಗುವಂತೆ ಸೂಚಿಸಿದರೂ, ಅವರು ನಿರಾಕರಿಸಿದರು.
ಇದರಿಂದ ಪ್ರಚೋದಿತರಾದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 100ರಿಂದ 150 ಜನರು ಸ್ಥಳದಲ್ಲಿ ಜಮಾಯಿಸಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದರು. ಪೈಪೋಟಿಗೆ ಬಿದ್ದು ಮಾಡಿದ ಘೋಷಣೆಗಳು ಸ್ವಲ್ಪ ಸಮಯದವರೆಗೆ ಮುಂದುವರಿದವು.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬಿ.ಜಿ. ರವಿ ಮತ್ತು ಇತರ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿ ವಿಕೋಪಕ್ಕೆ ತಿರುಗದಂತೆ ತಡೆಯಲು ಎರಡೂ ಗುಂಪುಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು ಎನ್ನುತ್ತದೆ ಎಫ್‌ಐಆರ್. ಆದರೆ ಗಲಾಟೆಯಲ್ಲಿ, ಎರಡೂ ಗುಂಪುಗಳ ಕೆಲವರು ಮಾತಿನ ಚಕಮಕಿ ನಡೆಸಿದರು. ಇದರ ಪರಿಣಾಮವಾಗಿ ಕಲ್ಲು ತೂರಾಟವಾಯಿತು. ಈ ಹಂತದಲ್ಲಿ, ಪೊಲೀಸರು ಗುಂಪನ್ನು ಚದುರಿಸಲು ಮತ್ತು ಮೆರವಣಿಗೆಯನ್ನು ಮುಂದಕ್ಕೆ ಕಳುಹಿಸಲು ಲಾಠಿ ಪ್ರಹಾರ ನಡೆಸಿದರು.
ಗಲಭೆಯ ವೇಳೆ ಎರಡೂ ಸಮುದಾಯಗಳಿಗೆ ಸೇರಿದ ಯುವಕರು ಕಬ್ಬಿಣದ ರಾಡ್‌ಗಳು, ಮಚ್ಚುಗಳು, ಪೈಪ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಝಳುಪಿಸಿದರು. ಬೆಂಕಿ ಹಚ್ಚುತ್ತೇವೆ ಎಂದು ಘೋಷಣೆ ಮೊಳಗಿಸಿದರು. ಅನೇಕ ಅಂಗಡಿಗಳು ಮತ್ತು ವಾಹನಗಳನ್ನು ಸುಟ್ಟುಹಾಕಲಾಯಿತು. ಪ್ರಕರಣ ಸಂಬಂಧ ಸುಮಾರು 50ಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು. ಇದೇ ಪ್ರವೃತ್ತಿ ಈ ವರ್ಷವೂ ಪುನರಾವರ್ತನೆಯಾಗಿದೆ.

ಮದ್ದೂರು ಗಲಭೆ
ನಾಗಮಂಗಲ ಗಲಭೆಯ ತದ್ರೂಪದಂತೆ ಮದ್ದೂರಿನಲ್ಲಿ ಘಟನೆಯಾಗಿದೆ. ಮಸೀದಿ ಮುಂದೆ ಗಣಪತಿ ಮೆರವಣಿಗೆ ಹಾದು ಹೋಗುವಾಗ ಕಲ್ಲುತೂರಾಟವಾಗಿದೆ. ಮಾಧ್ಯಮಗಳು ಭಾರೀ ಪ್ರಚಾರವನ್ನೂ ನೀಡಿವೆ. ಇದರ ಹಿಂದೆ ಯಾರ್ಯಾರು ಇದ್ದಾರೆಂಬುದು ತನಿಖೆಯಿಂದ ಬಯಲಾಗಬೇಕಿದೆ. ಆರಂಭಿಕ ಸತ್ಯಗಳು ಹೇಳುವ ಪ್ರಕಾರ ಬೇಕಂತಲೇ ಈ ಘಟನೆಯನ್ನು ಪ್ರಚೋದಿಸಿರುವುದು ಕಂಡು ಬಂದಿದೆ. ಗೃಹಸಚಿವ ಜಿ.ಪರಮೇಶ್ವರ್, “ಇದರ ಹಿಂದೆ ಸಂಘಪರಿವಾರ ಇದೆ” ಎಂದು ಆರೋಪಿಸಿದ್ದಾರೆ. ಒಂದರ ಹಿಂದೆ ಒಂದರಂತೆ ಮಂಡ್ಯದಲ್ಲಿ ಕೋಮು ಉದ್ವಿಗ್ನತೆಯ ಕಾರ್ಯಸೂಚಿ ವ್ಯವಸ್ಥಿತವಾಗಿ ಚಾಲನೆಯಲ್ಲಿರುವುದನ್ನು ಸರ್ಕಾರ ಗಮನಿಸಬೇಕಾಗುತ್ತದೆ.
ಇದನ್ನೂ ಓದಿರಿ: ಹೋರಾಟದ ಸಂಗಾತಿ ಗೌರಿಗೊಂದು ಪ್ರೀತಿಯ ಪತ್ರ
ಈ ಎಲ್ಲ ಬೆಳವಣಿಗೆಗಳಿಂದ ಹೆಚ್ಚು ಕಳೆದುಕೊಳ್ಳುವುದು ಮಾತ್ರ ಜೆಡಿಎಸ್. ಅನಿವಾರ್ಯವಾಗಿ ಬಿಜೆಪಿ ಜೊತೆ ಕೈಜೋಡಿಸಿರುವ ಕುಮಾರಸ್ವಾಮಿಯವರು ಈ ಕೋಮುಪ್ರಯೋಗಗಳನ್ನು ಟೀಕಿಸಲಾಗದಂತಹ ಇಕ್ಕಟ್ಟಿನಲ್ಲಿದ್ದಾರೆ. ಬಂಗಾರಪ್ಪನವರು ಬಿಜೆಪಿ ಜೊತೆ ಹೋಗಿ, ಹಿಂದುಳಿದ ಈಡಿಗ, ಬಿಲ್ಲವ ಸಮುದಾಯಗಳನ್ನು ಕೋಮುವಾದಿಗಳ ತೆಕ್ಕೆಗೆ ಕೊಟ್ಟರು. ಕರಾವಳಿ ನಿಧಾನಕ್ಕೆ ಕೇಸರಿಮಯವಾಯಿತು. ಈಗ ಕುಮಾರಸ್ವಾಮಿಯವರು ಮಂಡ್ಯ ರಾಜಕಾರಣವನ್ನು ತೆಗೆದುಕೊಂಡು ಹೋಗಿ ಕೋಮುವಾದಿಗಳ ಕೈಗೆ ಇಟ್ಟಿದ್ದಾರೆ. ಅಸ್ತಿತ್ವದ ರಾಜಕೀಯದಲ್ಲಿ ಜೆಡಿಎಸ್ ಬೇಳೆ ಎಷ್ಟು ಬೆಂದಿದೆ, ಬಿಜೆಪಿ ಎಷ್ಟು ಬೇಳೆ ಬೇಯಿಸಿಕೊಂಡಿದೆ ಎಂಬುದನ್ನು ತಿಳಿಯಬೇಕಾದರೆ ಮುಂದಿನ ಚುನಾವಣೆವರೆಗೆ ಕಾಯಬೇಕಾಗುತ್ತದೆ. ಆದರೆ ಇಷ್ಟೆಲ್ಲ ಆಗುತ್ತಿರುವಾಗ ಸರ್ಕಾರ ಕೈಕಟ್ಟಿ ಕೂತರೆ ಭವಿಷ್ಯದಲ್ಲಿ ಮಂಡ್ಯವು ಮತ್ತೊಂದು ಕರಾವಳಿ ಆಗುವುದು ಖಚಿತ. ನೇತ್ರಾವತಿಯಲ್ಲಿ ಪದೇಪದೇ ನೆತ್ತರು ಹರಿದಿದ್ದರಿಂದ ಸರ್ಕಾರ “ಕೋಮು ನಿಗ್ರಹ ದಳ”ವನ್ನು ಸ್ಥಾಪಿಸಿದೆ. ಮಂಡ್ಯದಲ್ಲಿ ಕೋಮುದ್ವೇಷಗಳು ಹೆಚ್ಚಾಗದಂತೆ ತಡೆಯಲು ಇಲ್ಲಿಯೂ ಕೋಮು ನಿಗ್ರಹ ದಳ ರಚಿಸಬೇಕು ಎಂಬ ಆಗ್ರಹಗಳು ವ್ಯಕ್ತವಾಗುತ್ತಿವೆ. ಇದನ್ನು ಸಿದ್ದರಾಮಯ್ಯನವರು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.